ದಲಿತರ ಪರ ಕಾನೂನುಗಳಿವೆ ಆದರೆ ರಕ್ಷಣೆ ಇಲ್ಲ. ಕರ್ನಾಟಕದ ದಲಿತ ಸಂಘಟನೆಗಳ ಒಗ್ಗಟ್ಟು ಒಡೆದು ಸಾವಿರಾರು ಚೂರುಗಳಾಗಿದ್ದು, ದಲಿತರ ಮೇಲಿನ ದೌರ್ಜನ್ಯಗಳನ್ನು ಸಾಂಘಿಕವಾಗಿ ವಿರೋಧಿಸಿ ಮೇಲ್ವರ್ಗದವರ ದಮನವನ್ನು ಪ್ರತಿಭಟಿಸುವ ಸಾಮರ್ಥ್ಯ ಇಲ್ಲವಾಗಿದೆ. ಸಮಾನತೆ ಸಾರುವ ಸಂವಿಧಾನದ ಆಶಯ ಈಡೇರುವ ಕಾಲ ಇನ್ನೂ ಬಹು ದೂರ ಇದ್ದಂತಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹದ್ದಿನಾಳ ಗ್ರಾಮದ ಮಾದಿಗ ಸಮುದಾಯದ 32 ವರ್ಷದ ದಲಿತ ಯುವ ನಾಯಕ ಭೂಮನಂದನನ್ನು ಸುಂಕೇಶ್ವರಹಾಳ ಗ್ರಾಮದ ನಡುರಸ್ತೆಯಲ್ಲಿ ಮೊನ್ನೆ ಆಗಸ್ಟ್ 4 ರಂದು ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊ*ಲೆ ಮಾಡಿದೆ. ಇಬ್ಬರು ಶಂಕಿತರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹತ್ಯೆಯನ್ನು ವಿರೋಧಿಸಿ ದಲಿತ ಸಮುದಾಯ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಇದೇ ಭೂಮನಂದನ ರೀತಿಯಲ್ಲಿ 12 ವರ್ಷಗಳ ಹಿಂದೆ ದೇವೇಂದ್ರಪ್ಪನ ಕೊ*ಲೆಯಾಗಿತ್ತು. ಅಂತೂ 12 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ದಲಿತ ಮುಖಂಡ ದೇವೇಂದ್ರಪ್ಪನನ್ನು ಹತ್ಯೆ ಮಾಡಿದ ಕೊ*ಲೆಪಾತಕರಿಗೆ ಈಗ ಶಿಕ್ಷೆ ಪ್ರಕಟವಾಗಿದೆ.
ದಲಿತ ಮುಖಂಡ ದೇವೇಂದ್ರಪ್ಪ ಭೀಮಪ್ಪ ದಲಪತಿಯನ್ನು 2014 ಜನವರಿ 17 ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕನ್ಯಾಕೋಲೂರು ಗ್ರಾಮದಲ್ಲಿ ನಡೆದ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಮೇಲ್ಜಾತಿಯ ಗುಂಪೊಂದು ಅಟ್ಟಾಡಿಸಿಕೊಂಡು ಕೊಡಲಿ ದೊನ್ನೆಗಳಿಂದ ಹಾಡುಹಗಲೇ ಹಲ್ಲೆ ಮಾಡಿ ಅಮಾನುಷವಾಗಿ ಕೊಂದು ಹಾಕಿತ್ತು. ರಕ್ಷಿಸಲು ಬಂದವರ ಮೇಲೆಯೂ ಅಮಾನುಷವಾಗಿ ದಾಳಿ ಮಾಡಲಾಗಿತ್ತು.

ಕಾರಣ ಏನೆಂದರೆ.. ದೇವೇಂದ್ರಪ್ಪನು ಮೇಲ್ಜಾತಿಯವರು ಮಾಡುವ ಅನ್ಯಾಯದ ವಿರುದ್ಧ ದ್ವನಿ ಎತ್ತಿದ್ದ. ಜನವರಿ 15 ರಂದು ಜಾತ್ರೆಯ ದಿನ ಮೇಲ್ವರ್ಗ ಸಮುದಾಯದ ನಾಯಕರ ಫೋಟೋ ಇರುವ ಬ್ಯಾನರನ್ನು ಹರಿದು ಹಾಕಿದ್ದ. ಜಾತ್ರೆ ಮುಗಿದ ಮಾರನೆಯ ದಿನ ಮೇಲ್ಜಾತಿಯ ಗುಂಪು ಜಾತಿ ನಿಂದನೆ ಮಾಡಿ ಹಲ್ಲೆಗೆ ಮುಂದಾದರು. ಅವರಿಂದ ತಪ್ಪಿಸಿಕೊಳ್ಳಲು ಜುಮ್ಮಾ ಮಸೀದಿಯತ್ತ ದೇವೇಂದ್ರಪ್ಪ ಓಡಿದರೂ ಬಿಡದೇ ತೀವ್ರವಾಗಿ ಗುಂಪು ಹಲ್ಲೆ ಮಾಡಿ ಸಾಯಿಸಿದ್ದರು. ಈ ಹತ್ಯೆ ರಾಯಚೂರು ಜಿಲ್ಲೆಯಾದ್ಯಂತ ಸುದ್ದಿಯಾಗಿತ್ತು. ದಲಿತ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಶಹಾಪೂರ ಪೊಲೀಸರು 32 ಜನ ಸವರ್ಣೀಯ ಆರೋಪಿಗಳ ಮೇಲೆ ಅಕ್ರಮ ಸಭೆ, ಗಲಭೆ, ಕೊಲೆ ಪ್ರಯತ್ನ, ಜಾತಿ ನಿಂದನೆ, ಕೊಲೆ ಮುಂತಾದ ಕಾಯ್ದೆ ಅಡಿಯಲ್ಲಿ ಚಾರ್ಜ್ ಶೀಟ್ ಹಾಕಿದ್ದರು. 37 ಸಾಕ್ಷಿಗಳು ಹೇಳಿಕೆ ನೀಡಿದ್ದರು. ಜಾತಿ ಆಧಾರಿತ ಹಿಂಸಾಚಾರದ ಪ್ರಕರಣ ಎಂದು ತೀರ್ಮಾನಿಸಿದ ಯಾದಗಿರಿಯ ಸೆಷನ್ಸ್ ಕೋರ್ಟ್ ಜುಲೈ 2026 ರಂದು 20 ಜನರನ್ನು ದೋಷಿ ಎಂದು ಘೋಷಿಸಿತು. 17 ಜನರಿಗೆ ಜೀವಾವಧಿ ಶಿಕ್ಷೆ, ಒಬ್ಬರಿಗೆ 7 ವರ್ಷ ಜೈಲು ಹಾಗೂ ಇನ್ನಿಬ್ಬರಿಗೆ ಆರು ತಿಂಗಳ ಸಾದಾ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿತು. ಒಟ್ಟು ನಾಲ್ಕೂಕಾಲು ಲಕ್ಷ ದಂಡವನ್ನೂ ವಿಧಿಸಿ ಸಂತ್ರಸ್ತ ಕುಟುಂಬಕ್ಕೆ ನೀಡುವಂತೆ ತೀರ್ಪು ನೀಡಲಾಯ್ತು.
ಸದ್ಯಕ್ಕೆ ದಲಿತ ಮುಖಂಡ ದೇವೇಂದ್ರಪ್ಪನ ಹತ್ಯೆ ಮಾಡಿದವರಿಗೆ ಹನ್ನೆರಡು ವರ್ಷಗಳ ಮೇಲಾದರೂ ಶಿಕ್ಷೆಯಾಗಿ ನ್ಯಾಯ ಸಿಕ್ಕಿತಲ್ಲಾ ಎನ್ನುವ ಸಮಾಧಾನ. ಆದರೆ ಇದೇ ಅಂತಿಮವೇನಲ್ಲವಲ್ಲ. ಇನ್ನೂ ಹಲವು ಮಜಲಿನ ಕೋರ್ಟುಗಳಿವೆಯಲ್ಲ. ಅಲ್ಲಿ ಏನಾಗುವುದೋ ಗೊತ್ತಿಲ್ಲ.
ಯಾಕೆ ಇಂತಹ ಅನುಮಾನ ಎನ್ನುವುದಕ್ಕೆ ಲೇಟೆಸ್ಟ್ ಪುರಾವೆ ಡಂಗಾವಾಸ್ ಹತ್ಯಾಕಾಂಡದ ಆರೋಪಿಗಳೆಲ್ಲಾ ಖುಲಾಸೆಯಾಗಿದ್ದು. ರಾಜಸ್ಥಾನದ ನಾಗಪುರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯವು 2015 ರ ಡಂಗಾವಾಸ್ ಹತ್ಯಾಕಾಂಡದ 40 ಆರೋಪಿಗಳನ್ನು ಆರೋಪ ಮುಕ್ತರನ್ನಾಗಿಸಿ ಬಿಡುಗಡೆಗೊಳಿಸಿ 2026 ಆಗಸ್ಟ್ 5 ರಂದು ಆದೇಶಿಸಿದೆ. 11 ವರ್ಷಗಳ ಹಿಂದೆ ಅಂದರೆ 2015 ಮೇ 14 ರಂದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಐವರು ದಲಿತರು ಹಾಗೂ ಒಬ್ಬ ಸವರ್ಣೀಯ ವ್ಯಕ್ತಿ ಮೃತಪಟ್ಟಿದ್ದರು. ಕೊಲೆಯಾದ ಮೂವರು ದಲಿತರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಲಾಗಿತ್ತು. ಆಗ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು. ಆರೋಪಿಗಳು ಹತ್ಯಾ ಘಟನೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಆರೋಪಿಗಳ ವಕೀಲರ ವಾದವಾಗಿತ್ತು. ಹಾಗಾದರೆ ಆರೋಪಿಗಳು ಯಾರೂ ಕೊಲೆ ಮಾಡಿಲ್ಲ ಎನ್ನುವುದಾದರೆ ಆ ಐವರನ್ನು ಕೊಂದವರು ಯಾರು? ಎಂದು ದೂರುದಾರ ಗೋವಿಂದ ಮೇಘವಾಲ ಪ್ರಶ್ನಿಸಿದ್ದಾರೆ. ಇದು ನಮ್ಮ ನ್ಯಾಯಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆಯ ದುಸ್ಥಿತಿ. ಹಣ ಹಾಗೂ ಪ್ರಭಾವ ಇರುವ ಮೇಲ್ವರ್ಗದವರು ದಲಿತರ ಮೇಲೆ ದೌರ್ಜನ್ಯ ಎಸಗಿಯೂ ಬಚಾವಾಗಬಲ್ಲರು ಎನ್ನುವುದಕ್ಕೆ ಈ ಡಂಗಾವಾಸ್ ಪ್ರಕರಣವೇ ಸಾಕ್ಷಿಯಾಗಿದೆ.
ಏನೇ ಆಗಲಿ ದಲಿತರ ಮೇಲೆ ದರ್ಪ ತೋರಿ ಹಲ್ಲೆ ಹತ್ಯೆ ಮಾಡುವ ಮೇಲ್ವರ್ಗದವರಿಗೆ ಯಾದಗಿರಿ ನ್ಯಾಯಾಲಯದ ತೀರ್ಪು ಒಂದು ಪಾಠವಾಗಿದೆ. ಆದರೂ ದಲಿತರ ಮೇಲಿನ ಜಾತಿನಿಂದನೆ ಹಲ್ಲೆಗಳಂತೂ ಕಡಿಮೆಯಾಗುವುದಿಲ್ಲ. 2023 ರಿಂದೀಚೆಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇಕಡಾ 37 ರಷ್ಟು ಹೆಚ್ಚಾಗಿವೆ. “ನಾವೆಲ್ಲಾ ಒಂದು ನಾವೆಲ್ಲಾ ಹಿಂದು” ಎಂದು ಅರಚುವ ಸಂಘಿಗಳು ದಲಿತರ ಮೇಲಿನ ದೌರ್ಜನ್ಯವನ್ನು ಎಂದೂ ಖಂಡಿಸುವುದಿಲ್ಲ ಹಾಗೂ ದಲಿತ ಹತ್ಯಾಕಾಂಡದವರಿಗೆ ಕೋರ್ಟ್ ಶಿಕ್ಷೆ ವಿಧಿಸಿದ್ದನ್ನು ಮಾರಿಕೊಂಡ ಮಾಧ್ಯಮಗಳು ಪ್ರಸಾರ ಮಾಡುವುದಿಲ್ಲ. ದಲಿತರ ಪರ ಕಾನೂನುಗಳಿವೆ ಆದರೆ ರಕ್ಷಣೆ ಇಲ್ಲ. ಕರ್ನಾಟಕದ ದಲಿತ ಸಂಘಟನೆಗಳ ಒಗ್ಗಟ್ಟು ಒಡೆದು ಸಾವಿರಾರು ಚೂರುಗಳಾಗಿದ್ದು, ದಲಿತರ ಮೇಲಿನ ದೌರ್ಜನ್ಯಗಳನ್ನು ಸಾಂಘಿಕವಾಗಿ ವಿರೋಧಿಸಿ ಮೇಲ್ವರ್ಗದವರ ದಮನವನ್ನು ಪ್ರತಿಭಟಿಸುವ ಸಾಮರ್ಥ್ಯ ಇಲ್ಲವಾಗಿದೆ. ಸಮಾನತೆ ಸಾರುವ ಸಂವಿಧಾನದ ಆಶಯ ಈಡೇರುವ ಕಾಲ ಇನ್ನೂ ಬಹು ದೂರ ಇದ್ದಂತಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಚಿನ್ನ ಚಿನ್ನ ಆಸೈ: ಗಂಡಸರು ನೋಡಬೇಕಾದ ಹೆಂಗಸರ ಸಿನಿಮಾ!


