ಕಲಬುರಗಿ, ಆ.15: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಪ್ರಾಯೋಗಿಕ ಕಲಿಕೆ ಹಾಗೂ ಮೂಲಭೂತ ಎಲೆಕ್ಟ್ರಾನಿಕ್ಸ್ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯ ಶಾಲೆಗಳಿಗೆ ಪೇಪರ್‌ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅರಿವು ಭವನದಲ್ಲಿ ಶನಿವಾರ ನಡೆದ ಕಲಬುರಗಿ ಸ್ಪೋರ್ಟ್ಸ್ ಹಬ್ಬದ ಲೋಗೊ ಮತ್ತು ವಿಡಿಯೋ ಅನಾವರಣ ಹಾಗೂ ಪೇಪರ್‌ಟ್ರಾನಿಕ್ಸ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ 70 ಶಾಲೆಗಳಿಗೆ 700 ಪೇಪರ್‌ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಕಿಟ್‌ಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಲಿಯಲು ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗಲಿವೆ ಎಂದು ಸಚಿವರು ಹೇಳಿದರು.
ಕೇವಲ ಪುರಾಣ ಮತ್ತು ಸಂಸ್ಕೃತಿಗೆ ಸೀಮಿತವಾಗದೆ, ಇಂದಿನ ಕಾಲಕ್ಕೆ ಅಗತ್ಯವಿರುವ ವೈಜ್ಞಾನಿಕ ದೃಷ್ಟಿಕೋನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಸಂವಿಧಾನಾತ್ಮಕ ಕರ್ತವ್ಯವೂ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಗೀತಾ ಪಾಟೀಲ್ ಮಾತನಾಡಿ, ಸಂಸ್ಥೆಯು ದೇಶದ 23 ರಾಜ್ಯಗಳು ಹಾಗೂ ಕರ್ನಾಟಕದ 28 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ 21 ವಿಜ್ಞಾನ ಕೇಂದ್ರಗಳ ಮೂಲಕ ಮಕ್ಕಳಲ್ಲಿ ಕುತೂಹಲ ಮತ್ತು ಸೃಜನಶೀಲತೆ ಬೆಳೆಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಹಾಗೂ ಪ್ರಯೋಗಗಳ ಮೂಲಕ ಕಲಿಯುವಿಕೆಯನ್ನು ಉತ್ತೇಜಿಸಲು ‘ಆ, ಆಹಾ, ಹಾಹಾ’ ಎಂಬ ಪರಿಕಲ್ಪನೆಯಡಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಸರಳ ವಿದ್ಯುತ್, ಸರಣಿ ಮತ್ತು ಸಮಾಂತರ ಸಂಪರ್ಕ ಸೇರಿದಂತೆ ಮೂಲಭೂತ ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಪೇಪರ್‌ಟ್ರಾನಿಕ್ಸ್ ಕಿಟ್ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಸಿಇಒ ಸಾಯಿ ಚಂದ್ರಶೇಖರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ಸ್ ಮಹತ್ವ ಹೆಚ್ಚಾಗಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ 20 ಸ್ವಯಂ-ಕಲಿಕೆಯ ಚಟುವಟಿಕೆಗಳನ್ನು ಒಳಗೊಂಡ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ಸ್ವತಃ ಪ್ರಯೋಗ ಮಾಡುವುದರಿಂದ ವಿಜ್ಞಾನ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದರು.
ಏನಿದು ಪೇಪರ್‌ಟ್ರಾನಿಕ್ಸ್ ಕಿಟ್?
ಪೇಪರ್‌ಟ್ರಾನಿಕ್ಸ್ ಅನುಭವಾಧಾರಿತ ಎಲೆಕ್ಟ್ರಾನಿಕ್ಸ್ ಕಲಿಕಾ ಕಿಟ್ ಮತ್ತು ಕಾರ್ಯಪುಸ್ತಕವಾಗಿದೆ. ಕಾಗದ ಆಧಾರಿತ ವಿನ್ಯಾಸಗಳು, ತಾಮ್ರ ಅಥವಾ ಅಲ್ಯೂಮಿನಿಯಂ ಟೇಪ್, ಎಲ್‌ಇಡಿ, ಸ್ವಿಚ್, ಬ್ಯಾಟರಿ ಸೇರಿದಂತೆ ಮೂಲಭೂತ ಘಟಕಗಳ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯುತ್ ವಲಯಗಳ ಪರಿಕಲ್ಪನೆಗಳನ್ನು ಸರಳ ಹಾಗೂ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ.
ವಿದ್ಯಾರ್ಥಿಗಳು ಸ್ವತಃ ವಿದ್ಯುತ್ ವಲಯಗಳನ್ನು ಜೋಡಿಸಿ, ಪರೀಕ್ಷಿಸಿ, ಫಲಿತಾಂಶಗಳನ್ನು ಗಮನಿಸಿ ಹಾಗೂ ವಿನ್ಯಾಸಗಳಲ್ಲಿ ಬದಲಾವಣೆ ಮಾಡುವ ಮೂಲಕ ‘ಮಾಡುತ್ತಾ ಕಲಿಯುವ’ ಅನುಭವ ಪಡೆಯುತ್ತಾರೆ. ವಿದ್ಯುತ್ ಹರಿವು, ಸರಣಿ ಮತ್ತು ಸಮಾಂತರ ಸಂಪರ್ಕ ಸೇರಿದಂತೆ ಮೂಲಭೂತ ಎಲೆಕ್ಟ್ರಾನಿಕ್ಸ್ ಪರಿಕಲ್ಪನೆಗಳನ್ನು ನೇರ ಅನುಭವದ ಮೂಲಕ ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ.
ಕಿಟ್‌ನ ಕಾರ್ಯಪುಸ್ತಕದಲ್ಲಿ ಸರಳ, ಸರಣಿ ಮತ್ತು ಸಮಾಂತರ ವಲಯಗಳು, ಎರಡು-ಮಾರ್ಗದ ಸ್ವಿಚ್‌ಗಳು, ಟ್ರಾಫಿಕ್ ಲೈಟ್, ಪೊಟೆನ್ಸಿಯೊಮೀಟರ್, ವಾಹಕ-ಅವಾಹಕ ಪರೀಕ್ಷೆ, ವಾಟರ್ ಸ್ವಿಚ್, ಹೌಸ್‌ಬೆಲ್, ವಿದ್ಯುತ್ಕಾಂತೀಯತೆ, ಚಲನೆಯಿಂದ ಕಾರ್ಯನಿರ್ವಹಿಸುವ ಎಲ್‌ಇಡಿ, ಸೌರವಲಯ, ತಾಪಮಾನ ಸಂವೇದನೆ, ಭದ್ರತಾ ಅಲಾರಂ, ಆರ್‌ಜಿಬಿ ಲೈಟಿಂಗ್ ಹಾಗೂ ಬಣ್ಣ ಮಿಶ್ರಣ ಸೇರಿದಂತೆ ಹಲವು ಚಟುವಟಿಕೆಗಳಿವೆ.
ಇವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ, ಸೃಜನಶೀಲತೆ, ನಾವೀನ್ಯತೆ, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ಎಸ್‌ಟಿಇಎಂ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಮತ್ತು ತಿಪ್ಪಣ್ಣಪ್ಪ ಕಮಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಡಿಪಿಐ ಶಂಕರ ಢವಳಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಂಕನೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

