ಇದು ಹಕ್ಕುಗಳು ಮತ್ತು ಮೌಲ್ಯಗಳ ಸಂಘರ್ಷದ ಕಾಲಘಟ್ಟ: ಎಲ್ಲರೂ ಸಿದ್ಧರಾಗಬೇಕಿದೆ!
ಒಂದು ಕಾಲದಲ್ಲಿ ಸಂಬಂಧ ಮುರಿದುಕೊಳ್ಳುವುದು ನೋವು, ಅಪಮಾನ ಮತ್ತು ಸಾಮಾಜಿಕ ತಿರಸ್ಕಾರದ ಸಂಗತಿಯಾಗಿತ್ತು. ಆದರೆ ಇಂದು ಕನಿಷ್ಠ ಕೆಲವು ಯುವಜನರು ಸಂಬಂಧವೊಂದು ಆರೋಗ್ಯಕರವಾಗಿಲ್ಲವೆಂದು ಗುರುತಿಸಿ, ಪರಸ್ಪರ ಮಾತನಾಡಿಕೊಂಡು, ತಮ್ಮ ಆಯ್ಕೆಯಂತೆ ಅದರಿಂದ ಹೊರಬಂದು, ಹೊಸ ಬದುಕನ್ನು ಕಟ್ಟಿಕೊಳ್ಳುವ ಸಾಧ್ಯತೆಯನ್ನು ಕಾಣುತ್ತಿದ್ದಾರೆ. ಇದು ಯಾವುದೇ ಸಂಬಂಧದಲ್ಲಿ ವ್ಯಕ್ತಿಯ ಘನತೆ, ಸ್ವಾತಂತ್ರ್ಯ ಮತ್ತು ನೆಮ್ಮದಿಗೆ ಆದ್ಯತೆ ಇರಬೇಕು ಎಂಬ ಅರಿವಿನ ಬೆಳವಣಿಗೆ – ಮಂಜುಳಾ ಸುನಿಲ್, ಮಂಗಳೂರು.
ಮಟಮಟ ಮಧ್ಯಾಹ್ನ. ನಮ್ಮ ವೈ.ಆರ್.ಸಿ. ಕಚೇರಿಗೆ ಒಬ್ಬ ಯುವತಿ ಬಂದಳು. ಕೈಯಲ್ಲಿ ಒಂದು ಕೇಕ್ ಬಾಕ್ಸ್ ಇತ್ತು. ನೋಡಿದರೆ ಬಹಳ ರುಚಿಕರವಾದ ಕೇಕ್! ಎಲ್ಲೋ ಹುಟ್ಟುಹಬ್ಬ ಆಚರಿಸಿ ಉಳಿದ ಕೇಕ್ ತುಂಡುಗಳನ್ನು ನಮಗಾಗಿ ತಂದಿರಬೇಕು ಎಂದುಕೊಂಡೆವು. ನಮ್ಮನ್ನು ನೆನಪಿಸಿಕೊಂಡು ಕೇಕ್ ತಂದಿದ್ದಾಳಲ್ಲ ಎಂಬ ಸಂತೋಷದಿಂದ ಸ್ವಾಗತಿಸಿ, ಎಲ್ಲರೂ ಕೇಕ್ ತಿಂದೆವು.
ಬಿಸಿಲಿನಲ್ಲಿ ಬಂದಿದ್ದರಿಂದ ಅವಳು ಸ್ವಲ್ಪ ಬಸವಳಿದಿದ್ದಳು. ಕೇಕ್ ತಿಂದು ಮುಗಿಸಿದ ಮೇಲೆ, “ಚೆನ್ನಾಗಿತ್ತು! ನಿಮ್ಮ ಹುಟ್ಟುಹಬ್ಬವೇ? ಏನಾದರೂ ವಿಶೇಷವೇ?” ಎಂದು ಕೇಳಿದೆ.
“ಏನಿಲ್ಲ ಮೇಡಂ, ಬ್ರೇಕಪ್ ಕೇಕ್!” ಎಂದಳು.
ನಾನು ಒಂದು ಕ್ಷಣ ಸ್ತಬ್ಧಳಾದೆ. ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ.
ಅವಳೇ ಮಾತು ಮುಂದುವರಿಸಿದಳು.
“ಮೇಡಂ, ನಾನು ಹತ್ತನೇ ತರಗತಿಯಲ್ಲಿದ್ದಾಗ ನಮ್ಮ ಸಂಬಂಧ ಆರಂಭವಾಗಿತ್ತು. ಈಗ ಇಬ್ಬರೂ ಪದವಿ ಶಿಕ್ಷಣದ ಕೊನೆಯ ಹಂತದಲ್ಲಿದ್ದೇವೆ. ಆದರೆ ಈ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ದಿನನಿತ್ಯ ಜಗಳ, ಪರಸ್ಪರರನ್ನು ಮೆಚ್ಚಿಸುವ ಪ್ರಯತ್ನ, ವೈಯಕ್ತಿಕ ಬದುಕಿನೊಳಗೆ ಅತಿಯಾದ ಪ್ರವೇಶ, ಅನುಮಾನ, ಪೊಸೆಸಿವ್ನೆಸ್… ಸಾಕಾಗಿ ಹೋಗಿದೆ. ಇಬ್ಬರೂ ಕುಳಿತು ಮಾತನಾಡಿಕೊಂಡು, ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು, ಕೊನೆಗೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ.

ನಮ್ಮ ಸಂಬಂಧವೇ ನಮಗೆ ಅನಿವಾರ್ಯವಾಗಿ ಬಿಟ್ಟಿದೆಯೇನೋ, ಪರಸ್ಪರರ ಸ್ವಾತಂತ್ರ್ಯ ಮತ್ತು ನೆಮ್ಮದಿಯನ್ನು ಕಸಿದುಕೊಳ್ಳುತ್ತಿದ್ದೇವೆಯೇನೋ ಎನಿಸುವಷ್ಟು ಪರಿಸ್ಥಿತಿ ತಲುಪಿತ್ತು. ಹಾಗಾಗಿ ಇಂದಿಗೆ ಅದಕ್ಕೆ ಪೂರ್ಣವಿರಾಮ ಇಟ್ಟಿದ್ದೇವೆ. ಯಾವುದೇ ಕೋಪ, ದ್ವೇಷ ಅಥವಾ ಪ್ರತೀಕಾರವಿಲ್ಲದೆ ಮುಂದಿನ ಬದುಕಿನತ್ತ ಸಾಗುವ ಬಗ್ಗೆ ಮಾತನಾಡಿಕೊಂಡಿದ್ದೇವೆ. ಸ್ವಲ್ಪ ನೋವಿದೆ. ಆದರೆ ದೊಡ್ಡ ಸಮಾಧಾನವೂ ಇದೆ. ನೋಡೋಣ…” ಎಂದಳು.
“ವಾಹ್! ಜೆನ್ ಝೀ!” ಎಂದು ಮನಸ್ಸಿನಲ್ಲೇ ಅಂದುಕೊಂಡೆ.
ನಮ್ಮ ಕಾಲದಲ್ಲಿ ಇಂತಹ ಘಟನೆಯನ್ನು ಹೇಗೆ ನೋಡುತ್ತಿದ್ದೆವು? ಪ್ರೇಮ ಸಂಬಂಧಗಳಿರಲಿ, ಮದುವೆಯ ಸಂಬಂಧಗಳಿರಲಿ, ಹಿಂಸೆ ಮತ್ತು ಅಸಮಾಧಾನಗಳ ನಡುವೆಯೇ ದಿನಗಳು ಕಳೆಯುತ್ತಿದ್ದರೂ ಸಂಬಂಧದಿಂದ ಹೊರಬರುವ ಯೋಚನೆ ಮಾಡುವ ಧೈರ್ಯವೇ ಅನೇಕರಿಗೆ ಇರುತ್ತಿರಲಿಲ್ಲ. ಅಂತಹ ನೋವಿನ ಸಂಬಂಧಗಳಲ್ಲಿ ತಮ್ಮ ಬದುಕಿನ ಬಹುಪಾಲು ಆಯುಷ್ಯವನ್ನೇ ಕಳೆದುಕೊಂಡ ಎಷ್ಟೋ ಜೀವಗಳಿವೆ.
ಇಂತಹ ಯೋಚನೆಗಳು ನಮ್ಮ ತಲೆಮಾರಿನವರಿಗೆ ಬಂದಿರಲಿಲ್ಲವೆಂದಲ್ಲ. ಬಂದಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರುವಷ್ಟು ಸಾಮಾಜಿಕ ಸ್ವಾತಂತ್ರ್ಯ ಮತ್ತು ಬೆಂಬಲ ನಮಗಿರಲಿಲ್ಲ. ಕುಟುಂಬ, ಸಮಾಜ, ಧರ್ಮ, ಸಂಸ್ಕೃತಿ, ಸಂಪ್ರದಾಯ ಮತ್ತು ಕುಟುಂಬದ ಗೌರವದ ಹೆಸರಿನಲ್ಲಿ ಅನೇಕರು ತಮ್ಮ ವೈಯಕ್ತಿಕ ಆಯ್ಕೆಗಳನ್ನು ಬದಿಗಿಟ್ಟು ಬದುಕಿದರು.
ಕೌಟುಂಬಿಕ ಹಿಂಸೆ ಮನೆಯೊಳಗಿನ ವಿಷಯ; ಅದನ್ನು ಹೊರಗಿನವರೊಂದಿಗೆ ಚರ್ಚಿಸಬಾರದು ಎಂಬ ನಂಬಿಕೆ. ಪ್ರೀತಿಸಿದರೆ ಆ ವ್ಯಕ್ತಿಯನ್ನೇ ಮದುವೆಯಾಗಬೇಕು ಎಂಬ ಒತ್ತಡ. ಸಂಬಂಧದಿಂದ ಹೊರಬಂದರೆ ಹೆಣ್ಣಿನ ಶೀಲದ ಪ್ರಶ್ನೆ. ಗಂಡನಾದವನು ಹೆಂಡತಿಯನ್ನು ನಿಯಂತ್ರಿಸುವುದು ಸಹಜ ಎಂಬ ಪಿತೃಪ್ರಧಾನ ಮನಸ್ಥಿತಿ. ಇಂತಹ ಸಾಮಾಜಿಕ ಕಟ್ಟುಪಾಡುಗಳು ಸಂಬಂಧಗಳನ್ನು ಉಳಿಸಿಕೊಳ್ಳುವ ಹೆಸರಿನಲ್ಲಿ ವ್ಯಕ್ತಿಗಳ ಬದುಕನ್ನೇ ಬಂಧಿಸಿ ಬಿಟ್ಟಿದ್ದವು.
ಪರಿಣಾಮವಾಗಿ, ಪ್ರೀತಿ ಮತ್ತು ಮದುವೆಯಂತಹ ಸಂಬಂಧಗಳು ಕೆಲವೊಮ್ಮೆ ಪ್ರೀತಿ, ಗೌರವ ಮತ್ತು ಪರಸ್ಪರ ಕಾಳಜಿಯ ನೆಲೆಗಳಾಗುವ ಬದಲು, ನಿಯಂತ್ರಣ, ಅನುಮಾನ, ಹಿಂಸೆ ಮತ್ತು ಅಸಮಾನತೆಯ ಬಂಧನಗಳಾಗಿ ಮಾರ್ಪಟ್ಟವು. ಇಂತಹ ನೋವನ್ನು ಬದುಕಿನ ಸಹಜ ಭಾಗವೆಂದು ಭಾವಿಸಿ ಸಹಿಸಿಕೊಳ್ಳುವುದೇ ಅನೇಕರಿಗೆ ಅಭ್ಯಾಸವಾಗಿ ಹೋಯಿತು. ಆ ನೋವಿನ ನೆರಳಲ್ಲೇ ಮುಂದಿನ ಪೀಳಿಗೆಯೂ ಬೆಳೆಯಿತು.
ಆದರೆ ಈಗ ಕಾಲ ಬದಲಾಗುತ್ತಿದೆ. ವಿಶೇಷವಾಗಿ ಇಂದಿನ Gen Z ಯುವಜನರು ಸಂಬಂಧಗಳು, ವೈಯಕ್ತಿಕ ಸ್ವಾತಂತ್ರ್ಯ, ಒಪ್ಪಿಗೆ (Consent), ವೈಯಕ್ತಿಕ ಅಂತರ (Personal Space) ಮತ್ತು ಬದುಕಿನ ಆಯ್ಕೆಗಳನ್ನು ನೋಡುವ ರೀತಿಯಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದ್ದಾರೆ. ಸಂಬಂಧದಲ್ಲಿರುವುದಷ್ಟೇ ಮುಖ್ಯವಲ್ಲ; ಆ ಸಂಬಂಧದಲ್ಲಿ ಗೌರವ, ನೆಮ್ಮದಿ, ಸಮಾನತೆ ಮತ್ತು ಸ್ವಾತಂತ್ರ್ಯ ಇದೆಯೇ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ. ಅಗತ್ಯವೆನಿಸಿದಾಗ ಸಂಬಂಧದಿಂದ ಹೊರಬರುವುದೂ ಒಂದು ಆಯ್ಕೆಯೆಂದು ಪರಿಗಣಿಸುತ್ತಿದ್ದಾರೆ.
ಇದನ್ನು ಕೇವಲ ಯುವಜನರ ಹೊಸ ಟ್ರೆಂಡ್ ಎಂದು ನೋಡುವುದಕ್ಕಿಂತ, ವೈಯಕ್ತಿಕ ಹಕ್ಕುಗಳು ಮತ್ತು ಸ್ವಾಯತ್ತತೆಯ ಕುರಿತಾದ ಹೆಚ್ಚುತ್ತಿರುವ ಅರಿವಿನ ಭಾಗವಾಗಿ ನೋಡಬೇಕಿದೆ.
ಇಲ್ಲಿ 80–90ರ ದಶಕದ ತಲೆಮಾರು ಮತ್ತು Gen Z ತಲೆಮಾರು ಮುಖಾಮುಖಿಯಾಗುವ ಸಂದರ್ಭವೂ ಇದೆ. ಯುವಜನರ ಆಯ್ಕೆಗಳು ಹಿಂದಿನ ತಲೆಮಾರಿನವರು ನಂಬಿಕೊಂಡು ಬಂದಿರುವ ಮೌಲ್ಯಗಳು, ನಂಬಿಕೆಗಳು ಮತ್ತು ಸಾಮಾಜಿಕ ನಿರೀಕ್ಷೆಗಳಿಗೆ ಸವಾಲು ಹಾಕಬಹುದು. ಪ್ರೀತಿ, ಮದುವೆ, ಲಿಂಗತ್ವ ಪಾತ್ರಗಳು, ವೈಯಕ್ತಿಕ ಸ್ವಾತಂತ್ರ್ಯ, ಕುಟುಂಬದ ಜವಾಬ್ದಾರಿ, ಲೈಂಗಿಕತೆ ಮತ್ತು ಸಂಬಂಧಗಳ ಕುರಿತಾದ ಅವರ ನಿಲುವುಗಳು ಹಿರಿಯರಿಗೆ ಅಸಹಜವಾಗಿ ಅಥವಾ ಸ್ವೀಕಾರಾರ್ಹವಲ್ಲದಂತೆ ಕಾಣಬಹುದು.
ಆದರೆ ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯಿದೆ. ಈ ಸಂಘರ್ಷವನ್ನು ಕೇವಲ ವಯಸ್ಸಿನ ಆಧಾರದಲ್ಲಿ ಅರ್ಥಮಾಡಿಕೊಳ್ಳಲಾಗದು. ಯುವಜನರಲ್ಲಿಯೂ ಪಿತೃಪ್ರಧಾನ ಮತ್ತು ಸಂಪ್ರದಾಯವಾದಿ ಮನಸ್ಥಿತಿಗಳು ಇರಬಹುದು. ಹಾಗೆಯೇ ಹಿಂದಿನ ತಲೆಮಾರಿನಲ್ಲಿಯೂ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಯನ್ನು ಗೌರವಿಸುವವರಿದ್ದಾರೆ. ಹೀಗಾಗಿ ಇದು ಕೇವಲ ಎರಡು ತಲೆಮಾರುಗಳ ನಡುವಿನ ಸಂಘರ್ಷವಲ್ಲ; ಬದಲಾಗಿ ಎರಡು ವಿಭಿನ್ನ ಸಾಮಾಜಿಕ ದೃಷ್ಟಿಕೋನಗಳು, ಮೌಲ್ಯಗಳು ಮತ್ತು ಬದುಕಿನ ಆಯ್ಕೆಗಳ ನಡುವಿನ ಸಂಘರ್ಷ.
ಇದನ್ನು ನಾವು ಮಾನವ ಹಕ್ಕುಗಳ ದೃಷ್ಟಿಕೋನದಿಂದಲೂ ನೋಡಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಬದುಕಿನ ಆಯ್ಕೆಗಳನ್ನು ಮಾಡಿಕೊಳ್ಳುವ, ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ, ಸಂಬಂಧಗಳನ್ನು ರೂಪಿಸಿಕೊಳ್ಳುವ ಮತ್ತು ಅಗತ್ಯವಿದ್ದಾಗ ಅವುಗಳಿಂದ ಹೊರಬರುವ ಹಕ್ಕಿದೆ. ಈ ಹಕ್ಕುಗಳು ವಯಸ್ಸು, ಲಿಂಗ, ಜಾತಿ, ಧರ್ಮ ಅಥವಾ ವೈವಾಹಿಕ ಸ್ಥಿತಿಯನ್ನು ಅವಲಂಬಿಸಿಲ್ಲ.
ಅದೇ ಸಮಯದಲ್ಲಿ, ಹಕ್ಕುಗಳೆಂದರೆ ಕೇವಲ ವೈಯಕ್ತಿಕ ಸ್ವಾತಂತ್ರ್ಯವಲ್ಲ. ಇನ್ನೊಬ್ಬರ ಹಕ್ಕು, ಘನತೆ, ಒಪ್ಪಿಗೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಜವಾಬ್ದಾರಿಯೂ ಹೌದು. ಹಾಗೆಯೇ ಮೌಲ್ಯಗಳು ಎಂಬ ಹೆಸರಿನಲ್ಲಿ ಅಸಮಾನತೆ, ಹಿಂಸೆ, ನಿಯಂತ್ರಣ ಮತ್ತು ತಾರತಮ್ಯಗಳನ್ನು ಸಮರ್ಥಿಸಲಾಗದು.
ಹಾಗಾದರೆ, ಹಕ್ಕುಗಳು ಮತ್ತು ಮೌಲ್ಯಗಳು ಮುಖಾಮುಖಿಯಾದಾಗ ನಾವು ಏನು ಮಾಡಬೇಕು?

ಹಿರಿಯ ತಲೆಮಾರಿನ ಅನುಭವಗಳನ್ನು ಸಂಪೂರ್ಣವಾಗಿ ತಳ್ಳಿಹಾಕುವುದಾಗಲಿ, ಯುವಜನರ ಆಯ್ಕೆಗಳನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವುದಾಗಲಿ ಪರಿಹಾರವಲ್ಲ. ಬದಲಾಗಿ, ಯಾವ ಮೌಲ್ಯಗಳು ಮಾನವ ಘನತೆ, ಸಮಾನತೆ, ನ್ಯಾಯ ಮತ್ತು ಪರಸ್ಪರ ಗೌರವವನ್ನು ಬೆಂಬಲಿಸುತ್ತವೆ? ಯಾವ ನಂಬಿಕೆಗಳು ವ್ಯಕ್ತಿಯ ಸ್ವಾತಂತ್ರ್ಯವನ್ನು ನಿರಾಕರಿಸುತ್ತವೆ? ಎಂಬುದನ್ನು ಮುಕ್ತವಾಗಿ ಚರ್ಚಿಸಬೇಕಿದೆ.
ಇದಕ್ಕಾಗಿ ಎರಡು ತಲೆಮಾರುಗಳು ಒಟ್ಟಿಗೆ ಕುಳಿತು ಮಾತನಾಡುವ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂವಾದದ ವೇದಿಕೆಗಳು ಬೇಕಾಗಿವೆ. ಇಂತಹ ಸಂವಾದಗಳು ಕೇವಲ ಒಬ್ಬರನ್ನೊಬ್ಬರು ಒಪ್ಪಿಸುವ ಪ್ರಯತ್ನವಾಗಬಾರದು; ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಗೌರವಿಸುವ ಪ್ರಯತ್ನವಾಗಬೇಕು.
ಸಂಬಂಧಗಳ ಹೆಸರಿನಲ್ಲಿ ನಡೆಯುವ ಹಿಂಸೆ, ಆಯ್ಕೆಗಳ ಹೆಸರಿನಲ್ಲಿ ನಡೆಯುವ ಬಲವಂತ, ಕುಟುಂಬದ ಗೌರವದ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಮತ್ತು ಪ್ರೀತಿಯ ಹೆಸರಿನಲ್ಲಿ ನಡೆಯುವ ನಿಯಂತ್ರಣವನ್ನು ಪ್ರಶ್ನಿಸುವ ಸಾಮಾಜಿಕ ವಾತಾವರಣವೂ ನಿರ್ಮಾಣವಾಗಬೇಕು. ಇಂತಹ ಪ್ರಯತ್ನಗಳ ಜೊತೆಗೆ ಯುವಜನರಿಗೆ ಸುರಕ್ಷಿತ ಬೆಂಬಲ ವ್ಯವಸ್ಥೆಗಳು, ಸಮಾಲೋಚನೆ ಮತ್ತು ಕಾನೂನಿನ ರಕ್ಷಣೆಯೂ ದೊರೆಯಬೇಕು.
ನಮ್ಮ ಕಚೇರಿಗೆ ಬಂದ ಆ ಯುವತಿಯ ಕೇಕ್ ಘಟನೆ ಮತ್ತೆ ನೆನಪಾಗುತ್ತಿದೆ. ಒಂದು ಕಾಲದಲ್ಲಿ ಸಂಬಂಧ ಮುರಿದುಕೊಳ್ಳುವುದು ನೋವು, ಅಪಮಾನ ಮತ್ತು ಸಾಮಾಜಿಕ ತಿರಸ್ಕಾರದ ಸಂಗತಿಯಾಗಿತ್ತು. ಆದರೆ ಇಂದು ಕನಿಷ್ಠ ಕೆಲವು ಯುವಜನರು ಸಂಬಂಧವೊಂದು ಆರೋಗ್ಯಕರವಾಗಿಲ್ಲವೆಂದು ಗುರುತಿಸಿ, ಪರಸ್ಪರ ಮಾತನಾಡಿಕೊಂಡು, ತಮ್ಮ ಆಯ್ಕೆಯಂತೆ ಅದರಿಂದ ಹೊರಬಂದು, ಹೊಸ ಬದುಕನ್ನು ಕಟ್ಟಿಕೊಳ್ಳುವ ಸಾಧ್ಯತೆಯನ್ನು ಕಾಣುತ್ತಿದ್ದಾರೆ.
ಇದು ಎಲ್ಲ ಸಂಬಂಧಗಳೂ ಹೀಗೆಯೇ ಕೊನೆಗೊಳ್ಳಬೇಕು ಎಂದಲ್ಲ. ಬದಲಾಗಿ, ಯಾವುದೇ ಸಂಬಂಧದಲ್ಲಿ ವ್ಯಕ್ತಿಯ ಘನತೆ, ಸ್ವಾತಂತ್ರ್ಯ ಮತ್ತು ನೆಮ್ಮದಿಗೆ ಆದ್ಯತೆ ಇರಬೇಕು ಎಂಬ ಅರಿವಿನ ಬೆಳವಣಿಗೆ.
ಕಾಲ ಮೆತ್ತಗೆ ಬದಲಾಗುತ್ತಿದೆ. ಹಳೆಯ ನಂಬಿಕೆಗಳನ್ನು ಪ್ರಶ್ನಿಸುವ, ಹೊಸ ಮೌಲ್ಯಗಳನ್ನು ರೂಪಿಸುವ ಮತ್ತು ವೈಯಕ್ತಿಕ ಹಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡುವ ಯುವಜನರೊಂದಿಗೆ ನಾವು ಸಂವಾದಕ್ಕೆ ಸಿದ್ಧರಾಗಬೇಕಿದೆ.
ಏಕೆಂದರೆ ಇದು ಕೇವಲ Gen Z ಯುವಜನರ ಕಾಲವಲ್ಲ; ನಮ್ಮೆಲ್ಲರ ನಂಬಿಕೆಗಳನ್ನು ಮರುಪರಿಶೀಲಿಸಿಕೊಳ್ಳಬೇಕಾದ ಕಾಲಘಟ್ಟ. ಹಕ್ಕುಗಳು ಮತ್ತು ಮೌಲ್ಯಗಳ ನಡುವಿನ ಸಂಘರ್ಷವನ್ನು ಸಂಘರ್ಷವಾಗಿಯೇ ಉಳಿಸದೆ, ಸಂವಾದ ಮತ್ತು ಪರಸ್ಪರ ಗೌರವದ ಮೂಲಕ ಹೊಸ ಸಾಮಾಜಿಕ ಸಂಬಂಧಗಳನ್ನು ಕಟ್ಟಿಕೊಳ್ಳುವ ಕಾಲ.
ಬಹುಶಃ ಆ ಬ್ರೇಕಪ್ ಕೇಕ್ ಕೇವಲ ಒಂದು ಸಂಬಂಧದ ಅಂತ್ಯವನ್ನು ಆಚರಿಸುತ್ತಿರಲಿಲ್ಲ; ವ್ಯಕ್ತಿಯ ಆಯ್ಕೆ, ಸ್ವಾತಂತ್ರ್ಯ ಮತ್ತು ಘನತೆಯನ್ನು ಗೌರವಿಸುವ ಹೊಸ ಬದುಕಿನ ಸಾಧ್ಯತೆಯನ್ನೂ ಸಂಭ್ರಮಿಸುತ್ತಿತ್ತು
ಮಂಜುಳಾ ಸುನಿಲ್, ಮಂಗಳೂರು
ಇವರು ಮಂಗಳೂರಿನ ಸಂವಾದ (Samvada) ಸಂಸ್ಥೆಯ ಯುವ ಸಂಪನ್ಮೂಲ ಕೇಂದ್ರದ ಸಂಚಾಲಕಿಯಾಗಿ (Centre Convener) ಹಾಗೂ ಲೀಡರ್ಶಿಪ್ ಆಕ್ಷನ್ ವಿಭಾಗದ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವಜನರ ಸಬಲೀಕರಣ ಮತ್ತು ಸಾಮಾಜಿಕ ತರಬೇತಿ ಕ್ಷೇತ್ರದಲ್ಲಿ ಇವರು ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ- ಕನ್ನಡಿಗರ ಉದ್ಯೋಗದ ಪ್ರಶ್ನೆ


