“ಉದ್ದ ಕಪ್ಪು ಕೂದಲು ಅವಳ ಬೆನ್ನ ಹಿಂದೆ ಗಾಳಿಯಲ್ಲಿ ಹಾರಾಡುತ್ತಿತ್ತು. ಅವಳು ಚಂದ್ರನ ಬೆಳಕಿನಲ್ಲಿ ಸಮುದ್ರ ಮತ್ತು ಆಕಾಶ ಸೇರುವಲ್ಲಿ ಅಸದೃಶ್ಯ ಹಡಗಿನಲ್ಲಿ ಕೂತು ಮರೆಯಾದಳು.”
ತನ್ನ ತಾಯಿಯ ಬಗ್ಗೆ ಬ್ರೂಕ್ಲಿನ್ ಮೂಲದ ಆಫ್ರಿಕನ್ ಅಮೇರಿಕನ್ ಲೇಖಕಿ ನಾಡಿಯಾ ಓಸುವಾ ಅವರ ಮಾತಿದು. ಈಕೆ ತನ್ನ ಮೊದಲ ಕೃತಿ ಆಫ್ಟರ್ ಶಾಕ್ ಗೆ ಪ್ರಸಿದ್ಧ ವೈಟ್ ಆವಾರ್ಡ್ ಪ್ರಶಸ್ತಿ ಪಡೆದವರು. ನಾಡಿಯಾ ತನ್ನ ಅನುಭವಕ್ಕೆ ದಕ್ಕಿದ ಭೂಕಂಪದ ಅನುಭವಗಳನ್ನು ತನ್ನ ಬದುಕಿನೊಂದಿಗೆ ಸಮೀಕರಿಸುತ್ತ ಬರೆದಿರುವ ಈ ಕೃತಿ ಏಕಕಾಲಕ್ಕೆ ನಾಡಿಯಾಳ ಕಥೆ ಮಾತ್ರವಾಗದೆ, ಆಫ್ರಿಕನ್ ಅಮೇರಿಕನ್ ಮೂಲದ ಹೆಣ್ಣು ಮಗಳ ಕಣ್ಣುಗಳಲ್ಲಿ ಮೂಡಿದ ಎರಡನೇ ಮಹಾಯುದ್ಧದ ನಂತರದ ವಿಶ್ವದ ಕಥನವಾಗಿ ಮುಖ್ಯವಾಗುತ್ತದೆ. ಮೌಂಟೈನ್ ವ್ಯೂ ನ MFA ಪ್ರೋಗ್ರಾಂ ನಲ್ಲಿ ಸೃಜನೇತರ ಸಾಹಿತ್ಯವನ್ನು ಪಾಠ ಮಾಡುವ ಈಕೆ ಪ್ರಸ್ತುತ ಅರ್ಬನ್ ಪ್ಲಾನರ್ ಹಾಗೂ economic racial justice organization ನ ಆಸೋಸಿಯೇಟ್ ಡೈರೆಕ್ಟರ್ ಕೂಡ ಆಗಿದ್ದಾರೆ.
ನಾಡಿಯಾ ತನ್ನ ಬಾಲ್ಯವನ್ನು ರೋಮ್, ಅಡ್ಡಿಸ್ ಅಬಾಬಾ, ಕಂಪಲ, ದಾರ್ ಎಸ್ ಸಲಾಂ, ಕುಮಸಿ ಮತ್ತು ಲಂಡನ್ ನಲ್ಲಿ ಕಳೆದರು.“ವರ್ಣ ಬೇಧ ಇರುವ ಸಮಾಜದಲ್ಲಿ ನೀನು ಬಿಳಿಯರ ಅರ್ಧ ದಷ್ಟು ದೂರ ತಲುಪಲು ಅವರು ಶ್ರಮಿಸುವುದಕ್ಕಿಂತ ಎರಡು ಪಾಲು ಹೆಚ್ಚು ದುಡಿಯಬೇಕು. ಅದರಲ್ಲೂ ನೀನು ಹೆಣ್ಣು” ಎಂದು ನಾಲ್ಕು ವರ್ಷದ ಹುಡುಗಿಗೆ ನಾಡಿಯಾಳ ಅಪ್ಪ ಹೇಳುತ್ತಿದ್ದ ಪಾಠವಿದು. ತನ್ನ ಬುಡಕಟ್ಟು ಮೂಲದ ಜಾಝ್ ಸಂಗೀತ ವನ್ನು ನಾಡಿಯಾಳ ಅಪ್ಪ ಸದಾ ಇಷ್ಟ ಪಟ್ಟು ಕೇಳುತ್ತಿದ್ದರು. ಮಾತ್ರವಲ್ಲ ಮಗಳು ನಾಡಿಯಾಳಿಗೆ ದಿನನಿತ್ಯದ ಸ್ಟ್ರೆಸ್ ಕಡಿಮೆ ಮಾಡುವ ಈ ಹಾಡನ್ನು ಕಲಿಯುವಂತೆ ಹೇಳುತ್ತಿದ್ದರು. ಆದರೆ ಆಗ ಇದೆಲ್ಲ ಅರ್ಥವಾಗದಿದ್ದರೂ ತನ್ನ ಹರೆಯದಲ್ಲಿ ಆತ ತೀರಿಕೊಂಡ ನಂತರ ಅವಳಿಗೆ ಅಪ್ಪನ ಒಡನಾಟದ ಈ ನೆನಪುಗಳು ಜೀವನ ಪಾಠವಾಗಿ ಕೈ ಹಿಡಿದು ಮುನ್ನಡೆಸಿದವು.
ನಾಡಿಯಾಳ ತಾಯಿ ಆಲ್ಮಾ ಜಾನಿಕಿಯನ್ ಅರ್ಮೇನಿಯನ್ ಅಮೇರಿಕನ್ ಮೂಲದವರು. 1915-17 ರ ದಂಗೆಯಲ್ಲಿ ಟರ್ಕಿಯಿಂದ ಓಡಿ ಹೋಗಿ ವಾಟರ್ ಟೌನ್ ಮಸಾಚುಸೆಟ್ಟ್ಸ್ ನಲ್ಲಿ ನೆಲೆ ಕಂಡವರು ಆಲ್ಮಾಳ ಹೆತ್ತವರು. ತಂದೆ ಓಸೆಯಿ ಓವುಸು ಆಫ್ರಿಕನ್ ಆಸಾನಿ ಬುಡಕಟ್ಟು ಮೂಲದವರು. ಘಾನ ದಲ್ಲಿ ಹುಟ್ಟಿ ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆದು ಯು. ಎನ್. ಏಜನ್ಸಿ ಯಲ್ಲಿ ಕೆಲಸದಲ್ಲಿದ್ದರು. ಬಿಳಿಯರಿಂದ‘’ ನಿಗ್ಗರ್ ‘’ ಎಂದು ಬೈಸಿಕೊಂಡ ಅನುಭವವಿದ್ದೂ ಅರ್ಮೆನಿಯನ್ ಅಮೇರಿಕನ್ ಹುಡುಗಿ ಆಸ್ಮಾಳನ್ನು ಪ್ರೀತಿಸಿ ಮದುವೆಯಾದವ. ಈ ಕಾರಣಕ್ಕೆ ತನ್ನ ಕುಟುಂಬದಿಂದ ಮಾನಸಿಕವಾಗಿ ದೂರವಾಗಿ ಎರಡು ಹೆಣ್ಣು ಮಕ್ಕಳ ತಂದೆಯಾದವರು. ನಂತರ ಮಡದಿ ಆಸ್ಮಾ ತನ್ನನ್ನೂ, ಮಕ್ಕಳನ್ನು ತೊರೆದಾಗ ಯು.ಎನ್.ಏಜನ್ಸಿಯ ತನ್ನ ಅಲೆಮಾರಿ ಕೆಲಸದಲ್ಲಿ ಮಕ್ಕಳ ಲಾಲನೆ ಪಾಲನೆ ಕಷ್ಟವಾಗುತ್ತದೆಯೆಂದು ಇಂಗ್ಲೆಂಡ್ ನಲ್ಲಿದ್ದ ಅಕ್ಕ ಹೆರಿಯೆಟ್ ಜೊತೆಗೆ ಮಕ್ಕಳನ್ನು ಬಿಟ್ಟಿದ್ದರು. ಎರಡು ವರ್ಷಗಳ ನಂತರ ಆಫ್ರಿಕಾ ಮೂಲದ ಆನಬೆಲ್ ಳ ಜೊತೆ ಮದುವೆಯಾಗಿ ಹೆಂಡತಿ ಮಕ್ಕಳ ಜೊತೆ ಇಟೆಲಿ, ತಾನ್ಝಿನಿಯಾ, ಇಥಿಯೋಪಿಯ, ಉಗಾಂಡ ಎಂದು ಕೆಲಸದ ಕಾರಣಕ್ಕೆ ನೆಲೆಸಿದ್ದರು. ಆಗೆಲ್ಲ ಮಲತಾಯಿಯ ಜೊತೆ ನಾಡಿಯಾ ಜಗಳ ವಾಡುತ್ತಿದ್ದಳು. ಪುಟ್ಟ ನಾಡಿಯಾ ಮನಸ್ಸಿನಲ್ಲಿ ತಂದೆ ಮತ್ತು ತನ್ನ ನಡುವಿನ ಬಾಂಧವ್ಯಕ್ಕೆ ಮಲತಾಯಿ ಅಡ್ಡಿಯಾಗುತ್ತಿದ್ದಾಳೆ ಎನ್ನುವ ಸುಪ್ತ ಪ್ರಜ್ಞೆ ಕಾರಣವಾಗಿತ್ತು ಎಂದು ತಿಳಿದದ್ದು ಆಕೆ ವಯಸ್ಕಳಾದ ನಂತರ ತನ್ನ ಇರಿಸು ಮುರಿಸುಗಳನ್ನು ನಿಭಾಯಿಸಲು ಮನಶಾಸ್ತ್ರದ ಮೊರೆ ಹೋದ ನಂತರ.

ಅಲೆಮಾರಿಯಾಗಿ ತಾಯಿಯ ಜೊತೆಗಿಲ್ಲದೆ ಕಳೆದ ಬಾಲ್ಯ ನಾಡಿಯಾಳಲ್ಲಿ ಅನಾಥ ಪ್ರಜ್ಞೆ ಮೂಡಿಸಿತ್ತು. ಈಕೆ ತನ್ನ ಹದಿಮೂರರ ಹರೆಯದಲ್ಲಿ ಕ್ಯಾನ್ಸರ್ ನಿಂದ ತಂದೆಯನ್ನೂ ಕಳೆದು ಕೊಂಡಳು. ತಂದೆಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಹುಡುಗಿ ಆ ನಂತರ ತನ್ನ ಸುತ್ತಲ ಪ್ರಪಂಚವನ್ನು ದ್ವೇಷಿಸುವ ಮನ ಸ್ಥಿತಿಯವಳಾಗಿದ್ದಳು. ಆದರೆ ಆತನ ಹೆಂಗರುಳು ನೀಡಿದ್ದ ಜೀವಧಾತು ಸವಾಲುಗಳನ್ನು ಎದುರಿಸಿ ಬದುಕುವ ಛಾತಿ ನೀಡಿತ್ತು. ತನ್ನ ಮಕ್ಕಳ ಸಂದರ್ಭದಲ್ಲಿ ಫೆಮಿನಿಸ್ಟ್ ಆಗಿದ್ದ ಅವನ ಕನಸುಗಳು ಮಗಳಿಗೆ ದಾರಿ ದೀಪವಾಗಿತ್ತು. ತನ್ನ ಹೆಂಡತಿಯರ ಜೊತೆ ಆತ ಹೇಗೆ ನಡೆದುಕೊಳ್ಳುತ್ತಿದ್ದ, ತನ್ನ ತಾಯಿ ಅವನಿಂದ ಯಾಕೆ ದೂರವಾದಳು ಎನ್ನುವುದು ನಾಡಿಯಾಗೆ ಆಗ ಮುಖ್ಯ ಅನ್ನಿಸುವ ವಯಸ್ಸು ಆಗಿರಲಿಲ್ಲ. ತನ್ನ ನೆನಪುಗಳನ್ನೂ ಕೃತಿಯ ಉದ್ದಕ್ಕೂ ಆಕೆ ನಿರೂಪಿಸುತ್ತ ಸಾಗುವ ರೀತಿ, ಬಳಸಿರುವ ತಂತ್ರ ಕುತೂಹಲಕಾರಿಯಾಗಿದೆ.
ಶಿಕ್ಷಣ, ಕುಟುಂಬ ಮತ್ತು ಸಾಮಾಜಿಕ ನ್ಯಾಯದ ಪರ ತುಡಿಯುತ್ತ ಬದುಕಿದ್ದ ತಂದೆ ನೀಡಿದ್ದ ಸಂಸ್ಕಾರ ನಾಡಿಯಾಗೆ ಬದುಕಿನ ಬುತ್ತಿಯಾಗಿತ್ತು. ಹೀಗಿದ್ದೂ ತನ್ನ ಮೈ ಬಣ್ಣ ಮತ್ತು ಭಾಷೆಯ ಉಚ್ಛಾರ ಇಟೆಲಿ, ತಾನ್ಝಿನಿಯಾ, ಇಥಿಯೋಪಿಯ, ಉಗಾಂಡ, ರೋಮ್, ಅಡ್ಡಿಸ್ ಅಬಾಬಾ, ಕಂಪಲ, ದಾರ್ ಎಸ್ ಸಲಾಂ, ಕುಮಸಿ, ಲಂಡನ್ ಮತ್ತು ಅಮೇರಿಕಾದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನಾಡಿಯಾಗೆ ಅನುಭವ ಕಲಿಸಿತ್ತು. ಮಿಶ್ರ ತಳಿಯ ಮಕ್ಕಳು ಬುದ್ಧಿವಂತರಿರುತ್ತಾರೆ ಎನ್ನುವ ಹೇಳಿಕೆಗಳನ್ನು ನಾಡಿಯಾ ಕೇಳುತ್ತ ಬೆಳೆದವಳು. ಆದರೆ ಓದು ಮುಗಿಸಿ ಕೆಲಸಕ್ಕಾಗಿ ಅಲೆಯುವಾಗ ಆದ ಅನುಭವ ಭಿನ್ನ ವಾಗಿತ್ತು. ವರ್ಣ ಭೇದ ಇರುವ ಸಮಾಜದಲ್ಲಿ ಸರಾಸರಿ ಅತ್ಯುತ್ತಮ ಅಭಿವೃದ್ಧಿ ಅಂಕ ಗಳಿದ್ದರೂ ನಾಡಿಯಾ ತನ್ನ ಅರ್ಹತೆಯ ಮೇಲೆ ಕೆಲಸ ಪಡೆಯಲು ಕನಿಷ್ಟ 40 ಇಂಟರ್ ವ್ಯೂ ಗಳನ್ನು ಎದುರಿಸಿದ್ದಳು. ಆಗ ಅವಳಿಗೆ ತನ್ನ ಕ್ಲಾಸ್ ಮೇಟ್ಸ್ ಗಳು ಬೆನ್ನ ಹಿಂದೆ ತನ್ನನ್ನು ‘ಸುಟ್ಟ ಬಿಸ್ಕೆಟ್’ ಎಂದು ಗೇಲಿ ಮಾಡುತ್ತಿದ್ದದ್ದು, ಸಹಪಾಠಿ ಬಿಳಿ ಹುಡುಗನೊಬ್ಬ ಕರಿಯಳೆಂಬ ಕಾರಣಕ್ಕೆ ಆಟದ ವೇಳೆ ತನ್ನ ಕೈ ಹಿಡಿಯಲು ನಿರಾಕರಿಸಿದ್ದು ನೆನಪಾಗುತ್ತಿತ್ತು.
ಬಾಲ್ಯದಲ್ಲಿ ಲಂಡನ್ ನ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯ ತರಗತಿಯಲ್ಲಿ ನಾಡಿಯಾ ಮತ್ತು ಅಗಾಥ ಇಬ್ಬರೇ ಕರಿಯರಿದ್ದರು. ಅವರಿಬ್ಬರನ್ನೂ ದೂರವಿರಿಸಿದ್ದ ಉಳಿದ ಬಿಳಿಯ ಸಹಪಾಠಿಗಳು ನಾಡಿಯಾ ಅಮೇರಿಕನ್ ಎಂದು ಹೇಳಿಕೊಂಡ ಮೇಲೆ ಆಕೆಯನ್ನು ಅವರು ಜೊತೆಗೆ ಸೇರಿಸಿಕೊಂಡರು ಎನ್ನುವುದನ್ನು ಇಲ್ಲಿ ಸ್ಮರಿಸುತ್ತಾಳೆ. ಆ ಬಿಳಿಯ ಮಕ್ಕಳ ಜೊತೆ ಬೆರೆಯಲು ತಾನು ಅಗಾಥಳ ಜೊತೆ ಅಂತರವಿಟ್ಟು ಕೊಂಡದ್ದು ಸಮಾಜ ಜೀವಿಯಾದ ಮನುಷ್ಯ ಜಾತಿ ತಾನು ಹುಟ್ಟುತ್ತಲೇ ಬದುಕುವ ಅಸ್ತಿತ್ವಕ್ಕಾಗಿ ಎಲ್ಲರೊಳು ಒಂದಾಗುವ ನಾಜೂಕುತನವನ್ನು ಮೈಗೂಡಿಸಿಕೊಳ್ಳುವ ಪರಿಯ ಬಗ್ಗೆ ವಿಸ್ಮಯ ಮೂಡುತ್ತದೆ. ತಾನು ದೇವತಾ ಸ್ವರೂಪಿ ತನ್ನ ತಂದೆ ಎಂದು ತಿಳಿದಿದ್ದ ಮನುಷ್ಯ ಏಡ್ಸ್ ನಿಂದ ತೀರಿ ಕೊಂಡರು ಎನ್ನುವ ಸತ್ಯ ಆತ ತೀರಿ ಕೊಂಡ ಕೆಲವು ವರ್ಷಗಳ ನಂತರ ಮಲತಾಯಿಯ ಮೂಲಕ ತಿಳಿದಾಗ ವಿಚಲಿತಗೊಂಡ ನಾಡಿಯಾ ತನಗೆ ಆದ ಆಘಾತದಿಂದ ಚೇತರಿಸಿಕೊಳ್ಳಲು ದೀರ್ಘ ಕಾಲ ಬೇಕಾಯ್ತು. ಇದು ಓರ್ವ ವ್ಯಕ್ತಿ ಏಕಕಾಲದಲ್ಲಿ ಹೊಂದಿರುವ ಮುಖ ಚಹರೆಯ ಕಡೆ ಬೆಳಕು ಚೆಲ್ಲುತ್ತದೆ. ಯಾವುದೇ ದೇಶ ಕಾಲಗಳೂ ಬದಲಾಯಿಸಲಾಗದ ವಾಸ್ತವಗಳು ಸಮಾಜ ಮತ್ತು ಕುಟುಂಬದೊಳಗೆ ಹೆಣ್ಣು ಮಕ್ಕಳ ಸೂಕ್ಷ್ಮ ನೋಟಕ್ಕೆ ಮಾತ್ರ ದಕ್ಕಬಹುದಾದ ಕೆಲವು ಸಂವೇದನೆಗಳು (ನಾಡಿಯಾಳ ತಾಯಿ, ಅಜ್ಜಿ ಮಲತಾಯಿ ಹಾಗೂ ಕುಟುಂಬದ ಇತರ ಮಹಿಳೆಯರ ಬದುಕು ನಾಡಿಯಾ ಗ್ರಹಿಕೆಯಲ್ಲಿ) ಕೃತಿಯಲ್ಲಿರುವುದು ಮತ್ತೊಂದು ಗಮನಾರ್ಹ ಅಂಶ.
ತಂದೆಯ ಜೊತೆ ತಿರುಗಾಟದಲ್ಲಿ ಯುದ್ಧ ಮತ್ತು ಬಡತನವನ್ನು ಕಣ್ಣಳತೆ ದೂರದಲ್ಲಿ ಕಂಡಿದ್ದ ನಾಡಿಯಾ ಹೈಸ್ಕೂಲ್ ಕೊನೆಯ ಹಂತದಲ್ಲಿ ಕಮ್ಯುನಿಟಿ ಪ್ರಾಜೆಕ್ಟ್ ಸಲುವಾಗಿ ಆಸ್ಪತ್ರೆಯಲ್ಲಿ ಅರುವತ್ತು ಘಂಟೆ ಕೆಲಸ ಮಾಡುವಾಗ ಉಗಾಂಡ ಮತ್ತು ಇಥಿಯೋಪಿಯಾದಲ್ಲಿ ಪುಟ್ಟ ವಯಸ್ಸಿನ ಹೆಣ್ಣು ಮಕ್ಕಳು ಲೈಂಗಿಕ ವೃತ್ತಿ ನಿರತರಾಗಿ ಏಡ್ಸ್ ರೋಗಿಗಳಾದವರನ್ನು, ಮಾನಸಿಕ ರೋಗಿಗಳನ್ನು ಭೇಟಿಯಾದಳು. ಅಪ್ಪ ಕೆಲಸ ಮಾಡುತ್ತಿದ್ದ ಸಂಸ್ಥೆಯಾದ ಯು.ಎನ್.ಏಜನ್ಸಿ ಸಹೋದ್ಯೋಗಿಗಳ ಮಕ್ಕಳ ಜೊತೆ ಮೋಜು ಮಸ್ತಿಯಲ್ಲಿ ಆರಾಮದಲ್ಲಿರುವಾಗ ತಮ್ಮ ಮನೆಕೆಲಸಕ್ಕೆ ಬರುತ್ತಿದ್ದ ಸ್ಥಳೀಯರ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಸೈನ್ಯಕ್ಕೆ ಬಲಾತ್ಕಾರದಲ್ಲಿ ಸೇರಿಸುವುದನ್ನು ಕಂಡಳು. ಆಗ ನಾಡಿಯಾಗೆ ಯುದ್ಧ ತಮ್ಮ ದಿನ ನಿತ್ಯದ ಚಟುವಟಿಕೆ ಗಳಿಗೆ ಅಡ್ಡಿ ಮಾಡಿದಾಗ ಸಿಟ್ಟು ಬರಿಸುತಿತ್ತು, ಉಳಿದಂತೆ ರಸ್ತೆ ಬದಿ , ಬಸ್ ಸ್ಟ್ಯಾಂಡ್ ,ಆಸ್ಪತ್ರೆ, ಚರ್ಚ್ ಹೀಗೆ ಸಾರ್ವಜನಿಕ ಸ್ಥಳ ಗಳಲ್ಲಿ ಅನಾಥ ಮಕ್ಕಳನ್ನು, ನಿರಾಶ್ರಿತರನ್ನು ಕಂಡಾಗ ಏನೂ ಅನ್ನಿಸುತ್ತಿರಲಿಲ್ಲ.
ತಂದೆ ಅನಾರೋಗ್ಯದಲ್ಲಿರುವಾಗ ಮಲಚಿಕ್ಕಮ್ಮ ನ ಜೊತೆ ಜಗಳವಾಗಿ ಆಕೆ ಮನೆಯಿಂದ ಹೊರಗೆ ಹಾಕಿದಾಗ ಈ ಬಾಲಕಿ ಯ ಮೇಲೆ ಕರುಣೆ ತೋರಿ ತನ್ನ ಮನೆಯಲ್ಲಿ ಒಂದು ರಾತ್ರಿ ಆಶ್ರಯ ನೀಡಿದ ನೆರೆಯ ಫ್ಲ್ಯಾಟ್ ನ ಇಟಲಿಯನ್ ಗಂಡಸು ಇವಳ ಮೇಲೆ ಅತ್ಯಾಚಾರ ಮಾಡಿದ್ದ. ಆಗ ಈ ಜಗತ್ತಿನಲ್ಲಿ ಯಾವುದೂ ಬಿಟ್ಟಿಯಾಗಿ ಸಿಗುವುದಿಲ್ಲ ಎನ್ನುವುದು ನಾಡಿಯಾಗೆ ಮೊದಲ ಬಾರಿ ಮನವರಿಕೆ ಆಯ್ತು.
“ಜೀವನದ ಒಟ್ಟಾರೆ ಅನುಭವ ಅವರ ಆತ್ಮಕ್ಕೆ ದಕ್ಕುವುದೇ ಹೊರತು ನಮಗಲ್ಲ ” ಆತ್ಮ ಕಥನದ ಒಳಸುಳಿಗಳ ಇಣುಕು ನೋಟದ ಬಗ್ಗೆ ಖ್ಯಾತ ಸಿನೆಮಾ ನಿರ್ದೇಶಕ ನಾಗಾಭರಣ ಅವರ ಮಾತುಗಳಿವು. ಎಲ್ಲರಂತಿದ್ದೂ ಎಲ್ಲರಂತಾಗದ ನಾಡಿಯಾಳ ಈ ಆತ್ಮಾವಲೋಕನ “ಒಂದು ವೇಳೆ ನಾನು ಎಲ್ಲಿಯೂ ಯಾರಿಗೂ ಸೇರದವಳಾಗಿದ್ದರೆ ನಾನು ಯಾರು?” ಎನ್ನುವ ಅವಳ ಹುಡುಕಾಟದ ಪ್ರತಿಫಲನ, ಆದರೂ ಇಲ್ಲಿ ನಾವು ಕಾಣುವ ಪ್ರತಿಬಿಂಬ ವರ್ತಮಾನದಲ್ಲಿ ಬದುಕುತ್ತಿರುವ ಜಗತ್ತಿನ ನಮ್ಮೆಲ್ಲರ ತೊಳಲಾಟ ಕೂಡ. ಘಾನ ದ ಸಮೃದ್ಧ ಸಂಸ್ಕೃತಿಯಲ್ಲಿ ಬೆಳೆದ ನಾಡಿಯಾಳ ಆಫ್ರಿಕನ್ ತಂದೆ ಮಗಳ ಜೊತೆ ತನ್ನ ವಸಾಹತುಶಾಹಿ ಅನುಭವ ಹಂಚಿಕೊಳ್ಳುತ್ತಿದ್ದ.“the fountain is a symbol of colonialism”ಎಂದು ಪಿಸುಗುಟ್ಟುವ ಮೂಲಕ ನಾಡಿಯಾ ಪ್ರತಿಕ್ರಿಯಿಸುತ್ತಿದ್ದಳು. ಮಹಿಳೆಯರ ತಾಯ್ತನವನ್ನು ವಿಜೃಂಭಿಸುವ ಬಹುತೇಕ ಕುಟುಂಬಗಳನ್ನು ಕಂಡ ನಮಗೆ ನಾಡಿಯಾ ತಂದೆ ಮಕ್ಕಳನ್ನು ಪೊರೆದ ಮಾದರಿ ಉಲ್ಲೇಖನೀಯ.
ಹೆಣ್ಣು ಮಗಳು ಸಮರ್ಥಳಿದ್ದಾಳೆ ಅನ್ನುವ ಆತನ ನಂಬಿಕೆಯಲ್ಲಿ ಮನೆಯ ಹಿರಿಮಗಳಾಗಿ ನಾಡಿಯಾಳ ಜವಾಬ್ದಾರಿಯನ್ನು ತನ್ನ ಅನಾರೋಗ್ಯದ ಚಿಕಿತ್ಸೆಯ ಸಂದರ್ಭದಲ್ಲಿ ಅವಕಾಶವಾದಾಗೆಲ್ಲ ಪ್ರತಿಸಲ ನೆನಪಿಸುತ್ತಿದ್ದ. ತಂದೆ ನೀಡುತ್ತಿದ್ದ ಜೀವನ ಪಾಠ ಮತ್ತು ಯು.ಎನ್. ಕ್ಯಾಂಪಸ್ ನ ಜೀವನ ಶೈಲಿ, ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರ ಕುಟುಂಬದ ಸ್ಥಿತಿಗತಿ ನಾಡಿಯಾಗೆ ಬಡತನ ಮತ್ತು ಶ್ರೀಮಂತಿಕೆ ಹೀಗೆ ಸಾಮಾಜಿಕ ಜಗತ್ತಿನ ಎರಡು ತುತ್ತ ತುದಿಗಳನ್ನು ಪರಿಚಯಿಸಿತ್ತು .ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ ನಾಡಿಯಾ ಫೈ ಸ್ಟಾರ್ ಹೋಟೆಲ್ ಸಂಸ್ಕೃತಿಯನ್ನು ಸಹಪಾಠಿ ಜೊತೆಯ ತಿರುಗಾಟದಲ್ಲಿ ಅನುಭವಿಸಿದ್ದಳು. ಹೀಗೆ ಅರಿತೋ ಅರಿಯದೆಯೋ ಲೈಂಗಿಕ ಪ್ರಯೋಗಗಳಿಗೆ ಒಡ್ಡಿ ಕೊಂಡಳು. ಆದರೆ ಈ ಯಾವುದನ್ನು ಅಂತರಂಗಕ್ಕೆ ತೆಗೆದು ಕೊಳ್ಳದೆ ಆಕೆ ಬದುಕನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದ ರೀತಿ ವಿಶೇಷ.

ತಂದೆಯ ಸಾವು ಅವಳನ್ನು ವಿಚಲಿತಳನ್ನಾಗಿಸಿತ್ತು. ಆಗಲೂ ಬದುಕಿದ್ದ ಬಯೋಲಾಜಿಕಲ್ ತಾಯಿಯ ನಿರಾಕರಣೆ ಆಕೆಗೆ ನೀಡಿದ ಶಾಕ್ ನಿಂದ ಚೇತರಿಸಿಕೊಂಡದ್ದು ಮಲತಾಯಿ ಹೈಸ್ಕೂಲ್ ಮುಗಿಯುವವರೆಗೆ ಜೊತೆಗಿರಿಸಿಕೊಂಡು ಸಲಹಿದ್ದರಿಂದ. ತಂದೆಯ ಒಡಹುಟ್ಟಿದವರು ಆಸರೆಯಾಗುವ ಭರವಸೆ ನೀಡಿದ್ದರೂ ನಾಡಿಯಾ ತಂಗಿ ಯಾಸ್ಮಿನ್ ಮತ್ತು ಮಲತಮ್ಮನಿರುವ ಮಲತಾಯಿಯ ಜೊತೆಗೆ ಉಳಿದಳು. ಹೈಸ್ಕೂಲ್ ಓದಿನ ನಂತರ ಕಾಲೇಜು ಶಿಕ್ಷಣಕ್ಕೆ ನ್ಯೂಯಾರ್ಕ್ ಗೆ ತೆರಳಿದ ನಾಡಿಯಾ ಓದು ಮತ್ತು ಜೀವನಕ್ಕಾಗಿ ಎರಡು ಪಾಳಿಯಲ್ಲಿ ಕೆಲಸ ಮಾಡಬೇಕಾಯ್ತು. ಸ್ವಯಂ ಸೇವಾ ಸಂಸ್ಥೆಗಳಲ್ಲಿ ನಿರ್ಗತಿಕರ, ಅಪಾಯದ ಅಂಚಿನಲ್ಲಿರುವ ಮಕ್ಕಳ ಜೊತೆ, ಬಾರ್ ಗಳಲ್ಲಿ ಪಬ್ ಗಳಲ್ಲಿ ಕೆಲಸ ಮಾಡಿದಳು. ಓದು ಅವಳ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಯಾವಾಗಲೂ ಒದಗಿ ಬಂದ ಸಾಂಗತ್ಯ. ಘಾನದಲ್ಲಿ ಪುಟ್ಟ ಹುಡುಗಿಯಾಗಿರುವಾಗ ತನ್ನ ಜೊತೆ ಆಡುತ್ತಿದ್ದ ಹುಡುಗನ ತಾಯಿ(ತಂದೆಯ ರಕ್ತ ಸಂಬಂಧದ ಹೆಂಗಸು) ನೋವು ಹಂಚಿ ಕೊಳ್ಳಲು ಹೊರದಾರಿಗಳಿಲ್ಲದೆ ಮಾನಸಿಕ ಸ್ಥಿಮಿತ ಕಳೆದು ಕೊಂಡು ಅಸಹಜವಾಗಿ ವರ್ತಿಸಿದರೆ ಮಂತ್ರವಾದಿಗಳನ್ನು ಕರೆಸಿ ಬರೆ ಹಾಕುವುದು ಹಾಗೂ ಸರಿ ಹೋಗದಿದ್ದರೆ ಸಾಯೋವರೆಗೆ ಕೋಣೆಯೊಳಗೆ ಕೂಡಿ ಹಾಕುವುದು ಕಂಡಿದ್ದಳು. ‘ತನ್ನ ಕಲಿತ ಅಪ್ಪ ಆ ಮಹಿಳೆಯ ನಿಗೂಢ ವರ್ತನೆಗೆ ಕಾರಣ ಗೊತ್ತಿದ್ದೂ ಹೇಳದೆ ಚಿಕಿತ್ಸೆ ಕೊಡಿಸುವಂತೆ ತನ್ನ ಸಂಬಂಧಿ ಗಳಿಗೆ ಹೇಳದೆ ಯಾಕೆ ಮೌನವಾಗಿರುತ್ತಿದ್ದ?’ ಇದು ನಾಡಿಯಾಗೆ ಬುದ್ಧಿ ತಿಳಿದ ನಂತರ ಕಾಡುತ್ತಿದ್ದ ಪ್ರಶ್ನೆ. ಯಾವುದೇ ಸಾಮಾಜಿಕ ವ್ಯವಸ್ಥೆಯೊಳಗಿನ ನಂಬಿಕೆ, ಆಚರಣೆಗಳಲ್ಲಿ ಮೌಢ್ಯವಿದ್ದಾಗಲೂ ವಿರೋಧಿಸುವ ಕಷ್ಟದ ಬಗ್ಗೆ ನಿಧಾನಕ್ಕೆ ಅರಿತಾಗ ತನ್ನ ಹೀರೋ ತಂದೆ ತನ್ನ ಸಮುದಾಯದೊಳಗೆ ಎಷ್ಟು ಅಸಹಾಯಕರಿದ್ದರು ಎನ್ನುವ ವಾಸ್ತವದ ಸಂಕಟ ಅರ್ಥವಾಗಿತ್ತು.
ಬಾಲ್ಯದಿಂದಲೂ ಕಾರ್ಯ ಕಾರಣ ಸಂಬಂಧಗಳಿಗಾಗಿ ಬೇರೆ ಬೇರೆ ದೇಶಗಳಲ್ಲಿ ಕಳೆದ ನಾಡಿಯಾಗೆ ಬದುಕು ಮತ್ತು ಪರಿಸರದ ರಾಜಕೀಯ, ಸಾಮಾಜಿಕ ಸಂಬಂಧಗಳ ನಡುವಿನ ನಂಟನ್ನು ದೊಡ್ಡ ಕ್ಯಾನ್ ವಾಸ್ ನಲ್ಲಿ ಇಟ್ಟು ನೋಡುವ ಪ್ರೌಢಿಮೆಯನ್ನು ಸಣ್ಣ ವಯಸ್ಸಿನಲ್ಲಿಯೇ ಕಲಿಸಿತು. ಬೇರೆ ಬೇರೆ ದೇಶಗಳ ಯು.ಎನ್ ಕ್ಯಾಂಪಸ್ ನಲ್ಲಿ ಕೂಡಿ ಆಡಿದ ಬೇರೆ ಮಕ್ಕಳ ಜೊತೆಗಿನ ಸಂಪರ್ಕ ವಿವಿಧ ಸಂಸ್ಕೃತಿ, ಆಹಾರ ಪದ್ಧತಿ, ಸಾಹಿತ್ಯ, ಕಲೆ, ಸಂಗೀತಗಳನ್ನು ಗೌರವಿಸಿ ಸಂಭ್ರಮಿಸುವುದು ಕಲಿಸಿತು.“ತಂದೆ ತನ್ನ ಮಕ್ಕಳು ಘಾನ ಮೂಲದವರು ಎಂದು ಗುರುತಿಸಿಕೊಳ್ಳ ಬಯಸಿದರೂ ಬಾಲ್ಯದಿಂದಲೂ ನಾಡಿಯಾ ಗೆ ತಾನೂ ಯಾಸ್ಮಿನ್ ಬೇರುಗಳಿಲ್ಲದವರು ಎನ್ನುವ ಭಾವ ಸತತ ಕಾಡುತ್ತಿತ್ತು. ಆದರೆ ತಂದೆಯ ಮರಣದ ನಂತರವೂ ತಾವು ತುಂಬು ಕುಟುಂಬದ ಸದಸ್ಯೆಯರು ಎನ್ನುವ ಭಾವ ಸ್ಪಂದನ ನಿರಂತರ ಚಾಲ್ತಿಯಲ್ಲಿರುವಂತೆ ಶ್ರಮ ಪಡುವ ಹೆರಿಯೇಟ್ ಅತ್ತೆ ಮತ್ತು ತಂದೆಯ ಕುಟುಂಬದ ಇತರ ಸದಸ್ಯರು ತನ್ನೊಳಗಿನ ಖಾಲಿತನ ತುಂಬುತ್ತಾರೆ ಎನ್ನುವ ಭಾವ ಕ್ರಮೇಣ ದೃಢವಾಗತೊಡಗಿತ್ತು.
ನಾಡಿಯಾಳ ತಂದೆಯ ಫಾನ ಮೂಲದ ಆಸಾನಿ ವಂಶದವರು. ಮೂಲದಲ್ಲಿ ಮಾತೃಮೂಲ ಕುಟುಂಬ ವ್ಯವಸ್ಥೆ ಹೊಂದಿದ್ದವರು. ಬ್ರಿಟಿಷ್ ಆಕ್ರಮಣಕ್ಕೆ ಮೊದಲು ಅವರದ್ದೇ ಸಾಮುದಾಯಿಕ ನ್ಯಾಯ ವ್ಯವಸ್ಥೆ ಅನುಸರಿಸುತ್ತಿದ್ದವರು.
“History is a story what is told depends on who writes it“ ನಾಡಿಯಾ ಳ ಅಜ್ಜ ಯಾವಾಗಲೂ ಹೇಳುತ್ತಿದ್ದ ಮಾತುಗಳಿವು. ಆಫ್ರಿಕಾ ದ ಆಸಾನಿ ವಂಶದ ಶ್ರೀಮಂತ ಚಿನ್ನದ ಗಣಿಗಳ ಹಿನ್ನೆಲೆಯಿದ್ದ ತಂದೆ ತನ್ನ ಕುಟುಂಬದ ಜೊತೆ ಇಟ್ಟುಕೊಂಡಿದ್ದ ಭಾವನಾತ್ಮಕ ನಂಟಿನಿಂದಾಗಿ ನಾಡಿಯಾ ತನ್ನ ಹೆತ್ತವರ ಅನುಪಸ್ಥಿತಿಯಲ್ಲಿ ಜೀವನದ ಉದ್ದಕ್ಕೂ ಬಾಧಿಸಿದ ಅನಾಥಪ್ರಜ್ಞೆ ಅಸುರಕ್ಷಿತ ಭಾವದ ನಡುವೆಯೂ ಸಂಬಂಧ ಗಳನ್ನು ಜೋಡಿಸಿ ಕೊಂಡು ಜೀವನದ ಹಾದಿ ಕಂಡುಕೊಂಡಳು. ಅವುಗಳ ಇತಿಮಿತಿ ಅರಿತು ಆ ಛಾವಣಿಯ ನೆರಳಿನಲ್ಲಿ ವಿಹರಿಸಲು, ಬಾಲ್ಯದಲ್ಲಿ ತೊರೆದ ಹೆತ್ತ ತಾಯಿಯನ್ನು, ಮಲತಾಯಿಯನ್ನು ಎದೆಗೆ ಅಪ್ಪಿಕೊಳ್ಳಲು ಸಾಧ್ಯವಾಯಿತು.
ಯಾವುದೇ ನದಿ ಸಮುದ್ರವನ್ನು ಪ್ರವೇಶಿಸುವಾಗ ತನ್ನ ಅಸ್ತಿತ್ವ ಕಳೆದು ಕೊಳ್ಳುತ್ತದೆ. ನಾಡಿಯಾ ಗೆ ಬದುಕು ಕಲಿಸಿದ ವಾಸ್ತವ ಇದು. ಬೇರುಗಳಿಲ್ಲದೆಯೂ ಬೇರುಗಳಿಗೆ ಜೋಡಿಸಿ ಕೊಳ್ಳುವ ನಾಡಿಯಾಳ ಈ ತುಡಿತವು ನನಗೆ ಹೇಳಿದ ಕಿವಿ ಮಾತು- ಸಾಧಿಸುವ ಛಲ ಇದ್ದರೆ ಯಾವುದೇ ಎಂತಹದ್ದೇ ನಿಕೃಷ್ಟ, ನಕಾರಾತ್ಮಕ ಬಾಲ್ಯವೂ ಹುಸಿ ಹೋಗುವುದಿಲ್ಲ ನಮ್ಮ ಸೋಲಿಗೆ ನಾವು ಹುಡುಕುವ ಕಾರಣಗಳು ನಿಜವಲ್ಲ ಎಂಬ ಸತ್ಯವನ್ನು.
2001 ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್ ನಲ್ಲಿರುವಾಗ ವರ್ಲ್ಡ್ ಟ್ರೇಡ್ ಸೆಂಟರ್ ದರ ದರ ಉರುಳುವುದಕ್ಕೆ ಹೊತ್ತಿಕೊಂಡ ಹೊಗೆಗೆ ಸುಟ್ಟ ಶವದ ವಾಸನೆ ಗೆ ಪ್ರತ್ಯಕ್ಷ ಸಾಕ್ಷಿಯಾಗಿ ಜೀವ ಉಳಿಸಿಕೊಳ್ಳಲು ಅದೇ ದಾರಿಯಲ್ಲಿ ಸಿಕ್ಕಿದ ಸಹಪಾಠಿಯೊಬ್ಬನ ಕೈ ಹಿಡಿದು ಓಡಿದ್ದಳು. ನಾಡಿಯಾ ಆಗ ಕಾಲೇಜು ಶಿಕ್ಷಣಕ್ಕಾಗಿ ನ್ಯೂಯಾರ್ಕ್ ನಲ್ಲಿ ಮೂರು ಪಾಳಿಯ ಕೆಲಸ ಮಾಡಿಕೊಂಡು ನೆಲೆಸಿದ್ದಳು.
ಅನುಭವಗಳು ನಮ್ಮನ್ನು ಮಾಗಿಸುತ್ತವೆ ನಿಜ.ಹಾಗಂಥ ಅವುಗಳು ನೀಡುವ ಶಾಕ್ ನಿಂದ ಚೇತರಿಸಿಕೊಂಡು ಬದುಕಿನಲ್ಲಿ ಮಾನವೀಯ ಹೆಜ್ಜೆಗಳನ್ನಿಟ್ಟು ಮುಂದುವರಿಯುವುದು ಅಪರೂಪದ ಸಾಧನೆ..ನಾಡಿಯಾ ಗೆ ಇದು ಪುಟ್ಟ ವಯಸ್ಸಿನಲ್ಲಿ ಸಿದ್ದಿಸಿದೆ.
ಒಟ್ಟಾರೆಯಾಗಿ “ಆಫ್ಟರ್ ಶಾಕ್ ”ಓದು ನೀಡಿದ ಅನುಭವ ಅದ್ಭುತ. ನಮ್ಮೊಡನೆ ಒಡನಾಡುವ ಜೀವಾತ್ಮಗಳ ಸಂವೇದನೆಯ ಕನಿಷ್ಟ ಅನುಭವಗಳು ನಮಗೆ ದಕ್ಕಿದೆಯೆಂದರೆ ಅವು ನಮ್ಮನ್ನು ಮಾಗಿಸುತ್ತದೆಯಾದರೆ ಅವರು ಯಾವ ಭೂ ಭಾಗದವರೇ ಆದರೂ ನಮ್ಮ ಒಡಹುಟ್ಟಿದವರು ಎನ್ನುವ ಭಾವ ಈ ಕೃತಿ ನನಗೆ ಮೂಡಿಸಿತು.

ದೇವಿಕಾ ನಾಗೇಶ್
ಕವಯಿತ್ರಿ, ಲೇಖಕಿ
ಇದನ್ನೂ ಓದಿ- ಕೇಂದ್ರದಲ್ಲಿ ಖಾತೆ, ರಾಜ್ಯದಲ್ಲಿ ಕ್ಯಾತೆ – ಎಚ್ಡಿಕೆ ಸಮರ


