“ಅರಿವಿನ ಪಯಣ”ದ ಭಾಗವಾಗಿ ಈ ಸಮಸ್ಯೆಗಳನ್ನು ಹತ್ತಿರದಿಂದ ಕಂಡ ನಮ್ಮ ತಂಡ, ಇವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕಿದೆ ; ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಿದೆ . ಅರ್ಹ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ದೊರಕುವಂತೆ ಪ್ರಯತ್ನಿಸಬೇಕಿದೆ – ಶಾಂತಾ ಜಿ, ಹವ್ಯಾಸಿ ಪತ್ರಕರ್ತೆ.
ಎಲ್ಲೆಡೆ ಅಭಿವೃದ್ಧಿಯ ಭಾಷಣಗಳು ಮೊಳಗುತ್ತಿವೆ, ಬಡತನ ನಿರ್ಮೂಲನೆಯ ಅಂಕಿಅಂಶಗಳು ಹೆಮ್ಮೆಯಿಂದ ಪ್ರಕಟವಾಗುತ್ತಿವೆ. ಆದರೆ, ವ್ಯವಸ್ಥೆಯ ಈ ಆಡಂಬರದ ಬೆಳಕಿನಾಚೆ, ಕೆಲವು ಬದುಕುಗಳು ಇಂದಿಗೂ ಕತ್ತಲಲ್ಲೇ ಕರಗಿಹೋಗುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ನಿಂತಿದೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪವಿರುವ ಆದಿಶಕ್ತಿ ನಗರ.
ಅರಿವಿನ ಪಯಣ ಮತ್ತು ವಾಸ್ತವದ ದರ್ಶನ
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು 2027ರ ಮಾರ್ಚ್ 8ರಂದು ಚಿತ್ರದುರ್ಗದಲ್ಲಿ ‘ಮಹಿಳಾ ಚೈತನ್ಯದ ದಿನ’ದ ಅಂಗವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಲಿಂಗ ಸಮಾನತೆ, ಮಹಿಳಾ ಸುರಕ್ಷತೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸಲು ಶಾಲಾ-ಕಾಲೇಜುಗಳು, ಹಳ್ಳಿಗಳು ಹಾಗೂ ಸ್ಲಂ ಪ್ರದೇಶಗಳಲ್ಲಿ ಹಾಡು, ನಾಟಕ ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇದರ ಭಾಗವಾಗಿ, ಒಕ್ಕೂಟದ ಚಿತ್ರದುರ್ಗ ಜಿಲ್ಲಾ ಘಟಕ ಮತ್ತು ವಿಸ್ತಾರ ಸಂಸ್ಥೆಯ ಫೆಲೋ ಆದ ಪ್ರಭಾವತಿ ಅವರು ಕಾರ್ಯನಿರ್ವಹಿಸುತ್ತಿರುವ ಆದಿಶಕ್ತಿ ನಗರದ (ನ್ಯೂ ವಿನಾಯಕ ಡಾಬಾ ಹಿಂಭಾಗ, 4ನೇ ಕ್ರಾಸ್) ಸ್ಲಂ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದಾಗ ಅಲ್ಲಿ ಕಂಡುಬಂದ ದೃಶ್ಯಗಳು ಎಂಥವರ ಕರುಳನ್ನು ಚುಮುಚುಮು ಎನ್ನುವಂತೆ ಮಾಡುತ್ತದೆ. ನನ್ನನ್ನೂ ಇನ್ನಿಲ್ಲದಂತೆ ಕಾಡುತ್ತಿವೆ..
ಸ್ವಂತ ಸೂರಿಲ್ಲ, ವಿದ್ಯುತ್ ಇಲ್ಲ, ಮಕ್ಕಳ ಭವಿಷ್ಯಕ್ಕೂ ಬೆಳಕಿಲ್ಲ!

ಇಲ್ಲಿನ ಸುಮಾರು 25 ಕುಟುಂಬಗಳ ಬದುಕು ಇಂದಿಗೂ ಅನಿಶ್ಚಿತತೆಯ ನೆರಳಿನಲ್ಲೇ ಸಾಗುತ್ತಿದೆ. ಈ ಕುಟುಂಬಗಳು ಚೌಲ್ಟ್ರಿಗಳಲ್ಲಿ ಕೆಲಸ ಮಾಡುವುದು, ಮನೆಗೆಲಸಕ್ಕೆ ಹೋಗುವುದು ಮತ್ತು ಸಣ್ಣಪುಟ್ಟ ವ್ಯಾಪಾರ ಮಾಡುವುದರ ಮೂಲಕ ಜೀವನ ಸಾಗಿಸುತ್ತಿವೆ. ಸ್ವಂತ ಸೂರಿಲ್ಲದ ಅನಿಶ್ಚಿತತೆ, ಕತ್ತಲೆಯಲ್ಲೇ ಬದುಕುವ ಅನಿವಾರ್ಯತೆ, ಮಕ್ಕಳ ಶಿಕ್ಷಣದ ಆತಂಕ, ಮಹಿಳೆಯರ ಸುರಕ್ಷತೆಯ ಪ್ರಶ್ನೆ ಇವೆಲ್ಲವೂ ಅವರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.
ನಾವೆಲ್ಲಿಗೆ ಹೋಗಬೇಕು?
“ನಾವು ಬಳ್ಳಾರಿ ಕಡೆಯವರು. ಜೀವನ ನಡೆಸಲು ಕೆಲಸ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇವೆ. ಕಳೆದ 18 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಆದರೆ ನಾವು ನೆಲೆಸಿರುವ ಜಾಗ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು. ಅವರು ಆಗಾಗ ಬಂದು ಜಾಗ ಖಾಲಿ ಮಾಡುವಂತೆ ಹೇಳಿ ಗಲಾಟೆ ಮಾಡುತ್ತಾರೆ. ನಮಗೆ ಬೇರೆಲ್ಲಿಯೂ ಸ್ವಂತ ನೆಲೆಯಿಲ್ಲ. ನಾವು ಎಲ್ಲಿಗೆ ಹೋಗಬೇಕು?” ಎಂದು ಅಲ್ಲಿನ ನಿವಾಸಿಗಳು ಕಣ್ಣೀರಿಡುತ್ತಾರೆ. ಇಷ್ಟು ವರ್ಷಗಳ ನಂತರವೂ ತಮ್ಮ ಕುಟುಂಬವನ್ನು ಕರೆದುಕೊಂಡು ನಾಳೆ ಎಲ್ಲಿ ಬದುಕಬೇಕು ಎಂಬ ಆತಂಕದಿಂದ ಅವರಿಗೆ ಇಂದಿಗೂ ಹೊರಬರಲಾಗಿಲ್ಲ.
ದುಡಿದು ತಿನ್ನುವ ಕೈಗಳಿಗೆ ನೆಮ್ಮದಿಯ ಬದುಕು ಏಕಿಲ್ಲ?
ಮನೆ ಎಂದರೆ ಕೇವಲ ನಾಲ್ಕು ಗೋಡೆಗಳಲ್ಲ. ಅದು ಭದ್ರತೆ, ಗೌರವ, ನೆಮ್ಮದಿ ಮತ್ತು ಭವಿಷ್ಯದ ಭರವಸೆ. ಅಂತಹ ಕನಿಷ್ಠ ಭದ್ರತೆಯೂ ಇಲ್ಲದೆ ಬದುಕುತ್ತಿರುವ ಈ ಕುಟುಂಬಗಳ ಪರಿಸ್ಥಿತಿ ನಮ್ಮ ಅಭಿವೃದ್ಧಿ ಪರಿಕಲ್ಪನೆಯ ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ.
ಕತ್ತಲಲ್ಲಿ ಕರಗುವ ಬಾಲ್ಯ ಮತ್ತು ಶೌಚಾಲಯದ ಸಮಸ್ಯೆ
ಈ ಪ್ರದೇಶದ ಬೀದಿಗಳಲ್ಲಿ ದೀಪಗಳಿಲ್ಲ, ಮನೆಗಳಿಗೂ ವಿದ್ಯುತ್ ಸಂಪರ್ಕವಿಲ್ಲ. ರಾತ್ರಿ ವೇಳೆ ಕತ್ತಲು ಕವಿಯುತ್ತಿದ್ದಂತೆ ಆತಂಕ ಶುರುವಾಗುತ್ತದೆ. ಸಂಜೆ ಆರು ಗಂಟೆಯೊಳಗೆ ರಾತ್ರಿ ಊಟ ಮುಗಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲಿದೆ. ಡಿಜಿಟಲ್ ಶಿಕ್ಷಣ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿರುವ ಇಂದಿನ ದಿನಗಳಲ್ಲಿ, ಈ ಸ್ಲಂ ಪ್ರದೇಶದ ಮಕ್ಕಳು ರಾತ್ರಿ ವೇಳೆ ಪುಸ್ತಕ ಹಿಡಿದು ಓದಲು ಕನಿಷ್ಠ ದೀಪದ ಬೆಳಕಿಲ್ಲದೆ ಪರದಾಡುತ್ತಿದ್ದಾರೆ ಅನ್ನುವುದು ವಿಪರ್ಯಾಸವೇ ಸರಿ.
ಇದಕ್ಕಿಂತಲೂ ಗಂಭೀರವಾದ ಸಮಸ್ಯೆ ಎಂದರೆ ಶೌಚಾಲಯದ ಕೊರತೆ. ಬೀದಿ ದೀಪಗಳಿಲ್ಲದ ಈ ಪ್ರದೇಶದಲ್ಲಿ ರಾತ್ರಿ ವೇಳೆ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಎದುರಿಸುತ್ತಿರುವ ನರಕಯಾತನೆ ಹಾಗೂ ಸುರಕ್ಷತೆಯಿಲ್ಲದ ಪರಿಸ್ಥಿತಿಯನ್ನು ನಿವಾಸಿಗಳು ವಿವರಿಸಿದರು.
ಈಡೇರದ ರಾಜಕೀಯ ಭರವಸೆಗಳು
ಈ ಭೇಟಿಯಲ್ಲಿ ನನ್ನನ್ನು ಹೆಚ್ಚು ಕಾಡಿದ ಸಂಗತಿಯೆಂದರೆ, ತಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ ರಾಜಕೀಯ ಮುಖಂಡರ ಬಗ್ಗೆ ಅವರಲ್ಲಿರುವ ನಿರಾಶೆ ಮತ್ತು ಆಕ್ರೋಶ.
“ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಬಂದು ನಮಗೆ ಸ್ವಂತ ನೆಲೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಮ್ಮ ಸಮಸ್ಯೆ ಮಾತ್ರ ಇಂದಿಗೂ ಬಗೆಹರಿಯಲೇ ಇಲ್ಲ” ಎಂದು ನಿವಾಸಿಗಳು ತೀವ್ರ ನಿರಾಶೆ ವ್ಯಕ್ತಪಡಿಸುತ್ತಾರೆ. ಇವರ ಬಳಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳಿದ್ದು, ಪ್ರಸ್ತುತ ವಿಳಾಸವೇ ನಮೂದಾಗಿದೆ. ಆದರೂ ಶಾಶ್ವತ ವಸತಿಯ ಭಾಗ್ಯ ಮಾತ್ರ ಇವರಿಗೆ ಸಿಕ್ಕಿಲ್ಲ.

ಆಗಬೇಕಿರುವ ತುರ್ತು ಕ್ರಮಗಳು:
- ಖಾಸಗಿ ಮಾಲೀಕತ್ವದಲ್ಲಿರುವ ಈ ಜಾಗದಲ್ಲಿ ವಸತಿ ಕಲ್ಪಿಸುವುದು ಕಾನೂನುಬದ್ಧವಾಗಿ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು.
- ಅರ್ಹ ಕುಟುಂಬಗಳಿಗೆ ಪರ್ಯಾಯ ವಸತಿ ಅಥವಾ ಸರ್ಕಾರದ ಸೂಕ್ತ ವಸತಿ ಯೋಜನೆಗಳ ಮೂಲಕ ಪರಿಹಾರ ಒದಗಿಸಬೇಕು.
- ಸದ್ಯ ಅವರು ವಾಸವಿರುವವರೆಗೆ ಕಾನೂನುಬದ್ಧವಾಗಿ ಸಾಧ್ಯವಿರುವ ರೀತಿಯಲ್ಲಿ ವಿದ್ಯುತ್ ಸಂಪರ್ಕ, ಬೀದಿ ದೀಪ ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು.
- ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗಿಬರಲು ಅಗತ್ಯವಿರುವ ನೆರವು ಮತ್ತು ಶಿಕ್ಷಣ ಮುಂದುವರಿಸಲು ಸೂಕ್ತ ವಾತಾವರಣವನ್ನು ಒದಗಿಸಬೇಕು.
- ಇದಕ್ಕಾಗಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ವಿದ್ಯುತ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ಒಟ್ಟಾಗಿ ಸಮನ್ವಯದಿಂದ ಕೆಲಸ ಮಾಡಬೇಕಿದೆ.
ಪ್ರಜ್ಞಾವಂತರು ಮೌನ ಮುರಿಯಬೇಕು
“ಅರಿವಿನ ಪಯಣ”ದ ಭಾಗವಾಗಿ ಈ ಸಮಸ್ಯೆಗಳನ್ನು ಹತ್ತಿರದಿಂದ ಕಂಡ ನಮ್ಮ ತಂಡ, ಇವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕಿದೆ ; ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಿದೆ . ಅರ್ಹ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ದೊರಕುವಂತೆ ಪ್ರಯತ್ನಿಸಬೇಕಿದೆ.
ಈ ಅಲೆಮಾರಿ ಕಾರ್ಮಿಕರ ಬದುಕಿನ ಹೋರಾಟಕ್ಕೆ ನಮ್ಮ ತಂಡ ಧ್ವನಿಯಾಗಬೇಕಿದೆ. ಆಗ ಮಾತ್ರ ಈ ಅರಿವಿನ ಪಯಣ ಹೆಚ್ಚು ಅರ್ಥಪೂರ್ಣವಾಗಲು ಸಾಧ್ಯ.
ಶಾಂತಾ ಜಿ
ಹವ್ಯಾಸಿ ಪತ್ರಕರ್ತೆ
ಇದನ್ನೂ ಓದಿ- ಸಂಸ್ಕಾರದ ಪಾಠ ಮತ್ತು ಅರಿವಿನ ನಡುವಿನ ಸಂಘರ್ಷ


