ರಾಜಧಾನಿಯಲ್ಲೇ ವರ್ಷಗಳ ಕಾಲ ನಡೆದ ರೈತರ ಹೋರಾಟ ಮತ್ತೆ ಜೆನ್ ಝೀ ಗಳೆನ್ನುವ ಯುವಪಡೆ ಭ್ರಷ್ಟ ವ್ಯವಸ್ಥೆಗೆ ರೋಸಿ ನೇರಾನೇರ ತಿರುಗಿಬಿದ್ದರೂ ಅವರ ಹೋರಾಟವನ್ನು ಮತ್ತು ಹೋರಾಟದ ಮುಂಚೂಣಿಯಲ್ಲಿರುವವರನ್ನೆಲ್ಲ ದೇಶದ್ರೋಹಿಗಳೆಂದು ವ್ಯವಸ್ಥಿತವಾಗಿ ಹಂಗಿಸುವ ಕಾರ್ಯ, ರಸ್ತೆಗಳಿಗೆ ಮೊಳೆ, ಬ್ಯಾರಿಕೇಡ್ ಗೆ ಕರೆಂಟ್, ಅಸ್ತಿತ್ವದ ಉಳಿವಿಗೋಸ್ಕರ ಕುಖ್ಯಾತ ವೋಟ್ ಚೋರಿಯ ವಂಚನೆ ಇತ್ಯಾದಿಗಳೆಲ್ಲಕ್ಕೂ ಇದೀಗ ತೆರೆಬೀಳುವ ಕಾಲ ಬಂದಂತಿದೆ – ಶಂಕರ್ ಸೂರ್ನಳ್ಳಿ, ಬರಹಗಾರರು.
ಕನ್ನಡದ ಹಿರಿಯ ಸಾಹಿತಿ ಪಿ ಲಂಕೇಶ್ ರವರು ಹೇಳಿದಂತಹ ಮಾತಿದು. ಯಾವುದೇ ವಿಚಾರಗಳಾಗಲಿ ಅಥವಾ ವ್ಯಕ್ತಿತ್ವವೇ ಆಗಿರಲಿ ಅದರ ಶಿಖರ ಪ್ರಾಯ ಸೊಬಗಿರುವುದು ಅದರ ಮಹೋನ್ನತ ಹಿನ್ನೆಲೆಯಲ್ಲಿಯೇ ಹೊರತು ಯಾರೋ ಅಥವಾ ಒಂದು ಗುಂಪು ತಮ್ಮ ಸ್ವಾರ್ಥ ಸಾಧನೆಗಾಗಿ ವೈಭವೀಕರಿಸಿ ಮುನ್ನೆಲೆಗೆ ಬಿಟ್ಟ ವಿಚಾರದಲ್ಲಲ್ಲ. ಹಾಗೇನಾದರೂ ಅತಿರಂಜಿತವಾಗಿ ತಮ್ಮ ಕಲ್ಪಿತ ಕಥೆಗಳಿಂದ ಹೊಸೆದು ಸೃಷ್ಟಿಸಿಬಿಟ್ಟ ಇಂತಹ ಜೊಳ್ಳು ಉತ್ಪನ್ನಗಳೇನಾರೂ ಇದ್ದಿದ್ದರೆ ಅದರ ಸಂಭ್ರಮ ಕಾಲ ಇರುವುದು ಕೇವಲ ಅಲ್ಪ ಕಾಲದ್ದು. ವಿಶೇಷವೆಂದರೆ ಈ ’ಭೋಪರಾಕ್”ಗಳ ಕಾರ್ಯಶಾಲೆಗಳಿಂದ ಹುಟ್ಟಿ ಬರುವ ಇಂತವುಗಳನ್ನು ಹೊತ್ತು ಮೆರೆಯಿಸಿದವರೇ ಮುಂದೆ ನಿಸ್ಸಂಕೋಚವಾಗಿ ಇದನ್ನು ಕಸದ ಬುಟ್ಟಿಗೆ ಎಸೆಯುತ್ತಾರೆಂಬುದೇ ಮೇಲಿನ ಈ ಮಾತಿನ ತಾತ್ಪರ್ಯ.
ಭಾರತವೊಂದು ವಿಶಿಷ್ಟ ಪರಂಪರೆಯನ್ನು ಹೊಂದಿರುವಂತಹ ನಾಡು. ಸಾವಿರಾರು ವರ್ಷಗಳಿಂದ ತೀರಾ ವಿಭಿನ್ನವಾದ ಸಂಸ್ಕೃತಿ ಕಟ್ಟುಪಾಡುಗಳನ್ನು ಅನುಸರಿಸುತ್ತಿರುವ ಹಲವಾರು ಬಗೆಯ ಜನ ಸಮುದಾಯಗಳು ಒಟ್ಟಾಗಿ ಬಾಳಿ ಬದುಕಿದ್ದ ನಾಡಿದು. ಏಕ ಸಂಸ್ಕೃತಿಯ ಒತ್ತಾಯ ಪೂರ್ವಕ ಹೇರಿಕೆಯನ್ನು ಈ ನಾಡು ಎಂದೂ ಒಪ್ಪಿಕೊಂಡಿಲ್ಲ. ಪ್ರಭುತ್ವದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ದೀರ್ಘ ಕಾಲ ಆಳಿದ ಬೌದ್ಧಾನುಯಾಯಿ ರಾಜರು, ಇಸ್ಲಾಮಿ ನಂಬಿಕೆಯ ಮೊಗಲರು, ಕ್ರಿಶ್ಚಿಯಾನಿಟಿಯ ಬ್ರಿಟಿಷರುಗಳ್ಯಾರೇ ಇದ್ದರೂ ಭಾರತದ ಬಹುತ್ವದ ಪರಂಪರೆಗೆ ಚ್ಯುತಿ ಬಂದಿರಲಿಲ್ಲ. ಇಲ್ಲಿನವರ ಆಚಾರ ವಿಚಾರ, ಭಾಷೆ, ಆಹಾರ ಪದ್ಧತಿ, ಉಡುಗೆ ತೊಡುಗೆ ಎಲ್ಲವೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆಯೇ ಹೊರತು ಯಾವುದನ್ನೂ ಕೂಡ ಏಕ ಸಿದ್ಧಾಂತದಡಿಯಲ್ಲಿ ನಿರ್ಬಂಧಿಸಲಾಗಿಲ್ಲ. ಅದೇ ಭಾರತದ ಮೂಲ ಚಹರೆ. ಅದು ಬದಲಾದರೆ ಭಾರತವೂ ಬದಲಾದಂತೆ. ಹಾಗಾದರೆ ನೆರೆಯ ಪಾಕಿಸ್ತಾನಕ್ಕೂ ನಮಗೂ ಯಾವ ವ್ಯತ್ಯಾಸವೂ ಇರದು.
ದಂತಕಥೆಯೊಂದರ ಪ್ರಕಾರ ಏಳೆಂಟು ದಶಕಗಳ ಹಿಂದೆ ದಕ್ಷಿಣ ಏಷ್ಯಾದ ನಾಡೊಂದರಲ್ಲಿ ಅಂಧಕಾರದಲ್ಲಿ ಮುಳುಗಿದ್ದ ಜನರು ಮೈ ಮೇಲೆ ಬಟ್ಟೆಗಳಿಲ್ಲದೆ ಸೊಪ್ಪುಗಳನ್ನೇ ಸೊಂಟಕ್ಕೆ ಕಟ್ಟಿಕೊಂಡು ಹ್ಹು.. ಹ್ಹೂ.. ಎಂದು ಕುಣಿಯುತ್ತ ಅದರಲ್ಲೇ ಸುಖ ಸಂತೃಪ್ತಿಯನ್ನು ಕಂಡು ಆರಾಮವಾಗಿದ್ದರು. ಅಂಥಾ ದೇಶಕ್ಕೆ ಅಚ್ಚೇ ದಿನ್ ಸೌಭಾಗ್ಯಗಳ ಮೂಲಕ ಜರಿ ಜರಿಯ ದಿರಿಸುಗಳನ್ನು ತೊಡಿಸುವ ಸದುದ್ದೇಶಗಳಿಂದ ಪ್ರೇರಿತರಾದ ಕೆಲ ಮಂದಿ ದೇವಾಂಶ ಸಂಭೂತ ಮಹಾಮಾನವರೊಬ್ಬರನ್ನು ಸೃಷ್ಟಿಸಿ ದೇಶೋದ್ಧಾರ ಕಾರ್ಯಕ್ಕೆ ಹೊರಟಿತ್ತು.

ಅದೇನೋ ಪರಂಗಿಗಳು ಬಿಟ್ಟು ಹೋದ ಮೇಲೆ ದೇಶ ಆಳಿದಂತವರು ಮಾಡಿದ್ದು ಬರೀ ನಿದ್ದೆ ಬಿಟ್ಟರೆ ಬೇರೇನಿಲ್ಲವಂತೆ. ಕೆಲವರ ಪ್ರಕಾರ ಪರಂಗಿಗಳು ದೇಶ ಬಿಟ್ಟಿದ್ದರೂ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಈ ಮಾ. ಮಾನವರ ಅವತಾರದ ಬಳಿಕ 2014ರ ಮೇಲಂತೆ. ಅವರು ಹೇಳಿದಂತೆ ಚಿನ್ನದ ರಸ್ತೆಗಳು, ಡಾಲರ್ ಬೆಲೆಗೆ ನಮ್ದು ನೋಟು, ಬುಲ್ಲೆಟ್ ಟ್ರೇನು ಎಲ್ಲವೂ ಚಕಚಕಾಂತ ಮುಂದೆ ಆದವು.
ಇಲ್ಲಿ ಗಮನಿಸಲೇ ಬೇಕಾದ ಸಂಗತಿಯೆಂದರೆ ಈ ಕಥಾನಾಯಕನ ಮಹಾನ್ ಚಕಾಚಕ್ ಶಕ್ತಿಯ ಹಿಂದಿದ್ದದ್ದು ಹೊಸದಾಗಿ ಸೃಷ್ಟಿಸಲ್ಪಟ್ಟ ಅಂಧಪಡೆಯ ಅಡವಿಟ್ಟ ಬ್ರೇನುಗಳು ಎಂಬುದು. ಇವರ ಅಂಧಾನುಕರಣೆಯ ಚಪ್ಪಾಳೆಗಳೇ ಮಾ. ಮಾನವರಿಗೆ ಮಹಾ ಟಾನಿಕ್. ಎಲ್ಲಾ ದೋಷಕ್ಕೂ ನೆಹರೂ ಕಾರಣ, ಮುಂಚೆ ಇದ್ದವರೆಲ್ಲ ಲೂಟಿಕೋರರು. ಈಗ ಅವರ ನಾಯಕನೆಂದು ಬಿಂಬಿತವಾದವನೋ ಯಾವುದಕ್ಕೂ ಯೋಗ್ಯನಲ್ಲದ ಮಹಾ ಪೆದ್ದ ಎಂದೆಲ್ಲ ಕೇವಲ ಮಾ. ಮಾನವನಿಗೋಸ್ಕರವಾಗಿ ಚಂದಮಾಮದ ಕಟ್ಟುಕಥೆಗಳನ್ನೆಲ್ಲ ಸ್ಥಾಪಿಸಲಾಯಿತು.
ಮಾ ಮಾನವರ ಪಡೆಗಳು ಎಷ್ಟೇ ಉಘೇ.. ಉಘೇ.. ಅಂದರೂ ತನ್ನದೇ ಅಸಲಿಯತ್ತು ಈ ಮಾ ಮಾನವರಿಗೆ ತಿಳಿದೇ ಇತ್ತು. ಈ ಕಾರಣಕ್ಕೆ ಸಣ್ಣ ಪುಟ್ಟ ಚುನಾವಣೆಗೂ ತಾಲೂಕು ಪಂಚಾಯತ್ ಮೆಂಬರ್ ತರಹ ಗಲ್ಲಿ ಗಲ್ಲಿ ಸುತ್ತಿಕೊಂಡು ಆ ಮೂಲಕ ತಾನಿನ್ನೂ ಓಟು ಗೆಲ್ಲೋ ಮಟ್ಟಿಗಿನ ಜನಪ್ರಿಯನೆಂದು ತೋರಿಸಿಕೊಳ್ಳೋ ಅನಿವಾರ್ಯತೆ ಅವರಿಗಿತ್ತು.
ತಮ್ಮ ಅಧೀನದ ಈಡಿ, ಸಿಬಿಐ, ಐಟಿಗಳ ಮೂಲಕ ಹೆದರಿಸಿ ಬೆದರಿಸಿ ಅನ್ಯಪಕ್ಷದ ಕಳಂಕಿತ ನಾಯಕರನ್ನು ತಮ್ಮ ಡಿವೈನ್ ವಾಷಿಂಗ್ ಮಷಿನ್ ಪ್ರಕ್ರಿಯೆ ಮೂಲಕ ಶುದ್ಧೀಕರಿಸಿ ಸೇರಿಸಿಕೊಳ್ಳೋದು, ಆ ಪ್ರಸಿದ್ಧ ನಟರುಗಳು ನಮ್ಮ ಮಾ ಮಾನವ ರ ಬಗ್ಗೆ ಹೀಗೆ ಹೊಗಳಿದ್ದರು, ಪುಟಿನ್ ಹೀಗೆ ಹೊಗಳಿದ್ದ ಎಂದು ಜಾಲತಾಣಗಳಲ್ಲಿ ಐಟಿ ಸೆಲ್ ಗಳ ಮೂಲಕ ಬಿಲ್ಡಪ್ ಹಬ್ಬಿಸೋದು, ನಗೆಪಾಟಲಾದ ’ಉಕ್ರೇನ್ ವಾರ್ ರುಖ್ವಾದಿ ಪಾ.. ಪಾ.. “ ಎಂಬ ಜಾಲತಾಣಗಳ ಹಸಿ ಹಸಿ ಸುಳ್ಳು ಸುದ್ದಿಗಳು, ಚುನಾವಣಾ ವೇಳೆಯಲ್ಲಿ ವಿರೋಧ ಪಕ್ಷದವರ ಅಕೌಂಟ್ ಸೀಜ್ ಮಾಡಿಸೋದು, ಪ್ರಾದೇಶಿಕ ಚುನಾವಣೆಗಳಿಗೆ ತಕ್ಕಂತೆ ಪೇಟ, ವಸ್ತ್ರಗಳಿಂದ ಹಿಡಿದು ಮೈ ಬಣ್ಣದ ಬದಲಾವಣೆಯ ತನಕದ ಬಲೇ ನಾಟಕೀಯ ಅವತಾರಗಳು, ಹತ್ತಿರದಲ್ಲಿ ಯಾವ ಚುನಾವಣೆಗಳ ವಾಸನೆ ಇರದಿದ್ದರೂ ಫೇಕ್ ಸಮೀಕ್ಷೆಗಳ ಮೂಲಕ ನಮ್ಮ ಮಾ. ಮಾನವರು ಈವಾಗಲೂ ವಿಶ್ವದ ನಂಬರ್ ಒನ್ನೇ ಎನ್ನುವ ಮರಳು ಸಮೀಕ್ಷೆಗಳೆಲ್ಲ ಅಸಲೀ ಜೊಳ್ಳುತನಕ್ಕೆ ಸಾಕ್ಷಿಗಳೇ ಆಗಿವೆ.
ಅಲ್ಲಿ ರಾಜಧಾನಿಯಲ್ಲೇ ವರ್ಷಗಳ ಕಾಲ ನಡೆದ ರೈತರ ಹೋರಾಟ ಮತ್ತೆ ಜೆನ್ ಜೀಗಳೆನ್ನುವ ಯುವಪಡೆ ಭ್ರಷ್ಟ ವ್ಯವಸ್ಥೆಗೆ ರೋಸಿ ನೇರಾನೇರ ತಿರುಗಿಬಿದ್ದರೂ ಅವರ ಹೋರಾಟವನ್ನು ಮತ್ತು ಹೋರಾಟದ ಮುಂಚೂಣಿಯಲ್ಲಿರುವವರನ್ನೆಲ್ಲ ದೇಶದ್ರೋಹಿಗಳೆಂದು ವ್ಯವಸ್ಥಿತವಾಗಿ ಹಂಗಿಸುವ ಕಾರ್ಯ, ರಸ್ತೆಗಳಿಗೆ ಮೊಳೆ, ಬ್ಯಾರಿಕೇಡ್ ಗೆ ಕರೆಂಟ್, ಅಸ್ತಿತ್ವದ ಉಳಿವಿಗೋಸ್ಕರ ಕುಖ್ಯಾತ ವೋಟ್ ಚೋರಿಯ ವಂಚನೆ ಇತ್ಯಾದಿಗಳೆಲ್ಲಕ್ಕೂ ಇದೀಗ ತೆರೆಬೀಳುವ ಕಾಲ ಬಂದಂತಿದೆ.
ಅದಕ್ಕೂ ಮುಖ್ಯವಾಗಿ ಕೋಟಿ ಕೋಟಿ ಖರ್ಚು ಮಾಡಿ ಎಷ್ಟೇ ಅಪಪ್ರಚಾರ ನಡೆಸಿದರೂ ವಿರೋಧಿ ನಾಯಕನ ಕುರಿತಂತೆ ಹೆಚ್ಚುತ್ತಿರುವ ಜನರ ಒಲವುಗಳಲ್ಲಿನ ಬದಲಾವಣೆಯ ಮುಂತಾದವುಗಳ ವಾಸನೆ ಹಿಡಿದ ಮಂದಿ ಮೊನ್ನೆ ಮೊನ್ನೆ ಅತ್ಯಾಧುನಿಕ AI ತಂತ್ರಜ್ಞಾನದ ಮೂಲಕ ಮರಣಿಸಿದ ಅಧ್ಯಾತ್ಮಿಕ ವ್ಯಕ್ತಿಯಿಂದ ಹೊಗಳಿಸಿಕೊಳ್ಳುವ ಕಾರ್ಯಕ್ಕಿಳಿದು ನಗೆಪಾಟಲಿಗೀಡಾಗುವಂತಹ ಪರಿಸ್ಥಿತಿ ತಂದು ಕೊಂಡಿರುವುದು ತೀರಾ ಅಸಹ್ಯಕರ.
ಒಟ್ಟಾರೆ, ’ಚಪ್ಪಾಳೆ’ಯಿಂದಾದ ಈ ಜೊಳ್ಳು ಸೃಷ್ಟಿಯ ಅಸಲಿಯತ್ತು ನಿಧಾನಕ್ಕಾದರೂ ಜನರಿಗೆ ಅರಿವಾಗುತ್ತಲಿದೆ. ಮಾ. ಮಾನವರ ಒಡೆಯರುಗಳಿಗೂ ಕೂಡ ಅದರ ಅರಿವಿದ್ದು ಅಂಧಪಡೆ ಬಿಟ್ಟರೆ ಅವರ ಅಸಲಿ ನಾಯಕರ ಬೆಂಬಲವೂ ಈಗ ಮೊದಲಿನಂತಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ನಂತಹ ತಮ್ಮ ಸಿದ್ಧಾಂತ ಪರ ಮಾಧ್ಯಮವೇ ಮೊನ್ನೆ ಮೊನ್ನೆ ಭಾರಿ ಬಾಂಬ್ ಹಾಕಿ ಅಲ್ಲೋಲ ಕಲ್ಲೋಲಕ್ಕೇ ಕಾರಣವಾಗಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ
ಇದನ್ನೇ ಅಲ್ಲವೇ ಲಂಕೇಶರು “ಚಪ್ಪಾಳೆಯಿಂದ ಹುಟ್ಟಿದ್ದರ ಅಂತ್ಯ ಚಪ್ಪಾಳೆಯಿಂದಲೇ..“ ಅಂದಿದ್ದು.
ಶಂಕರ್ ಸೂರ್ನಳ್ಳಿ
ಬರಹಗಾರರು.
ಇದನ್ನೂ ಓದಿ- ಉರಿಯುವ ನೆರಳಿನ ಆತ್ಮ ಕಥನ ‘ಆಫ್ಟರ್ ಶಾಕ್’


