ಲಕ್ನೋ : ಕೋಚಿಂಗ್ ಹಾಗೂ ಗೇಮಿಂಗ್ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 15 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲಿಗಂಜ್‌ನಲ್ಲಿ ಸೋಮವಾರ ನಡೆದಿದೆ.
ಅಲಿಗಂಜ್‌ನ ಬಹುಮಹಡಿಯ ಕಟ್ಟಡದಲ್ಲಿ ಹಲವು ಮಳಿಗೆಗಳು ಇವೆ. ಮೂರನೇ ಮಹಡಿಯ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡ ಹರಡಿತು. ಕೋಚಿಂಗ್ ಸೆಂಟರ್‌ನಲ್ಲಿದ್ದ 12 ಮಂದಿ ಸಜೀವ ದಹನವಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಗುರುತು ಪತ್ತೆಯಾಗಿಲ್ಲ. ಹೀಗಾಗಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಹಾರಿದ ಕೆಲವು ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿವೆ. ವಿದ್ಯಾರ್ಥಿಗಳು ಕೆಳಕ್ಕೆ ಧುಮುಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ 15 ಮಂದಿಯ ಮೃತ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಕಟ್ಟಡದಲ್ಲಿ ಇನ್ನು ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿ ಶಾಮಕ ದಳ ಬರುವುದರೊಳಗೆ ಇಡೀ ಕಟ್ಟಡಕ್ಕೆ ಬೆಂಕಿ :
ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡಕ್ಕೆ ವೇಗವಾಗಿ ಹರಿಡಿತು. ಕಟ್ಟಡದಲ್ಲಿದ್ದವರು ಜೀವ ಉಳಿಸಿಕೊಳ್ಳಲು ಎರಡನೇ ಮಹಡಿಯಿಂದ ಕೆಳಗೆ ಹಾರಿದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ಬರುವ ವೇಳೆ ಬೆಂಕಿ ಸಂಪೂರ್ಣ ಕಟ್ಟಡವನ್ನು ಆವರಿಸಿತ್ತು. ನಾಲ್ಕು ಗಂಟೆಗಳ ಕಾಲ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದರು.
30 ವಿದ್ಯಾರ್ಥಿಗಳು ಇದ್ದರು:
ಕೋಚಿಂಗ್ ಕೇಂದ್ರ ಎರಡನೇ ಮಹಡಿಯಲ್ಲಿತ್ತು. ಈ ವೇಳೆ ಕೇಂದ್ರದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು ಎಂದು ಪತ್ತೆಯಾಗಿದೆ. ಕಟ್ಟಡದ ಮೆಟ್ಟಿಲುಗಳು ತುಂಬಾ ಚಿಕ್ಕದಾಗಿದ್ದವು ಹೀಗಾಗಿ ವಿದ್ಯಾರ್ಥಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕಟ್ಟಡದಿಂದ ಕೆಳಕ್ಕೆ ಹಾರಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಇಡೀ ಕಡ್ಡವನ್ನು ಪರಿಶೀಲಿಸುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿದು ಬಂದಿದೆ.
ಕಟ್ಟಡದಲ್ಲಿ ಸಿಲುಕಿದವರ ಕಿರುಚಾಟ, ಚೀರಾಟ ಮುಗಿಲುಮುಟ್ಟಿತ್ತು. ಕೆಳಗೆ ನಿಂತವರು ವಿದ್ಯಾರ್ಥಿಗಳನ್ನು ರಕ್ಷಿಸಲು ಸಾಧ್ಯವಾಗದೆ ಅಸಾಹಯಕರಾಗಿದ್ದರು.
ಬಹುಮಹಡಿ ಕಟ್ಟಡದಲ್ಲಿ ವಾಣಿಜ್ಯ ಚಟುವಟಿಕೆಗೆ ಅನುಮತಿ ಇತ್ತೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಕ್ಷಣೆ ತೀವ್ರಗೊಳಿಸಲು ಸಿಎಂ ಸೂಚನೆ:
ಅಗ್ನಿ ಅವಘಡದ ಬಗ್ಗೆ ಮಾಹಿತಿ ಪಡೆದ ಸಿಎಂ ಯೋಗಿ ಆದಿತ್ಯನಾಥ್ ಅಲಿಗಢದಿಂದ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಲಕ್ನೋಗೆ ಹಿಂದಿರುಗಿದರು. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ರಕ್ಷಣೆ ಕಾರ್ಯಾಚರಣೆ ತೀವ್ರಗೊಂಡಿದೆ. ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

