ಮಹಾನಗರಗಳಲ್ಲಿ ಬಂದು ನೆಲೆಸಿರುವ ಅದೆಷ್ಟೋ ಮಂದಿಗೆ “ಟೈಮ್ ಮ್ಯಾನೇಜ್‌ಮೆಂಟ್” ಎಂಬುದು ಇವತ್ತಿಗೂ ಒಂದು ಮರೀಚಿಕೆ. ಕೈಗೆಟುಕದ ದ್ರಾಕ್ಷಿ. ಇಂದು ಸಮಯ ಪರಿಪಾಲನೆಯ ಬಗ್ಗೆ ಕೋಟ್ಯಂತರ ರೀಲುಗಳು ಬರುತ್ತವೆ. ವರ್ಷವಿಡೀ ಸಾವಿರಾರು ಸೆಮಿನಾರು-ವೆಬಿನಾರುಗಳು ಆಯೋಜನೆಗೊಳ್ಳುತ್ತವೆ. ನೂರಾರು ಪುಸ್ತಕಗಳು ಪ್ರಕಟವಾಗುತ್ತವೆ. ಆದರೂ ಟೈಂ ಎಂಬುದು ಮ್ಯಾನೇಜ್ ಆಗುತ್ತಿಲ್ಲವಲ್ಲ ಎಂಬುದು ಬಹುತೇಕರ ನಿತ್ಯದ ಗೋಳು. ಅಷ್ಟರ ಮಟ್ಟಿಗೆ ಸಮಯವೆಂಬುದು ಬಹುತೇಕರಿಗೆ ಇಂದು ಕೈಗೆ ನಿಲುಕದ ಸುಂದರ ನಕ್ಷತ್ರ – ಪ್ರಸಾದ್ ನಾಯ್ಕ್, ದೆಹಲಿ.
“ಕ್ಷಣಗಳು ಸರಿಯುತ್ತಲೇ ಇವೆ. ಆದರೆ ನೀವೇನು ಮಾಡುತ್ತಿದ್ದೀರಿ?”
ಸ್ಮಾರ್ಟ್‌ಫೋನ್ ತೆರೆದ ಕೂಡಲೇ ರೀಲ್ ಒಂದರಲ್ಲಿ ಮೋಟಿವೇಷನಲ್ ಗುರುವೊಬ್ಬ ಹೀಗೆಲ್ಲ ಹೇಳುತ್ತಿರುತ್ತಾನೆ. ರೀಲ್ಸ್ ನೋಡುತ್ತಿರುವವನಿಗೆ ಅದೇಕೋ ಪಿಚ್ಚೆನ್ನಿಸುತ್ತದೆ. ಮತ್ತೆಲ್ಲೋ ಹಳೆಯ ಸಹಪಾಠಿಯೊಬ್ಬ ತಾನು ಹೋಗಿದ್ದ ವಿದೇಶ ಪ್ರವಾಸದ ಬಗ್ಗೆ ಚಿತ್ರಗಳ ಸಮೇತ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿರುತ್ತಾನೆ. ನೋಡುತ್ತಿರುವವನಿಗೆ ನಾನು ಇಲ್ಲೇ ಉಳಿದುಬಿಟ್ಟೆನಲ್ಲ ಅಂತ ವ್ಯಥೆಯಾಗುತ್ತದೆ. ಇದೆಲ್ಲ ಬೇಡವೆಂದು ಬೇರೊಂದು ಕಡೆ ಹೋದರೆ “ನೋಡ್ತಾ ಇರಿ, ಕೃತಕ ಬುದ್ಧಿಮತ್ತೆಯು ನಿಮ್ಮ ಉದ್ಯೋಗವನ್ನು ತಿಂದುಹಾಕಲಿದೆ” ಎಂದು ಮತ್ತೊಬ್ಬ influencer ಹೆದರಿಸುತ್ತಿರುತ್ತಾನೆ. ರೂಪಾಯಿ ಮೌಲ್ಯ ಮತ್ತು ಶೇರು ಮಾರುಕಟ್ಟೆ ಕುಸಿಯುತ್ತಿದೆಯೆಂದು ಸುದ್ದಿವಾಹಿನಿಗಳು ಅರಚಾಡುತ್ತಿರುತ್ತವೆ. ಇತ್ತ ಮನದೊಳಗೆ ಮತ್ತೆ ಪುಕು ಪುಕು ಶುರುವಾಗುತ್ತದೆ. ಭವಿಷ್ಯವೆಂಬ ಕನಸಿನ ಮೂಟೆಯ ಸುತ್ತ ಅನಿಶ್ಚಿತತೆಯೆಂಬ ಟೈಂ-ಬಾಂಬಿನ ಕಗ್ಗಂಟು! ಟೈಮ್ ಮ್ಯಾನೇಜ್‌ಮೆಂಟ್
ಈ ಫೋನಿನ ಸಹವಾಸವೇ ಬೇಡವೆಂದು ಫೋನನ್ನು ಜೇಬಿನಲ್ಲಿರಿಸಿ ಒಂದಿಷ್ಟು ಹೊತ್ತು ಕೂತಲ್ಲೇ ಕಣ್ಣುಮುಚ್ಚಿದರೆ, ಟಿಂಗ್ ಟಿಂಗ್ ನೋಟಿಫಿಕೇಷನ್ ಸದ್ದುಗಳು ತಮ್ಮ ಪಾಡಿಗೆ ಬರುತ್ತಲೇ ಇರುತ್ತವೆ. ಗಾಜಾ ಪಟ್ಟಿಯಲ್ಲಿರುವ ಅಮಾಯಕರ ತಲೆಯ ಮೇಲಿನಿಂದ ಸತತ ವೈಮಾನಿಕ ದಾಳಿಗಳು ನಡೆಯುತ್ತಿರುವಂತೆ ಈ ಸದ್ದುಗಳು ಅದೇಕೋ ಕೊನೆಯಾಗುವಂತೆ ಕಾಣುತ್ತಿಲ್ಲ. ಆದರೂ ಒಂದರೆಕ್ಷಣ ಇವೆಲ್ಲದರ ಜಂಜಾಟವೇ ಬೇಡವೆಂದು ಮನಸ್ಸು ನಿರಾಕರಣ ಸ್ಥಿತಿಯಲ್ಲೇ ಇರುತ್ತದೆ. ಅಷ್ಟು ಹೊತ್ತಿಗೆ ಆಫೀಸಿನ ಮೇಲಧಿಕಾರಿಯೊಬ್ಬ ಏಕಾಏಕಿ ಕರೆ ಮಾಡಿ, “ಏನ್ರೀ… ಅಷ್ಟು ಹೊತ್ತಿನಿಂದ ಮೆಸೇಜ್ ಮಾಡ್ತಾನೇ ಇದ್ದೇನೆ. ಉತ್ತರಿಸುವಷ್ಟು ಕಾಮನ್ ಸೆನ್ಸ್ ಇಲ್ಲವಾ ನಿಮಗೆ? ನಿನ್ನೆ ಹೇಳಿದ್ದ ಆ ರಿಪೋರ್ಟ್ ಏನಾಯ್ತು? ಇವತ್ತಿನ ಮೀಟಿಂಗಿಗೆ ಅಪ್ಡೇಟ್ ಕೊಡಿ”, ಎಂದು ದಬಾಯಿಸುತ್ತಾನೆ. ಅಷ್ಟರಲ್ಲಿ ಕ್ಯಾಬಿನಲ್ಲಿ ಕೂತು ಆಫೀಸಿಗೆ ಹೋಗುತ್ತಿದ್ದವನ ಮನಸ್ಸೂ, ಮೂಡೂ ಮೂರಾಬಟ್ಟೆಯಾಗಿರುತ್ತದೆ. ಕೈಬೆರಳುಗಳು ಬೇಡವೆಂದರೂ ಮತ್ತೆ ಸ್ಮಾರ್ಟ್‌ಫೋನಿನತ್ತ ಮರಳುತ್ತವೆ.

ಮಹಾನಗರಗಳಲ್ಲಿ ಬಂದು ನೆಲೆಸಿರುವ ಅದೆಷ್ಟೋ ಮಂದಿಗೆ “ಟೈಂ ಮ್ಯಾನೇಜ್‌ಮೆಂಟ್” ಎಂಬುದು ಇವತ್ತಿಗೂ ಒಂದು ಮರೀಚಿಕೆ. ಕೈಗೆಟುಕದ ದ್ರಾಕ್ಷಿ. ಇಂದು ಸಮಯ ಪರಿಪಾಲನೆಯ ಬಗ್ಗೆ ಕೋಟ್ಯಂತರ ರೀಲುಗಳು ಬರುತ್ತವೆ. ವರ್ಷವಿಡೀ ಸಾವಿರಾರು ಸೆಮಿನಾರು-ವೆಬಿನಾರುಗಳು ಆಯೋಜನೆಗೊಳ್ಳುತ್ತವೆ. ನೂರಾರು ಪುಸ್ತಕಗಳು ಪ್ರಕಟವಾಗುತ್ತವೆ. ಆದರೂ ಟೈಂ ಎಂಬುದು ಮ್ಯಾನೇಜ್ ಆಗುತ್ತಿಲ್ಲವಲ್ಲ ಎಂಬುದು ಬಹುತೇಕರ ನಿತ್ಯದ ಗೋಳು. ಇದು ಸಾಲದೆಂಬಂತೆ ನಮ್ಮ ಮೋಟಿವೇಷನಲ್ ಗುರುಗಳ, ಹೈಟೆಕ್ ಬಾಬಾಗಳ ಉಡಾಫೆ ಧಾಟಿಯ ಪ್ರವಚನಗಳು ಮನದೊಳಗಿನ ಅಗ್ನಿಕುಂಡದೊಳಕ್ಕೆ ಮತ್ತಷ್ಟು ತುಪ್ಪವನ್ನು ಸುರಿಯುತ್ತಿರುತ್ತವೆ. ಅಷ್ಟರಮಟ್ಟಿಗೆ ಸಮಯವೆಂಬುದು ಬಹುತೇಕರಿಗೆ ಇಂದು ಕೈಗೆ ನಿಲುಕದ ಸುಂದರ ನಕ್ಷತ್ರ. ಅಸಹಾಯಕತೆ ಮತ್ತು ಪಶ್ಚಾತ್ತಾಪಗಳೆಂಬ ಎರಡು ಧ್ರುವಗಳ ನಡುವೆ ಸಿಲುಕಿರುವ ವಿಚಿತ್ರ ಮಾಯಾಜಾಲ.
ಶಾರ್ಟ್ ಟ್ಯಾಂಕ್ ಇಂಡಿಯಾ ಕಾರ್ಯಕ್ರಮಕ್ಕಾಗಿ ಖ್ಯಾತ ಕಮೀಡಿಯನ್ ತನ್ಮಯ್ ಭಟ್ ನಿರ್ಮಿಸಿರುವ ಚಂದದ ಜಾಹೀರಾತೊಂದಿದೆ. ಈ ಜಾಹೀರಾತಿನಲ್ಲಿ ಉದ್ಯೋಗಿಗಳನ್ನು ಯಂತ್ರಮಾನವರಂತೆ ನಡೆಸಿಕೊಳ್ಳುವ ದೈತ್ಯ ಕಾರ್ಪೊರೆಟ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ವಿಡಂಬನಾತ್ಮಕ ದೃಶ್ಯಕಾವ್ಯವೊಂದನ್ನು ಹೆಣೆಯಲಾಗಿದೆ. ಖ್ಯಾತ ಬುರ್ಜ್ ಖಲೀಫಾ ಕಟ್ಟಡ ಸಂಕೀರ್ಣದಲ್ಲಿ ತನ್ನದೊಂದು ಫ್ಲೋರ್ ಇಲ್ಲವೆಂದು ಕೊರಗುವ ಶತಕೋಟ್ಯಾಧಿಪತಿ, ತಾನೀಗ ನಿತ್ಯವೂ ಆಫೀಸಿಗೆ ಬರಬೇಕಾಗುತ್ತಿದೆ ಎಂದು ಗೊಣಗುವ ಕೋಟ್ಯಾಧಿಪತಿ (ಆತ ಖಾಸಗಿ ಹೆಲಿಕಾಪ್ಟರಿನಲ್ಲಿ ಕೂತು ಬರುತ್ತಿದ್ದಾನೆಂಬುದು ಬೇರೆ ಮಾತು), ತನ್ನ ಉದ್ಯೋಗಿಯೊಬ್ಬ ಬಿಟ್ಟುಹೋದ ಕಾರಣ ಗಾಲ್ಫ್ ಕೋರ್ಟಿನತ್ತ ತೆರಳುವಾಗ ತನ್ನ ಗಾಲ್ಫ್ ಕಿಟ್ ಬ್ಯಾಗನ್ನು ತಾನೇ ಹೊತ್ತೊಯ್ಯಬೇಕಿದೆ ಎಂದು ದೂರುವ ಉದ್ಯಮಿ… ಹೀಗೆ ಮಹಾಸಿರಿವಂತರ “ಕಷ್ಟಕೋಟಲೆ”ಗಳನ್ನು ಇಲ್ಲಿ ಹಾಸ್ಯಮಯವಾಗಿ ತೋರಿಸಲಾಗಿದೆ. ಜೊತೆಗೇ, ವಾರಕ್ಕೆ ಎಪ್ಪತ್ತು ತಾಸಿಗಿಂತ ಹೆಚ್ಚು ದುಡಿಯುತ್ತಾ ಈ ಸಿರಿವಂತರನ್ನು ಮತ್ತಷ್ಟು ಸಿರಿವಂತರನ್ನಾಗಿಸುತ್ತಿರುವ ಉದ್ಯೋಗಿಗಳ ನಿತ್ಯದ ಬವಣೆಗಳನ್ನೂ!
ವಿಶ್ವದ ಅತಿ ಉದ್ದದ ವಲಸೆ ಹಕ್ಕಿಗಳಲ್ಲಿ ಒಂದಾದ ಗಿಡುಗ ಜಾತಿಯ ಅಮೂರ್ ಫಾಲ್ಕನ್ ತನ್ನ ಅಪ್ರತಿಮ ಹಾರಾಟ ಸಾಮರ್ಥ್ಯದಿಂದ ವಿಜ್ಞಾನಿಗಳನ್ನು ದಂಗುಬಡಿಸಿದ್ದು ಇತ್ತೀಚೆಗೆ ಸುದ್ದಿ ಮಾಡಿತ್ತು. ರೇಡಿಯೋ ಟ್ಯಾಗ್ ಮಾಡಲ್ಪಟ್ಟ ಅಪಾಪಂಗ್ ಎಂಬ ಗಂಡುಪಕ್ಷಿಯು, ಸೊಮಾಲಿಯಾದಿಂದ ಮಧ್ಯಭಾರತದವರೆಗೆ ಕೇವಲ 95 ಗಂಟೆಗಳಲ್ಲಿ 4750 ಕಿಲೋಮೀಟರ್ ದೂರವನ್ನು ಎಲ್ಲಿಯೂ ನಿಲ್ಲದೆ ಕ್ರಮಿಸಿ ಹೊಸ ದಾಖಲೆ ಬರೆದಿದೆಯಂತೆ. ಹಾಗೆ ನೋಡಿದರೆ ವಲಸಿಗರೇ ಬಹುಸಂಖ್ಯಾತರಾಗಿರುವ ಮಹಾನಗರದ ಹಲವರದ್ದು ಕೂಡ ಒಂದು ರೀತಿಯಲ್ಲಿ ಮಿನಿ ವಲಸೆಯ ಬದುಕೇ. ನಿತ್ಯವೂ ಮಹಾನಗರಗಳ ಟ್ರಾಫಿಕ್ಕಿನೊಂದಿಗೆ ಸೆಣಸಾಡಿಕೊಂಡು ಡ್ರೈವ್ ಮಾಡಿ ಅಥವಾ ಬಸ್ಸು-ಕ್ಯಾಬ್-ಲೋಕಲ್ ಟ್ರೈನುಗಳಲ್ಲಿ ಉದ್ಯೋಗಕ್ಕೆಂದು ತೆರಳುವ ಮಂದಿ ಏನಿಲ್ಲವೆಂದರೂ ತಮ್ಮ ನಾಲ್ಕೈದು ತಾಸುಗಳನ್ನು ದೈನಂದಿನ ಪ್ರಯಾಣದಲ್ಲೇ ಕಳೆಯುತ್ತಾರೆ. ಅಂದರೆ ಮಹಾನಗರದ ನಿವಾಸಿಯೊಬ್ಬನ ದಿನದ ಅಂದಾಜು ಐದನೇ ಒಂದು ಭಾಗ ಕೇವಲ ದೈನಂದಿನ ಪ್ರಯಾಣವೊಂದರಲ್ಲೇ ಸೋರಿಹೋಗಿರುತ್ತದೆ.
ಅದರಲ್ಲೂ ದೆಹಲಿ ಎನ್.ಸಿ.ಆರ್ ನಂತಹ ಪ್ರದೇಶಗಳಲ್ಲಿ ಈ ಕತೆಗೆ ಮತ್ತಷ್ಟು ಸ್ವಾರಸ್ಯಕರ ತಿರುವುಗಳು ಸಿಗುತ್ತವೆ. ಅದೇನೆಂದರೆ ಉದ್ಯೋಗಿಯೊಬ್ಬ ಒಂದೇ ದಿನದಂದು ಮೂರು ರಾಜ್ಯಗಳ ಗಡಿಯನ್ನು ದಾಟಿ ಪ್ರಯಾಣ ಮಾಡಿರುತ್ತಾನೆ. ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ಕೆಲ ಆಯಕಟ್ಟಿನ ಪ್ರದೇಶಗಳನ್ನು ಒಟ್ಟಾಗಿ ಸೇರಿಸಿ ದೆಹಲಿ ಎನ್.ಸಿ.ಆರ್ (ನ್ಯಾಷನಲ್ ಕ್ಯಾಪಿಟಲ್ ರೀಜನ್) ಎಂದು ಕರೆಯಲಾಗುವುದರಿಂದ ಇದು ಸಹಜವೂ ಹೌದು. ಕೊಂಚ ಅತ್ತಿತ್ತ ಹೊರಳಿದರೆ ಅತ್ತ ರಾಜಸ್ಥಾನ-ಪಂಜಾಬ್ ಮತ್ತು ಇತ್ತ ಹಿಮಾಚಲ್-ಉತ್ತರಾಖಂಡ್ ರಾಜ್ಯಗಳು. ಅಸಲಿಗೆ ಆಯಾ ಪ್ರದೇಶಗಳಲ್ಲಿರುವ ಸೌಲಭ್ಯಕ್ಕನುಗುಣವಾಗಿ ಇಲ್ಲಿ ಪ್ರಯಾಣಗಳ ವಿಧವೂ ಬದಲಾಗುತ್ತಾ ಹೋಗುತ್ತದೆ. ಅಂದರೆ ಉದ್ಯೋಗಿಯೊಬ್ಬ ಒಂದೇ ದಿಕ್ಕಿನ ಪ್ರಯಾಣವೊಂದರಲ್ಲಿ ಬಸ್ಸು, ಮೆಟ್ರೋ, ಆಟೋ ಮತ್ತು ಕ್ಯಾಬ್ ಗಳಂತಹ ನಾಲ್ಕು ಬಗೆಯ ವಾಹನಗಳಲ್ಲಿ ಪ್ರಯಾಣಿಸಿದ್ದರೆ ಅದರಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ. ಇವೆಲ್ಲ ಇಲ್ಲಿ ನಿತ್ಯದ ಮಾತು.

ಹೀಗಿದ್ದೂ ಔದ್ಯೋಗಿಕ ಮತ್ತು ಕೌಟುಂಬಿಕ ಬದುಕಿನ ಜವಾಬ್ದಾರಿಗಳ ಮಧ್ಯೆ, ವೈಯಕ್ತಿಕ ಬಳಕೆಗಾಗಿ ಸಣ್ಣದೊಂದು ಬೆಳಕಿಂಡಿಯಂತೆ ಬಹುತೇಕರಿಗೆ ಕಾಣುವುದು ಈ ಸಮಯವೇ. ಹೀಗಾಗಿ ಇದು ಸಣ್ಣದೊಂದು ತೂಕಡಿಕೆ-ನಿದ್ದೆಗೂ ಸೈ. ಒಂದೈವತ್ತು ಪುಟಗಳ ಓದಿಗೂ ಜೈ. ಲಾಂಗ್ ಡ್ರೈವ್ ಮಾಡಿಕೊಂಡಿರುವವರು ಎಫ್ ಎಮ್ ರೇಡಿಯೋ-ಪಾಡ್ ಕಾಸ್ಟ್ ಗಳಲ್ಲಿ ಸಮಯವನ್ನು ಕಳೆದರೆ, ಇನ್ನುಳಿದವರು ತಮ್ಮ ಸ್ಮಾರ್ಟ್‌ಫೋನುಗಳಲ್ಲಿ ಮೂಡಿಬರುವ ಸಿನೆಮಾ-ಸೀರೀಸ್-ರೀಲ್ಸ್ ಗಳ ಅನಂತ ಲೋಕದಲ್ಲೇ ಕಳೆದುಹೋಗಿರುತ್ತಾರೆ. ಇವೆಲ್ಲದರ ಮಧ್ಯೆ ಸಣ್ಣದೊಂದು ಸೊಗಸಾದ ಹರಟೆ ಸಿಕ್ಕರೆ ಸುದಿನ. ಉಳಿದಂತೆ ಕುಸಿಯುತ್ತಿರುವ ಶೇರು ಮಾರುಕಟ್ಟೆಯಿಂದ ಹಿಡಿದು, ದಿನಂಪ್ರತಿ ಹಿಡಿಯುವ ಬಸ್ಸು ಎರಡೇ ಎರಡು ಸೆಕೆಂಡುಗಳಲ್ಲಿ ತಪ್ಪಿಹೋದರೂ ಅಂದಿನ ದಿನ ಕಠಿಣ.
“ಮಹಾನಗರಗಳಲ್ಲಿ ಎಲ್ಲರೂ ಗಡಿಬಿಡಿಯಲ್ಲಿರುತ್ತಾರೆ, ಆದರೆ ಯಾವುದೂ ಇಲ್ಲಿ ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ”, ಎಂಬ ವಕ್ರತುಂಡೋಕ್ತಿ ಶೈಲಿಯ ಮಾತೊಂದಿದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಇನ್ನೊಂದೆಡೆ “ಸಮಯದಿಂದಾಗಿ ನಾವು” ಎಂಬ ವಾದವನ್ನು ಮುಲಾಜಿಲ್ಲದೆ ಅಳಿಸಿ ಹಾಕಿ, “ನಮ್ಮಿಂದಲಷ್ಟೇ/ನಾವಿದ್ದರಷ್ಟೇ ಸಮಯ” ಎಂಬುದನ್ನು ಬಲವಾಗಿ ನಂಬಿರುವ ಕೆಲ ಆಫ್ರಿಕನ್ ಸಮುದಾಯಗಳೂ ಇವೆ. ಇಲ್ಲಿ ಎಲ್ಲವೂ ಸರಳ, ಸುಲಲಿತ ಮತ್ತು ಸಾವಧಾನ. ತಮಾಷೆಯೆಂದರೆ ಮಹಾನಗರಗಳ ವೇಗಕ್ಕೆ ಒಗ್ಗಿಹೋಗಿರುವ ಬಹುತೇಕರಿಗೆ ಇಂತಹ ಆಯ್ದ ಪ್ರದೇಶಗಳು ಏಕಕಾಲದಲ್ಲಿ ಅಚ್ಚರಿ ಮತ್ತು ಗೊಂದಲವನ್ನು ತರಬಲ್ಲವು. “ಈಗೆಲ್ಲ ನಗರಗಳಲ್ಲದ ಪ್ರದೇಶಗಳಿಗೆ ಸುಮ್ಮನೆ ಹೋಗಿಬರುವುದೇ ಒಂದು ಬಗೆಯ ಹಿತವಾದ ಥೆರಪಿ”, ಎಂದು ಎಕ್ಸ್ ಜಾಲತಾಣದಲ್ಲಿ ಮಹಾನಗರದ ನಿವಾಸಿಯೊಬ್ಬರು ಇತ್ತೀಚೆಗೆ ಬರೆದಿದ್ದರು. ಇದು ಎಲ್ಲರ ಮನದಾಳದ ಮಾತೆಂಬಂತೆ ಸಾಕಷ್ಟು ಬಾರಿ ರೀಟ್ವೀಟ್ ಕೂಡ ಆಗಿತ್ತು.
ಅದೊಂದು ಕಾಲವಿತ್ತು. ಅಲ್ಲಿ ವಾರ್ತೆಗಳು ಪ್ರಸಾರವಾಗುತ್ತಿದ್ದವೇ ಹೊರತು ಅರಚಾಟವಿರುತ್ತಿರಲಿಲ್ಲ. ಮನೆಗೊಂದು ಟಿವಿ ಇತ್ತೇ ಹೊರತು ಕೈಗೊಂದು ಟಿವಿ ಪರದೆಯಿರಲಿಲ್ಲ. ಫೋನುಗಳು ಸಂವಹನದ ಸಾಧನಗಳಾಗಿದ್ದವೇ ಹೊರತು ಎಲ್ಲವೂ ಆಗಿರಲಿಲ್ಲ. ದೊಡ್ಡ ಕನಸು, ಮಹಾತ್ವಾಕಾಂಕ್ಷೆಗಳು ಅಲ್ಲೂ ಇದ್ದವು. ಆದರೆ ಇಂದಿನ ಲಗುಬಗೆಯಂತೂ ಖಂಡಿತ ಇರಲಿಲ್ಲ.
ನಮ್ಮ ನಡುವಿನ ಮೋಟಿವೇಷನಲ್ ಗುರುಗಳು ಹೇಳುವುದು ತಕ್ಕಮಟ್ಟಿಗೆ ಸತ್ಯ. ಕಳೆದ ಕೆಲವೇ ಕೆಲವು ವರ್ಷಗಳಲ್ಲಿ ಕಾಲ ಸರಿದಿರುವುದಷ್ಟೇ ಅಲ್ಲ, ಸಾಕಷ್ಟು ಬದಲಾಗಿದೆ ಕೂಡ. ಸದ್ಯ ಈ ನಡುವೆ ಕಳೆದುಹೋಗಿರುವ ನನ್ನನ್ನೇ ನಾನು ಹುಡುಕುತ್ತಿದ್ದೇನೆ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018 ನೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಅನುವಾದಕರಾಗಿ ಪರಿಚಿತರು.

