ಬೆಳಗಾವಿ : ಸ್ಮಾರ್ಟ್ಫೋನ್, ಇಂಟರ್ನೆಟ್, ದೂರದರ್ಶನ ಹಾಗೂ ಉತ್ತಮ ರಸ್ತೆ ಸಂಪರ್ಕ ಇಂದಿನ ಜನಜೀವನದ ಭಾಗವಾಗಿದ್ದರೂ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೊಳ್ಯಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಳಿ ವಾಡಾ ಕುಗ್ರಾಮದ ಜನರು ಇಂದಿಗೂ ಮೂಲಸೌಕರ್ಯಗಳಿಲ್ಲದೆ ಬದುಕು ಸಾಗಿಸುತ್ತಿದ್ದಾರೆ.
ಸುಮಾರು 175 ಜನಸಂಖ್ಯೆ ಹೊಂದಿರುವ ಈ ಪುಟ್ಟ ಹಳ್ಳಿಯಲ್ಲಿ 20 ಕುಟುಂಬಗಳು ವಾಸಿಸುತ್ತಿವೆ. ಆದರೆ ಇಲ್ಲಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಮೊಬೈಲ್ ನೆಟ್ವರ್ಕ್, ದೂರದರ್ಶನ ಸಂಪರ್ಕ ಹಾಗೂ ಹೊರಜಗತ್ತಿಗೆ ಸಂಪರ್ಕ ಕಲ್ಪಿಸುವ ಸಮರ್ಪಕ ರಸ್ತೆಯೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು ಎಂಟು ದಶಕಗಳು ಕಳೆದಿದ್ದರೂ, ಅರಣ್ಯದಂಚಿನಲ್ಲಿರುವ ಈ ಪ್ರದೇಶದ ಜನರ ಬದುಕಿನಲ್ಲಿ ಮಾತ್ರ ಬದಲಾವಣೆ ಕಂಡುಬಂದಿಲ್ಲ.
ಪ್ರತಿದಿನ ಸಂಜೆ ಕತ್ತಲಾಗುತ್ತಿದ್ದಂತೆ ಗ್ರಾಮಸ್ಥರು ಬೆಳಕಿನ ವ್ಯವಸ್ಥೆಯಿಲ್ಲದೆ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದೂ ಇಲ್ಲಿನ ಜನರಿಗೆ ದೊಡ್ಡ ಸವಾಲಾಗಿದೆ.
ಮಕ್ಕಳು, ಮಹಿಳೆಯರು, ವೃದ್ಧರಿಗೆ ಹೆಚ್ಚಿನ ಸಂಕಷ್ಟ
ಮೂಲಸೌಕರ್ಯಗಳ ಕೊರತೆಯಿಂದ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೊಬೈಲ್ ಸಂಪರ್ಕ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಸಂಬಂಧಿಕರನ್ನು ಸಂಪರ್ಕಿಸಲು ಅಥವಾ ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಸರಿಯಾದ ರಸ್ತೆ ಇಲ್ಲದಿರುವುದರಿಂದ ಅನಾರೋಗ್ಯಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಕರೆದೊಯ್ಯುವುದೂ ಕಷ್ಟಕರವಾಗಿದೆ.
ಗ್ರಾಮದ ನಿವಾಸಿ ಸಂಜಯ್ ಪಾಟೀಲ್ ಮಾತನಾಡಿ, ವಿದ್ಯುತ್ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ದೈನಂದಿನ ಬದುಕು ದುಸ್ತರವಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮದ ಸುತ್ತಲೂ ದಟ್ಟ ಅರಣ್ಯವಿದ್ದು, ರಾತ್ರಿ ವೇಳೆ ಕಾಡುಪ್ರಾಣಿಗಳು ವಸತಿ ಪ್ರದೇಶಕ್ಕೆ ನುಗ್ಗುವ ಆತಂಕವಿದೆ. ಕತ್ತಲಿನಲ್ಲಿ ಸುರಕ್ಷಿತವಾಗಿ ಓಡಾಡುವುದೇ ಕಷ್ಟವಾಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಿವಾಸಿ ಭಗು ಧಾಕ್ಲು ಧಂಗರ್ ಅವರು, ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಹಲವು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದರೂ ಈವರೆಗೆ ಯಾರಿಂದಲೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳಿಗೂ ಹಲವು ಬಾರಿ ಮನವಿ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಈಡೇರಿಲ್ಲ. ಗ್ರಾಮಸ್ಥರ ಬದುಕಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೌಲಭ್ಯ ಕಲ್ಪಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಗ್ರಾಮಕ್ಕೆ ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಇತ್ತೀಚೆಗೆ ಖಾನಾಪುರ ತಹಶೀಲ್ದಾರ್ ಹಾಗೂ ಹೆಸ್ಕಾಂನ ಖಾನಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ವಿಠ್ಠಲ್ ಧಂಗರ್, ಬಿರು ಧಂಗರ್, ನವಲು ಅವ್ನೆ ಹಾಗೂ ಇಜು ಅವ್ನೆ ಸೇರಿದಂತೆ ಗ್ರಾಮಸ್ಥರ ನಿಯೋಗ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸಿದೆ.
ತಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ತಂತ್ರಜ್ಞಾನ ಮತ್ತು ಅಭಿವೃದ್ಧಿಯ ವೇಗದ ಬಗ್ಗೆ ಮಾತನಾಡುತ್ತಿರುವ ಇಂದಿನ ಕಾಲದಲ್ಲಿಯೂ ಒಂದು ಗ್ರಾಮಕ್ಕೆ ವಿದ್ಯುತ್, ರಸ್ತೆ ಹಾಗೂ ಮೊಬೈಲ್ ಸಂಪರ್ಕ ಕಲ್ಪಿಸಲಾಗದಿರುವುದು ಆಡಳಿತ ವ್ಯವಸ್ಥೆಯ ಮುಂದಿರುವ ಗಂಭೀರ ಪ್ರಶ್ನೆಯಾಗಿದೆ.

