ದೀಪಾವಳಿಯ ವಿಶೇಷ ಲೇಖನ
ದಸರಾದ ಮಹಿಷಾಸುರನಂತೆ ದೀಪಾವಳಿಯಲ್ಲಿ ಬಲಿ ಚಕ್ರವರ್ತಿಯನ್ನು ತಂತ್ರದಿಂದಲೇ ಸೋಲಿಸಲಾಗುತ್ತದೆ. ಒಂದು ರೀತಿಯಲ್ಲಿ ಇದರ ಪ್ರತಿಭಟನಾ ರೂಪಕವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಆರ್ಯ-ದ್ರಾವಿಡ ಸಂಘರ್ಷದ ಒಂದು ಎಳೆಯನ್ನು ಈ ಹಬ್ಬದಲ್ಲೂ ಗುರುತಿಸಬಹುದು. ಕೇರಳದ ಓಣಂನಲ್ಲೂ ಅದು ಪ್ರತಿಫಲಿತವಾಗುತ್ತದೆ – ಡಾ. ಗಣನಾಥ ಶೆಟ್ಟಿ ಎಕ್ಕಾರು, ಜಾನಪದ ವಿದ್ವಾಂಸರು.
ಪ್ರಕೃತಿಗೂ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಒಂದು ಪ್ರದೇಶದ ಸಂಸ್ಕೃತಿಯನ್ನು ಆ ಪ್ರದೇಶದ ಪ್ರಕೃತಿಯು ನಿರ್ಧರಿಸುತ್ತದೆ. ಇದು ದೀಪಾವಳಿ ಹಬ್ಬಕ್ಕೂ ಅನ್ವಯವಾಗುತ್ತದೆ. ಕೃಷಿ ಕೆಲಸಗಳು ಕಳೆದು ಫಲವತ್ತಾದ ಫಸಲು ಮನೆಗೆ ಬರುವುದು ಅಕ್ಟೋಬರ್-ನವೆಂಬರ್ ತಿಂಗಳು. ಸ್ಥಳೀಯವಾಗಿ ‘ಸುಗ್ಗಿ’ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ ಎಂದರೆ ಸಮೃದ್ಧಿ ಮತ್ತು ಹರ್ಷ ಎಂಬ ನಂಬಿಕೆ ಇದೆ. ಸರಿಯಾಗಿ ಮಳೆ ಬಂದು, ಬೆಳೆ ಬೆಳೆದು ಸಮೃದ್ಧ ಫಸಲು ಮನೆಗೆ ಬಂದಾಗ ಆಚರಿಸುವ ಸುಗ್ಗಿ ಹಬ್ಬವೇ ದೀಪಾವಳಿ. ಉತ್ತರ ಭಾರತದಲ್ಲಿ 10 ಅಥವಾ 15 ದಿನಗಳ ಕಾಲ ಈ ಹಬ್ಬವನ್ನು ಆಚರಿಸಿದರೆ, ದಕ್ಷಿಣ ಭಾರತದಲ್ಲಿ 3 ದಿನ ಈ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಹಬ್ಬಕ್ಕೆ ವಿಶಿಷ್ಟ ಅರ್ಥಗಳಿವೆ. ಎಣ್ಣೆ ಸ್ನಾನ, ಗದ್ದೆ ಮತ್ತು ಕೃಷಿ ಸಲಕರಣೆಗಳ ಪೂಜೆ, ಗೋಪೂಜೆ, ಬಲೀಂದ್ರ ಪೂಜೆ ಹೀಗೆ ವಿಶಿಷ್ಟವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಪದದ ಅರ್ಥ ದೀಪಗಳ ಸಾಲು. ಪ್ರಕೃತಿಯನ್ನು ದೀಪಾರಾಧನೆಯ ಮೂಲಕ ಪೂಜಿಸುವ ಹಬ್ಬ ದೀಪಾವಳಿ.
ದಸರಾ ಹಬ್ಬದಂತೆ ದೀಪಾವಳಿ ಹಬ್ಬಕ್ಕೂ ಹಲವು ಧಾರ್ಮಿಕ-ಪೌರಾಣಿಕ ಕಥೆಗಳಿವೆ. ಶ್ರೀರಾಮನು 14 ವರ್ಷಗಳ ವನವಾಸದ ಬಳಿಕ ರಾವಣನನ್ನು ಕೊಂದು ಅಯೋಧ್ಯೆಗೆ ಆಗಮಿಸಿದಾಗ, ದೀಪಗಳ ಮೂಲಕ ಸ್ವಾಗತ ನೀಡಲಾದದ್ದನ್ನು ದೀಪಾವಳಿ ಎಂದು ಕರೆಯಲಾಗುತ್ತದೆ ಎಂಬ ಕಥೆಯಿದೆ. ಇನ್ನೊಂದು ಕಥೆ ನರಕಾಸುರ ವಧೆಗೆ ಸಂಬಂಧಿಸಿದುದು. ಇದೊಂದು ವಿಶಿಷ್ಟ, ವಿಚಿತ್ರ ಕಥೆ. ವಿಷ್ಣುವು ವರಹಾವತಾರವನ್ನು ತಾಳಿದಾಗ, ಒಂದು ತೊಟ್ಟು ಅವನ ಬೆವರು ಭೂದೇವಿಯ ಮೇಲೆ ಬಿದ್ದು ಹುಟ್ಟಿದ ಮಗ ನರಕಾಸುರ. ಭೂದೇವಿ ವಿಷ್ಣುವನ್ನು ಬೇಡಿ ಮಗನಿಗೆ ವೈಷ್ಣವಾಸ್ತ್ರವನ್ನು ಕೊಡುತ್ತಾಳೆ. ಅವನು ದೇವತೆಗಳ ಕಂಠಕನಾದಾಗ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ಅವನ ವಾಗ್ಜೋತಿಪುರಕ್ಕೆ ದಾಳಿ ಮಾಡಿ ನರಕಾಸುರನನ್ನು ಕೊಂದ ಕಥೆ, ನರಕಾಸುರವಧೆಯ ಆಚರಣೆಯನ್ನು ನರಕಚತುರ್ದಶಿ ಎಂದು ಕರೆಯಲಾಗುತ್ತದೆ ಎಂಬ ನಂಬಿಕೆ ಇರುವ ಈ ಕಥೆಯನ್ನು ದೀಪಾವಳಿಯೊಂದಿಗೆ ಜೋಡಿಸಲಾಗಿದೆ. ವಿವಿಧ ಧರ್ಮಗಳಲ್ಲಿ ದೀಪಾವಳಿಯ ಕುರಿತಾಗಿ ವಿಭಿನ್ನ ಕಥೆಗಳಿವೆ. ಸಿಖ್ ಧರ್ಮದಲ್ಲಿ ಗುರು ಹರಗೋವಿಂದ ಸಿಂಗರು ಗ್ವಾಲಿಯರ್ ಅರಸನ ಕೋರಿಕೆಯಂತೆ 52 ರಾಜರನ್ನು ಬಿಡುಗಡೆಗೊಳಿಸಿ, ಅಮೃತಸರಕ್ಕೆ ಬಂದ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. ಹಾಗೆಯೇ ಜೈನಧರ್ಮದಲ್ಲಿ 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣ ಹೊಂದಿದ ದಿನ ದೀಪಾವಳಿ ಎಂದು ನಂಬಲಾಗಿದೆ.

ಈ ಪುರಾಣಗಳ ಸಂಘರ್ಷದ ಕಥೆಯನ್ನು ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಬಲಿಚಕ್ರವರ್ತಿಯ ಕಥೆಯಲ್ಲಿ ಗಮನಿಸಬಹುದು. ದಸರಾ ಹಬ್ಬದಂತೆ ಆರ್ಯದ್ರಾವಿಡ ಸಂಘರ್ಷವನ್ನು ದೀಪಾವಳಿಯ ಕಥೆಯಲ್ಲಿ ಗುರುತಿಸಬಹುದು. ಭಾರತದ ಎರಡು ಮಹತ್ವದ ಹಬ್ಬಗಳಾದ ದಸರಾ ಮತ್ತು ದೀಪಾವಳಿಯಲ್ಲಿ ಈ ಸಂಘರ್ಷವು ಕಾಣುವುದು ವಿಶೇಷವಾಗಿದೆ. ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಈ ಕಥೆಯು ಪ್ರಚಲಿತವಿದೆ. ಕೇರಳದಲ್ಲಿ ದೀಪಾವಳಿಯ ಬದಲಾಗಿ ‘ಓಣಂ’ ಆಚರಣೆಗೆ ಬಲಿಚಕ್ರವರ್ತಿಯ ಕಥೆಯನ್ನು ತಳುಕು ಹಾಕಲಾಗಿದೆ. ಕರಾವಳಿ ಮತ್ತು ತಮಿಳುನಾಡಿನಲ್ಲಿ ದೀಪಾವಳಿಯೊಂದಿಗೆ ಬಲಿ ಕಥೆಗೆ ಸಂಬಂಧ ಕಲ್ಪಿಸಲಾಗಿದೆ.
ಪುರಾಣದಲ್ಲಿನ ಬಲಿಚಕ್ರವರ್ತಿಯ ಕಥೆಗಿಂತ ‘ತುಳುವಾಲ ಬಲಿಯೇಂದ್ರ’ ಎಂಬ ಸ್ವಲ್ಪ ಭಿನ್ನವಾದ ಜನಪದ ಕಾವ್ಯವನ್ನು ತುಳು ಹಿರಿಯ ವಿದ್ವಾಂಸರಾಗಿದ್ದ ದಿ| ಪೊಳಲಿ ಶೀನಪ್ಪ ಹೆಗ್ಡೆಯವರು ಸಂಪಾದಿಸಿದ್ದಾರೆ. ಈ ಕಾವ್ಯದಲ್ಲಿ ಕರಾವಳಿಗೆ ಸಂಬಂಧಿಸಿದಂತೆ ಬಲಿಚಕ್ರವರ್ತಿಯ ಕಥೆಯಿದೆ. ಕೇರಳದ ಓಣಂ ಆಚರಣೆಗೆ ಸಂಬಂಧಿಸಿದಂತೆ ಇದೇ ರೀತಿಯ ಕಥೆ ಇರುವುದು ಕಂಡುಬರುತ್ತದೆ. ಬಲಿಯು ದಕ್ಷಿಣವನ್ನು ಆಳುತ್ತಿದ್ದ ಅತ್ಯಂತ ಧರ್ಮಿಷ್ಟ ದ್ರಾವಿಡ ಅರಸನಾಗಿದ್ದ. ಜನಾನುರಾಗಿ ಅರಸನಾಗಿದ್ದ. ಅವನ ಕೀರ್ತಿಯನ್ನು ಸಹಿಸಲಾರದೆ ದೇವತೆಗಳು ವಿಷ್ಣುವಿನಲ್ಲಿ ದೂರು ನೀಡುತ್ತಾರೆ. ಆರಂಭದಲ್ಲಿ ವಿಷ್ಣುವು ದೇವತೆಗಳಿಗೆ ಬುದ್ಧಿ ಹೇಳಿದರೂ ಕೊನೆಗೆ ದೇವತೆಗಳ ಮಾತಿಗೆ ಒಪ್ಪಿ ಬಲಿಚಕ್ರವರ್ತಿಯುನ್ನು ಪದಚ್ಯುತಗೊಳಿಸಲು ವಾಮನ ರೂಪದಲ್ಲಿ ಬರುತ್ತಾನೆ.
ಬಲಿಚಕ್ರವರ್ತಿ ದಾನಶೂರನಾಗಿದ್ದ. ತುಳುವಿನಲ್ಲಿ ಬ್ರಾಹ್ಮಣ ವಟುವನ್ನು ‘ಮಾಣಿ’ ಎಂದು ಕರೆಯಲಾಗುತ್ತದೆ. ಮಾಣಿಯ ವೇಷದಲ್ಲಿ ಬಂದ ವಿಷ್ಣುವು ದಾನಶೂರನಾದ ಬಲಿಯಲ್ಲಿ ಭೂಮಿಯನ್ನು ದಾನ ಕೇಳುತ್ತಾನೆ. ಪುರಾಣಗಳಲ್ಲಿ ವಿಷ್ಣುವು ಮೂರು ಪಾದ ಭೂಮಿಯನ್ನು ದಾನ ಕೇಳಿದಾಗ ಮೊದಲ ಹೆಜ್ಜೆಯನ್ನು ಆಕಾಶಕ್ಕೆ, ಎರಡನೇ ಹೆಜ್ಜೆಯನ್ನು ಭೂಮಿ, ಮೂರನೆ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತಳ್ಳುತ್ತಾನೆಂಬ ಕಥೆ ಬರುತ್ತದೆ. ಆದರೆ ತುಳು ಪಾಡ್ದನಗಳಲ್ಲಿ ಬಲಿಗೆ ಸಂಬಂಧಿಸಿದಂತೆ ಅವನು ದೇಶತ್ಯಾಗ ಮಾಡಿ ಹೋಗುತ್ತಾನೆ. ವರ್ಷಕ್ಕೆ ಮೂರು ಬಾರಿ ಅವನು ಆಳುವ ದೇಶಕ್ಕೆ ಬರಲು ಅನುಮತಿ ನೀಡಲಾಗುತ್ತದೆ. ಆಟಿಯ ಅಮವಾಸ್ಯೆ ಅಂದರೆ ಆಷಾಢದ ಅಮವಾಸ್ಯೆ. ಸೋಣೆದ ಸಂಕ್ರಾಂತಿ ಅಂದರೆ ಶ್ರಾವಣದ ಸಂಕ್ರಮಣ. ಸುಗ್ಗಿದ ಕೊಡಿಪರ್ಬ-ಸುಗ್ಗಿಯ ಕೊಡಿಹಬ್ಬ ಅಂದರೆ ದೀಪಾವಳಿಗೆ ಬರಬಹುದೆಂದು ಹೇಳುತ್ತಾನೆ. ಹೀಗೆ ಬಲಿಚಕ್ರವರ್ತಿಯು ದೀಪಾವಳಿಯ ಸಂದರ್ಭದಲ್ಲಿ ಬರುತ್ತಾನೆ ಎಂಬ ನಂಬಿಕೆಯಿದೆ. ಅವನನ್ನು ಬರುವಂತೆ ಕರೆಯುವ ಹಾಡುಗಳು ಕನ್ನಡ ಮತ್ತು ತುಳುವಿನಲ್ಲಿವೆ.
ಹೀಗೆ ದಸರಾದ ಮಹಿಷಾಸುರನಂತೆ ದೀಪಾವಳಿಯಲ್ಲಿ ಬಲಿ ಚಕ್ರವರ್ತಿಯನ್ನು ತಂತ್ರದಿಂದಲೇ ಸೋಲಿಸಲಾಗುತ್ತದೆ. ಒಂದು ರೀತಿಯಲ್ಲಿ ಇದರ ಪ್ರತಿಭಟನಾ ರೂಪಕವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಆರ್ಯ-ದ್ರಾವಿಡ ಸಂಘರ್ಷದ ಒಂದು ಎಳೆಯನ್ನು ಈ ಹಬ್ಬದಲ್ಲೂ ಗುರುತಿಸಬಹುದು. ಕೇರಳದ ಓಣಂನಲ್ಲೂ ಅದು ಪ್ರತಿಫಲಿತವಾಗುತ್ತದೆ.

ತುಳುನಾಡಿನಲ್ಲಿ ಬಲಿಯ ಆಗಮನದ ನಂಬಿಕೆಯಿದ್ದರೂ ದೀಪಾವಳಿ ಒಂದು ಪ್ರಕೃತಿ ಪೂಜೆಯ ಹಬ್ಬ. ಕೃಷಿಗೆ ಸಂಬಂಧಿಸಿದ ಒಂದು ಮಹತ್ವದ ಆಚರಣೆ. ಗದ್ದೆಗಳಿಗೆ ದೀಪ ಇಟ್ಟು ಬಲೀಂದ್ರನನ್ನು ಕರೆಯುವುದು. ಗತಿಸಿಹೋದ ಪಿತೃಗಳ ಪೂಜೆ. ಕೃಷಿ ಸಲಕರಣೆಗಳನ್ನು ಪೂಜಿಸಿ, ಕೃಷಿಗೆ ಆಧಾರವಾಗಿರುವ ಕೋಣ ಎತ್ತು, ದನಗಳನ್ನು ಪೂಜಿಸುವುದು ಈ ಹಬ್ಬದ ಆಚರಣೆಯಾಗಿದೆ. ಗೋವನ್ನು ಮಾತೆಯ ಮಟ್ಟಕ್ಕೆ ಏರಿಸದೆ, ಕೃಷಿಗೆ ನೀಡುವ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬ ದೀಪಾವಳಿ. ಉಳಿದಂತೆ ಕೋಣ, ಎತ್ತು ದನಗಳನ್ನು ಆರ್ಥಿಕ ಉದ್ದೇಶಕ್ಕೆ ಕರಾವಳಿಯ ಜನರು ಕೃತಜ್ಞತೆಯಿಂದ ಕಂಡರೂ, ವ್ಯಾವಹಾರಿಕ ದೃಷ್ಟಿಕೋನವೂ ಇದೆ ಎಂಬುದು ಇತ್ತೀಚಿನವರೆಗೂ ಪ್ರಚಲಿತವಿದ್ದ ಸತ್ಯ.
ಡಾ. ಗಣನಾಥ ಶೆಟ್ಟಿ ಎಕ್ಕಾರು
ಜಾನಪದ ವಿದ್ವಾಂಸರು
ಮೊ: 99645 83433
ಇದನ್ನೂ ಓದಿ- ಸರ್ಕಾರಿ ಶಾಲೆಗಳ ರಕ್ಷಣೆ: ಖಾಸಗೀಕರಣಕ್ಕೆ ತಡೆ!


