ಮಾರ್ಕ್ಸ್‌ವಾದವು ಒಂದು ಸ್ಥಿರವಾದ ಯಶಸ್ವಿ ರಾಜಕೀಯ ವ್ಯವಸ್ಥೆಯಾಗಿ ಉಳಿಯುತ್ತದೋ ನಾನು ಹೇಳಲಾರೆ. ಆದರೆ ಅದು ಬಂಡವಾಳಶಾಹಿಯ ನಿರಂತರ ವಿಮರ್ಶಕನಾಗಿ, ಮತ್ತು ಸಾಮಾಜಿಕ ಅಸಮಾನತೆಗಳನ್ನು ವ್ಯಾಖ್ಯಾನಿಸುವ ಬಲಿಷ್ಠವಾದ ಶಕ್ತಿಯಾಗಿ ಬಹಳ ಕಾಲ ಉಳಿಯುತ್ತದೆ ಎಂಬುದು ನನ್ನ ಗಟ್ಟಿಯಾದ ನಂಬಿಕೆಯಾಗಿದೆ – ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.
ನಮ್ಮ ಕಾಲದ ಕೆಲವು ಹೋರಾಟಗಾರರನ್ನೂ, ರಾಜಕೀಯ ಪಕ್ಷಗಳನ್ನೂ ಗಮನದಲ್ಲಿರಿಸಿಕೊಂಡು ಮಾರ್ಕ್ಸ್‌ವಾದ ವನ್ನೇ ಕೆಲವರು ಹೀಗಳೆಯುವುದುಂಟು. ಈ ಕೆಲಸದಲ್ಲಿ ಬಲಪಂಥೀಯರು ಬಹಳ ಮುಂದಿದ್ದಾರೆ. ಅವರಿಗೆ ಮಾರ್ಕ್ಸ್‌ವಾದದ ಬಗ್ಗೆ ಏನೂ ಗೊತ್ತಿಲ್ಲದಿರುವುದೇ ದೊಡ್ಡ ಸಮಸ್ಯೆ. ಕಮ್ಯುನಿಸಂ ಅಥವಾ ಸಮತಾವಾದದ ಬದಲು ಅವರು ಕೋಮುವಾದವನ್ನು ಜನರ ಮುಂದಿಡುತ್ತಾರೆ. ಶೋಷಿತರ ಪರವಾಗಿ ಮಾತಾಡುವವರ ವಿರುದ್ಧ ನಕಲಿ ರಾಷ್ಟ್ರವಾದವನ್ನು ಪ್ರಸ್ತುತ ಪಡಿಸುತ್ತಾರೆ. ಅನೇಕರು ಅದಕ್ಕೆ ಸುಲಭವಾಗಿ ಬಲಿಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಟಿಪ್ಪಣಿಯನ್ನು ಬರೆಯಲಾಗಿದೆ.
ಮಾರ್ಕ್ಸ್‌ವಾದದ ಹಿನ್ನೆಲೆ: ಮಾರ್ಕ್ಸ್‌ವಾದವು ಕಾರ್ಲ್ ಮಾರ್ಕ್ಸ್ ಮತ್ತು ಸ್ವಲ್ಪ ಮಟ್ಟಿಗೆ ಫ್ರೆಡ್ರಿಕ್ಸ್ ಎಂಗೆಲ್ಸ್ ಅವರು 19 ನೇ ಶತಮಾನದ ಮಧ್ಯಭಾಗದಲ್ಲಿ ಅಭಿವೃದ್ಧಿಪಡಿಸಿದ ಒಂದು ಪ್ರಮುಖ ಸಿದ್ಧಾಂತವಾಗಿದೆ. ಅದರಲ್ಲಿ ಮೂರು ಮುಖ್ಯ ವಿಚಾರಗಳಿವೆ- ಮೊದಲನೆಯದು ತಾತ್ವಿಕ ಮಾನವ ಶಾಸ್ತ್ರ , ಎರಡನೆಯದು ಇತಿಹಾಸದ ಸಿದ್ಧಾಂತ ಮತ್ತು ಮೂರನೆಯದು ಆರ್ಥಿಕ ಮತ್ತು ರಾಜಕೀಯ ಕಾರ್ಯಕ್ರಮಗಳು. ಮತ, ದೇವರು, ಅವೈಜ್ಞಾನಿಕ ಸಂಗತಿಗಳೇ ಮೊದಲಾದ ಮಾನವ ವಿರೋಧೀ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮಾನವ ಸಮಾಜವನ್ನು ವ್ಯಾಖ್ಯಾನಿಸುತ್ತಿದ್ದ ಕಾಲಘಟ್ಟದಲ್ಲಿ ಮಾರ್ಕ್ಸ್ ಮಾನವನನ್ನು ಕೇಂದ್ರದಲ್ಲಿರಿಸಿಕೊಂಡು, ಅದರಲ್ಲಿಯೂ ದುಡಿಯುವ ವರ್ಗವನ್ನು ಆಧರಿಸಿ ಸಮಾಜವನ್ನು ವ್ಯಾಖ್ಯಾನಿಸಿದ್ದು ಸಹಜವಾಗಿ ವಿಶ್ವದ ಗಮನ ಸೆಳೆಯಿತು. ಮುಂದೆ ಮಾರ್ಕ್ಸ್‌ವಾದವನ್ನು ಅನೇಕರು ಬೆಳೆಸಿ ಅದೊಂದು ನಿಂತ ನೀರಾಗದಂತೆ ನೋಡಿಕೊಂಡರು. ಸಮಾಜ ವಿಜ್ಞಾನಿಗಳು, ಸಮಾಜವಾದೀ ಹೋರಾಟಗಾರರು, ವ್ಲಾಡಿಮಿರ್ ಇಲಿಚ್ ಲೆನಿನ್, ಜೋಸೆಫ್ ಸ್ಟಾಲಿನ್ ಮೊದಲಾದವರು ಮಾರ್ಕ್ಸ್‌ವಾದವನ್ನು ಕೇವಲ ಒಂದು ಸಿದ್ಧಾಂತವಾಗಿ ನೋಡದೆ, ಅದನ್ನು ದುಡಿಯುವ ವರ್ಗದ ವಿಮೋಚನೆಯ ಹೋರಾಟದ ಭಾಗವಾಗಿ ಬೆಳೆಸಿದರು. 1917ರಲ್ಲಿ ನಡೆದ ರಷ್ಯಾ ಕ್ರಾಂತಿಯು ಶ್ರಮಿಕರ ಹೋರಾಟದ ಫಲವಾಗಿತ್ತು. ಆನಂತರ ಮಾರ್ಕ್ಸ್‌ವಾದವು ಕಮ್ಯುನಿಸ್ಟ್ ಪಕ್ಷಗಳ ಸಿದ್ಧಾಂತವಾಗಿ ಬೆಳೆಯಿತು. ಲೆನಿನ್ ವಿರೋಧಿಯಾಗಿದ್ದ ಲಿಯಾನ್ ಟ್ರಾಟ್ಸ್ಕಿ ಮಾರ್ಕ್ಸ್‌ವಾದಕ್ಕೆ ಭಿನ್ನ ವ್ಯಾಖ್ಯಾನ ನೀಡಿದ. ಚೀನಾದಲ್ಲಿ ಮಾವೋ ತನ್ನದೇ ಆದ ಚೀನೀ ಮಾರ್ಕ್ಸ್‌ವಾದವನ್ನು ಬೆಳೆಸಿದ. ಭಾರತವೂ ಸೇರಿದಂತೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರ್ಕ್ಸ್ ವಾದವು ಭಿನ್ನ ಅವಸ್ಥಾಂತರಗಳನ್ನು ಕಂಡಿದೆ.

ಎರಡನೆಯ ಮಹಾಯುದ್ಧದ ನಂತರದ ಮಾರ್ಕ್ಸ್‌ವಾದವು ಇತರ ಆಧುನಿಕ ಚಿಂತನೆಗಳಿಂದ ಸಾಕಷ್ಟು ಪ್ರೇರಣೆ ಪಡೆದಿದೆ. ಎಡ್ಮಂಡ್ ಹಸ್ಸರ್ಲ್, ಮಾರ್ಟಿನ್ ಹೈಡೆಗ್ಗರ್, ಸಿಗ್ಮಂಡ್ ಫ್ರಾಯ್ಡ್ ಮೊದಲಾದ ಚಿಂತಕರು ಆರಂಭದಲ್ಲಿ ಮಾರ್ಕ್ಸ್‌ವಾದದಿಂದ ಪ್ರೇರಣೆ ಪಡೆದು ಆನಂತರ ಅದನ್ನು ವಿಕಸನಗೊಳಿಸಿದರು. ಕಾರ್ಲ್ ಮಾರ್ಕ್ಸ್ ಅವರು ಘೋಷಿಸಿದ ʼತತ್ವಶಾಸ್ತ್ರವು ವಾಸ್ತವವಾಗಬೇಕುʼ ಎಂಬ ಮಾತಿನಿಂದ ಪ್ರೇರಣೆ ಪಡೆಯದ ಚಿಂತಕರೇ ಇರಲಾರರು. ಉತ್ಪಾದನಾ ಸಂಬಂಧಗಳ ಒಟ್ಟು ಮೊತ್ತವೇ ಸಮಾಜದ ಆರ್ಥಿಕ ರಚನೆಯನ್ನು ರೂಪಿಸುತ್ತದೆ ಎಂಬ ಕಾರ್ಲ್‌ಮಾರ್ಕ್ಸ್ ಅವರ ವಾದ ಇಂದಿಗೂ ಮಹತ್ವದ ಹೇಳಿಕೆಯಾಗಿಯೇ ಉಳಿದಿದೆ. ಭೌತಿಕ ಜೀವನದಲ್ಲಿ ಉತ್ಪಾದನಾ ವಿಧಾನವು ಜೀವನದ ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಪ್ರಕ್ರಿಯೆಗಳ ಸಾಮಾನ್ಯ ಸ್ವರೂಪವನ್ನು ನಿರ್ಧರಿಸುತ್ತದೆ ಎಂಬ ಅವರ ಇನ್ನೊಂದು ವಾದವೂ ಪ್ರಖರವಾಗಿದೆ.
19 ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಅವರು ಮಾನವ ಸಮಾಜವನ್ನು ಅರ್ಥಮಾಡಿಕೊಳ್ಳಲು ಕೊಟ್ಟ ಹೊಸ ಬಗೆಯ ನೋಟವೊಂದನ್ನು ನಾಶಮಾಡಲು ಇವತ್ತು ಬಂಡವಾಳಶಾಹಿಗಳು ಮತ್ತು ಕೋಮುವಾದಿಗಳು ಕೈಗೆ ಕೈ ಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಮಾರ್ಕ್ಸ್ ನಿರಾಕರಿಸಿದ ಮತೀಯ, ಜನಾಂಗಿಕ, ಪ್ರಾದೇಶಿಕ, ಪ್ರಭುತ್ವವಾದಿಯೇ ಮೊದಲಾದ ವಿಶ್ಲೇಷಣಾ ಚೌಕಟ್ಟುಗಳು ಮತ್ತೆ ಮುನ್ನೆಲೆಗೆ ಬಂದಿದೆ. ಮತೀಯ ರಾಷ್ಟ್ರವಾದವು ಜನಕೇಂದ್ರಿತ ರಾಷ್ಟ್ರೀಯತೆಯನ್ನು ಹಿಮ್ಮೆಟ್ಟಿಸಲು ಕೆಲಸ ಮಾಡುತ್ತಿದೆ. ಆರ್ಥಿಕ ಚೌಕಟ್ಟಿನಲ್ಲಿ ಸಮಾಜವನ್ನು ನೋಡಬೇಕೆಂಬ ಮಾರ್ಕ್ಸ್ ಅವರ ಐತಿಹಾಸಿಕ ಮಹತ್ವದ ವಾದಮಂಡನೆಯ ಜಾಗದಲ್ಲಿ ಕೋಮುವಾದವನ್ನು ಸ್ಥಾಪಿಸಲಾಗಿದೆ. ವಿಶ್ವದಾದ್ಯಂತ ವಿದ್ವಾಂಸರ ಆಕರ್ಷಣೆಗೆ ಒಳಗಾಗಿ ವಿಕಸನಗೊಳ್ಳುತ್ತಿರುವ ಚಿಂತನಾಕ್ರಮವೊಂದನ್ನು ವಿನಾಕಾರಣ ದೂಷಿಸಲಾಗುತ್ತಿದೆ. ಇಂಥ ಜನವಿರೋಧೀ, ಪ್ರಗತಿವಿರೋಧೀ ಚಿಂತನಾ ಕ್ರಮದ ಬೆಳವಣಿಗೆಗಳ ಹಿಂದೆ ಬಂಡವಾಳಶಾಹಿಗಳ ಕೈವಾಡವಿದೆ.
ಇವತ್ತು ಕಮ್ಯುನಿಸ್ಟ್ ಸರಕಾರಗಳು ಇಲ್ಲದಿರುವಲ್ಲಿ ಕೂಡಾ ಇವತ್ತು ಪ್ರಖರವಾಗಿ ಚಿಂತಿಸುವ, ಬರೆಯುವ ಮಾರ್ಕ್ಸ್‌ವಾದಿಗಳಿದ್ದಾರೆ. ಕಮ್ಯುನಿಸಂನ ವಿರೋಧಿಯಾದ ಅಮೇರಿಕಾದಲ್ಲಿಯೂ ರಿಚರ್ಡ್ ವುಲ್ಫ್ (Richard Wolff), ಏಂಜೆಲಾ ಡೇವಿಸ್ (Angela Davis), ಹ್ಯೂ ಪಿ. ನ್ಯೂಟನ್ ಮತ್ತು ಬಾಬಿ ಸೀಲ್ (Huey P. Newton & Bobby Seale), ಡೇವಿಡ್ ಹಾರ್ವೆ (David Harvey) ಮೊದಲಾದವರ ಚಿಂತನೆಗಳಿಂದ ಯುವಕರು ಪ್ರೇರಣೆ ಪಡೆಯುತ್ತಿದ್ದಾರೆ. ಬೌದ್ಧಿಕ ಚರ್ಚೆಗಳಲ್ಲಿ ಮಾರ್ಕ್ಸ್‌ವಾದಿ ವಿಶ್ಲೇಷಣೆಗೆ ವಿಶ್ವದಾದ್ಯಂತ ಮನ್ನಣೆ ಇದೆ. ಶ್ರಮಜೀವಿಗಳಿಗೆ ಗೌರವ ಕೊಡುವ, ಉತ್ಪಾದನೆಯ ಸಮಾನ ವಿತರಣೆ ಆಗಬೇಕೆನ್ನುವ ಮಾರ್ಕ್ಸ್‌ವಾದದ ತಿರುಳಿನಲ್ಲಿ ಸಮ ಸಮಾಜದ ನಿರ್ಮಾಣದ ಕನಸಿದೆ. ಅಸಮಾನ ಸಮಾಜ ಇರುವಲ್ಲಿವರೆಗೆ ಮಾರ್ಕ್ಸ್‌ವಾದವೂ ಇರುತ್ತದೆ. ಹಾಗಾಗಿ ಅಸಮಾನತೆಯನ್ನೇ ಬಂಡವಾಳ ಮಾಡಿಕೊಂಡವರು ಮಾರ್ಕ್ಸ್‌ವಾದವನ್ನು ಕಡು ವಿರೋಧಿಯಂತೆ ಕಾಣುವುದು ಸಹಜ.

ಇವತ್ತು ನಡೆಯುತ್ತಿರುವ ಏಕ ಪಕ್ಷೀಯವಾದ ಸಂಪತ್ತಿನ ಕ್ರೋಢೀಕರಣ, ಅದರಿಂದ ಹುಟ್ಟಿಕೊಳ್ಳುತ್ತಿರುವ ಯುದ್ಧಗಳು ಮತ್ತು ಬಡತನ, ಆರ್ಥಿಕ ಬಿಕ್ಕಟ್ಟುಗಳು, ಪರಿಸರ ನಾಶ, ನಿರುದ್ಯೋಗ, ಕಾರ್ಮಿಕ ಶೋಷಣೆಯೇ ಮೊದಲಾದುವುಗಳನ್ನು ವಿಶ್ಲೇಷಿಸಲು ವಿದ್ವಾಂಸರು ಮಾರ್ಕ್ಸ್‌ವಾದವನ್ನು ಒಂದು ನಿರ್ಣಾಯಕ ಚೌಕಟ್ಟಾಗಿ ಬಳಸಿಕೊಳ್ಳುತ್ತಿದ್ದಾರೆ. ಡೇವಿಡ್ ಹಾರ್ವೆ (David Harvey) ಆಧುನಿಕ ಬಂಡವಾಳಶಾಹಿಯ ಭೌಗೋಳಿಕತೆ ಮತ್ತು ನಗರೀಕರಣದ ಬಗ್ಗೆ ನಡೆಸಿದ ಅಧ್ಯಯನ, ಸ್ಲಾವೋಜ್ ಜಿಜೆಕ್ (Slavoj Žižek) ಅವರು ನಡೆಸಿದ ಸಾಂಸ್ಕೃತಿಕ ವಿಮರ್ಶೆ, ಅಲೆಕ್ಸ್ ಕ್ಯಾಲಿನಿಕೋಸ್ (Alex Callinicos) ಅವರ ಮಾರ್ಕ್ಸ್‌ವಾದೀ ಚಿಂತನೆಗಳನ್ನು ವಿಶ್ವದ ಅನೇಕ ದೇಶಗಳು ಅಳವಡಿಸಿಕೊಂಡಿರುವ ರೀತಿ, ಜಾನ್ ಬೆಲ್ಲಾಮಿ ಫೋಸ್ಟರ್ (John Bellamy Foster) ಅವರು ಬೆಳೆಸಿರುವ ಪರಿಸರ ಮಾರ್ಕ್ಸ್‌ವಾದದ (Ecological Marxism) ಚಿಂತನೆಗಳು ದಿನದಿಂದ ದಿನಕ್ಕೆ ಪ್ರಸ್ತುತವಾಗುತ್ತಲೇ ಇದೆ. ಭಾರತೀಯ ಸಂದರ್ಭದಲ್ಲಿ ಡಿ.ಎನ್. ಝಾ, ಪ್ರಭಾತ್ ಪಟ್ನಾಯಕ್, ಜಯತಿ ಘೋಷ್, ಆದಿತ್ಯ ಮುಖರ್ಜಿ ಮೊದಲಾದವರು ನಡೆಸುತ್ತಿರುವ ಭಾರತದ ಆರ್ಥಿಕತೆ ಮತ್ತು ರಾಜಕೀಯದ ವಿಶ್ಲೇಷಣೆ ಗಳು ಪ್ರಖರವಾಗಿದ್ದು ಅವರ ಲೇಖನಗಳನ್ನು ಅವರ ವಿರೋಧಿಗಳೂ ಓದುತ್ತಿದ್ದಾರೆ. ಕಾರ್ಲ್‌ಮಾರ್ಕ್ಸ್‌ನ ಹೆಸರು ಉಲ್ಲೇಖಿಸದೇ ಅವನ ವಾದವನ್ನು ಅಳವಡಿಸಿಕೊಳ್ಳುವವರೂ ಬಹಳ ಜನ ಇದ್ದಾರೆ.
ಇಂಥ ಜನಪರ ಚಿಂತನೆಗಳನ್ನು ಆಧರಿಸಿ ಹುಟ್ಟಿಕೊಂಡಿರುವ ರಾಜಕೀಯ ಪಕ್ಷಗಳು (ಮುಖ್ಯವಾಗಿ ಕಮ್ಯುನಿಸ್ಟ್ ಪಕ್ಷಗಳು) ಇವತ್ತಿನ ದಿನ ಅಧಿಕಾರ ಹಿಡಿಯುವುದು ಕಷ್ಟವಾದರೂ ಅವರು ಮಾಡುತ್ತಿರುವ ಕೆಲಸಗಳು ಮತ್ತು ನಡೆಸುತ್ತಿರುವ ವಿಶ್ಲೇಷಣೆಗಳು ಸಮಕಾಲೀನ ರಾಜಕೀಯ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತಿರುವುದನ್ನು ನಾವು ಗಮನಿಸಬಹುದು. ಯುಪಿಎ -1 ರ ಅವಧಿಯಲ್ಲಿ ಕಮ್ಯುನಿಸ್ಟರ ಬೆಂಬಲದಿಂದ ಡಾ. ಮನಮೋಹನ್ ಸಿಂಗರಿಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜ್ಯಾರಿಗೆ ತರಲು ಸಾಧ್ಯವಾಯಿತು. ಇವತ್ತಿನ ವಿಶ್ವದಲ್ಲಿ ಕೇವಲ ಸಿದ್ಧಾಂತವನ್ನು ಆಧರಿಸಿಕೊಂಡು ರಾಜಕೀಯ ಮಾಡುವುದು ಕಷ್ಟ ಎಂಬುದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಉದಾಹರಣೆ. ಇಷ್ಟಿದ್ದರೂ ಸಿದ್ಧಾಂತಕ್ಕೆ ಬಹಳ ಹತ್ತಿರವಾಗಿ ಬದುಕುತ್ತಿರುವ ಹಲವು ಕಮ್ಯುನಿಸ್ಟರನ್ನು ನಾನು ಕಂಡಿದ್ದೇನೆ. ಅಂಥವರ ಮುಂದಿರುವ ಸವಾಲುಗಳು ಅನೇಕ. ದುಡಿಯುವ ವರ್ಗದ ಪರವಾಗಿ ಕಮ್ಯುನಿಸ್ಟರು ಮಾತಾಡುತ್ತಿರುವಾಗಲೇ ದುಡಿಯುವ ಜನರು ಬಂಡವಾಳಶಾಹಿಗಳ ಸಂಚಿಗೆ ಬಲಿಯಾಗಿ ಕಮ್ಯುನಿಷ್ಟರ ವಿರುದ್ಧವೇ ಕೆಲಸ ಮಾಡಿದ್ದನ್ನು ನಾವು ಕಾಣುತ್ತಿದ್ದೇವೆ. ಕೋಮುವಾದದ ವಿರುದ್ಧದ ಹೋರಾಟವಾದರೂ ಅಷ್ಟೆ. ಯಾವ ಜನರ ಬಿಡುಗಡೆಗಾಗಿ ಜನಪರ ಚಿಂತಕರು ಕೆಲಸ ಮಾಡುತ್ತಿದ್ದಾರೋ ಆ ಜನರೇ ಕೋಮುವಾದದ ಮುಂಚೂಣಿಯಲ್ಲಿ ನಿಂತಿರುತ್ತಾರೆ. ಜಗತ್ತಿನ ಕಾರ್ಮಿಕರು ಒಂದಾಗಬೇಕೆಂದು ಮಾರ್ಕ್ಸ್ ವಾದಿಗಳು ಕರೆಕೊಡುತ್ತಿರುವ ಹೊತ್ತಲ್ಲೇ ದುಡಿಯುವ ಜನ ನಕಲಿ ದೇಶಭಕ್ತರ ಉನ್ಮಾದಗಳೊಂದಿಗೆ ಸೇರಿಕೊಂಡದ್ದೂ ಇದೆ. ಇಷ್ಟಿದ್ದರೂ ಕಮ್ಯುನಿಸ್ಟರು ಬೂರ್ಜ್ವಾ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಕಾರ್ಮಿಕ ವರ್ಗವನ್ನು ಮುನ್ನಡೆಸುವ ಹಠವನ್ನು ಬಿಟ್ಟುಕೊಟ್ಟಿಲ್ಲ. ಬಂಡವಾಳಶಾಹಿ ವ್ಯವಸ್ಥೆಯನ್ನು ಉರುಳಿಸಲು ಮತ್ತು ಸಮಾಜವಾದಿ ರಾಜ್ಯವನ್ನು ಸ್ಥಾಪಿಸಲು ಶ್ರಮಜೀವಿಗಳೊಂದಿಗೆ ಹೋರಾಡುತ್ತಿರುವ ಅಂಥ ಸಂಗಾತಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಟ್ಟುಕೊಡದಿರುವುದು, ಸಾಮೂಹಿಕ ನಾಯಕತ್ವವನ್ನು ಸಾಧ್ಯಮಾಡುವುದು ಮತ್ತು ಕಾರ್ಮಿಕ ವರ್ಗವನ್ನು ಒಳಗೊಳ್ಳುತ್ತಾ ಅವರ ಹಿತಾಸಕ್ತಿಗಳನ್ನು ಕಾಪಾಡುವುದು – ಈ ಮೂರು ಅಂಶಗಳನ್ನು ಸಮತೋಲನಗೊಳಿಸುತ್ತ ಮುಂದುವರೆಯುವ ಕೆಲಸ ಸುಲಭವಲ್ಲ.
ಮಾರ್ಕ್ಸ್‌ವಾದವು ಒಂದು ಸ್ಥಿರವಾದ ಯಶಸ್ವಿ ರಾಜಕೀಯ ವ್ಯವಸ್ಥೆಯಾಗಿ ಉಳಿಯುತ್ತದೋ ನಾನು ಹೇಳಲಾರೆ. ಆದರೆ ಅದು ಬಂಡವಾಳಶಾಹಿಯ ನಿರಂತರ ವಿಮರ್ಶಕನಾಗಿ, ಮತ್ತು ಸಾಮಾಜಿಕ ಅಸಮಾನತೆಗಳನ್ನು ವ್ಯಾಖ್ಯಾನಿಸುವ ಬಲಿಷ್ಠವಾದ ಶಕ್ತಿಯಾಗಿ ಬಹಳ ಕಾಲ ಉಳಿಯುತ್ತದೆ ಎಂಬುದು ನನ್ನ ಗಟ್ಟಿಯಾದ ನಂಬಿಕೆಯಾಗಿದೆ.
ಪುರುಷೋತ್ತಮ ಬಿಳಿಮಲೆ
ಜಾನಪದ, ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ವಿದ್ವಾಂಸರು. ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ದೀದಿ ಸುತ್ತ ಮೋದಿ ಶಡ್ಯಂತ್ರಗಳ ಹುತ್ತ


