2023ರಿಂದ ಭೂಮಿಯ ವಾತಾವರಣದ ಸರಾಸರಿ ತಾಪವು ಏರಿಕೆಯನ್ನೇ ಕಾಣುತ್ತ ಬಂದಿದೆ. ಬೇಸಗೆಯೂ ಬಹಳ ಬಿರುಸಾಗುತ್ತಿದೆ ಮತ್ತು ಚಳಿಗಾಲದ ದಿನಗಳನ್ನೂ ತನ್ನೆಡೆಗೆ ಸೆಳೆದು ಹಿಗ್ಗುತ್ತಿದೆ. ನಾವೆಲ್ಲ ನಿಸರ್ಗದ ಅತಿರೇಕಗಳ ಸುಳಿಗೆ ಸಿಲುಕಲು ಹೊರಟಿದ್ದೇವೆ. ನೆರಳು ಕೊಟ್ಟು ನೆಲ ಕಾಯದಂತೆ ಕಾಪಾಡುವ ಮರಗಳು, ಕಾಡುಗಳು ನಮಗೆ ಬೇಡ. ಅವನ್ನು ಕಣ್ಣು ಕುಕ್ಕುವ ಅಭಿವೃದ್ಧಿಯ ಹೆಸರಿನಲ್ಲಿ ತರಿದು ಹಾಕುತ್ತಿದ್ದೇವೆ. ಗಾಳಿಯ ಕಾವನ್ನು ಹೀರಿಕೊಂಡು ವಾತಾವರಣದ ತಾಪದಲ್ಲಿ ಸಮತೋಲನ ಸಾಧ್ಯವಾಗಿಸುವ ಕೊಳ, ಕೆರೆ, ಸರೋವರ, ನದಿಗಳನ್ನು ಬತ್ತಿಸಿ ವಾಣಿಜ್ಯ ಉದ್ದೇಶಗಳಿಗೆ ಬದಲಾಯಿಸುತ್ತಿದ್ದೇವೆ. ದುಡ್ಡು ಮತ್ತು ಲಾಭಗಳ ಹೊರತಾಗಿ ಬೇರೆ ಆಲೋಚನೆಗಳು ನಮಗೆ ಹೊಳೆಯುತ್ತಿಲ್ಲ. ಎಂದು ನೀರು, ನೆಲ, ಗಾಳಿ ಮತ್ತು ಬಿಸಿಲುಗಳು ನಮ್ಮ ವಿರುದ್ಧ ತೊಡೆ ತಟ್ಟುತ್ತವೊ ಅಲ್ಲಿಗೆ ನಮ್ಮ ಹೋರಾಟ ಕೊನೆಗೊಳ್ಳುತ್ತದೆ. ಈಗಾಗಲೆ ಅವು ತಟ್ಟಿವೆ – ಕೆ.ಎಸ್ ರವಿಕುಮಾರ್ ಹಾಸನ, ವಿಜ್ಞಾನ ಬರಹಗಾರರು
2024ರ ಏಪ್ರಿಲ್‍ನಲ್ಲಿ ಮುಸ್ಸಂಜೆ. ಎಂದಿನ ನಡಿಗೆ ಮುಗಿಸಿ ಮನೆಗೆ ಮರಳುವಾಗ ಹೊಂಗೆಯ ಮರದಡಿ ಡಾಂಬರು ರಸ್ತೆಯ ಮೇಲೆ ಕಾಗೆ ‘ಮಿಯಾ’ ಕಂಡಳು. ‘ಮಿಯಾ’ ಮಗಳು ಅವಳಿಗಿಟ್ಟ ಹೆಸರು. ಅತ್ತಿತ್ತ ಹಂದಾಡದೆ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತ ಸದ್ದಿಲ್ಲದೆ ಕುಳಿತಿದ್ದ ಅವಳ ಮುಂದೆ ಯಾರೋ ಮರುಕ ಮನದವರು ದೊನ್ನೆಯಲ್ಲಿ ನೀರಿಟ್ಟು ಒಂಚೂರು ಮಂಡಕ್ಕಿ ಸುರಿದಿದ್ದರು. ನಮ್ಮ ಅಚ್ಚರಿಯ ಮುಖಗಳನ್ನು ಅವಳು ಅಷ್ಟೆ ಅಚ್ಚರಿ, ಕುತೂಹಲಗಳಿಂದ ನೋಡಿದಳೆನ್ನಬೇಕು. ಆದರೆ ಅಂಜಿಕೆಯ ನೋಟ ಅವಳ ಕಣ್ಣುಗಳಲ್ಲಿರಲಿಲ್ಲ. ಅದೇ ನಮಗೆ ಅಸಹಜವೆನಿಸಿದ್ದು.
“ಅಪ್ಪ, ಮನೆಗೆ ಒಯ್ದು ಸಾಕೋಣ, ಏನೋ ಪೆಟ್ಟಾಗಿರಬೇಕು ಈ ಕಾಗೆಗೆ” ಮಗಳೆಂದಳು.
ನನಗೆ ಎರಡು ಮನಸು. “ಮನೆಯಲ್ಲಿ ಬೆಕ್ಕುಗಳಿವೆ, ನೋಡಿಕೊಳ್ಳೋದು ಕಷ್ಟ ಆಗಬಹುದು” ನಾನೆಂದೆ.
“ನಾನು ನೋಡ್ಕೊಳ್ತೀನಿ, ನೀನು ಯೋಚ್ನೆ ಮಾಡ್ಬೇಡ, ನಾಳೆ ಡಾಕ್ಟ್ರಿಗೆ ತೋರಿಸೋಣ” ಅವಳೆಂದಳು.
“ಎಲ್ಲ ಮಕ್ಕಳು ಹೇಳೋದೆ ಹೀಗೆನೆ. ಕಡೆಗೆ ಮಕ್ಕಳ ಜೊತೆ ಪ್ರಾಣಿಗಳನ್ನು ನೋಡಿಕೊಳ್ಳುವ ಹೊಣೆ ದೊಡ್ಡವರ ಮೇಲೇ ಬೀಳೋದು” ನನ್ನ ಗೊಣಗು.
ನನಗೆ ಒಳಗೊಳಗೆ ಅಳುಕು. ಮಗಳು ಕಾಲೇಜು, ನಾವಿಬ್ಬರು ಕಚೇರಿಗೆ ಹೋಗುವ ಗಡಿಬಿಡಿಯಲ್ಲಿ ಮಿಯಾಳ ಆಗುಹೋಗುಗಳಿಗೆ ಗಮನ ಕೊಡಬೇಕು. ಪೂರ್ಣ ಬೆಳೆಯದ ಈ ಕಾಗೆಯನ್ನು ಹೇಗೆ ಸಾಕೋದು, ಹೇಗೆ ಕಾಪಾಡೋದು, ಹಾರಿಬಿಟ್ಟ ಮೇಲೆ ಉಳಿಯಬಹುದೆ…! ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿದ್ದವು. ಮಗಳು ಅದನ್ನು ಜತನದಿಂದ ಎತ್ತಿಕೊಂಡಳು. ಅದು ಒಂದಿಷ್ಟೂ ಕೊಸರಾಡಲಿಲ್ಲ. ಸುಮ್ಮನೆ ಕುಳಿತಿತ್ತು. ಮನೆಗೆ ತಂದೆವು. ಕಣ್ಣಿನಲ್ಲಿದ್ದ ಹೊಳಪು ಕಂಡು ಅವಳಿಗೆ ನಾವು ಮರುಹುಟ್ಟು ಕೊಟ್ಟೇವು ಎಂದೆನಿಸಿತು. ಆ ದಿನ ಸಂಜೆಯೆ ಅದನ್ನು ನಮ್ಮ ಮನೆಯ ಬೆಕ್ಕುಗಳಿಗೆ ಸರ್ಜರಿ ಮಾಡಿದ್ದ, ವೃತ್ತಿಪ್ರಿಯ, ಕೋಲಾರದವರಾದ ವೆಟರಿನರಿ ಡಾಕ್ಟರ್ ಬಾಬು ಅವರ ಬಳಿಗೊಯ್ದೆವು. ಮಿಯಾಳನ್ನು ನೋಡಿ ‘ಇದೇ ಮೊದಲು ಕಾಗೆಗೆ ನಾನು ಟ್ರೀಟ್‍ಮೆಂಟ್ ಕೊಡ್ತಿರೋದು’ ಅಂತ ಅವರು ಕಣ್ಣರಳಿಸಿದರು. ಅವಳನ್ನು ಹಾಗೆ ಹೀಗೆ ಎತ್ತಿ ನೋಡಿ ‘ಇದು ಹೆಣ್ಣು ಕಾಗೆ, ಪೂರ್ತಿ ಬೆಳೆದಿಲ್ಲ. ನೀರು ಸಿಕ್ಕದೆ ಇವಳಿಗೆ ಸಿಕ್ಕಾಪಟ್ಟೆ ಡಿಹೈಡ್ರೇಶನ್ ಆಗಿರುವ ಹಾಗಿದೆ’ ಎಂದು ಅವಳ ಹೊಟ್ಟೆಯನ್ನು ನಯವಾಗಿ ನೀವಿ ಗುದದಲ್ಲಿ ಕಟ್ಟಿಕೊಂಡಿದ್ದ ಗಟ್ಟಿ ಯೂರಿಕ್ ಆಸಿಡ್ ಅನ್ನು ಹೊರತೆಗೆದರು. ‘ಸುಮಾರು ನಾಕೈದು ದಿನಗಳಿಂದಲೂ ಇವಳು ಹಿಕ್ಕೆ ಹಾಕಿದ ಹಾಗಿಲ್ಲ’ ಅವರೆಂದರು. ಯೂರಿಕ್ ಆಸಿಡ್ ಹೊರಹೋದ ಮೇಲೆ ತುಸು ಗೆಲುವಾದಂತೆ ಮಿಯಾ ಕಂಡುಬಂದಳು. ಬಾಬು ‘ಇವಳಿಗೆ ಚೆನ್ನಾಗಿ ನೀರು ಕುಡಿಸಿ. ಈಗಲೆ ಗಟ್ಟಿ ತಿನ್ನಲು ಕೊಡಬೇಡಿ. ಕಿಡ್ನಿ ಡ್ಯಾಮೇಜ್ ಆಗಿರದಿದ್ದರೆ ಹುಶಾರಾಗಿ ಹಾರಿಯಾಳು’ ಎಂದು ಕಾಗೆಯನ್ನು ಇಲಾಜಿಗೆ ತಂದ ನಮ್ಮ ಕಾಳಜಿಗೆ ಮೆಚ್ಚುಗೆ ಸೂಸುವ ರೀತಿಯಲ್ಲಿ ನೋಡಿದರು.

ಮಿಯಾ ಮನೆಗೆ ಬಂದಮೇಲೆ ನೀರು ಕುಡಿದಳು, ಒಂದೊಂದೆ ಅನ್ನದ ಅಗುಳನ್ನು ತಿನ್ನತೊಡಗಿದಳು, ನಮ್ಮನ್ನು ಕಂಡ ಕೂಡಲೆ ಕೂಗಿ ಏನಾದರು ಕೊಡಿ ಎಂಬಂತೆ ನೋಡುತ್ತಿದ್ದಳು. ಮೊಣಕೈ ಮೇಲೆ ಕುಳಿತು ಕಣ್ಣಲ್ಲೆ ಏನೋ ಹೇಳಲು ತವಕಿಸುತ್ತಿದ್ದಳು. ಹಿಕ್ಕೆ ಹಾಕುವುದು ಸಹಜ ಎಂಬಂತಿತ್ತು. ಚೇತರಿಕೆ ನಿಧಾನವಾಗಿತ್ತು. ಹೊರಗಿನ ನೋಟ ಕಾಣಲಿ ಮತ್ತು ಸದ್ದುಗಳನ್ನು ಕೇಳಲಿ ಎಂದು ರಸ್ತೆಗೆ ತೆರೆದುಕೊಂಡ, ದೊಡ್ಡ ಕಿಟಕಿ ಇರುವ ಪುಟ್ಟ ಕಂಪ್ಯೂಟರ್ ಕೊಟಡಿಯಲ್ಲಿ ಅವಳಿಗೆಂದು ರಟ್ಟಿನ ಪೆಟ್ಟಿಗೆಯನ್ನು ಅಣಿಗೊಳಿಸಿದೆವು. ಆ ಕೊಟಡಿಗೆ ಬೆಕ್ಕುಗಳಿಗೆ ಸುತಾರಾಂ ಎಂಟ್ರಿ ಇರಲಿಲ್ಲ. ಸಂಜೆಯ ಇಳಿಬಿಸಿಲಿನಲ್ಲಿ ಕೊಂಚಹೊತ್ತು ಟೆರೇಸಿನ ಮೇಲೆ ಅವಳನ್ನು ಕೂರಿಸುತ್ತಿದ್ದೆವು. ಹೀಗೇ ಹದಿನೈದು ದಿನಗಳು ಕಳೆದವು. ಒಂದು ಬೆಳಿಗ್ಗೆ ಅವಳನ್ನು ಮಾತನಾಡಿಸಲು ಹೋದಾಗ ಉತ್ತರ ನೀಡದೆ ಮಲಗಿದ್ದಳು. ಅವಳು ಮರಳಿ ಬಾರದೆಡೆಗೆ ಪಯಣಿಸಿದ್ದಳು. ಡಾಕ್ಟರ್ ಪ್ರಕಾರ ಅವಳ ಕಿಡ್ನಿಗಳು ಎಂದೆಂದಿಗೂ ದುರಸ್ತಿಯಾಗದಂತೆ ಹಾನಿಗೊಂಡಿದ್ದವು. ನಾವೆಲ್ಲ ಮೌನವಾಗಿ ಅತ್ತೆವು. ಮನೆಯೆದುರಿನ ನೇರಳೆ ಮರದ ಬುಡದಲ್ಲಿ ಹುಗಿದೆವು. ಕಾಗೆಯಂತಹ ಗಟ್ಟಿಗಡಸಿನ ಹಕ್ಕಿಯನ್ನೂ ಹವಾಮಾನ ಬದಲಾವಣೆ ಕಾಡುವ ಕುರಿತು ಮನಸ್ಸು ಮುದುಡಿತು. ನಮ್ಮ ಬದುಕಿನ ಅನುಭವಗಳ ಹೊತ್ತಗೆಗೆ ಒಂದು ಕಹಿ ಪಸುಗೆ ಸೇರಿಕೊಂಡಿತು. ಮಿಯಾ ಸಾವಿನ ನಂತರ ಮನೆಮೇಲೆ ತಟ್ಟೆಗಳಲ್ಲಿ ನೀರಿಡಲು ಶುರುಮಾಡಿದೆವು.
ಮಿಯಾ ತೀರಿಕೊಂಡ ಏಪ್ರಿಲ್ ತಿಂಗಳು ಮಲೆನಾಡಿನ ಸೆರಗಿನಲ್ಲಿರುವ ಹಾಸನದಲ್ಲಿ ವಿಪರೀತ ತಾಪ ದಾಖಲಾಗಿತ್ತು. ಹಗಲಿನ ಅತಿ ಹೆಚ್ಚಿನ ತಾಪ 33 ರಿಂದ 36 ಡಿಗ್ರಿ ಸೆಲ್ಸಿಯಸ್‍ಗೇರಿದ ದಿನಗಳವು. ನೀರು ದಕ್ಕದ ಮಿಯಾಳ ಹಾಗೆ ಅದೆಷ್ಟು ಹಕ್ಕಿಗಳು ನಮಗೆ ಕಾಣದಂತೆ ಅಳಿದಿದ್ದವೊ ಗೊತ್ತಿಲ್ಲ. ದೇಹ ಸಹಿಸಲಾಗದ ಬಿಸಿಲ ಧಗೆಯಲ್ಲಿ ಡಿಹೈಡ್ರೇಶನ್ ಮನುಷ್ಯರನ್ನು ಹೇಗೆ ಕಾಡುವುದೊ ಹಾಗೆಯೆ ಇತರ ಜೀವಸಂಕುಲಗಳನ್ನು ಕಾಡುವುದು. 2023ರಿಂದ ಭೂಮಿಯ ವಾತಾವರಣದ ಸರಾಸರಿ ತಾಪವು ಏರಿಕೆಯನ್ನೇ ಕಾಣುತ್ತ ಬಂದಿದೆ. ಬೇಸಗೆಯೂ ಬಹಳ ಬಿರುಸಾಗುತ್ತಿದೆ ಮತ್ತು ಚಳಿಗಾಲದ ದಿನಗಳನ್ನೂ ತನ್ನೆಡೆಗೆ ಸೆಳೆದು ಹಿಗ್ಗುತ್ತಿದೆ.
ಐಪಿಎಲ್ ಎಂಬ ದುಬಾರಿ ಥ್ರಿಲ್
ಈ ವರುಷದ ಏಪ್ರಿಲ್ ಹಲವು ಕಾವಿನನುಭವಗಳನ್ನು ಈಗಾಗಲೆ ನೀಡಿದೆ. ಹೇಳಿಕೇಳಿ ಐಪಿಎಲ್ ಕ್ರಿಕೆಟ್ ಪಂದ್ಯಗಳು ಜರುಗುವ ತಿಂಗಳು ಬೇರೆ. ಹೊರಗೆ ಅದೆಷ್ಟೆ ತಾಪವಿರಲಿ, ಅದೆಷ್ಟೆ ಬಳಲಿ ಬೇಸಗೆಯನ್ನು ಬೈಯಲಿ, ಕೋಟ್ಯಂತರ ಭಾರತೀಯರು ಟಿವಿ, ಮೊಬೈಲುಗಳ ಪರದೆಗಳಲ್ಲಿ ಕಣ್ಣು ಹುಗಿದು, ನಡುನಡುವೆ ಉದ್ರೇಕಗೊಂಡು ಕೇಕೆ ಹಾಕುತ್ತ ಕ್ರಿಕೆಟಿನಲ್ಲಿ ಮುಳುಗಿದರೆ ಬಿರುಬೇಸಗೆಯೆ ಮರೆತುಹೋಗುತ್ತದೆ. ಹವಾಮಾನ ಬದಲಾವಣೆಯು ಬೇಸಗೆಯ ತಿಂಗಳುಗಳನ್ನು ಭೂಮಿಯೆಂಬ ಕಾದ ಬಾಣಲೆಯಲ್ಲಿ ಹುರಿಯುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಐಪಿಎಲ್ ಪಂದ್ಯಗಳು ಜರುಗುವುದು ಸಂಜೆಯ ಮೇಲೆಯೆ, ನಡುರಾತ್ರಿಯವರೆಗೆ. ಹಗಲು ಸುಡುವುದರಿಂದ, ಕೋಟಿಕೋಟಿ ಬೆಲೆಬಾಳುವ ಕ್ರಿಕೆಟ್ ಆಟಗಾರರ ಜೀವ ಮುಖ್ಯವಾದ್ದರಿಂದ ತಂಪಿನಲ್ಲೆ ಅವು ಜರುಗಬೇಕು. ರಾತ್ರಿಯಾದ್ದರಿಂದ ಚೆಂಡು ಮತ್ತು ಅದರ ನೆರಳುಗಳು ಒಟ್ಟಿಗೆ ಚಲಿಸಿ ಆಡುವವರಿಗೆ ಎರಡು ಚೆಂಡುಗಳಲ್ಲಿ ನಿಜವಾದ್ದು ಯಾವುದು ಎಂದು ತಿಳಿಯದೆ ಗಲಿಬಿಲಿಯಾಗದಿರಲು ಸ್ಟೇಡಿಯಮ್‍ನ ಹರಹಿಗನುಗುಣವಾಗಿ ಎಲ್ಲೆಡೆ ನೆರಳುಗಳಿಲ್ಲದ ಬೆಳಕು ಸಮನಾಗಿ ಬೀಳಬೇಕೆಂದು 300-500ರವರೆಗೆ ಎಲ್‍ಇಡಿ ಫ್ಲಡ್‍ಲೈಟ್ ಫಿಕ್ಸ್‌ಚರ್‌ಗಳನ್ನು ಅಳವಡಿಸಲಾಗುತ್ತದೆ. ಅವನ್ನು ಬೆಳಗಿಸಲು 1-2 ಲಕ್ಷ ವಾಟ್ ವಿದ್ಯುತ್ತನ್ನು ಬಳಸಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಕಾವಿನಲ್ಲಿ ವಿದ್ಯುತ್ತಿಗೆ ಹೆಚ್ಚುವರಿ ಬೇಡಿಕೆ ಇರುತ್ತದೆ. ಕೋಟ್ಯಂತರ ಏರ್ ಕಂಡಿಷನರ್, ಏರ್ ಕೂಲರ್, ವಿದ್ಯುತ್ ಪಂಕಗಳು 24 ತಾಸೂ ಭಾರತದಾದ್ಯಂತ ಓಡುತ್ತಲೇ ಇರುತ್ತವೆ. ಹೆಚ್ಚುವರಿ ಬೇಡಿಕೆಯನ್ನು ಪೊರಯಿಸಲಾಗದೆ ಪದೇಪದೇ ವಿದ್ಯುತ್ ಕಡಿತವಾಗುತ್ತದೆ. ಆದರೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಗಳು ಜರುಗುವ ಸ್ಟೇಡಿಯಮ್‍ಗಳಲ್ಲಿ ಯಾವ ಕಾರಣಕ್ಕೂ ವಿದ್ಯುತ್ ಕಡಿತವಾಗುವುದಿಲ್ಲ. ಭಾರತದಲ್ಲಿ ಶೇಕಡಾ 75ರಷ್ಟು ವಿದ್ಯುತ್ತನ್ನು ಕಲ್ಲಿದ್ದಿಲು ಸುಟ್ಟು ಪಡೆಯಲಾಗುತ್ತದೆ. ಕಲ್ಲಿದ್ದಿಲು ಸುಡುವಾಗ ಬಿಡುಗಡೆಯಾಗುವ ಕಾರ್ಬನ್ ನಂತರ ಕಾರ್ಬನ್ ಡೈಆಕ್ಸೈಡ್ ಆಗಿ ಗಾಳಿಯನ್ನು ಸೂರ್ಯನ ಕಾವಿಗೆ ಹೆಚ್ಚುವರಿ ಬಿಸಿಯಾಗಿಸುತ್ತದೆ. ಪ್ರತೀ ವರುಷ ಫ್ಲಡ್‍ಲೈಟ್‍ಗಳ ಬೆಳಗುವಿಕೆ, ಡಿಜಿಟಲ್ ಪ್ರಸಾರ ಮತ್ತು ನಮ್ಮ ನೋಡುವಿಕೆ, ಸ್ಟೇಡಿಯಮ್ ಮತ್ತು ಆಟಗಾರರ ನಿರ್ವಹಣೆ, ಹಿನ್ನೆಲೆಯಲ್ಲಿ ವಾಹನಗಳು ಮತ್ತು ಇತರ ಸಲಕರಣೆಗಳ ಬಳಕೆ, ಸ್ಟೇಡಿಯಮ್ಮಿಗೆ ದೌಡಾಯಿಸುವ ನೋಡುಗರ ಸ್ವಂತ ವಾಹನಗಳು, ಅವರು ಕಸಕ್ಕೆ ಎಸೆದ ತಿನಿಸಿನ ಪೊಟ್ಟಣಗಳನ್ನು ಸಾಗಿಸುವ ವಾಹನಗಳು ಹೀಗೆ ಹಲವು ಕಾರಣಗಳಿಗಾಗಿ ಒಂದು ಐಪಿಎಲ್ ಮ್ಯಾಚ್ ಲೆಕ್ಕಕ್ಕೆ 10-14 ಸಾವಿರ ಟನ್ನುಗಳಷ್ಟು ಕಾರ್ಬನ್ ಬಿಡುಗಡೆಯಾಗುತ್ತದೆ. ಈ ಪ್ರಮಾಣ ಒಂದು ಪಂದ್ಯದ ಸರಾಸರಿ ಗಡುವಿನಲ್ಲಿ 20 ಲಕ್ಷ ಮನೆಗಳಿಂದ ಬಿಡುಗಡೆಯಾಗುವ ಕಾರ್ಬನ್ ಪ್ರಮಾಣಕ್ಕೆ ಸಮ. ಪೂರ್ತಿ ಟೂರ್ನಮೆಂಟ್ ಮುಗಿಯುವ ಹೊತ್ತಿಗೆ 9-10 ಲಕ್ಷ ಟನ್ ಕಾರ್ಬನ್ ಗಾಳಿಪಾಲಾಗುತ್ತದೆ. ಈ ಪ್ರಮಾಣದ ಕಾರ್ಬನ್ ಅನ್ನು ಹೀರಿಕೊಳ್ಳಲು 20 ವರುಷ ಸತತವಾಗಿ 1,69,000 ಮರಗಳನ್ನು ಭಾರತೀಯರು ಬೆಳೆಸಬೇಕಾಗುತ್ತದೆ (ನಾವು ಬೆಳೆಸುವುದಿಲ್ಲ, ಅದು ಬೇರೆ ಮಾತು) ಎಂದು Earth.org ಯ 2010ರ ಅಧ್ಯಯನ ವರದಿ ಹೇಳುತ್ತದೆ. ಒಂದು ವರುಷದ ಐಪಿಎಲ್ ಟೂರ್ನಮೆಂಟ್ ಭೂಮಿಯ ವಾತಾವರಣಕ್ಕೆ ಅದೆಷ್ಟು ದುಬಾರಿಯಾಗಿ ಪರಿಣಮಿಸುತ್ತದೆ ಎಂಬುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ.
ನೆಲ ತಲುಪದ ಮಳೆಗಳು

ನಮಗೆಲ್ಲ ಗೊತ್ತಿರುವಂತೆ ಏಪ್ರಿಲ್ ಬೇಸಗೆಯ ಬೇಗೆ ತುತ್ತತುದಿಯನ್ನು ತಲುಪುವ ತಿಂಗಳಲ್ಲ. ಆದರೆ 2026ರ ಏಪ್ರಿಲ್ ಹಿಂದಿನ ವರುಷಗಳ ದಾಖಲೆಗಳನ್ನು ಬದಿಗೆ ಸರಿಸುತ್ತಿದೆ. ಚಳಿಗಾಲದ ಕಡೆಯ ತಿಂಗಳಾದ ಫೆಬ್ರವರಿ 20ನೇ ತಾರೀಕು ಹಾಸನದಲ್ಲಿ ಮಧ್ಯಾಹ್ನ 03.13 ಹೊತ್ತಿಗೆ ದಿನದ ಅತಿ ಹೆಚ್ಚಿನ ತಾಪ 31 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ಅದರ ಸ್ಕ್ರೀನ್‍ಶಾಟ್ ಅನ್ನು ತೆಗೆದು ಎಲ್ಲರಿಗೂ ಹಂಚಿ ‘ಬರುವ ಬೇಸಗೆ ಬಿರುಸಾಗಿರುತ್ತದೆ, ಆರೋಗ್ಯದ ಕಡೆ ನಿಗಾ ಇರಲಿ’ ಎಂದು ಸೂಚಿಸಿದ್ದೆ. ಮತ್ತೆ ಮಾರ್ಚ್ 26ರಂದು ಆ ತಿಂಗಳ ಅತಿ ಹೆಚ್ಚಿನ ತಾಪ ಮೊದಲ ಬಾರಿಗೆ 34 ಡಿಗ್ರಿ ಸೆಲ್ಸಿಯಸ್ ತಲುಪಿದಾಗಲೂ ಎಲ್ಲರಿಗೂ ಸ್ಕ್ರೀನ್‍ಶಾಟ್ ಕಳಿಸಿದ್ದೆ. ನಂತರ ಏಪ್ರಿಲ್ ಸತತವಾಗಿ 33-34ರಲ್ಲೆ ಮುಂದುವರಿಯಿತು. ಯಾರು ಕಂಡರೂ ‘ಈ ಧಗೆ ತಾಳಲು ಸಾಧ್ಯವಿಲ್ಲ’ ಎಂದೇ ಮಾತು ಶುರು ಮಾಡುತ್ತಿದ್ದರು. ನಡುವಯಸ್ಸಿನವರು, ಹಿರಿಯ ನಾಗರೀಕರಾದವರು ಹೀಗೆ ಹೇಳಿದರೆ ವಯಸ್ಸಿನ ಕಾರಣಕ್ಕೆ ಅವರು ಸುಸ್ತಾಗಿರಬೇಕು ಅಂತ 60ನ್ನು ಸಮೀಪಿಸುತ್ತಿರುವ ನನಗೆ ಅನಿಸಿಬಿಡುತ್ತಿತ್ತು. ಆದರೆ 26ರ ತರುಣ ನಿತಿನ್ ‘ಸರ್, ನಾನಿರುವ ರೂಮು ಅರ್ಧ ಕಿಲೊಮೀಟರ್ರೂ ಇಲ್ಲ, ಹೋಗಿ ಬರುವುದರೊಳಗೆ ಬಿಸಿಲ ಜಳಕ್ಕೆ ಸುಸ್ತೊ ಸುಸ್ತು. ಊಟ ಮಾಡಿ ಸಂಜೇವರೆಗೂ ನೆಲದ ಮೇಲೆ ಮಲಗಿಬಿಡೋಣ ಅನಿಸುತ್ತೆ’ ಎಂದಾಗ ಈ ವರುಷದ ಏಪ್ರಿಲ್ ಬೇಸಗೆ ಎಂದಿನಂತಿಲ್ಲ ಅಂತ ಅನಿಸಿದ್ದು. ಈ ಬೇಸಗೆಯಲ್ಲಿ ಜ್ಯೂಸ್ ಅಂಗಡಿಗಳಲ್ಲಿ, ಎಳನೀರಿನ ಸ್ಟಾಲುಗಳಲ್ಲಿ ಗಟಗಟ ಕುಡಿಯಲು ತಮ್ಮ ಸರದಿ ಕಾಯುತ್ತ ಜನ ನಿಂತಿದ್ದನ್ನು ಕಂಡಿದ್ದೇನೆ. ಬಯಸಿದ ಜ್ಯೂಸ್ ಕುಡಿಯಲು ನಾನೇ ಒಂದು ಕಡೆ ಇಪ್ಪತ್ತು ನಿಮಿಷ ಕಾದಿದ್ದೇನೆ. ಬಹುತೇಕ ಏಪ್ರಿಲ್‍ನಲ್ಲಿ ಪ್ರತೀ ದಿನವೂ ಎಂಬಂತೆ ಜ್ಯೂಸ್ ಕುಡಿದಿದ್ದೇವೆ. ನನಗೆ ನೆನಪಿರುವಂತೆ ಹಿಂದೆಂದೂ ನಾವು ಈ ಪಾಟಿ ಜ್ಯೂಸ್ ಕುಡಿದಿರಲಿಲ್ಲ. ಮೊನ್ನೆ ನಂದಿನಿ ಮಳಿಗೆಯ ಕಸದ ಬುಟ್ಟಿಯೊಂದು ಮಜ್ಜಿಗೆ ಕುಡಿದು ಎಸೆದ ಪ್ಲಾಸ್ಟಿಕ್ ಕವರ್‌ಗಳಿಂದ ಪೂರ್ತಿ ತುಂಬಿಹೋಗಿದ್ದನ್ನು ಕಂಡೆ. ಬೇರೆ ಯಾವ ತ್ಯಾಜ್ಯವೂ ನನಗೆ ಅಲ್ಲಿ ಕಾಣಲಿಲ್ಲ. ಒಂದು ವಾರದ ತನಕ ನಮ್ಮ ಮೂರು ಮಂದಿಯ ಸಂಸಾರಕ್ಕೆ ಸಾಕಾಗುತ್ತಿದ್ದ 25 ಲೀಟರಿನ ಪ್ಯಾಕೇಜ್ಡ್ ನೀರು ಈಗ ನಾಲ್ಕೇ ದಿನಕ್ಕೆ ಖಾಲಿಯಾಗುತ್ತಿದೆ.
ಅಂಬೇಡ್ಕರ್ ಜಯಂತಿ ಆಚರಿಸಲು 14ರಂದು ಎಲ್ಲ ಸಂಗಡಿಗರು ಸೇರಿದ್ದೆವು. ಸಂಜೆ ಐದರ ವೇಳೆ ರಸ್ತೆ ಕಡೆಯಿಂದ ಬೀಸುತ್ತಿದ್ದ ಬಿಸಿಗಾಳಿಗೆ ಎಲ್ಲರೂ ತತ್ತರಿಸಿದ್ದೆವು. ಗೆಳೆಯ ಧರ್ಮೇಶ್ ಕಾಂಕ್ರಿಟ್ ರಸ್ತೆಯ ಮೇಲೆ ಮಧ್ಯಾಹ್ನ ಥರ್ಮಮೀಟರ್ ಇಟ್ಟು ನೋಡಿ ರಸ್ತೆಯ ಮೇಲಿನ ಕಾದ ಗಾಳಿ 40 ಡಿಗ್ರಿ ಸೆಲ್ಸಿಯಸ್ ತೋರಿಸಿತೆಂದು ಹೇಳಿದರು. ಹಾಗೆ ಕಾದ ರಸ್ತೆಯ ಮೇಲೆ ಸಂಚರಿಸಿ ಬಂದವರು ಬಳಲಿ ಬಸವಳಿಯದೆ ಇನ್ನೇನಾದಾರು? ನಮ್ಮ ಜ.ಪ್ರ.(ಐ ಮೀನ್ ಜನ ಪ್ರತಿನಿಧಿ)ಗಳಿಗೆ ಕಾಂಕ್ರಿಟ್ ರಸ್ತೆ ಅಪೂರ್ವ ಅಭಿವೃದ್ಧಿಯ ಕುರುಹಾಗಿ ಕಂಗೊಳಿಸುತ್ತದೆ. ಅವರೇನೊ ಅದರ ಮೇಲೆ ಏರ್ ಕಂಡಿಶನ್ ಕಾರಿನಲ್ಲಿ ಓಡಾಡಿಬಿಡುತ್ತಾರೆ. ಆದರೆ ನಡೆಯುವವರು, ಇಚ್ಚಕ್ರ ವಾಹನ ಚಲಾಯಿಸುವವರ ಅನುಭವ ಯಾರಿಗೂ ಬೇಡ. ಹಳ್ಳಿ ಕಡೆಯ ಧಗೆ ಅನುಭವಕ್ಕೆ ಕೊತ್ತಂಬರಿ ಸೊಪ್ಪು ಒಂದು ಸುಳುಹನ್ನು ಕೊಟ್ಟಿತು. ನಾಕೈದು ರೂಪಾಯಿಗೆ ಸಿಗುತ್ತಿದ್ದ ಅದನ್ನು ಈಗ ಕಂತೆಗೆ 20 ರೂಪಾಯಿಯಂತೆ ಮಾರಲಾಗುತ್ತಿದೆ. ಕೊತ್ತಂಬರಿ ಬುಡಕ್ಕೆ ಸಂಜೆ ನೀರು ಹುಯ್ದರೆ ನೆಲಕ್ಕಿಳಿಯುವ ಮುನ್ನವೆ ಬಿಸಿಗಾಳಿ ನೀರನ್ನು ಆವಿ ಮಾಡಿಬಿಡುತ್ತದೆ. ನೀರು ಸರಿಯಾಗಿ ಸಿಕ್ಕದೆ ಅದರ ಇಳುವರಿ ಕಮ್ಮಿ. ಹೀಗಾಗಿ ಬೆಲೆ ಜಾಸ್ತಿ. ಏಪ್ರಿಲ್-ಮೇನಲ್ಲಿ ಮದುವೆ, ಹೊಸಮನೆ ಪ್ರವೇಶ ಮುಂತಾದ ಸಮಾರಂಭಗಳು ಹೆಚ್ಚು. ಸುಡುಬಿಸಿಲಿನಲ್ಲಿ ತೆರಳಿ, ಎಲ್ಲರ ಮೈ ಕಾವಿಗೆ ಕಾದ ಚೌಲ್ಟ್ರಿಯ ಗಾಳಿಯೊಳಗೆ ಹತ್ತು ನಿಮಿಷ ಇರಲೂ ಸಾಧ್ಯವಾಗದ ಸ್ಥಿತಿ ಇರುತ್ತೆ. ಉಂಡೆದ್ದ ಮೇಲೆ ಊಟದ ಬಿಸಿಗೆ ಮೈಯಿಂದ ಬೆವರ ತೊರೆಗಳೇ ಹರಿದು, ಚೆಂದ ಕಾಣಲೆಂದು ತೊಟ್ಟ ದಿರಿಸುಗಳನ್ನು ತೋಯಿಸಿ ‘ಸಾಕಪ್ಪ ಸಾಕು, ಸಮಾರಂಭಗಳ ಸಾವಾಸ’ ಅಂತ ಅನಿಸುತ್ತದೆ. ಮನೆಗೆ ಬಂದು ‘ಉಸ್ಸಪ್ಪಾ’ ಎಂದು ಉರುಳಿಕೊಳ್ಳುತ್ತೇವೆ. ಉರಿಸೆಕೆಯ ಹೊರತಾಗಿ ಮದುವೆ ಮನೆಯ ಯಾವ ನೆನಪೂ ಉಳಿದಿರುವುದಿಲ್ಲ.
ನಾವಿರುವ ಎಡೆಯಲ್ಲಿ ಬಿದ್ದ ಎರಡು ಮಳೆಗಳ ಹೊರತಾಗಿ ಏಪ್ರಿಲ್‍ನಲ್ಲಿ ಎಂಟಕ್ಕೂ ಹೆಚ್ಚು ದಿನ ಇನ್ನೇನು ಮಳೆ ಬಂತು ಎನ್ನುವಷ್ಟು ಮೋಡ ಕವಿದಿತ್ತು, ಗುಡುಗು ಸಿಡಿಲುಗಳ ಗದ್ದಲಕ್ಕೆ ಮತ್ತು ಕಣ್ಣು ಕುಕ್ಕಿದ ಮಿಂಚುಗಳ ನರ್ತನಕ್ಕೆ ಮೈ ನಡುಗಿಹೋಗಿತ್ತು. ಮಳೆ ಬಿತ್ತೆ? ಉಹುಂ, ಎಲ್ಲಿ ಹೋದವು ಆ ಮಳೆಗಳು!? ಬಹುಶಃ ಬಿದ್ದು ನೆಲ ತಲುಪುವ ಮೊದಲೇ ಆವಿಯಾಗಿ ಹೋಗಿರಬೇಕು. ಈ ಬಗೆಯ ಮಳೆಗೆ ‘ನೆಲ ತಲುಪದ ಮಳೆ’ ಇಲ್ಲವೆ ‘ಒಣ ಗುಡುಗು ಮಳೆ’ (Dry thunderstorm) ಎನ್ನುತ್ತಾರೆ. ಒಣ ಮಳೆಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಹವಾಮಾನ ಬದಲಾವಣೆಯೆ ಕಾರಣ. ನಾನು ಮೇಲೆ ನೀಡಿದ ಎತ್ತುಗೆಗಳೆಲ್ಲ ನಮ್ಮ ನಡುವಿನಿಂದ ಎತ್ತಿಕೊಂಡದ್ದು. ಕಾಪಿರೈಟ್, ಪೇಟೆಂಟ್ ಹೀಗೆ ಯಾವುದರ ಗೊಡವೆಯಿಲ್ಲದೆ ಇವಕ್ಕೆ ನಿಮ್ಮದನ್ನೂ ಸೇರಿಸಿಕೊಳ್ಳಬಹುದು.
ಸುಡುಸುಡು ದಾಖಲೆಗಳು

ಏಪ್ರಿಲ್ 2026 ಭಾರತ ಮರೆಯಲೇಬಾರದ ತಿಂಗಳು. ಹವಾಮಾನ ಮುನ್ನೆಚ್ಚರಿಕೆಗಳ ಮೇಲೆ ಮುನ್ನೆಚ್ಚರಿಕೆಗಳನ್ನು ನೀಡಿದ ತಿಂಗಳು. ಏಪ್ರಿಲ್‍ನಲ್ಲಿ ವಿಪರೀತ ಕಾದು ಅತಿ ಹೆಚ್ಚು ತಾಪಕ್ಕೆ ಎರವಾದ ಜಗತ್ತಿನ 100 ಪಟ್ಟಣಗಳಲ್ಲಿ 95 ಭಾರತದಲ್ಲೆ ಇದ್ದದ್ದು ಒಂದು ವಿಶ್ವದಾಖಲೆಯೆ ಸರಿ. ಗಂಗಾ ನದಿ ಬಯಲು ಮತ್ತು ಮಧ್ಯಭಾರತದ ಹಲವು ಪಟ್ಟಣಗಳು ಈ ಪಟ್ಟಿಯಲ್ಲಿ ಸೇರಿವೆ. ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿರುವ ಪಟ್ಟಣಗಳೇ ಹೆಚ್ಚು ಧಗೆಗೆ ತುತ್ತಾಗಿವೆ. 40ರಿಂದ 47 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಅವು ಬೆಂದುಹೋದವು. ಏಪ್ರಿಲ್ 27ರಂದು ಉತ್ತರಪ್ರದೇಶದ ಬಂಡಾ ಪಟ್ಟಣ 47.6 ಡಿಗ್ರಿ ಸೆಲ್ಸಿಯಸ್ ತಾಪದಡಿ ನರಳಿತ್ತು. ಆ ದಿನದ ಮಟ್ಟಿಗೆ ಜಗತ್ತಿನಲ್ಲೆ ಅತಿ ಹೆಚ್ಚಿನ ತಾಪದ ದಾಖಲೆ ಎಂಬ ಕುಖ್ಯಾತಿಯ ಗರಿ ಅದರ ಮುಡಿಗೆ ಸಿಕ್ಕಿಕೊಂಡಿತ್ತು. ಜಗತ್ತಿನ ಅತಿ ಸುಡುಬಿಸಿಯ ಮರಳುಗಾಡುಗಳೆಂದು ಹೆಸರಾದ ಅಮೆರಿಕಾದ ಡೆತ್ ವ್ಯಾಲಿ, ಇರಾನಿನ ಲುಟ್ ಮತ್ತು ಇಥಿಯೋಪಿಯಾದ ದನಾಕಿಲ್‍ಗಳು ಏಪ್ರಿಲ್ 27ರಂದು ಕ್ರಮವಾಗಿ 28, 27 ಮತ್ತು 35 ಡಿಗ್ರಿ ಸೆಲ್ಸಿಯಸ್ ಗಾಳಿ ತಾಪವನ್ನು ಹೊಂದಿದ್ದವು. ಆ ಒಂದು ದಿನ ಮಾತ್ರವಲ್ಲ ಬಂಡಾ ಏಪ್ರಿಲ್‍ನಲ್ಲಿ ಏಳು ದಿನ ದೇಶದಲ್ಲೆ ಅತಿಯಾಗಿ ಕಾದ ಪಟ್ಟಣ ಎಂಬ ದಾಖಲೆಗೂ ಪಾತ್ರವಾಗಿದೆ. ದೆಹಲಿ, ಭುವನೇಶ್ವರ, ಭೂಪಾಲ್, ನಾಗಪುರದಂತಹ ದೊಡ್ಡ ಪಟ್ಟಣಗಳೂ ‘ಏಪ್ರಿಲ್‍ನ ವಿಶ್ವದಾಖಲೆ’ಯಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ನೀರಾವರಿ ಅನುಕೂಲ ಇದ್ದರೂ ನೀರು ಹೆಚ್ಚು ಬೇಡುವ ಬೇಸಗೆಯ ಬೆಳೆಗಳನ್ನು ಬಿತ್ತನೆ ಮಾಡದಿರಲು ದೇಶದ ಹಲವೆಡೆ ರೈತರು ಏಪ್ರಿಲ್‍ನಲ್ಲಿ ತೀರ್ಮಾನಿಸಿದರು. ಮೇ ಕೂಡಾ ಏಪ್ರಿಲ್ ಹಾದಿಯಲ್ಲಿರಬಹುದು.
ಹಗಲಿನ ಅತಿ ತಾಪ ಹೇಗೆ ಸಹಿಸಲು ಅಸಾಧ್ಯವೊ ಹಾಗೆ ರಾತ್ರಿಯ ತಾಪದ ಹೆಚ್ಚಳ ಕೂಡಾ. ಸಾಮಾನ್ಯವಾಗಿ ಸೂರ್ಯ ಮುಳುಗಿದ ಮೇಲೆ ತಾಪ ಕಮ್ಮಿಯಾಗುತ್ತ ಬರುತ್ತದೆ. ರಾತ್ರಿಯ ತಾಪ 23 ಡಿಗ್ರಿ ಸೆಲ್ಸಿಯಸ್‍ಗಿಂತ ಕಮ್ಮಿ ಇದ್ದರೆ ನಿದ್ದೆ ಹತ್ತುತ್ತದೆ. ಆ ಮಿತಿಗಿಂತ ಹೆಚ್ಚಾದರೆ ನಿದ್ದೆಗೆ ಖೋತಾ ಖಾತರಿ. ಈ ವರುಷ ಹೈದರಾಬಾದ್ ಏಪ್ರಿಲ್‍ನಲ್ಲಿ ಒಂದು ರಾತ್ರಿ 28 ಡಿಗ್ರಿ ಸೆಲ್ಸಿಯಸ್ ತಾಪ ಅನುಭವಿಸಿದ್ದು ಭಾರತದ ಮಟ್ಟಿಗೆ ಒಂದು ದಾಖಲೆ. ರಾತ್ರಿ ನಿದ್ದೆ ಕಸಿಯುವ ಹೆಚ್ಚುವರಿ ತಾಪವು ಮಾರನೆಯ ದಿನದ ಕೆಲಸಗಳಿಗೆ ಬೇಕಾದ ಉತ್ಸಾಹವನ್ನೂ ಕಸಿದುಕೊಳ್ಳುತ್ತದೆ.
ತಾಪ ಏರಿದಂತೆ ತಂಪಾಗಲು ಹೆಚ್ಚುವರಿಯಾಗಿ ನಾವು ತಂಪಾಗಿಸುವ ಸಲಕರಣೆಗಳ ಮೊರೆಹೋಗುತ್ತವೆ. ಅವನ್ನು ಸತತ ಚಾಲೂ ಇಡಲು ಹೆಚ್ಚುವರಿ ವಿದ್ಯುತ್ ಬೇಕಾಗುತ್ತದೆ. ಸಹಜವಾಗಿ ವಿದ್ಯುತ್ತಿಗೆ ಬೇಡಿಕೆ ಹೆಚ್ಚುತ್ತದೆ. ಸಹಜವಾಗಿ ವಿದ್ಯುತ್ ಉತ್ಪಾದನೆಯೂ ಹೆಚ್ಚಬೇಕಾಗುತ್ತದೆ. 2024ರ ಮೇ 30ರಂದು ವಿದ್ಯುತ್ ಬೇಡಿಕೆ ಭಾರತದಲ್ಲಿ 250 ಗಿಗಾವಾಟ್‍ಗೆ ಏರಿತ್ತು. ಇದೇ 2026ರ ಜನವರಿ 9ರಂದು 245 ಗಿಗಾವಾಟ್ ಇದ್ದ ಸಾರ್ವಕಾಲಿಕ ಬೇಡಿಕೆಯು ಏಪ್ರಿಲ್ 26ರಂದು 256 ಗಿಗಾವಾಟ್‍ಗೆ ಏರಿತು. ಎರಡು ವರುಷದ ಹಿಂದೆ ಮೇನಲ್ಲಿ ಇದ್ದ ಬೇಡಿಕೆಯು 2026ರಲ್ಲಿ ಒಂದು ತಿಂಗಳು ಮುಂಚಿತವಾಗಿಯೆ ಕಂಡುಬಂದಿದೆ. ಬಹುಶಃ ಮುಂದಿನ ವರುಷದ ಮಾರ್ಚಿಯಲ್ಲೆ ಅತಿಹೆಚ್ಚಿನ ಬೇಡಿಕೆ ದಾಖಲಾಗಬಹುದು. ಈ ವರುಷದ ಏಪ್ರಿಲ್ ಒಡ್ಡಿರುವ ಬಿಸಿಯ ಸವಾಲುಗಳನ್ನು 2027ರ ಮಾರ್ಚ್ ಒಡ್ಡಬಹುದಾಗಿದೆ. ಜ.ಪ್ರ.ಗಳಿಗೆ ಕೇಳಿಸುತ್ತಿದೆಯೆ?
ಎಲ್ ನಿನೊ ಎಂಬ ಮಾನರಕ್ಷಕ

2023ಕ್ಕಿಂತ 2024, 2024ಕ್ಕಿಂತ 2025, 2025ಕ್ಕಿಂತ 2026… ಹೀಗೆ ಮನುಷ್ಯ ಬಿಡುಗಡೆ ಮಾಡಿದ ಕಾರ್ಬನ್ ಕಾರಣಕ್ಕೆ ಒಂದಕ್ಕಿಂತ ಒಂದು ಜಗತ್ತಿಗೆ ಹೆಚ್ಚು ಬಿಸಿಯಾದ ಇಸವಿಗಳೆಂದು ತಾಪದ ಅಂಕಿಅಂಶಗಳು ಹೇಳುತ್ತಿವೆ. ಇದರ ನಡುವೆ ಲಾಗಾಯ್ತಿನಿಂದ ಇರುವ ಪೆಸಿಫಿಕ್ ಹೆಗ್ಗಡಲಿಗೆ ಸೇರಿದ ಎಲ್ ನಿನೊ ಎಂಬ ವಿದ್ಯಮಾನದ ಬಗ್ಗೆ ತುಸು ಹೇಳಬೇಕು. ಈ ವಿದ್ಯಮಾನದಲ್ಲಿ ಪೆಸಿಫಿಕ್ ಹೆಗ್ಗಡಲಿನ ಉಷ್ಣವಲಯದ ಮೂಡಣ ಭಾಗದಲ್ಲಿ 2-7 ವರುಷಕ್ಕೊಮ್ಮೆ ಕಡಲಿನ ನೀರು ಹೆಚ್ಚುವರಿ ಕಾದು ತನ್ನ ಸಂಪರ್ಕಕ್ಕೆ ಬರುವ ವಾತಾವರಣದ ಗಾಳಿಯನ್ನೂ ಬಿಸಿಮಾಡುತ್ತದೆ. ಕಾದ ಕಡಲ ನೀರು ಮತ್ತು ಗಾಳಿಗಳು ಉಷ್ಣವಲಯದ ಬಹುತೇಕ ತಾಣಗಳ ಮೇಲೆ ಅಡ್ಡ ಪರಿಣಾಮ ಬೀರಬಹುದಾಗಿದೆ. ಹಲವೆಡೆ ಮಳೆಯ ಕೊರತೆ, ಬರಗಳು ಎರಗಿದರೆ, ಇನ್ನು ಹಲವೆಡೆ ಅತಿ ಮಳೆ ಬೀಳಬಹುದಾಗಿದೆ. ಎಲ್ ನಿನೊ ಬಂದಾಗಲೆಲ್ಲ ಮೋಡಗಳ ಚಲನೆ ಏರುಪೇರಾಗಿ ಮಾನ್ಸೂನ್ ವ್ಯತ್ಯಯಗೊಂಡು ಭಾರತ ಕಡಿಮೆ ಮಳೆ ಪಡೆಯಬಹುದಾಗಿದೆ. ಕಡಿಮೆ ಮಳೆಯೆಂದರೆ ಹೆಚ್ಚು ಬಿಸಿಲು ಮತ್ತು ಕಾವು. ಪೆಸಿಫಿಕ್ ಹೆಗ್ಗಡಲಿನ ಮೇಲುಮೈ ಸಾಮಾನ್ಯಕ್ಕಿಂತ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪ ತೋರಿಸಿದಾಗ ಎಲ್ ನಿನೊ ಎದ್ದಿದೆ ಎನ್ನಲಾಗುತ್ತದೆ. ತಾಪದ ಪ್ರಮಾಣ 1.0 ಡಿಗ್ರಿ ಏರಿಕೆಗೆ ಸಾಧಾರಣ, 1.5 ಡಿಗ್ರಿ ಏರಿಕೆಗೆ ಬಲವಾದ ಮತ್ತು 2.0 ಡಿಗ್ರಿ ಏರಿಕೆಗೆ ಅತಿ ಬಲವಾದ ಎಲ್ ನಿನೊ ಎಂದು ವಿಂಗಡಿಸಲಾಗಿದೆ. ಅತಿ ಬಲವಾದ ಎಲ್ ನಿನೊಗೆ ಸೂಪರ್ ಎಲ್ ನಿನೊ ಎಂದೂ ಕರೆಯಲಾಗುತ್ತದೆ. 2026 ಸೂಪರ್ ಎಲ್ ನಿನೊ ವರುಷ. ಜೂನ್ ನಂತರ ತೀವ್ರಗೊಳ್ಳುವ ಅದರ ಪ್ರಭಾವ ಮುಂದಿನ 9-12 ತಿಂಗಳು ಇರುತ್ತದೆ. ಎಲ್ ನಿನೊ ನೀಡುವ ಹೆಚ್ಚುವರಿ ಕಾವಿನ ಜೊತೆ ಮನುಷ್ಯ ಬಿಡುಗಡೆಯ ಕಾರ್ಬನ್ ಕಾರಣಕ್ಕೆ ಉಂಟಾದ ತಾಪವೂ ಸೇರಿ ಪರಿಣಾಮಗಳು ತೀವ್ರ ಮತ್ತು ಭೀಕರವಾಗಿರಬಹುದಾಗಿದೆ.
ಜಗತ್ತು ಅಸಹನೀಯವಾಗಿ ಬಿಸಿಗೊಳ್ಳಲು ಎಲ್ ನಿನೊ ಕಾರಣ ಎಂದು ಹೇಳುತ್ತ ಹವಾಮಾನ ಬದಲಾವಣೆಯ ತಾಪತೀವ್ರತೆಯನ್ನು ಮುಚ್ಚಿಟ್ಟು ಸರಕಾರಗಳ ಮುಖ ಉಳಿಸುವ ಪ್ರಯತ್ನಗಳು ನಡೆಯುತ್ತವೆ. ಎಲ್ಲ ಅತಿರೇಕಗಳಿಗೆ ನಿಸರ್ಗವೇ ಕಾರಣವೆಂದು ಹೇಳುತ್ತ ಆಳುವವರು ಹವಾಮಾನ ಬದಲಾವಣೆ ತಡೆಯಲಾಗದ ತಮ್ಮ ತಪ್ಪುಗಳನ್ನು ಮರೆಮಾಚಿಕೊಳ್ಳಬಹುದು. ನಮ್ಮ ಹವಾಮಾನ ಇಲಾಖೆ ಕಳೆದ ಮಾರ್ಚಿಯಿಂದಲೆ ಎಲ್ ನಿನೊ ಜಪ ಮಾಡಿಕೊಂಡು ಬಂದಿದೆ. 2027ರ ಜನವರಿ ತನಕವೂ ಅದಿರುತ್ತದೆ ಎಂದಿದೆ. ಅಲ್ಲಿಗೆ ಈ ಪಾಟಿ ಸೆಕೆಗೆ ಎಲ್ ನಿನೊ ಕಾರಣ ಎಂದು ಚರ್ಚೆಯನ್ನು ಮುಗಿಸಿಬಿಡಬಹುದಾಗಿದೆ. ಹವಾಮಾನ ಇಲಾಖೆಯು ಅಪ್ಪಿತಪ್ಪಿಯೂ ಹವಾಮಾನ ಬದಲಾವಣೆಯನ್ನು ಹೇಗೆ ಎದುರಿಸಬೇಕು ಎಂದು ಹೇಳುತ್ತಿಲ್ಲ. ಎಲ್ ನಿನೊ ಸಹಜತೆ ಮೀರಿ ಬಿರುಸುಗೊಳ್ಳಲು ಮನುಷ್ಯರ ಕೊಡುಗೆ ಇದೆ ಎಂದು ಹೇಳಲು ತಯಾರಿಲ್ಲ. ಎಲ್ ನಿನೊ ವಿದ್ಯಮಾನದಲ್ಲಿ ಕಡಲಿನ ಹೆಚ್ಚುವರಿ ಕಾವು ಗಾಳಿಗೆ ವರ್ಗಾವಣೆಯಾಗುತ್ತದೆ. ಇದು ಸಾಮಾನ್ಯ ಬದಲಾವಣೆ. ಆದರೆ ಹವಾಮಾನ ಬದಲಾವಣೆಯಿಂದ ಈಗಾಗಲೆ ಅಸಹಜವಾಗಿ ಕಾದ ಗಾಳಿ ಎಲ್ ನಿನೊದಿಂದ ಹೆಚ್ಚುವರಿ ಕಾವನ್ನು ಪಡೆದಾಗ ನೈಸರ್ಗಿಕ ಬದಲಾವಣೆಗಳು ಇನ್ನಷ್ಟು ಅತಿರೇಕಗೊಳ್ಳುತ್ತವೆ. ವಿಪರೀತ ಧಗೆ, ಅತಿಮಳೆ, ಬಿರುಗಾಳಿ, ಸೈಕ್ಲೋನುಗಳ ಹೆಚ್ಚಳ, ಬರ ಎಲ್ಲವೂ ಒಂದರ ಹಿಂದೆ ಒಂದರಂತೆ ನೆಲದ ಮೇಲೆ ಎರಗಬಹುದು. ಎಲ್ಲವೂ ನಮ್ಮ ಕಲ್ಪನೆ ಮೀರಿ ಹಾನಿಕಾರಕವಾಗಿರಬಹುದು.
ಏನೋ, ಹೇಗೋ ನಾವೆಲ್ಲ ನಿಸರ್ಗದ ಅತಿರೇಕಗಳ ಸುಳಿಗೆ ಸಿಲುಕಲು ಹೊರಟಿದ್ದೇವೆ. ನೆರಳು ಕೊಟ್ಟು ನೆಲ ಕಾಯದಂತೆ ಕಾಪಾಡುವ ಮರಗಳು, ಕಾಡುಗಳು ನಮಗೆ ಬೇಡ. ಅವನ್ನು ಕಣ್ಣು ಕುಕ್ಕುವ ಅಭಿವೃದ್ಧಿಯ ಹೆಸರಿನಲ್ಲಿ ತರಿದು ಹಾಕುತ್ತಿದ್ದೇವೆ. ಗಾಳಿಯ ಕಾವನ್ನು ಹೀರಿಕೊಂಡು ವಾತಾವರಣದ ತಾಪದಲ್ಲಿ ಸಮತೋಲನ ಸಾಧ್ಯವಾಗಿಸುವ ಕೊಳ, ಕೆರೆ, ಸರೋವರ, ನದಿಗಳನ್ನು ಬತ್ತಿಸಿ ವಾಣಿಜ್ಯ ಉದ್ದೇಶಗಳಿಗೆ ಬದಲಾಯಿಸುತ್ತಿದ್ದೇವೆ. ದುಡ್ಡು ಮತ್ತು ಲಾಭಗಳ ಹೊರತಾಗಿ ಬೇರೆ ಆಲೋಚನೆಗಳು ನಮಗೆ ಹೊಳೆಯುತ್ತಿಲ್ಲ. ಎಂದು ನೀರು, ನೆಲ, ಗಾಳಿ ಮತ್ತು ಬಿಸಿಲುಗಳು ನಮ್ಮ ವಿರುದ್ಧ ತೊಡೆ ತಟ್ಟುತ್ತವೊ ಅಲ್ಲಿಗೆ ನಮ್ಮ ಹೋರಾಟ ಕೊನೆಗೊಳ್ಳುತ್ತದೆ. ಈಗಾಗಲೆ ಅವು ತಟ್ಟಿವೆ.
ಆದರೂ ಸಮಯ ಸರಿದಿಲ್ಲ. ಎಚ್ಚರಗೊಳ್ಳಬೇಕು ಅಷ್ಟೆ.
ಕೆ.ಎಸ್.ರವಿಕುಮಾರ್, ಹಾಸನ
ವಿಜ್ಞಾನ ಬರಹಗಾರರು
ಇದನ್ನೂ ಓದಿ- ಡಿಎಂಕೆ ಸೋಲಿಗೆ ಇಷ್ಟೊಂದು ನಿರಾಸೆಗೊಳ್ಳುವ ಅಗತ್ಯವಿದೆಯೇ?
ಮೊ : 89510 55154


