ಮೈಸೂರು : ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಮೈಸೂರಿನ ಕಲಾಮಂದಿರದಲ್ಲಿ ನಡೆದದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸಮಸಮಾಜ ನಿರ್ಮಿಸುವ ಸಂಕಲ್ಪವನ್ನು ಸರ್ಕಾರ ಹೊಂದಿದೆ. ಸಿದ್ದರಾಮೇಶ್ವವರೂ ಸೇರಿದಂತೆ ಸಂತಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆಗಳು ತೊಲಗಬೇಕು ಎಂದು ಬಯಸಿದ್ದರು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಬೋಧಿಸಿದ್ದರು. ಶೋಷಣೆಗೊಳಗಾದ ಹಾಗೂ ಅವಕಾಶವಂಚಿತ ಸಮುದಾಯಗಳು ಸಂಘಟಿತರಾಗುವ ಸಮ್ಮೇಳನಗಳು ಉತ್ತಮ ಕಾರ್ಯಗಳಾಗಿವೆ ಎಂದರು.
ಬಸವಜಯಂತಿಯಂದು 2013ರಮೇ 13 ರಂದು ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದೆ. ಬಸವಣ್ಣನವರು ಬೋಧಿಸಿದಂತೆ ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ. ರಾಜಕೀಯ ಸ್ವಾತಂತ್ರ್ಯವು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ. ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ ಆರ್ಥಿಕ ಶಕ್ತಿ ದೊರಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆರ್ಥಿಕವಾಗಿ ಶಕ್ತಿಯಿಲ್ಲದವರಿಗೆ ಗ್ಯಾರಂಟಿ ಯೋಜನೆಗಳನ್ನು ಸಮಾನವಾಗಿ ನೀಡಲಾಗಿದೆ. ಮಹಿಳೆಯರಿಗೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ತಾರತಮ್ಯವಿಲ್ಲದೇ ನೀಡಲಾಗುತ್ತಿದೆ. ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಲಾಗಿದೆ.
ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ ಎಡಗೈಗೆ ಶೇ.5.25, ಬಲಗೈಗೆ ಶೇ.5.25, ಹಾಗೂ ಇತರ ಉಪಜಾತಿಗಳಿಗೆ ಶೇ. 4.5 ರಷ್ಟು ಹಂಚಿಕೆ ಮಾಡಲಾಗಿದೆ ಎಂದರು.
ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಡಾ: ಬಿ.ಆರ್ ಅಂಬೇಡ್ಕರ್ ಅವರ ಹೆಸರು ಇಂದು ‘ಜೈ ಭೀಮ್’ ಎಂಬ ಘೋಷಣೆಯ ಮೂಲಕ ಎಲ್ಲೆಡೆ ಮೊಳಗುತ್ತಿದೆ. ನಮ್ಮ ರಾಜ್ಯದ 7 ಕೋಟಿ ಜನರಿಗೂ ಅನ್ವಯವಾಗುವಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಯವಿಲ್ಲ; ನಾವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದೇವೆ, ಮುಖ್ಯವಾಗಿ ಭೋಷಿ ಜನಾಂಗಕ್ಕೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪುನರುಚ್ಚರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಸಿದ್ದರಾಮೇಶ್ವರ ಜಯಂತಿಯನ್ನು ಮೊದಲು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಮೈಸೂರಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದರು.
ಭೋವಿ ಅಭಿವೃದ್ಧಿ ನಿಗಮದಲ್ಲಿ ಒಡ್ಡರ ಸಮುದಾಯವನ್ನು ಸೇರ್ಪಡೆ ಮಾಡಿ ಭೋವಿ ಹಾಗೂ ಒಡ್ಡರ ಅಭಿವೃದ್ಧಿ ನಿಗಮ ಎಂದು ಮಾರ್ಪಡು ಮಾಡಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಿದ್ದರಾಮೇಶ್ವರ ಸಮುದಾಯ ಭವನ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದರು
ಚಿತ್ರದುರ್ಗ ಹಾಗೂ ಬಾಗಲಕೋಟೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಕೇವಲ ಒಬ್ಬ ಶರಣರಲ್ಲ, ಅವರು ಈ ನಾಡಿನ ಕಾಯಕ ಯೋಗಿ. ಅವರ ತತ್ವಗಳು ಮತ್ತು ಸಮಾಜಮುಖಿ ಕಾರ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ ಎಂದರು.
ಕಾಯಕ ಯೋಗಿ ಪ್ರಶಸ್ತಿ ಪ್ರದಾನ : ಇದೇ ಸಂದರ್ಭದಲ್ಲಿ 2025-26 ನೇ ಸಾಲಿನ ಕಾಯಕ ಯೋಗಿ ಸಿದ್ದರಾಮೇಶ್ವರ ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ಪ್ರೊ.ಎಸ್.ಜಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಮ ಬೆಳ್ಳಿಕಿರಣ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

