ದಾವಣಗೆರೆ: ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ ನಡೆಸಿದ್ದು ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 14 ಕಡೆ ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಆದಾಯ ಮಿತಿಗಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಒಟ್ಟು 12 ತಂಡಗಳು ಕಾರ್ಯಾಚರಣೆ ಕೈಗೊಂಡಿವೆ.
ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿನ ಸಿದ್ದೇಶ್ವರ್ ಹೆಬ್ಬಾಳ್ ಅವರ ಮನೆ, ಹುಬ್ಬಳ್ಳಿ ಕಚೇರಿ ಸೇರಿ ನಾಲ್ಕು ಕಡೆ ದಾಳಿ ನಡೆದಿದೆ.
ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್, ಚಿತ್ರದುರ್ಗ ಬಯಲು ಸೀಮೆ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಮತ್ತು ಬೆಳಗಾವಿ ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರಿಗೆ ಸೇರಿದ ಸ್ಥಳಗಳಲ್ಲಿ ತನಿಖೆ ಪ್ರಗತಿಯಲ್ಲಿದೆ.
ಚಿತ್ರದುರ್ಗ ಬಯಲು ಸೀಮೆ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರ ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯ ಮನೆ, ಚಿತ್ರದುರ್ಗ ಕಚೇರಿ ಸೇರಿ ಐದು ಕಡೆ ಲೋಕಾಯುಕ್ತರು ಶೋಧ ಕಾರ್ಯ ನಡೆಯುತ್ತಿದೆ.
ಸಣ್ಣ ಕೆಂಚಪ್ಪ ಅವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ: ಬೆಳಗಾವಿ ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಆಗಿರುವ ಸಣ್ಣ ಕೆಂಚಪ್ಪ ಅವರ ದಾವಣಗೆರೆ ಮನೆ ಹಾಗೂ ಬೆಳಗಾವಿ ಮನೆ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಯುತ್ತಿದೆ.

