ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು 18 ವರ್ಷ
ಇಂದಿನ ದಿನ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಲಭಿಸಿದ ದಿನ. ನಾಳೆ ಕನ್ನಡ ರಾಜ್ಯೋತ್ಸವ ದಿನ ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ವಾಸ್ತವವನ್ನು ತೆರೆದಿಡುತ್ತಾ”ಕನ್ನಡವು ಉದ್ಯೋಗದ ಭಾಷೆಯಾಗಬೇಕು, ಶಿಕ್ಷಣದ ಮಾಧ್ಯಮವಾಗಬೇಕು ಮತ್ತು ಜನಸಾಮಾನ್ಯರ ದೈನಂದಿನ ಬದುಕಿನ ಅಭಿವ್ಯಕ್ತಿ ಮಾಧ್ಯಮವಾಗಬೇಕು” ಎಂಬ ಆಶಯವು ಯಾವುದೇ ಜೀವಂತ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಅತ್ಯಂತ ಮೂಲಭೂತವಾದದ್ದು ಎನ್ನುತ್ತಾರೆ ಕೃಷ್ಣಮೂರ್ತಿ.ಆರ್, ಸಹಾಯಕ ಪ್ರಾಧ್ಯಾಪಕರು.
ಶಾಸ್ತ್ರೀಯ ಪದವನ್ನು ‘ಕ್ಲಾಸಿಕಲ್’ ಎಂಬ ಪದಕ್ಕೆ ಸಂವಾದಿಯಾಗಿ ಬಳಸುತ್ತೇವೆ. ಸಾಮಾನ್ಯವಾಗಿ ಸಾಹಿತ್ಯಕ್ಕೆ, ಸಂಗೀತಕ್ಕೆ, ನೃತ್ಯಕ್ಕೆ ಅನ್ವಯಿಸಿ ಹೇಳುತ್ತೇವೆ. ಪ್ರಾಚೀನಕಾಲದಲ್ಲಿ ಮಹಾಕವಿಗಳು ಸೃಷ್ಟಿಸಿದ ಶ್ರೇಷ್ಟವಾದ ರಚನೆಗಳನ್ನು ‘ಕ್ಲಾಸಿಕಲ್ ಲಿಟರೇಚರ್’ ಎನ್ನುತ್ತೇವೆ. ಒಂದರ್ಥದಲ್ಲಿ ಶಾಸ್ತ್ರಬದ್ಧವಾದ ನಿಯಮ ನಿರ್ಬಂಧಗಳಿಗೆ ಒಳಪಟ್ಟದನ್ನು ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ ಎಂಬ ಅರ್ಥಗಳಲ್ಲಿ ಗುರುತಿಸುವುದು ವಾಡಿಕೆ. ಈ ದೃಷ್ಟಿಯ ಮೂಲಕ ಆಧುನಿಕ ಕಾಲದಲ್ಲಿ ‘ಮರುಚಿಂತನೆಯ’ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವನ್ನು ಕ್ಲಾಸಿಕಲ್ ಭಾಷೆಗಳೆಂದು ಗುರುತಿಸಲಾಯಿತು. ವಿಶ್ವದಲ್ಲಿ ಮೊದಲು ಯುನೆಸ್ಕೊ ಕೆಲವು ಭಾಷೆಗಳನ್ನು ಕ್ಲಾಸಿಕಲ್ ಎಂದು ಕರೆಯುವ ಮೂಲಕ ಪ್ರಾರಂಭ ಮಾಡಿತು. ಉದಾ: ಗ್ರೀಕ್, ಲ್ಯಾಟೀನ್, ಅರೇಬಿಕ್, ಹಿಬ್ರೂ, ಚೈನಿಸ್ ಇತ್ಯಾದಿ ಭಾಷೆಗಳನ್ನು ಶಾಸ್ತ್ರೀಯವಾಗಿ ಗುರುತಿಸಿತು. ಯುನೆಸ್ಕೋದ ಪ್ರಕಾರ ಶಾಸ್ತ್ರೀಯ ಭಾಷೆ ಎಂದರೆ ‘ಪ್ರಾಚೀನ ಕಾಲದಲ್ಲಿ ಮಾತ್ರ ಬಳಕೆಯಲ್ಲಿದ್ದು ಈಗ ಅಧ್ಯಯನ ಯೋಗ್ಯವಾದುದು’ ಎಂಬುದಾಗಿದೆ.
ಭಾರತದಲ್ಲಿ ಮೊದಲು ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಯಿತು. ಇದು ತಮಿಳರಿಗೆ ತಮ್ಮ ಸಾಹಿತ್ಯಕ್ಕೆ ಸಂದ ಶ್ರೇಷ್ಠ ಗೌರವ ಎಂದು ವ್ಯಕ್ತಪಡಿಸಿದರು. ಇದಕ್ಕೆ ಕಾರಣ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಜಾರ್ಜಾ ಎಲ್ ಹಾರ್ಟ್ ರವರು. ಇವರು ತಮಿಳು ಭಾಷೆ ಅತ್ಯಂತ ಪ್ರಾಚೀನತೆಯಿಂದ ಕೂಡಿದ್ದು ಶಾಸ್ತ್ರೀಯ ಸ್ಥಾನಮಾನ ನೀಡಬಹುದು ಎಂದು ಉಲ್ಲೇಖ ಮಾಡಿದರು. ಇದರ ನೆರವಿನಲ್ಲಿ ತಮಿಳರು ಯು.ಪಿ.ಎ ಸರ್ಕಾರದ ಪ್ರೇರಣೆಯಿಂದ ಅಥವಾ ರಾಜಕೀಯ ಒತ್ತಡದ ಮೂಲಕ 2004 ಅಕ್ಟೋಬರ್ 12 ರಂದು ಶಾಸ್ತ್ರೀಯ ಸ್ಥಾನಮಾನ ಪಡೆದರು. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ನಂತರ ಸರ್ಕಾರವು ಶಾಸ್ತ್ರೀಯ ಸ್ಥಾನಮಾನ ನೀಡಲು ಕೆಲವು ಮಾನದಂಡಗಳನ್ನು ರೂಪಿಸಿತು.
ಅ) ಸಾವಿರ ವರ್ಷಗಳಿಗಿಂತ ಮೊದಲೇ ಇದ್ದ ಅತಿ ಪ್ರಾಚೀನ ಪಠ್ಯಗಳು/ದಾಖಲೆಗಳಿರುವ ಇತಿಹಾಸ.
ಆ) ಆ ಭಾಷಾ ಸಮುದಾಯಕ್ಕೆ ಸೇರಿದ ಅನೇಕ ತಲೆಮಾರಿನ ಜನ ಅಮೂಲ್ಯ ಪರಂಪರೆ ಎಂದು ಭಾವಿಸುವ ಪ್ರಾಚೀನ ಸಾಹಿತ್ಯ/ರಚನೆಗಳು ಪಡೆದಿರುವುದು
ಇ) ಸಾಹಿತ್ಯ ಸಂಪ್ರದಾಯ ಬೇರೆ ಯಾವುದೇ ಭಾಷಾ ಸಮುದಾಯದಿಂದ ಎರವಲು ಪಡೆದದ್ದಾಗಿರದೆ ಸ್ಪೋಪಜ್ಞವಾಗಿರಬೇಕು.
ಈ) ಪ್ರಾಚೀನ ಭಾಷಾ ಸಾಹಿತ್ಯಗಳು ಆಧುನಿಕ ಭಾಷಾ ಸಾಹಿತ್ಯಗಳಿಗಿಂತ ಭಿನ್ನವಾಗಿದ್ದು ಪ್ರಾಚೀನ ಭಾಷಾ ಸಾಹಿತ್ಯಗಳಿಂದಲೇ ಆನಂತರ ಕಾಲದ ಪ್ರಕಾರಗಳು ಮತ್ತು ಅವುಗಳ ಶಾಖೆಗಳು ರೂಪುಗೊಳ್ಳಬೇಕಾದ ಆವಶ್ಯಕತೆ ಇಲ್ಲ.
ಈ ಮಾನದಂಡಗಳನುಸಾರ ಭಾಷೆಗಳಿಗೆ ಮಾನ್ಯತೆ ನೀಡುವ ಸೂಚನೆ ಪ್ರಾರಂಭವಾಯಿತು. ಆದರೆ ಇದು ತಮಿಳು ಭಾಷೆಗೆ ಮಾನ್ಯತೆ ನೀಡಲು ಬಳಸಿದ ನಿಯಮಗಳಿದಂತಿದ್ದವು. ಕೆಲವು ದಿನಗಳ ನಂತರ ಮೊದಲಿನ ಹೇಳಿಕೆಗೆ ತಿದ್ದುಪಡಿ ತಂದು 1500-2000 ವರ್ಷಗಳ ಇತಿಹಾಸ ಹೊಂದಿರುವ ಎಂದು ತಿದ್ದುಪಡಿಮಾಡಿ ಸಂಸ್ಕೃತ ಭಾಷೆಗೆ ಮಾನ್ಯತೆ ನೀಡಲಾಯಿತು. ಈ ತಿದ್ದುಪಡಿಗಳನ್ನು ಗಮನಿಸಿದಾಗ ರಾಜಕೀಯ ಪ್ರೇರಿತವಾಗಿ ಇತರ ಭಾಷೆಗಳಿಗೆ ಮಾನ್ಯತೆ ನೀಡಬಾರದು ಎಂಬ ಉದ್ದೇಶಕ್ಕೆ ರಚನೆ ಮಾಡಿದಂತೆ ತೋರುತ್ತದೆ.
ಇವುಗಳನ್ನೆಲ್ಲ ಗಮನಿಸಿದ ಕನ್ನಡ ಮನಸ್ಸುಗಳು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಧ್ವನಿಗೂಡಿಸಿದರು. ಇದಕ್ಕೂ ಮುನ್ನ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಸಮಿತಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಇಬ್ಬರು ಅಧ್ಯಕ್ಷರಾದ ಡಾ.ಭದ್ರಿ ರಾಜು ಕೃಷ್ಣಮೂರ್ತಿ, ಡಾ.ಸುಬ್ಬರಾವ್ ಸರ್ಕಾರಕ್ಕೆ ಟಿಪ್ಪಣಿ ಬರೆದಿದ್ದರು. ಅದು ಹೀಗಿದೆ- ‘ತಮಿಳು ಭಾಷೆಯ ಜೊತೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳು ಶಾಸ್ತ್ರೀಯ ಸ್ಥಾನಮಾನ ಪಡೆಯಲು ಯೋಗ್ಯವಾಗಿವೆ’ ಎಂದು. ಆದರೆ ಸರ್ಕಾರ ಇದನ್ನು ಪರಿಗಣಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.

ಈ ಕುರಿತು ಕರ್ನಾಟಕದಲ್ಲಿ ಸಾಕಷ್ಟು ಹೋರಾಟಗಳು ಪ್ರಾರಂಭವಾದವು. ಇದನ್ನು ಅರಿತ ಕರ್ನಾಟಕ ಸರ್ಕಾರ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಬಿ.ಎ ವಿವೇಕ ರೈ ರವರಿಗೆ ಒಂದು ವರದಿಯನ್ನು ಸಿದ್ಧಪಡಿಸಲು ಸೂಚಿಸಿತು. ಸರ್ಕಾರ ಇವರ ವರದಿ ಕುರಿತು ಜನವರಿ 6 2005 ರಂದು ಚರ್ಚಿಸಲು ಡಾ.ಎಂ.ಚಿದಾನಂದಮೂರ್ತಿ, ಎಲ್.ಎಸ್ ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತು. ಈ ಸಮಿತಿಯ ನಿರ್ಧಾರದಂತೆ ಕನ್ನಡಕ್ಕೆ ಅರ್ಹತೆ ಇರುವ ಎಲ್ಲಾ ಉದಾಹರಣೆಗಳ ಸಮೇತ ಕೇಂದ್ರ ಸರ್ಕಾರಕ್ಕೆ ಸುಮಾರು 300 ಪುಟಗಳ ವರದಿ ಕಳುಹಿಸಲಾಯಿತು. ಮುಂದುವರೆದಂತೆ ಧಾರವಾಡ ವಿದ್ಯಾವರ್ಧಕ ಸಂಘ ಡಾ.ಪಾಟೀಲ್ ಪುಟ್ಟಪ್ಪ, ರಿತ್ತಿ, ಚೆನ್ನವೀರ ಕಣವಿ ರವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತು. ಶಾಸ್ತ್ರೀಯ ಭಾಷೆ ಹೋರಾಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಗೆಳೆಯರ ಬಳಗ, ಮುಂತಾದ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಿವೆ. ಈ ಹೋರಾಟದ ಅರ್ಥಪೂರ್ಣತೆಗಾಗಿ ಕೇಂದ್ರ ಸರ್ಕಾರ ಅಕ್ಟೋಬರ್ 31, 2008 ರಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿತು. ಇದು ಕನ್ನಡಕ್ಕೆ ಸಂದ ದೊಡ್ಡ ಗೌರವವಾಗಿ ಪರಿಣಮಿಸಿತು.
ಈ ಸ್ಥಾನ ಪಡೆದು ಸುಮಾರು 18ನೇ ವರ್ಷದ ಹೊಸ್ತಿಲಲ್ಲಿದ್ದೇವೆ. ಕನ್ನಡದ ಕುರಿತು ಒಂದಿಷ್ಟು ಆಲೋಚಿಸಬೇಕಾದ ಅನಿವಾರ್ಯತೆಯಿದೆ. “ಕನ್ನಡವು ಉದ್ಯೋಗದ ಭಾಷೆಯಾಗಬೇಕು, ಶಿಕ್ಷಣದ ಮಾಧ್ಯಮವಾಗಬೇಕು ಮತ್ತು ಜನಸಾಮಾನ್ಯರ ದೈನಂದಿನ ಬದುಕಿನ ಅಭಿವ್ಯಕ್ತಿ ಮಾಧ್ಯಮವಾಗಬೇಕು” ಎಂಬ ಆಶಯವು ಯಾವುದೇ ಜೀವಂತ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಅತ್ಯಂತ ಮೂಲಭೂತವಾದದ್ದು. ಈ ನೆಲೆಗಟ್ಟಿನಲ್ಲಿ ಕೆಳಗಿನ ಅಂಶಗಳನ್ನು ಗಮನಿಸಬಹುದು.
1.ಉದ್ಯೋಗದ ಭಾಷೆಯಾಗಿ ಕನ್ನಡ:
ಯಾವುದೇ ಭಾಷೆಯ ಜನಪ್ರಿಯತೆ ಮತ್ತು ಅಸ್ತಿತ್ವವು ಆ ಭಾಷೆ ಎಷ್ಟು ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಡಳಿತ ಮತ್ತು ಸರ್ಕಾರದ ನೌಕರಿಗಳು, ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕನ್ನಡ ಕಡ್ಡಾಯವಾಗಿ ಆಡಳಿತ ಮತ್ತು ವ್ಯವಹಾರದ ಭಾಷೆಯಾಗಬೇಕು. ಫೈಲ್ಗಳು, ಆದೇಶಗಳು ಮತ್ತು ಸಭೆಗಳು ಸಂಪೂರ್ಣವಾಗಿ ಕನ್ನಡದಲ್ಲೇ ನಡೆದಾಗ ಮಾತ್ರ ಆಡಳಿತದಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತದೆ. ಖಾಸಗಿ ಮತ್ತು ಕಾರ್ಪೋರೇಟ್ ಕ್ಷೇತ್ರ, ಐಟಿ-ಬಿಟಿ ಕಂಪನಿಗಳು, ಬಹುರಾಷ್ಟ್ರೀಯ ಸಂಸ್ಥೆಗಳು, ಬ್ಯಾಂಕಿಂಗ್ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನ ಸಿಗಬೇಕು. ತಮಿಳುನಾಡು, ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶದಂತೆ ಕರ್ನಾಟಕದಲ್ಲೂ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಳೀಯ ಭಾಷೆ ಬಲ್ಲವರಿಗೆ ಆದ್ಯತೆ ಸಿಗುವ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿಯೂ ಹಾಗೂ ಡಿಜಿಟಲ್ ಯುಗದಲ್ಲಿನ ಸಾಫ್ಟ್ ವೇರ್ ಡೆವಲಪ್ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಗಳಲ್ಲಿ ಕನ್ನಡದಲ್ಲಿ ಉದ್ಯೋಗಾವಕಾಶಗಳು ಮತ್ತು ಕೋರ್ಸ್ಗಳು ಲಭ್ಯವಾಗಬೇಕು. ಆಗ ಯುವಕರಿಗೆ ಕನ್ನಡದ ಮೂಲಕವೇ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಗಳಲ್ಲಿ ಕನ್ನಡ ಐಚ್ಛಿಕ ಮುಖ್ಯ ಪತ್ರಿಕೆ ತೆಗಿದಿದೆ. ಎಫ್ಡಿ, ಎಸ್ಡಿಎ, ಪರೀಕ್ಷೆಗಳಲ್ಲಿ 100 ಅಂಕಗಳ ಪ್ರಶ್ನೆಗಳನ್ನು 35ಕ್ಕೆ ಇಳಿಸಲಾಗಿದೆ. ಈ ನಿಯಮಗಳು ಕನ್ನಡ ಓದುವ ಕನ್ನಡದಲ್ಲೆ ತಮ್ಮ ಜೀವನ ಭದ್ರ ಗೊಳಿಸಿಕೊಳ್ಳುವ ಅಭ್ಯರ್ಥಿಗಳಿಗೆ ಅಡ್ಡಿಯಾಗಿದೆ.
2.ಶಿಕ್ಷಣದ ಮಾಧ್ಯಮವಾಗಿ ಕನ್ನಡ:

ಮಕ್ಕಳ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನದವರೆಗೆ ಕನ್ನಡವೇ ಬೋಧನಾ ಮಾಧ್ಯಮವಾಗುವುದು ಅತ್ಯಂತ ಅಗತ್ಯ. ತಾಯಿನುಡಿಯಲ್ಲಿ ಶಿಕ್ಷಣ ಪಡೆದಾಗ ಮಗುವಿನ ಗ್ರಹಿಕೆ ಶಕ್ತಿ, ಸೃಜನಶೀಲತೆ ಮತ್ತು ವಿಶ್ಲೇಷಣಾ ಸಾಮರ್ಥ್ಯ ಅತ್ಯಂತ ವೇಗವಾಗಿ ಬೆಳೆಯುತ್ತದೆ ಎಂದು ಜಾಗತಿಕವಾಗಿ ಶಿಕ್ಷಣ ತಜ್ಞರು ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು. ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್ಗಳಾದ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಮತ್ತು ವಿಜ್ಞಾನದಂತಹ ಉನ್ನತ ವ್ಯಾಸಂಗಗಳು ಇಂಗ್ಲಿಷ್ಗೆ ಮಾತ್ರ ಸೀಮಿತವಾಗಿರಬಾರದು. ಕನ್ನಡದಲ್ಲೂ ಅತ್ಯುತ್ತಮ ಪಠ್ಯಪುಸ್ತಕಗಳು, ಸಂಶೋಧನಾ ಗ್ರಂಥಗಳು ಲಭ್ಯವಾಗುವಂತೆ ಮಾಡಬೇಕು. (ಇತ್ತೀಚಿನ ವರ್ಷಗಳಲ್ಲಿ ಕೆಲವು ತಾಂತ್ರಿಕ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ). ಜಾಗತಿಕ ಮಟ್ಟದ ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಕನ್ನಡಿಗರಿಗೆ ಸುಲಭವಾಗಿ ತಲುಪಿಸಲು ಕನ್ನಡದಲ್ಲಿ ನಿರಂತರವಾಗಿ ಪುಸ್ತಕಗಳು ಮತ್ತು ಡಿಜಿಟಲ್ ಲೇಖನಗಳು ಸೃಷ್ಟಿಯಾಗಬೇಕು.
3.ಜನಸಾಮಾನ್ಯರ ದೈನಂದಿನ ಬದುಕಿನ ಅಭಿವ್ಯಕ್ತಿ ಮಾಧ್ಯಮ:
ಭಾಷೆಯು ಕೇವಲ ಕಚೇರಿಯ ಕಡತಗಳಿಗೆ ಅಥವಾ ಪುಸ್ತಕಗಳಿಗೆ ಸೀಮಿತವಾಗದೆ, ಜನರ ಬದುಕಿನ ಜೀವನಾಡಿಯಾಗಬೇಕು. ಸಾರ್ವಜನಿಕ ಫಲಕಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು, ಬ್ಯಾಂಕ್ ಅರ್ಜಿಗಳು, ರೈಲ್ವೆ/ಬಸ್ ನಿಲ್ದಾಣಗಳು, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಸಿಗಬೇಕು. ಗ್ರಾಹಕರಿಗೆ ಅವರದೇ ಭಾಷೆಯಲ್ಲಿ ಸೇವೆ ಸಿಕ್ಕಾಗ ಭಾಷೆಯ ಬಗ್ಗೆ ಗೌರವ ಹೆಚ್ಚಾಗುತ್ತದೆ. ಸಾಮಾಜಿಕ ಜಾಲತಾಣಗಳು (YouTube, Instagram, X ಇತ್ಯಾದಿ), (OTT) ವೇದಿಕೆಗಳು, ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಹೆಚ್ಚು ವಿಸ್ತಾರಗೊಳ್ಳಬೇಕು. ಯುವಜನರು ತಮ್ಮ ದೈನಂದಿನ ಭಾವನೆಗಳನ್ನು, ಆಲೋಚನೆಗಳನ್ನು ಮುಕ್ತವಾಗಿ ಕನ್ನಡದಲ್ಲಿ ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. “ಇಂಗ್ಲಿಷ್ ಬಂದರೆ ಮಾತ್ರ ಬದುಕು” ಎಂಬ ಮನಸ್ಥಿತಿ ಬದಲಾಗಿ, “ಕನ್ನಡದ ಮೂಲಕವೂ ಜಗತ್ತನ್ನು ಗೆಲ್ಲಬಹುದು” ಎಂಬ ಆತ್ಮವಿಶ್ವಾಸವನ್ನು ಯುವ ಪೀಳಿಗೆಯಲ್ಲಿ ಬೆಳೆಸುವ ಕೆಲಸ ಮಾಡಬೇಕಾಗಿದೆ.
ಈ ನೆಲೆಯಲ್ಲಿ ಕನ್ನಡವು ತನ್ನ ಬೇರುಗಳನ್ನು ಗಟ್ಟಿಯಾಗಿ ಊರಿಕೊಂಡಾಗ ಮಾತ್ರ ‘ಶಾಸ್ತ್ರೀಯ ಭಾಷೆ ಎನ್ನುವ ಕಿರೀಟಕ್ಕೆ ನಿಜವಾದ ಸಾರ್ಥಕತೆ ದೊರೆಯುತ್ತದೆ. ಶಾಸ್ತ್ರೀಯ ಸ್ಥಾನಮಾನ ದೊರೆತ ನಂತರ ಕನ್ನಡಕ್ಕೆ ಗೌರವ ಮತ್ತು ಮನ್ನಣೆ, ಅಧ್ಯಯನ ಮತ್ತು ಸಂಶೋಧನೆ, ಉದ್ಯೋಗವಕಾಶಗಳು, ಸಂರಕ್ಷಣೆ ಮತ್ತು ಪ್ರಚಾರ, ಅರ್ಥಿಕ ನೆರವು ಇಮ್ಮಡಿಯಾಗಿವೆ.
ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಅವುಗಳಲ್ಲಿ ಕನ್ನಡ ಭಾಷಾ ಕಲಿಕಾ ಕಾಯ್ದೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಇತ್ಯಾದಿಗಳು ಮಹತ್ವ ಪಡೆದವು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಪಡೆದರೂ ಕನ್ನಡ ಬೆಳೆಸುವ ಉಳಿಸುವ ಕಾರ್ಯ ನಮ್ಮದಾಗಬೇಕು. ಕನ್ನಡವನ್ನು ಹೆಚ್ಚಾಗಿ ಬಳಸುವ ಮೂಲಕ ಎಲ್ಲರಿಗೂ ಕನ್ನಡ ಅರಿವನ್ನು ವಿಸ್ತರಿಸಬೇಕು. “ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ” ಎಂಬಂತೆ ಕನ್ನಡ ಹೃದಯದ ಭಾಷೆಯಾಗಿ ನಾವೆಲ್ಲರೂ ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಮಹತ್ವವನ್ನು ಸಾರಬೇಕಾದ ಅನಿವಾರ್ಯತೆ ನಮ್ಮ ಕರ್ತವ್ಯವಾಗಬೇಕಾಗಿದೆ.
ಡಾ.ಕೃಷ್ಣಮೂರ್ತಿ.ಆರ್
ಸಹಾಯಕ ಪ್ರಾಧ್ಯಾಪಕರು,
ಸಿ.ಜಿ ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಅಕ್ಕಿಆಲೂರು. ಹಾವೇರಿ ಜಿಲ್ಲೆ.
ಇದನ್ನೂ ಓದಿ- ಆದಿಕವಿ ವಾಲ್ಮೀಕಿ: ರಾಮಾಯಣ ಮತ್ತು ಸಮಕಾಲೀನ ಸಮಾಜದ ವಿಪರ್ಯಾಸಗಳು


