ಹಾಡು :
ಮೀಸಲಾತಿ ಮೀಸಲಾತಿ
ಆಹಾ ಮೀಸಲಾತಿ ಮಹಿಳೆಯರಿಗೆ
ಸವರತಾರೆ ನೋಡಿ ಬೆಣ್ಣೆ ಮೂಗಿಗೆ
ಕೊಟ್ಟಂತೆ ಮಾಡುವರು, ಕೊಡದಂತೆ ತಡೆಯುವರು
ಮಹಿಳಾ ಮೀಸಲಾತಿ ವಿರೋಧಿಗಳು ಯಾರು?
(ಅಂಧಭಕ್ತನೊಬ್ಬ ದಿನಪತ್ರಿಕೆ ಓದುತ್ತಾ ಚಿಂತಾಕ್ರಾಂತನಾಗಿ ತಲೆ ಮೇಲೆ ಕೈಹೊತ್ತು ಕುಳಿತು, ಇದ್ದಕ್ಕಿದ್ದಂತೆ )
ಅಂಧಭಕ್ತ : ಅಯ್ಯಯ್ಯೋ ಅನ್ಯಾಯ, ದೇಶದ 70 ಕೋಟಿ ಮಹಿಳೆಯರಿಗೆ ಅನ್ಯಾಯ. ವಿರೋಧ ಪಕ್ಷಗಳಿಗೆ ಧಿಕ್ಕಾರ..
ಹೆಂಡತಿ : ರ್ರೀ ಏನಾಯ್ತ್ರಿ? ಇಷ್ಟೊತ್ತು ಚೆನ್ನಾಗಿದ್ರಿ?
ಅಂಧಭಕ್ತ : ಅನ್ಯಾಯ ಕಣೆ.. ಮಹಾ ಅನ್ಯಾಯ. ಈ ವಿರೋಧ ಪಕ್ಷದವರೆಲ್ಲಾ ಸೇರಿಕೊಂಡು ನಿಮಗೆಲ್ಲಾ ಭಾರೀ ಅನ್ಯಾಯ ಮಾಡಿದ್ರಲ್ಲೇ.. ಇವರ ಮನೆ ಹಾಳಾಗಾ, ಇವರಿಗೆ ಬರಬಾರದ ರೋಗಗಳೆಲ್ಲಾ ಹೋಲ್ಸೇಲಾಗಿ ಬರಾ..
ಹೆಂಡತಿ : ಸ್ಟಾಪ್.. ಅದ್ಯಾಕೆ ಬಜಾರಿ ಹೆಂಗಸರಂಗ್ ಬಾಯಿ ಬಡ್ಕೋತಿದ್ದೀ.. ಏನಾಯ್ತು ಅದನ್ನ ಹೇಳಯ್ಯಾ..
ಅಂಧಭಕ್ತ : ಏನೂಂತ ಹೇಳಲೇ, ಯಾವ ಬಾಯಲ್ಲಿ ಹೇಳಲೇ.. ಅಯ್ಯಯ್ಯೋ ಅನ್ಯಾಯಾ..
ಹೆಂಡತಿ : ದಿನಾ ಮೂರೊತ್ತು ತಿಂತೀಯಲ್ಲಾ, ಅದೇ ಬಾಯಲ್ಲಿ ಹೇಳಯ್ಯಾ, ಸಾಕು ನಿನ್ನ ಆಟಾಟೋಪ.
ಅಂಧಭಕ್ತ : ನೀನೇ ಹೀಗಂದ್ರೆ ಹೆಂಗೇ.. ನಿಮಗೆ ಕಣೆ ಹೆಂಗಸ್ರಿಗೆ ಅಂದರೆ ಮಹಿಳೆಯರಿಗೆ ಅನ್ಯಾಯ ಆಗಿದ್ದು..
ಹೆಂಡತಿ : ನಮಗೆ ನಿಮ್ಮಂತಾ ಗಂಡಸರಿಂದಲೇ ಅನ್ಯಾಯ ಆಗೋದು.. ಅನ್ಯಾಯ ಅಂತೆ ಅನ್ಯಾಯಾ.. ಅದೇನು ಸರಿಯಾಗಿ ಕಕ್ಕಯ್ಯಾ..
ಅಂಧಭಕ್ತ : ಅದೇ ಕಣೆ.. ಪಾರ್ಲಿಮೆಂಟಲ್ಲಿ ಮಹಿಳಾ ಮಸೂದೆ ಸೋಲಿಸಿ ಬಿಟ್ರಲ್ಲೇ ಈ ಹಾಳಾದ ವಿರೋಧ ಪಕ್ಷದವರು. ಅವರ ಕುಂಡಿಗೆ ಕುರಾ ಬರ್ಲಿ. ಅವರ…
ಹೆಂಡತಿ : ತೋ ಥೋ. ಸಾಕು ಮಾಡಯ್ಯಾ ನಿನ್ನ ರಗಳೆ. ಅದ್ಯಾರಯ್ಯಾ ಮಹಿಳೆಯರ ಮೀಸಲಾತಿ ಕಿತ್ಕೊಳ್ಳೋದು.. ಆಗಲೇ ಮೂರು ವರ್ಷದ ಹಿಂದೇನೇ ಲೋಕಸಭೆ ಚುನಾವಣೆಗಳಲ್ಲಿ 33% ಮಹಿಳೆಯರಿಗೆ ಮೀಸಲು ಕೊಡ್ಬೇಕು ಅಂತಾ ಠರಾವ್ ಆಗೋಗಿದೆಯಲ್ಲಾ. ಮತ್ತೇನಯ್ಯ ಈಗ..
ಅಂಧಭಕ್ತ : ಹೌದು ಕಣೆ, ಆಗಿತ್ತು. ಆದರೆ ಮತ್ತೆ ಈಗ…
ಹೆಂಡತಿ : ಅಂಗೀಕಾರ ಆಗಿದ್ದ ಮಸೂದೆಯನ್ನ ಇಲ್ಲಿವರೆಗೂ ಆ ನಿಮ್ಮ ಮೋದಿ ಯಾಕೆ ಮುಕಳಿ ಕೆಳಗೆ ಇಟ್ಕೊಂಡು ಕೂತಿದ್ದಾ? ಯಾಕೆ ಆಗಲೇ ಜಾರಿಗೆ ತಂದಿಲ್ಲಾ, ಮೂರು ವರ್ಷದಿಂದ ಮೇಕಪ್ ಮಾಡ್ಕೊಂಡು, ಕ್ಯಾಮರಾಗಳಿಗೆ ಪೋಸ್ ಕೊಡ್ಕೊಂಡು, ವಿದೇಶ ಪ್ರವಾಸ ಮಾಡ್ತಾನೇ ಕಾಲ ಕಳದ್ರಲ್ಲಾ, ಅಂಗೀಕಾರವಾದ ಮಸೂದೆಯನ್ನ ಜಾರಿ ಮಾಡೋಕೆ ಟೈಂ ಸಿಗಲಿಲ್ವಾ.
ಅಂಧಭಕ್ತ : ಎಲ್ಲಾದಕ್ಕೂ ಟೈಂ ಬರಬೇಕು ಕಣೆ. ವಿಶ್ವಗುರುಗಳಿಗೆ ಸಾವಿರಾರು ಕೆಲಸ ಇರ್ತವೆ. ಈಗ ಟೈಂ ಸಿಕ್ಕಿದೆ. ಅದಕ್ಕೆ ಮತ್ತೆ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ, ಇದ್ರಲ್ಲೇನಿದೆ ತಪ್ಪು.
ಹೆಂಡತಿ : ಹಾಂ.. ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಆಗಿ ರಾಷ್ಟ್ರಪತಿ ಸೀಲ್ ಬಿದ್ದಿರೋ ಮಸೂದೆಯನ್ನ ಅನುಷ್ಟಾನಕ್ಕೆ ತಂದು 2024 ರ ಚುನಾವಣೆಯಲ್ಲಿ ಮಹಿಳೆಯರಿಗೆ ಯಾಕಯ್ಯಾ 33% ಮೀಸಲಾತಿ ಕೊಡಲಿಲ್ಲಾ ಅದನ್ನ ಮೊದಲು ಹೇಳು.
ಅಂಧಭಕ್ತ : ಅದಕ್ಕೆಲ್ಲಾ ಕಾಲ ಕೂಡಿ ಬಂದಿಲ್ಲಾ. ಈಗ ಬಂದೈತೆ.. ಮತ್ತೆ ಮಂಡಿಸಿದ್ರು.
ಹೆಂಡತಿ : ಓ ಹೋ.. ಅದ್ಯಾವುದೋ ರಾಜ್ಯಗಳಲ್ಲಿ ಚುನಾವಣೆ ನಡೀತಾ ಇದೆಯಂತೆ. ಅದಕ್ಕೆ ಮಹಿಳಾ ಮೀಸಲಾತಿ ಕೊಟ್ಟಿದ್ದೀವಿ ಅಂತಾ ಬೊಗಳೆ ಬಿಟ್ಟು ಮಹಿಳೆಯರನ್ನ ಯಾಮಾರಿಸಿ ಓಟು ಗಿಟ್ಟಿಸಿಕೊಳ್ಳೋ ತಂತ್ರಾನಾ ಇದು.
ಅಂಧಭಕ್ತ : ಅದು ಹಂಗಲ್ವೇ.. ನೋಡು ಈಗ ಲೋಕಸಭೆಯಲ್ಲಿ ಒಟ್ಟು 543 ಎಂಪಿ ಸೀಟ್ ಇದ್ದಾವಲ್ವಾ. ದೇಶದಲ್ಲಿ ಜನಸಂಖ್ಯೆನೂ ಏರಿದೆಯಲ್ವಾ. ಜನಸಂಖ್ಯೆ ಆಧರಿಸಿ 850 ಕ್ಕೆ ಎಂಪಿ ಸೀಟು ಏರಿಸೋದು ನಮ್ಮ ವಿಶ್ವಗುರುವಿನ ಮಾಸ್ಟರ್ ಪ್ಲಾನ್ ಕಣೆ.
ಹೆಂಡತಿ : 543 ಸೀಟಿನ್ಯಾಗ 33 ಪರ್ಸೆಂಟ್ ಮಹಿಳಾ ಮೀಸಲಾತಿ ಕೊಟ್ರೆ ಅವರಪ್ಪನ ಮನೆ ಗಂಟೇನು ಹೋದೀತು. ಇಡೀ ಸಂಸತ್ತಿಗೆ ಸಂಸತ್ತೆ ಇದಕ್ಕೆ ಒಪ್ಪಿತ್ತಲ್ವಾ..
ಅಂಧಭಕ್ತ : ಹೌದು.. ಒಪ್ಪಿತ್ತು.. ಈಗ ಅದನ್ನ ಬದಲಾಯಿಸಿ 850 ಸೀಟಿಗೆ 33 ಪರ್ಸೆಂಟೇಜ್ ಕೊಡ್ತೀವಿ, ಒಪ್ಪಿಗೆ ಕೊಡಿ ಅಂತಾ ತಿದ್ದುಪಡಿ ಮಂಡನೆ ಮಾಡಿದ್ರೆ, ಊಹೂಂ ಆಗಾಕಿಲ್ಲಾ ಅಂತಾ ತಿದ್ದುಪಡಿಗೆ ಹೊಗೆ ಹಾಕಿದ್ರಲ್ಲಾ ಈ ವಿರೋಧ ಪಕ್ಷದವರು…
ಹೆಂಡತಿ : ಅಲ್ಲಯ್ಯಾ, ಅದೇನೋ ಅಂತಾರಲ್ಲಾ “ಕುಣಿಯೋಕೆ ಬರದೋರು ನೆಲ ಡೊಂಕು ಅಂದ್ರಂತೆ” ಹಂಗಾಯ್ತು ನಿಮ್ಮ ವಿಶ್ವಗುರುವಿನ ರಗಳೆ. ಈಗಾಗಲೇ ಸಂಸತ್ತು ಒಪ್ಪಿದ್ದನ್ನ ಜಾರಿ ಮಾಡೋದು ಬಿಟ್ಟು ಕ್ಷೇತ್ರ ವಿಂಗಡಣೆ ಪಟ್ಟು ಹಾಕಿ ಕೂತ್ರೆ ವಿರೋಧ ಪಕ್ಷದವರೇನು ಗೆಣಸು ಕೆರಿಯಾಕಾ ಇರೋದು? ಪ್ರತಿಪಟ್ಟು ಹಾಕೇ ಹಾಕ್ತಾರೆ.. ಹಾಕಿಸ್ಕೋಬೇಕಪ್ಪಾ..
ಅಂಧಭಕ್ತ : ಇದು ತಪ್ಪಲ್ವಾ.. 850 ಸೀಟಿಗೆ 33 ಪರ್ಸೆಂಟ್ ಅಂದ್ರೆ 280 ಸೀಟು ಮಹಿಳೆಯರಿಗೆ ಸಿಗ್ತಾ ಇದ್ವಲ್ವಾ. ನಾನು ಪ್ರಯತ್ನ ಮಾಡಿದ್ರೆ ನಿನಗೂ ಲೇಡೀಸ್ ರಿಜರ್ವೇಶನ್ ಕೋಟಾದೊಳಗೆ ಮುಂದಿನ ಎಲೆಕ್ಷನಲ್ಲಿ ಟಿಕೇಟ್ ಕೊಡ್ಸೋಣಾ ಅಂತಾ ಇದ್ದೆ.
ಹೆಂಡತಿ : ಅಲೆಲೆಲೇ ಆಸೆ ನೋಡು. 850 ಸೀಟು ಹೆಂಗಯ್ಯಾ ಮರು ವಿಂಗಡಣೆ ಮಾಡ್ತಾರೆ. ಇನ್ನೂ ಈಗ ಶಿವನೇ ಅಂತಾ ಜನಗಣತಿ ಆರಂಭ ಮಾಡ್ತಾ ಅವ್ರೆ. ಅಷ್ಟರೊಳಗೆ ಕ್ಷೇತ್ರ ವಿಂಗಡಣೆ ಮಸೂದೆಯಂತೆ.. ಅದ್ಯಾವನೋ ಮಹಾಮೂರ್ಖ ‘ಕೂಸೇ ಹುಟ್ಟಿಲ್ಲಾ ಕುಲಾಯಿ ತೊಟ್ಟಿಲಿಗೆ ಆರ್ಡರ್ ಮಾಡಿದ್ನಂತೆ’.
ಅಂಧಭಕ್ತ : ನೋಡು. ನೋಡು. ನನಗೆ ಏನ್ ಬೇಕಾದ್ರೂ ಅನ್ನು ಅನುಸ್ಕೋತೀನಿ, ನಮ್ಮ ವಿಶ್ವಗುರುಗೆ ಏನಾದ್ರೂ ಅಂದ್ರೆ ನಾನು ಸುಮ್ಕಿರಾಕಿಲ್ಲ.
ಹೆಂಡತಿ : ಏನ್ ಮಾಡ್ತೀ.. ಆತ ಹೆಂಡತಿ ಬಿಟ್ಟು ಹೋಗಿ 40 ವರ್ಷ ಭಿಕ್ಷೆ ಬೇಡಿ ತಿಂದನಂತೆ. ನೀನೂ ಹಂಗೇ ಮಾಡ್ತೀಯಾ? ನಿನ್ನ ಕೈಲಿ ಆಗಾಕಿಲ್ಲ ಬಿಡು. ನೋಡಯ್ಯಾ.. ಇನ್ನೂ ಜನಗಣತಿ ಆಗಿಲ್ಲಾ, 15 ವರ್ಷದ ಹಿಂದಿನ ದತ್ತಾಂಶ ಈಗ ಹಳೇದಾಯ್ತು. ಮೊದಲು ಜನಗಣತಿ ಆಗಿ, ನಮ್ಮ ರಾಜ್ಯಕ್ಕೆ ಎಷ್ಟು ಲಾಭ ಆಗುತ್ತೆ, ಎಷ್ಟು ನಷ್ಟ ಆಗುತ್ತೆ, ಉತ್ತರ ಭಾರತಕ್ಕೆ ಎಷ್ಟು ಸೀಟು ಅಂತಾ ನಿರ್ಧಾರ ಆಗುತ್ತೆ, ದಕ್ಷಿಣದ ರಾಜ್ಯಗಳಿಗೆ ಎಷ್ಟು ಅನ್ಯಾಯ ಆಗುತ್ತೆ ಅನ್ನೋದನ್ನೆಲ್ಲಾ ಲೆಕ್ಕಾ ಹಾಕಿ ಮರು ವಿಂಗಡಣೆ ಮಾಡಬೇಕು. ಇದೆಲ್ಲಾ ಏನೂ ಆಗದೇ ಈಗಲೇ ಮರು ವಿಂಗಡಣೆ ಮಾಡ್ತೀನಿ ಅಂದ್ರೆ ಯಾರಯ್ಯಾ ಒಪ್ಪಕೋತಾರೆ? ನಾನ್ಸೆನ್ಸ್..
ಅಂಧಭಕ್ತ : ಹೌದಲ್ವಾ.. ಆದರೆ ಇದೆಲ್ಲಾ ಆಗೋದಕ್ಕೆ ಮೂರ್ನಾಲ್ಕು ವರ್ಷ ಬೇಕಾಗುತ್ತಲ್ವಾ. ಅಷ್ಟರಲ್ಲಿ 2029 ರ ಲೋಕಸಭಾ ಚುನಾವಣೆ ಬಂದೇ ಬಿಡುತ್ತಲ್ವಾ.
ಹೆಂಡತಿ : ಹಾಂ. ಅಲ್ಲೇ ಇರೋದು ಕಣಯ್ಯಾ ವಿಶ್ವಗುರುವಿನ ಅವಸರ. ಕಳೆದ ಇಲೆಕ್ಷನ್ ದಾಗ ಅವರ ಪಕ್ಷ ಬಹುಮತ ಕಳಕೊಂಡು ಹೈರಾಣಾಗಿದೆ. ಮತ್ತೆ ಮುಂದಿನ ಚುನಾವಣೆ ನಡೆದ್ರೆ ಮಾನ ಕಾಪಾಡೋ ಲಂಗೋಟಿನೂ ಕಿತ್ತೊಗುತ್ತೆ ಅನ್ನೂ ಅನುಮಾನ ಅವ್ರಿಗೆ. ಅದಕ್ಕೆ ನಿನ್ನಂತಾ ಅಂಧಭಕ್ತರು ಜಾಸ್ತಿ ಇರೋ ಉತ್ತರ ಭಾರತದ ರಾಜ್ಯಗಳ ಎಂಪಿ ಸಂಖ್ಯೆ ಜಾಸ್ತಿ ಮಾಡಿ ಮತ್ತೆ ಪಟ್ಟಕ್ಕೆ ಗೂಟಾ ಹೊಡ್ಕೊಂಡು ಕೂಡೋದು ಈ ಕ್ಷೇತ್ರ ವಿಂಗಡಣೆ ಮಸೂದೆ ಹಿಂದಿರುವ ಹುನ್ನಾರ ಕಣಯ್ಯಾ.
ಅಂಧಭಕ್ತ : ಹಂಗಾ.. ಇದ್ರೂ ಇರಬೌದು. ಅದ್ರಾಗೇನು ತಪ್ಪೈತೆ. ರಾಜಕಾರಣ ಅಂದ್ರ ತಂತ್ರ ಕುತಂತ್ರ ಶಡ್ಯಂತ್ರ ಎಲ್ಲಾ ಇದ್ದss ಇರುತ್ತಲ್ವಾ.. ಏನಾರss ಮಾಡು, ಹೆಂಗಾರss ಮಾಡು ಅಧಿಕಾರ ಹಿಡಿದು ಮಾತಾಡು ಅನ್ನೋದss ರಾಜಕಾರಣ ಅಲ್ವಾ.
ಹೆಂಡತಿ : ಹಾಂ.. ಹಿಂಗ್ ಬಾ ದಾರಿಗೆ. ಇವರು ಅಧಿಕಾರ ಹಿಡಿಯೋಕೆ ಹೆಂಗಸರನ್ನ ಯಾಕಯ್ಯಾ ಬಳಸ್ಕೋತಿದ್ದಾರೆ ಹೇಡಿನನ್ಮಕ್ಕಳು. ಮಹಿಳೆಯರಿಗೆ ಮೀಸಲಾತಿ ಕೊಟ್ಟಂಗೆ ಮಾಡೋದು ಆಮೇಲೆ ಏನಾದ್ರೂ ಶಡ್ಯಂತ್ರ ಮಾಡಿ ಕೊಡದೇ ಇರೋದು, ಇದss ಹೌದಲ್ಲಾ ಈ ಗಂಡಸರ ರಾಜಕಾರಣ. ಇವರಿಗೆ ಹೆಂಗಸರ ಓಟು ಬೇಕು ಆದರss ಅವರಿಗೆ ಅಧಿಕಾರ ಕೊಡೋದು ಮಾತ್ರ ಬೇಕಿಲ್ಲಾ. ಇವರೆಲ್ಲಾ ಜಿಗಣೆಗಳೇ ಮಹಿಳೆಯರ ನೆತ್ತರಿಗೆ ಕಣಯ್ಯಾ. ಇದು ನಿನ್ನಂತಾ ಬುದ್ಧಿ ಇಲ್ಲದ ಅಂಧ ಭಕ್ತರಿಗೆ ಹೆಂಗಯ್ಯಾ ತಿಳಿಯುತ್ತೆ.
ಅಂಧಭಕ್ತ : ಈಗ ನೀ ಹೇಳಿದ ಮ್ಯಾಲೆ ಎಲ್ಲಾ ಸ್ವಲ್ಪ ಸ್ವಲ್ಪ ತಿಳೀತಾ ಇದೆ. ಮಹಿಳಾ ಮೀಸಲಾತಿ ಅನ್ನೋದು ಮೂಗಿಗೆ ತುಪ್ಪ ಹಚ್ಚೋಹಂಗೆ, ಕುದುರೆ ಮುಂದೆ ಹುಲ್ಲು ಕಟ್ಟಿದಂತೆ ಅಂತಾ ಗೊತ್ತಾಗ್ತಾ ಇದೆ. ಅದೇ ಆ ರಾಜಕುಮಾರರವರ ಸಿನೆಮಾ ಹಾಡಿದೆಯಲ್ಲಾ
“ಹೇಳುವುದು ಒಂದೂ, ಮಾಡುವುದು ಇನ್ನೊಂದು, ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತೆ, ತಿರುಪತೆ ಶ್ರೀವೆಂಕಟಾಚಲಪತೆ” ಅಂತಾ. ಹಂಗಾಯ್ತು ನೋಡು ನನ್ನ ಪರಿಸ್ಥಿತಿ.
ಹೆಂಡತಿ : ಹಾಂ.. ಅಂಧಭಕ್ತಿ ಬಿಡು. ಯೋಚನೆ ಮಾಡು. ಪ್ರಶ್ನೆ ಕೇಳು. ಆಗ ಈ ಸುಳ್ಳುಗಳ ಹಿಂದಿರುವ ಸತ್ಯಾ ಏನು ಅಂತಾ ಗೊತ್ತಾಗೋದು. ಹೋಗಯ್ಯಾ ಮೊದಲು ತಲೆಯೊಳಗೆ ತುಂಬಿರೋ ಕಸಾನೆಲ್ಲಾ ಕಿತ್ತಾಕಿ ಬುದ್ದಿ ತುಂಬಕೋ.
ಅಂಧಭಕ್ತ : ಆಯ್ತು ಕಣೆ ಹಂಗೇ ಮಾಡ್ತೀನಿ.. ಅಯ್ಯಯ್ಯೊ ಅನ್ಯಾಯ..
ಹೆಂಡತಿ : ಮತ್ತೇನಾಯ್ತು..
ಅಂಧಭಕ್ತ : ಅದೇ ಕಣೆ ಈ ಪ್ರಭುಗಳಿಂದಾ ಸಮಸ್ತ ಪ್ರಜೆಗಳಿಗೆ ಅನ್ಯಾಯ ಆಗ್ತಿದೆ ಅಂತಾ ಹೇಳೋಕೆ ಬಂದೆ.
ಹೆಂಡತಿ : ಗುಡ್.. ಆ ಪಕ್ಷ ಈ ಪಕ್ಷ, ಆ ಜಾತಿ ಈ ಜಾತಿ, ಆ ಧರ್ಮ ಈ ಧರ್ಮ ಅನ್ನೋದನ್ನೆಲ್ಲಾ ಬಿಟ್ಟು ಸಂವಿಧಾನವೇ ನಮಗೆಲ್ಲಾ ಅನ್ನೋದನ್ನ ತಿಳಕೋ. ನಮಗೆ ಅನ್ನ ಉದ್ಯೋಗ ಮಾನ ಮರ್ವಾದೆ ಸಮಾನತೆ ಸ್ವಾತಂತ್ರ್ಯ ಕೊಟ್ಟಿದ್ದು ಯಾವ ಜಾತಿ ಧರ್ಮಗಳಲ್ಲಾ.. ಸಂವಿಧಾನದ ಮೂಲಕ ಬಾಬಾಸಾಹೇಬರು ಕೊಟ್ಟಿದ್ದು. ಧರ್ಮ ಅಪಾಯದಲ್ಲಿದೆ ಅಂತಾ ನಿಮ್ಮಂತವರ ತಲೆ ಕೆಡಿಸ್ತಾ ಇದ್ದಾರಲ್ಲಾ, ಅಂತವರಿಂದಲೇ ನಮ್ಮ ಸಂವಿಧಾನ ಅಪಾಯದಲ್ಲಿರೋದು. ಮೊದಲು ಸಂವಿಧಾನ ಕಾಪಾಡೋಣ, ಪ್ರಜಾಪ್ರಭುತ್ವ ಉಳಿಸೋಣ. ಶೋಷಿತರಿಗೆ ಮಹಿಳೆಯರಿಗೆ ದಮನಿತರಿಗೆ ಸಮಾನ ಅವಕಾಶಗಳು ಸಿಗಬೇಕು ಎಂದು ಧ್ವನಿ ಎತ್ತೋಣ. ಈಗ ಹೇಳು ಧರ್ಮ ಅಪಾಯದಲ್ಲಿಲ್ಲ..
ಗಂಡ : ಸಂವಿಧಾನ ಅಪಾಯದಲ್ಲಿದೆ.
ಹೆಂಡತಿ : ಧರ್ಮಾಂಧರನ್ನು ಬಹಿಷ್ಕರಿಸೋಣ
ಗಂಡ : ಸಂವಿಧಾನವನ್ನು ಉಳಿಸೋಣ.
ಹೆಂಡತಿ : ದ್ವೇಷ ಪೀಡಿತರನ್ನು ಒದ್ದೋಡಿಸೋಣ
ಗಂಡ : ಎಲ್ಲರಿಗೂ ಪ್ರೀತಿಯನ್ನು ಹಂಚೋಣ..
ಹಾಡು :
ಅಣ್ಣ ತಮ್ಮ, ಅಕ್ಕ ತಂಗಿ ಎಲ್ಲರೂ ಬನ್ನಿ
ಸಂವಿಧಾನ ಉಳಿಸೋಣ
ಸಮಾನತೆ ಪಡೆಯೋಣ.
ಧರ್ಮಾಂಧತೆ ದ್ವೇಷಾಂಧತೆ ತಿರಸ್ಕರಿಸೋಣ
ಪ್ರಜಾಪ್ರಭುತ್ವ ಉಳಿಸೋಣ
ಎಲ್ಲ ಜಾತಿ ಧರ್ಮದವರೆಲ್ಲ
ಒಂದೇ ಎಂದು ಸಾರೋಣ
ಸಕಲರಿಗೂ ಪ್ರೀತಿ ಹಂಚೋಣ
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಕಥನಗಳಾವರಿತ ಈ ಜಗತ್ತು!


