(ಸ್ಥಳ : ಇಂದ್ರಮ್ಮನ ಗೂಡಂಗಡಿ)
ಕರಿಸಿದ್ದ : (ಕಾಫಿ ಕುಡಿಯುತ್ತಾ) ಈ ಎಸ್ ಐ ಆರ್ ಅಂದ್ರೆ ಏನ್ಲಾ.. ಇತ್ತೀಚೆಗೆ ಭಾರೀ ಟ್ರೆಂಡಿಂಗ್‌ನಲ್ಲೈತೆ..
ಮೈಲಾರಿ : ತೊ ಥೋ.. ಅಷ್ಟೂ ಗೊತ್ತಾಗಾಕಿಲ್ವಾ.. ಬಡ್ಡಿಯತ್ತದೇ.. ಇಂಗ್ಲೀಷಲ್ಲಿ SIR ಅಂದ್ರೆ ಸರ್ ಅಂತೇನಲ್ವಾ.. ದೊಡ್ಡವರಿಗೆ ಮರ್ಯಾದೆ ಕೊಡೋಕೆ ಹಂಗೆ ಹೇಳ್ತಾರಲೇ.. ಅಸಲಿಗೆ ಸರ್ ಅಂದ್ರ ಗುರುಗಳೇ.. ಮೇಷ್ಟ್ರೇ ಅಂತಾ..
ಇಂದ್ರಮ್ಮ : ಅಯ್ಯಾ.. ನಿಮಗೆ ನೂರ್ವರ್ಷ ಆಯಸ್ಸು ಮೇಷ್ಟ್ರೇ.. ಈಗ ತಾನೆ ಈ ಮೈಲಾರಿ ಮೇಷ್ಟ್ರು ಅಂತಾ ನೆನಪಿಸಿಕೊಂಡಾ ನೀವ್ ಬಂದ್ರಿ. ಅಲ್ಲಾ ಮೇಷ್ಟ್ರೆ ಅದೇನೋ ಎಸ್ ಐ ಆರ್ ಅಂತಾರಲ್ಲಾ ಹಂಗಂದ್ರೇನು ಅಂತಾ ನಂದೊಂದು ಇದು…
ಕರಿಸಿದ್ದ : ನಂದು ಅದೇಯಾ ಕ್ವಶ್ಚನ್ನು ?
ಮೇಷ್ಟ್ರು : ಒಂದು ಚಾ ಕೊಡವ್ವಾ. ಹಂಗಂದ್ರೆ ಅದೊಂದು ನರೇಂದ್ರ ಚಕ್ರವರ್ತಿಗಳು ಸಾಮಂತ ಅರಸರ ಮೇಲೆ ಹೂಡಿರುವ ಬ್ರಹ್ಮಾಸ್ತ್ರ.
ಮೈಲಾರಿ : ಹೋ ಹಂಗಾ ವಿಶ್ಯಾ ಮೇಷ್ಟ್ರೇ. ಭಯಾನಕ ಆಯುದಾನೇ ಇರ್ಬೇಕು..
ಮೇಷ್ಟ್ರು : ಹೌದು.. ಕಣ್ಣಿಗೆ ಕಾಣದ ಅಂದುಕೊಂಡಿದ್ದನ್ನ ಸಾಧಿಸೋ ಭಯಂಕರವಾದ ಮಾಡರ್ನ್ ಅಸ್ತ್ರ.
ಕರಿಸಿದ್ದ : ಹಂಗಾರೆ ಅದೆನೋ ಸರ್ಜಿಕಲ್ ಸ್ಟ್ರೈಕ್ ಮಾಡ್ತಾರಲ್ಲಾ ಆಗ ಪಾಕಿಸ್ತಾನದ ಮೇಲೆ ಈ ಭಯಾನಕ ಅಸ್ತ್ರ ಬಿಟ್ರಾಯ್ತಪ್ಪಾ. ಎಲ್ಲಾ ಮಟಾಶ್.
ಮೈಲಾರಿ : ಅಣುಬಾಂಬಿಗಿಂತಾ ಭೀಕರವಾಗಿರ್ತದಾ ಮೇಷ್ಟ್ರೇ.
ಮೇಷ್ಟ್ರು : ಅಯ್ಯೋ ಅದು ಪಾಕಿಸ್ಥಾನದ ಮೇಲೆ ಹಾಕೋ ಅಣುಬಾಂಬ್ ಅಲ್ರಯ್ಯಾ. ನಮ್ಮ ದೇಶದ ಜನರ ಮೇಲೆ ಹಾಕೋ ಮಾಯಾವೀ ವೆಪನ್. ಈಗಾಗಲೇ ಬಿಹಾರ, ಪಶ್ಚಿಮ ಬಂಗಾಳದ ರಾಜ್ಯಗಳ ಮೇಲೆ ಈ ಸರ್ ಅಸ್ತ್ರ ಪ್ರಯೋಗ ಮಾಡಿದ ಮೋದಿ ಮಹಾರಾಜರು ದಿಗ್ವಿಜಯ ಸಾಧಿಸಿದ್ದಾಯ್ತು. ಈಗ ನಮ್ಮ ಕರ್ನಾಟಕದ ಸರದಿ.
ಕರಿಸಿದ್ದ : ಅಂದ್ರ ನಮ್ಮ ಮ್ಯಾಗೂ ಆ ಬಾಂಬ್ ಹಾಕ್ತಾರಾ? ಅದೇನು ಅಂತಾ ಬಿಡಿಸಿ ಹೇಳಿ ಮೇಷ್ಟ್ರೇ..
ಮೇಷ್ಟ್ರು : ( ಕಾಫಿ ಕುಡಿಯುತ್ತಾ) ನೋಡ್ರಯ್ಯಾ.. ನಮ್ಮ ದೇಶದೊಳಗ ಶಾಸಕರನ್ನ ಹೇಗೆ ಆಯ್ಕೆ ಮಾಡ್ತೀವಿ?
ಇಂದ್ರಮ್ಮ : ಎಲೆಕ್ಷನ್ ಮೇಷ್ಟ್ರೇ.. ಓಟ್ ಹಾಕಿ ಆರಿಸ್ತೀವಪ್ಪಾ.
ಮೇಷ್ಟ್ರು : ಹಾಂ.. ಕರೆಕ್ಟ್.. ಪ್ರಜೆಗಳು ತಮಗೆ ಬೇಕಾದವರಿಗೆ ಓಟ್ ಹಾಕಿ ಪ್ರಭುಗಳನ್ನ ಆರಿಸ್ತಾ ಇದ್ರಲ್ವಾ. ಈಗ ಅದೆಲ್ಲಾ ಆಗಾಕಿಲ್ಲಾ. ಪ್ರಭುಗಳೇ ತಮಗೆ ಬೇಕಾದ ಮತದಾರ ಪ್ರಜೆಗಳು ಯಾರು, ಬೇಡಾದವ್ರು ಯಾರು ಅಂತಾ ಆಯ್ಕೆ ಮಾಡಿ ಎಲೆಕ್ಷನ್ ಅನ್ನೋ ಯುದ್ದಾನ ಗೆಲ್ಲೋದಕ್ಕ ಈ ಸರ್ ಎನ್ನೊ ಅಸ್ತ್ರ ಪ್ರಯೋಗ ಮಾಡ್ತಾ ಇದ್ದಾರಪ್ಪಾ.
ಅಂಧಭಕ್ತ : ಹಂಗೆಲ್ಲಾ ಏನೂ ಇಲ್ಲಾ ಸುಮ್ಕಿರಿ ಮೇಷ್ಟ್ರೇ. ಸುಮ್ಕೆ ಇಲ್ಲದ್ದನ್ನೆಲ್ಲಾ ಹೇಳಿ ದಾರಿ ತಪ್ಪಿಸ್ಬೇಡಿ.
ಇಂದ್ರಮ್ಮ : (ನಾಟಕೀಯವಾಗಿ) ಓಹೋ ಅಂಧಭಕ್ತ ಮಹಾಶಯರು ಬರಬೇಕು. ಈಗ ತಮಗೇನು ಬೇಕು?
ಅಂಧಭಕ್ತ : ಎರಡು ಗುಟ್ಕಾ ಕೊಡಕ್ಕಾ. ನೋಡ್ರಿ ಮೇಷ್ಟ್ರೆ ಹತ್ತು ವರ್ಷಕ್ಕೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಅಂತಾ ರೂಲ್ಸೇ ಇದೆ. ಅದಕ್ಕೆ ಮಾಡ್ತಾ ಅವ್ರೆ.. ಇದ್ರಾಗೇನಿದೆ ತಪ್ಪು. ಸತ್ತವರನ್ನ ಓಟರ್ ಲಿಸ್ಟಿಂದಾ ತಗೀತಾರೆ, 18 ವರ್ಷ ಆದ ಹೊಸ ಮತದಾರರನ್ನ ಸೇರಿಸ್ತಾರೆ. ಇದೇ SIR ಅಂದ್ರೆ.. ಅಷ್ಟೇಯಾ?
ಮೇಷ್ಟ್ರು : ಇಷ್ಟೇ ಆಗಿದ್ರೆ ಚೆಂದಾಗಿತ್ತು. ಅದಕ್ಕೆ ಐರ್ ಅಂತಾರೆ. ಐ ಅಂದ್ರೆ ಇಂಟೆನ್ಸಿವ್ ರಿವಿಷನ್ ಅಂತಾ. ಅಂದ್ರೆ ಮತದಾರರ ಪರಿಷ್ಕರಣೆ ಅಂತಾ. ಆದ್ರ ಈಗ ಮಾಡ್ತಾ ಇರೋದು SIR ಅಂದ್ರೆ ಸ್ಪೇಶಲ್ ರಿವಿಷನ್. ಅಂದ್ರೆ ವಿಶೇಷ ಮತದಾರರ ಪರಿಷ್ಕರಣೆ.
ಇಂದ್ರಮ್ಮ : ಈ ವಿಶೇಷದಲ್ಲೆ ಎಲ್ಲಾ ವಿಶೇಷ ಇದೆ ಅನ್ನಿ.
ಮೇಷ್ಟ್ರು : ಯಸ್.. ಇಲ್ಲೇ ಇರೋದು ಹಕೀಕತ್ತು. 2002-2003 ರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ರು. ಆಗ ಯಾವ್ದೇ ಫಾರಂ ತುಂಬಬೇಕಿರಲಿಲ್ಲ, ದಾಖಲೆ ಕೊಡಬೇಕಾಗಿರಲಿಲ್ಲ. ಸತ್ತವರ ಹೆಸರು ಓಟರ್ ಲಿಸ್ಟಿಂದ ತೆಗೀತಿದ್ರು, ಹೊಸ ಮತದಾರರ ಹೆಸರು ಸೇರಿಸ್ತಿದ್ರು. ಆದ್ರ ಈಗ ಭಾರತದ ಇತಿಹಾಸದಲ್ಲೇ ಮೊದಲ ಸಲ ನಡಿಸ್ತಾ ಇರೋದು ವಿಶೇಷ ಪರಿಷ್ಕರಣೆ. ಈಗ ಎಲ್ರೂ ಫಾರಂ ತುಂಬಬೇಕು, ಅವರು ಕೇಳಿದ ದಾಖಲೆ ಕೊಡಬೇಕು. ಹೆಸರು ಸರ್ನೇಮು ಬರೆಯೋವಾಗ ಏನಾದ್ರೂ ಒಂದೇ ಒಂದು ಸ್ಪೇಲ್ಲಿಂಗ್ ಮಿಸ್ಟೇಕ್ ಆಯ್ತೋ ಆಗ ನಿಮ್ಮ ಹೆಸರು ಓಟರ್ ಲಿಸ್ಟಿಂದಾ ಔಟ್. ಮುಂದೆ ಇದನ್ನೇ ಆಧರಿಸಿ ಸಕಲ ಸರಕಾರಿ ಸವಲತ್ತು ಬಂದ್ ಆದ್ರೂ ಆಗಬಹುದು.
ಮೈಲಾರಿ : ಹೋ ಹಂಗಾ..
ಮೇಷ್ಟ್ರು : ಈಗ ಪಶ್ಚಿಮ ಬಂಗಾಳದ ಉದಾಹರಣೆ ತಗೊಳ್ಳೋಣ. ಅಲ್ಲೇನಾಯ್ತಪ್ಪಾ ಅಂದ್ರ ಕಳೆದ ಹದಿನೈದು ವರ್ಷದಿಂದ ಆ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರೇ ಜನರಿಂದ ಆರಿಸಿ ಬಂದು ಮುಖ್ಯಮಂತ್ರಿ ಆಗ್ತಿದ್ರು.
ಅಂಧಭಕ್ತ : ಸಿಎಂ ಖುರ್ಚಿಗೆ ಗೂಟಾ ಹೊಡ್ಕೊಂಡು ಕೂತಿದ್ಲು ಅನ್ನಿ..
ಇಂದ್ರಮ್ಮ : ಹೋ ನಿಮ್ಮ ಮೋದಿಯವರು ಪ್ರಧಾನಿ ಖುರ್ಚಿಗೆ ಗೂಟಾ ಹೊಡ್ಕೊಂಡು ಕೂತಂಗೆ.
ಅಂಧಭಕ್ತ : ನೋಡು ಇಂದ್ರಕ್ಕಾ.. ಯಾರಿಗೆ ಏನಾದ್ರೂ ಅನ್ನು. ಮೋದಿಯವರಿಗೆ ಏನಾದ್ರೂ ಅಂದ್ರೆ ನಾನು ಸುಮ್ಮಕಿರಾಕಿಲ್ಲಾ. ಅವರು ನಮ್ಮ ದೇವರು..
ಮೇಷ್ಟ್ರು : ಇರ್ಲಿ ಬಿಡಯ್ಯಾ. ನಿಮ್ಮನೇಲಿ ಅವರ ಪೊಟೊ ಇಟ್ಟು ಪೂಜೆ ಮಾಡ್ಕೊ. ಈಗ ಮುಂದೆ ಕೇಳು ಇಲ್ಲಾ ಇಲ್ಲಿಂದಾ ಕಳಚ್ಕೊ. ಮಮತಾ ದೀದಿಗೆ ಖಾಯಂ ಆಗಿ ಓಟ್ ಒತ್ತೊ ಮುಸಲ್ಮಾನರು, ದಲಿತರು ಇದ್ರಲ್ಲಾ ಅಂತಾ 90 ಲಕ್ಷ ಜನರನ್ನ ಎಸ್ ಐ ಆರ್ ಮೂಲಕ ಓಟರ್ ಲಿಸ್ಟ್ ನಿಂದ ತೆಗೆದ್ ಹಾಕಿದ್ರು.
ಅಂಧಭಕ್ತ : ಅವ್ರೆಲ್ಲಾ ಬಾಂಗ್ಲಾದಿಂದ ಬಂದವರು, ರೋಹಿಂಗ್ಯಾಗಳು ಮೇಷ್ಟ್ರೇ.. ನುಸುಳುಕೋರರು.
ಇಂದ್ರಮ್ಮ : ಹಂಗಾದ್ರೆ ಅವರನ್ನ ನಮ್ಮ ದೇಶದೊಳಗೆ ನುಸುಳೋಕೆ ಯಾರಯ್ಯಾ ಬಿಟ್ರು. ಗಡಿ ಕಾಯೋದು ಕೇಂದ್ರ ಸರ್ಕಾರದ ಕೆಲಸಾ ಅಲ್ವಾ.
ಮೇಷ್ಟ್ರು : ಕಣ್ಣಿಗೆ ಎಣ್ಣೆ ಹಾಕ್ಕೊಂಡು ಹುಡುಕಿದ್ರೂ ನೂರು ಜನ ನುಸುಳುಕೋರರು ಸಿಗಲಿಲ್ಲವಲ್ಲಯ್ಯಾ. ಹೋಗಲಿ 27 ಲಕ್ಷ ಓಟರ್ ಗಳನ್ನ ಅನುಮಾನಾಸ್ಪದರು ಅನ್ನೋ ಲಿಸ್ಟಲ್ಲಿ ಇಟ್ಟು ಓಟ್ ಹಾಕೋ ಹಾಗಿಲ್ಲಾ ಅಂತಾ ಚುನಾವಣಾಧಿಕಾರಿಗಳು ಹೇಳಿದ್ರು. ಅಷ್ಟೇ ಮಮತಾ ದೀದಿ ಪಕ್ಷಕ್ಕೆ ಬರೋ ಓಟುಗಳಲ್ಲಿ ಒಂದಿಷ್ಟು ಮತಗಳು ನಿಂತೊದ್ವು.
ಅಂಧಭಕ್ತ : ಆ ಯಮ್ಮಾ ಸೋತು ಸುಣ್ಣ ಆದ್ಲು. ಅದೇ ಆಗಬೇಕಿತ್ತು, ಆಯ್ತು ಬಿಡಿ ಮೇಷ್ಟ್ರೇ.
ಮೇಷ್ಟ್ರು : ಹೌದು ಮೋದಿಯವರಿಗೂ ಅದೇ ಬೇಕಿತ್ತು. ಚುನಾವಣಾ ಆಯೋಗದ ಜೊತೆ ಶಾಮೀಲಾಗಿ ಎಸೈಆರ್ ಅಸ್ತ್ರ ಬಳಸಿ ಪಶ್ಚಿಮ ಬಂಗಾಳವನ್ನ ಕಮಲ ಪಕ್ಷ ಗೆದ್ದಕೊಳ್ತು. ಬಿಹಾರದಲ್ಲಿ ಗೆಲ್ತು..
ಕರಿಸಿದ್ದ : ಸಧ್ಯ ನಮ್ಮ ರಾಜ್ಯದಲ್ಲಿ ಏನೂ ಆಗಿಲ್ವಲ್ಲಾ ಮೇಷ್ಟ್ರೆ..
ಮೇಷ್ಟ್ರು : ಆಗುತ್ತೆ. ಇಲ್ಲೂ ಆಗೇ ಆಗುತ್ತೆ. ಜೂನ್ 30 ರಿಂದ ಕರ್ನಾಟಕದಲ್ಲೂ ವಿಶೇಷ ಪರಿಷ್ಕರಣೆ ಶುರುವಾಗುತ್ತೆ.
ಇಂದ್ರಮ್ಮ : ಅಲ್ಲಲೇ ಕರಿಸಿದ್ದಾ. ನೀನು ಮೋದಿ ಪಕ್ಷದ ವಿರುದ್ದ ಓಟ್ ಹಾಕೋವ್ನಲ್ವಾ. ನಿನ್ನ ಓಟು ಅಷ್ಟೇ ಹೊಗೆ ಹಾಕ್ಕೋಳುತ್ತೆ ನೋಡ್ತಾ ಇರು.
ಸಾಬಣ್ಣಾ : ಮತ್ತೆ ನಮ್ಮ ಓಡು.
ಮೈಲಾರಿ : ನಿಂದೂ ಅಷ್ಟೇ.. ಗಾನ್.. ಟಾಟಾ ಟಾಟಾ.. ಬೈ ಬೈ..
ಕರಿಸಿದ್ದ : ನನ್ನತ್ರ ಆಧಾರ ಕಾರ್ಡ್ ಐತೆ.. ಓಟರ್ ಕಾರ್ಡ್ ಐತೆ. ಎಲ್ಲಾ ಚುನಾವಣೆಗಳಲ್ಲೂ ಓಟ್ ಹಾಕಿದ್ದೀನಿ. ನನ್ನ ಹೆಸ್ರು ಅದೆಂಗೆ ಲಿಸ್ಟ್ ನಿಂದಾ ತಗೀತಾರೊ ನೋಡೇ ಬಿಡ್ತೀನಿ.
ಅಂಧಭಕ್ತ : ನೋಡ್ತಾನೇ ಇರು ಯಾರು ಬೇಡಾ ಅಂದೋರು. ಮೋದಿ ವಿರುದ್ದ ಇರೋ ನಿಮ್ಮಂತಾ ದೇಶದ್ರೋಹಿಗಳ ಹೆಸರು ಓಟರ್ ಲಿಸ್ಟಲ್ಲೂ ಇರ್ಬಾರ್ದು.
ಕರಿಸಿದ್ದ : ಯಾಕಯ್ಯಾ ಇರಬಾರ್ದು. ಮೋದಿಗೇನು ಈ ದೇಶವನ್ನ ಬರಕೊಟ್ಟಿದ್ದೀವಾ? ನಾವು ಈ ದೇಶದ ಪ್ರಜೆಗಳು. ಬಾಬಾಸಾಹೇಬರು ಸಂವಿಧಾನದೊಳಗ ನಮಗೂ ಹಕ್ಕು ಕೊಟ್ಟಿದ್ದಾರೆ ತಿಳ್ಕೊ.
ಮೇಷ್ಟ್ರು : ಆ ಹಕ್ಕನ್ನ ಕಿತ್ಕೊಳ್ಳೊದಕ್ಕೆ SIR ಮಾಡ್ತಿರೋದು ಸಿದ್ದಣ್ಣಾ. ಈಗ ನೋಡು ಎಲ್ಲಾರಿಗೂ ಅರ್ಜಿ ಫಾರಂ ಕೊಡ್ತಾರೆ. ಅದನ್ನ ನಾವು ನೀವು ಎಲ್ರೂ ತುಂಬಬೇಕು. ಅದರ ಜೊತೆ ಅವರು ಕೇಳೋ ದಾಖಲೆ ಕೊಟ್ಟು ನೀವು ಈ ದೇಶದ ಓಟರ್ರು ಅಂತಾ ಸಾಬೀತು ಮಾಡಬೇಕು. ಆಗ ನಿಮ್ಮ ಹೆಸರು ಲಿಸ್ಟಲ್ಲಿ. ಇಲ್ಲಾ ಅಂದ್ರೆ ಅಷ್ಟೇ…
ಮೈಲಾರಿ : ಕೊಟ್ರಾಯ್ತು ಬಿಡಿ ಮೇಷ್ಟ್ರೇ. ಆಧಾರ ಕಾರ್ಡ್ ಇದೆಯಲ್ವಾ, ರೇಷನ್ ಕಾರ್ಡ್ ಇದೆ, ಓಟರ್ ಕಾರ್ಡ್ ಇದೆ. ಕೆಲವರಿಗೆ ಪ್ಯಾನ್ ಕಾರ್ಡ್ ಕೂಡಾ ಇದೆ. ಕೊಡ್ತೀವಪ್ಪಾ.
ಮೇಷ್ಟ್ರು : ಅವೆಲ್ಲಾ ಏನೂ ಉಪಯೋಗ ಇಲ್ಲಾ ಮೈಲಾರಿ. ಚುನಾವಣಾ ಆಯೋಗ ಇವುಗಳನ್ನ ಪರಿಗಣನೆ ಮಾಡೋದಿಲ್ಲಾ. ನಿಮ್ಮತ್ರಾ ಪಾಸ್ ಪೋರ್ಟ್ ಐತಾ.
ಇಂದ್ರಮ್ಮ : ಅಯ್ಯೊ ಶಿವನೇ.. ಈ ಊರಲ್ಲಿ ಯಾರತ್ರಾನೂ ಅದಿಲ್ಲಾ ಬಿಡ್ರಿ.
ಮೇಷ್ಟ್ರು : ಸರಕಾರಿ ನೌಕರರು ಅಂತಾ ಐಡಿ ಕಾರ್ಡ್ ಐತಾ.
ಕರಿಸಿದ್ದ : ನಮ್ಮಂತವರಿಗೆ ಸರಕಾರಿ ನೌಕರಿ ಯಾರು ಕೊಟ್ಟಾರೂ..
ಮೇಷ್ಟ್ರು : ಹೋಗಲಿ SSLC , PUC, ಡಿಗ್ರಿ ಮಾರ್ಕ್ಸ್ ಕಾರ್ಡು, ಟಿಸಿ ಅಂತಾವೇನಾದ್ರೂ ಇದ್ದಾವಾ?
ಮೈಲಾರಿ : ಏಳನೇ ಕ್ಲಾಸಿಗೆ ಮೂರು ಸಲ ಫೇಲಾಗಿ ಸಾಲಿ ಬಿಟ್ಟಿವ್ನಿ ಮೇಷ್ಟ್ರೇ..
ಇಂದ್ರಮ್ಮ : ಈ ಹಳ್ಳೀಲಿ ಮುಕ್ಕಾಲು ಜನ್ರು ಹೈಸ್ಕೂಲ್ ಮೆಟ್ಟಲೂ ಹತ್ತಿಲ್ವಲ್ಲಾ ಮೇಷ್ಟ್ರೇ.
ಮೈಲಾರಿ : ನಮ್ಮಪ್ಪಾ, ಅವ್ವಾರೆಲ್ಲಾ ಅನಕ್ಷರಸ್ತರು. ಅವರಿಗೆಲ್ಲಿ ಸ್ಕೂಲ್ ಸರ್ಟಿಫಿಕೇಟ್ ಇರುತ್ತೆ ಮೇಷ್ಟ್ರೆ.
ಮೇಷ್ಟ್ರು : ಹೋಗಲಿ… ಜಾತಿ ಪ್ರಮಾಣ ಪತ್ರ ಇರುತ್ತಲ್ವಾ.
ಸಾಬಣ್ಣ : ನಮ್ದು ಸಮುದಾಯದವ್ರಲ್ಲಿ ಅಂತಾದೆಲ್ಲಾ ಇಲ್ವಲ್ಲಾ ಸಾಬ್.
ಮೇಷ್ಟ್ರು : ಅಲ್ರಯ್ಯಾ.. ಸರಕಾರ ನಿಮಗೆ ಪ್ರೀ ಸೈಟ್ ಕೊಟ್ಟಿರುತ್ತಲ್ವಾ.. ಅದರ ಸರ್ಟಿಫಿಕೇಟ್ ಇಲ್ವಾ.
ಇಂದ್ರಮ್ಮ : ಸರಕಾರದ ಸೈಟ್ಗಳನ್ನ ಉಳ್ಳವರೇ ಅಲಾಟ್ ಮಾಡಿಸ್ಕೊಂತಾರೆ. ಇನ್ನು ಕಡು ಬಡವರಿಗೇನು ಕೊಟ್ಟಾರು.
ಮೇಷ್ಟ್ರು : ತಹಶಿಲ್ದಾರ್ ಹತ್ರಾ ಹೋಗಿ ವಾಸಸ್ಥಳ ದೃಢೀಕರಣ ಪತ್ರ ಮಾಡಿಸ್ಕೊಂಡಿದ್ದೀರಾ.
ಇಂದ್ರಮ್ಮ : ಅದಕ್ಕೂ ದಾಖಲೆ ಕೊಡಬೇಕಲ್ವಾ ಮೇಷ್ಟ್ರೆ. ಅದನ್ನ ಇಲ್ಲಿ ಯಾರೂ ಮಾಡ್ಸಿಲ್ಲಾ ಬಿಡ್ರಿ.
ಮೇಷ್ಟ್ರು : ಇವ್ಯಾವವು ಇಲ್ಲಾ ಅಂದ್ರೆ ನಿಮಗೆ ಓಟರ್ ಲಿಸ್ಟಲ್ಲಿ ಜಾಗ ಇಲ್ಲಾ. ನೀವು ಎಲ್ಜಿಬಲ್ ಅಲ್ಲಾ. ಅಷ್ಟೇ.
ಸಾಬಣ್ಣ : ಅಂದ್ರೆ ನಾವು ಈ ದೇಶದವ್ರು ಅಲ್ವಾ ಸಾಬ್.
ಅಂಧಭಕ್ತ : ಅದನ್ನೇ ನಾವು ಹೇಳ್ತಾ ಇರೋದು. ಈ ಸಾಬರನ್ನ ಪಾಕಿಸ್ತಾನಕ್ಕೆ ಓಡಿಸ್ಬೇಕು ಅಂತಾ.
ಮೇಷ್ಟ್ರು : ನೋಡಯ್ಯಾ.. ಮುಸಲ್ಮಾನರೂ ಇದೇ ನೆಲದಲ್ಲಿ ಹುಟ್ಟಿ ಬೆಳದವ್ರು. ಸಂವಿಧಾನದಲ್ಲಿ ಅವ್ರಿಗೂ ಸಮಾನ ಹಕ್ಕಿದೆ. ಆ ಧರ್ಮ ಈ ಧರ್ಮ ಅಂತಾ ಜಗಳಾಡೋದು ಬಿಟ್ಟು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರೊ ಹಾಗೆ ನೊಡ್ಕೊಳ್ಳಿ.
ಅಂಧಭಕ್ತ : ಅಲ್ಲಾ ಮೇಷ್ಟ್ರೇ.. ನನ್ನತ್ರಾನೂ ನೀವು ಹೇಳಿದ ದಾಖಲೆಗಳಿಲ್ಲಾ.. ಈಗೇನು ಮಾಡೋದು?
ಇಂದ್ರಮ್ಮ : ನೀನು ಹೋಗಿ ನಿಮ್ಮ ಮೋದಿ ದೇವರನ್ನ ಕುರಿತು ತಪಸ್ಸು ಮಾಡು. ತಥಾಸ್ತು ಅಂದ್ರೂ ಅನ್ಬೋದು..
ಅಂಧಭಕ್ತ : ನೀ ಸುಮ್ಕಿರಕ್ಕೋ.
ಮೇಷ್ಟ್ರು : ನೋಡ್ರಪ್ಪಾ, ಚುನಾವಣಾ ಆಯೋಗ ಈಗ ಜೂನ್ 30 ರಿಂದ ಒಂದು ತಿಂಗಳು ಕಾಲ ವಿಶೇಷ ಪರಿಷ್ಕರಣೆ ಶುರು ಮಾಡುತ್ತೆ. ಎಲ್ರಿಗೂ ಅರ್ಜಿ ಫಾರಂ ಕೊಡುತ್ತೆ. ಮೊದಲು ಅದನ್ನ ತುಂಬ್ರಿ.
ಕರಿಸಿದ್ದ : ನನಗೆ ಬರಿಯೋಕೆ ಬರೋದಿಲ್ವಲ್ಲಾ ಮೇಷ್ಟ್ರೆ.. ಹೆಂಗೆ ತುಂಬ್ಲಿ. ನೀವೇ ತುಂಬಿ ಕೊಟ್ಟು ಪುಣ್ಯಾ ಕಟ್ಕೊಳ್ರಿ.
ಮೇಷ್ಟ್ರು : ಮೊದಲು ಸರಿಯಾದ ದಾಖಲೆಗಳು ಇದ್ದಾವಾ ಅದನ್ನ ನೊಡ್ಕೊ. ಇಲ್ಲಿ ಕೇಳ್ರಿ.. ಎಲ್ಲಾರಿಗೂ ತಿಳಿಸಿ ಹೇಳ್ರಿ. ಎಲ್ರೂ ಅರ್ಜಿ ಫಾರಂ ಭರ್ತಿ ಮಾಡ್ರಿ. ಈಗಲೇ ದಾಖಲೆಗಳನ್ನ ರೆಡಿ ಮಾಡಿ ಇಟ್ಕೊಳ್ರಿ. ಕರ್ನಾಟಕದಲ್ಲಿ ಯಾರೊಬ್ಬ ಅರ್ಹ ಮತದಾರನ ಹೆಸರೂ ಪಟ್ಟಿಯಿಂದ ಬಿಟ್ಟು ಹೋಗಬಾರದು. ಈಗಲೇ ಎಲ್ರೂ ಎಚ್ಚರ ವಹಿಸಿದ್ರೆ ಓಟ್ ಚೋರಿ ನಿಲ್ಲಿಸ್ಬೊದು. ಈ SIR ಅಸ್ತ್ರದ ಉದ್ದೇಶವನ್ನ ವಿಫಲ ಮಾಡ್ಬೋದು. ಕೇಂದ್ರ ಸರಕಾರದ ಶಡ್ಯಂತ್ರವನ್ನ ಸೋಲಿಸ್ಬೋದು. ನಮ್ಮ ಮತ ನಮ್ಮ ಹಕ್ಕು. ಅದನ್ನ ಎಲ್ರೂ ಕಾಪಾಡಿಕೊಳ್ಳಲೇಬೇಕು.
ಇಂದ್ರಮ್ಮ : ಹೊ ಅಂಧಭಕ್ತರು ಅವಸರದಲ್ಲಿ ಹೊರಟಂತೈತೆ.
ಅಂಧಭಕ್ತ : ಅಯ್ಯೊ ನನಗೆ ಈಗ ಟೆನ್ಶನ್ ಆಗ್ತಾ ಐತೆ ಇಂದ್ರಕ್ಕಾ. ನನ್ನತ್ರ, ನನ್ನ ಮನೆಯವ್ರ ಹತ್ರ ದಾಖಲೆಗಳು ಇಲ್ವಲ್ಲಾ ಅನ್ನೊ ಚಿಂತೆ.
ಕರಿಸಿದ್ದ : ಹೋಗಯ್ಯಾ ಹೋಗು. ನಿನ್ನ ದೇವ್ರನ್ನ ಕೇಳು ಹೋಗು.
(ಎಲ್ಲರೂ ನಗುವರು)
ಸಾಬಣ್ಣ : ಸಾಬ್.. ದಾಖಲೆ ಇಲ್ಲಾ ಅಂದ್ರೆ ನಮ್ಮನ್ನ ಪಾಕಿಸ್ತಾನಕ್ಕೆ ಕಳಸ್ತಾರೊ ಇಲ್ಲಾ ಬಾಂಗ್ಲಾ ದೇಶಕ್ಕೊ. ಅಲ್ಲಿ ನನಗ್ಯಾರೂ ಗೊತ್ತಿಲ್ವಲ್ಲಾ ಸಾಬ್. ನಮ್ಮ ತಾತ ಮುತ್ತಾತಂದಿರ ಕಾಲದಿಂದಾ ನಾವು ಇಲ್ಲೇ ಹುಟ್ಟಿ ಬೆಳದವ್ರು. ಇದೇ ನೆಲದವ್ರು. ಈಗ ದೇಶದಿಂದಾ ಓಡ್ಸಿದ್ರೆ ಏನ್ ಸಾಬ್ ಮಾಡೋದು?
ಮೇಷ್ಟ್ರು : ಈಗೇನೂ ಆತಂಕ ಪಡಬೇಕಾಗಿಲ್ಲಾ ಬಿಡು ಸಾಬಣ್ಣ. ಅಬ್ಬಬ್ಬಾ ಅಂದ್ರೆ ನಿಮ್ಮ ಓಟ್ ಕಿತ್ಕೊಬಹುದು. ಆದರೆ ನಿನ್ನ ಮಕ್ಕಳ ಕಾಲಕ್ಕೆ ಈ ಕೋಮುವಾದಿಗಳು ಏನು ಮಾಡ್ತಾರೊ ನನಗೂ ಗೊತ್ತಿಲ್ಲಾ.
ಮೈಲಾರಿ : ಇಲ್ಲಾ ಮೇಷ್ಟ್ರೇ ಈ SIR ವಿರುದ್ದ, ಚುನಾವಣಾ ಆಯೋಗದ ಕುತಂತ್ರದ ವಿರುದ್ದ, ಕೇಂದ್ರ ಸರಕಾರದ ಸರ್ವಾಧಿಕಾರಿ ಶಡ್ಯಂತ್ರದ ವಿರುದ್ದ ಹೋರಾಟ ಮಾಡಲೇ ಬೇಕು ಮೇಷ್ಟ್ರೆ.
ಕರಿಸಿದ್ದ : ಹೌದೌದು.. ನಾವು ಎಲ್ಲಾ ಜನರನ್ನ ಸೇರಿಸೋಣ.. ‘ನಮ್ಮ ಮತ ನಮ್ಮ ಹಕ್ಕು’ ಅಂತಾ ಚಳುವಳಿ ಶುರುಮಾಡೋಣ.
ಮೇಷ್ಟ್ರು : ಒಳ್ಳೆ ವಿಚಾರ. ಅದಕ್ಕೂ ಮುಂಚೆ ಎಲ್ಲರೂ ಅರ್ಜಿ ಸಲ್ಲಿಸಿ, ಸರಿಯಾದ ದಾಖಲೆ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಹಾಗೆ ನೋಡಿಕೊಳ್ಳಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಓಟಿನ ಮೂಲಕವೇ ಈ ಕೋಮುವ್ಯಾಧಿಗಳ ವಂಚನೆಯನ್ನು ಸೋಲಿಸಬೇಕಿದೆ. ಎಲ್ರೂ ಒಮ್ಮೆ ಜೋರಾಗಿ ಹೇಳಿ. ನಮ್ಮ ಮತ ನಮ್ಮ ಹಕ್ಕು.
ಎಲ್ಲರೂ : ನಮ್ಮ ಮತ ನಮ್ಮ ಹಕ್ಕು.
ಮೇಷ್ಟ್ರು : ನಾನೊಂದು ಹಾಡು ಹೇಳ್ತೀನಿ ನೀವೂ ಜೊತೆಗೆ ಹಾಡಿ..
(ಹಾಡು : )
ಏನ್ ಕಾಲಾ ಬಂತಯ್ಯಾ ನಮ್ಮ ಓಟೇ ನಮದಲ್ಲಾ
ಅಹಿಂದ ಜನರ ಓಟಿಗೆ
ಮೂರು ನಾಮ ಹಾಕಾಯ್ತು..
ಬೇಕಾದವ್ರ ಇಟ್ಕೊಂಡು ಬೇಡಾದವ್ರ ಬಿಟ್ಕೊಂಡು
ಎಲೆಕ್ಷನ್ನು ಮಾಡ್ತಾರಂತೆ ಪ್ರಜಾಪ್ರಭುತ್ವದ ಗತಿ ಹಿಂಗಾಯ್ತು
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಕನ್ನಡದ ಅಸ್ಮಿತೆ ಮತ್ತು ಭವಿಷ್ಯ: ಸಮಗ್ರ ಭಾಷಾ ನೀತಿಯತ್ತ ಒಂದು ದಿಟ್ಟ ಹೆಜ್ಜೆ


