ಅಸಮಾನತೆಯನ್ನು ಆಚರಿಸುವ, ಭ್ರಮೆಗಳನ್ನು ಹುಟ್ಟಿಸಿ ದಾರಿ ತಪ್ಪಿಸುವ, ಕರ್ಮಸಿದ್ಧಾಂತವನ್ನು ಪ್ರತಿಪಾದಿಸಿ ಶ್ರಮಜೀವಿಗಳನ್ನು ಶೋಷಿಸುವ ವೈದಿಕಶಾಹಿ ಪುರೋಹಿತಶಾಹಿ ಹಿಂದುತ್ವವಾದಿ ಧರ್ಮಾಚರಣೆಗಳು ಬೇಕಾ ಇಲ್ಲವೇ ಸಮಾನತೆ ಸಾರುವ, ವೈಚಾರಿಕತೆ ಹೇಳುವ, ವಾಸ್ತವವಾದಿ ನೆಲೆಗಟ್ಟಿನ ಬಸವಧರ್ಮ ಬೇಕಾ ಎಂದು ಸಮಸ್ತ ಬಸವಾನುಯಾಯಿಗಳು ಹಾಗೂ ಲಿಂಗಾಯತರು ನಿರ್ಧರಿಸಬೇಕಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ”
ಎನ್ನುವ ಬಸವಣ್ಣನವರ ಸರ್ವಶ್ರೇಷ್ಠ ಸಾರ್ವಕಾಲಿಕ ವಚನವನ್ನು ಹೇಳುತ್ತಾ ಕೇಳುತ್ತಾ ಹಾಡುತ್ತಾ ಬಂದಿದ್ದೇವೆ. ಬಸವ ಸಂವಿಧಾನದ ಆಧಾರ ಸ್ತಂಭವೇ ಈ ವಚನದ ಪ್ರತಿ ಪದ ಸಾಲುಗಳು. ಆದರೆ ಬಹಿರಂಗವಾಗಿ ಭಜಿಸುತ್ತಲೇ ಬಂದಿರುವ ಈ ವಚನದ ತತ್ವ ಸಿದ್ಧಾಂತವನ್ನು ಎಷ್ಟು ಜನರು ಅಂತರಂಗ ಶುದ್ಧಿಯ ಮಾರ್ಗವಾಗಿ ಅನುಸರಿಸಿ ಆಚರಿಸುತ್ತಿದ್ದಾರೆ ಎಂಬುದೇ ಉತ್ತರವಿಲ್ಲದ ಪ್ರಶ್ನೆ.
ಬಸವ ಜಯಂತಿಯ ಸಂಭ್ರಮದ ಸನ್ನಿವೇಶದಲ್ಲಿ ಬಹುತೇಕ ಬಸವಾನುಯಾಯಿಗಳು ಬಹಿರಂಗ ಆಚರಣೆಗಿಂತಾ ಅಂತರಂಗ ಶುದ್ಧಿ ಮಾಡಿಕೊಳ್ಳಬೇಕಾಗಿದೆ. ಕನಿಷ್ಠ ಆತ್ಮಾವಲೋಕನವನ್ನಾದರೂ ಲಿಂಗಾಯತರು, ಬಸವ ತತ್ವ ಪ್ರತಿಪಾದಕರು, ಲಿಂಗಾಯತ ಮಠ ಮಾನ್ಯ ವಿರಕ್ತ ಪೀಠಗಳು ಮಾಡಿಕೊಳ್ಳಬೇಕಾಗಿದೆ.
” ನಡೆ ನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ, ನುಡಿ ಲೇಸು ನಡೆಯಧಮವಾದಲ್ಲಿ ಅದು ಬಿಡುಗಡೆ ಇಲ್ಲದ ಹೊಲೆ” ಎಂದು ಮಾದಾರ ಚೆನ್ನಯ್ಯನವರು ವಚನದಲ್ಲಿ ಹೇಳಿದ್ದಾರೆ. ಅಂದರೆ ನಡೆ ನುಡಿಯಲ್ಲಿ ವ್ಯತ್ಯಾಸವಾದರೆ, ಹೇಳುವುದೊಂದು ಮಾಡುವುದಿನ್ನೊಂದು ಎಂಬಂತೆ ನಡೆದರೆ ಅದು ಆತ್ಮವಂಚನೆಯಲ್ಲದೇ ಬೇರೇನಲ್ಲ. ಬಹುತೇಕ ಬಸವಾದಿ ಶಿವಶರಣರ ವಚನಗಳಲಿ ಈ ನಡೆ ನುಡಿ ಸಿದ್ಧಾಂತ ಪ್ರತಿಪಾದನೆಯಾಗಿದೆ. ಆದರೆ ಅದನ್ನು ಆಚರಣೆಯಲ್ಲಿ ತರುವುದರಲ್ಲಿ ಬಸವಾನುಯಾಯಿಗಳಿಗೆ ಸಿದ್ಧಿಯಾಗದ ತೋರುಂಭ ಲಾಭದಂತಾಗಿದೆ.
ಇದನ್ನು ಅರಿತಿದ್ದ ಬಸವಣ್ಣನವರು
“ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ,
ನುಡಿಗೆ ತಕ್ಕ ನಡೆಯ ಕಂಡೊಡೆ
ಕೂಡಲಸಂಗಮ ದೇವನೊಳಗಿರ್ಪನಯ್ಯಾ”
ಎಂದು ಹೇಳಿದ್ದಾರೆ. ನಡೆ ನುಡಿಗಳಲ್ಲಿ ಸಮನ್ವಯತೆ ಸಾಧಿಸುವುದು ಅಷ್ಟು ಸುಲಭವಲ್ಲ, ಎರಡೂ ಒಂದಾದಲ್ಲಿ ಮಾತ್ರ ಕೂಡಲಸಂಗಮನ ದೇವರ ಅನುಗ್ರಹ ಪಡೆಯಲು ಸಾಧ್ಯ ಎನ್ನುವುದನ್ನು ಈ ವಚನ ಹೇಳುತ್ತದೆ.

ದೇವರುಗಳ ಆರಾಧನೆ ಹಾಗೂ ಉಪಾಸನೆಯಲ್ಲಿ ಈಗಲೂ ಲಿಂಗಾಯತರಲ್ಲಿ ನಡೆ ನುಡಿ ಸಿದ್ಧಾಂತವಾಗದೇ ಇರುವುದು ಬಹು ದೊಡ್ಡ ವಿಪರ್ಯಾಸ. ಬಸವಾದಿ ಶರಣರು ಏಕದೇವೋಪಾಸನೆ ಬಗ್ಗೆ ಹೇಳಿದ್ದರೂ, ವಿಗ್ರಹ ಪೂಜೆ ಆರಾಧನೆಗಳನ್ನು ವಿರೋಧಿಸಿದ್ದರೂ, ಭಗವಂತ ಹಾಗೂ ಭಕ್ತರ ನಡುವೆ ಪೂಜಾರಿ ಪುರೋಹಿತಶಾಹಿಗಳೆಂಬ ಮಧ್ಯವರ್ತಿಗಳು ಬೇಕಾಗಿಲ್ಲ ಎಂದು ತಿಳಿಸಿದ್ದರೂ, ಸ್ಥಾವರ ಗುಡಿ ಗುಂಡಾರಗಳಿಗೆ ಪರ್ಯಾಯವಾಗಿ ಕರದಲಿ ಇಷ್ಟಲಿಂಗ ಆರಾಧನಾ ಪರಿಕಲ್ಪನೆಯನ್ನು ಕೊಟ್ಟಿದ್ದರೂ ಈಗಲೂ ಸಹ ಬಹುತೇಕ ಬಸವಾನುಯಾಯಿಗಳು, ಲಿಂಗಾಯತ ಸಮುದಾಯದವರು ಗುಡಿ ಗುಂಡಾರಗಳ ಸುತ್ತುತ್ತಾ ಬಹುದೇವೋಪಾಸನೆ ಮಾಡುತ್ತಾ, ಪುರೋಹಿತಶಾಹಿ ಆಚಾರಗಳಿಗೆ ಒಳಗಾಗುತ್ತಾ ಇರುವುದು ಬಸವ ತತ್ವಕ್ಕೆ ಮಾಡುವ ಅಪಚಾರ ಎನ್ನುವಂತಾಗಿದೆ. ಬಸವಾದಿ ಶರಣರ ವಚನಗಳನ್ನು ಹೇಳುವ ಲಿಂಗಾಯತ ವಿರಕ್ತ ಮಠಗಳ ಸ್ವಾಮಿಗಳೂ ಸಹ ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ.
“ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿ ಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡರೆ
ಗಟ್ಟಿ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದ
ಅಂಬಿಗರ ಚೌಡಯ್ಯ”
ಎಂದು ಚೌಡಯ್ಯನವರು ಸ್ಥಾವರಗಳ ಪೂಜಿಸುವ ಲಿಂಗವಂತರ ಬಗ್ಗೆ ಕಟುವಾದ ಪದಗಳಿಂದ ಚುಚ್ಚಿದ್ದಾರೆ. ಇದನ್ನು ಮಠ ಮಾನ್ಯಗಳ ಗುರುಗಳು ತಮ್ಮ ಮಠದ ಭಕ್ತರುಗಳಿಗೆ ತಿಳಿಸಿ ಹೇಳಬೇಕಿದೆ. ಸಮಸ್ತ ಬಸವಾನುಯಾಯಿಗಳು ಅರ್ಥ ಮಾಡಿಕೊಳ್ಳಬೇಕಿದೆ.
ಯಾರು ಏನೇ ಹೇಳಲಿ.. ಬಸವಣ್ಣನವರ ಕಾಲಾನಂತರದಲ್ಲಿ ಬಸವಣ್ಣನವರ ವಚನಗಳನ್ನು ಮುಚ್ಚಿಡುವ ಹಾಗೂ ಶರಣ ತತ್ವ ಸಿದ್ಧಾಂತಗಳನ್ನು ಬಚ್ಚಿಡುವ ಕಾರ್ಯವನ್ನು ಪುರೋಹಿತಶಾಹಿಗಳು ಶತಮಾನಗಳ ಕಾಲ ಮಾಡುತ್ತಾ ಬಂದರು. ಬಸವಣ್ಣ ಎಂದರೆ ಎತ್ತು ಎನ್ನುವ ನಂಬಿಕೆಯನ್ನು ಹುಟ್ಟು ಹಾಕಿದರು. ಲಿಂಗಾಯತ ಮಠಗಳಲ್ಲಿ ಇದ್ದ ವಚನಗಳ ತಾಳೆಯೋಲೆಗಳು ಪೂಜೆಯ ಪರಿಕರವಾದವು. ಫ.ಗು.ಹಳಕಟ್ಟಿಯವರು ವಚನಗಳ ಮೇಲೆ ಬೆಳಕು ಚೆಲ್ಲದೇ ಹೋಗಿದ್ದರೆ, ಕೆಲವಾರು ಬಸವಾನುಯಾಯಿಗಳು ಎಚ್ಚರಗೊಳ್ಳದೇ ಹೋಗಿದ್ದರೆ, ಪ್ರಜ್ಞಾವಂತರು ಬಸವ ಧರ್ಮದ ವೈಚಾರಿಕತೆಗಳ ಕುರಿತು ಚರ್ಚಿಸದೇ ಹೋಗಿದ್ದರೆ ವೈದಿಕಶಾಹಿಗಳು ಬಸವ ಧರ್ಮವನ್ನೇ ನುಂಗಿ ನೀರು ಕುಡಿದು ಸರ್ವನಾಶ ಮಾಡುತ್ತಿದ್ದರು. ಆದರೆ ಕಳೆದ ಒಂದು ಶತಮಾನದಿಂದ ಬಸವ ತತ್ವ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಜಾತಿ ಸೂತಕದಲ್ಲಿ ಹೂತುಹೋಗಿದ್ದ ಲಿಂಗಾಯತರಲ್ಲಿ ಬಸವ ಧರ್ಮ ಪ್ರಜ್ಞೆ ಜಾಗೃತವಾಗುತ್ತಿದೆ. ಆಳುವ ಸರಕಾರದ ಮೇಲೆ ಒತ್ತಡ ತಂದು ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದೂ ಅಧಿಕೃತವಾಗಿ ಘೋಷಿಸಲಾಗಿದೆ. ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕೆಂದೂ ಸರಕಾರಿ ಆದೇಶವಾಗಿದೆ. ಲಿಂಗಾಯತ ರ್ಯಾಲಿ ಸಮಾವೇಶಗಳು ನಡೆಯುತ್ತಿವೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟಗಳೂ ಆರಂಭವಾಗಿವೆ.
ಈ ವೈಚಾರಿಕ ಕ್ರಾಂತಿಗೆ ಪ್ರತಿಯಾಗಿ ಪ್ರತಿಕ್ರಾಂತಿ ನಡೆಸಲು ಪುರೋಹಿತಶಾಹಿ ಪಡೆ ಪ್ರಯತ್ನ ಮಾಡುತ್ತಲೇ ಇದೆ. ಬಸವಾದಿ ಶರಣರ ವೇದಾಗಮನ ಮತ್ತು ವೈದಿಕ ವಿರೋಧಿತನವನ್ನು ಅಲ್ಲಗಳೆಯುತ್ತಾ ಬಸವಣ್ಣ ವೇದಗಳ ವಿರೋಧಿಯಾಗಿರಲಿಲ್ಲ ಎನ್ನುವ ಕಥಾನಕವನ್ನು ಸೃಷ್ಟಿಸಿ ಪ್ರಚಾರ ಮಾಡಲಾಗುತ್ತಿದೆ. “ವಚನ ದರ್ಶನ” ದಂತಹ ಪುಸ್ತಕಗಳನ್ನು ಪ್ರಕಟಿಸಿ ಬಸವ ತತ್ವವನ್ನೇ ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನೇರಿ ಸ್ವಾಮಿಯಂತಹ ಬಸವದ್ರೋಹಿ ಸ್ವಾಮಿಯನ್ನು ಎತ್ತಿಕಟ್ಟಿ ಬಸವಾನುಯಾಯಿಗಳನ್ನು ಹೀಯಾಳಿಸಲಾಗುತ್ತಿದೆ. ವೈದಿಕ ಆಚರಣೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿರುವ ಸ್ಥಾವರ ಲಿಂಗಾಧಾರಕ ವೀರಶೈವರು ಲಿಂಗಾಯತರ ಬೆನ್ನು ಬಿಡದ ಭೂತದಂತಾಗಿದ್ದಾರೆ. ಕೆಲವು ಲಿಂಗಾಯತರೇ ಬಸವಧರ್ಮ ತತ್ವಾಚರಣೆಗಳಿಗಿಂತಾ ಬಸವ ಭಜನೆಗೆ ತಮ್ಮ ಭಕ್ತಿಯನ್ನು ಸೀಮಿತಗೊಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಬಸವ ಜಯಂತಿಯ ಹೆಸರಲ್ಲಿ ಬಸವಣ್ಣನವರ ಬಹಿರಂಗ ವೈಭವೀಕರಣಕ್ಕಿಂತ ಅವರ ತತ್ವ ಸಿದ್ಧಾಂತಗಳ ಅನುಷ್ಠಾನಕ್ಕೆ ಅತೀ ಹೆಚ್ಚು ಮಹತ್ವ ಕೊಡಬೇಕಾಗಿದೆ. ಬಸವಾದಿ ಶರಣರ ವಚನಗಳು ಸಾಂದರ್ಭಿಕವಾಗಿ ಹೇಳುವ ಕೋಟ್ ಗಳಾಗದೇ, ಹಾಡುವ ಹಾಡುಗಳಾಗದೇ ಅಂತರಂಗ ಶುದ್ಧೀಕರಣಗೊಳಿಸುವ ಮಾರ್ಗವಾಗಬೇಕಿದೆ.
ಈಗ ಬಸವ ಧರ್ಮಕ್ಕೆ ಹೊರಗಿನ ಶತ್ರುಗಳಿಗಿಂತಾ, ಒಳಗಿನ ಶತ್ರುಗಳ ಆತಂಕವೇ ಹೆಚ್ಚಾಗಿದೆ. ಬಸವತತ್ವವನ್ನು ಒಪ್ಪಿಕೊಳ್ಳುವ, ಶರಣ ಸಿದ್ಧಾಂತವನ್ನು ಅಪ್ಪಿಕೊಳ್ಳುವ ಲಿಂಗಾಯತ ಸಮುದಾಯದವರು ಮೊದಲು ಪುರೋಹಿತಶಾಹಿ ಪ್ರಣೀತ ಆಚರಣೆಗಳಿಂದ ಹೊರಗೆ ಬರಬೇಕಿದೆ. ವೈದಿಕ ಶಾಹಿ ಬೇರುಗಳು ಲಿಂಗಾಯತರ ಮನದ ಒಳಹೊರಗೂ ಟೊಂಗೆ ಟಿಸಿಲು ಚಾಚಿವೆ. ಸತ್ಯನಾರಾಯಣ ಸ್ವಾಮಿಯಂತಹ ಅನೇಕ ವೃತಗಳು, ಮದುವೆ, ಗೃಹಪ್ರವೇಶದಂತಹ ಶುಭಸಮಾರಂಭಗಳಲ್ಲಿ ನಡೆಯುವ ವೈದಿಕ ಆಚರಣೆಗಳು ಹಾಗೂ ಪುರೋಹಿತರನ್ನು ಕರೆಸಿ ಮಾಡಿಸುವ ಪೂಜೆ ಪುನಸ್ಕಾರಗಳಿಂದ ಮೊದಲು ಬಸವಾನುಯಾಯಿ ಲಿಂಗಾಯತರು ಅಂತರ ಕಾಪಾಡಿಕೊಳ್ಳಬೇಕಿದೆ. ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಮಾಡಲಾಗುವ ಎಲ್ಲಾ ರೀತಿಯ ವೈದಿಕಶಾಹಿ ಆಚರಣೆಗಳನ್ನು ನಿಲ್ಲಿಸಬೇಕೆಂಬ ಜಾಗೃತಿಯನ್ನು ಮೂಡಿಸಬೇಕಿದೆ. ಬಸವ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ವಿರಕ್ತಪೀಠಗಳ ಸ್ವಾಮಿಗಳನ್ನು ಆಯಾ ಮಠದ ಭಕ್ತರೇ ಪ್ರಶ್ನಿಸಬೇಕಿದೆ. ಕೇಳದೇ ಇದ್ದರೆ ಉಚ್ಚಾಟಿಸಬೇಕಿದೆ.
ಎಲ್ಲಿಯವರೆಗೂ ಬಸವಧರ್ಮಕ್ಕೆ ಸಂಬಂಧಪಟ್ಟಂತೆ ನಡೆ ನುಡಿ ಸಿದ್ಧಾಂತಕ್ಕೆ ಬಸವಾನುಯಾಯಿಗಳು ನಿಷ್ಠರಾಗುವುದಿಲ್ಲವೋ, ಎಲ್ಲಿಯವರೆಗೆ ವೈದಿಕಶಾಹಿ ಆಚರಣೆಗಳಿಂದ ಲಿಂಗಾಯತರು ಹೊರಗೆ ಬರುವುದಿಲ್ಲವೋ, ಎಲ್ಲಿಯವರೆಗೆ ಬಸವಧರ್ಮೀಯರು ಅಂತರಂಗ ಮತ್ತು ಬಹಿರಂಗ ಶುದ್ಧಿಯತ್ತ ಗಮನಕೊಡುವುದಿಲ್ಲವೋ ಅಲ್ಲಿಯವರೆಗೂ ಪುರೋಹಿತಶಾಹಿಗಳು ಹಾಗೂ ವೀರಶೈವ ಪಂಚಾಚಾರ್ಯರ ಅಗೋಚರ ಹಿಡಿತದಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ಅಸಮಾನತೆಯನ್ನು ಆಚರಿಸುವ, ಭ್ರಮೆಗಳನ್ನು ಹುಟ್ಟಿಸಿ ದಾರಿ ತಪ್ಪಿಸುವ, ಕರ್ಮಸಿದ್ಧಾಂತವನ್ನು ಪ್ರತಿಪಾದಿಸಿ ಶ್ರಮಜೀವಿಗಳನ್ನು ಶೋಷಿಸುವ ವೈದಿಕಶಾಹಿ ಪುರೋಹಿತಶಾಹಿ ಹಿಂದುತ್ವವಾದಿ ಧರ್ಮಾಚರಣೆಗಳು ಬೇಕಾ ಇಲ್ಲವೇ ಸಮಾನತೆ ಸಾರುವ, ವೈಚಾರಿಕತೆ ಹೇಳುವ, ವಾಸ್ತವವಾದಿ ನೆಲೆಗಟ್ಟಿನ ಬಸವಧರ್ಮ ಬೇಕಾ ಎಂದು ಸಮಸ್ತ ಬಸವಾನುಯಾಯಿಗಳು ಹಾಗೂ ಲಿಂಗಾಯತರು ನಿರ್ಧರಿಸಬೇಕಾಗಿದೆ. ಬದುಕಿಗೆ ಬಸವತತ್ವವೇ ಬೇಕಿದ್ದರೆ ಪುರೋಹಿತಶಾಹಿ ಪೂಜೆ ಪುನಸ್ಕಾರ, ಗುಡಿ ಗುಂಡಾರ, ಸನಾತನ ಸಾಂಪ್ರದಾಯಿಕ ಅವೈಜ್ಞಾನಿಕ ನಿರರ್ಥಕ ಆಚರಣೆಗಳನ್ನು ಧಿಕ್ಕರಿಸಬೇಕಿದೆ. ಸನಾತನ ಕತ್ತಲೆಯ ಕೂಪದಿಂದ ಹೊರಗೆ ಬಂದು ಬಸವಾದಿ ಶರಣರು ಹಾಕಿಕೊಟ್ಟ ಬೆಳಕಿನ ಮಾರ್ಗದಲ್ಲಿ ಹೆಮ್ಮೆಯಿಂದ ಮುನ್ನಡೆಯಬೇಕಿದೆ. ಬಸವ ಜಯಂತಿಯನ್ನು ಸಮಾನತಾ ದಿನವನ್ನಾಗಿ ಆಚರಿಸಬೇಕಿದೆ.
ತೋರಿಕೆಯ ಭಕ್ತಿಯನ್ನು ಬದಿಗಿಟ್ಟು ಅಂತರಂಗದ ಜ್ಞಾನದ ಅರಿವನ್ನು ಹೇಳುವ ಅಲ್ಲಮಪ್ರಭುಗಳ ಈ ವಚನ ಬಸವಾನುಯಾಯಿಗಳಿಗೆ ದಾರಿದೀಪವಾಗಲಿ.
“ಭಕ್ತಿಯೆಂಬುದು ತೋರುಂಬ ಲಾಭ
ಮುಕ್ತಿಯೆಂಬುದು ಮೀರಿದ ಘಣವು
ಸೀಮೆಯುಂಟೆ ಗುಹೇಶ್ವರಾ”
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಮಹಿಳಾ ಮೀಸಲಾತಿಯ ಸವಾಲು; ಕ್ಷೇತ್ರ ಪುನರ್ವಿಂಗಡಣೆ ಶಡ್ಯಂತ್ರಕ್ಕೆ ಸೋಲು


