ಬೆಂಗಳೂರು : ಇಂದು ಮಧ್ಯರಾತ್ರಿಯಿಂದಲೇ ಸಾರಿಗೆ ಬಸ್ ದರ ಏರಿಕೆಯಾಗಲಿದೆ . ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಇಂದಿನಿಂದಲೇ ಹೆಚ್ಚಿಸಲಾಗುತ್ತಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ ಸೇರಿದಂತೆ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಸಾರಿಗೆ ನಿಗಮಗಳ ಅಂಕಿಅಂಶಗಳನ್ನು ವಿವರಿಸಿದ ಸಚಿವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 26,125 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. 1,03,646 ಸಿಬ್ಬಂದಿ ಕೆಲಸ ಮಾಡುತ್ತಿದ್ದು, 24,179 ಮಾರ್ಗಗಳಲ್ಲಿ ಪ್ರತಿದಿನ ಸುಮಾರು 1.24 ಕೋಟಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ತಿಳಿಸಿದರು.
ಇವರಲ್ಲಿ ಪ್ರತಿದಿನ ಸುಮಾರು 74.74 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಮಹಿಳೆಯರ ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತಿದೆ ಎಂಬ ವಾದ ಸರಿಯಲ್ಲ. ಮಹಿಳಾ ಪ್ರಯಾಣಿಕರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಸಾರಿಗೆ ನಿಗಮಗಳಿಗೆ ಭರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಡೀಸೆಲ್, ವೇತನ ವೆಚ್ಚದಲ್ಲಿ ಹೆಚ್ಚಳ
ಕಳೆದ ಹತ್ತು ವರ್ಷಗಳಲ್ಲಿ ಬಸ್ ಪ್ರಯಾಣ ದರವನ್ನು ಒಮ್ಮೆ ಮಾತ್ರ ಹೆಚ್ಚಿಸಲಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ದರ ಪರಿಷ್ಕರಣೆ ಮಾಡಬೇಕಿದ್ದರೂ, 2025ರಲ್ಲಿ ಮಾತ್ರ ದರ ಹೆಚ್ಚಿಸಲಾಗಿತ್ತು. ಆದರೆ ಕಳೆದ ಬಾರಿ ದರ ಹೆಚ್ಚಿಸಿದ ಬಳಿಕವೂ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿಲ್ಲ ಎಂದು ಸಚಿವರು ಹೇಳಿದರು.
ಡೀಸೆಲ್ ಬೆಲೆ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಇತರ ನಿರ್ವಹಣಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಎಂ.ಆರ್. ಶ್ರೀನಿವಾಸಮೂರ್ತಿ ಸಮಿತಿ ವರದಿಯಲ್ಲಿಯೂ ಡೀಸೆಲ್ ಬೆಲೆ ಮತ್ತು ತುಟ್ಟಿಭತ್ಯೆ ಹೆಚ್ಚಳವಾದಾಗ ಪ್ರಯಾಣ ದರ ಪರಿಷ್ಕರಣೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೂ ಈವರೆಗೆ ಅದನ್ನು ಜಾರಿಗೆ ತರಲಾಗಿರಲಿಲ್ಲ ಎಂದು ವಿವರಿಸಿದರು.
ಪ್ರಸ್ತುತ ಡೀಸೆಲ್‌ನ ಸರಾಸರಿ ಬೆಲೆ ಲೀಟರ್‌ಗೆ ₹98.13 ಆಗಿದೆ. ಹಿಂದಿನ ಪ್ರಯಾಣ ದರ ಏರಿಕೆಯ ನಂತರ ಲೀಟರ್‌ಗೆ ₹10.47ರಷ್ಟು ಡೀಸೆಲ್ ಬೆಲೆ ಹೆಚ್ಚಾಗಿದೆ. ಸಾರಿಗೆ ನಿಗಮಗಳ ಒಟ್ಟು ಆದಾಯದ ಸುಮಾರು ಶೇ.80ರಷ್ಟು ಹಣ ಡೀಸೆಲ್ ಮತ್ತು ಸಿಬ್ಬಂದಿ ವೇತನಕ್ಕೇ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.
ನಾಲ್ಕು ನಿಗಮಗಳಿಗೆ ₹9,912 ಕೋಟಿ ಸಾಲ
ನಾಲ್ಕು ಸಾರಿಗೆ ನಿಗಮಗಳ ಒಟ್ಟು ಸಾಲದ ಹೊಣೆಗಾರಿಕೆ ₹9,912 ಕೋಟಿಯಷ್ಟಿದೆ. ಪ್ರತಿ ವರ್ಷ ಸುಮಾರು ₹2,000 ಕೋಟಿ ಸಾಲದ ಹೊರೆ ಹೆಚ್ಚುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಾರಿಗೆ ನಿಗಮಗಳಿಗೆ ವಾರ್ಷಿಕವಾಗಿ ಸುಮಾರು ₹14,000 ಕೋಟಿ ಆದಾಯ ಬರುತ್ತಿದ್ದರೆ, ವೆಚ್ಚ ₹16,000 ಕೋಟಿಯಷ್ಟಿದೆ. ಹೀಗಾಗಿ ಪ್ರತಿ ವರ್ಷ ಸುಮಾರು ₹2,000 ಕೋಟಿ ಕೊರತೆ ಉಂಟಾಗುತ್ತಿದೆ. ಈ ಆರ್ಥಿಕ ಅಸಮತೋಲನವನ್ನು ಸರಿಪಡಿಸಲು ಪ್ರಯಾಣ ದರ ಹೆಚ್ಚಳ ಅಗತ್ಯವಾಗಿದೆ ಎಂಬುದು ಸಚಿವರ ವಿವರಣೆಯಾಗಿದೆ.

