ಸಮಾವೇಶದಲ್ಲಿ ನಡೆದ ಬಹುತೇಕ ಚರ್ಚೆ, ಒತ್ತಾಸೆ, ಅಭಿಪ್ರಾಯಗಳು ಸರಕಾರದ ಅನುದಾನ ಹಾಗೂ ಪ್ರಾಯೋಜನೆಯ ಸವಲತ್ತುಗಳ ಸುತ್ತಲೇ ಸುತ್ತಿದ್ದು ಸಮಾವೇಶದ ಉದ್ದೇಶವನ್ನು ಸೀಮಿತಗೊಳಿಸಿದಂತಾಗಿತ್ತು. ಮಹತ್ತರವಾದ ಸಾಂಸ್ಕೃತಿಕ ನೀತಿಯ ಬಗ್ಗೆ ಚರ್ಚೆಯಾಗದೇ ಇರುವುದು ಈ ಸಮಾವೇಶದ ಮಿತಿಯಾಗಿತ್ತು. ಅನುದಾನ ಕೇಂದ್ರಿತ ಭಾಷಣಗಳು ಸಾಂಸ್ಕೃತಿಕ ನೀತಿಯ ಮಹತ್ವವನ್ನೇ ಮರೆಮಾಚುವಂತಿದ್ದವು – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
‘ಕರ್ನಾಟಕ ರಂಗ ಪರಿಷತ್ತು’ ಆಯೋಜಿಸಿದ್ದ “ಕರ್ನಾಟಕ ಸಂಘಟಕರ 3 ನೇ ಸಮಾವೇಶ”ವು ಮೇ 25 ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆಯಿತು. ಕರ್ನಾಟಕದ ವಿವಿಧ ಭಾಗದಿಂದ ಆಯ್ದ ಸಂಘಟಕರು ಭಾಗವಹಿಸಿದ್ದರು. ಉದ್ಘಾಟನೆ ಹಾಗೂ ಸಮಾರೋಪದ ನಡುವೆ ಮೂರು ಗೋಷ್ಠಿಗಳು ನಡೆದವು. ಪ್ರೊ.ಬರಗೂರು ರಾಮಚಂದ್ರಪ್ಪನವರು ಸಮಾವೇಶವನ್ನು ಉದ್ಘಾಟಿಸಿ ‘ಕರ್ನಾಟಕದ ಸಾಂಸ್ಕೃತಿಕ ನೀತಿ’ ಯ ಸ್ಥಿತಿ ಗತಿಗಳ ಬಗ್ಗೆ ವಿವರಣೆ ಕೊಟ್ಟರು. ತದನಂತರ-
* ಸಾಹಿತಿ, ಕಲಾವಿದರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಬಂಧಗಳು
* ಅಕಾಡೆಮಿ, ಪ್ರಾಧಿಕಾರ, ರಂಗಾಯಣ ಮತ್ತು ಟ್ರಸ್ಟ್ ಗಳು ಮತ್ತು ಸಂಸ್ಕೃತಿ ಇಲಾಖೆಯ ಹೊಣೆಗಾರಿಕೆ
* ಸಂಘ ಸಂಸ್ಥೆಗಳು ಮತ್ತು ಸಂಸ್ಕೃತಿ ಇಲಾಖೆಯ ಅನುದಾನ
ಈ ವಿಷಯಗಳ ಕುರಿತು ಮೂರು ಗೋಷ್ಠಿಗಳು ನಡೆದವು.
ಈ ಸಂಘಟಕರ ಸಮಾವೇಶದ ಉದ್ದೇಶಗಳು ಹಾಗೂ ಹಕ್ಕೊತ್ತಾಯಗಳು ಈ ರೀತಿಯದ್ದಾಗಿದ್ದವು.
* ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಬೇಕು.
* ಇಲಾಖೆಯ ವಾರ್ಷಿಕ ಬಜೆಟ್ ಸಾವಿರ ಕೋಟಿಗೆ ಹೆಚ್ಚಿಸಬೇಕು.
* ಕಲಾವಿದರ ಮಾಸಾಶನ ಕನಿಷ್ಟ ಐದು ಸಾವಿರಗಳಿಗೆ ಹೆಚ್ಚಿಸಬೇಕು.
* ಅಕಾಡೆಮಿಗಳಿಗೆ ವಾರ್ಷಿಕ 5 ಕೋಟಿ ಅನುದಾನ ನೀಡಬೇಕು.
* ಸಂಘ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಐವತ್ತು ಕೋಟಿಗೆ ಹೆಚ್ಚಿಸಬೇಕು.
* ರಾಜ್ಯಾದ್ಯಂತ ದುಸ್ಥಿತಿಯಲ್ಲಿರುವ ಜಿಲ್ಲಾ ರಂಗಮಂದಿರಗಳನ್ನು ಸರಿಪಡಿಸಬೇಕು.
ಎನ್ನುವ ಅಂಶಗಳು ಈ ಸಮಾವೇಶದ ಪ್ರಮುಖ ಬೇಡಿಕೆಗಳಾಗಿದ್ದವು. ಈ ಹಕ್ಕೊತ್ತಾಯಗಳ ಕುರಿತೇ ಹೆಚ್ಚು ಚರ್ಚೆಗಳಾಗಬೇಕಾಗಿತ್ತು. ಆದರೆ ಸಮಾವೇಶದಲ್ಲಿ ನಡೆದ ಬಹುತೇಕ ಚರ್ಚೆ, ಒತ್ತಾಸೆ, ಅಭಿಪ್ರಾಯಗಳು ಸರಕಾರದ ಅನುದಾನ ಹಾಗೂ ಪ್ರಾಯೋಜನೆಯ ಸವಲತ್ತುಗಳ ಸುತ್ತಲೇ ಸುತ್ತಿದ್ದು ಸಮಾವೇಶದ ಉದ್ದೇಶವನ್ನು ಸೀಮಿತಗೊಳಿಸಿದಂತಾಗಿತ್ತು.
ಸಮಾವೇಶದ ಸಮಾರೋಪದಲ್ಲಿ ಭಾಗಿಯಾಗಿದ್ದ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿರುವ ಡಾ. ಬಿ.ಎಸ್.ಮಂಜುನಾಥಸ್ವಾಮಿಯವರು ” ಸಂಸ್ಕೃತಿ ಇಲಾಖೆಯ ಕೆಲಸ ಅನುದಾನವನ್ನು ಮಾತ್ರ ಕೊಡುವುದಲ್ಲ, ಹಲವಾರು ಯೋಜನೆಗಳಲ್ಲಿ ಅದೂ ಒಂದು” ಎಂಬುದನ್ನು ಸ್ಪಷ್ಟಪಡಿಸಿದರು. ಆದರೆ ಸಮಾವೇಶದ ವೇದಿಕೆ ಮೇಲಿದ್ದ ಬಹುತೇಕರ ಭಾಷಣಗಳಲ್ಲಿ “ಇಲಾಖೆಯ ಅನುದಾನ ಹಂಚಿಕೆಯಲ್ಲಿನ ತಾರತಮ್ಯ, ಅದನ್ನು ಪಡೆಯಲು ಇರುವ ಸಮಸ್ಯೆಗಳು, ಇಲಾಖೆಯ ಅಧಿಕಾರಿಗಳ ಅಸಹಕಾರ, ಕಡಿಮೆ ಅನುದಾನ ಬಿಡುಗಡೆ..” ಇಂತಹ ವಿಚಾರಗಳೇ ಪ್ರಸ್ತಾಪಿಸಲ್ಪಟ್ಟವು. ಆಗಲೇ “ಇದು ಸಂಘಟಕರ ಸಮಸ್ಯೆಗಳ ಕುರಿತು ಸಂಘಟನಾತ್ಮಕವಾಗಿ ಚರ್ಚಿಸುವ ಸಮಾವೇಶವೋ ಅಥವಾ ಅನುದಾನದ ಹಂಚಿಕೆಯಲ್ಲಾಗಿರುವ ಅಡೆ ತಡೆಯ ಅಸಹನೆಯೋ?” ಎಂಬ ಅನುಮಾನ ಶುರುವಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಸ್ಕೃತಿ ಇಲಾಖೆಯ ಮೂಲಕ ಅನುದಾನವನ್ನು ಒದಗಿಸುವುದು ಸರಕಾರದ ಹೊಣೆಗಾರಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ “ಸರಕಾರ ಕೊಡಮಾಡುವ ಆರ್ಥಿಕ ಸಹಾಯದಿಂದಲೇ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತೇವೆ” ಎನ್ನುವುದೂ ಸೂಕ್ತವಾದ ನಿರ್ಧಾರವಲ್ಲ. ಸರಕಾರ ಸಹಾಯಧನ ಕೊಡಲಿ ಬಿಡಲಿ “ಶೋ ಮಸ್ಟ್ ಗೋ ಆನ್” ಎನ್ನುವುದು ಸಂಘಟಕರ ನೀತಿ ನಿಲುವಾಗಬೇಕಿದೆ.
ಸಹಾಯಧನ ದೊರಕಿದರೆ ಹೆಚ್ಚು ಕಾರ್ಯಕ್ರಮಗಳನ್ನು ಮಾಡಬಹುದು, ಸಿಕ್ಕದೇ ಹೋದರೆ ಅವರವರ ಆರ್ಥಿಕ ಇತಿ ಮಿತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸಂಘಟಕರ ಕಾಯಕವಾಗಬೇಕು. ಸರಕಾರಿ ಸವಲತ್ತು ಸಹಾಯಗಳನ್ನೇ ನಂಬಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವುದು ಖಂಡಿತಾ ಸಮಂಜಸವಲ್ಲ.
ಸರಕಾರಿ ಅನುದಾನ ಕೊಡಲಿ ಇಲ್ಲಾ ಬಿಡಲಿ, ಪ್ರಾಯೋಜನೆ ಸಿಗಲಿ ಸಿಗದೇ ಇರಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಲೇ ಇರುತ್ತೇವೆ ಎನ್ನುವುದು ನಿಜವಾದ ಸಂಘಟಕರ ಆಶಯವಾಗಬೇಕಿದೆ. ಧನಸಹಾಯ ಸಿಕ್ಕರೆ ಅದು ಹೆಚ್ಚುವರಿ ಬೋನಸ್. ಸಿಗದೇ ಹೋದರೆ ಆಸಕ್ತ ಜನರನ್ನೇ ಆಶ್ರಯಿಸಿ ಕಾರ್ಯಕ್ರಮಗಳನ್ನು ರೂಪಿಸಿದರಾಯ್ತು. ರಾಜಾಶ್ರಯದ ಮುಂದೆ ಬೇಡಿಕೊಳ್ಳುವ ಬದಲು ಜನಾಶ್ರಯವನ್ನು ಆಧರಿಸಿ ಕಾರ್ಯಕ್ರಮಗಳನ್ನು ರೂಪಿಸುವುದು ಅಪೇಕ್ಷಣೀಯ. ಸಾಂಸ್ಕೃತಿಕ ಸಂಘಟನೆ ಎನ್ನುವುದು ಸಂಘಟಕರಿಗೆ ಹಣ ಮಾಡುವ ದಂಧೆ ಆಗದೇ ಸಮಾಜಕ್ಕೆ ಸಾಂಸ್ಕೃತಿಕ ಕೊಡುಗೆ ಕೊಡುವ ಉದ್ದೇಶವನ್ನು ಹೊಂದಿರಬೇಕು.
“ಇಲಾಖೆಗೆ ಅನುದಾನ ಹಂಚಿಕೆಯೊಂದೇ ಕೆಲಸವಲ್ಲ, ಇನ್ನೂ ಬೇಕಾದಷ್ಟು ಕಾರ್ಯಯೋಜನೆಗಳಿವೆ” ಎಂದು ಇಲಾಖೆಯ ನಿರ್ದೇಶಕರಾಗಿರುವ ಡಾ.ಮಂಜುನಾಥಸ್ವಾಮಿಯವರು ಹೇಳಿದ್ದು ನಿಜ ಇರಬಹುದು. ಆದರೆ ನಿಜಕ್ಕೂ ಸಾಂಸ್ಕೃತಿಕ ಕೆಲಸಗಳನ್ನು ಬದ್ಧತೆಯಿಂದ ಮಾಡಿಕೊಂಡು ಬರುತ್ತಿರುವ ಸಂಸ್ಥೆಗಳಿಗೆ ಧನಸಹಾಯವನ್ನು ಮಾಡುವುದೂ ಇಲಾಖೆಯ ಕರ್ತವ್ಯವಾಗಿದೆ. ಈಗ ಕೇವಲ ಹತ್ತಾರು ಕೋಟಿಗಳ ಜಯಂತಿಗಳನ್ನು ಹಾಗೂ ಉತ್ಸವಗಳನ್ನು ಆಯೋಜಿಸುವುದೇ ಸಂಸ್ಕೃತಿ ಇಲಾಖೆಯ ಬಹುಮುಖ್ಯ ಕೆಲಸ ಎನ್ನುವಂತಾಗಿದೆ. ಆದರೆ ಸರಕಾರದ ಸಲಹೆ ಮೇರೆಗೆ ಆಯೋಜಿಸಲಾಗುವ ಈ ಜಯಂತಿ ಉತ್ಸವಗಳಿಗೂ ಕಲಾವಿದರು ಹಾಗೂ ಸಂಘಟಕರ ಅಗತ್ಯ ಬೇಕೆ ಬೇಕಾಗುತ್ತದೆ. ಅವರಿಲ್ಲದೇ ಯಾವ ಉತ್ಸವಗಳನ್ನೂ ಇಲಾಖೆ ಮಾಡಲು ಸಾಧ್ಯವಿಲ್ಲ. ಕಲಾವಿದರುಗಳು ಹಾಗೂ ಸಂಘಟಕರಿಗೆ ಹಣಕಾಸಿನ ನೆರವನ್ನು ಕೊಡುವುದು ಸಂಸ್ಕೃತಿ ಇಲಾಖೆಯ ಜವಾಬ್ದಾರಿಯಾಗಿದೆ.
ಆದರೆ.. ಈ ಅನುದಾನದ ಹಂಚಿಕೆಯನ್ನು ಸಂಸ್ಕೃತಿ ಇಲಾಖೆ ಯಾಕೆ ನೇರವಾಗಿ ಸಂಘ ಸಂಸ್ಥೆಗಳಿಗೆ ಮಾಡಬೇಕು ಎನ್ನುವ ಪ್ರಶ್ನೆಯೂ ಇದೆ. ಯಾಕೆಂದರೆ ಕಲೆ ಸಾಹಿತ್ಯ ಭಾಷೆ.. ಹೀಗೆ ಸಾಂಸ್ಕೃತಿಕ ವಿಭಾಗಗಳಿಗೆ ಒಂದೊಂದು ಸರಕಾರಿ ಅಕಾಡೆಮಿಗಳಿವೆ. ಪ್ರಾಧಿಕಾರ ಟ್ರಸ್ಟ್ ಗಳೂ ಇವೆ. ಯಾಕೆ ಸಂಬಂಧಿಸಿದ ಈ ಎಲ್ಲಾ ಸರಕಾರಿ ಸಂಸ್ಥೆಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ ಸಹಾಯಧನ ಹಂಚಿಕೆಯ ಹೊಣೆಗಾರಿಕೆಯನ್ನು ವಹಿಸಿಕೊಡಬಾರದು? ಎಲ್ಲವನ್ನೂ ಸಂಸ್ಕೃತಿ ಇಲಾಖೆಯೇ ಕೇಂದ್ರಿಕೃತವಾಗಿ ನಿಯಂತ್ರಿಸಬೇಕು? ಎಲ್ಲವನ್ನೂ ಇಲಾಖೆಯೇ ನಿರ್ವಹಿಸುವುದಾದರೆ ಈ ಅಕಾಡೆಮಿ ಪ್ರಾಧಿಕಾರಗಳಾದರೂ ಯಾಕಿರಬೇಕು? ಯಾಕೆ ಈ ಸರಕಾರಿ ಕೃಪಾಪೋಷಿತ ಸಂಸ್ಥೆಗಳಿಗೆ ನಿಜವಾದ ಅರ್ಥದಲ್ಲಿ ಸ್ವಾಯತ್ತತೆ ಕೊಡಬಾರದು?

ಈ ರೀತಿಯ ಬಹುತೇಕ ಪ್ರಶ್ನೆಗಳಿಗೆ ಕರ್ನಾಟಕ ಸಾಂಸ್ಕೃತಿಕ ನೀತಿಯಲ್ಲಿ ಉತ್ತರಗಳಿಗೆ. ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಗೆ ಬೇಕಾದ ಅಂಶಗಳಿವೆ. ಆದರೆ ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಸಲ್ಲಿಕೆಯಾಗಿ 12 ವರ್ಷಗಳಾಗಿದ್ದರೂ, ಉಪಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿ ಜಾರಿಯಾಗಬೇಕೆಂದು ಸರಕಾರಿ ಆದೇಶವಾಗಿ ಆರು ವರ್ಷಗಳೇ ಕಳೆದಿದ್ದರೂ, ಇಲ್ಲಿವರೆಗೂ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಇಲಾಖೆಯ ಅಧಿಕಾರಿಗಳು ತಮಗೆ ಅಗತ್ಯ ಅನಿಸಿರುವ ಅಂಶಗಳನ್ನು ಮಾತ್ರ ಜಾರಿಗೆ ತಂದಿದ್ದು ಸಂಪೂರ್ಣವಾಗಿ ಅನುಮೋದಿತ ಸಾಂಸ್ಕೃತಿಕ ನೀತಿಯನ್ನು ಇಲ್ಲಿವರೆಗೂ ಜಾರಿಗೆ ತಂದಿಲ್ಲ. ಜಾರಿಗೆ ತಂದರೆ ಎಲ್ಲಿ ತಮ್ಮ ನಿಯಂತ್ರಣ ತಪ್ಪಿ ಹೋಗುವುದೋ ಎನ್ನುವ ಆತಂಕ ಮೇಲಿನ ಅಧಿಕಾರಿಗಳದ್ದು. ಜಾರಿಯಾದರೆ ಎಲ್ಲಿ “ಅಕಾಡೆಮಿ ಪ್ರಾಧಿಕಾರಿಗಳ ಪದಾಧಿಕಾರಿಗಳನ್ನು ಬದಲಾಯಿಸಬಹುದಾದ ತಮ್ಮ ಆಶಯಕ್ಕೆ ಧಕ್ಕೆ ಬರುತ್ತದೋ ಎನ್ನುವ ಆತಂಕ ರಾಜಕೀಯ ಪಕ್ಷದ ಆಳುವವರದ್ದು. ಹೀಗಾಗಿ ಈ ರಾಜ್ಯಕ್ಕೆ ಅಧಿಕೃತವಾಗಿ ಸಾಂಸ್ಕೃತಿಕ ನೀತಿಯೊಂದು ಜಾರಿಯಾಗಿದ್ದರೂ ಇಲ್ಲಿವರೆಗೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ ರಾಜಕೀಯ ಪಕ್ಷದ ಆಡಳಿತ ಬದಲಾದಂತೆಲ್ಲಾ ಅಕಾಡೆಮಿ ಪ್ರಾಧಿಕಾರದ ಪದಾಧಿಕಾರಿಗಳನ್ನು ಅವಧಿಪೂರ್ವದಲ್ಲೇ ಬದಲಾಯಿಸಲಾಗುವ ಕೆಟ್ಟ ಸಂಪ್ರದಾಯ ಜಾರಿಯಲ್ಲಿದೆ. ಹಾಕಿಕೊಂಡಿದ್ದ ಅನೇಕ ಯೋಜನೆಗಳು ಅವಧಿಪೂರ್ವದಲ್ಲೇ ಅಸುನೀಗುತ್ತವೆ.
ಇಂತಹ ಮಹತ್ತರವಾದ ವಿಚಾರವನ್ನು ಈ ಸಂಘಟಕರ ಸಮಾವೇಶದಲ್ಲಿ ಚರ್ಚಿಸಬೇಕಿತ್ತು. ಯಾಕೆಂದರೆ ಸಾಂಸ್ಕೃತಿಕ ನೀತಿಯ ಅನುಷ್ಠಾನವು ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೂ ಹಾಗೂ ಸಂಘಟಕರಿಗೂ ಅನುಕೂಲಕಾರಿಯಾಗುತ್ತಿತ್ತು. ಕೇಂದ್ರೀಕೃತ ಅನುದಾನ ಹಂಚಿಕೆಯು ವಿಕೇಂದ್ರಿಕರಣಗೊಂಡು ಸಂಸ್ಕೃತಿ ಇಲಾಖೆಗೆ ಅಲೆದಾಡುವುದು ತಪ್ಪುತ್ತಿತ್ತು. ಅನುದಾನದ ಹಂಚಿಕೆಯಲ್ಲಿ ಅಧಿಕಾರಿಗಳ ಅಧಿಪತ್ಯ ಕಡಿಮೆಯಾಗುತ್ತಿತ್ತು. ಸಂಘಟಕರು ತಮ್ಮ ಯೋಜನೆ ಹಾಗೂ ಅಗತ್ಯ ಅನುದಾನಕ್ಕಾಗಿ ತಮಗೆ ಸಂಬಂಧಿಸಿದ ಅಕಾಡೆಮಿ ಪ್ರಾಧಿಕಾರಗಳನ್ನು ಸಂಪರ್ಕಿಸಬಹುದಾಗಿತ್ತು.
ಆದರೆ ಮಹತ್ತರವಾದ ಸಾಂಸ್ಕೃತಿಕ ನೀತಿಯ ಬಗ್ಗೆ ಚರ್ಚೆಯಾಗದೇ ಇರುವುದು ಈ ಸಮಾವೇಶದ ಮಿತಿಯಾಗಿತ್ತು. ಅನುದಾನ ಕೇಂದ್ರಿತ ಭಾಷಣಗಳು ಸಾಂಸ್ಕೃತಿಕ ನೀತಿಯ ಮಹತ್ವವನ್ನೇ ಮರೆಮಾಚುವಂತಿದ್ದವು.
ಏನೇ ಆಗಲಿ.. ಕೆಲವಾರು ಸಂಘಟಕರು ಸಮಾವೇಶದ ಹೆಸರಲ್ಲಿ ಒಂದು ಕಡೆ ಸೇರಿದ್ದು, ತಮ್ಮ ಸಂಕಟಗಳನ್ನು ಹಂಚಿಕೊಂಡಿದ್ದು, ಇಲಾಖೆಯ ಮೇಲೆ ಅನುದಾನ ಹಂಚಿಕೆಯ ಕುರಿತು ಎಚ್ಚರಿಕೆ ಮೂಡಿಸಿದ್ದು ಈ ಸಮಾವೇಶದ ಸಾರ್ಥಕತೆಯಾಗಿದೆ. ಮುಂದಿನ ಸಮಾವೇಶದಲ್ಲಿ ಅನುದಾನವನ್ನು ಹೊರತುಪಡಿಸಿ ಸಾಂಸ್ಕೃತಿಕ ಲೋಕದ ಬಿಕ್ಕಟ್ಟುಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಮಾಡಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.

ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ-ಕ್ರಿಮಿನಲ್ ಕೇಸ್ ವಾಪಸ್ಸೀಕರಣ; ಅರಾಜಕ ವ್ಯವಸ್ಥೆಯ ಅನಾವರಣ


