ಬೆಂಗಳೂರು : ರೈಲ್ವೆ ಪದೋನ್ನತಿ ಪರೀಕ್ಷಾರ್ಥಿಗಳ ಭವಿಷ್ಯ, ಅವರ ಸೇವಾ ಹಿತಾಸಕ್ತಿ ಹಾಗೂ ಪದೋನ್ನತಿ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಜೂನ್ 25ರಂದು ಘೋಷಿಸಿದ್ದ ಪ್ರತಿಭಟನೆ ಮತ್ತು ಪರೀಕ್ಷಾ ಕೇಂದ್ರಗಳ ಮುತ್ತಿಗೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ.
ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಪ್ರಕಟಣೆ ನೀಡಿದ್ದು, ಕರ್ನಾಟಕದ ನೆಲದಲ್ಲಿ ಕನ್ನಡವನ್ನು ನಿರಾಕರಿಸಿ ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿರುವ ರೈಲ್ವೆ ಇಲಾಖೆಯ ಕ್ರಮದ ವಿರುದ್ಧ ಜೂನ್ 25ರಂದು ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಭಾರೀ ಸ್ವರೂಪದ ಹೋರಾಟವನ್ನು ಹಮ್ಮಿಕೊಂಡಿತ್ತು. ಅಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈಲು ತಡೆಯೂ ಸೇರಿದಂತೆ ವ್ಯಾಪಕ ಚಳವಳಿಯನ್ನು ನಡೆಸಲು ಉದ್ದೇಶಿಸಿತ್ತು.
ಆದರೆ ಈ ಘೋಷಣೆಯ ನಂತರ ನೂರಾರು ರೈಲ್ವೆ ನೌಕರರು, ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಸಂಕಷ್ಟವನ್ನು ವಿವರಿಸಿದ್ದಾರೆ.
ಅವರ ಮನವಿಯ ಸಾರಾಂಶವೇನೆಂದರೆ, ಈ ಬಾರಿ ನಡೆಯಲಿರುವ ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಯ ಪದೋನ್ನತಿ ಪರೀಕ್ಷೆಗೆ ಪ್ರಸ್ತುತ ಸುಮಾರು 200ಕ್ಕೂ ಕಡಿಮೆ ನೌಕರರು ಮಾತ್ರ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗರೇ ಆಗಿದ್ದಾರೆ. ಒಂದು ವೇಳೆ ಈ ಪರೀಕ್ಷೆ ಮತ್ತೊಮ್ಮೆ ಮುಂದೂಡಲ್ಪಟ್ಟರೆ, ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಿಂದ ಇನ್ನೂ 300ಕ್ಕೂ ಹೆಚ್ಚು ಅನ್ಯಭಾಷಿಕ ನೌಕರರು ಪರೀಕ್ಷೆಗೆ ಅರ್ಹತೆ ಪಡೆಯಲಿದ್ದು, ಕನ್ನಡಿಗರ ಬಡ್ತಿ ಅವಕಾಶಗಳು ಇನ್ನಷ್ಟು ಸಂಕೀರ್ಣವಾಗುವ ಸಾಧ್ಯತೆ ಇದೆ. ಹೀಗಾಗಿ ದಯಮಾಡಿ ಈ ಬಾರಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿಕೊಡಿ ಎಂಬುದಾಗಿದೆ.
ಕಳೆದ ಎರಡು ಮೂರು ದಿನಗಳಿಂದ ನೂರಾರು ರೈಲ್ವೆ ನೌಕರರು ನನಗೆ ಪತ್ರ ಬರೆದಿರುವುದೂ ಅಲ್ಲದೆ, ನನಗೆ ಮತ್ತು ಸಂಘಟನೆಯ ಪದಾಧಿಕಾರಿಗಳಿಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿ ತಮ್ಮ ದುಗುಡ ತೋಡಿಕೊಂಡಿದ್ದಾರೆ. ತಮ್ಮ ಭವಿಷ್ಯದ ದೃಷ್ಟಿಯಿಂದ ಇದೊಂದು ಬಾರಿ ಚಳವಳಿಯನ್ನು ಹಿಂದಕ್ಕೆ ಪಡೆಯಿರಿ ಎಂದು ವಿನಂತಿಸಿಕೊಂಡಿದ್ದಾರೆ. ಅವರ ಹೇಳಿಕೆಗಳು ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳ ಭವಿಷ್ಯ, ಅವರ ಸೇವಾ ಹಿತಾಸಕ್ತಿ ಹಾಗೂ ಪದೋನ್ನತಿ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಜೂನ್ 25ರಂದು ಘೋಷಿಸಿದ್ದ ಪ್ರತಿಭಟನೆ ಮತ್ತು ಪರೀಕ್ಷಾ ಕೇಂದ್ರಗಳ ಮುತ್ತಿಗೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.
ಆದರೆ ಇದನ್ನು ರೈಲ್ವೆ ಇಲಾಖೆ ತನ್ನ ಕನ್ನಡ ವಿರೋಧಿ ನೀತಿಗೆ ದೊರೆತ ಜಯ ಎಂದು ಭಾವಿಸಬಾರದು. ಕರ್ನಾಟಕ ರಕ್ಷಣಾ ವೇದಿಕೆ ತನ್ನ ಮೂಲ ನಿಲುವಿನಿಂದ ಒಂದು ಇಂಚೂ ಹಿಂದೆ ಸರಿದಿಲ್ಲ. ಕರ್ನಾಟಕದಲ್ಲಿ ನಡೆಯುವ ಯಾವುದೇ ನೇಮಕಾತಿ ಅಥವಾ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿರುವುದು ಸಂಪೂರ್ಣ ಅನ್ಯಾಯ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕ್ರಮ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ಬಾರಿ ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಕನ್ನಡಿಗ ನೌಕರರ ಭವಿಷ್ಯವನ್ನು ಪರಿಗಣಿಸಿ ನಾವು ಒಂದು ವಿಶೇಷ ವಿನಾಯಿತಿ ನೀಡುತ್ತಿದ್ದೇವೆ. ನಾವು ಹೋರಾಟದಿಂದ ವಿಮುಖರಾಗಿದ್ದೇವೆ ಎಂದು ಯಾರೂ ಅರ್ಥೈಸಬಾರದು. ಕನ್ನಡಿಗರ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮತ್ತು ಕನ್ನಡಿಗರಿಗೆ ನಷ್ಟವಾಗದ ರೀತಿಯಲ್ಲಿ ಹೋರಾಟವನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಅತ್ಯಂತ ಧರ್ಮಸಂಕಟದಿಂದಲೇ ಈ ನಿರ್ಧಾರವನ್ನು ಕೈಗೊಂಡಿದ್ಧೇವೆ. ಇದರಿಂದ ನಮಗೆ ಸಮಾಧಾನವೂ ಇಲ್ಲ, ಸಂತೃಪ್ತಿಯೂ ಇಲ್ಲ. 25ರಂದು ನಡೆಯುವ ಕನ್ನಡವಿಲ್ಲದ ಪರೀಕ್ಷೆಗೆ ನಮ್ಮ ತಾತ್ತ್ವಿಕ ವಿರೋಧ ಇದ್ದೇ ಇರುತ್ತದೆ. ಅದರಲ್ಲಿ ಬದಲಾವಣೆ ಇಲ್ಲ.
ಈ ಪರೀಕ್ಷೆಗೆ ಮಾತ್ರ ನಾವು ಅವಕಾಶ ನೀಡುತ್ತಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುವ ಯಾವುದೇ ರೈಲ್ವೆ ನೇಮಕಾತಿ ಅಥವಾ ಪದೋನ್ನತಿ ಪರೀಕ್ಷೆಯನ್ನು ಕನ್ನಡ ಭಾಷೆಯನ್ನು ಸೇರಿಸದೇ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕನ್ನಡವನ್ನು ಹೊರಗಿಟ್ಟು ಪರೀಕ್ಷೆ ನಡೆಸುವ ಪ್ರಯತ್ನ ಮರುಕಳಿಸಿದರೆ ರಾಜ್ಯಾದ್ಯಂತ ಉಗ್ರ ಮತ್ತು ನಿರ್ಣಾಯಕ ಹೋರಾಟವನ್ನು ಸಂಘಟಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ.
ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಕೇಂದ್ರ ಸರ್ಕಾರಿ ಇಲಾಖೆ ಕನ್ನಡಿಗರ ಭಾಷಾ ಹಕ್ಕುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕರ್ನಾಟಕದ ಸಂಪನ್ಮೂಲಗಳು ಬೇಕು, ಕರ್ನಾಟಕದ ತೆರಿಗೆ ಹಣ ಬೇಕು, ಕರ್ನಾಟಕದ ನೌಕರರ ಸೇವೆ ಬೇಕು; ಆದರೆ ಕನ್ನಡ ಮಾತ್ರ ಬೇಡ ಎಂಬ ಮನೋಭಾವವನ್ನು ಕರ್ನಾಟಕ ರಕ್ಷಣಾ ವೇದಿಕೆ ಎಂದಿಗೂ ಸಹಿಸುವುದಿಲ್ಲ.
ಕನ್ನಡಿಗರ ಹಕ್ಕುಗಳ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ಕನ್ನಡಕ್ಕೆ ನ್ಯಾಯ ಸಿಗುವವರೆಗೂ, ರೈಲ್ವೆ ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡಕ್ಕೆ ಅದರ ಯೋಗ್ಯ ಸ್ಥಾನಮಾನ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ
ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.

