ಯುಜಿಸಿ ಕರಡು ನಿಯಮ : ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಮೇಲಿನ ದಾಳಿ

Most read

ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ, ರಾಜ್ಯ ಸರ್ಕಾರಗಳು ತಮ್ಮ ಹಣದ ಮೂಲಕ ಕಟ್ಟಿಕೊಂಡಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡ ಮೇಲುಮಾಡುವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನದ ಸಮವರ್ತಿ ಪಟ್ಟಿಯ ಆಶಯಕ್ಕೆ ವಿರುದ್ಧವಾಗಿರುವ ಈ ಅಸಾಂವಿಧಾನಿಕ ಮತ್ತು ಏಕಪಕ್ಷೀಯ ಕರಡು ನಿಯಮಗಳನ್ನು ಹಿಂಪಡೆಯುವ ನಿರ್ಣಯವನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಅದನ್ನೇ ತನ್ನ ಸಲಹೆಯನ್ನಾಗಿ ಯುಜಿಸಿ ಮತ್ತು ಕೇಂದ್ರ ಸರ್ಕಾರಕ್ಕೆ ತುರ್ತಾಗಿ ತಲುಪಿಸಬೇಕಿದೆ – ನಿರಂಜನಾರಾಧ್ಯ.ವಿ.ಪಿ, ಅಭಿವೃದ್ಧಿ ಶಿಕ್ಷಣ ತಜ್ಞರು.

ಭಾರತದ ವಿಕೇಂದ್ರೀಕರಣ  ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸಲು ಪಣತೊಟ್ಟಿರುವ ಕೇಂದ್ರ ಸರ್ಕಾರವು  ತನ್ನ ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿಯ (2020)  ಮೂಲಕ ನಿಧಾನಗತಿಯಲ್ಲಿ ವಿಷವುಣಿಸುವಂತೆ ಹಲವು ಕ್ರಮಗಳನ್ನು ಹಂತಹಂತವಾಗಿ ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ, ಇತ್ತೀಚೆಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಮೂಲಕ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಮತ್ತು ಬಡ್ತಿಗಾಗಿ ಕನಿಷ್ಠ ಶಿಕ್ಷಣಾರ್ಹತೆ ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರ್ವಹಿಸುವ ಕ್ರಮಗಳು ಕುರಿತಂತೆ ಹೊಸ ನಿಯಮಗಳನ್ನು ರೂಪಿಸಿ  ಕರಡನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗಾಗಿ ಬಿಡಲಾಗಿದೆ. ಶವದ ಪೆಟ್ಟಿಗೆಗೆ ಕೊನೆಯ ಮೊಳೆ ಎಂಬಂತೆ, ಕಾಲೇಜು ಹಾಗು ವಿಶ್ವ ವಿದ್ಯಾಲಯಗಳ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಗಳಿಗಿರುವ ಅಧಿಕಾರವನ್ನು ಮೊಟಕುಗೊಳಿಸುವ  ಕೇಂದ್ರದ ಕೊನೆಯ ಪ್ರಯತ್ನವಾಗಿದೆ.

ವಿಶ್ವವಿದ್ಯಾನಿಲಯಗಳು ಮತ್ತು ಅವುಗಳಿಗೆ ಸಂಯೋಜನೆ ಗೊಂಡಿರುವ ಸಂಯೋಜಿತ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಮತ್ತು ಬಡ್ತಿಗಾಗಿ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರ್ವಹಿಸುವ ಕ್ರಮಗಳಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ (2025)  ಯುಜಿಸಿ ಕರಡು  ನಿಯಮಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಡುವೆ ಹೊಸ ಬಗೆಯ ಸಂಘರ್ಷಕ್ಕೆ ಕಾರಣವಾಗಿವೆ. ಕೇಂದ್ರೀಕರಣ, ಕಾರ್ಪೋರೇಟರೀಕರಣ ಮತ್ತು ಖಾಸಗೀಕರಣವನ್ನೇ ತನ್ನ ಮೂಲ ಗುರಿಯನ್ನಾಗಿಸಿಕೊಂಡಿರುವ ಕೇಂದ್ರ ಸರ್ಕಾರವು, ಕಳೆದ ಒಂದು ದಶಕದಿಂದ ಒಂದಲ್ಲ ಒಂದು ಬಗೆಯಲ್ಲಿ ಶಿಕ್ಷಣವನ್ನು ಪೂರ್ಣವಾಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಕಾನೂನು, ನೀತಿ ಹಾಗು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ .

ಇದು ಒಕ್ಕೂಟ (Federal ) ವ್ಯವಸ್ಥೆಯನ್ನು ದುರ್ಬಲಗೊಳಿಸಿ ಒಂದು ದೇಶ, ಒಂದು ಭಾಷೆ, ಒಬ್ಬ ನಾಯಕ, ಒಂದೇ ಜನಾಂಗ, ಒಂದೇ ಸಂಸ್ಕೃತಿ ಮತ್ತು ಒಂದೇ ನಿಯಮ ಎಂಬ ಏಕೀಕೃತ (Unitary) ಆಡಳಿತ ವ್ಯವಸ್ಥೆಯನ್ನು  ಜಾರಿಗೊಳಿಸುವ ಒಂದು ರಾಜಕೀಯ ಅಜೆಂಡವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ, ಲಿಖಿತ ಸಂವಿಧಾನದ ಮೂಲಕ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಸಮಾನ ಭಾಗೀದಾರರಾಗಿ ಸಮಾಲೋಚಿಸಿ ನೀತಿ, ಕಾನೂನು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜೊತೆಯಾಗಿ ಕಾರ್ಯ ನಿರ್ವಹಿಸುವ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಒಂದು ರಾಜಕೀಯ ಹುನ್ನಾರವಾಗಿದೆ. ಕೇಂದ್ರ ಯಾವುದೇ ಬಗೆಯ ನೀತಿ, ಕಾನೂನು, ನಿಯಮ ಅಥವಾ ಕಾರ್ಯಕ್ರಮಗಳನ್ನು ರೂಪಿಸುವಾಗ ರಾಜ್ಯಸರ್ಕಾರಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಷ್ಟ್ರದ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚನಾತ್ಮಕವಾಗಿ  ಕಾರ್ಯ ನಿರ್ವಹಿಸಬೇಕಿದೆ . ಆದರೆ, ಯುಜಿಸಿ ಹೊಸದಾಗಿ ರೂಪಿಸಿರುವ ಈ ನಿಯಮಗಳು, ಈ  ಎಲ್ಲಾ ತತ್ವಗಳಿಗೆ ತಿಲಾಂಜಲಿಯಿಟ್ಟು  ಏಕಪಕ್ಷೀಯವಾಗಿ ಹಾಗು ಅಪ್ರಜಾಸತ್ತಾತ್ಮಕವಾಗಿ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ನಿಯಮಗಳನ್ನು ರಾಜ್ಯಗಳ ಮೇಲೆ ಹೇರಲು ಹೊರಟಿದೆ. ಸಮವರ್ತಿ ಪಟ್ಟಿಯ ಮೂಲ ಆಶಯದಂತೆ ಯಾವುದೇ ನಿಯಮಗಳನ್ನು ರೂಪಿಸಲು ರಾಜ್ಯಗಳ ಒಪ್ಪಿಗೆಯ ಅವಶ್ಯಕತೆಯಿದೆಯೆಂಬ ಮೂಲ ತತ್ವವನ್ನೇ  ಯುಜಿಸಿ ಉಲ್ಲಂಘಿಸಿದೆ .

ಸಮವರ್ತಿ ಪಟ್ಟಿಯ ನಮೂದು 25 ರ ಅನ್ವಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ  ಎಲ್ಲಾ ಹಂತದ ಶಿಕ್ಷಣ ರಾಜ್ಯ ಸರ್ಕಾರದ ವಿಷಯವಾಗಿದೆ. ನಮೂದು 26 ಕಾನೂನು, ವೈದ್ಯಕೀಯ ಮತ್ತು ಇತರೆ ವೃತ್ತಿಗಳನ್ನೂ ಸಹ ಸಮವರ್ತಿ ಪಟ್ಟಿಯಲ್ಲಿರಿಸಿದೆ. ಸಂವಿಧಾನದ ಈ ಅವಕಾಶ ರಾಜ್ಯ ಸರ್ಕಾರಗಳಿಗೆ  ಸರ್ಕಾರದ ವತಿಯಿಂದ ಶಾಲಾ, ಕಾಲೇಜು  ಮತ್ತು ವಿಶ್ವವಿದ್ಯಾಲಯಗಳನ್ನು  ಸ್ಥಾಪಿಸಿ ನಡೆಸುವ ಸ್ವಾಯತ್ತತೆ ನೀಡಿದೆ. ಈ ಸ್ವಾಯತ್ತತೆ, ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ,  ಶಿಕ್ಷಕರ ಹಾಗು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ನೇಮಕಾತಿ, ಪಠ್ಯಕ್ರಮ, ಶಿಕ್ಷಣಶಾಸ್ತ್ರ, ಮೌಲ್ಯಮಾಪನ ಇತ್ಯಾದಿ ವಿಷಯಗಳನ್ನು ತೀರ್ಮಾನಿಸುವ ಅಧಿಕಾರವನ್ನು ನೀಡಿದೆ. ಇದರ ಅನ್ವಯ, ರಾಜ್ಯ ಸರ್ಕಾರಗಳು ಸಂಪೂರ್ಣ ಅನುದಾನಿತ ಕಾಲೇಜು ಹಾಗು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ನಡೆಸುತ್ತಿದೆ. 

ರಾಜ್ಯ ಸರ್ಕಾರಗಳು  ಸಂವಿಧಾನದ ಮೂಲ ಆಶಯವಾದ  ಸಮಾನತೆ ಹಾಗು ಸಾಮಾಜಿಕ ನ್ಯಾಯದ ತತ್ವವನ್ನು ಆಧರಿಸಿ,  ಉನ್ನತ ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ನಡೆಸುತ್ತಿದೆ. ಈ ಬಗೆಯ ವ್ಯವಸ್ಥೆ ಉಳ್ಳವರು ಮತ್ತು ಇಲ್ಲದವರಿಗೆ  ಸಮಾನ ಅವಕಾಶ ಕಲ್ಪಿಸುತ್ತದೆ. ಹಲವು ಸಮಸ್ಯೆಗಳ ನಡುವೆಯೂ, ಸಂಯೋಜಿತ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವ್ಯವಸ್ಥೆ  ನಮ್ಮ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮ ಪಡಿಸಲು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಯುಜಿಸಿಗೆ ಶಿಕ್ಷಣ ಹಾಗು ಗುಣ ಮಟ್ಟದ ಸುಧಾರಣೆಗೆ ನಿಜವಾದ ಆಸಕ್ತಿ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನವನ್ನು ಬಲಪಡಿಸುವ ಆಶಯವಿದ್ದರೆ, ರಾಜ್ಯ ಸರ್ಕಾರಗಳ ಶಿಕ್ಷಣ ವ್ಯವಸ್ಥೆಯನ್ನು  ಬಲಪಡಿಸಲು ಮತ್ತು ವಿಸ್ತರಿಸಲು ಅಗತ್ಯ ಆರ್ಥಿಕ  ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಬೇಕಿದೆ. ಈ ಬಗೆಯ ಸಹಾಯ ರಾಜ್ಯ ಸರ್ಕಾರಗಳು ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಸಾರ್ವತ್ರೀಕರಣಗೊಳಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ- ಹೊಸ ಯುಜಿಸಿ ಕರಡು ನಿಯಮಾವಳಿ – ವಿಶ್ವವಿದ್ಯಾನಿಲಯಗಳನ್ನು ಲಯ ಮಾಡುವ ಹುನ್ನಾರ

ಆದರೆ, ಯುಜಿಸಿ ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಬಲದಿಂದ  ಕಟ್ಟಿಕೊಂಡಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕೆಡವಿ ದುರ್ಬಲಗೊಳಿಸುವ ಮೂಲಕ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಮುಂದಾಗಿದೆ. ಯುಜಿಸಿಯ ಹೊಸ ಕರಡು ನಿಯಮಗಳು ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತ ಅಧಿಕಾರವನ್ನು ನಿರಾಕರಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ವಿಶ್ವವಿದ್ಯಾನಿಲಯಗಳು ಆಯ್ಕೆಮಾಡಿದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಗಳಾಗಿವೆ. ಪ್ರತಿ ವಿಶ್ವವಿದ್ಯಾಲಯಗಳು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಅದನ್ನು ಕಾಪಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ವಿಶ್ವವಿದ್ಯಾಲಯಗಳು  ಉಳಿದು ಬೆಳೆಯುತ್ತವೆ. 

ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲ ತಳಹದಿಯಾಗಿದ್ದು, ರಾಜ್ಯಗಳಿಗೆ ತನ್ನ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ, ನಡೆಸುವ ಮತ್ತು ನಿರ್ವಹಿಸುವ ಅಧಿಕಾರ ನೀಡುತ್ತದೆ. ಈ ವಿಷಯದಲ್ಲಿ, ಕೇಂದ್ರ ಸರ್ಕಾರ ಅನಗತ್ಯವಾಗಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಯುಜಿಸಿಯ ಹೊಸ ಕರಡು ನಿಯಮಗಳು, ರಾಜ್ಯ ಸರ್ಕಾರದ  ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿವೆ. ಯುಜಿಸಿ  ಕೇವಲ ಮಾರ್ಗದರ್ಶಿ ಸಂಸ್ಥೆಯಾಗಿದ್ದು  ಮಾರ್ಗ ಸೂಚಿಗಳನ್ನು ನೀಡಬಹುದಾಗಿದೆ. ಅಂಥಹ  ಮಾರ್ಗಸೂಚಿ ಅನುಸರಿಸದಿದ್ದರೆ, ಗರಿಷ್ಠ ತಾನು ನೀಡುವ ಅತ್ಯಲ್ಪ ಅನುದಾನವನ್ನು ತಡೆಹಿಡಿಯಬಹುದೇ ಹೊರತು  ದಂಡವನ್ನು ವಿಧಿಸುವ ಯಾವ ಅಧಿಕಾರವನ್ನು ಹೊಂದಿಲ್ಲ. ಆದರೆ, ಯುಜಿಸಿ ನಿಯಮಾವಳಿಗಳ ಉಲ್ಲಂಘನೆಯಾದರೆ ವಿಚಾರಣೆ ಸಮಿತಿಯನ್ನು ರಚಿಸಿ, ಉಲ್ಲಂಘನೆಗಳು ಸಾಬೀತಾದರೆ, ಯುಜಿಸಿ ಯೋಜನೆಗಳಲ್ಲಿ ಭಾಗವಹಿಸುವುದರಿಂದ ಡಿಬಾರ್ ಮಾಡುವುದು; ಪದವಿ ನೀಡುವುದನ್ನು ನಿಷೇಧಿಸುವುದು; ಒಡಿಎಲ್‌ ಮತ್ತು ಆನ್‌ಲೈನ್ ಕಾರ್ಯಕ್ರಮಗಳನ್ನು ನೀಡುವುದರ ನಿಷೇಧ; ಯುಜಿಸಿ ನಿರ್ವಹಿಸುವ ಉನ್ನತ ಶಿಕ್ಷಣ ಸಂಸ್ಥೆಗಳ  ಪಟ್ಟಿಯಿಂದ ಕೈಬಿಡುವುದು (ಯುಜಿಸಿ ಪಟ್ಟಿಯಿಂದ ವಿಶ್ವವಿದ್ಯಾನಿಲಯಗಳನ್ನು ತೆಗೆದುಹಾಕುವ ಬೆದರಿಕೆ)  ಹಾಗು ಪ್ರಕರಣಗಳ ಆಧಾರದ ಮೇಲೆ ಆಯೋಗದ ನಿರ್ಧಾರದ ಪ್ರಕಾರ ಹೆಚ್ಚುವರಿ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದೆಂಬ ಅಂಶಗಳು  ಸರ್ವಾಧಿಕಾರದ ಪರಮಾವಧಿಯಾಗಿದೆ. 

ಇದನ್ನೂ ಓದಿ- ಏಳಿ ಎದ್ದೇಳಿ, ಉನ್ನತ ಶಿಕ್ಷಣದ ಹಕ್ಕಿಗೆ ಹೋರಾಡಿ‌

ರಾಜ್ಯಪಾಲರಿಗೆ ತಮ್ಮದೇ ಆದ ಸಾಂವಿಧಾನಿಕ ಕರ್ತವ್ಯಗಳು ಮತ್ತು ಜವಾಬ್ದಾರಿಗಳಿವೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯನ್ನು ಅಲಂಕರಿಸುವುದು ಸಮಂಜಸವಲ್ಲವೆಂದು ಭಾರತದ ಗೌರವಾನ್ವಿತ ಮಾಜಿ ಮುಖ್ಯ ನ್ಯಾಯಮೂರ್ತಿ ಮದನ್ ಮೋಹನ್ ಪುಂಚಿ ನೇತೃತ್ವದ ಆಯೋಗ (2007-2010) ಅಭಿಪ್ರಾಯ ಪಟ್ಟಿದೆ. ರಾಜ್ಯಪಾಲರು ಸಾಂವಿಧಾನಿಕವಲ್ಲದ ಹುದ್ದೆಗಳನ್ನು ಹೊಂದಿರಬಾರದು. ಆದ್ದರಿಂದ, ರಾಜ್ಯಪಾಲರು ಇನ್ನು ಮುಂದೆ ವಿಶ್ವವಿದ್ಯಾನಿಲಯಗಳ ಕುಲಪತಿ ಅಥವಾ ಇತರ ಶಾಸನಬದ್ಧ ಸ್ಥಾನಗಳನ್ನು ಹೊಂದಿರಬಾರದು. ಅವರ ಜವಾಬ್ದಾರಿಗಳನ್ನು ಸಾಂವಿಧಾನಿಕ ಕರ್ತವ್ಯಗಳಿಗೆ ಕಟ್ಟುನಿಟ್ಟಾಗಿ ಸೀಮಿತಗೊಳಿಸಬೇಕು ಮತ್ತು ಈ ಅಭ್ಯಾಸವನ್ನು ರದ್ದುಗೊಳಿಸಬೇಕು ಎಂದು ಎಂದು ಆಯೋಗವು  ಶಿಫಾರಸ್ಸು ಮಾಡಿದೆ.

ಆದಾಗ್ಯೂ, ಕೇಂದ್ರ ಸರ್ಕಾರದ ತನ್ನ ಗುಪ್ತ ಕಾರ್ಯಸೂಚಿಗೆ ಅನುಗುಣವಾಗಿ, ಯುಜಿಸಿಯ ಹೊಸ ನಿಯಮಗಳ ಮೂಲಕ ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ನೇಮಕ ಮಾಡುವ ಸಂಪೂರ್ಣ ಅಧಿಕಾರವನ್ನು ರಾಜ್ಯಪಾಲರ ಕಚೇರಿಗೆ ವರ್ಗಾಯಿಸಲು  ಪ್ರಯತ್ನಿಸುತ್ತಿದೆ. ಈ ಕ್ರಮ ರಾಜ್ಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಎಲ್ಲಾ ಉಪಕ್ರಮಗಳಿಂದ ರಾಜ್ಯ ಸರ್ಕಾರವನ್ನು  ದೂರವಿರಿಸುತ್ತದೆ. ರಾಜ್ಯ ಸರ್ಕಾರಗಳಿಂದ ಸಂಪೂರ್ಣವಾಗಿ ಧನಸಹಾಯ ಪಡೆಯುತ್ತಿರುವ ವಿಶ್ವ ವಿದ್ಯಾಲಯಗಳ ಆಡಳಿತದಲ್ಲಿ  ರಾಜ್ಯ ಸರ್ಕಾರವನ್ನೇ ದೂರವಿಡುವುದು ಆಶ್ಚರ್ಯವನ್ನುಂಟು ಮಾಡಿದೆ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು, ರಾಜ್ಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರಗಳಿಗೆ ಪಾತ್ರವನ್ನು ನಿರಾಕರಿಸುವುದು ಭಾರತ ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿದೆ. ಪ್ರಸ್ತುತ ಕರಡು ನಿಯಮಗಳು ರಾಜ್ಯಗಳ ಜವಾಬ್ದಾರಿಯನ್ನು ಕಸಿಯುವುದು ತೀವ್ರತರದ  ಕೇಂದ್ರೀಕರಣ ಮಾತ್ರವಲ್ಲದೆ, ವಿಶ್ವವಿದ್ಯಾಲಯಗಳಿಗೆ  ಸ್ವಾಯತ್ತತೆಯನ್ನು ಸಹ ನಿರಾಕರಿಸುತ್ತದೆ ಮಾತ್ರವಾಗಿರದೆ  ರಾಜ್ಯಗಳ ಜವಾಬ್ದಾರಿಯನ್ನು ಮಾತ್ರವಲ್ಲದೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಸಹ ನಿರಾಕರಿಸುತ್ತದೆ.

ನಿರಂಜನಾರಾಧ್ಯ.ವಿ.ಪಿ

ಅಭಿವೃದ್ಧಿ ಶಿಕ್ಷಣ ತಜ್ಞರು

ಇದನ್ನೂ ಓದಿ- ವಿಶ್ವವಿದ್ಯಾನಿಲಯಗಳು ಉದ್ಯಮೀಕರಣದ ಸಂರಚನೆಗೆ ತಿರುಗಿದ ಹಾದಿ

More articles

Latest article