ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಮೂವರು ವಿಧಿವಿಜ್ಞಾನ ಪ್ರಯೋಗಾಲಯದ (FSL) ವೈದ್ಯರನ್ನೊಳಗೊಂಡ ವಿಶೇಷ ಮೆಡಿಕಲ್ ಬೋರ್ಡ್ ರಚಿಸಿದೆ. ಸುಪ್ರೀಂಕೋರ್ಟ್ ಆದೇಶದಂತೆ SIT ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ಈ ತಂಡವನ್ನು ರಚಿಸಿದ್ದಾರೆ.
SIT ರಚಿಸಿರುವ ಮಂಡಲಿಯಲ್ಲಿ ಬೆಂಗಳೂರು, ಹಾವೇರಿ ಮತ್ತು ಬೆಳಗಾವಿ ಜಿಲ್ಲಾ ವಿಧಿವಿಜ್ಞಾನ ಪ್ರಯೋಗಾಲಯಗಳ (FSL) ತಲಾ ಒಬ್ಬೊಬ್ಬ ತಜ್ಞ ವೈದ್ಯರಿದ್ದಾರೆ. ತಂಡದಲ್ಲಿ ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರು ಸ್ಥಾನ ಪಡೆದಿದ್ದಾರೆ.
ಮೆಡಿಕಲ್ ಬೋರ್ಡ್ ರಚನೆಯ ಉದ್ದೇಶ
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣದ ವೈಜ್ಞಾನಿಕ ಹಾಗೂ ತಾಂತ್ರಿಕ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಈ ಬೋರ್ಡ್ ರಚಿಸಲಾಗಿದೆ. ಈ ತಂಡವು ನೀಡುವ ವೈದ್ಯಕೀಯ ವರದಿ ಮತ್ತು ಸ್ಥಳ ಪರಿಶೀಲನೆಯು ಪ್ರಕರಣದ ಮುಂದಿನ ಮರುತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

