ಕನಕದಾಸರ ನಿಂದಾಸ್ತುತಿಯಲ್ಲಿ ಬಲಿಯ ಪ್ರಸಂಗವು ಅತ್ಯಂತ ಹರಿತವಾದ ಚಾಟಿಯಾಗಿ ಮೂಡಿಬರುತ್ತದೆ. ಇದು ಭಕ್ತನು ದೇವರೆದುರು ತೋರುವ ಪರಮ ಸಲಿಗೆಯೂ ಹೌದು. ಜಗತ್ತನ್ನೇ ಸೃಷ್ಟಿಸಿದ ದೇವರು ಬಡ ಬ್ರಾಹ್ಮಣನಂತೆ ಕೈಯೊಡ್ಡಿ ಭಿಕ್ಷೆ ಬೇಡಿದ್ದನ್ನೂ, ದಾನವಿತ್ತ ಮಹಾತ್ಮನನ್ನೇ ಪಾತಾಳಕ್ಕೆ ತುಳಿದದ್ದನ್ನೂ ಕನಕದಾಸರು ಲೇವಡಿ ಮಾಡುತ್ತಾರೆ. – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಪುರಾಣ ಪರಂಪರೆಯಲ್ಲಿ ಅಸುರ ಚಕ್ರವರ್ತಿಯೆಂದೇ ಗುರುತಿಸಿಕೊಂಡ ಬಲಿಯು ಕನಕದಾಸರ ಸಾಹಿತ್ಯದಲ್ಲಿ ಪರಮ ಭಾಗವತನಾಗಿ ರೂಪಾಂತರಗೊಂಡಿದ್ದು ಹೇಗೆ? ಮೂರಡಿ ಭೂಮಿಯನ್ನು ದಾನವಿತ್ತು ಪಾತಾಳಕ್ಕೆ ತುಳಿಸಿಕೊಂಡ ಬಲಿಯು ವಾಮನನ ಮುಂದೆ ಸೋತನೇ ಅಥವಾ ಬ್ರಹ್ಮಾಂಡದ ಒಡೆಯನನ್ನೇ ತನ್ನ ಮನೆಯ ದ್ವಾರಪಾಲಕನನ್ನಾಗಿ ಮಾಡಿಕೊಂಡು ಗೆದ್ದನೇ? ಕೊಟ್ಟ ಮಾತಿಗೆ ತಪ್ಪದ ಭಕ್ತನನ್ನು ಪಾತಾಳಕ್ಕೆ ತುಳಿದ ಭಗವಂತನನ್ನೇ ‘ಕಳ್ಳ’ನೆಂದು ಜರಿಯುವ ಕನಕದಾಸರ ನಿಂದಾಸ್ತುತಿಯ ಹಿಂದಿರುವ ತಾತ್ವಿಕ ಹಾಗೂ ಸಾಮಾಜಿಕ ಅಂತಃಕರಣವಾದರೂ ಎಂತಹುದು? ಇಂತಹ ಪ್ರಶ್ನೆಗಳನ್ನು ಬೆನ್ನತ್ತಿ ಹೋದಂತೆಲ್ಲಾ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಲಿಚಕ್ರವರ್ತಿಯ ವ್ಯಕ್ತಿತ್ವವನ್ನು ಅತ್ಯಂತ ಸಮಗ್ರವಾಗಿ, ಬಹುಮುಖಿಯಾಗಿ ಮತ್ತು ತಾತ್ವಿಕ ಗಹನತೆಯೊಂದಿಗೆ ಮರುಚಿಂತನೆಗೆ ಒಳಪಡಿಸಿದ ಶ್ರೇಷ್ಠ ಕವಿ ಹಾಗೂ ಕೀರ್ತನಕಾರರಾಗಿ ಕನಕದಾಸರು ನಮಗೆ ಎದುರಾಗುತ್ತಾರೆ.
ಬಲಿಯು ದಾನಶೂರತೆ ಮತ್ತು ಸತ್ಯನಿಷ್ಠೆಯ ಪರಮಾವಧಿ ಪ್ರತೀಕ. ಬಂದವನು ಸಾಧಾರಣ ಬ್ರಾಹ್ಮಣನಲ್ಲ, ಸಾಕ್ಷಾತ್ ವಿಷ್ಣು, ಆದ್ದರಿಂದ ದಾನ ಕೊಡಬೇಡ ಎಂದು ಗುರು ಶುಕ್ರಾಚಾರ್ಯರು ಎಚ್ಚರಿಸಿದಾಗಲೂ ಬಲಿ ಹಿಂಜರಿಯಲಿಲ್ಲ. ಕೊಟ್ಟ ಮಾತಿಗೆ ತಪ್ಪುವುದು ಅಧರ್ಮವೆಂದು ನಂಬಿದ ಆತ ತನ್ನ ಸರ್ವಸ್ವವನ್ನೂ ಧಾರೆಯೆರೆದನು. ಕನಕದಾಸರು ಕೀರ್ತನೆಯೊಂದರಲ್ಲಿ ಈ ಸತ್ಯಪಾಲನೆಯ ವಿಪರ್ಯಾಸವನ್ನು “ಆಡಿದ ಮಾತಿಗೆ ಬಲಿ ನೀಡಲಾಗಿ ಕೆಟ್ಟ, ಮಾಡುವ ದಾನ ತಡೆದು ಶುಕ್ರನು ಕೆಟ್ಟ” ಎಂದು ಅತ್ಯಂತ ಮಾರ್ಮಿಕವಾಗಿ ದಾಖಲಿಸುತ್ತಾರೆ. ಸತ್ಯಕ್ಕೆ ಕಟ್ಟುಬಿದ್ದು ದಾನವಿತ್ತ ಬಲಿ ರಾಜ್ಯ ಕಳೆದುಕೊಂಡರೆ, ಆ ದಾನವನ್ನು ತಡೆಯಲು ಕುತಂತ್ರ ಮಾಡಿದ ಶುಕ್ರಾಚಾರ್ಯನು ತನ್ನ ಕಣ್ಣನ್ನೇ ಕಳೆದುಕೊಂಡನು. ಮತ್ತೊಂದು ಕೀರ್ತನೆಯಲ್ಲಿ ಮನುಷ್ಯನ ಅಹಂಕಾರವನ್ನು ಕರಗಿಸುವ ಸಂದರ್ಭದಲ್ಲಿ “ಕೃಪೆಯಲ್ಲಿ ಬಲೀಂದ್ರನೆ ನೀನು” ಎಂದು ಪ್ರಶ್ನಿಸುವ ಮೂಲಕ ಬಲಿಯ ಔದಾರ್ಯವನ್ನು ಮನುಕುಲಕ್ಕೆ ಆದರ್ಶ ಮಾನದಂಡವಾಗಿ ಕನಕದಾಸರು ಮುಂದಿಡುತ್ತಾರೆ.
ದ್ವೈತ ಸಿದ್ಧಾಂತದ ಭಕ್ತಿ ಪರಂಪರೆಯಲ್ಲಿ ಕುಲಕ್ಕಿಂತ ಭಕ್ತಿಯೇ ಮುಖ್ಯವೆಂಬ ತತ್ವವಿದೆ. ಇದಕ್ಕೆ ಪೂರಕವಾಗಿ ಕನಕದಾಸರು ಬಲಿಯನ್ನು ಪರಮ ಭಾಗವತನನ್ನಾಗಿ, ಹರಿಭಕ್ತಾಗ್ರೇಸರನನ್ನಾಗಿ ಚಿತ್ರಿಸುತ್ತಾರೆ ಹಾಗೂ ಪ್ರಹ್ಲಾದ, ಧ್ರುವ, ವಿಭೀಷಣರ ಸಾಲಿನಲ್ಲಿಯೇ ಅವನನ್ನೂ ಗುರುತಿಸುತ್ತಾರೆ. “ಬಲಿನಂಬಿ ಪಾತಾಳಲೋಕಕರಸಾದನದೆ, ಕುಲದ ಪ್ರಹ್ಲಾದನು ನಿಜವ ಕಂಡ” ಎನ್ನುವ ದಾಸರು, ಶ್ರೀಹರಿಯ ಪಾದದ ಪಾವಿತ್ರ್ಯಕ್ಕೆ ಸ್ವತಃ ಬಲಿಯೇ ಸಾಕ್ಷಿ ಎಂಬಂತೆ “ಹರಿ ನಿನ್ನ ಪಾದವು ಪವಿತ್ರತರವೆಂಬುದಕೆ ಧರಣಿ ಬಲಿ ವಿಧಿ ಭವಾಹ್ಲಾದ ಹೊಣೆಯೊ” ಎಂದು ಸಾರುತ್ತಾರೆ. ಹರಿಯ ಪರಬ್ರಹ್ಮ ತತ್ವವನ್ನು ಯಾರು ಬಲ್ಲರೆಂಬ ಪಟ್ಟಿಯಲ್ಲಿ “ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ ಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲ” ಎನ್ನುತ್ತಾ ಬಲಿಗೆ ಜ್ಞಾನಿಗಳ ಅಗ್ರಪಂಕ್ತಿಯಲ್ಲಿ ಸ್ಥಾನ ನೀಡಿದ್ದಾರೆ. ಇನ್ನೊಂದು ಕೀರ್ತನೆಯಲ್ಲಿ ವಿದುರ ಮತ್ತು ರುಕ್ಮಾಂಗದರ ಜೊತೆಯಲ್ಲಿ ಬಲಿಯನ್ನು ಭಕ್ತಿಯ ಶಿಖರವಾಗಿ ಸ್ಮರಿಸಿದ್ದಾರೆ.

ಭಕ್ತಿಗೆ ಒಲಿದು ಭಗವಂತನೇ ದ್ವಾರಪಾಲಕನಾದುದು ಕನಕದಾಸರ ನೆಚ್ಚಿನ ಅನುಭಾವಿಕ ವಸ್ತುವಾಗಿದೆ. ಬಲಿಯ ಭಕ್ತಿಯು ಎಷ್ಟೊಂದು ಶ್ರೇಷ್ಠವೆಂದರೆ, ಬ್ರಹ್ಮಾಂಡದ ಒಡೆಯನಾದ ಅಚ್ಯುತನೇ ಅವನ ಮನೆಯ ಕಾವಲುಗಾರನಾಗಬೇಕಾಯಿತು. ಒಂದು ಕೀರ್ತನೆಯಲ್ಲಿ “ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾಗಿಲ ಕಾಯ್ದನಚ್ಯುತನು ಅನುಗಾಲದಿ” ಎಂದು ಹಾಡಿದರೆ, ಇನ್ನೊಂದರಲ್ಲಿ “ಬಲಿಯಧ್ವರದ ಸಾಲೆಗೊಂದು ವೇಷವನಾಂತು ಸಲೆ ಬಂದು ಧರೆಯ ಮೂರಡಿಯ ಬೇಡೆ… ತಲೆ ಮೇಲೆ ಇರಿಸೆನಲು ತಳತಳಿಸಿ ಅವನ ಬಾಗಿಲ ಕಾಯ್ದ ವಾಮನನೆ ಶರಣೆಂಬೆನು” ಎಂದು ಭಗವಂತನೇ ಭಕ್ತನಿಗೆ ಅಧೀನನಾಗುವ ಪಾರಮ್ಯವನ್ನು ನಿರೂಪಿಸುತ್ತಾರೆ. ಹೀಗೆ ಭಗವಂತನನ್ನು ತನ್ನ ಬಾಗಿಲಿಗೆ ತಂದು ನಿಲ್ಲಿಸಿಕೊಂಡ ಬಲಿಯ ಭಕ್ತಿಯು ಅನುಪಮವಾದುದು.
ವಾಮನಾವತಾರದ ಲೀಲೆಯನ್ನು ಕನಕದಾಸರು ಜನಪದದ ದೇಶಿ ಸೊಗಡಿನಲ್ಲಿಯೂ, ಶಾಸ್ತ್ರೀಯ ಶೈಲಿಯಲ್ಲಿಯೂ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಡೊಳ್ಳಿನ ಹಾಡಿನ ದೇಶಿ ಧಾಟಿಯ ಕೀರ್ತನೆಯಲ್ಲಿ ಬರುವ “ಹುಡುಗ ಹಾರುವನಾಗಿ ನಮ ರಂಗ ಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ/ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನ ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ” ಎಂಬ ಸಾಲುಗಳು ಜಾನಪದ ರಂಗಭೂಮಿಯ ದೃಶ್ಯಕಾವ್ಯದಂತೆ ಕಣ್ಣಿಗೆ ಕಟ್ಟುತ್ತವೆ. ಇದೇಲ್ಲದೆ “ಅಸಮಪಟು ಬಲಿಯ ಕಾಳೆಗದಿ ನುಂಗಿದ ನಿಜಪಾದ” ಎಂಬಲ್ಲಿಯೂ, “ಆ ಮಹಾಸಿರಿಯ ಗರ್ವದಿ ಮುಂದರಿಯದೆ ಭೂಮಿಯನು ಬಲಿ ತಾನಾಳುತಿರೆ ನೇಮಿಸಿ ಎರಡೇ ಹೆಜ್ಜೆಯೊಳಳಕೊಂಡ ವಾಮನ ರೂಪಿನ ಮಾಸಾಳಮ್ಮ” ಎಂಬಲ್ಲಿಯೂ ವಾಮನನ ತ್ರಿವಿಕ್ರಮ ರೂಪವು ಅನಾವರಣಗೊಂಡಿದೆ. ಜೊತೆಗೆ “ಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟ” ಎಂದು ವಾಮನನ ವಿಶ್ವರೂಪದ ಲೀಲೆಯನ್ನು ಕನಕದಾಸರು ವಿಸ್ಮಯದಿಂದ ವರ್ಣಿಸುತ್ತಾರೆ.
ಕನಕದಾಸರ ನಿಂದಾಸ್ತುತಿಯಲ್ಲಿ ಬಲಿಯ ಪ್ರಸಂಗವು ಅತ್ಯಂತ ಹರಿತವಾದ ಚಾಟಿಯಾಗಿ ಮೂಡಿಬರುತ್ತದೆ. ಇದು ಭಕ್ತನು ದೇವರೆದುರು ತೋರುವ ಪರಮ ಸಲಿಗೆಯೂ ಹೌದು. ಜಗತ್ತನ್ನೇ ಸೃಷ್ಟಿಸಿದ ದೇವರು ಬಡ ಬ್ರಾಹ್ಮಣನಂತೆ ಕೈಯೊಡ್ಡಿ ಭಿಕ್ಷೆ ಬೇಡಿದ್ದನ್ನೂ, ದಾನವಿತ್ತ ಮಹಾತ್ಮನನ್ನೇ ಪಾತಾಳಕ್ಕೆ ತುಳಿದದ್ದನ್ನೂ ಕನಕದಾಸರು ಲೇವಡಿ ಮಾಡುತ್ತಾರೆ. “ನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆ” ಎಂದು ನೇರವಾಗಿ ಆಕ್ಷೇಪಿಸಿದರೆ, “ಮೋಸದಿ ಬಲಿಯ ದಾನವ ಬೇಡಿ ಅನುದಿನ ಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊ” ಎಂದು ಹರಿಯನ್ನು ಕಳ್ಳನೆಂದೇ ಜರಿಯುತ್ತಾರೆ. “ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ” ಎಂದು ಅಪಹಾಸ್ಯ ಮಾಡುತ್ತಾರೆ. ಮತ್ತೊಂದು ಕೀರ್ತನೆಯಲ್ಲಿ “ಎರಡು ಪಾದ ಭೂಮಿ ತಾನೊಲ್ಲ… ಶುಕ್ರಗೆ ಕಣ್ಣು ಮಾಡಿದನೊಂದ… ಅರ್ತಿಯಿಂದ ಪಾತಾಳಕೆ ದೂಡ್ದಾ” ಎಂದು ವಾಮನನ ತಂತ್ರಗಾರಿಕೆಯನ್ನು ಬಯಲಿಗೆಳೆಯುತ್ತಾರೆ. ಈ ನಿಂದಾಸ್ತುತಿಯ ಹಿಂದೆ, ಭಕ್ತನಾದ ಬಲಿಗೆ ಆದ ಅನ್ಯಾಯದ ಪರವಾಗಿ ನಿಲ್ಲುವ ಕನಕದಾಸರ ಸಾಮಾಜಿಕ ಅಂತಃಕರಣವೂ ತುಡಿಯುತ್ತಿರುವುದು ಸ್ಪಷ್ಟವಾಗುತ್ತದೆ.
ಮತ್ತೊಂದು ನೆಲೆಯಲ್ಲಿ ಬಲಿಯ ಕಥೆಯು ಕನಕದಾಸರಿಗೆ ಲೌಕಿಕ ಭೋಗದ ನಶ್ವರತೆಯನ್ನು ಬೋಧಿಸುವ ತಾತ್ವಿಕ ರೂಪಕವಾಗಿದೆ. “ಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ… ಶ್ರೀಪತಿ ಕೇಶವನಲಿಡು ಭಕುತಿ ಕೊಡುವ ಮುಕುತಿ” ಎಂದು ಅವರು ಮನುಕುಲವನ್ನು ಎಚ್ಚರಿಸುತ್ತಾರೆ. ಇಂದ್ರಾದಿ ದೇವತೆಗಳನ್ನೇ ನಡುಗಿಸಿದ ಪ್ರಚಂಡ ಬಲಿಚಕ್ರವರ್ತಿಯೂ ಈ ಮಣ್ಣಿನಲ್ಲಿ ಶಾಶ್ವತವಾಗಿ ಉಳಿಯಲಿಲ್ಲ; ಆದ್ದರಿಂದ ಸಿರಿ, ಸಂಪತ್ತು, ಅಧಿಕಾರಗಳೆಲ್ಲವೂ ಮಿಥ್ಯ, ಹರಿಪಾದವೊಂದೇ ಸತ್ಯ ಎಂಬ ವೈರಾಗ್ಯವನ್ನು ಬಲಿಯ ದುರಂತದ ಮೂಲಕ ಮನದಟ್ಟು ಮಾಡುತ್ತಾರೆ.
ಕನಕದಾಸರ ಕಾವ್ಯವಾದ ‘ಹರಿಭಕ್ತಿಸಾರ’ದಲ್ಲಿ ಬಲಿಯ ಪ್ರಸಂಗವು ಅಹಂಕಾರ ನಿಗ್ರಹ ಮತ್ತು ಭಕ್ತಾನುಗ್ರಹದ ಅದ್ಭುತ ಸಂಯೋಜನೆಯಾಗಿ ಬರುತ್ತದೆ. ಈ ಕೃತಿಯ ಮೂವತ್ತನೆಯ ಪದ್ಯದಲ್ಲಿ ದ್ರೌಪದಿಗೆ ಅಕ್ಷಯವಸ್ತ್ರವಿತ್ತದ್ದು ಹಾಗೂ ಅಹಲ್ಯೆಗೆ ಶಾಪವಿಮೋಚನೆ ಮಾಡಿದ್ದನ್ನು ಸ್ಮರಿಸುವ ಸಾಲಿನಲ್ಲಿಯೇ “ಬಲಿಯ ಬಂಧಿಸಿ… ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ” ಎಂದು ಕವಿ ಹಾಡುತ್ತಾರೆ. ಅಂದರೆ ಕನಕದಾಸರ ದೃಷ್ಟಿಯಲ್ಲಿ ‘ಬಲಿಯ ಬಂಧನ’ವೂ ಒಂದು ‘ಉತ್ತಮ ಕೆಲಸ’ವೇ ಆಗಿದೆ. ಏಕೆಂದರೆ ಅದು ಶಿಕ್ಷೆಯಲ್ಲ; ಭಕ್ತನ ಅಹಂಕಾರವನ್ನು ಅಳಿಸಿ, ಆತನನ್ನು ಸಂಪೂರ್ಣವಾಗಿ ತನ್ನವನನ್ನಾಗಿ ಮಾಡಿಕೊಂಡ ಭಗವಂತನ ಪರಮಾನುಗ್ರಹ. ಇದಕ್ಕೆ ಪೂರಕವಾಗಿ ಇಪ್ಪತ್ತೆಂಟು ಮತ್ತು ಇಪ್ಪತ್ತೊಂಬತ್ತನೆಯ ಪದ್ಯಗಳಲ್ಲಿ ಸಮರಮುಖದಲ್ಲಿ ವೈರತ್ವದಿಂದ ಹೋರಾಡಿದವರಿಗೂ ಅಮರಪದವಿಯನ್ನಿತ್ತ ಹರಿಯ ಕೃಪೆಯನ್ನು ಸ್ಮರಿಸುವಾಗ, ಬಲಿಗೆ ಸುತಳಲೋಕದ ಶಾಶ್ವತ ಅಧಿಪತ್ಯವನ್ನು ನೀಡಿದ ದೈವಿಕ ನ್ಯಾಯವು ದೃಢಪಡುತ್ತದೆ. ಹಾಗೆಯೇ, ತಮ್ಮ ‘ನಳಚರಿತ್ರೆ’ಯಲ್ಲಿ ವಿಧಿವಿಲಾಸ ಮತ್ತು ಸತ್ಯನಿಷ್ಠೆಯನ್ನು ನಿರೂಪಿಸುವಾಗಲೂ ಬಲಿಯ ಕಥೆಯನ್ನೇ ಅಂತರಂಗದ ಮಾದರಿಯಾಗಿ ಇರಿಸಿಕೊಂಡಿದ್ದಾರೆ. ಬಲಿಯು ತನ್ನ ವಚನಪಾಲನೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದಂತೆಯೇ, ನಳಮಹಾರಾಜನು ಪಗಡೆಯಾಟದಲ್ಲಿ ಸೋತು ಸತ್ಯವ್ರತಕ್ಕಾಗಿ ಸಮಸ್ತ ರಾಜ್ಯವನ್ನೂ ಬಿಟ್ಟು ಅಡವಿಗೆ ತೆರಳುತ್ತಾನೆ. ಈ ಸಾಮ್ಯತೆಯು ಬಲಿಚಕ್ರವರ್ತಿಯ ಸತ್ಯನಿಷ್ಠೆ ಮತ್ತು ತ್ಯಾಗವು ಕನಕದಾಸರ ಕಾವ್ಯಪ್ರಜ್ಞೆಯಲ್ಲಿ ಎಷ್ಟು ಆಳವಾಗಿ ಬೇರೂರಿತ್ತೆಂಬುದನ್ನು ಸಾಬೀತುಪಡಿಸುತ್ತದೆ.
ಡಾ. ರವಿ ಸಿದ್ಲಿಪುರ
ಸಹಾಯಕ ಪ್ರಾಧ್ಯಾಪಕರು.
ಇದನ್ನೂ ಓದಿ-ವಿಶೇಷ | ನರಕಾಸುರನೋ ಬಲಿಯೋ: ದೀಪಾವಳಿ ಆಚರಣೆ


