ಗೆಲ್ಲುವುದು ಯಾವ “ಇಸಂ” ಅಲ್ಲ, ಯಾವ “ವಾದ’ ಅಲ್ಲ. ದೇವಸ್ಥಾನದ ಗಂಟೆಗೂ ಪಡಿತರದ ಅಕ್ಕಿಗೂ ನಡೆವ ಈ ಯುದ್ಧದಲ್ಲಿ, ಜನರ ಬದುಕಿಗೆ ನೇರವಾಗಿ ಸ್ಪಂದಿಸುವ “ಕೈಗಳು” ಮಾತ್ರ ಶಾಶ್ವತ. ರಾಜಕಾರಣದ ರಂಗದಲ್ಲಿ “ರಾಮ” ಒಂದು ಪಾತ್ರ ಮಾತ್ರ. ಆದರೆ “ಅನ್ನ”ವೇ ಮುಖ್ಯ. ಇದನ್ನು ಅರಿತವರು ಆಳುತ್ತಾರೆ, ಮರೆತವರು ಮಾಯವಾಗುತ್ತಾರೆ ಎಂಬುದೇ ಕರ್ನಾಟಕದ ರಾಜಕಾರಣದ ಕಟು ಸತ್ಯ – ಪ್ರೊ.ಷಾಕಿರಾ ಖಾನು, ಕುವೆಂಪು ಭಾಷಾ ಭಾರತಿ ಪುಸ್ತಕ ಪ್ರಾಧಿಕಾರದ ಸದಸ್ಯೆ.
ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ಹೆಸರು ಹಲವು ದಶಕಗಳಿಂದ ಚರ್ಚೆಯಲ್ಲಿದೆ. ಅವರನ್ನು “ರಾಮನ ಅಪ್ಪಟ ಭಕ್ತ” ಎಂದು ಕರೆಯುವುದು ವ್ಯಂಗ್ಯವೇ ಅಥವಾ ವಾಸ್ತವವೇ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುವ ವಿಷಯ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನವನ್ನು ಸಮಾಜವಾದಿ ಹಿನ್ನೆಲೆಯಿಂದ ಪ್ರಾರಂಭಿಸಿದವರು. ರಾಮಕೃಷ್ಣ ಹೆಗಡೆ ಅವರ ಪ್ರಭಾವ, ಲೋಹಿಯಾವಾದಿ ಚಿಂತನೆಗಳು ಅವರನ್ನು ರೂಪಿಸಿದವು. ವಕೀಲ ವೃತ್ತಿಯಿಂದ ರಾಜಕೀಯಕ್ಕೆ ಬಂದ ಅವರು ಇಂದಿರಾ ಗಾಂಧಿ ಅವರ ಕಾಲದ ಯುವ ಕಾಂಗ್ರೆಸ್ನಿಂದ ಹಿಡಿದು ಜೆಡಿಎಸ್ ಮೂಲಕ ಎರಡು ಬಾರಿ ಮುಖ್ಯಮಂತ್ರಿಯಾಗುವವರೆಗೆ ಅವರ ಪಯಣ ಮುಂದುವರೆಸಿದರು. ಅವರು ಬಹಿರಂಗವಾಗಿ ತಮ್ಮನ್ನು “ವೈಚಾರಿಕ” ಮತ್ತು “ಜಾತ್ಯತೀತ” ಎಂದು ಗುರುತಿಸಿಕೊಂಡು ‘ನಾನು ದೇವರನ್ನು ನಂಬುವುದಿಲ್ಲ, ಆದರೆ ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ವಿರೋಧಿಸುತ್ತೇನೆ” ಎಂದು ಹಲವು ಸಭೆಗಳಲ್ಲಿ ಹೇಳಿದರು. ಹಾಗಾದರೆ ಇವರಿಗೆ “ರಾಮನ ಅಪ್ಪಟ ಭಕ್ತ” ಎಂಬ ಹಣೆಪಟ್ಟಿ ಬಂದಿದ್ದಾದರು ಹೇಗೆ ? 2018ರ ನಂತರ ಐಟಿ ಸೆಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಹುಟ್ಟಿಕೊಂಡ ಟ್ರೋಲ್, ವಿರೋಧಿಗಳ ಠೀಕೆಯ ಭಾಗವಾಗಿ, ಬೆಂಬಲಿಗರ ಸಮರ್ಥನೆಯ ಭಾಗವಾಗಿ ಬಳಕೆಯಾದ ಬಿರುದು. “ನಾನು ಚಾಮುಂಡಿ ಬೆಟ್ಟಕ್ಕೆ ಹೋಗಿಲ್ಲ. ದೇವರು ಇದ್ದರೆ ನನ್ನ ಮನೆಯಲ್ಲೇ ಇದ್ದಾನೆ’ ಎಂದಿದ್ದರು. ಕೆಲವರು ಇದನ್ನು ‘ಹಿಂದೂ ಭಾವನೆಗೆ ಧಕ್ಕೆ’ ಎಂದು ಬಿಂಬಿಸಿದಾಗ ‘ನಾನು ಯಾವ ಧರ್ಮದ ವಿರೋಧಿಯಲ್ಲ, ಆದರೆ ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ವಿರೋಧಿಸುತ್ತೇನೆ. ನನ್ನ ಮನೆಯಲ್ಲಿ ದೇವರ ಕೋಣೆ ಇದೆ, ನನ್ನ ತಾಯಿ ಪೂಜೆ ಮಾಡುತ್ತಿದ್ದರು” ಎಂದು ಸ್ಪಷ್ಟನೆ ನೀಡಿದರು. 2019ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅವರು “ಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು, ರಾಮ ಎಲ್ಲರಿಗೂ ಸೇರಿದವನು’ ಎಂದರು. ಆದರೆ 2024ರ ಜನವರಿ 22ರ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ಬಂದರೂ ಹೋಗಲಿಲ್ಲ. ‘ಇದು ಒಂದು ಪಕ್ಷದ ರಾಜಕೀಯ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮವಲ್ಲ, ನಾನು ಹೋಗಿದ್ದರೆ ಬಿಜೆಪಿಗೆ ಬೆಂಬಲ ಕೊಟ್ಟಂತಾಗುತ್ತಿತ್ತು” ಎಂದು ವಾದಿಸಿದರು. ಆಗ “ರಾಮ ವಿರೋಧಿ” ಎಂಬ ಅಭಿಯಾನವೇ ಶುರುವಾಯಿತು.
2015-2018ರ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆ, ಮುಸ್ಲಿಂ ಹೆಣ್ಣುಮಕ್ಕಳಿಗೆ ಶಾದಿ ಭಾಗ್ಯ ಯೋಜನೆ ತಂದಾಗ ಅವರ ಮೇಲೆ ‘ಮೈನಾರಿಟಿ ಓಲೈಕೆ” ಆರೋಪ ಬಂತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು “ರಾಮ ರಾಜ್ಯ ಎಂದರೆ ಸರ್ವರಿಗೂ ಸಮಪಾಲು, ಅದನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಹೀಗಾಗಿ ಅವರೇ ನಿಜವಾದ ರಾಮ ಭಕ್ತ” ಎಂದು ಪೋಸ್ಟರ್ ಹಂಚಿದರು. 2015ರ ಮೈಸೂರಿನ ಒಂದು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು “ನಾನು ಬೀಫ್ ತಿಂದಿದ್ದೇನೆ, ಅದರಲ್ಲಿ ತಪ್ಪೇನಿದೆ? ಇದು ನನ್ನ ಆಹಾರದ ಹಕ್ಕು’ ಎಂದಿದ್ದರು. ಬಿಜೆಪಿ ಇದನ್ನು ‘ಹಿಂದೂ ಭಾವನೆಗೆ ಧಕ್ಕೆ’ ಎಂದು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ರಾಮ ಮಾಂಸಾಹಾರಿ ಆಗಿದ್ದ ಎಂದು ವಾಲ್ಮೀಕಿ ರಾಮಾಯಣದಲ್ಲೇ ಇದೆ. ನಾನು ರಾಮನನ್ನು ಓದಿದ್ದೇನೆ” ಎಂದು ಹೇಳಿದರು. 2023ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ವರುಣಾ ಕ್ಷೇತ್ರದಲ್ಲಿ ಮಾತನಾಡಿ, ‘ನಾನು ಕುರುಬ ಸಮುದಾಯದವನು, ನಾನು ಯಾದವ ವಂಶದವ, ಕೃಷ್ಣ-ರಾಮ ಇಬ್ಬರೂ ಯಾದವರೇ, ಆ ಲೆಕ್ಕದಲ್ಲಿ ನಾನೂ ರಾಮನ ವಂಶಸ್ಥ’ ಎಂದಿದ್ದರು, ಬಿಜೆಪಿ ಇದನ್ನು “ಜಾತಿ ರಾಜಕಾರಣ’ ಎಂದು ಠೀಕಿಸಿತು. ಆದರೆ ಕುರುಬ ಸಂಘಟನೆಗಳು “ಇದು ಐತಿಹಾಸಿಕ ಸತ್ಯ’ ಎಂದು ಬೆಂಬಲಿಸಿದವು. 2024, ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣದಲ್ಲಿ ಸರ್ಕಾರದ ಕ್ರಮವನ್ನು ಬಿಜೆಪಿ ‘ಹಿಂದೂ ವಿರೋಧಿ’ ಎಂದು ಬಿಂಬಿಸಿತು. ಆಗ ಸಿದ್ದರಾಮಯ್ಯ “ನಾನೂ ಹನುಮನ ಭಕ್ತ, ನನ್ನ ಮನೆಯಲ್ಲಿ ಆಂಜನೇಯನ ಫೋಟೋ ಇದೆ. ಆದರೆ ಸರ್ಕಾರಿ ಜಾಗದಲ್ಲಿ ಯಾವುದೇ ಧರ್ಮದ ಧ್ವಜ ಹಾಕಬಾರದು ಎಂಬುದು ನಿಯಮ” ಎಂದು ಸದನದಲ್ಲಿ ಹೇಳಿದರು. ಗಾಂಧೀಜಿಯವರ “ರಾಮ ರಾಜ್ಯ’ ಪರಿಕಲ್ಪನೆಯನ್ನು ಮುಂದಿಟ್ಟ ಸಿದ್ದರಾಮಯ್ಯ ಅವರ ಬೆಂಬಲಿಗರು, ಗಾಂಧೀಜಿಗೆ ರಾಮ ಎಂದರೆ ದಶರಥ ಪುತ್ರನಲ್ಲ, ಸತ್ಯ ಮತ್ತು ನೀತಿಯ ಸಂಕೇತ, ‘ದುರ್ಬಲರಿಗೆ ನ್ಯಾಯ, ಹಸಿದವರಿಗೆ ಅನ್ನ” ಇದೇ ರಾಮ ರಾಜ್ಯ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ 5 ಗ್ಯಾರಂಟಿಗಳು, ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್ ಇವೆಲ್ಲವನ್ನೂ ‘ರಾಮ ರಾಜ್ಯದ ಆಧುನಿಕ ರೂಪ’ ಎಂದು ಬಿಂಬಿಸಲಾಯಿತು. 2023ರ ಬಜೆಟ್ ಭಾಷಣದಲ್ಲಿ ಅವರೇ “ಬಸವಣ್ಣನವರ ಕಾಯಕ, ಕುವೆಂಪುರವರ ವಿಶ್ವಮಾನವ, ಗಾಂಧೀಜಿಯವರ ರಾಮ ರಾಜ್ಯ – ಇವೇ ನನ್ನ ಸರ್ಕಾರದ ದಾರಿ” ಎಂದರು. 2018ರ ಚುನಾವಣಾ ಭಾಷಣದಲ್ಲಿ ‘ನಾನೂ ಹಿಂದೂ, ನನ್ನ ಮನೆಯಲ್ಲಿ ದೇವರ ಕೋಣೆ ಇದೆ. ನನ್ನ ತಾಯಿ ಪ್ರತಿ ದಿನ ಪೂಜೆ ಮಾಡುತ್ತಿದ್ದರು, ಆದರೆ ನನ್ನ ಹಿಂದುತ್ವ ಮನುಷ್ಯತ್ವವನ್ನು ಕೊಲ್ಲುವಂತದ್ದಲ್ಲ, ನನ್ನದು ಕನಕದಾಸ, ಬಸವಣ್ಣ ತೋರಿದ ಮಾನವೀಯತೆಯ ಹಿಂದುತ್ವ” ಎಂದು ಹೇಳಿ, 2024ರ ಲೋಕಸಭೆ ಚುನಾವಣೆಯಲ್ಲಿ ‘ಬೇರೆಯವರಿಗೆ ರಾಮ ಚುನಾವಣಾ ಪ್ರಚಾರಕ. ನಮಗೆ ರಾಮ ಸಾಮಾಜಿಕ ನ್ಯಾಯದ ಸಂಕೇತ. ನನ್ನ ರಾಮ ಬಡವರ ಗುಡಿಸಲಲ್ಲಿದ್ದಾನೆ, ಬೇರೆಯವರ ರಾಮ ಚಿನ್ನದ ಮಂದಿರದಲ್ಲಿದ್ದಾನೆ” ಎಂದು ವ್ಯಂಗ್ಯವಾಡಿದರು. ಈ ಹೇಳಿಕೆ ವೈರಲ್ ಆಗಿ, “ಎರಡು ರಾಮ” ಎಂಬ ಹೊಸ ಚರ್ಚೆ ಹುಟ್ಟು ಹಾಕಿತು.

ಸಿದ್ದರಾಮಯ್ಯನವರಿಗೆ ಮಠ-ಮಾನ್ಯಗಳೊಂದಿಗೆ ಅವಿರ್ಭಾವ ಸಂಬಂಧವಿತ್ತು. ಅವರು “ನಾಸ್ತಿಕ” ಎನಿಸಿಕೊಂಡರೂ, ಮುಖ್ಯಮಂತ್ರಿಯಾಗಿದ್ದಾಗ 2013-2018ರ ಅವಧಿಯಲ್ಲಿ ಹಲವಾರು ಮಠಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಆದಿಚುಂಚನಗಿರಿ, ಸುತ್ತೂರು, ಸಿರಿಗೆರೆ, ಪೇಜಾವರ ಮಠಗಳಿಗೆ ಭೇಟಿ ನೀಡಿ 2017ರಲ್ಲಿ ಕೂಡಲಸಂಗಮ ಬಸವಣ್ಣನವರ ಐಕ್ಯ ಮಂಟಪಕ್ಕೆ ಸಹಾಯವನ್ನು ಘೋಷಿಸಿದರು. ‘ನಾನು ಧರ್ಮವನ್ನು ಗೌರವಿಸುತ್ತೇನೆ, ಆದರೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ” ಎಂದು ಸಮರ್ಥಿಸಿಕೊಂಡರು.
ಅವರ ತಾತ್ವಿಕತೆಯನ್ನು ವಿರೋಧಿಸುವವರ ಪ್ರಕಾರ ಭಕ್ತಿ ಎಂದರೆ ಆಚರಣೆ, ಸಂಪ್ರದಾಯ, ದೇವಸ್ಥಾನ. ‘ಗೋಹತ್ಯೆ ನಿಷೇಧ’ ವಿರೋಧಿಸಿದವರು, ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಿದವರು, ರಾಮ ಮಂದಿರ ಉದ್ಘಾಟನೆಗೆ ಹೋಗದವರು ರಾಮ ಭಕ್ತರಾಗಲು ಹೇಗೆ ಸಾಧ್ಯ?” ಎಂಬುದು. ಕರ್ನಾಟಕದಲ್ಲಿ 1990ರ ನಂತರ ಮಂಡಲ್-ಕಮಂಡಲ್ ರಾಜಕಾರಣ ಶುರುವಾದ ಮೇಲೆ ಧರ್ಮ ದೊಡ್ಡ ಅಸ್ತ್ರವಾಯಿತು. ಒಬ್ಬ ನಾಯಕನನ್ನು “ಭಕ್ತ” ಅಥವಾ “ದ್ರೋಹಿ’ ಎಂದು ಕರೆಯುವುದು ಮತ ಕ್ರೋಢೀಕರಣದ ತಂತ್ರವಾಯಿತು. “ರಾಮನ ಅಪ್ಪಟ ಭಕ್ತ” ಎಂದು ಮೊದಲು ಟ್ರೋಲ್ ಆದ ಸಿದ್ದರಾಮಯ್ಯ ನಂತರ ಅವರ ಧೋರಣೆ ಪಾಸಿಟಿವ್ ನ್ಯಾರೇಟಿವ್ ಆಯಿತು. ಇಂತಹ ಬದಲಾವಣೆ ತಂದ ನಾಯಕರು ಬಹಳ ವಿರಳ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಕ್ಕಾಗ, “ಇದೇ ಸೀತೆಗೆ ರಾಮ ಕೊಟ್ಟ ಗೌರವ” ಎಂದು ಕೆಲ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬರೆದರು.
ಕರ್ನಾಟಕದ ರಾಜಕಾರಣದಲ್ಲಿ ಜಾತಿ ಮತ್ತು ಧರ್ಮ ಯಾವಾಗಲೂ ಸೂಕ್ಷ್ಮ ವಿಷಯ, ಅದರಲ್ಲೂ “ಅಹಿಂದ” ವರ್ಸಸ್ ಹಿಂದುತ್ವ ಚರ್ಚೆ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣವನ್ನು “ಹಿಂದೂ ವಿರೋಧಿ’ ಎಂದು ಬಿಂಬಿಸಲು “ರಾಮ ದ್ರೋಹಿ’ ಎಂಬ ಅಸ್ತ್ರ ಬಳಸಲಾಯಿತು. ಅದಕ್ಕೆ ಪ್ರತಿತಂತ್ರವಾಗಿ ಅವರ ಬೆಂಬಲಿಗರು “ನಾವು ರಾಮನ ವಿರೋಧಿಗಳಲ್ಲ, ನಿಮ್ಮ ಹಿಂದುತ್ವದ ವಿರೋಧಿಗಳು” ಎಂಬ ನಿಲುವು ತಳೆದರು. ಹೀಗಾಗಿ ‘ಅಪ್ಪಟ ರಾಮ ಭಕ್ತʼ ಎಂಬುದು ರಕ್ಷಣಾತ್ಮಕ ರಾಜಕೀಯ ಪದವಾಗಿ ಹುಟ್ಟಿಕೊಂಡಿತು.
ಸಿದ್ದರಾಮಯ್ಯ “ಅಪ್ಪಟ ರಾಮ ಭಕ್ತ”ರೇ ಎಂಬುದು ‘ಭಕ್ತಿ’ ಮತ್ತು ‘ರಾಮ’ ಪದಗಳಿಗೆ ನೀವು ಕೊಡುವ ವ್ಯಾಖ್ಯಾನದ ಮೇಲೆ ನಿಂತಿದೆ. ಸಂಪ್ರದಾಯದ ಪ್ರಕಾರ ತಿಲಕ ಇಟ್ಟು ಮಂತ್ರ ಹೇಳಿ, ದೇವಸ್ಥಾನ ಸುತ್ತುವುದೇ ಭಕ್ತಿಯಾದರೆ, ಅವರು ಅದಲ್ಲ, ಆದರೆ ವಾಲ್ಮೀಕಿಯ ರಾಮ ಶಬರಿಯ ಎಂಜಲು ತಿಂದ, ನಿಷಾದ ರಾಜನನ್ನು ಅಪ್ಪಿಕೊಂಡ, ಪ್ರಜೆಗಳ ಮಾತಿಗೆ ಕಿವಿಯಾದ ಆಡಳಿತಗಾರನ ಆದರ್ಶವೇ ಭಕ್ತಿಯಾದರೆ, ಅವರ ಸಾಮಾಜಿಕ ನ್ಯಾಯದ ಯೋಜನೆಗಳನ್ನು ಆ ಮಾನದಂಡದಲ್ಲಿ ಅಳೆಯಬಹುದು. ರಾಜಕಾರಣದಲ್ಲಿ ಒಬ್ಬ ನಾಯಕನ ವೈಯಕ್ತಿಕ ನಂಬಿಕೆಗಿಂತ, ಆತನ ಆಡಳಿತ ನೀತಿಗಳು ಜನರ ಮೇಲೆ ಬೀರುವ ಪರಿಣಾಮವೇ ಮುಖ್ಯವಾಗುತ್ತದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಈ ನ್ಯಾರೇಟಿವ್ ಇನ್ನಷ್ಟು ಗಟ್ಟಿಯಾಯಿತು, ಏಕೆಂದರೆ 5 ಗ್ಯಾರಂಟಿಗಳನ್ನು “ರಾಮ ರಾಜ್ಯದ ಭರವಸೆ” ಎಂದು ಬಿಂಬಿಸಲಾಯಿತು.
ಕೊನೆಗೆ, ರಾಜಕಾರಣದಲ್ಲಿ “ಭಕ್ತಿ” ಎನ್ನುವುದು ವೈಯಕ್ತಿಕ ನಂಬಿಕೆಗಿಂತ ಹೆಚ್ಚಾಗಿ ಜನರ ಗ್ರಹಿಕೆ ಮತ್ತು ಆಖ್ಯಾನದ ಭಾಗ. ಸಿದ್ದರಾಮಯ್ಯ ‘ರಾಮ ಭಕ್ತ’ರೋ, “ರಾಮ ವಿರೋಧಿ’ಯೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ, ಆದರೆ ಜನರಿಗೆ “ಅನ್ನದಾತ’ನಾದರೆ ಸಾಕು ಎಂಬುದೇ ಇಂದಿನ ವಾಸ್ತವ.

ಕರ್ನಾಟಕದ ರಾಜಕಾರಣದಲ್ಲಿ “ರಾಮ” ಶಬ್ದವೇ ಒಂದು ರಾಜಕೀಯ ಸಂಕೇತವಾಗಿ ಬದಲಾಗಿದೆ. “ಅಹಿಂದ” ಸೂತ್ರವು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾತಿಗಳ ಕ್ರೋಢೀಕರಣಕ್ಕೆ ನಿಂತರೆ, ‘ಹಿಂದುತ್ವ’ವು ಧಾರ್ಮಿಕ ಅಸ್ಮಿತೆಯ ಮೂಲಕ ಮತಬ್ಯಾಂಕ್ ಕಟ್ಟುವ ಪ್ರಯತ್ನಕ್ಕೆ ನಿಂತಿದೆ. ಈ ಎರಡೂ ಅಖ್ಯಾನಗಳ ನಡುವೆ ಸಿಕ್ಕಿಬಿದ್ದ ಸಾಮಾನ್ಯ ಮತದಾರನಿಗೆ ದೇವರಿಗಿಂತ ದುಡಿಮೆಯೇ ಮುಖ್ಯವಾಗುತ್ತದೆ. “ರಾಮ ದ್ರೋಹಿ” ಹಣೆಪಟ್ಟಿ ಕಟ್ಟುವುದು ಸುಲಭ, ಆದರೆ ಅದನ್ನು ಅಳಿಸಿಹಾಕಲು “ಅಪ್ಪಟ ರಾಮ ಭಕ್ತ” ಪಟ್ಟ ಕಟ್ಟಿಕೊಳ್ಳುವುದು ರಾಜಕೀಯ ಅನಿವಾರ್ಯವಾಗಿದೆ. ಹೀಗಾಗಿ ನಾಯಕರು ದೇವಸ್ಥಾನಕ್ಕೆ ಹೋಗುವುದು ಭಕ್ತಿಗಿಂತ ಹೆಚ್ಚಾಗಿ ಕ್ಯಾಮೆರಾ ಎದುರಿನ ಸಂದೇಶವಾಗಿ ಬಿಟ್ಟಿದೆ. ಜನರ ನೆನಪಿನಲ್ಲಿ ಉಳಿಯುವುದು ರಾಮನ ಫೋಟೋ ಅಲ್ಲ, ಪಡಿತರ ಚೀಲದಲ್ಲಿ ಬಂದ ಅಕ್ಕಿ, ಶಾಲೆಯಲ್ಲಿ ಸಿಕ್ಕ ಸಮವಸ್ತ್ರ. ಯಾವುದೇ “ವಾದ” ಹೊಟ್ಟೆ ತುಂಬಿಸದಿದ್ದರೆ, ಮತದಾರ ಆ ವಾದವನ್ನು ಮೂಲೆಗುಂಪು ಮಾಡುತ್ತಾನೆ ಎಂಬುದು ಕರ್ನಾಟಕದ ಚುನಾವಣಾ ಇತಿಹಾಸ ತೋರಿಸಿದೆ. ಸಿದ್ದರಾಮಯ್ಯರ ಭಾಗ್ಯ ಯೋಜನೆಗಳು ‘ಅನ್ನದಾತ” ಎಂಬ ಬಿರುದನ್ನು ಕೊಟ್ಟವು, ಆದರೆ ಅದೇ ಯೋಜನೆಗಳನ್ನು “ಓಲೈಕೆ” ಎಂದು ಕರೆಯುವ ವರ್ಗವೂ ಇದೆ. ಹೀಗೆ ಪ್ರತಿಯೊಂದು ಯೋಜನೆಯೂ ಪ್ರತಿಯೊಂದು ಘೋಷಣೆಯೂ ಜಾತಿ-ಧರ್ಮದ ಕನ್ನಡಕದಿಂದಲೇ ನೋಡಲ್ಪಡುವುದು ಇಂದಿನ ವಾಸ್ತವ, “ರಾಮ ಭಕ್ತ’ನೋ “ರಾಮ ವಿರೋಧಿ”ಯೋ ಎಂಬ ಚರ್ಚೆ ಟಿವಿ ಸ್ಟುಡಿಯೋದಲ್ಲಿ ನಡೆದರೆ, ‘ಅನ್ನದಾತ’ನೋ ಅಲ್ಲವೋ ಎಂಬ ಲೆಕ್ಕಾಚಾರ ಮನೆ ಮನೆಯ ಬಾಣಲೆಯಲ್ಲಿ ನಡೆಯುತ್ತದೆ.
ಕರ್ನಾಟಕದ ರಾಜಕಾರಣದಲ್ಲಿ ಜಾತಿ ಮತ್ತು ಧರ್ಮ ಯಾವಾಗಲೂ ಸೂಕ್ಷ್ಮ ವಿಷಯ, ಅದರಲ್ಲೂ ‘ಅಹಿಂದ” ವರ್ಸಸ್ ಹಿಂದುತ್ವ ಚರ್ಚೆ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣವನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಲು “ರಾಮ ದ್ರೋಹಿ” ಎಂಬ ಅಸ್ತ್ರ ಬಳಸಲಾಯಿತು. ಅದಕ್ಕೆ ಪ್ರತಿತಂತ್ರವಾಗಿ ಅವರ ಸಮರ್ಥಕರು “ನಾವು ರಾಮನ ವಿರೋಧಿಗಳಲ್ಲ, ನಿಮ್ಮ ಹಿಂದುತ್ವದ ವಿರೋಧಿಗಳು” ಎಂಬ ನಿಲುವು ತಳೆದರು. ಹೀಗಾಗಿ ‘ಅಪ್ಪಟ ರಾಮ ಭಕ್ತ” ಎಂಬುದು ರಕ್ಷಣಾತ್ಮಕ ರಾಜಕೀಯ ಪದವಾಗಿ ಹುಟ್ಟಿಕೊಂಡಿತು. ಮುಖ್ಯವಾಗಿ ಗೆಲ್ಲುವುದು ಯಾವ “ಇಸಂ” ಅಲ್ಲ, ಯಾವ “ವಾದ’ ಅಲ್ಲ, ದೇವಸ್ಥಾನದ ಗಂಟೆಗೂ ಪಡಿತರದ ಅಕ್ಕಿಗೂ ನಡೆವ ಈ ಯುದ್ಧದಲ್ಲಿ, ಜನರ ಬದುಕಿಗೆ ನೇರವಾಗಿ ಸ್ಪಂದಿಸುವ “ಕೈಗಳು” ಮಾತ್ರ ಶಾಶ್ವತ, ರಾಜಕಾರಣದ ರಂಗದಲ್ಲಿ “ರಾಮ” ಒಂದು ಪಾತ್ರ ಮಾತ್ರ. ಆದರೆ “ಅನ್ನ”ವೇ ಮುಖ್ಯ. ಅದನ್ನು ಅರಿತವರು ಆಳುತ್ತಾರೆ, ಮರೆತವರು ಮಾಯವಾಗುತ್ತಾರೆ ಎಂಬುದೇ ಕರ್ನಾಟಕದ ರಾಜಕಾರಣದ ಕಟು ಸತ್ಯ.
ಕೊನೆಗೆ, ರಾಜಕಾರಣದಲ್ಲಿ “ಭಕ್ತಿ” ಎನ್ನುವುದು ವೈಯಕ್ತಿಕ ನಂಬಿಕೆಗಿಂತ ಹೆಚ್ಚಾಗಿ ಜನರ ಗ್ರಹಿಕೆ ಮತ್ತು ಅಖ್ಯಾನದ ಭಾಗ. ಸಿದ್ದರಾಮಯ್ಯ “ರಾಮ ಭಕ್ತ’ರೋ, “ರಾಮ ವಿರೋಧಿ’ಯೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ, ಆದರೆ ಜನರಿಗೆ “ಅನ್ನದಾತ’ನಾದರೆ ಸಾಕು ಎಂಬುದೇ ಇಂದಿನ ವಾಸ್ತವ,
ಪ್ರೊ.ಷಾಕಿರಾ ಖಾನು
ಕುವೆಂಪು ಭಾಷಾ ಭಾರತಿ ಪುಸ್ತಕ ಪ್ರಾಧಿಕಾರದ ಸದಸ್ಯೆ
ಇದನ್ನೂ ಓದಿ- ಮಹಾಭಾರತದ ಕರ್ಣಾರ್ಜುನ ಮತ್ತು ನವಭಾರತದ ನೆಹರೂ-ಮೋದಿ!


