ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ.
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಕಾರ್ಯಕ್ರಮದ ಬಳಿಕ ವಿಧಾನಸೌಧದ ಸಭಾಪತಿಗಳ ಕಚೇರಿಯಲ್ಲಿ ಹೊರಟ್ಟಿ ಜೊತೆ ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಚರ್ಚೆ ನಡೆಸಿದ್ದರು. ಅದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದರು. ಸಿಎಂ ಜೊತೆ ಮಾತುಕತೆ ಬಳಿಕ ಬಹಳ ಸಿಟ್ಟಿನಿಂದಲೇ ಹೊರಬಂದಿದ್ದರು.
ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆಶಿ, ಅವರಿಗೆ ರಾಜಕೀಯದ ವಾಸ್ತವಾಂಶದ ಅರಿವಿದೆ. ಹೀಗಾಗಿಯೇ ಗೌರವಯುತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸಬರು ಆಯ್ಕೆ ಆಗುವ ತನಕ ಅವರೇ ಹಂಗಾಮಿ ಸಭಾಪತಿಗಳಾಗಿರಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿರೋದಾಗಿ ತಿಳಿಸಿದ್ದಾರೆ.
ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು.
ಈಗ ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಅವರೇ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

