ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೆಟ್ ಬುಕಿಂಗ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಇಂದು ಆರಂಭವಾಗಿದ್ದು, ಬೆಂಗಳೂರಿನಲ್ಲಿ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಗಡ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಪ್ರತಿ ಗಂಟೆಗೆ 25 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗುತ್ತಿರುವುದು ವರದಿಯಾಗಿದೆ. ಕೆಲವು ಅವಧಿಯಲ್ಲಿ ಗಂಟೆಯೊಂದಕ್ಕೆ ಸುಮಾರು 27 ಸಾವಿರ ಟಿಕೆಟ್ಗಳವರೆಗೂ ಮಾರಾಟವಾಗಿರುವ ಮಾಹಿತಿ ಕೂಡ ಲಭ್ಯವಾಗಿದೆ. ಈ ವೇಗದ ಬುಕಿಂಗ್ ಚಿತ್ರತಂಡ ಹಾಗೂ ಯಶ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬುಕ್ಮೈಶೋ (BookMyShow)ನಲ್ಲಿ ‘ಟಾಕ್ಸಿಕ್’ ಸಿನಿಮಾಗೆ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿಸಿದ್ದರು. ಆದರೆ ಈ ಸಂಖ್ಯೆ ಟಿಕೆಟ್ ಖರೀದಿಸಿದವರ ಸಂಖ್ಯೆಯಲ್ಲ, ಸಿನಿಮಾವನ್ನು ವೀಕ್ಷಿಸಲು ಆಸಕ್ತಿ ದಾಖಲಿಸಿರುವವರ ಸಂಖ್ಯೆ ಎಂಬುದನ್ನು ಗಮನಿಸಬೇಕಿದೆ.
ಮತ್ತೊಂದೆಡೆ, ಮುಂಗಡ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ದೇಶಾದ್ಯಂತ ಬುಕ್ಮೈಶೋನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ ಎಂಬ ವರದಿಯೂ ಹೊರಬಿದ್ದಿದೆ. ಕರ್ನಾಟಕ ಮಾರುಕಟ್ಟೆಯಲ್ಲೇ ಮುಂಗಡ ಬುಕಿಂಗ್ ಸುಮಾರು 5 ಕೋಟಿ ರೂಪಾಯಿ ಗಡಿ ತಲುಪಿದೆ ಎಂದು ವರದಿಗಳು ತಿಳಿಸಿವೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರವಾಗಿರುವ ‘ಟಾಕ್ಸಿಕ್’ಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲೂ ಮುಂಗಡ ಬುಕಿಂಗ್ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಪ್ರದರ್ಶನಗಳು ವೇಗವಾಗಿ ಭರ್ತಿಯಾಗುತ್ತಿವೆ. ಸಿನಿಮಾ 2D, IMAX 2D, 4DX ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಬಿಡುಗಡೆಯಾಗಲಿದೆ.
ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ತಾರೆಯರು ನಟಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಈಗಾಗಲೇ ಮುಂಗಡ ಟಿಕೆಟ್ ಮಾರಾಟದಲ್ಲೇ ಇಷ್ಟೊಂದು ವೇಗ ಕಂಡುಬಂದಿರುವುದು ‘ಟಾಕ್ಸಿಕ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ.

