ಇವತ್ತು ಮುಗಿಲುಮುಟ್ಟಿರುವ ಹಲವು ಸಮಸ್ಯೆಗಳಿಗೆ ಮಧ್ಯಪ್ರಾಚ್ಯದ ಯುದ್ಧದತ್ತ ಬೊಟ್ಟು ಮಾಡಿ ತೋರಿಸಿ ಮೋದಿಯವರನ್ನು ಅವರ ಸಮರ್ಥಕರು ವಹಿಸಿಕೊಂಡು ಮಾತನಾಡುತ್ತಿದ್ದಾರೆ. ನೆನಪಿರಲಿ, ನೆಹರೂ ಪ್ರಧಾನಿಯಾಗುವ ವೇಳೆಯಲ್ಲಿ ಕೇವಲ ಒಂದೆರಡು ರಾಷ್ಟ್ರಗಳು ಮಾತ್ರವಲ್ಲ, ಇಡೀ ಜಗತ್ತೇ ಎರಡನೇ ವಿಶ್ವಯುದ್ಧದಲ್ಲಿ ದಹಿಸಿಹೋಗಿತ್ತು; ಶೀತಲ ಸಮರಗಳು ಬಡರಾಷ್ಟ್ರಗಳನ್ನು ಹೈರಾಣಾಗಿಸಿದ್ದವು. ಅಂತಹ ಸಮಯದಲ್ಲೂ ತಮ್ಮ ಅಲಿಪ್ತ ನೀತಿಯ ಮೂಲಕ ಭಾರತವನ್ನು ಮುಂಚಲನೆಗೆ ಕೊಂಡೊಯ್ದ ನೆಹರೂ ದಾಖಲೆಯನ್ನು ಕೇವಲ ಅಧಿಕಾರಾವಧಿಯ ದಿನಗಳ ಲೆಕ್ಕದಲ್ಲಿ ಮುರಿದು ಬಿಸಾಕಬಹುದೇ ಹೊರತು, ಸಾಧಿಸಿದ ಪ್ರಗತಿಯ ಲೆಕ್ಕದಲ್ಲಿ ಅಲ್ಲ! – ಮಾಚಯ್ಯ ಎಂ ಹಿಪ್ಪರಿಗಿ
ಇದು ಮಹಾಭಾರತದಲ್ಲಿ ಬರುವ ಒಂದು ಪುರಾಣ ಸನ್ನಿವೇಶ. ಕುರುಕ್ಷೇತ್ರ ಯುದ್ಧದ ಹದಿನೇಳನೇ ದಿನ ಅರ್ಜುನ ಮತ್ತು ಕರ್ಣ ಮುಖಾಮುಖಿಯಾಗುತ್ತಾರೆ. ಕೃಷ್ಣ, ಅರ್ಜುನನ ರಥದ ಸಾರಥಿ. ತುಸು ಕಾಲ ಸಮಬಲದ ಹೋರಾಟ ನಡೆದ ನಂತರ, ಅರ್ಜುನ ತನ್ನ ಒಂದು ದಿವ್ಯಾಸ್ತ್ರ ಪ್ರಯೋಗಿಸುತ್ತಾನೆ. ಅದು ಕರ್ಣನ ರಥಕ್ಕೆ ಅಪ್ಪಳಿಸಿ, ರಥವನ್ನು ಏಳು ಮಾರುಗಳಷ್ಟು ಹಿಂದಕ್ಕೆ ಚಿಮ್ಮುವಂತೆ ಮಾಡುತ್ತೆ. ಅರ್ಜುನ ಜಂಬದಿಂದ ಬೀಗುತ್ತಾನೆ. ಸಾವರಿಸಿಕೊಳ್ಳುವ ಕರ್ಣ, ತಾನೂ ಒಂದು ಬಾಣ ಪ್ರಯೋಗಿಸುತ್ತಾನೆ. ಅರ್ಜುನನ ರಥದ ತಲೆಭಾಗಕ್ಕೆ ಅಪ್ಪಳಿಸುವ ಅದು, ರಥವನ್ನು ಅಲುಗಾಡಿಸಿ, ಮೂರು ಅಡಿಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಅದನ್ನು ಕಂಡ ಕೃಷ್ಣ “ಭೇಷ್ ಕರ್ಣ! ನೀನು ನಿಜಕ್ಕೂ ಅದ್ಭುತ ಕದನ ಕಲಿ” ಎಂದು ಹೊಗಳುತ್ತಾನೆ.
ಕೃಷ್ಣನಿಂದ ಕರ್ಣನ ಹೊಗಳಿಕೆಯ ಮಾತುಕೇಳಿ ಅರ್ಜುನನ ಮೈ ಉರಿದುಹೋಗುತ್ತದೆ. ತನ್ನ ರಥದ ಸಾರಥಿಯಾದವನು ಎದುರಾಳಿಯನ್ನು ಹೊಗಳುವುದೆಂದರೇನು?
ಕೇಳಿಯೇ ಬಿಡುತ್ತಾನೆ, “ಎಲೈ ಮಾಧವ, ನಾನು ಆ ಕರ್ಣನ ರಥವನ್ನು ಏಳು ಮಾರು ಹಿಂದಕ್ಕೆ ಕದಲುವಂತೆ ಬಾಣ ಪ್ರಯೋಗ ಮಾಡಿದಾಗ, ನೀನು ಏನೂ ಹೇಳದೆ ಮೌನವಾಗಿದ್ದೆ. ಆದರೆ ಆ ಕರ್ಣ, ನನ್ನ ರಥವನ್ನು ಯಕಶ್ಚಿತ್ ಮೂರು ಅಡಿಗಳಷ್ಟು ಹಿಂದಕ್ಕೆ ಸರಿಸಿದ್ದಕ್ಕೆ ಅವನನ್ನು ಹೊಗಳುತ್ತಿರುವೆಯಲ್ಲಾ, ಇದು ನ್ಯಾಯವೇ? ನಾ ತೋರಿದ ಆತ್ಮೀಯತೆಗೆ ಇದೆಂಥಾ ಪಕ್ಷಪಾತಿ ಪ್ರತಿಕ್ರಿಯೆ ನಿನ್ನದು?”
ಕೃಷ್ಣ ನಸುನಗುತ್ತಾ ಉತ್ತರಿಸುತ್ತಾನೆ, “ಮಿತ್ರ ಅರ್ಜುನ, ಕರ್ಣನದು ಒಂದು ರಥವಷ್ಟೆ. ಲೋಹದ ಭಾರದ ಹೊರತಾಗಿ ಅದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲ. ಆದರೆ ನಿನ್ನ ರಥದ ತೂಕವನ್ನು ಗಮನಿಸಿಕೊಂಡಿರುವೆಯಾ? ಭೂಮಂಡಲವನ್ನೇ ಬಾಯಿಯಲ್ಲಿ ಅಡಗಿಸಿಟ್ಟುಕೊಂಡ ನಾನು ಸಾರಥಿಯಾಗಿ ಕೂತಿದ್ದೇನೆ. ಭೂಮಿತೂಕದ ಹನುಮನು ಪತಾಕೆಯ ರೂಪದಲ್ಲಿ ನಿನ್ನ ರಥದ ಮೇಲೆ ಹಾರಾಡುತ್ತಿದ್ದಾನೆ. ಸಾಕ್ಷಾತ್ ಅಗ್ನಿಯ ವರದಿಂದ ದಕ್ಕಿದ ರಥ ಇದು. ಯಕಶ್ಚಿತ್ ಒಂದು ಲೋಹದ ರಥವನ್ನು ಏಳು ಮಾರು ಜರುಗುವಂತೆ ಮಾಡಿದ ನಿನ್ನ ಸಾಹಸಕ್ಕಿಂತ ಇಂತಹ ರಥವನ್ನು ಮೂರು ಅಡಿಗಳಷ್ಟು ಹಿಂದಕ್ಕೆ ಜರುಗುವಂತೆ ಮಾಡಿದ ಕರ್ಣನ ಸಾಹಸ ದೊಡ್ಡದು.”
ಮೋದಿಯವರು ನೆಹರೂ ಅವರ ದೀರ್ಘಾವಧಿ ಪ್ರಧಾನಿಯ ದಾಖಲೆಯನ್ನು ಪುಡಿಗಟ್ಟಿಬಿಟ್ಟಿದ್ದಾರೆ ಎಂಬ ಚರ್ಚೆಯ ಈ ಕಾಲಕ್ಕೆ, ಈ ಪುರಾಣ ಕಥೆ ಹೆಚ್ಚು ಸಮಂಜಸವೆನಿಸುತ್ತೆ. ಯಾವುದೇ ವ್ಯಕ್ತಿಗಳ ಸಾಧನೆಗಳನ್ನು ತುಲನೆ ಮಾಡುವಾಗ, ಕಣ್ಣಿಗೆ ಕಾಣುವ ಭೌತಿಕ ಮಾನದಂಡಗಳನ್ನಷ್ಟೇ ಅಲ್ಲ, ಅವರನ್ನು ಆವರಿಸಿರುವ ಸಂದರ್ಭ-ಸವಾಲುಗಳನ್ನೂ ಪರಿಗಣಿಸಿ ತಕ್ಕಡಿಯಲ್ಲಿಡಬೇಕಾಗುತ್ತದೆ. ಕರ್ಣನ ವಿಚಾರದಲ್ಲಿ ಕೃಷ್ಣ ಮಾಡಿದ್ದು ಅದನ್ನೆ.
ಪಾಂಡವರಲ್ಲೇ ಅತಿ ಹಿರಿಯನಾದ ಕುಂತೀಪುತ್ರ ಕರ್ಣನಿಗೆ (ನೆಹರೂ), ಅಹಮ್ಮಿಕೆಯ ಅರ್ಜುನನಿಗಿದ್ದ (ಮೋದಿ) ಯಾವ ಅನುಕೂಲಗಳೂ ಲಭಿಸಲಿಲ್ಲ. ಗಾರುಡಿ ವಿದ್ಯೆಯ ಕೃಷ್ಣನ (ಆರ್ ಎಸ್ ಎಸ್) ನೆರವು ಕೂಡಾ ಅರ್ಜುನನಿಗಿತ್ತು. ಮಾಯಾವಿ ಕೃಷ್ಣನ ಕುತಂತ್ರದ ಮಾತುಗಳಿಂದ ಪ್ರೇರಿತಳಾದ ತನ್ನ ತಾಯಿ ಕುಂತಿಯ ಬೇಡಿಕೆಗೆ ಮಣಿದು ‘ಹೂಡಿದ ಬಾಣ ಮತ್ತೆ ಹೂಡಲಾರೆ’ ಎಂಬ ವಚನ ನೀಡಿ, ಅಸಹಾಯಕ ಸ್ಥಿತಿಯಲ್ಲಿ ಕರ್ಣ ಕುರುಕ್ಷೇತ್ರದ ಯುದ್ಧಭೂಮಿಗಿಳಿದಿದ್ದ. ಯುದ್ಧದ ಫಲಿತಾಂಶವನ್ನಷ್ಟೇ ಪರಿಗಣಿಸಿ, ಇಂತಹ ಕರ್ಣನಿಗೆ ಸರಿಸಮನಾಗಿ ಅರ್ಜುನನನ್ನು ತೂಗಲು ಸಾಧ್ಯವೇ? ಸ್ವತಃ ಕೃಷ್ಣನಿಗೂ ಅದು ಸರಿಯೆನಿಸಲಿಲ್ಲ. `ಭೇಷ್ ಕರ್ಣ!’ ಎಂದು ಉದ್ಘರಿಸಿದ.
ಇಷ್ಟು ಸಾಕು. ಈ ಪುರಾಣದ ರೂಪಕವನ್ನು ಈಗ ಪಕ್ಕಕ್ಕಿಡೋಣ. ಹನ್ನೆರಡಲ್ಲ, ಇಪ್ಪತ್ನಾಲ್ಕು ವರ್ಷ ಆಡಳಿತ ನಡೆಸಿದರೂ ಮೋದಿಯವರು ಹೇಗೆ ನೆಹರೂ ಅವರಿಗೆ ಸರಿಸಮನಾಗಲಾರರು ಎಂಬುದನ್ನು ನೋಡೋಣ. ಮೋದಿಯವರು ಭಾರತದ ಪ್ರಧಾನಿಯಾದ ಕಾಲಕ್ಕೂ, ನೆಹರೂ ಅವರು ಪ್ರಧಾನಿಯಾದ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
1947ರಲ್ಲಿ ವಸಾಹತುಶಾಹಿ ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸಿ, ನೆಹರೂ ಭಾರತದ ಪ್ರಪ್ರಥಮ ಪ್ರಧಾನಿಯಾಗುವಾಗ ದೇಶದ ಪರಿಸ್ಥಿತಿ ಚಿಂತಾಜನಕವಾಗಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ನಿರಂತರ ಲೂಟಿ ಮತ್ತು ಅಂತರ್ಗತ ಜಾತಿವ್ಯವಸ್ಥೆಯ ಅಸಮಾನತೆಯಿಂದಾಗಿ ಭಾರತ ಬಡತನದ ಆಳ ಕೂಪದಲ್ಲಿತ್ತು. ಜಾಗತಿಕ ಮಟ್ಟದಲ್ಲಿ ದೇಶದ ಜಿಡಿಪಿ ಕಾಣ್ಕೆ 3 ರಿಂದ 4%ಗೆ ಕುಸಿದಿತ್ತು. ಜಾತಿಪದ್ಧತಿ ಮತ್ತು ಜಮೀನ್ದಾರಿ ವ್ಯವಸ್ಥೆಗಳಿಂದಾಗಿ ಭೂ ಒಡೆತನ ಕೆಲವೇ ಜನರ ಕೈವಶದಲ್ಲಿತ್ತು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.70 ರಿಂದ 75ರಷ್ಟು ಜನ, ಉಳುವ ಭೂಮಿಯೇ ಇಲ್ಲದೆ ಭೂಮಾಲೀಕರ ಹೊಲಗಳಲ್ಲಿ ಕೂಲಿಗಳಾಗಿ, ಗೇಣಿದಾರರಾಗಿ ದುಡಿಯುತ್ತಿದ್ದರು. ಹಾಗಾಗಿ ಸಾಕಷ್ಟು ಜಮೀನು ವ್ಯರ್ಥವಾಗಿ ಬಿದ್ದಿತ್ತು. ಕೃಷಿ ಪದ್ಧತಿ ಕೂಡಾ ಮಳೆಯಾಶ್ರಿತ ಹಳೆಯ ಕಾಲದ ಕಡಿಮೆ ಇಳುವರಿಯದ್ದಾಗಿತ್ತು. ಅಂದು ಹೆಕ್ಟೇರ್‍ಗೆ ಸರಾಸರಿ 522 ಕೆಜಿ ಧಾನ್ಯ ಇಳುವರಿಯಾಗುತ್ತಿತ್ತಷ್ಟೆ (ಈಗ ಪ್ರತಿ ಹೆಕ್ಟೇರ್‍ಗೆ 2100 ಕೆಜಿ ಇಳುವರಿ ಇದೆ). ಇಡೀ ದೇಶದ ಒಟ್ಟಾರೆ ಇಳುವರಿ ಸಾಮರ್ಥ್ಯ ಕೇವಲ 50 ಮಿಲಿಯನ್ ಟನ್ ಮಾತ್ರ ಇತ್ತು. ಒಟ್ಟು ಕೃಷಿ ಪ್ರದೇಶದಲ್ಲಿ ಕೇವಲ ಶೇ.20ರಷ್ಟು ಜಮೀನಿಗೆ ಮಾತ್ರ ನೀರಾವರಿ ಸೌಲಭ್ಯವಿತ್ತು. ಬೆಳೆದ ಬೆಳೆಯನ್ನು ಶೇಖರಿಸಿಡುವ ತಂತ್ರಜ್ಞಾನವೂ ಇರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ದೇಶದ ಶೇ.80ರಷ್ಟು ಜನ ತೀವ್ರ ಬಡತನದಲ್ಲಿ, ಹಸಿವಿನಲ್ಲಿ ಬಳಲುತ್ತಿದ್ದರು. ಸ್ವಾತಂತ್ರ್ಯ ಲಭಿಸುವುದಕ್ಕೂ ಮೂರು ವರ್ಷ ಮುಂಚೆ ಬಂಗಾಳ ಪ್ರಾಂತದಲ್ಲಿ ಕಾಣಿಸಿಕೊಂಡಿದ್ದ ರಣಭೀಕರ ಬರಗಾಲದಿಂದಾಗಿ 20 ರಿಂದ 30 ಲಕ್ಷ ಜನ ಹಸಿವಿನಿಂದ ಸಾವನ್ನಪ್ಪಿದ್ದರು. ಜನರು ಹಸಿವಿನಿಂದ ಸಾಯುವುದನ್ನು ತಪ್ಪಿಸಲು ಅಮೆರಿಕಾದಂತಹ ವಿದೇಶಗಳಿಂದ ಪಿಎಲ್-480 ಯೋಜನೆಗಳ ಅಡಿಯಲ್ಲಿ ದವಸ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬ್ರಿಟಿಷರು ಭಾರತವನ್ನು ತಮ್ಮ ಕೈಗಾರಿಕೆಗಳಿಗೆ ಬೇಕಾದ ಕಚ್ಛಾ ಪದಾರ್ಥಗಳ ಆಗರವಾಗಿ ಮತ್ತು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಗ್ರಾಹಕ ದೇಶವನ್ನಾಗಿ ಮಾತ್ರ ಪರಿಗಣಿಸಿದ್ದರಿಂದ ಇಲ್ಲಿ ಸ್ವಾವಲಂಬಿ ಕೈಗಾರಿಕೆಗಳಿಲ್ಲದೆ ದೇಶ ತತ್ತರಿಸಿತ್ತು. ಕೃಷಿ ಮಾತ್ರವೇ ಇಲ್ಲಿನ ಏಕೈಕ ಆಧಾರವಾಗಿತ್ತು. ಅವತ್ತಿನ ಭಾರತೀಯರ ತಲಾದಾಯವು, ಅಮೆರಿಕಾದ ವ್ಯಕ್ತಿಯ ತಲಾದಾಯದ 15ನೇ ಒಂದು ಭಾಗದಷ್ಟಿತ್ತು ಅಷ್ಟೆ. ಆರೋಗ್ಯ ಸೌಲಭ್ಯಗಳಿಲ್ಲದೆ ದೇಶದ ಜನರ ಸರಾಸರಿ ಆಯಸ್ಸು 32 ವರ್ಷಗಳಿಗೆ ಕುಸಿದಿತ್ತು. ಮಲೇರಿಯಾ, ಕಾಲರಾ, ಕ್ಷಯ, ದಡಾರದಂತಹ ರೋಗಗಳು ಊರೂರನ್ನೇ ಸರ್ವನಾಶ ಮಾಡುತ್ತಿದ್ದವು. ಅಪೌಷ್ಠಿಕತೆ ಮತ್ತು ಶಿಶುಮರಣ ಪ್ರಮಾಣಗಳು ಅಂಕೆಗೂ ನಿಲುಕದಷ್ಟು ಆಳವಾಗಿದ್ದವು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 12 ರಿಂದ 14ರಷ್ಟು ಜನ ಮಾತ್ರ ಓದುಬರಹ ಕಲಿತವರು. ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ 7-8% ಮಾತ್ರ! ಸಂಪನ್ಮೂಲಗಳನ್ನು ಸಾಗಿಸುವ ಅನುಕೂಲಕ್ಕೋಸ್ಕರ ತಮಗೆ ಬೇಕಾದ ಕಡೆ ವಿದ್ಯುತ್ ಸಂಪರ್ಕ, ರಸ್ತೆ ಮಾರ್ಗ, ರೈಲ್ವೆ ಸಂಚಾರಗಳನ್ನು ಬ್ರಿಟಿಷರು ನಿರ್ಮಿಸಿಕೊಂಡಿದ್ದರು. ಅದರಾಚೆಗೆ ಗ್ರಾಮೀಣ ಪ್ರದೇಶಗಳು ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ, ಸೇತುವೆಯಂತಹ ಮೂಲಸೌಕರ್ಯಗಳಿಲ್ಲದೆ ಅನಾಥವಾಗಿದ್ದವು.
ಇವೆಲ್ಲಕ್ಕಿಂತ ಮುಖ್ಯವಾಗಿ ಬ್ರಿಟಿಷರು ಮತ್ತು ಧಾರ್ಮಿಕ ಮೂಲಭೂತವಾದಿಗಳಿಂದಾಗಿ ದೇಶ ವಿಭಜನೆಯಾಗಿ, ತೀವ್ರ ಕೋಮುಗಲಭೆಗಳು ಭುಗಿಲೆದ್ದಿದ್ದವು. ಬಂಗಾಳದ ನೌಖಾಲಿಯಲ್ಲಿ 2,000-5000 ಜನ; ಪಂಜಾಬ್ ಪ್ರಾಂತ್ಯದಲ್ಲಿ 4000-8000, ಜಮ್ಮುವಿನಲ್ಲಿ 1 ಲಕ್ಷ ಜನರು ಈ ಕೋಮುದಳ್ಳುರಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಒಟ್ಟಾರೆ ಈ ಗಲಭೆಗಳಲ್ಲಿ ಸತ್ತವರ ಸಂಖ್ಯೆ 5 ಲಕ್ಷದಿಂದ 20 ಲಕ್ಷ ಎನ್ನಲಾಗುತ್ತದೆ. ಅದಕ್ಕಿಂತಲೂ ದುಪ್ಪಟ್ಟು ಜನ ನಿರಾಶ್ರಿತರಾಗಿ ಸರ್ಕಾರದತ್ತ ನೋಡುತ್ತಿದ್ದರು.
ಇಂಥಾ ಪರಿಸ್ಥಿತಿಯಲ್ಲಿ ನೆಹರೂ ಚುಕ್ಕಾಣಿ ಹಿಡಿದರು. ವೈಜ್ಞಾನಿಕ ಮನೋಭಾವ, ಜಾತ್ಯತೀತ ತಳಹದಿ, ಅಲಿಪ್ತ ವಿದೇಶಾಂಗ ನೀತಿ, ಪಂಚವಾರ್ಷಿಕ ಅಭಿವೃದ್ಧಿ ಯೋಜನೆಗಳ ಮೂಲಕ ಒಂದು ಸದೃಢ, ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. “ಬೇರೆ ಯಾವುದನ್ನು ಬೇಕಾದರೂ ಕಾಯಿಸಬಹುದು, ಆದರೆ ಕೃಷಿಯನ್ನಲ್ಲ” ಎಂಬ ಮನೋಭಾವದ ನೆಹರೂ ಆಣೆಕಟ್ಟುಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಪ್ರಪಂಚದ ಅತಿ ಉದ್ದನೆಯ ಆಣೆಕಟ್ಟು ಎಂಬ ಹೆಗ್ಗಳಿಕೆ ಹೊಂದಿರುವ ಹಿರಾಕುಡ್ ಸೇರಿದಂತೆ ಒಟ್ಟು ಏಳು ಪ್ರಧಾನ ಆಣೆಕಟ್ಟುಗಳು ಅವರ ಅವಧಿಯಲ್ಲಿ ನಿರ್ಮಾಣಗೊಂಡವು. ಇದರಿಂದಾಗಿ ನೀರಾವರಿ ವಿಸ್ತರಣೆಗೆ ಸಹಕಾರಿಯಾಯ್ತು. ಮುಂಬಂದ ಹಸಿರುಕ್ರಾಂತಿಯಲ್ಲಿ ಇವು ಪ್ರಧಾನ ಭೂಮಿಕೆ ನಿಭಾಯಿಸಿದವು. ಸೋವಿಯತ್ ಒಕ್ಕೂಟದಿಂದ ಪ್ರಭಾವಿತವಾಗಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಟ್ಟರು. ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಸ್ತರಿಸಿದರು. ಐದು ಐಐಟಿ, ಏಮ್ಸ್, 14 ರೀಜನಲ್ ಇಂಜಿನಿಯರಿಂಗ್ ಕಾಲೇಜ್-ಆರ್‍ಇಸಿ (ಇಂದಿನ ಐಐಟಿಗಳು), ಎರಡು ಐಐಎಂ ಉನ್ನತ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದರು. ಮುಂದೆ ಇಸ್ರೋ ಸಂಸ್ಥೆ ಸ್ಥಾಪನೆಗೆ ಅಡಿಪಾಯವಾದ INCOSPAR ಸ್ಥಾಪನೆ ಮೂಲಕ ವೈಜ್ಞಾನಿಕ ಪ್ರಗತಿಗೆ ಮುನ್ನುಡಿ ಬರೆದರು. ಇವುಗಳ ಜೊತೆಗೆ ಪಾಕಿಸ್ತಾನ ಮತ್ತು ಚೀನಾದ ಗಡಿ ತಗಾದೆಗಳನ್ನೂ ಅವರು ನಿಭಾಯಿಸಬೇಕಾಯ್ತು.
ಹಾಗಂತ ನೆಹರೂ ಆಡಳಿತದಲ್ಲಿ ಲೋಪಗಳೇ ಇರಲಿಲ್ಲವೆಂದೇನಲ್ಲ. ಆದರೆ, ಒಟ್ಟಾರೆಯಾಗಿ ಒಂದು ಅಗ್ನಿಕುಂಡದಲ್ಲಿ ಹಾಯ್ದು ದೇಶವನ್ನು ಮುನ್ನಡೆಸಬೇಕಾದ ಹೊಣೆ ಅವರ ಹೆಗಲಮೇಲಿತ್ತು. ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ಇವತ್ತು ಭಾರತ ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದು ನಿಲ್ಲಲು ಸಾಧ್ಯವಾಗಿದೆ.
2014ರಲ್ಲಿ ಮೋದಿಯವರು ಪ್ರಧಾನಿಯಾಗುವ ವೇಳೆಗಾಗಲೇ ದೇಶ ಎಂತಹ ಸಾಧನೆಯ ಹಾದಿಯಲ್ಲಿತ್ತು ಎಂಬುದನ್ನು ನಾವು ಕಂಡಿದ್ದೇವೆ. ಮೋದಿಯವರ ಸಮರ್ಥಕರು ‘ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ 2014ರಲ್ಲಿ’ ‘ಅದುವರೆಗೆ ಹಾವಾಡಿಗರ ದೇಶವೆಂದು ಮೂದಲಿಕೆಗೆ ಒಳಗಾಗಿತ್ತು’ ಎಂದು ವಾದಿಸಬಹುದು. ಅಂಕಿಅಂಶಗಳ ಸಮೇತ ಅವರಿಗೆ ತಕ್ಕ ಉತ್ತರ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ. ಅದರಿಂದ ಅವರ ಮೇಲೆ ಯಾವ ಪ್ರಯೋಜನವೂ ಆಗದು. ಆದರೆ, 2004ರಲ್ಲಿ ಚುನಾವಣೆಯನ್ನು ಎದುರಿಸುವಾಗ ಇದೇ ಭಾಜಪ ಪಕ್ಷವು ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ “ಭಾರತ ಈಗ ಪ್ರಕಾಶಿಸುತ್ತಿದೆ” ಎಂದು ಪ್ರಚಾರ ಮಾಡಿದ್ದು ನೆನಪಿರಬಹುದು. ಅಂದರೆ ಮೋದಿಯವರಿಗು ಮೊದಲೇ ಭಾರತ ಪ್ರಕಾಶಿಸಲು ಪ್ರಾರಂಭವಾಗಿತ್ತು. ಆ ಪ್ರಕಾಶ ಕೇವಲ ಐದು-ಹತ್ತು ವರ್ಷಗಳಲ್ಲಿ ಸಾಧ್ಯವಾದುದಲ್ಲ. ಸ್ವಾತಂತ್ರೋತ್ತರ ನಿರಂತರ ಪ್ರಯತ್ನದ ಫಲ ಅದಾಗಿತ್ತು.
ಆದರೆ 2014ರಲ್ಲಿ ಮೋದಿಯವರು ಪ್ರಧಾನಿಯಾದ ನಂತರದಿಂದೀಚೆಗೆ, ದೇಶದ ಜಿಡಿಪಿ ಬೆಳವಣಿಗೆ, ಹಸಿವಿನ ಸೂಚ್ಯಂಕ, ನಿರುದ್ಯೋಗ ಪ್ರಮಾಣ, ಪತ್ರಿಕಾ ಸ್ವಾತಂತ್ರ್ಯ, ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಗಳು, ರೂಪಾಯಿ ಮೌಲ್ಯಕುಸಿತಗಳು ಯಾವ ಗಡಿಯನ್ನು ಮೀರಿವೆ ಎಂದು ಒಮ್ಮೆ ಅವಲೋಕಿಸಿದರೆ, ನೆಹರೂ ಜೊತೆಗೆ ಮೋದಿಯವರನ್ನಿಟ್ಟು ತೂಗಿ `ದಾಖಲೆ ಪುಡಿಗಟ್ಟಿಸಬಹುದೇ?’ ಎಂಬುದು ಮನದಟ್ಟಾಗುತ್ತದೆ. ಇವತ್ತು ಮುಗಿಲುಮುಟ್ಟಿರುವ ಹಲವು ಸಮಸ್ಯೆಗಳಿಗೆ ಮಧ್ಯಪ್ರಾಚ್ಯದ ಯುದ್ಧದತ್ತ ಬೊಟ್ಟು ಮಾಡಿ ತೋರಿಸಿ ಮೋದಿಯವರನ್ನು ಅವರ ಸಮರ್ಥಕರು ವಹಿಸಿಕೊಂಡು ಮಾತನಾಡುತ್ತಿದ್ದಾರೆ. ನೆನಪಿರಲಿ, ನೆಹರೂ ಪ್ರಧಾನಿಯಾಗುವ ವೇಳೆಯಲ್ಲಿ ಕೇವಲ ಒಂದೆರಡು ರಾಷ್ಟ್ರಗಳು ಮಾತ್ರವಲ್ಲ, ಇಡೀ ಜಗತ್ತೇ ಎರಡನೇ ವಿಶ್ವಯುದ್ಧದಲ್ಲಿ ದಹಿಸಿಹೋಗಿತ್ತು; ಶೀತಲ ಸಮರಗಳು ಬಡರಾಷ್ಟ್ರಗಳನ್ನು ಹೈರಾಣಾಗಿಸಿದ್ದವು. ಅಂತಹ ಸಮಯದಲ್ಲೂ ತಮ್ಮ ಅಲಿಪ್ತ ನೀತಿಯ ಮೂಲಕ ಭಾರತವನ್ನು ಮುಂಚಲನೆಗೆ ಕೊಂಡೊಯ್ದ ನೆಹರೂ ದಾಖಲೆಯನ್ನು ಕೇವಲ ಅಧಿಕಾರಾವಧಿಯ ದಿನಗಳ ಲೆಕ್ಕದಲ್ಲಿ ಮುರಿದು ಬಿಸಾಕಬಹುದೇ ಹೊರತು, ಸಾಧಿಸಿದ ಪ್ರಗತಿಯ ಲೆಕ್ಕದಲ್ಲಿ ಅಲ್ಲ!
ಪುರಾಣಕಾರನ ಪ್ರಕಾರ, ಕೃಷ್ಣನಿಗೆ ಅರ್ಜುನನಿಗಿಂತ ಕರ್ಣ ಗ್ರೇಟ್ ಅನ್ನಿಸಿದ್ದು ಬಹುಶಃ ಇಂತದ್ದೇ ವಿವೇಚನೆಯಿಂದ!
ಮಾಚಯ್ಯ ಎಂ ಹಿಪ್ಪರಿಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- https://kannadaplanet.com/thinking-as-dissent-thoughts-on-language-and-world/ “ಚಿಂತನೆಯೇ ಭಿನ್ನಮತವಾದಾಗ – ಭಾಷೆ ಮತ್ತು ಜಗತ್ತಿನ ಕುರಿತು ಆಲೋಚನೆಗಳು”- ಒಂದು ಉಪನ್ಯಾಸದ ಸುತ್ತ ಆಲೋಚನೆಯ ಹುತ್ತ


