ಬೆಂಗಳೂರು : ನಮ್ಮ ಕಾರ್ಯಕ್ರಮದ ಟ್ರಾಫಿಕ್ ಸಮಸ್ಯೆಯಿಂದ ಎರಡು, ಮೂರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗದೇ ಉಳಿದಿದ್ದಾರೆ ಎಂಬ ಸುದ್ದಿ ನೋಡಿದೆ. ಈ ಕಾರ್ಯಕ್ರಮದಿಂದ ಇಂತಹ ಪ್ರಮಾದವಾಗಿದ್ದರೆ ನಾವು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಣಿ ತಪ್ಪು ಮಾಹಿತಿ ನೀಡುವ ಬೆಂಗಳೂರಿನ ಸಂಸದರು ಮತ್ತೊಮ್ಮೆ ತಪ್ಪು ಸಂದೇಶ ಹರಡುವ ಕೆಲಸವನ್ನು ಬಹಳ ಉತ್ತಮವಾಗಿ ಮಾಡುತ್ತಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ನಿಜ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ನಾವು ಭಾನುವಾರ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು.
ಸಣ್ಣ ಪುಟ್ಟ ತೊಂದರೆಗಳು ಆಗಿವೆ. ಅವುಗಳನ್ನು ನಾವು ಅಲ್ಲಗೆಳೆಯುವುದಿಲ್ಲ. ಆದರೆ ನಮ್ಮ ಕಾರ್ಯಕ್ರಮದ ಟ್ರಾಫಿಕ್ ಸಮಸ್ಯೆಯಿಂದ ಎರಡು, ಮೂರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗದೇ ಉಳಿದಿದ್ದಾರೆ ಎಂಬ ಸುದ್ದಿ ನೋಡಿದೆ. ಈ ಕಾರ್ಯಕ್ರಮದಿಂದ ಇಂತಹ ಪ್ರಮಾದವಾಗಿದ್ದರೆ ನಾವು ವಿಷಾದ ವ್ಯಕ್ತಪಡಿಸುತ್ತೇನೆ.
ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳುವಾಗ ಪೊಲೀಸರು ಹಾಗೂ ಸೇವಾದಳದ ಕಾರ್ಯಕರ್ತರಿಗೆ ಬಹಳ ಸ್ಪಷ್ಟವಾಗಿ ನಾವು ಕೆಲವು ನಿರ್ದೇಶನ ನೀಡಿದ್ದೆವು. ನೀಟ್ ಪ್ರಾರಂಭವಾಗಿದ್ದು 1.30ರ ಸಮಯದಲ್ಲಿ ನಮ್ಮ ಕಾರ್ಯಕ್ರಮಕ್ಕೆ ಬರಬೇಕಾಗಿದ್ದ ಎಲ್ಲಾ ಬಸ್ ಗಳು ಬೆಳಗ್ಗೆ 10.30ರ ವೇಳೆಗೆ ಅರಮನೆ ಮೈದಾನ ತಲುಪಿದ್ದವು. ಎಲ್ಲೂ ಸಮಸ್ಯೆಯಾಗಬಾರದು ಎಂದು ಅರಮನೆ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಎರಡು ಮೂರು ಮಕ್ಕಳಿಗೆ ತೊಂದರೆ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಅವರಿಗೆ ಮುಂದಿನ ಪರೀಕ್ಷೆ ಕೈಗೊಳ್ಳಲು ಬೇಕಾಗಿರುವ ಎಲ್ಲಾ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ನೀಟ್ ಪರೀಕ್ಷೆ ಮುಂದೂಡಿಕೆಯಾಗಿರುವುದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ನಾವು ನೋಡಿದ್ದೇವೆ. ಸಿಬಿಎಸ್ ಸಿ ಪರೀಕ್ಷೆಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದನ್ನೂ ನೋಡಿದ್ದೇವೆ. 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ದೇಶದ ಸರೆಂಡರ್ ಮೋದಿ ಅವರಾಗಲಿ, ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಾಗಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರಾ? ಬೆಂಗಳೂರಿನ ಸಂಸತ್ ಸದಸ್ಯರು ನಡೆಯಬಾರದ ಪ್ರಮಾದ ನಡೆದಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ ಲಕ್ಷಾಂತರ ಜನರಿಗೆ ಪದೇ ಪದೆ ಪರೀಕ್ಷೆ ಬರೆಯುವಂತೆ ಮಾಡುತ್ತಿರುವುದು ಬಿಜೆಪಿ. ಪ್ರಶ್ನೆ ಪತ್ರಿಕೆಯಿಂದ 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿರುವಾಗ ಪ್ರಧಾನಿಯಾಗಲಿ, ಶಿಕ್ಷಣ ಸಚಿವರಾಗಲಿ ಅವರಿಗೆ ಸ್ಪಂದಿಸಿದ್ದಾರಾ? ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಾಗ ಕೇಂದ್ರ ಸಚಿವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಕ್ಕಳ ಆತ್ಮಹತ್ಯೆಗೆ ಕಾರಣ ಯಾರು ಎಂದು ಬಿಜೆಪಿ ಸಂಸದರು ಹೇಳಬೇಕು. ಮೈಸೂರಿನಲ್ಲಿ 1400 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅಲ್ಲಿ ಯಾವ ಕಾರ್ಯಕ್ರಮವಿತ್ತು. ಯಾದಗಿರಿಯಲ್ಲಿ 286, ದಕ್ಷಿಣ ಕನ್ನಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಲ್ಲೆಲ್ಲಾ ಯಾವ ಕಾರ್ಯಕ್ರಮ ನಡೆದಿತ್ತು? ಕೆಲವು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಪರೀಕ್ಷೆ ಬರೆದಿರುವುದಾಗಿಯೂ ಹೇಳಿದ್ದಾರೆ.
ಸುಳ್ಳಿನ ಕಾರ್ಖಾನೆ ಇಟ್ಟುಕೊಂಡಿರುವ ಬಿಜೆಪಿಯವರು ತಮ್ಮ ತಪ್ಪು ಮರೆಮಾಚಲು ಕಾಂಗ್ರೆಸ್ ವಿರುದ್ಧ ಕುಂಠು ನೆಪ ಹೇಳುವುದು ಬೇಡ. ದೇಶದಾದ್ಯಂತ ವಿದ್ಯಾರ್ಥಿಗಳು ಆತಂಕದಲ್ಲಿರುವಾಗ, ಪರೀಕ್ಷೆ ಬರೆಯದೇ ನಕಲಿ ಪ್ರಮಾಣಪತ್ರ ಹೊಂದಿರುವ ಪ್ರಧಾನಮಂತ್ರಿಗಳು ಪರಿಕ್ಷಾ ಪೆ ಚರ್ಚಾ ಮಾಡುತ್ತಾರೆ. ಆದರೆ ಸೋರಿಕೆ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ರಶ್ನೆಗಳಿಗೆ ಉತ್ತರ ನೀಡದೇ ಕಾಂಗ್ರೆಸ್ ಕಾರ್ಯಕ್ರಮ ಗುರಿಯಾಗಿಸಿ ಮಾತನಾಡಲು ಬಿಜೆಪಿ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದೆ. ಅವರ ಹಕ್ಕುಗಳ ಪರವಾಗಿ ನಿಲ್ಲುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದವರು ಇಂದು ನೀತಿ ಪಾಠ ಹೇಳುತ್ತಿರುವುದು ಈ ದೇಶದ ದುರಂತ. ಬಿಜೆಪಿ ನೀಟ್ ಹಗರಣದಲ್ಲಿ ದೇಶದ ಜನರಿಗೆ ಕ್ಷಮೆ ಕೇಳಲಿ. ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಮೊದಲು ಈ ದೇಶದ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು.
ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯ ಪ್ರದೇಶ ಸಿಎಂ ಆಗಿದ್ದಾಗ ವ್ಯಾಪಂ ಗೋಟಾಲ ಆಗಿದ್ದಾಗ 45 ಜನ ಕೊಲೆಯಾಗಿದೆ. ಆ ಪ್ರಕರಣದ ಸತ್ಯಾಂಶ ಈಗಲೂ ಹೊರಬರುತ್ತಿಲ್ಲ. ಅವರ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿರುವ ಬಿಜೆಪಿ ಗೂಬೆಗಳಿಗೆ ಜನ ಸರಿಯಾದ ಉತ್ತರ ನೀಡುತ್ತಾರೆ.
ವಿಮಾನ ನಿಲ್ದಾಣದಲ್ಲಿ ಮೋದಿ ಅವರು ಕಾದಿರುವುದನ್ನು ನೋಡಿ ಕಲಿಯಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಎಷ್ಟು ನಿಮಿಷ ಕಾದರು, ಯಾವ ಹೆಲಿಕಾಪ್ಟರ್ ನಲ್ಲಿ ಹೋದರು ಎಂದು ಅವರಿಂದ ನಾವು ಕಲಿಯಬೇಕಾಗಿಲ್ಲ. ಮೋದಿ ಅವರು ಕುಮಾರಸ್ವಾಮಿ ಅವರು ಉತ್ತರ ಕೊಡಬೇಕಾಗಿರುವುದು, ನೀಟ್ ಪ್ರಶ್ನೆಪತ್ರಿಕೆ ಮೂರು ಬಾರಿ ಸೋರಿಕೆಯಾಗಿರುವುದರಿಂದ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ. ಮೋದಿ ಅವರು ವಿಮಾನ ನಿಲ್ದಾಣದಲ್ಲಿ 45 ನಿಮಿಷ ಯಾವ ಕಾರಣಕ್ಕೆ ಇದ್ದರು ಎಂಬುದು ನನಗೆ ಗೊತ್ತಿದೆ. ಈಗ ಆ ವಿಚಾರ ಮಾತನಾಡುವುದಿಲ್ಲ. ನೀಟ್, ಸಿಬಿಎಸ್ ಸಿ, ಯುಪಿಎಸ್ ಸಿ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಉತ್ತರವಿಲ್ಲ, ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೆಕ್ಕೆ ಉತ್ತರ ಕೊಡದವರಿಂದ ಕಲಿಯುವುದೇನು ಇಲ್ಲ” ಎಂದು ತಿಳಿಸಿದರು.
ಕಾರ್ಯಕ್ರಮದಿಂದ ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳ ಬಗ್ಗೆ ಕೇಳಿದಾಗ, “ನಮ್ಮ ತಂಡ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿದೆ. ಅವರಿಗೆ ಆಗಿರುವ ನಷ್ಟ ಭರಿಸಲು ಸಿದ್ಧರಿದ್ದೇವೆ. ಕೆಲವರಿಂದ ನಾಗ್ಪುರದ ಸುಳ್ಳಿನ ಸಂಘ ಸುಳ್ಳು ಹೇಳಿಸಿದೆ” ಎಂದು ತಿರುಗೇಟು ನೀಡಿದರು.
ನೀಟ್ ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಸಿಇಟಿ ಪರೀಕ್ಷೆ ಮೂಲಕ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿದ್ದು ಕರ್ನಾಟಕ. ದಕ್ಷಿಣ ಭಾರತದ ವಿದ್ಯಾರ್ಥಿಗಳು ಹೆಚ್ಚಾಗಿ ಆಯ್ಕೆಯಾಗುತ್ತಿದ್ದ ವ್ಯವಸ್ಥೆ ತಪ್ಪಿಸಲು ನೀಟ್ ವ್ಯವಸ್ಥೆ ತಂದರು. ಅಲ್ಲಿರುವ ಕಾಲೇಜುಗಳಿಗೂ, ಇಲ್ಲಿರುವ ಕಾಲೇಜುಗಳಿಗೂ ಇರವ ವ್ಯತ್ಯಾಸ ನೋಡಿ” ಎಂದು ಕಿಡಿಕಾರಿದರು.

