ಬೆಂಗಳೂರು : ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅನಧಿಕೃತವಾಗಿ, ಅನೈತಿಕವಾಗಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರವುಗೊಳಿಸಿದ್ದಾರೆ.
ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ. ಹಿಂದಿಯನ್ನು ಯಾವುದೋ ಒಂದು ಬಾಗಿಲಲ್ಲಿ ತಂದು ಹಾಕುವುದನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಹಿಂದಿ ಸಾಮ್ರಾಜ್ಯಶಾಹಿಗಳ ಸಂಚನ್ನು ನಾವು ವಿಫಲಗೊಳಿಸುತ್ತಲೇ ಬರುತ್ತೇವೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಗೆ ಯಾವುದೇ ಅವಕಾಶವನ್ನು ನಾವು ನೀಡುವುದಿಲ್ಲ ಪ್ರತಿಭಟನಕಾರರು ಎಚ್ಚರಿಸಿದರು.
1954ರ ಅಕ್ಟೋಬರ್ 21ರಂದು (BEL ಸ್ಥಾಪನೆಯಾದಾಗ) ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕೆಂಗಲ್ ಹನುಮಂತಯ್ಯ. ಅವರು ಮುತುವರ್ಜಿ ವಹಿಸಿ ಬಿಇಎಲ್ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು. ಅವರು ಈ ಸಂಸ್ಥೆಯನ್ನು ಬರಮಾಡಿಕೊಂಡಿದ್ದು ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಲಿ ಎಂದಲ್ಲ. ರಕ್ಷಣಾ ಸಂಸ್ಥೆಗಳ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಈ ಸಂಸ್ಥೆಯನ್ನು ಹುಟ್ಟುಹಾಕುವ ಜೊತೆಗೆ, ಪೋಷಿಸಿ ಬೆಳೆಸಿಕೊಂಡು ಬಂದವರು ಕನ್ನಡಿಗರು. ಆದರೆ ಇದೇ ಸಂಸ್ಥೆಯ ಮೂಲಕ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅನಧಿಕೃತವಾಗಿ ಹಿಂದಿ ಫಲಕವನ್ನು ಹಾಕಿಸುವ ಉದ್ದೇಶವಾದರೂ ಏನು? ಅದೂ ಕೂಡ ಸಂಸ್ಥೆಯ ಒಳಗಿನ ಭಾಗದಲ್ಲಿ ಅಲ್ಲ, ಸಾರ್ವಜನಿಕ ರಸ್ತೆಯಲ್ಲಿ ಹಿಂದಿಯನ್ನು ಮೆರೆಸಲು ಏನು ಕಾರಣ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಬಿಇಎಲ್ ಮಾತ್ರವಲ್ಲದೆ, ಬಿಇಎಂಎಲ್, ಎಚ್ ಎ ಎಲ್, ಐಟಿಐನಂಥ ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಬೆಂಗಳೂರನ್ನು ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಿದ್ದು ಈ ಸಂಸ್ಥೆಗಳು. ಇಷ್ಟೇ ಅಲ್ಲದೆ ಸಿಎಸ್ ಐಆರ್, ಎಚ್ ಎಂಟಿ ನಂಥ ಸಂಸ್ಥೆಗಳೂ ಇಲ್ಲಿವೆ. ಈ ಸಂಸ್ಥೆಗಳನ್ನು ನಾವು ಹಿಂದಿಯನ್ನರಿಗೆ ಬರೆದುಕೊಟ್ಟಿಲ್ಲ. ಈ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಮಾಡುವುದು ದೊಡ್ಡ ಕುತಂತ್ರದ ಭಾಗ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಿಇಎಲ್ ವೃತ್ತದಲ್ಲಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಕಿತ್ತು ಹಾಕಿದೆ. ನಾಮಫಲಕ ಅಳವಡಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವ ಮಾಡಿರುವ ಬಿಇಎಲ್ ಆಡಳಿತ ಮಂಡಳಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು. ಬಿಇಎಲ್ ಆಡಳಿತ ಮಂಡಳಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭವಿಷ್ಯದಲ್ಲಿ ಇಂಥ ಅಧಿಕಪ್ರಸಂಗಿತನವನ್ನು ಯಾರೇ ಮಾಡಿದರೂ ಕರ್ನಾಟಕ ರಕ್ಷಣಾ ವೇದಿಕೆ ಅತ್ಯುಗ್ರವಾಗಿ ಪ್ರತಿಭಟಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ.
ಪ್ರತಿಭಟನೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಟಿ.ಎ.ಧರ್ಮರಾಜ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು. ಪ್ರತಿಭಟನೆಯಲ್ಲಿ ಕರವೇ ರಾಜ್ಯ ಮುಖಂಡರಾದ ಗೋಮೂರ್ತಿ ಯಾದವ್, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಗೌಡ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

