ಇಂದು ಮಡಿವಾಳ ಮಾಚಿದೇವ ಜಯಂತಿ
ಕಾಯಕ ಮತ್ತು ಶಿವಭಕ್ತಿಯ ಹೊರತಾಗಿ ಬೇರೆ ಯಾರ ಮುಲಾಜಿಗೂ ಈಡಾಗದೆ, ನಿಷ್ಠುರ ಪರೀಕ್ಷಕ ದೃಷ್ಟಿಕೋನ ಹೊಂದಿದ್ದ ಮಾಚಯ್ಯನ ಬಗ್ಗೆ ಬಸವಣ್ಣನವರಿಗೆ ಅಪಾರ ಗೌರವ. ಹಾಗಾಗಿ ಬಸವಣ್ಣನವರು ಮಾಚಯ್ಯನನ್ನು `ಎನ್ನ ಮಾಚಿ ತಂದೆ’ ಎಂದು ಸಂಬೋಧಿಸುತ್ತಿದ್ದರು. ತಮ್ಮ ಒಂದು ವಚನದಲ್ಲಿ ‘ಮಡಿವಾಳ ಮಾಚಯ್ಯನ ಪಾದವ ಹಿಡಿದು, ಭವಬಂಧನವ ಹರಿದುಕೊಂಡೆನಯ್ಯಾ! ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಮಾಚಯ್ಯನನ್ನು ಧನ್ಯತೆಯಿಂದ ಸ್ಮರಿಸುತ್ತಾರೆ. – ಗಿರೀಶ್ ತಾಳಿಕಟ್ಟೆ
ಹನ್ನೆರಡನೇ ಶತಮಾನದ ವಚನ ಚಳವಳಿಯಲ್ಲಿ ಬಟ್ಟೆ ಒಗೆಯುವ ಕಾಯಕದಿಂದ ಗುರುತಿಸಿಕೊಂಡ ಮಡಿವಾಳ ಮಾಚಯ್ಯನವರು ಕಲ್ಯಾಣ ಕ್ರಾಂತಿಯಲ್ಲಿ ಎರಡು ರೂಪದಲ್ಲಿ ಗೋಚರಿಸುತ್ತಾರೆ. ಮೊದಲಾರ್ಧದಲ್ಲಿ ಶರಣನಾಗಿ, ಕಾಯಕಜೀವಿಯಾಗಿ ತನ್ನ ವಚನಗಳ ಮೂಲಕ ಮಹಾಮನೆಯ ಜ್ಞಾನದ ಬೆಳಕನ್ನು ವಿಸ್ತರಿಸುವ ರೂಪದಲ್ಲಿ ಗೋಚರಿಸುವ ಮಾಚಯ್ಯ, ವಚನಗಳಿಗೆ ವಿನಾಶದ ಸಂಕಷ್ಟ ಎದುರಾದಾಗ ಕತ್ತಿ ಹಿಡಿದು ಸೇನಾನಿಯಾಗಿ ಅವುಗಳನ್ನು ರಕ್ಷಿಸಿದ ಸೇನಾನಿಯಾಗಿ ಅವತರಿಸುತ್ತಾರೆ. ಒಂದುವೇಳೆ ಮಾಚಯ್ಯನವರ ತ್ಯಾಗ ಬಲಿದಾನಗಳು ಇರದೇ ಹೋಗಿದ್ದರೆ ನಮಗೆ ವಚನಕ್ರಾಂತಿಯ ಪ್ರಭೆ ತಲುಪುತ್ತಲೇ ಇರಲಿಲ್ಲವೇನೊ.
ಕಾಯಕ ಮತ್ತು ಶಿವಭಕ್ತಿಯ ಹೊರತಾಗಿ ಬೇರೆ ಯಾರ ಮುಲಾಜಿಗೂ ಈಡಾಗದೆ, ನಿಷ್ಠುರ ಪರೀಕ್ಷಕ ದೃಷ್ಟಿಕೋನ ಹೊಂದಿದ್ದ ಮಾಚಯ್ಯನ ಬಗ್ಗೆ ಬಸವಣ್ಣನವರಿಗೆ ಅಪಾರ ಗೌರವ. ಹಾಗಾಗಿ ಬಸವಣ್ಣನವರು ಮಾಚಯ್ಯನನ್ನು `ಎನ್ನ ಮಾಚಿ ತಂದೆ’ ಎಂದು ಸಂಬೋಧಿಸುತ್ತಿದ್ದರು. ತಮ್ಮ ಒಂದು ವಚನದಲ್ಲಿ ‘ಮಡಿವಾಳ ಮಾಚಯ್ಯನ ಪಾದವ ಹಿಡಿದು, ಭವಬಂಧನವ ಹರಿದುಕೊಂಡೆನಯ್ಯಾ! ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಮಾಚಯ್ಯನನ್ನು ಧನ್ಯತೆಯಿಂದ ಸ್ಮರಿಸುತ್ತಾರೆ. ಮತ್ತೊಂದು ವಚನದಲ್ಲಿ “ನಮ್ಮ ಮಡಿವಾಳ ಮಾಚಯ್ಯನು ಮೈಲಿಗೆಯ ಕಳೆದು ಲಿಂಗಕ್ಕೆ ಮಡಿಮಾಡಿಕೊಟ್ಟನು ನೋಡಾ, ಕೂಡಲಸಂಗಮದೇವಾ” ಎಂದು ಉಲ್ಲೇಖಿಸುವ ಮೂಲಕ ತನ್ನ ಅಂತರಂಗದ ಕನ್ನಡಿ ಸ್ವಚ್ಛವಾಗಲು ಮಾಚಯ್ಯನೇ ಕಾರಣ ಎಂದು ಹೇಳಿದ್ದಾರೆ.
ಒಮ್ಮೆ ಮಾಚಿದೇವರು ಶರಣರ ಮಡಿ ಮಾಡಿದ ಬಟ್ಟೆಗಳ ಹೊರೆಯನ್ನು ತಲೆಯ ಮೇಲೆ ಹೊತ್ತು ಕಲ್ಯಾಣದ ಬೀದಿಯಲ್ಲಿ ಬರುತ್ತಿದ್ದರು. ಅತ್ತ ಕಡೆಯಿಂದ ಮಹಾಮಂತ್ರಿ ಬಸವಣ್ಣನವರು ತಮ್ಮ ರಾಜಪರಿವಾರದೊಂದಿಗೆ ಬರುತ್ತಿದ್ದರು. ದೂರದಿಂದ ಮಾಚಯ್ಯನವರು ಬರುವುದನ್ನು ಕಂಡ ಬಸವಣ್ಣನವರು ಕೂಡಲೇ ತಮ್ಮ ಪರಿವಾರದವರಿಗೆ “ದಾರಿ ಬಿಡಿ, ಸಾಕ್ಷಾತ್ ಅರಿವಿನ ಮೂರ್ತಿ ಮಾಚಯ್ಯನವರು ಬರುತ್ತಿದ್ದಾರೆ” ಎಂದು ಹೇಳಿ ರಸ್ತೆಯ ಪಕ್ಕಕ್ಕೆ ಸರಿದು ನಿಂತರು. ನಾಡಿನ ಮಹಾಮಂತ್ರಿಯೇ ಒಬ್ಬ ಮಡಿವಾಳನಿಗೆ ದಾರಿ ಬಿಟ್ಟು ಗೌರವ ಸೂಚಿಸಿದ್ದು ಅಂದಿನ ಕಾಲದ ದೊಡ್ಡ ಸಾಮಾಜಿಕ ಬದಲಾವಣೆಯಾಗಿತ್ತು. ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ “ಎನ್ನ ತಂದೆ ಮಡಿವಾಳ ಮಾಚಯ್ಯನು ಮಾಡಿಕೊಟ್ಟ ಮಡಿ ಇದು ನೋಡಾ! ಹೊರಗಣ ಕೊಳೆಯಲ್ಲ, ಅಂತರಂಗದ ಅರಿವಿನ ಮಡಿ ಇದು ನೋಡಾ!” ಎಂದು ಕೊಂಡಾಡುತ್ತಾರೆ.
“ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು” ಎಂಬ ವಚನದಲ್ಲಿ ಮಾಚಯ್ಯನೂ ಬಸವಣ್ಣನ ಬಗ್ಗೆ ಅಷ್ಟೇ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. “ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು” ಎಂಬ ಮತ್ತೊಂದು ವಚನದಲ್ಲಿ ‘ನಾನು ಪ್ರಯತ್ನಿಸಿದರೆ ನಿನ್ನಂತೆಯೇ (ನೀನೇ) ಆಗಬಲ್ಲೆ, ಆದರೆ ಬಸವಣ್ಣನಂತೆ ಅದಮ್ಯ ಭಕ್ತಿಯ ಹೊಂದುವುದು ನನ್ನಿಂದಲ್ಲ, ಯಾರಿಂದಲೂ ಸಾಧ್ಯವಿಲ್ಲ” ಎಂದು ಮಾಚಯ್ಯ ಹೇಳುತ್ತಾರೆ.


ಒಮ್ಮೆ ಅನುಭವ ಮಂಟಪದಲ್ಲಿ “ಯಾರು ನಿಜವಾದ ಗುರು?” ಎಂಬ ಚರ್ಚೆ ನಡೆದಾಗ ಮಾಚಯ್ಯನವರು ಒಂದು ನಿಷ್ಠುರ ವಚನ ಸಾರಿದರು: “ತನ್ನ ಅರಿವ ತಾನು ಅರಿಯದವನು ಗುರುವಲ್ಲ, ಪರರ ಮೈಲಿಗೆಯ ಕಳೆವವನೇ ಗುರು ನೋಡಾ!”. ಇದರರ್ಥ, ಯಾರು ಕೇವಲ ಉಪದೇಶ ಮಾಡುತ್ತಾರೋ ಅವರು ಗುರುವಲ್ಲ; ಯಾರು ಸಮಾಜದ ಕೆಟ್ಟ ಆಲೋಚನೆಗಳನ್ನು (ಮೈಲಿಗೆಯನ್ನು) ತೊಳೆದು ಜನರನ್ನು ದಾರಿಗೆ ತರುತ್ತಾರೋ ಅವರೇ ನಿಜವಾದ ಗುರು ಎಂದು ಸಾರಿದರು. ಹೀಗೆ ಅನುಭವ ಮಂಟಪದ ವಿಷಯ ಜಿಜ್ಞಾಸೆಯಲ್ಲಿ ಮಾಚಯ್ಯ ಭಾಗಿಯಾಗುತ್ತಿದ್ದರು.
ಮಡಿವಾಳ ಮಾಚಯ್ಯನವರು ವಚನಗಳ ಅಂಕಿತನಾಮವಾದ “ಕಲಿದೇವರದೇವ” ಎಂಬುದು ಕೇವಲ ಒಂದು ಹೆಸರಲ್ಲ; ಅದು ಅವರ ವ್ಯಕ್ತಿತ್ವ, ಶೌರ್ಯದ ಸಂಕೇತವೂ ಆಗಿದೆ. ಯಾಕೆಂದರೆ ಕನ್ನಡದಲ್ಲಿ ‘ಕಲಿ’ ಎಂದರೆ ‘ವೀರ’, ‘ಪರಾಕ್ರಮಿ’ ಅಥವಾ ‘ಶೂರ’ ಎಂದರ್ಥ. ಮಾಚಯ್ಯನವರು ಕೇವಲ ಒಬ್ಬ ಶಾಂತ ಸ್ವಭಾವದ ಭಕ್ತರಾಗಿರಲಿಲ್ಲ; ಅವರು ಅನ್ಯಾಯದ ವಿರುದ್ಧ ಸಿಡಿದೇಳುವ ವೀರ ಶರಣರಾಗಿದ್ದರು. ತಪ್ಪು ಮಾಡಿದವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ (ರಾಜನೇ ಆಗಿರಲಿ), ಅವರನ್ನು ಎದುರಿಸುವ ಧೈರ್ಯ ಅವರಿಗಿತ್ತು.
ಆ ಧೈರ್ಯ, ಸಾಹಸಿ ಗುಣವೇ ಇವತ್ತು ನಮಗೆ ಬಸವಾದಿ ಶರಣರ ವಚನಗಳನ್ನು ದಕ್ಕಿಸಿಕೊಟ್ಟಿವೆ ಎಂದರೂ ತಪ್ಪಲ್ಲ. ಯಾಕೆಂದರೆ, ಬ್ರಾಹ್ಮಣ ಕುಲದ ಮಧುವರಸರ ಮಗಳು ಮತ್ತು ದಲಿತ ಶರಣ ಹರಳಯ್ಯನ ಮಗನ ನಡುವೆ ನಡೆದ ಅಂತರ್ಜಾತಿ ವಿವಾಹವು ಕಲ್ಯಾಣದಲ್ಲಿ ಬಿರುಗಾಳಿ ಎಬ್ಬಿಸಿತು. ಇದು ಸನಾತನ ಧರ್ಮದ ವಿರೋಧಿಗಳಿಗೆ ಅರಗಿಸಿಕೊಳ್ಳಲಾಗದ ವಿಷಯವಾಗಿತ್ತು. ಬಿಜ್ಜಳನು ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿದು, ಹರಳಯ್ಯ ಮತ್ತು ಮಧುವರಸರಿಗೆ ಆನೆಯ ಕಾಲಿನಿಂದ ತುಳಿಸಿ ಕೊಲ್ಲುವ ಭೀಕರ ಶಿಕ್ಷೆ ವಿಧಿಸಿದನು. ಈ ಕ್ರೌರ್ಯವು ಶರಣರನ್ನು ಕೆರಳಿಸಿತು. ಬಸವಣ್ಣನವರು ಶಾಂತಿ ಮಾರ್ಗವನ್ನು ಬೋಧಿಸಿದರೂ, ಶರಣರಲ್ಲಿದ್ದ ಉಗ್ರಗಾಮಿ ಬಣದವರಾದ ಜಗದೇವ, ಮೊಲ್ಲೆಬೊಮ್ಮಯ್ಯ ಮತ್ತು ಬೊಮ್ಮಯ್ಯ ಅವರು “ಅನ್ಯಾಯ ಮಾಡಿದ ರಾಜನಿಗೆ ಶಿಕ್ಷೆಯಾಗಬೇಕು” ಎಂದು ನಿರ್ಧರಿಸಿ ಬಿಜ್ಜಳನನ್ನು ಹತ್ಯೆ ಮಾಡಿದರು.
ಬಿಜ್ಜಳನ ಮರಣವು ಕಲ್ಯಾಣದಲ್ಲಿ ಅರಾಜಕತೆಯನ್ನು ಸೃಷ್ಟಿಸಿತು. ಬಿಜ್ಜಳನ ಮಗ ಸೋವಿದೇವನನ್ನು ಅಧಿಕಾರಕ್ಕೆ ತಂದ ಪುರೋಹಿತಶಾಹಿಗಳು ಅವನ ಮೂಲಕ ಶರಣರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದರು. ಸೋವಿದೇವನ ಸೈನ್ಯವು ಕಲ್ಯಾಣದ ಬೀದಿಗಳಲ್ಲಿ ಶರಣರನ್ನು ಬೇಟೆಯಾಡಿತು. ಸಿಕ್ಕ ಸಿಕ್ಕ ಶರಣರನ್ನು ಬಂಧಿಸಲಾಯಿತು ಅಥವಾ ಕೊಲ್ಲಲಾಯಿತು. ಸೈನ್ಯದ ಮೊದಲ ಗುರಿ ಶರಣರ ಜ್ಞಾನದ ಭಂಡಾರವಾದ ‘ವಚನಗಳ ತಾಳೆಗರಿ’ಗಳಾಗಿದ್ದವು. ಅವುಗಳನ್ನು ಸುಟ್ಟು ಹಾಕುವಂತೆ ಸೈನ್ಯಕ್ಕೆ ಆಜ್ಞಾಪಿಸಲಾಯಿತು.
ಅನಿವಾರ್ಯವಾಗಿ ಶರಣರು ಕಲ್ಯಾಣವನ್ನು ಬಿಡಬೇಕಾಯಿತು. ಬಸವಣ್ಣನವರು ಕೂಡಲಸಂಗಮಕ್ಕೆ ತೆರಳಿದರೆ, ವಚನಗಳ ದೊಡ್ಡ ಸಂಗ್ರಹದೊಂದಿಗೆ ಚನ್ನಬಸವಣ್ಣ ಮತ್ತು ಮಡಿವಾಳ ಮಾಚಯ್ಯ ದಕ್ಷಿಣದ ಅರಣ್ಯಗಳತ್ತ ಹೊರಟರು. ವಚನಗಳ ರಕ್ಷಣೆಯ ಹೊಣೆಯನ್ನು ಮಾಚಯ್ಯನವರಿಗೆ ವಹಿಸಲಾಯಿತು. ಶರಣರ ತಂಡವು ಕಲ್ಯಾಣ ಬಿಟ್ಟಾಗ, ಸೋವಿದೇವನ ಸೈನ್ಯವು ಅವರನ್ನು ಬೆನ್ನಟ್ಟಿತು. ಆಗ ಮಾಚಯ್ಯನವರು ಶಸ್ತ್ರಸಜ್ಜಿತರಾಗಿ ಸೈನ್ಯವನ್ನು ಎದುರಿಸಿದರು. ಮಾಚಯ್ಯನವರು ಕಲ್ಯಾಣದಿಂದ ಉಳವಿಯವರೆಗಿನ ಹಾದಿಯುದ್ದಕ್ಕೂ ಸೈನ್ಯದ ವಿರುದ್ಧ ಹೋರಾಡುತ್ತಾ ಶರಣರಿಗೆ ರಕ್ಷಾ ಕವಚವಾದರು.
“ಈ ತಾಳೆಗರಿಗಳ ಮೇಲೆ ಇರುವುದು ಕೇವಲ ಅಕ್ಷರಗಳಲ್ಲ, ಇವು ಸಾವಿರಾರು ಜನರ ಬದುಕಿನ ಬೆಳಕು. ಇದನ್ನು ಮುಟ್ಟಬೇಕಾದರೆ ಮೊದಲು ನನ್ನ ತಲೆ ಉರುಳಬೇಕು!” ಈ ವೀರಾವೇಶದ ಕಾರಣಕ್ಕಾಗಿಯೇ ಅವರು ಕಕ್ಕೇರಿ ಯುದ್ಧದಲ್ಲಿ ಸಾವಿರಾರು ಸೈನಿಕರ ವಿರುದ್ಧ ಹೋರಾಡಿದರು. ಸೋವಿದೇವನ ಸೈನ್ಯದ ಬಲಕುಗ್ಗಿಸಿ, ಬೆದರಿಸಿ ವಾಪಾಸು ಕಳಿಸುವಲ್ಲಿ ಮಾಚಯ್ಯನವರ ಸೇನೆ ಯಶಸ್ವಿಯಾಯಿತು. ಆದರೆ ಆ ಹೋರಾಟದಲ್ಲಿ ಮಾಚಿತಂದೆ ಹೆಸರಿಗೆ ತಕ್ಕಂತೆ ವೀರಮರಣವನ್ನಪ್ಪಿ ಹುತಾತ್ಮರಾದರು.
ಉತ್ತರ ಕರ್ನಾಟಕದ ಜನಪದ ಸಾಹಿತ್ಯದಲ್ಲಿ ಮಾಚಯ್ಯನವರನ್ನು ಒಬ್ಬ ವೀರನನ್ನಾಗಿ ಚಿತ್ರಿಸಲಾಗಿದೆ. ಅವರ ಧೈರ್ಯವನ್ನು ಬಣ್ಣಿಸುವ ಒಂದು ಪ್ರಸಿದ್ಧ ಜನಪದ ಸಾಲು ಹೀಗಿದೆ: “ಕಲ್ಯಾಣ ಪಟ್ಟಣ ಕಲ್ಲೋಲವಾದಾಗ | ಹಲ್ಲು ಮುರಿದನು ಹಗೆಗಳದು ಮಾಚಯ್ಯ | ವಚನಗಳ ಹೊತ್ತು ಉಳವಿಗೆ ನಡೆದನು | ಶಿವನ ಪ್ರೇಮದ ವೀರ ಶರಣ ||”
ಕಲ್ಯಾಣ ಪಟ್ಟಣವು ಯುದ್ಧದ ಭೀತಿಯಿಂದ ತತ್ತರಿಸುತ್ತಿದ್ದಾಗ, ಶತ್ರುಗಳ ಹಲ್ಲು ಮುರಿದು ಅವರನ್ನು ಹಿಮ್ಮೆಟ್ಟಿಸಿದವನು ಮಾಚಯ್ಯ. ವಚನ ಸಾಹಿತ್ಯವೆಂಬ ಅಮೂಲ್ಯ ನಿಧಿಯನ್ನು ರಕ್ಷಿಸಿ, ಕಾಲ್ನಡಿಗೆಯಲ್ಲೇ ಉಳವಿಯತ್ತ ಸಾಗಿದ ಈ ಶರಣ ಶಿವನ ಪ್ರೀತಿಯ ವೀರ ಪುತ್ರ ಎಂಬುದು ಇದರರ್ಥ.
ಗಿರೀಶ್ ತಾಳಿಕಟ್ಟೆ
ಪತ್ರಕರ್ತರು
ಇದನ್ನೂ ಓದಿ- ಯುಜಿಸಿ ಅಧಿಸೂಚನೆಗೆ ಮೇಲ್ಜಾತಿಗಳ ಆಕ್ರೋಶ | ಮರೆಯಲ್ಲಿ ಮನುವಾದಿಗಳ ಷಡ್ಯಂತ್ರ


