ಗುವಾಹಟಿ: ಅಸ್ಸಾಂನ ಕಾಮರೂಪ್ (ಮೆಟ್ರೋ) ಜಿಲ್ಲೆಯ ದಿಗಾರು ರೈಲು ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ ಕೊಲ್ಕತ್ತಾ–ಸೈರಾಂಗ್ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಸೇರಿದಂತೆ ಐದು ಬೋಗಿಗಳು ಹಳಿ ತಪ್ಪಿವೆ. ಘಟನೆಯ ಬೆನ್ನಲ್ಲೇ ಈಶಾನ್ಯ ಗಡಿ ರೈಲ್ವೆ (NFR) ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ನವೆಂಬರ್ 11ರ ಬೆಳಗ್ಗೆ ಸುಮಾರು 6.54ರ ವೇಳೆಗೆ ರೈಲು ಸಂಖ್ಯೆ 13125 ಹಳಿ ತಪ್ಪಿದೆ. ಮತ್ತೊಂದು ರೈಲಿಗೆ ಸಂಚಾರದಲ್ಲಿ ಆದ್ಯತೆ ನೀಡುವ ಸಲುವಾಗಿ ದಿಗಾರು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಈಶಾನ್ಯ ಗಡಿ ರೈಲ್ವೆ ತಿಳಿಸಿದೆ.
ರೈಲ್ವೆ ಇಲಾಖೆ ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ರೈಲಿನ ಚಾಲಕರಿಗೆ ರೈಲಿನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಂಜಿನ್ ಸೇರಿದಂತೆ ಐದು ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಹಾಗೂ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಪ್ರಯಾಣಿಕರನ್ನು ಅವರ ನಿಗದಿತ ಸ್ಥಳಗಳಿಗೆ ತಲುಪಿಸಲು ಪರ್ಯಾಯ ರೈಲಿನ ವ್ಯವಸ್ಥೆ ಮಾಡಲಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ.
ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಪಿಂಜಲ್ ಕಿಶೋರ್ ಶರ್ಮಾ ಅವರು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದೂ ಹೇಳಿದ್ದಾರೆ.
ಈಶಾನ್ಯ ಗಡಿ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
ಇನ್ನು ಘಟನಾ ಸ್ಥಳದ ಸಮೀಪ ವಾಸಿಸುವ ಸ್ಥಳೀಯರೊಬ್ಬರು ಬೆಳಗಿನ ವಾಕಿಂಗ್ಗೆ ತೆರಳಿದ್ದ ಸಂದರ್ಭದಲ್ಲಿ ರೈಲು ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾಗಿ ಹೇಳಿದ್ದಾರೆ. ದಿಗಾರು ರೈಲು ನಿಲ್ದಾಣದಿಂದ ಸುಮಾರು 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದ್ದು, ಆರು ಬೋಗಿಗಳು ಹಳಿ ತಪ್ಪಿರುವುದನ್ನು ತಾವು ಕಂಡಿದ್ದಾಗಿ ತಿಳಿಸಿದ್ದಾರೆ.
ಅಪಘಾತದ ಸ್ಥಳದ ಸಮೀಪ ಹಲವು ಮನೆಗಳಿದ್ದರೂ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇದೇ ವೇಳೆ ರೈಲಿನಲ್ಲಿ ಬ್ರೇಕ್ ವೈಫಲ್ಯ ಉಂಟಾಗಿರಬಹುದು ಎಂಬ ವದಂತಿಗಳೂ ಕೇಳಿಬಂದಿವೆ. ಆದರೆ, ಈ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಘಟನೆಯ ಹೊಣೆಗಾರರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

