ಶಂ.ಬಾ. ಅವರ ‘ಸೌಂದರ್ಯ ವಿಚಾರ’: ಒಂದು ಮರುಚಿಂತನೆ
“ಸೌಂದರ್ಯವಿಲ್ಲದ ಪ್ರಜಾಪ್ರಭುತ್ವ ಸರ್ವಾಧಿಕಾರಿತ್ವದಲ್ಲಿ ಪರಿಣಮಿಸುವುದು” ಜೋಶಿಯವರ ಈ ಮಾತು ಭವಿಷ್ಯದ ಎಚ್ಚರಿಕೆ. ಸೌಂದರ್ಯ ಇಲ್ಲದ ಪ್ರಜಾಪ್ರಭುತ್ವ ಎಂದರೆ ವಿಮರ್ಶೆ ಇಲ್ಲದ ವ್ಯವಸ್ಥೆ; ಭಿನ್ನಮತ ಇಲ್ಲದ ಸಂಸ್ಥೆ; ಜನರ ಸ್ವಂತ ಯೋಚನೆ ಇಲ್ಲದ ರಾಜ್ಯ. ಅಂತಹ ಸ್ಥಳದಲ್ಲಿ ಬಹುಮತ ಇದ್ದರೂ ಜನಶಕ್ತಿ ಇರಲಾರದು – ಡಾ. ರವಿ ಎಂ ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಶಂ.ಬಾ. ಜೋಶಿಯವರ ‘ಸೌಂದರ್ಯ ವಿಚಾರ’ ಬರಹವು, ಕೇವಲ ಸೌಂದರ್ಯ ತತ್ತ್ವದ ಪ್ರಬಂಧವಲ್ಲ. ಅದೊಂದು ಜೀವನದ ಪ್ರಶ್ನೆ. ನಾಡಿನ ಪ್ರಶ್ನೆ. ಮನುಷ್ಯನ ಅಂತರಾತ್ಮದ ಪ್ರಶ್ನೆ. ಅವರು “ಚೆಲುವಿನ ನೆಲೆ ತಿಳಿಯದೆ ಆಳದಲ್ಲಿ ಬಿದ್ದವರು ಹಲವರು” ಎಂದು ಬರೆದಾಗ, ಅದು ತಾತ್ತ್ವಿಕ ಹೇಳಿಕೆಯಷ್ಟೆ ಅಲ್ಲ; ಅದು ಒಂದು ಸಾಮಾಜಿಕ ರೋಗನಿರ್ಣಯ. ಇಂದಿನ ದಿನಗಳಲ್ಲಿ ಆ ರೋಗ ಮತ್ತಷ್ಟು ಆಳವಾಗಿ ಬೇರೂರಿದೆ ಎಂಬ ಅರಿವು ಮೂಡಿದಾಗ, ಜೋಶಿಯವರ ಮಾತುಗಳು ಹಿಂದಿನ ಕಾಲದ ಸ್ಮರಣೆಯಾಗಿ ಉಳಿಯದೆ, ಹರಿತ ಪ್ರಶ್ನೆಯಾಗಿ ಮೈದಳೆಯುತ್ತವೆ.
‘ಸೌಂದರ್ಯ’ ಎಂಬ ಪದವನ್ನು ಕೇಳಿದಾಕ್ಷಣ ಇಂದಿನ ಮನಸ್ಸು ಓಡಿಹೋಗುವುದು ಯಾವ ಕಡೆಗೆ? ಚಲನಚಿತ್ರದ ತೆರೆ, ಸ್ಮಾರ್ಟ್ಫೋನಿನ ಪರದೆ, ಜಾಹೀರಾತಿನ ಬಣ್ಣ ಅಥವಾ ಫ್ಯಾಷನ್ ಮ್ಯಾಗಜೀನ್ ಹೊಳಪು- ಇವೇ ಇಂದು ಸೌಂದರ್ಯದ ಮಾಪಕಗಳಾಗಿ ಮೆರೆಯುತ್ತಿವೆ. ಆದರೆ ಜೋಶಿಯವರು ಸ್ಪಷ್ಟವಾಗಿ ಹೇಳಿದ್ದು “ತೋರುವುದು ಸೌಂದರ್ಯವಲ್ಲ; ಮಾಯೆ.” ತೋರಿಕೆಗೆ ಸಿರಿವಂತಿಕೆ ಬೇಕು; ಆದರೆ “ಇರುವುದಕ್ಕೆ ವಿಚಾರ, ವಿವೇಕ, ಭಾವುಕತನದ ಬಂಡವಾಳವೇ ಸಾಕು.” ಈ ಮಾತನ್ನು ಇಂದಿಗೆ ಅನ್ವಯಿಸಿಕೊಂಡರೆ, ನಮ್ಮ ಜೀವನದಲ್ಲಿ ಬಂಡವಾಳ ಹೆಚ್ಚಾಗಿದೆ, ಆದರೆ ತೋರಿಕೆಯ ಮಾಯೆ ಮತ್ತಷ್ಟು ಬಲಿಷ್ಠವಾಗಿದೆ. ನಿಜವಾದ ಇರವೆಂದರೆ ವಿಚಾರ ಮತ್ತು ವಿವೇಕ. ಇವು ಮೂಲೆಗುಂಪಾಗಿವೆ.
ಸೌಂದರ್ಯ ಮತ್ತು ಸತ್ಯ ಬೇರೆ ಬೇರೆಯಲ್ಲ ಎಂಬುದು ಜೋಶಿಯವರ ಬರಹದ ಕೇಂದ್ರ. “ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ” ಎಂಬ ಮಹಾವಾಕ್ಯ ಅವರಿಗೆ ಕೇವಲ ಕಾವ್ಯದ ಸಾಲಲ್ಲ, ಸಾಮಾಜಿಕ ಜೀವನದ ತತ್ತ್ವ. ಅಸತ್ಯ ಮಾತನಾಡಿದರೆ, ನ್ಯಾಯವನ್ನು ಮುರಿದರೆ, ದೌರ್ಜನ್ಯ ಮಾಡಿದರೆ— ಅದು ಕೇವಲ ನೈತಿಕ ತಪ್ಪಲ್ಲ, ಸೌಂದರ್ಯದ ನಾಶ. ಇಂದು ನಮ್ಮ ಸಾರ್ವಜನಿಕ ಜೀವನದಲ್ಲಿ ಸೌಂದರ್ಯ ಮತ್ತು ಸತ್ಯಗಳ ನಡುವಿನ ಈ ಸಂಬಂಧ ಮಾಯವಾಗಿದೆ ಎಂದು ಹೇಳಬೇಕಾದ ದುರ್ದೈವ ನಮ್ಮದು.
ರಾಜಕೀಯ ನಾಯಕ ಸುಳ್ಳು ಹೇಳಿದಾಗ ನಾವು ಚಪ್ಪಾಳೆ ತಟ್ಟುತ್ತೇವೆ. ಮಾಧ್ಯಮ ಅರ್ಧಸತ್ಯ ತೋರಿಸಿದಾಗ ಶೇರ್ ಮಾಡುತ್ತೇವೆ. ಕ್ರೌರ್ಯ ಮನರಂಜನೆಯ ಲೇಪ ಹಚ್ಚಿಕೊಂಡು ಮನೆ ಮನೆ ಪ್ರವೇಶಿಸುತ್ತಿದೆ. ಅನ್ಯಾಯ ಪ್ರಚಾರದ ಹೊದ್ದಿಕೆ ಹೊದ್ದು ಮೆಚ್ಚಿಸುತ್ತಿದೆ. ಇದನ್ನು ಕಂಡಾಗ ಜೋಶಿಯವರ ಒಂದು ಮಾತು ಕಿವಿಯಲ್ಲಿ ಮೊಳಗುತ್ತದೆ: “ಒಳ-ಹೊರಗಣ ಸುಸಂಗತಿಯಲ್ಲಿ ಸೌಂದರ್ಯವುಂಟು.” ಒಳಗಿರುವುದು ಒಂದು, ಹೊರಗೆ ತೋರಿಸುವುದು ಮತ್ತೊಂದು — ಇದು ಅಸೌಂದರ್ಯ ಮಾತ್ರವಲ್ಲ, ಇದು ನೈತಿಕ ವಿಕೃತಿ.
ವಿಚಾರ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳ ಪ್ರಶ್ನೆ ಇಂದು ಮತ್ತೆ ಮತ್ತೆ ಕಾಡುತ್ತಿರುವ ಕ್ಷಣದಲ್ಲಿ, ಜೋಶಿಯವರ “ವಿಚಾರ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳಿಲ್ಲದ ನಾಡಿನ ಸಾಹಿತ್ಯದಲ್ಲಿ ಸೌಂದರ್ಯದ ಅಭಾವವು ಕ್ರಮಪ್ರಾಪ್ತವಾದ ಸಂಗತಿಯೆ ಆಗಿದೆ” ಎಂಬ ಮಾತು ಅತ್ಯಂತ ಪ್ರಾಸಂಗಿಕ. ಈ ವಾಕ್ಯ ಬರೀ ಸಾಹಿತ್ಯ ವಿಮರ್ಶೆಯ ಮಾತಲ್ಲ. ಇದು ಸ್ವಾತಂತ್ರ್ಯ ಮತ್ತು ಸೌಂದರ್ಯಗಳ ನಡುವಿನ ಅಂತರ್ಗತ ಸಂಬಂಧವನ್ನು ಸ್ಥಾಪಿಸುತ್ತದೆ. ಯಾವ ಸಮಾಜದಲ್ಲಿ ಒಬ್ಬ ವ್ಯಕ್ತಿ ತನ್ನ ಮನಸ್ಸಿನ ಮಾತನ್ನು ಭಯವಿಲ್ಲದೆ ಹೇಳಲಾರನೋ, ಯಾವ ನಾಡಿನಲ್ಲಿ ಬೇರೊಂದು ದೃಷ್ಟಿಕೋನ ಅಪಾಯಕಾರಿಯಾಗಿ ಪರಿಗಣಿಸಲ್ಪಡುತ್ತದೋ- ಅಲ್ಲಿ ಸೌಂದರ್ಯ ಉಸಿರಾಡಲಾರದು.

ಇಂದಿನ ಭಾರತದಲ್ಲಿ ಈ ಪ್ರಶ್ನೆ ಮಹತ್ವದ್ದೆನಿಸುತ್ತದೆ. ಒಬ್ಬ ಲೇಖಕ ತನ್ನ ಕೃತಿಯ ಮೂಲಕ ಅಸಮ್ಮತಿ ಸೂಚಿಸಿದರೆ ಪ್ರಶ್ನಿಸಲ್ಪಡುತ್ತಾನೆ. ಒಬ್ಬ ಕಲಾವಿದ ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸಿದರೆ ಅವನ ಕಲಾಭಿವ್ಯಕ್ತಿ ನಿಷೇಧಕ್ಕೆ ಒಳಗಾಗಬಹುದು. ಒಬ್ಬ ಚಿಂತಕ ವಿಭಿನ್ನ ದಾರಿ ಹಿಡಿದರೆ ರಾಷ್ಟ್ರದ್ರೋಹಿ ಎಂಬ ಹಣೆಪಟ್ಟಿ ಸಿಗಬಹುದು. ಇದು ಅನ್ಯಾಯ ಮಾತ್ರವಲ್ಲ- ಜೋಶಿಯವರು ಹೇಳಿದಂತೆ, ಇದು ಸೌಂದರ್ಯನಾಶ. “ಭಿನ್ನತೆಗೆ ಇಂಬಿಲ್ಲದಲ್ಲಿ ಸೌಂದರ್ಯವು ಸುಳಿಯಲಾರದು” ಎಂಬ ಅವರ ಮಾತು ಇಂದು ರಾಜಕೀಯ ತತ್ತ್ವವಾಗಿ ಓದಬೇಕಾಗಿದೆ.
ಸೌಂದರ್ಯದ ಇನ್ನೊಂದು ಪ್ರಮುಖ ಅಂಗವೆಂದರೆ ವೈವಿಧ್ಯತೆ. ಈ ವೈವಿಧ್ಯತೆ ಎಂಬ ಪದ ಇಂದು ಮೇಲ್ನೋಟಕ್ಕೆ ಎಲ್ಲರ ಬಾಯಲ್ಲೂ ಇದೆ. ಆದರೆ ವಿಭಿನ್ನ ದನಿ ಕೇಳಿದ ತಕ್ಷಣ ಅದನ್ನು ಮೊಟಕುಗೊಳಿಸಲು ಸಿದ್ಧವಿರುವ ಶಕ್ತಿಗಳೂ ಸದಾ ಲಾಠಿ ಹಿಡಿದು ಎದ್ದುನಿಲ್ಲುತ್ತವೆ. ಎಲ್ಲವೂ ಒಂದೇ ತೆರನಾಗಿದ್ದರೆ ಅಲ್ಲಿ ಓಕರಿಕೆ ಹುಟ್ಟುತ್ತದೆ. ಪ್ರಕೃತಿಯೇ ವೈವಿಧ್ಯಮಯವಾಗಿರುವಾಗ, ಮಾನವ ಸಂಘರ್ಷಗಳಲ್ಲಿ ನಾವು ‘ಏಕರೂಪತೆ’ಯನ್ನು ಹೇರಲು ಹೊರಟಿರುವುದು ವಿಪರ್ಯಾಸ. “ಭಿನ್ನ ಸ್ವರಮೇಳದಲ್ಲಿ ರಾಗವು ಸಿದ್ಧವಾಗುವುದು.” ಜೋಶಿಯವರ ಈ ಮಾತು ಕೇವಲ ಸಂಗೀತದ ಮಾತಲ್ಲ, ಅದು ಪ್ರಜಾಪ್ರಭುತ್ವದ ಸಂಗೀತದ ಮಾತು. ಅನೇಕ ಸ್ವರಗಳ ಸಹಬಾಳ್ವೆಯಲ್ಲೇ ರಾಷ್ಟ್ರದ ರಾಗ ಸಿದ್ಧವಾಗುವುದು. ಒಂದೇ ಸ್ವರ, ಒಂದೇ ದನಿ, ಒಂದೇ ಧ್ವನಿ — ಇದು ಸಂಗೀತವಲ್ಲ, ಶಬ್ದ ಮಾಲಿನ್ಯ. ಸೌಂದರ್ಯವು ಏಕರೂಪತೆಯಲ್ಲಿದೆ ಎಂದು ಭ್ರಮಿಸುವವರಿಗೆ ಇದು ಎಚ್ಚರಿಕೆ.
“ವಿಭಿನ್ನತೆಗಳು ಎಷ್ಟು ಹೆಚ್ಚೊ, ಎಷ್ಟು ಬಲಿಷ್ಠವೊ, ಅವುಗಳ ಸಮನ್ವಯದಲ್ಲುಂಟಾಗುವ ಸೌಂದರ್ಯವೂ ಅಷ್ಟು ವರಿಷ್ಠವೂ ಘನಿಷ್ಠವೂ ಆಗಿ ಪುಟಗೊಳ್ಳುವುದು.” ಆದರೆ ಇಂದು ‘ಒಂದುಗೂಡದ ಆತ್ಯಂತಿಕ ಭೇದ’ಗಳು ಸಮಾಜದಲ್ಲಿ ಅಪಶ್ರುತಿಯನ್ನುಂಟು ಮಾಡುತ್ತಿವೆ. ಧರ್ಮ, ಜಾತಿ ಅಥವಾ ಸಿದ್ಧಾಂತಗಳ ಹೆಸರಿನಲ್ಲಿ ನಾವು ಸೃಷ್ಟಿಸಿಕೊಳ್ಳುತ್ತಿರುವ ಕಂದಕಗಳು ಸೌಂದರ್ಯದ ನಾಶಕ್ಕೆ ಕಾರಣವಾಗಿವೆ.
ರೂಢಿ ಮತ್ತು ಸಂಪ್ರದಾಯಗಳ ಬಗ್ಗೆ ಜೋಶಿಯವರು ಅಸಾಧಾರಣ ಸ್ಪಷ್ಟತೆಯಿಂದ ಮಾತನಾಡಿದ್ದಾರೆ. “ರೂಢಿ-ಸಂಪ್ರದಾಯಗಳು ನವೀನತೆಯ ವೈರಿಗಳು. ನವೋನವತೆಯು ಸೌಂದರ್ಯದ ಒಂದು ಮಹತ್ವದ ಅಂಗವಾದುದರಿಂದ ರೂಢಿ-ಸಂಪ್ರದಾಯಗಳೆಂದರೆ ಸೌಂದರ್ಯ ವಿಕಾಸಕ್ಕೆ ಅಡ್ಡಿ” ಎಂದಿದ್ದಾರೆ. ಇದನ್ನು ಓದುವಾಗ ಒಂದು ಸ್ವಾಭಾವಿಕ ಪ್ರಶ್ನೆ ಏಳುತ್ತದೆ: ಇಂದು ಸಂಪ್ರದಾಯ ಎಂಬ ಹೆಸರಿನಲ್ಲಿ ನಡೆಯುತ್ತಿರುವುದೇನು?
ಸಂಪ್ರದಾಯ ಎಂಬ ಪದ ಇಂದು ಎರಡು ರೀತಿಯಲ್ಲಿ ದುರ್ಬಳಕೆಯಾಗುತ್ತಿದೆ. ಒಂದು, ಅದು ಪ್ರಶ್ನಿಸಲಾಗದ ಕಟ್ಟಳೆಯಾಗಿ ಮಾರ್ಪಟ್ಟು ಮಹಿಳೆ, ದಲಿತ, ಅಲ್ಪಸಂಖ್ಯಾತ— ಇವರ ಮೇಲೆ ಹೇರಲ್ಪಡುತ್ತದೆ. ಇನ್ನೊಂದು, ಅದು ರಾಜಕೀಯ ಅಸ್ತ್ರವಾಗಿ ಬಳಸಲ್ಪಟ್ಟು ಭಿನ್ನಮತೀಯರನ್ನು ಹತ್ತಿಕ್ಕಲು ಬಳಕೆಯಾಗುತ್ತದೆ. “ಚಟ, ರೂಢಿಯೆಂದರೆ ಯಾಂತ್ರಿಕ ಕೃತಿ. ಯಾಂತ್ರಿಕ ಕೃತಿಯಲ್ಲಿ ನವೀನತೆಯಿರುವುದಿಲ್ಲ. ನವೀನತೆ ನಷ್ಟವಾಯಿತೆಂದರೆ ಜೀವಶಕ್ತಿ ಬಧಿರವಾಗುವುದು” ಎಂಬ ಜೋಶಿಯವರ ಮಾತು ಎಷ್ಟು ಸತ್ಯ! ನಮ್ಮ ಸಾರ್ವಜನಿಕ ಜೀವನ ಒಂದು ಯಾಂತ್ರಿಕ ಅಭ್ಯಾಸವಾಗಿ ಮಾರ್ಪಟ್ಟಿದೆ: ಅದೇ ಭಾಷಣ, ಅದೇ ಘೋಷಣೆ, ಅದೇ ಗ್ರಂಥ, ಅದೇ ಮೂರ್ತಿ, ಅದೇ ಆದರ್ಶ — ಬದಲಾಗಬಾರದು, ಪ್ರಶ್ನಿಸಬಾರದು.
ಈ ಸಂದರ್ಭದಲ್ಲಿ ಜೋಶಿಯವರ ಒಂದು ಗಾಢ ಮಾತನ್ನು ಉಲ್ಲೇಖಿಸಬೇಕು: “ಯಾವುದಾದರೂ ಒಂದು ವ್ಯಕ್ತಿಗೆ ಅಥವಾ ಗ್ರಂಥಕ್ಕೆ ಸರ್ವಜ್ಞತೆಯ ಪದವಿಗೇರಿಸಿ ನಾಡಿನ ಅಂದಿನ ಮತ್ತು ಮುಂದಿನ ಎಲ್ಲ ಪ್ರತಿಭಾ ಶಕ್ತಿಯನ್ನೂ ಕುಮರಿಸಿಬಿಡುವ ಅಪಕಾಯಕ್ಕಿಂತ ಹೆಚ್ಚಿನ ಮಹಾಪಾತಕವು ಬೇರಾವುದಾದರೂ ಇದ್ದೀತೆ?” ಇಂದು ವ್ಯಕ್ತಿಪೂಜೆ ಒಂದು ರಾಷ್ಟ್ರೀಯ ಉದ್ಯಮವಾಗಿ ಬೆಳೆದಿದೆ. ನಾಯಕ ಹೇಳಿದ್ದೇ ಸತ್ಯ, ನಾಯಕ ತೋರಿಸಿದ ದಾರಿಯೇ ದಾರಿ, ನಾಯಕ ಸ್ಪರ್ಶಿಸಿದ ಆದರ್ಶವೇ ಪರಮ ಆದರ್ಶ ಎಂಬ ಭಾವ ವ್ಯಾಪಿಸಿದಾಗ, ಲಕ್ಷಲಕ್ಷ ತರುಣ ಮನಸ್ಸುಗಳ ಸ್ವತಂತ್ರ ಚಿಂತನ ಮೊಗ್ಗಿನಲ್ಲೇ ಮುಗ್ಗರಿಸುತ್ತದೆ. ಇದು ಪ್ರತಿಭೆಯ ಹತ್ಯೆ.
“ಅನುಕರಣಶೀಲರು ಅಂದಗೇಡಿಗಳಾಗುತ್ತಾರೆ. ತಮ್ಮ ಆತ್ಮತೇಜಸ್ಸಿಗೆ ಎರವಾಗುತ್ತಾರೆ” ಎಂಬ ಜೋಶಿಯವರ ಮಾತನ್ನು ಇಂದಿನ ಶೈಕ್ಷಣಿಕ ಸ್ಥಿತಿಗೆ ತಾಗಿಸಿ ನೋಡಿ. ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನು ಕಲಿಸುತ್ತಿದೆ? ಪ್ರಶ್ನಿಸುವ ಮನಸ್ಸನ್ನೋ, ನೆನಪಿಡುವ ಯಂತ್ರವನ್ನೋ? ವಿದ್ಯಾರ್ಥಿ ತನ್ನ ಪ್ರಶ್ನೆಯನ್ನು ಕೇಳಿದರೆ ಶ್ಲಾಘಿಸಲ್ಪಡುತ್ತಾನೋ, ಸಮಯ ಹಾಳು ಮಾಡುತ್ತಿದ್ದಾನೆ ಎಂದು ಗದರಿಸಲ್ಪಡುತ್ತಾನೋ? ನಿಗದಿತ ಪಠ್ಯಕ್ರಮ, ನಿಗದಿತ ಉತ್ತರ, ನಿಗದಿತ ಫಲಿತ— ಇದರ ಹೊರತು ಏನಾದರೂ ಬಯಸಿದರೆ ಅಪಾಯ. ಇಂತಹ ವ್ಯವಸ್ಥೆಯಲ್ಲಿ ಅನುಕರಣ ಮಾತ್ರ ಬದುಕುಳಿಯಬಲ್ಲ ಕೌಶಲ. ಸ್ವಂತ ಧ್ವನಿ ಅಪಾಯಕರ. ಆತ್ಮತೇಜಸ್ಸು ಅನಾವಶ್ಯಕ.
ಜೋಶಿಯವರ ಮಾತಿನಲ್ಲಿ ಈ ನಡೆಯ ಪರಿಣಾಮ ಸ್ಪಷ್ಟ: “ಅಂತರ್ಗತ ಸೌಂದರ್ಯದ — ಆತ್ಮಶಕ್ತಿಯ ಅನುಭವ ಪಡೆಯುವುದಕ್ಕೆ ಅಸಮರ್ಥರಾದವರು ಇಲ್ಲವೆ ಮೈಗಳ್ಳರೂ ಜೀವಗಳ್ಳರೂ ಅಂಧಾನುಕರಣದ ರೂಪದಲ್ಲಿ ಆತ್ಮಹತ್ಯಕ್ಕೆ ಮನಸ್ಸು ಮಾಡುತ್ತಾರೆ.” ಬೌದ್ಧಿಕ ಅಂಧಾನುಕರಣ ಒಂದು ಬಗೆಯ ಆತ್ಮಹತ್ಯೆ— ಇದು ಜೋಶಿಯವರ ಗಾಢ ಒಳನೋಟ. ಮೆಚ್ಚಿಕೊಳ್ಳುವ ಯೋಗ್ಯ ವ್ಯಕ್ತಿಯ ಆಲೋಚನೆಗಳನ್ನು ಅನುಸರಿಸುವುದು ಒಂದು ಮಟ್ಟಕ್ಕೆ ಸ್ವಾಭಾವಿಕ. ಆದರೆ ತನ್ನ ಸ್ವಂತ ವಿಚಾರ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಂಡು, ಬೇರೊಬ್ಬರ ಮಾತನ್ನು ತನ್ನ ಮಾತೆಂದು ಹೇಳಿಕೊಂಡು ಬದುಕುವುದು ಆತ್ಮ-ವಿನಾಶ. ಇಂದಿನ ಸಾಮಾಜಿಕ ಮಾಧ್ಯಮದ ಜಗತ್ತಿನಲ್ಲಿ ಇದು ಸಾಮೂಹಿಕ ಸ್ವರೂಪ ಪಡೆದಿದೆ. ಗೂಳಿಯ ನೆರಳಿನಂತೆ ಒಂದು ದನಿ ಅನಂತ ಬಾರಿ ಮರಳಿ ಮರಳಿ ಬರುತ್ತದೆ, ಆ ದನಿಯ ಸ್ವರೂಪ ಅಥವಾ ನ್ಯಾಯಯುತತೆಯನ್ನು ಪರೀಕ್ಷಿಸದೆ.
ಜೋಶಿಯವರು ಅರ್ಜುನನ ಉದಾಹರಣೆ ತೆಗೆದುಕೊಂಡ ರೀತಿ ಅಸಾಧಾರಣ ಒಳನೋಟ ಹೊಂದಿದೆ. ಶ್ರೀಕೃಷ್ಣ ತೀರಿಕೊಂಡ ನಂತರ ಅರ್ಜುನ ತನ್ನ ಶೌರ್ಯ ಕಳೆದುಕೊಳ್ಳುತ್ತಾನೆ. ಕಾರಣ, “ತನ್ನನ್ನು ತಾನು ಅವಲಂಬಿಸದೆ ಯಾವನೊಬ್ಬ ಮಹಾಗುರುವಿಗೆ ಅಥವಾ ಸರ್ವಾಧಿಕಾರಿಗೆ ಸರ್ವಸ್ವವನ್ನರ್ಪಿಸಿ ಅವರ ನೆಳಲಾಗಿ ಬಾಳುವುದರ ಘೋರ ದುರಂತ” ಎಂದು ಜೋಶಿಯವರು ವ್ಯಾಖ್ಯಾನಿಸುತ್ತಾರೆ. ಇದು ಇಂದಿನ ಪ್ರಜಾಪ್ರಭುತ್ವದ ಸ್ಥಿತಿಗೆ ನೇರ ಅಂಟಿಕೊಳ್ಳುತ್ತದೆ.
ಪ್ರಜಾಪ್ರಭುತ್ವ ಬಲಗೊಳ್ಳಲು ಸ್ವತಂತ್ರವಾಗಿ ಯೋಚಿಸಬಲ್ಲ, ಪ್ರಶ್ನಿಸಬಲ್ಲ, ಸಂಘಟಿತರಾಗಬಲ್ಲ ಪ್ರಜೆಗಳು ಬೇಕು. ಆದರೆ ಒಬ್ಬ ನಾಯಕ ಅಥವಾ ಒಂದು ಪಕ್ಷ ಅಥವಾ ಒಂದು ಸಿದ್ಧಾಂತದ ಮೇಲೆ ಸರ್ವಸ್ವ ಇಟ್ಟು ತಮ್ಮ ವಿವೇಚನೆ ಸ್ಥಗಿತಗೊಳಿಸಿಕೊಂಡ ನಾಗರಿಕ ಅರ್ಜುನನಂತೆ ಅಸಹಾಯಕ. ನಾಯಕ ತಪ್ಪು ಮಾಡಿದಾಗ ನೋಡುವ ಕಣ್ಣಿಲ್ಲ, ಪ್ರಶ್ನಿಸುವ ದನಿಯಿಲ್ಲ. “ಸೌಂದರ್ಯವಿಲ್ಲದ ಪ್ರಜಾಪ್ರಭುತ್ವ ಸರ್ವಾಧಿಕಾರಿತ್ವದಲ್ಲಿ ಪರಿಣಮಿಸುವುದು” ಜೋಶಿಯವರ ಈ ಮಾತು ಭವಿಷ್ಯದ ಎಚ್ಚರಿಕೆ. ಸೌಂದರ್ಯ ಇಲ್ಲದ ಪ್ರಜಾಪ್ರಭುತ್ವ ಎಂದರೆ ವಿಮರ್ಶೆ ಇಲ್ಲದ ವ್ಯವಸ್ಥೆ; ಭಿನ್ನಮತ ಇಲ್ಲದ ಸಂಸ್ಥೆ; ಜನರ ಸ್ವಂತ ಯೋಚನೆ ಇಲ್ಲದ ರಾಜ್ಯ. ಅಂತಹ ಸ್ಥಳದಲ್ಲಿ ಬಹುಮತ ಇದ್ದರೂ ಜನಶಕ್ತಿ ಇರಲಾರದು.
ಜೋಶಿಯವರು ಎಚ್ಚರಿಸಿದ ಮತ್ತೊಂದು ಮಾದರಿ ಅಂದಿನ ಭಾರತದ ಅಂಧಕಾರ ಯುಗದ ಚಿತ್ರ. “ಕಣ್ಣು ಕಳೆದುಕೊಳ್ಳುವ ಉಪದೇಶ ಮಾಡುವ ಗುರುಗಳೂ ತತ್ವಜ್ಞಾನಿಗಳೂ ಈ ಕಾಲದ ಸಮಾಜದ ನೇತಾರರಾದರು” ಎಂಬ ಅವರ ಮಾತು ಇಂದಿಗೂ ಅಷ್ಟೇ ಸಂಬಂಧಿಸಿದ್ದು. ಯಾರು ಜನರನ್ನು ನೇರವಾಗಿ ಯೋಚಿಸಲು ಪ್ರೇರೇಪಿಸದೆ ತಮ್ಮನ್ನೇ ನಂಬಿ ಎಂದು ಹೇಳುತ್ತಾರೋ; ಯಾರು ಪ್ರಶ್ನಿಸದಿರಿ, ನಂಬಿ ಎಂದು ಉಪದೇಶಿಸುತ್ತಾರೋ; ಯಾರು ಶ್ರದ್ಧೆ ಎಂಬ ಹೆಸರಿನಲ್ಲಿ ವಿಮರ್ಶೆಯನ್ನು ಪಾಪ ಎಂದು ಬಿಂಬಿಸುತ್ತಾರೋ— ಅವರು ಕಣ್ಣು ಕಳೆದುಕೊಳ್ಳುವ ಉಪದೇಶ ಮಾಡುವವರು. ಅಂತಹ ಗುರುಗಳ ಸ್ಥಿತಿ ಇಂದು ಕಡಿಮೆಯಾಗಿಲ್ಲ, ಬದಲಿಗೆ ಟೆಲಿವಿಷನ್ ಮತ್ತು ಅಂತರ್ಜಾಲದ ಮೂಲಕ ಅವರು ಕೋಟ್ಯಂತರ ಮನೆಗಳಿಗೆ ನೇರ ಪ್ರವೇಶ ಪಡೆದಿದ್ದಾರೆ.
“ಅಜ್ಞಾತ ಭವಿಷ್ಯದಲ್ಲಿ ಎದೆಗಾರಿಕೆಯಿಂದ ಮುನ್ನುಗ್ಗಬಲ್ಲ ಸಾಸಿಗನಾದ ಚಿರಪಥಿಕನೇ ನಿಜವಾದ ಸೌಂದರ್ಯೋಪಾಸಕನಾಗಬಲ್ಲನು” ಈ ಮಾತಿನಲ್ಲಿ ಜೋಶಿಯವರ ಸೌಂದರ್ಯ ದರ್ಶನದ ಮಹತ್ತ್ವದ ಸ್ತಂಭ ಇದೆ. ಸೌಂದರ್ಯ ಹಿಂದೆ ನೋಡುವ ವ್ಯವಹಾರವಲ್ಲ; ಅದು ಮುಂದಕ್ಕೆ ದಾಪುಗಾಲಿಟ್ಟು ಸಾಗುವ ಧೈರ್ಯ. ಭವಿಷ್ಯ ಅಜ್ಞಾತ, ನಿಶ್ಚಿತ ಫಲ ಇಲ್ಲ, ಆದರೂ ಸಾಗಬೇಕೆಂಬ ತುಡಿತ. ಇದೇ ಸೌಂದರ್ಯೋಪಾಸನೆಯ ಮೂಲ ಸ್ವಭಾವ.
“ನಾಳೆಯ ಹೊಸತನದಲ್ಲಿ ನೆಚ್ಚಿಕೆಯಿಲ್ಲದವರೇ ನಾಸ್ತಿಕರು” ಎಂಬ ಅವರ ಮಾತು ಅದ್ಭುತ ಮರು-ವ್ಯಾಖ್ಯಾನ. ದೇವರಲ್ಲಿ ನಂಬಿಕೆ ಇಲ್ಲ ಎಂದಾಕ್ಷಣ ನಾಸ್ತಿಕನಲ್ಲ. ಭವಿಷ್ಯದ ಸಾಧ್ಯತೆಯಲ್ಲಿ, ಮಾನವ ಕುಲದ ಮುಂದೆ ಸಾಗುವ ಶಕ್ತಿಯಲ್ಲಿ, ನವೀನತೆಯಲ್ಲಿ ನಂಬಿಕೆ ಇಲ್ಲ ಎಂದಾಗ ನಾಸ್ತಿಕ. “ಮತ್ತೆ ರಾಮನೆ ಬರಬೇಕು, ಕೃಷ್ಣನೆ ಹುಟ್ಟಬೇಕು, ಬಸವನೆ ಬರಬೇಕು” ಎಂದು ಭೂತದಲ್ಲಿ ನೆಮ್ಮಿ ಕುಳಿತವರಿಗೆ ಇಂದಿನ ಮನುಷ್ಯನ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲ. ಈ ಹಿಂದೆ ನೋಡುವ ದೃಷ್ಟಿ ಇಂದು ರಾಷ್ಟ್ರ ರಾಜಕಾರಣದ ಮೂಲ ಸ್ವರ ಆಗಿಬಿಟ್ಟಿದೆ— “ಗತ ವೈಭವ”ದ ಮರಳುವ ಕನಸು, ಭೂತಕಾಲದ ಮಹಾನ್ ವ್ಯಕ್ತಿಗಳ ಸ್ಮರಣ, “ಒಂದು ಕಾಲದಲ್ಲಿ ನಾವು ಶ್ರೇಷ್ಠರಾಗಿದ್ದೆವು, ಮತ್ತೆ ಆಗೋಣ” ಎಂಬ ರಾಜಕೀಯ ಭಾಷಣ. ಇದು ಜೋಶಿಯವರ ಮಾತಿನ ಪ್ರಕಾರ ಸೌಂದರ್ಯ ನಾಶದ ಒಂದು ಲಕ್ಷಣ.
ಸಾಹಿತ್ಯ ಮತ್ತು ಕಲೆಯ ಕರ್ತವ್ಯ ಏನೆಂದು ಜೋಶಿಯವರು ನೇರವಾಗಿ ಹೇಳಿದ್ದಾರೆ: “ಲೋಕದ ದೃಷ್ಟಿಯು ಸೌಂದರ್ಯದಲ್ಲಿ ಸ್ಥಿರಗೊಳ್ಳುವಂತೆ ಮಾಡುವುದು ಸಾಹಿತ್ಯದ ಹಿರಿಗುರಿ, ಕಲೆಯ ಕರ್ತವ್ಯ.” ಅಲ್ಲದೆ, “ಸಾಹಿತ್ಯ ಕಲೆಗಳು ಪ್ರತಿಸೃಷ್ಟಿಯನ್ನೇ ಸೃಜಿಸಿ ಚೆಲುವಿನ ಹಲವಂದವನ್ನು ಲೋಕಕ್ಕೆ ಪ್ರದರ್ಶಿಸಲು ಹೆಣಗುತ್ತಲಿದೆ” ಎಂದೂ ಹೇಳಿದ್ದಾರೆ. ಇದನ್ನು ಇಂದಿನ ಕನ್ನಡ ಸಾಹಿತ್ಯ ಲೋಕಕ್ಕೆ ಅನ್ವಯಿಸಿ ನೋಡಿದರೆ ಒಂದು ಮಿಶ್ರ ಚಿತ್ರ ಕಣ್ಣಮುಂದೆ ಬರುತ್ತದೆ.
ಒಂದೆಡೆ ಪ್ರಭುತ್ವದ ಅಧ್ಯಕ್ಷ/ಸದಸ್ಯ ಸ್ಥಾನಗಳಿಗೆ ದೂರವಿರುವ ಲೇಖಕರು ಸಾಮಾಜಿಕ ಅನ್ಯಾಯವನ್ನು ತಮ್ಮ ಕೃತಿಗಳ ಮೂಲಕ ಪ್ರಶ್ನಿಸುತ್ತಿದ್ದಾರೆ, ಅಂಚಿನ ಸಮಾಜದ ಮಾತನ್ನು ಕೇಂದ್ರಕ್ಕೆ ತರುತ್ತಿದ್ದಾರೆ, ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಮಾರುಕಟ್ಟೆ ಮತ್ತು ಮಾಧ್ಯಮ ಒತ್ತಡಕ್ಕೆ ಮಣಿದು ಜನಪ್ರಿಯತೆಯ ಅಲ್ಪಕ್ಷಣಿಕ ಮಾಯೆಯ ಹಿಂದೆ ಬಿದ್ದ ಸಾಹಿತ್ಯ ರಚನೆಯೂ ನಡೆಯುತ್ತಿದೆ. “ಅವರಿಗೇ ಸರಿಯಾದ ಸೌಂದರ್ಯ ದರ್ಶನವಾಗದಿದ್ದಲ್ಲಿ ಅವರು ಹೇಳುವುದೇನು? ಕುರುಡನೇ ದಾರಿ ತೋರುವನಾದರೆ ಹಳ್ಳದಲ್ಲಿ ಬೀಳುವುದೇನಾಶ್ಚರ್ಯ?” ಎಂಬ ಜೋಶಿಯವರ ಪ್ರಶ್ನೆ ಇಂದಿನ ಲೇಖಕ, ಕಲಾವಿದ, ಪತ್ರಕರ್ತ ಎಲ್ಲರಿಗೂ ಅನ್ವಯಿಸುತ್ತದೆ.
ಪತ್ರಕರ್ತಿಕೆಯ ಪ್ರಶ್ನೆ ಇಲ್ಲಿ ವಿಶೇಷ ಮಹತ್ವ ಪಡೆಯುತ್ತದೆ. ಸತ್ಯ ಹೇಳುವ ಧೈರ್ಯ ಇಲ್ಲದ, ಅಧಿಕಾರದ ಮಾತಿಗೆ ತಲೆ ಬಾಗುವ ಮಾಧ್ಯಮ “ಕಣ್ಣು ಕಳೆದ ಗುರು”ವಿನ ಪ್ರತ್ಯಕ್ಷ ರೂಪ. ಇಂದು ಪ್ರೈಮ್ ಟೈಮ್ ಚರ್ಚೆಗಳಲ್ಲಿ ಗದ್ದಲ ಮತ್ತು ಉದ್ವೇಗ ಇದೆ, ಆದರೆ ಒಳನೋಟ ಮತ್ತು ವಿಮರ್ಶೆ ಕ್ಷೀಣ. ಓದುಗನ ಅಥವಾ ವೀಕ್ಷಕನ ವಿಚಾರಶಕ್ತಿಯನ್ನು ಹೆಚ್ಚಿಸದ, ಬದಲಿಗೆ ಅದನ್ನು ದಿಕ್ಕು ತಪ್ಪಿಸುವ ಮಾಧ್ಯಮ ಸೌಂದರ್ಯ ನಾಶದ ಉಪಕರಣ.
ಜೋಶಿಯವರ ಒಂದು ಆಶ್ಚರ್ಯಕಾರಿ ಹೇಳಿಕೆ ಇದೆ: “ಶಸ್ತ್ರದಿಂದಲೂ ಆ್ಯಟಂಬಾಂಬಿನಿಂದಲೂ ಆಗದ ಕೆಲಸ ನಗುವಿನಿಂದಾಗಬಲ್ಲದು.” ಹಾಸ್ಯ ಮತ್ತು ವಿಡಂಬನ ಸಾಮಾಜಿಕ ಬದಲಾವಣೆಯ ಶಕ್ತಿ ಎಂದು ಅವರು ನಂಬಿದ್ದರು. ಇದು ಕೇವಲ ಮನರಂಜನೆಯ ಮಾತಲ್ಲ. ಇದು ಅಧಿಕಾರ ರಚನೆಯ ವಿರುದ್ಧ ಜನರ ಕೈಯಲ್ಲಿ ಇರುವ ಅಸ್ತ್ರ. ನಗುವಿನ ಹೆದರಿಕೆ ತಪ್ಪಿದ್ದರಿಂದ ಅಧಿಕಾರಿಗಳು ಅನ್ಯಾಯಿಗಳಾಗುವರು ಎಂಬ ಮಾತಿನ ತಾತ್ಪರ್ಯ ಇದೇ — ಜವಾಬ್ದಾರಿ ಇರದ ಅಧಿಕಾರ ಭ್ರಷ್ಟಗೊಳ್ಳುತ್ತದೆ ಮತ್ತು ಜವಾಬ್ದಾರಿ ಹೇರುವ ಶಕ್ತಿ ಜನರ ಧ್ವನಿ, ನಗು, ವಿಡಂಬನ.
ಇಂದಿನ ಸ್ಟ್ಯಾಂಡ್-ಅಪ್ ಕಾಮಿಡಿ ಕಲಾವಿದರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ ಎಂದರೆ, ಅಧಿಕಾರ ನಗುವಿನ ಹೆದರಿಕೆ ಕಳೆದುಕೊಂಡಿದೆ ಎಂಬ ಅರ್ಥ ಅಲ್ಲ— ಬದಲಿಗೆ ನಗು ಹೆದರಿಸುತ್ತದೆ ಎಂಬ ಅರ್ಥ. ಅಧಿಕಾರ ನಗಿಸಿಕೊಂಡು ಅಧಿಕಾರದಲ್ಲಿ ಇರಬಲ್ಲ ಶಕ್ತಿ ಕಳೆದುಕೊಂಡಾಗ ನಗಿಸುವವರ ಮೇಲೆ ಮೊಕದ್ದಮೆ ಹಾಕುತ್ತದೆ. ಇದೂ ಸೌಂದರ್ಯ ನಾಶ.
“ಒಳ-ಹೊರಗಣ ಪ್ರಾಮಾಣಿಕತನ, ಸುಸಂಬದ್ಧತೆಯನ್ನು ಕಾಯ್ದುಕೊಂಡು ಜೀವನದಲ್ಲಿ ಸೌಂದರ್ಯವನ್ನು ಅಳವಡಿಸಿ ಆನಂದದಿಂದ ಒಬ್ಬರೊಬ್ಬರೊಡನೆ ನಕ್ಕು ನಗಿಸುತ್ತ ಭೂಲೋಕದಲ್ಲಿಯೇ ಸ್ವರ್ಗಸುಖವನ್ನು ಅನುಭವಿಸುವುದು” ಇದು ಜೋಶಿಯವರ ಆದರ್ಶ ಸಮಾಜದ ಚಿತ್ರ. ಈ ಚಿತ್ರ ಇಂದು ಎಷ್ಟು ದೂರ ಎಂದು ಕೇಳಿದರೆ, ಉತ್ತರ ಕಷ್ಟದ್ದು. ಅನ್ಯಾಯ, ಅನೀತಿ, ಕ್ರೂರತನ ಇಂದು ಸಾರ್ವಜನಿಕ ಜೀವನದಲ್ಲಿ ಎಷ್ಟು ಸಾಮಾನ್ಯ ಎಂದರೆ ಅವು ಸುದ್ದಿಯೇ ಅಲ್ಲ. ಕ್ರೂರತೆ ಮಾಮೂಲಾದಾಗ ಮನಸ್ಸು ಮಂಕಾಗುತ್ತದೆ, ಸೌಂದರ್ಯ ಪ್ರಜ್ಞೆ ಮೊಟಕಾಗುತ್ತದೆ. “ಸೌಂದರ್ಯದ ಸ್ಪರ್ಶವನ್ನರಿಯದ ಜೀವ ಜೀವಂತವಾಗಿದ್ದರೂ ಮರಣವನ್ನು ಅನುಭವಿಸುತ್ತದೆ.”
ಆದರೆ ಜೋಶಿಯವರ ದೃಷ್ಟಿ ನಿರಾಶಾವಾದಿಯಲ್ಲ. ಅವರು ಮಹಾತ್ಮಾ ಗಾಂಧಿಯವರ ಉದಾಹರಣೆ ಕೊಟ್ಟಿದ್ದಾರೆ. “ಲೋಕದ ದುಃಖಗಳನ್ನು ಕಂಡು ಕಳವಳವಾಗಿ ಅದರ ನಿವಾರಣೆಗಾಗಿ ದೇಹ-ಬುದ್ಧಿಗಳನ್ನು ಚಂದನದಂತೆ ತೇಯ್ದವನು ರಸಿಕ.” ಇಲ್ಲಿ ರಸಿಕ ಎಂದರೆ ಸಂವೇದನಾಶೀಲ ಕ್ರಿಯಾಶೀಲ ವ್ಯಕ್ತಿ. ಕಾವ್ಯ ಓದಿ ಮೆಚ್ಚುವವ ಮಾತ್ರ ರಸಿಕನಲ್ಲ; ಲೋಕದ ಕ್ರೌರ್ಯ ಕಂಡು ಮಿಡಿದು ಅದನ್ನು ಕಡಿಮೆ ಮಾಡಲು ತನ್ನನ್ನು ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ರಸಿಕರೇ.
ಜೋಶಿಯವರ ಈ ಬರಹ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಎಂಬ ಮಿತಿಯನ್ನು ಮೀರಿ ಮಾನವ ಸ್ಥಿತಿಯ ಬಗ್ಗೆ ಒಂದು ಗಂಭೀರ ಚಿಂತನ ಮಾಲೆಯಾಗಿ ಉಳಿದಿದೆ. ಅದರ ಮೂಲ ಸೂತ್ರವಿದು: ಸೌಂದರ್ಯ ಬಾಹ್ಯ ಅಲಂಕಾರ ಮಾತ್ರವಲ್ಲ; ಅದು ಒಳ-ಹೊರಗಿನ ಸಾಮರಸ್ಯ. ಸ್ವಾತಂತ್ರ್ಯ, ಸತ್ಯ, ನ್ಯಾಯ, ವೈವಿಧ್ಯ, ಹೊಸತನ, ವಿಮರ್ಶೆ— ಇವೆಲ್ಲ ಸೌಂದರ್ಯದ ಅವಿಭಾಜ್ಯ ಅಂಶಗಳು. ಇವು ಇಲ್ಲದ ಸಮಾಜ ಸೌಂದರ್ಯಹೀನ ಮತ್ತು ಸೌಂದರ್ಯಹೀನ ಸಮಾಜ ಅಂತಿಮವಾಗಿ ಮನುಷ್ಯ ವಿರೋಧಿ.
“ಸೌಂದರ್ಯದ ಕಣ್ಣು ಅರಳಿದಲ್ಲಿ ಲೋಕದೊಳಗಿನ ಕುರೂಪತೆ(ಅನ್ಯಾಯ, ಅನೀತಿ, ಕ್ರೂರತನ) ಅದೆಷ್ಟೋ ಕಡಿಮೆಯಾದೀತು” ಎಂಬ ಜೋಶಿಯವರ ಈ ಆಶಾಭಾವ ಇಂದಿಗೂ ಅಷ್ಟೇ ಸತ್ಯ. ಸೌಂದರ್ಯ ಪ್ರಜ್ಞೆ ಬೆಳೆದಷ್ಟೂ ನ್ಯಾಯ ಪ್ರಜ್ಞೆ ಬೆಳೆಯುತ್ತದೆ. ಅನ್ಯಾಯ ತಡೆದುಕೊಳ್ಳುವ ಸಹನೆ ಕಡಿಮೆಯಾಗುತ್ತದೆ. ವಿಭಿನ್ನತೆ ಸಹಿಸಿಕೊಳ್ಳುವ ಮನೋಭಾವ ಹೆಚ್ಚಾಗುತ್ತದೆ.
ಹಾಗಾದರೆ ಇಂದು ನಮ್ಮ ಕರ್ತವ್ಯ ಏನು? ಜೋಶಿಯವರ ಮಾತಿನಲ್ಲೇ ಉತ್ತರ ಇದೆ: “ಬಾಳಿನಲ್ಲಿ ಬೆಲೆಗಳು ಪ್ರಮಾಣಬದ್ಧವಾಗಲು ಸು-ವರ್ಣದ, ಸೌಂದರ್ಯದ ಅರಿವನ್ನು ಜನಕ್ಕೆ ತಂದುಕೊಡುವುದೇ ತಿಳಿದವರ ಮೊದಲ ಕೆಲಸ.” ಅಂದರೆ ಸ್ವತಂತ್ರವಾಗಿ ಯೋಚಿಸಲು, ಪ್ರಶ್ನಿಸಲು, ವಿಮರ್ಶಿಸಲು ಕಲಿಸುವ ಶಿಕ್ಷಣ; ಅಸ್ಮಿತೆ ಮತ್ತು ವ್ಯಕ್ತಿತ್ವ ಉಳಿಸಿಕೊಳ್ಳಲು ದಾರಿ ಮಾಡುವ ಸಾಹಿತ್ಯ; ಮಾಮೂಲು ನ್ಯಾಯ ಅಲ್ಲ ಎಂದು ತೋರಿಸಿಕೊಡುವ ಕಲೆ; ಜನರ ನಗೆ ಮತ್ತು ವಿಮರ್ಶೆಯ ದನಿ ಕ್ಷೀಣಗೊಳ್ಳದಂತೆ ರಕ್ಷಿಸುವ ಪ್ರಜ್ಞಾಪೂರ್ವಕ ಕ್ರಿಯೆ— ಇವೇ ಇಂದಿನ ಸೌಂದರ್ಯೋಪಾಸನೆ.
“ಎಲ್ಲೆಲ್ಲೂ ಮೂಡಿ, ಮಿಂಚಿ ಹೊರಸೂಸುತ್ತಿರುವ ಆ ಸೌಂದರ್ಯವು ಅಂದಅಂದದಲ್ಲಿ ನಮ್ಮ ಅಂತರಂಗದೊಳಗೂ ಬೆಳಗಿ ನಮ್ಮನ್ನು ಪವಿತ್ರಗೊಳಿಸಲಿ. ಮಾನವ ಕುಲವನ್ನು ಮೇಲೆತ್ತಲಿ” ಎಂದು ಜೋಶಿಯವರು ಮಂಗಳ ಹಾಡಿ ಮುಗಿಸಿದ್ದಾರೆ. ಈ ಮಾತು ಪ್ರಾರ್ಥನೆಯಾಗಿ ಮಾತ್ರ ಉಳಿಯಬಾರದು; ಅದು ಕ್ರಿಯಾಕಾರ್ಯಕ್ರಮ ಆಗಬೇಕು. ಸೌಂದರ್ಯ ಕೇವಲ ಅನುಭವಿಸುವ ವಿಷಯ ಅಲ್ಲ. ಅದನ್ನು ಕಾಪಾಡಬೇಕು, ಬೆಳೆಸಬೇಕು, ಅದರ ಶತ್ರುಗಳ ವಿರುದ್ಧ ಹೋರಾಡಬೇಕು. “ಚೆಲವು ನಮಗೊಲಿಯಲಿ” ಎಂಬ ಆಶೆ ತೀರಲು ನಾವು ಚೆಲುವಿಗೆ ಒಲಿಯಬೇಕು.
ಡಾ. ರವಿ ಎಂ ಸಿದ್ಲಿಪುರ
ಇವರು ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಪಂಪನೋದು: ಪಠ್ಯ, ಸಂಕಥನ ಮತ್ತು ರಾಜಕಾರಣ


