ಸಿನೆಮಾ | ಸಸ್ಪೆನ್ಸ್  ಥ್ರಿಲ್ಲರ್ ಕನ್ನಡ ಸಿನೆಮಾ ‘ಪೀಟರ್’

ಸುಕೇಶ್ ಶೆಟ್ಟಿಯವರ ನಿರ್ದೇಶನದ ಎರಡನೇ ಸಿನೆಮಾ “ಪೀಟರ್”. 2026 ಎಪ್ರಿಲ್ 10 ರಂದು ಬಿಡುಗಡೆಯಾದ ಈ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಚಲನಚಿತ್ರವು ನೋಡುಗರಿಗೆ ನಿರಾಸೆಮಾಡದೆ ನೋಡಿಸಿಕೊಂಡು ಹೋಗುವಂತಿದೆ.

ಅಲ್ಲಿ ಪ್ರೀತಿ, ಸ್ನೇಹ, ಸೇಡು, ವಂಚನೆಗಳ ಸುತ್ತ ಹೆಣೆಯಲಾದ ಕಥೆಯನ್ನು ಸಸ್ಪೆನ್ಸ್ ಮೂಲಕ ಹೇಳಲಾಗಿದೆ. ಊಹಿಸಲಾಗದ  ತಿರುವುಗಳು ಥ್ರಿಲ್ ಹುಟ್ಟಿಸುವಂತಿವೆ. ಸಿನೆಮಾದ ಮೊದಲರ್ಧ ಮಾಮೂಲಿ ಪೈಪೋಟಿ, ಪ್ರೀತಿಯ ಜಾಡಿನಲ್ಲಿ ಸಾಗುತ್ತಿದ್ದು ಮಧ್ಯಂತರದ ನಂತರ ತಿರುವುಗಳ ತಿರುಗುಣಿಯಲ್ಲಿ ಪ್ರೇಕ್ಷಕರನ್ನು ತಿರುಗಿಸುತ್ತದೆ.

ಅದು ಮಡಿಕೇರಿಯ ಊರು, ಅಲ್ಲೊಂದು ಕೃಷ್ಣ ದೇವಸ್ಥಾನ. ಪ್ರತಿ ಸಂಕ್ರಾಂತಿಗೆ ಪೂಜೆ ಜೊತೆಗೆ ಚೆಂಡೆ ವಾದ್ಯದ ಸೇವೆ. ಅದಕ್ಕೆ ಎರಡು ಗುಂಪುಗಳ ನಡುವೆ ಪೈಪೋಟಿ. ಪೀಟರ್ ಒಂದು ಗುಂಪಿನ ನಾಯಕ. ಇನ್ನೊಂದಕ್ಕೆ ಶರತ್. ಚೆಂಡೆ ನುಡಿಸುವ ಪೈಪೋಟಿಯಲ್ಲಿ ಶರತ್ ತಲೆಗೆ ಕಲ್ಲು ಬಿದ್ದು ಸಾವು. ಸಿಟ್ಟಿಗೆದ್ದ ಆತನ ಅಣ್ಣ ಇದಕ್ಕೆ ಪೀಟರ್ ಕಾರಣ ಎಂದು ತಿಳಿದು ಸಾಯಿಸಲು ಪ್ರಯತ್ನ. ಅಷ್ಟರಲ್ಲಾಗಲೇ ಪೀಟರ್ ನನ್ನು ಪ್ರೀತಿಸಿದ ಮೀರಾ ಗರ್ಭಿಣಿ. ಪೀಟರನ ಗೆಳೆಯ ಶಂಭುವಿನ ಒತ್ತಾಯಕ್ಕೊಳಗಾಗಿ ಪೀಟರ್ ಊರು ಬಿಡುತ್ತಾನೆ. ಅತ್ತ ಅವಮಾನ ತಾಳದೇ ಮೀರಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಒಂದು ವರ್ಷದ ನಂತರ ಪೀಟರ್ ಊರಿಗೆ ಮರಳಿದಾಗ ನಡೆಯುವ ಘಟನೆಗಳು ಸಿನೆಮಾವನ್ನು ಬೇರೆಯದೇ ಲೆವೆಲ್ಲಿಗೆ ತೆಗೆದುಕೊಂಡು ಹೋಗುತ್ತವೆ. ಪೀಟರ್ ತಾಯಿ ಮೇರಿ ಹುಚ್ಚಿ ಆಗಿದ್ದು ಏಕೆ?. ಡೇವಿಡ್ ಹಾಗೂ ಆತನ ಪತ್ನಿ ಜೆಸ್ಸಿ ಬೆಂಕಿಗೆ ಆಹುತಿಯಾಗಿದ್ದೇಕೆ? ಪ್ರಿಯತಮೆ ಮೀರಾಳ ಆತ್ಮಹತ್ಯೆಗೆ ಪ್ರೇರೇಪಿಸಿದ್ದು ಯಾರು? ಯಾಕೆ? ಟೀಚರ್ ರಾಧೆ ಬಂದಿದ್ಯಾಕೆ, ಪೀಟರ್ ಕೊಲೆಗೆ ಪ್ರಯತ್ನಿಸಿದ್ಯಾಕೆ? ಕ್ಲೈಮ್ಯಾಕ್ಸಿನಲ್ಲಿ ಖಳನಾಯಕನ ಸಂಹಾರ ಆಗಿದ್ದು ಹೇಗೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ‘ಪೀಟರ್’ ಸಿನೆಮಾವನ್ನು ನೋಡಲೇಬೇಕು. ಮೊದಲಾರ್ಧ ಸ್ವಲ್ಪ ಸಹನೆ ವಹಿಸಿದರೆ ದ್ವಿತಿಯಾರ್ಧ ಥ್ರಿಲ್ ಕೊಡುವುದರಲ್ಲಿ ಸಂದೇಹವೇ ಇಲ್ಲ.

ಬಹುಷಃ ಮೊದಲ ಬಾರಿಗೆ ಕ್ರಿಶ್ಚಿಯನ್ ಕುಟುಂಬವೊಂದರ ತಲ್ಲಣಗಳನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ಕ್ರಿಶ್ಚಿಯನ್ ಯುವಕ ಅದು ಹೇಗೆ ವೈದಿಕಶಾಹಿ ಪರಂಪರೆಯ ಚಂಡೆ ವಾದ್ಯ ಕಲಿತು ದೇವಸ್ಥಾನದಲ್ಲಿ ನುಡಿಸಿದ ಎನ್ನುವುದು ಪ್ರಶ್ನಾರ್ಹವಾದರೂ ಕೋಮುಸೌಹಾರ್ದತೆಗೆ ಉದಾಹರಣೆಯಾಗಿದೆ. ಈ ಚಂಡೆ ವಾದ್ಯ ನುಡಿಸುವ ಗುಂಪಿನ ಪೈಪೋಟಿ ಹಾಗೂ ಸೇಡು ಕೇಡಿನ ಕಥಾನಕವೇ ‘ಪೀಟರ್’ ಸಿನೆಮಾದ ಕೇಂದ್ರವಾಗಿದೆ. ಚಂಡೆಯಂತಹ ದೈವಾರಾಧಕ ಕಲೆಯನ್ನು ಹಣ ಸಂಪಾದನೆ ವ್ಯವಹಾರಕ್ಕೆ ಬಳಸಿಕೊಳ್ಳಲು ಹೆಣೆದ ಶಡ್ಯಂತ್ರಗಳ ಬಲಿಪಶುವಾಗಿ ‘ಪೀಟರ್’ ಪಾತ್ರ ಮೂಡಿಬಂದಿದೆ.

‘ಪೀಟರ್’ ಸಿನೆಮಾದಲ್ಲಿ ವಿಭಿನ್ನ ಭಾವನೆಗಳ ನಾಲ್ಕು ಪ್ರಮುಖ ಸ್ತ್ರೀ ಪಾತ್ರಗಳು ಸೃಷ್ಟಿಯಾಗಿವೆ. ಅದರಲ್ಲಿ ಒಬ್ಬಳು ಪೀಟರ್ ತಾಯಿ ಮೇರಿ. ಮಮತೆ ಪ್ರೀತಿ ಅಕ್ಕರೆಯಿಂದ ಬೆಳೆಸಿದ ಮಗ ಡೇವಿಡ್ ತನ್ನ ಹೆಂಡತಿಯ ದುರಾಸೆಯ ದಬ್ಬಾಳಿಕೆಗೆ ಒಳಗಾಗಿ ಕೊನೆಗೆ ಬೆಂಕಿಗೆ ಆಹುತಿಯಾಗಿದ್ದನ್ನು ಕಣ್ಣಾರೆ ಕಂಡು ಅನುಭವಿಸಿ ಚಿತ್ತಭ್ರಮಣೆ ಹೊಂದಿ ನೊಂದ ತಾಯಿ. ಈ ವಿಕ್ಷಿಪ್ತ ಪಾತ್ರವನ್ನು ಜೀವಿಸಿ ಅಭಿನಯಿಸಿದ ರಂಗಭೂಮಿ ಕಲಾವಿದೆ ಪ್ರತಿಮಾ ನಾಯಕ್ ನಟನೆ ಪ್ರೇಕ್ಷಕರ ಮನದೊಳಗೆ ಅಚ್ಚೊತ್ತುವಂತಿದೆ.

ಇನ್ನೊಬ್ಬಳು ಪೀಟರ್ ಪ್ರೇಯಸಿ ಮೀರಾ.‌ ಹಿಂದೂ ಆಗಿದ್ದರೂ ಕ್ರಿಶ್ಚಿಯನ್ ಯುವಕನನ್ನು ಪ್ರೀತಿಸಿದ ಈ ಕಾಲೇಜು ವಿದ್ಯಾರ್ಥಿನಿ ಕೊನೆಗೆ ಆತನಿಂದ ಗರ್ಭಿಣಿಯಾಗಿ ಲೋಕನಿಂದನೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಗರ್ಭಪಾತಕ್ಕೆ ಮಾತ್ರೆಗಳು ದೊರೆಯುವ ಈಗಿನ ಆಧುನಿಕ ಕಾಲದಲ್ಲಿ ಕಾಲೇಜು ಹುಡುಗಿಯೊಬ್ಬಳು ಹೆದರಿ ಸಾವಿಗೆ ಶರಣಾಗುವುದು ಪಲಾಯನವಾದವಾಗಿದೆ. ಖಂಡಿತಾ ಈ ಸಾವು ಯಾರಿಗೂ ಮಾದರಿಯಾಗುವಂತಹುದಲ್ಲ ಮತ್ತು ಉತ್ತಮ ಸಂದೇಶವೂ ಅಲ್ಲ. ಆದರೂ ಕಥೆಯ ಬೆಳವಣಿಗೆಗೆ ಆ ಪಾತ್ರದ ಸಾವು ಅಗತ್ಯವಾದಂತಿದೆ.

ಇನ್ನೊಂದು ಪಾತ್ರ ಜೈಸಿ. ಬಡವರ ಮನೆಯ ಹುಡುಗಿ ಅನೇಕ ಆಸೆಗಳನ್ನಿಟ್ಟುಕೊಂಡು ಮದುವೆಯಾಗಿ, ಪಟ್ಟಣಕ್ಕೆ ಹೋಗಿ ಮಜವಾಗಿ ಬದುಕಲು ಗಂಡ ಡೇವಿಡ್ ನನ್ನು ಒತ್ತಾಯಿಸುತ್ತಾಳೆ. ಆತ ಹಾಗೂ ಅತ್ತೆ ಮೇರಿ ಒಪ್ಪದೇ ಹೋದಾಗ ಬ್ಲಾಕ್ಮೇಲ್ ಮಾಡಿ ಹೆದರಿಸಲು ಸೀಮೆಎಣ್ಣೆ ಸುರಿದುಕೊಳ್ಳುತ್ತಾಳೆ. ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ ಜೆಸ್ಸಿ ಹಾಗೂ ಡೇವಿಡ್ ಇಬ್ಬರನ್ನೂ ಬಲಿತೆಗೆದುಕೊಳ್ಳುತ್ತದೆ. ಮದುವೆಯಾಗಿ ಪಟ್ಟಣಸೇರಿ ಗಂಡನ ಜೊತೆ ಪ್ರತ್ಯೇಕವಾಗಿ ವಾಸಿಸಿ ಮಜವಾಗಿರಬೇಕು ಎನ್ನುವ ಹೆಣ್ಣುಗಳ ದುರಾಸೆ ಹೇಗೆ ಒಂದು ಕುಟುಂಬದ ನಾಶಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಜೆಸ್ಸಿ ಪಾತ್ರ ಉದಾಹರಣೆಯಾಗಿದೆ. ಈ ಪಾತ್ರದ ದುರಾಸೆಯೂ ಅನುಕರಣೀಯವಲ್ಲ, ಆದರೂ ಕಥೆಗೆ ತಿರುವು ಕೊಡಲು ಈ ಪಾತ್ರ ಸೃಷ್ಟಿಸಲಾಗಿದೆ.

ಇನ್ನೊಂದು ಸ್ತ್ರೀ ಪಾತ್ರ ರಾಧ. ತನ್ನ ತಂಗಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬರುವ ಈ ಪಿಟಿ ಟೀಚರ್ ಪಾತ್ರವು ಪೀಟರ್ ಕೊಲೆಗೆ ಪ್ರಯತ್ನಿಸುತ್ತದೆ. ಕೊನೆಗೆ ಕ್ಲೈಮ್ಯಾಕ್ಸಿನಲ್ಲಿ ಸತ್ಯ ಗೊತ್ತಾಗಿ ಖಳನಾಯಕನನ್ನು ಚಾಕುವಿನಿಂದ ಚುಚ್ಚಿ ಕೊಲ್ಲುತ್ತಾಳೆ. ಸಾವಿಗೆ ಸಾವೇ ಪ್ರತೀಕಾರ ಎನ್ನುವುದೂ ಸಹ ನಕಾರಾತ್ಮಕ ಸಂದೇಶವಾದರೂ ಕಥೆಯ ಅಂತ್ಯಕ್ಕೆ ರಕ್ತಪಾತ ಮಾಡಿಸಲಾಗಿದೆ.

ಹೀಗೆ ನಾಲ್ಕೂ ಮಹಿಳಾ ಪಾತ್ರಗಳು ಭಿನ್ನಭಿನ್ನವಾಗಿ ಮೂಡಿ ಬಂದಿವೆಯಾದರೂ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಇವು ತಳೆದ ನಿರ್ಧಾರ ಹಾಗೂ ಹಿಡಿದ ಮಾರ್ಗಗಳು ಮಾತ್ರ ಪ್ರಶ್ನಾರ್ಹವಾಗಿವೆ. ಮೀರಾ ಪಾತ್ರ ಹೇಡಿಯಾಗಿ ಸತ್ತರೆ, ಮಿಕ್ಕ ಮೂರೂ ಪಾತ್ರಗಳೂ ಸೇಡಿಗಾಗಿ ಹವಣಿಸುತ್ತವೆ. ಪುರುಷ ಪ್ರಧಾನ ಮನಸ್ಥಿತಿಗಳು ಹೀಗೆ ಮಹಿಳೆಯರನ್ನು ಚಿತ್ರಿಸಲು ಸಾಧ್ಯ! ಗಂಡಸರು ಮಾಡುವ ಕೇಡಿಗೆ ಬದಲಾಗಿ ಹೆಂಗಸರು ಸೇಡು ತೀರಿಸಿಕೊಳ್ಳಬೇಕಾಗಿ ಬರುವ ದುರಂತಕ್ಕೆ ಈ ಸಿನೆಮಾ ಸಾಕ್ಷಿಯಾಗಿದೆ.

ಸಧ್ಯ ನಿರ್ದೇಶಕರ ಅದೃಷ್ಟ. ಪೀಟರ್ ಪಾತ್ರವನ್ನು ಪಾಶಾ ಇಲ್ಲವೇ ಪರ್ವೇಜ್ ಮಾಡಿ ಮುಸ್ಲಿಂ ಕುಟುಂಬವನ್ನು ಅನಾವರಣಗೊಳಿಸಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಲವ್ ಜಿಹಾದ್ ಗೆ ಪ್ರೇರಣೆ ಎಂದು ಗುಲ್ಲೆಬ್ಬಿಸಿ ಗಲಾಟೆ ಮಾಡಿಸಲಾಗುತ್ತಿತ್ತು. ಮುಸ್ಲಿಂ ಯುವಕನನ್ನು ನಾಯಕನನ್ನಾಗಿಸಿ ಹಿಂದೂ ಯುವಕನನ್ನು ಖಳನಾಯಕನನ್ನಾಗಿ ಚಿತ್ರಿಸಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿತ್ತು. ‘ಮುಸ್ಲಿಂ ಯುವಕನನ್ನು ಹಿಂದೂ ಹುಡುಗಿಯರು ಪ್ರೀತಿಸಿದರೆ ಅವರು ಬಳಸಿಕೊಂಡು ಬಿಸಾಕಿ ಬಲಿಪಶುಮಾಡುತ್ತಾರೆ’ ಎಂದು ಕೋಮುವಾದಿಗಳು ಅರ್ಭಟಿಸುತ್ತಿದ್ದರು. ಸಧ್ಯ ಕೋಮು ಸೌಹಾರ್ದತೆ ಹಾಳಾಗದಂತೆ ನೋಡಿಕೊಂಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ಹೇಳಲೇ ಬೇಕಿದೆ.

ಕೊನೆಗೆ ಕ್ಲೈಮ್ಯಾಕ್ಸಿನಲ್ಲಿ ಖಳನಾಯಕ ತಾನಾಗಿಯೇ ಬಂದು ಮೀರಾ ಮತ್ತು ಶರತ್ ಸಾವಿಗೆ, ಪೀಟರ್ ಪಲಾಯನಕ್ಕೆ ಹಾಗೂ ಎಲ್ಲಾ ಶಡ್ಯಂತ್ರಗಳಿಗೆ ತಾನೇ ಕಾರಣ ಎಂದು ಹೇಳಿಕೊಳ್ಳುವುದು ಅವಾಸ್ತವಿಕ ಹಾಗೂ ನಾಟಕೀಯತೆಯಾಗಿದೆ. ತನಗಿಂತಲೂ ಬಲಾಢ್ಯನಾದ ನಾಯಕನನ್ನು ಹುಡುಕಿಕೊಂಡು ಬಂದು ಎಲ್ಲಾ ಅಪಸವ್ಯಗಳಿಗೂ ತಾನೇ ಕಾರಣ ಎಂದು ಒಪ್ಪಿಕೊಳ್ಳುವ ಮೂಲಕ ಶಂಭು ಪಾತ್ರವು ತನ್ನ ಸಾವನ್ನು ತಾನೇ ಆಹ್ವಾನಿಸಿಕೊಳ್ಳುವ ರೀತಿ ಸತ್ಯಕ್ಕೆ ದೂರವಾಗಿದೆ. ನಾಯಕನಿಗೆ ಸಂದೇಹ ಬಂದು, ಖಳನಾಯಕನನ್ನು ಹಿಡಿದುತಂದು ಹೊಡೆದು ಸತ್ಯ ಬಾಯಿಬಿಡಿಸಿದ್ದರೆ ಅದನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ನಿಶ್ಯಸ್ತ್ರಗೊಂಡ ಬೇಟೆಗಾರ ಸಿಂಹದ ಗುಹೆಗೆ ಬಂದು ತಾನೇ ಸಿಂಹಿಣಿಯ ಕೊಲೆಗಾರ ಎಂದು ಹೆಮ್ಮೆಯಿಂದ ಹೇಳಿ ಅಪಾಯವನ್ನು ಆಹ್ವಾನಿಸಿಕೊಂಡಂತಿದೆ.

ಹೋಗಲಿ.. ಅಷ್ಟೇನೂ ತಾಳಿಕೊಳ್ಳಲಾಗದಂತಹ ಹಿಂಸೆ, ಅಶ್ಲೀಲತೆ, ಭಯಹುಟ್ಟಿಸುವ ದೃಶ್ಯಗಳು ಇಲ್ಲದ ಈ ಸಸ್ಪೆನ್ಸ್ ಸಿನೆಮಾಕ್ಕೆ ‘ಎ’ ಪ್ರಮಾಣ ಪತ್ರ ಕೊಟ್ಟ ಸೆನ್ಸಾರ್ ಮಂಡಳಿಯ ನಿರ್ಧಾರವನ್ನೂ ಪ್ರಶ್ನಿಸಬೇಕಿದೆ. ಒಂದೆರೆಡು ಕೊಲೆಗಳು ಇದ್ದರೂ ಅವು ರೇಜಿಗೆ ಹುಟ್ಟಿಸುವಂತಿಲ್ಲ. ಅದಕ್ಕಾಗಿ ಯು/ ಎ ಪ್ರಮಾಣ ಪತ್ರ ಕೊಟ್ಟಿದ್ದರೂ ಆಗುತ್ತಿತ್ತು. ಆದರೆ ‘ಎ’ ಸರ್ಪಿಫಿಕೇಟ್ ಕೊಟ್ಟು ಪಿಯುಸಿ ಮಟ್ಟದ ಕಾಲೇಜಿನ ಯುವಕ ಯುವತಿಯರನ್ನು ಈ ಸಿನೆಮಾದಿಂದ ದೂರವಿಡುವ ಸೆನ್ಸಾರ್ ಬೋರ್ಡ್ ದುಸ್ಸಾಹಸ ಖಂಡಿತಾ ಖಂಡನೀಯ. ಪ್ರೀತಿಯ ಜೋಶ್ ನಲ್ಲಿ ಮನಸು ಜಾರಿ ಗರ್ಭಿಣಿಯರಾಗಿ ಅನೇಕ ಸಮಸ್ಯೆಗಳನ್ನು ತಂದುಕೊಳ್ಳಬಹುದಾದ ಕಾಲೇಜಿನ ಎಳೆವಯಸಿನ ಹುಡುಗಿಯರಿಗೆ ಈ ಸಿನೆಮಾ ತೋರಿಸಲೇಬೇಕಿತ್ತು. ಅದಕ್ಕೂ ಈ ಸೆನ್ಸಾರ್ ಮಂಡಳಿ ನಿರ್ಬಂಧ ವಿಧಿಸಿತು.

ಒಟ್ಟಾರೆಯಾಗಿ ಒಂದು ವಿಭಿನ್ನ ಮಾದರಿಯ ಸಿನೆಮಾವನ್ನು ಯುವ ನಿರ್ದೇಶಕ ಸುಕೇಶ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಕನ್ನಡದ ಯುವ ಪ್ರತಿಭೆಗಳು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿವೆ.  ಮಲಯಾಳಂ ಭಾಷೆಯಲ್ಲಿ ಇದೇ ಸಿನೆಮಾ ಬಂದಿದ್ದರೆ ಅಲ್ಲಿಯ ಪ್ರೇಕ್ಷಕರು ಅಪ್ಪಿಕೊಳ್ಳುತ್ತಿದ್ದರು. ಹಾಗೆಯೇ ಕನ್ನಡಿಗರೂ ಸಹ ‘ಪೀಟರ್’ ನನ್ನು ಒಪ್ಪಿಕೊಳ್ಳಬೇಕಿದೆ. ಹೇಗಾದರೂ ಮಾಡಿ ಈ ಸಿನೆಮಾ ಹೆಚ್ಚು ಜನರಿಗೆ ತಲುಪಬೇಕಿದೆ. ಕ್ರೌರ್ಯ ಹಾಗೂ ಅತಿರೇಕದ ಪ್ಯಾನ್ ಇಂಡಿಯಾ ಮಾದರಿ ಸಿನೆಮಾಗಳ ಭರಾಟೆಯಲ್ಲಿ ಯುವ ಉತ್ಸಾಹಿ ಯುವಕರು ಸೃಷ್ಟಿಸಿದ ‘ಪೀಟರ್’ ನಂತಹ ಕಡಿಮೆ ಬಜೆಟ್ಟಿನ ಉತ್ತಮ ತಾಂತ್ರಿಕತೆ ಹಾಗೂ ವಿಭಿನ್ನ ಕಥೆಯುಳ್ಳ ಸಿನೆಮಾಗಳು ಗೆಲ್ಲಬೇಕಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article

Most read