‘ನನ್ನ ಚಿಕ್ಕತಾಯಿ’ : ಸಮಾಜಶಾಸ್ತ್ರೀಯ ಶೋಧ

ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಕನ್ನಡದ ಮೊದಲ ಸಣ್ಣಕತೆಯಾಗಿ, ಮೇಲ್ವರ್ಗಕ್ಕೆ ಸೇರಿದ ಕುಟುಂಬವೊಂದರ ಸಾಕುತಾಯಿ ಮತ್ತು ಮಗನ ಕಥೆಯಷ್ಟನ್ನೇ ಹೇಳುವುದಿಲ್ಲ. ಅದು, ನಂಬಿಕೆಯ ಹೆಸರಿನಲ್ಲಿ ಸ್ತ್ರೀಯರನ್ನು ವಂಚಿಸುವ ಧಾರ್ಮಿಕ ಚೌಕಟ್ಟು, ಆಸ್ತಿ ಮತ್ತು ಅಧಿಕಾರಕ್ಕಾಗಿ ಸ್ತ್ರೀಯರನ್ನು ಬಳಸಿಕೊಳ್ಳುವ ಪುರುಷ ಪ್ರಪಂಚ ಹಾಗೂ ಬಾಹ್ಯ ಸದಾಚಾರಕ್ಕಷ್ಟೇ ಬೆಲೆ ಕೊಟ್ಟು ಒಳಗಿನ  ಶೋಷಣೆಯನ್ನು ಕಣ್ಣುಮುಚ್ಚಿ ಬೆಂಬಲಿಸುವ ಸಮಾಜದ ಮುಖವಾಡವನ್ನು ಕಳಚಿಡುವ ಸಾಂಸ್ಕೃತಿಕ ವಿಮರ್ಶೆಯಾಗಿದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.

ಇತ್ತೀಚೆಗೆ ಕನ್ನಡ ಪ್ರಾಧ್ಯಾಪಕ ದೇವರಾಜ್ ಸರ್, ಒಂದು ಸಂಜೆ ಫೋನ್ ಮಾಡಿ “ಸರ್, ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಕಥೆಯನ್ನು ಚರ್ಚಿಸೋಣ. ಕಥೆ ಕಳುಹಿಸುವೆ. ಸಮಯ ಮಾಡಿಕೊಳ್ಳಿರಿ” ಎಂದರು. ನಾನು “ಆಗಲಿ ಸರ್. ರಾತ್ರಿ ಮಾತಾಡೋಣ” ಎಂದು ಪ್ರತಿಯಾಗಿ ಹೇಳಿದೆ. ಹೀಗಾಗಿ ಮತ್ತೊಮ್ಮೆ ‘ನನ್ನ ಚಿಕ್ಕತಾಯಿ’ ಕಥೆಯನ್ನು ಓದಿದೆ.

ಜುಲೈ 1900ರಲ್ಲಿ ಮಂಗಳೂರಿನ ‘ಸುವಾಸಿನಿ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ‘ನನ್ನ ಚಿಕ್ಕತಾಯಿ’ ಕಥೆಯು ಕನ್ನಡ ಸಣ್ಣಕಥಾ ಪರಂಪರೆಗೆ ಹೊಸ ಹಾದಿ ನಿರ್ಮಿಸಿಕೊಟ್ಟದ್ದಾಗಿದೆ. ಕೇವಲ ಘಟನಾವಳಿಗಳನ್ನು ನಿರೂಪಿಸುವ ಸಾಂಪ್ರದಾಯಿಕ ಕಥನ ಶೈಲಿಯಿಂದ ಹೊರಬಂದು, ವ್ಯಕ್ತಿಗತ ಮನೋವ್ಯಾಪಾರ, ಸಾಮಾಜಿಕ ವಿಡಂಬನೆ ಮತ್ತು ವ್ಯಂಗ್ಯಭರಿತ ನಿರೂಪಣೆಯನ್ನು ಒಳಗೊಂಡಿರುವುದು ಈ ಕಥೆಯ ವಿಶೇಷ. ಶತಮಾನದ ಹಿಂದೆ ರೂಪುಗೊಂಡ ಈ ಕಥೆಯನ್ನು ಇಂದು ಪುನರ್ವಾಚನಕ್ಕೆ ಒಳಪಡಿಸಿದಾಗ, ಅದು ಕೇವಲ ಒಬ್ಬ ಹುಂಬ ಹುಡುಗ ಹಾಗೂ ಮುದುಕಿ ಚಿಕ್ಕತಾಯಿಯ ನಡುವಿನ ಹಾಸ್ಯಸ್ಪಂದನವಾಗಿಷ್ಟೇ ಕಾಣುವುದಿಲ್ಲ; ಬದಲಿಗೆ, ತಂದೆ-ತಾಯಿ ಇಲ್ಲದ, ಸಮಾಜದಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುವ ಯುವಕನೊಬ್ಬನ ಸ್ವಾರ್ಥ, ಸಾಮಾಜಿಕ ಚೌಕಟ್ಟುಗಳು ಮಹಿಳೆಯನ್ನು ರೂಪಿಸುವ ಪರಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯ ಸೂಕ್ಷ್ಮ ಪದರಗಳನ್ನು ತೆರೆದಿಡುತ್ತದೆ. ಇಲ್ಲಿ ಪಂಜೆ ಮಂಗೇಶರಾಯರು ಬಳಸುವ ಮೇಲ್ನೋಟದ ಹಾಸ್ಯ ಮತ್ತು ವಿಡಂಬನೆಗಳು ಕೇವಲ ವಿನೋದಕ್ಕಾಗಿ ಅಲ್ಲ; ಬದಲಿಗೆ ಸಮಾಜದ ಕಟು ವಾಸ್ತವವನ್ನು ಹಾಗೂ ಪುರುಷ ಪ್ರಪಂಚದ ಸ್ವಾರ್ಥವನ್ನು ತೀಕ್ಷ್ಣವಾಗಿ ಅನಾವರಣಗೊಳಿಸುವ ಪ್ರಬಲ ಕಥನ ತಂತ್ರವಾಗಿ ಕೆಲಸ ಮಾಡುತ್ತವೆ. ಹೀಗೆ ಕೇವಲ ನೂರು ವರ್ಷಗಳ ಹಿಂದಿನ ಕಥೆಯಾಗಿ ಉಳಿಯದೆ, ಇಂದಿಗೂ ನಮಗರಿವಿಲ್ಲದಂತೆ ಕ್ರಿಯಾಶೀಲವಾಗಿರುವ ಸಾಮಾಜಿಕ ಸೂಕ್ಷ್ಮಗಳನ್ನು ಬಿಚ್ಚಿಡುತ್ತದೆ.

ಆತ್ಮಕಥನ ಶೈಲಿಯಲ್ಲಿ ನಿರೂಪಿತವಾದ ಈ ಕಥೆಯ ಕೇಂದ್ರದಲ್ಲಿ ನಾಯಕ ಮತ್ತು ಅವನ ಅರವತ್ತು ವರ್ಷದ ‘ಯುವತಿ’ ಚಿಕ್ಕತಾಯಿ. ತಂದೆತಾಯಿ ಮೃತಪಟ್ಟ ನಾಯಕನಿಗೆ ಚಿಕ್ಕಪ್ಪನ ಮನೆಯೇ ಆಶ್ರಯ. ತನಗೆ ಉಣ್ಣಲು ಅನ್ನ ನೀಡುವ ಚಿಕ್ಕತಾಯಿ(ಅವಚಿ)ಯ ಮನೆಯಲ್ಲಿದ್ದಾನೆ. ಆ ಚಿಕ್ಕತಾಯಿಯು ಮದುವೆಯಾದ ತಕ್ಷಣವೇ ಗಂಡನಿಂದ ಪರಿತ್ಯಕ್ತಳಾದವಳು. ಕಥಾನಾಯಕನಿಗೆ ಚಿಕ್ಕತಾಯಿಯನ್ನು ನೋಡಿದರೆ “ಮೈಯೆಲ್ಲ ಉರಿಯುತ್ತಿತ್ತು” ಎಂಬ ಒಂದೇ ಸಾಲು ಅವನ ಅಸಹನೆಯನ್ನು ಹೇಳುತ್ತದೆ. “ಉಪ್ಪನ್ನ ಕೊಡುವವರು ಬೇರೆ ಯಾರೂ ಇಲ್ಲ” ಎಂಬ ಅನಿವಾರ್ಯತೆ ಅವನ ಅವಲಂಬನೆಯನ್ನು ತೋರಿಸುತ್ತದೆ. ಹೀಗೆ ಆಕೆಯ ಮೇಲೆ ಕೋಪ, ಜುಗುಪ್ಸೆ ಇದ್ದರೂ, ಆಕೆಯ ಮರಣಾನಂತರ ಸಿಗಬಹುದಾದ ಆಸ್ತಿ ಮತ್ತು ನಗನಾಣ್ಯಗಳ ಮೇಲಿನ ಲೆಕ್ಕಾಚಾರದಿಂದ ಆಕೆಯನ್ನು ಸಹಿಸಿಕೊಂಡಿರುತ್ತಾನೆ. ಅಷ್ಟೇ ಅಲ್ಲದೆ, ಹೊಸಪೇಟೆ ರಾಜಣ್ಣನವರ ಮಗಳು ಸಕಲಾವತಿಯ ಜೊತೆ ತನ್ನ ಮದುವೆ ಪ್ರಸ್ತಾಪ ನಡೆದಿರುವುದರಿಂದ, ಈ ಭವಿಷ್ಯದ ಆಸರೆಯೇ ಅವನ ತರ್ಕಕ್ಕೆ ಕಾರಣವಾಗಿದೆ.

ಒಮ್ಮೆ ಮುಕ್ತಪುರಕ್ಕೆ ಪೌರಾಣಿಕರ ಜಪ-ತಪ ನೋಡಲು ದೋಣಿಯಲ್ಲಿ ತೆರಳಿದ ಚಿಕ್ಕತಾಯಿ, ಅಲ್ಲಿಂದ ಹಿಂತಿರುಗಿದಾಗ ತನ್ನ ಒಡವೆಗಳ ಗಂಟು ಕಾಣೆಯಾಗಿದೆ ಎಂದು ಗೋಳಾಡುತ್ತಾಳೆ. ವಿಶೇಷವಾಗಿ, ಪೌರಾಣಿಕರೊಬ್ಬರು ಕೊಟ್ಟಿದ್ದ ‘ಆನೆಜಮೆಸರ'(ಆನೆಯ ಕೂದಲುಗಳಿಂದ ಮಾಡಿದ, ಚಿನ್ನದಿಂದ ಬಿಗಿದ ಸರ) ಕಳೆದುಹೋಗಿರುವುದಕ್ಕೆ ಆಕೆ ಅಪಾರವಾಗಿ ದುಃಖಿಸುತ್ತಾಳೆ. ಆ ಸರವನ್ನು ಜಪಿಸಿದರೆ ಕಳೆದುಹೋದ ಗಂಡ ಮರಳಿ ಬರುತ್ತಾನೆಂಬ ದೃಢ ನಂಬಿಕೆ ಆಕೆಯದ್ದು. ಆಕೆಯ ಈ ನಂಬಿಕೆಯನ್ನು ಬಳಸಿಕೊಂಡು ತನ್ನ ಆಸ್ತಿಯ ಭವಿಷ್ಯವನ್ನು ಕಾಯ್ದುಕೊಳ್ಳಲು ಕಥಾನಾಯಕನು ಹೇಗಾದರೂ ಮಾಡಿ ಅದೇ ರೀತಿಯ ನಕಲಿ ಆನೆಜಮೆಸರವನ್ನು ಸಿದ್ಧಪಡಿಸಲು ನಿರ್ಧರಿಸುತ್ತಾನೆ. ಇದಕ್ಕಾಗಿ ಆತ ಗೋವಿಂದರಾಯರ ಮನೆಯಲ್ಲಿ ಕೆಲಸ ಮಾಡುವ ಸೋಮಿ ಎಂಬ ಹೆಂಗಸಿನ ದಪ್ಪನೆಯ ಕೂದಲನ್ನು ಪಡೆದು, ಅಕ್ಕಸಾಲಿಗನಿಂದ ನಕಲಿ ಸರ ಮಾಡಿಸುತ್ತಾನೆ.

ಆದರೆ, ಈ ಸರವನ್ನು ತಂದು ಚಿಕ್ಕತಾಯಿಗೆ ನೀಡುವಷ್ಟರಲ್ಲಿ, ಆತನ ಶಂಕಿತ ನಡವಳಿಕೆಯಿಂದಾಗಿ ಪೊಲೀಸರು ಆತನನ್ನು ಬಂಧಿಸಲು ಬರುತ್ತಾರೆ. ಅದೇ ವೇಳೆಗೆ ಮುಕ್ತಪುರದಿಂದ ಪೌರಾಣಿಕರ ಆಳು ಬಂದು ಕಾಗದವೊಂದನ್ನು ನೀಡುತ್ತಾನೆ. ಆ ಕಾಗದದಲ್ಲಿ, “ನೀವು ಎರಡು ತಿಂಗಳ ಹಿಂದೆ ಇಲ್ಲಿ ಬಂದಾಗ, ಮಂದಿರದಲ್ಲಿ ನಡೆಯುವ ಪುರಾಣ ಶ್ರವಣಕಾಲದಲ್ಲಿ ನಿಮ್ಮ ನಗಗಳ ಗಂಟನ್ನು ಇಲ್ಲಿ ಮರೆತುಬಿಟ್ಟು ಹೋದಿರಿ. ನಿಮ್ಮ ಆನೆಜಮೆಸರವು ನಿಮ್ಮ ಜಪಕ್ಕೆ ನಿತ್ಯವೂ ಅವಶ್ಯವೆಂದು ಸ್ವತಃ ಗೊತ್ತಿದ್ದುದರಿಂದ, ಈ ಕಾಗದ ತರುವವನ ಕೈಯಲ್ಲಿ ಅದನ್ನು ಕಳಿಸಿರುತ್ತೇನೆ. ತಮ್ಮ ಮಿಕ್ಕ ನಗಗಳು ದೇವಪ್ರತಿಮೆಯ ಅಲಂಕಾರಕ್ಕಾಗಿ ಇಲ್ಲಿ ಇಟ್ಟಿರುತ್ತೇವೆ” ಎಂಬ ಸುದ್ದಿ ಇರುತ್ತದೆ. ಈ ಘಟನೆಯಿಂದ ಕಥಾನಾಯಕನ ಪೋಕರಿತನ, ಸೋಮಿಯ ಜೊತೆಗಿನ ಆತನ ಒಡನಾಟಗಳು ಸಮಾಜಕ್ಕೆ ಬಹಿರಂಗವಾಗಿ, ಆತನ ಮದುವೆ ಪ್ರಸ್ತಾಪ ಮುರಿದುಬಿದ್ದು, ಆತ ಸಾಮಾಜಿಕವಾಗಿ ಸಂಪೂರ್ಣವಾಗಿ ತೇಜೋವಧೆಗೆ ಒಳಗಾಗುತ್ತಾನೆ.

ಪಂಜೆ ಮಂಗೇಶರಾಯರು ಈ ಕಥೆಯಲ್ಲಿ ಸ್ತ್ರೀಪಾತ್ರವಾದ ಅವಚಿಯನ್ನು ಎರಡು ದೃಷ್ಟಿಕೋನಗಳಿಂದ ನಿರ್ಮಿಸುತ್ತಾರೆ: ಒಂದು ನಾಯಕನ ಪುರುಷ ದೃಷ್ಟಿ, ಇನ್ನೊಂದು ಅವಳ ಸ್ವತಂತ್ರ ಅಸ್ತಿತ್ವ. ಈ ದ್ವಂದ್ವವೇ ಕಥೆಯನ್ನು ಸ್ತ್ರೀನೋಟದಿಂದ ವಿಶ್ಲೇಷಿಸಲು ಮುಖ್ಯ ಆಧಾರವೆನಿಸುತ್ತದೆ.

ಅವಚಿಯನ್ನು ನಾಯಕ “ಅರವತ್ತು ವರ್ಷದ ಯುವತಿ” ಎಂದು ಕರೆಯುತ್ತಾನೆ. ಈ ವಿರೋಧಾಭಾಸವೇ ಅವಳ ಸ್ಥಿತಿಯನ್ನು ಹೇಳುತ್ತದೆ. “ಹಣೆಯಲ್ಲಿ ಕುಂಕುಮ, ಗಂಡನು ಮದುವೆಯಾದೊಡನೆಯೇ ಊರುಬಿಟ್ಟು ಹೋದುದರಿಂದ ಯಾವಾಗಲೂ ಮುತ್ತೈದೆ” ಈ ಸಾಲು ಸಮಾಜವು ಹೆಂಗಸನ್ನು ಹೇಗೆ ಗುರುತಿಸುತ್ತದೆಂದು ತೋರಿಸುತ್ತದೆ. ಗಂಡ ಇಲ್ಲದಿದ್ದರೂ ಅವಳು ಮುತ್ತೈದೆಯೇ; ಕುಂಕುಮವೇ ಅವಳ ಸಾಮಾಜಿಕ ಗುರುತು. ಗಂಡನ ಅನುಪಸ್ಥಿತಿಯಲ್ಲಿ ಅವಳು ‘ಮುತ್ತೈದೆಯಾಗಿ’ ಉಳಿದಿರುವುದು ಸಮಾಜದ ವಿಚಿತ್ರವಾದ ಸ್ತ್ರೀನಿರ್ಮಾಣವನ್ನು ಪ್ರಶ್ನಿಸುತ್ತದೆ. ಅವಳು ಗಂಡನಿಗಾಗಿ ಕಾಯುವವಳು, ಆದರೆ ಗಂಡ ಬಾರದೇ ಇರುವಾಗ ಅವಳು ಸ್ವಯಂ ಸಮರ್ಥಳೆಂದು ಭಾವಿಸಲ್ಪಡುವುದಿಲ್ಲ. ಇದು ಪಿತೃಪ್ರಧಾನ ಸಮಾಜ ಸ್ತ್ರೀಯನ್ನು ಹೇಗೆ ‘ಕಾಯುವ ಸ್ಥಿತಿ’ಯಲ್ಲಿ ಇರಿಸುತ್ತದೆಂಬುದಕ್ಕೆ ಸಾಕ್ಷಿ. ಅವಳಿಗೆ ಗಂಡನ ಮರಳುವಿಕೆ ಎನ್ನುವುದು ಜೀವನದ ಪರಮಾವಧಿ. ಆಭರಣಗಳು ಅವಳಿಗೆ ಕೇವಲ ಆಸ್ತಿಯಲ್ಲ; ಅವು ಅವಳ ಆಶೆಯ ಪ್ರತೀಕಗಳು.

ಪೌರಾಣಿಕರು ಈ ಸಮಾಜದಲ್ಲಿ ಧಾರ್ಮಿಕ ಮತ್ತು ಪೌರಾಣಿಕ ವ್ಯವಸ್ಥೆಯ ಪ್ರತಿನಿಧಿಗಳಾಗಿದ್ದಾರೆ. ಅವರು ಜಪತಪ, ಸ್ನಾನಸಮಾಧಿಗಳ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಅವಚಿಗೆ ಪೌರಾಣಿಕರ ಮೇಲಿನ ಪ್ರೀತಿ ‘ಅಧಿಕ’. ಅವಳ “ಸರ್ವಸ್ವವು ಅವಳ ಮರಣವನ್ನು ನಿರಂತರ ಎದುರ್ನೋಡುತ್ತಿರುವ ಪೌರಾಣಿಕರ ಹಸ್ತಗತವಾಗುವುದು” ಎಂದು ನಾಯಕ ಶಂಕಿಸುತ್ತಾನೆ. ಇಲ್ಲಿ ಪೌರಾಣಿಕರು ಸಾಮಾಜಿಕವಾಗಿ ಅಜ್ಞಾನವನ್ನು ಬಳಸಿಕೊಳ್ಳುವ ಬೌದ್ಧಿಕ ವರ್ಗ. ಅವರು ದೇವರ ಅಲಂಕಾರಕ್ಕಾಗಿ ಅವಚಿಯ ಆಭರಣಗಳನ್ನು ಇಟ್ಟುಕೊಳ್ಳುತ್ತಾರೆ; ಅದು ಭಕ್ತರ ಅಜ್ಞಾನದ ಮೇಲಿನ ಅಧಿಕಾರ. ಅವರು ಕಳವು ಮಾಡದಿದ್ದರೂ, ಅವಳ ಭಕ್ತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಆ ಪತ್ರದಲ್ಲಿ “ತಮ್ಮ ಮಿಕ್ಕ ನಗಗಳು ದೇವಪ್ರತಿಮೆಯ ಅಲಂಕಾರಕ್ಕಾಗಿ ಇಲ್ಲಿ ಇಟ್ಟಿರುತ್ತೇವೆ. ಕೃಷ್ಣಾಷ್ಟಮಿಯ ಉತ್ಸವವೂ ಭಜನೆಯೂ ಈ ವರ್ಷ ವಿಶೇಷ ತರದ್ದಾಗಿರುವುದರಿಂದ ತಾವು ಬರಬೇಕಾಗಿ ಪೌರಾಣಿಕರು ಅಪೇಕ್ಷಿಸುತ್ತಾರೆ” ಎಂದು ಕೇಳಿಕೊಳ್ಳುವುದು, ಅವಳು ತಮ್ಮ ಆಧ್ಯಾತ್ಮಿಕ ಅಧೀನದಲ್ಲಿ ಇರಬೇಕೆಂಬ ಅವರ ಅಭಿಪ್ರಾಯವನ್ನು ತೋರಿಸುತ್ತದೆ.

ಪಂಜೆ ಮಂಗೇಶರಾಯರು

ಅವಚಿಯ ಪಾತ್ರವನ್ನು ಸಮಾಜ ಮತ್ತು ಪುರುಷ ಪಾತ್ರಗಳು ಹೇಗೆ ನಿರ್ಮಿಸುತ್ತಾ ಹೋಗುತ್ತವೆ ಎಂಬುದನ್ನು ನೋಡಬಹುದು. ಮೊದಲಿಗೆ, ಅವಳ ವಾತ್ಸಲ್ಯ ಮತ್ತು ನಿಷ್ಕಾಪಟ್ಯ. “ಅವಳು ಅಳುವುದನ್ನು ನೋಡಿ ನನ್ನ ಕಣ್ಣುಗಳಲ್ಲಿಯೂ ಒಂದೆರಡು ತಟುಕು ನೀರು ಒಸರಿತು” ಎಂಬಲ್ಲಿ ನಾಯಕನೂ ಕರಗುತ್ತಾನೆ. ಆದರೆ ಅದೇ ಅವಳನ್ನು ಶೋಷಣೆಗೆ ಗುರಿಯಾಗಿಸುತ್ತದೆ. ಅವಳು ಕಳೆದುಹೋದ ಆಭರಣಗಳಿಗಾಗಿ ರೋಧಿಸುವಾಗ ಅವಳ “ನಿಷ್ಕಾಪಟ್ಯವೂ, ಅವಳ ಸ್ಥೂಲಬುದ್ಧಿಯೂ, ಅವಳ ವಾತ್ಸಲ್ಯವೂ ಸ್ಫುಟವಾದುವು” ಎಂದು ನಾಯಕ ಒಪ್ಪಿಕೊಳ್ಳುತ್ತಾನೆ. ಈ ಗುಣಗಳೇ ಪುರುಷ ಸಮಾಜ ಅವಳಲ್ಲಿ ಮೆಚ್ಚುವ, ಆದರೆ ದುರ್ಬಲಗೊಳಿಸುವ ಗುಣಗಳು. ಅವಳು “ಹೊಟ್ಟೆಕಟ್ಟಿ ಕೂಡಿಸಿದ ಮೂರುಕಾಸುಗಳನ್ನು ನಿನಗೆ ಕೊಡಬೇಕೆಂದಿದ್ದೆನು” ಎಂದು ಹೇಳುವಾಗ, ಅವಳ ಆರ್ಥಿಕ ಸ್ವಾತಂತ್ರ್ಯವೂ ನಾಯಕನ ಸುತ್ತಲೇ ಕೇಂದ್ರೀಕೃತವಾಗಿರುತ್ತದೆ. ಸಮಾಜವು ಅವಳನ್ನು ‘ಸಾಕುವವಳು’ ಆದರೆ ‘ಸ್ವಾಮ್ಯ’ ಇಲ್ಲದವಳನ್ನಾಗಿಸುತ್ತದೆ.

ನಾಯಕನ ದೃಷ್ಟಿಯಲ್ಲಿ ಅವಳು ‘ಮುದಿ ಗೂಗೆ’, ‘ಹಾಳು ಮೂಳಿ’. ಪುರುಷನ ಮನಸ್ಸು ಸ್ತ್ರೀಯನ್ನು ವಸ್ತುವನ್ನಾಗಿಯೂ, ತಾಯಿಯನ್ನಾಗಿಯೂ, ಅವಲಂಬಿತೆಯನ್ನಾಗಿಯೂ ನೋಡುತ್ತದೆ. ಅವಳ ಕೂದಲು, ಅವಳ ನಗ, ಅವಳ ದೇಹದ ಪ್ರತಿಯೊಂದು ಅಂಶವೂ ಪುರುಷನ ಲೆಕ್ಕಾಚಾರದ ವಸ್ತುವಾಗುತ್ತದೆ. ನಾಯಕನು ಆನೆಜಮೆಸರಕ್ಕಾಗಿ ‘ಕ್ಷುದ್ರ ಸ್ತ್ರೀಯ ಗವಿಯಲ್ಲಿ’ ಸುಳಿದಾಡಿ, ಸೋಮಿಯ ಕೂದಲು ಪಡೆಯಲು ಯತ್ನಿಸುವುದು ಸ್ತ್ರೀ ದೇಹದ ಅಂಗಗಳು ಕೂಡ ಪುರುಷನ ಸ್ವಾರ್ಥಕ್ಕೆ ಎಷ್ಟು ಸುಲಭವಾಗಿ ಬಳಕೆಯಾಗುತ್ತವೆ ಎಂಬುದನ್ನು ತೋರಿಸುತ್ತದೆ. ಅವನು “ಕಾಸುಕೊಟ್ಟರೆ ಕೂದಲು ಕೊಡಲಾರಳೇ?” ಎಂದು ಯೋಚಿಸುವುದು, ಸ್ತ್ರೀಯನ್ನು ಕೇವಲ ಒಂದು ವಸ್ತುವಿನ ಮೂಲವಾಗಿಯಷ್ಟೇ ಆತ ನೋಡುತ್ತಾನೆ ಎಂಬುದಕ್ಕೆ ಪುರಾವೆಯಾಗಿದೆ. ಆತನಿಗೆ ಹೆಣ್ಣಿನ ಸೌಂದರ್ಯವಾಗಲೀ, ವ್ಯಕ್ತಿತ್ವವಾಗಲೀ ಮುಖ್ಯವಲ್ಲ; ತನ್ನ ಸ್ವಾರ್ಥಕ್ಕೆ ಆಕೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಷ್ಟೇ ಮುಖ್ಯ.

ಆದರೆ ಕಥೆಯ ಅತ್ಯಂತ ಪ್ರಬಲವಾದ ಸ್ತ್ರೀನೋಟದ ಕ್ಷಣವೆಂದರೆ ಕೊನೆಯಲ್ಲಿ ರಾಜಣ್ಣನವರ ಪತ್ನಿ ಬಂದು ಮಾತನಾಡುವ ಭಾಗ. ಆಕೆ ಅವಚಿಗೆ ಹೇಳುವ ಮಾತುಗಳು “ನಿಮ್ಮ ಹುಡುಗನು ಕೆಲವು ದಿನಗಳಿಂದ ಈಚೆಗೆ ಕೇರಿಕೇರಿಗಳಲ್ಲಿ ತಿರುಗುವುದನ್ನೂ, ಒಂದೆರಡು ಸಲ ಮನೆಗಳನ್ನು ಸೇರಿದುದನ್ನೂ ನಮ್ಮ ಮನೆಯವರು ನೋಡಿದರಂತೆ’. ಇಲ್ಲಿ ಸ್ತ್ರೀಯೇ ಸ್ತ್ರೀಯ ಸಂರಕ್ಷಣೆಯ ನೆಪದಲ್ಲಿ ಪುರುಷನ ವರ್ತನೆಯನ್ನು ವಿಮರ್ಶಿಸುತ್ತಾಳೆ. ಅವಳು ಅವಚಿಗೆ ಎಚ್ಚರಿಕೆ ನೀಡುವ ರೀತಿ, “ನಾನು ಹುಡುಗನೆಂದು ಸುಮ್ಮನಿದ್ದೆನು” ಎಂಬುದು, ಸ್ತ್ರೀಯರ ನಡುವೆಯೂ ಪುರುಷನ ಪರವಾಗಿ ಅಥವಾ ಅವನ ವಿರುದ್ಧವಾಗಿ ನಡೆಯುವ ರಾಜಕೀಯವನ್ನು ತೋರಿಸುತ್ತದೆ. ಇದರೊಂದಿಗೆ, ‘ಸಕಲಾವತಿ’ಯ ಮದುವೆ ಪ್ರಸ್ತಾಪದ ಹಿನ್ನೆಲೆಯಲ್ಲಿ ಆ ಕಾಲದ ವರ್ಗಪ್ರಜ್ಞೆ ಮತ್ತು ಹೆಣ್ಣುಮಕ್ಕಳ ಮದುವೆಯ ಕುರಿತಾದ ಆರ್ಥಿಕ-ಸಾಮಾಜಿಕ ಲೆಕ್ಕಾಚಾರಗಳು ಸ್ಪಷ್ಟವಾಗುತ್ತವೆ. ಹೆಣ್ಣನ್ನು ಕೇವಲ ಆಸ್ತಿ, ಅಂತಸ್ತು ಮತ್ತು ಕುಟುಂಬದ ಗೌರವದ ಚೌಕಟ್ಟಿನಲ್ಲಿಟ್ಟು ನೋಡುವ ಆ ಕಾಲದ ಸಮಾಜದಲ್ಲಿ, ಹೆಣ್ಣುಮಕ್ಕಳ ಮದುವೆಯು ವ್ಯಕ್ತಿಗತ ಒಲವಿಗಿಂತ ಹೆಚ್ಚಾಗಿ ಸಾಮಾಜಿಕ ಮತ್ತು ಆರ್ಥಿಕ ಒಪ್ಪಂದವಾಗಷ್ಟೇ ರೂಪುಗೊಳ್ಳುತ್ತಿತ್ತು ಎಂಬುದಕ್ಕೆ ಸಕಲಾವತಿಯ ಪ್ರಸಂಗ ಸಾಕ್ಷಿಯಾಗಿದೆ.

ಅವಚಿಯು ಕೊನೆಯವರೆಗೂ ತನ್ನ ಸರಳತೆಯಲ್ಲಿ ಮುಂದುವರೆಯುತ್ತಾಳೆ. ನಾಯಕ ಮಾಡಿಸಿದ ನಕಲಿ ಸರವನ್ನು ನೋಡಿ “ಇದು ಸಾವಿರ ನಗಗಳಲ್ಲಿದ್ದರೂ ನಾನು ಇದನ್ನೇ ಗುರುತು ಹಿಡಿದೇನು” ಎಂದು ಹೇಳುವುದು ಅವಳ ಮುಗ್ಧತೆಯನ್ನು ಮತ್ತು ನಾಯಕನ ಕುತಂತ್ರದ ವ್ಯರ್ಥತೆಯನ್ನು ಸೂಚಿಸುತ್ತದೆ. ಅವಳು ತನ್ನ ಆಭರಣಗಳು ಪೌರಾಣಿಕರ ಬಳಿ ಸುರಕ್ಷಿತವಾಗಿದ್ದ ಸುದ್ದಿ ಕೇಳಿದಾಗ, ಅವಳ ಆಸೆಯ ಗಂಡನ ಭ್ರಮೆ ಮುಂದುವರೆಯುತ್ತದೆಯೇ? ಕಥೆ ಹೇಳುವುದಿಲ್ಲ. ಆದರೆ ಅವಚಿಯ ಅಸ್ತಿತ್ವವು ತನ್ನ ಪತಿಯ ಅನುಪಸ್ಥಿತಿಯಲ್ಲಿಯೂ, ತನ್ನ ಆಭರಣಗಳನ್ನು ಕಳೆದುಕೊಂಡರೂ, ಸಮಾಜದ ದುರುಪಯೋಗಕ್ಕೊಳಗಾಗಿಯೂ ಅಚಲವಾಗಿ ನಿಲ್ಲುತ್ತದೆ.

‘ನನ್ನ ಚಿಕ್ಕತಾಯಿ’ ಕನ್ನಡದ ಮೊದಲ ಸಣ್ಣಕತೆಯಾಗಿ, ಮೇಲ್ವರ್ಗಕ್ಕೆ ಸೇರಿದ ಕುಟುಂಬವೊಂದರ ಸಾಕುತಾಯಿ ಮತ್ತು ಮಗನ ಕಥೆಯಷ್ಟನ್ನೇ ಹೇಳುವುದಿಲ್ಲ. ಅದು, ನಂಬಿಕೆಯ ಹೆಸರಿನಲ್ಲಿ ಸ್ತ್ರೀಯರನ್ನು ವಂಚಿಸುವ ಧಾರ್ಮಿಕ ಚೌಕಟ್ಟು, ಆಸ್ತಿ ಮತ್ತು ಅಧಿಕಾರಕ್ಕಾಗಿ ಸ್ತ್ರೀಯರನ್ನು ಬಳಸಿಕೊಳ್ಳುವ ಪುರುಷ ಪ್ರಪಂಚ ಹಾಗೂ ಬಾಹ್ಯ ಸದಾಚಾರಕ್ಕಷ್ಟೇ ಬೆಲೆ ಕೊಟ್ಟು ಒಳಗಿನ  ಶೋಷಣೆಯನ್ನು ಕಣ್ಣುಮುಚ್ಚಿ ಬೆಂಬಲಿಸುವ ಸಮಾಜದ ಮುಖವಾಡವನ್ನು ಕಳಚಿಡುವ ಸಾಂಸ್ಕೃತಿಕ ವಿಮರ್ಶೆಯಾಗಿದೆ. ಮುಖ್ಯವಾಗಿ ಸ್ತ್ರೀಪಾತ್ರವನ್ನು ಅವಳ ಸರಳತೆ ಮತ್ತು ಶಕ್ತಿಯಲ್ಲಿ, ದೌರ್ಬಲ್ಯ ಮತ್ತು ಸಹಿಷ್ಣುತೆಯಲ್ಲಿ, ನಿಷ್ಕಪಟತೆ ಮತ್ತು ಭಕ್ತಿಯಲ್ಲಿ ತೋರಿಸುತ್ತದೆ. ಅವಚಿ ಸಮಾಜದ ನಿರ್ಮಿತಿಯೇ ಆಗಿದ್ದರೂ, ಆ ನಿರ್ಮಿತಿಯೊಳಗೆ ತನ್ನದೇ ಆದ ಅಸ್ತಿತ್ವವನ್ನು ಹೊಂದಿದ್ದಾಳೆ. ಆಕೆಯ ಈ ಅಸ್ತಿತ್ವವು ಯಾವುದೇ ಸಕ್ರಿಯ ಅಥವಾ ಆಕ್ರಮಣಕಾರಿ ಬಂಡಾಯದ ರೂಪದಲ್ಲಲ್ಲ; ಬದಲಿಗೆ, ಆಕೆಯ ಅಚಲವಾದ ಮುಗ್ಧತೆ, ನಿಸ್ವಾರ್ಥ ವಾತ್ಸಲ್ಯ ಮತ್ತು ಅಪರಿಮಿತ ನಂಬಿಕೆಗಳೇ ಪುರುಷ ಪ್ರಪಂಚದ ಕುತಂತ್ರ ಹಾಗೂ ಧಾರ್ಮಿಕ ಶೋಷಣೆಗಳಿಗೆ ಎದುರಾಗಿ ನಿಲ್ಲುವ ಅಹಿಂಸಾತ್ಮಕ ಪ್ರತಿರೋಧವಾಗಿ ಕೆಲಸ ಮಾಡುತ್ತವೆ. ಕಥೆಯು ಅವಳ ಮೇಲಿನ ಪುರುಷ ದೃಷ್ಟಿಯನ್ನು ಅನಾವರಣಗೊಳಿಸುತ್ತಾ, ಆ ದೃಷ್ಟಿಯ ಅಸಮರ್ಪಕತೆಯನ್ನೂ ತೆರೆದಿಡುತ್ತದೆ. ಹೀಗೆ, ಪಂಜೆ ಮಂಗೇಶರಾಯರು ನೂರು ವರ್ಷಗಳ ಹಿಂದೆಯೇ ತಮ್ಮ ಪ್ರಥಮ ಸಣ್ಣಕಥೆಯ ಮೂಲಕ ಇಂತಹ ಆಳವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸ್ತ್ರೀವಾದಿ ಸೂಕ್ಷ್ಮಗಳನ್ನು ತೆರೆದಿಟ್ಟಿರುವುದು ಕನ್ನಡ ಸಾಹಿತ್ಯ ಚರಿತ್ರೆಯ ಹೆಮ್ಮೆಯಾಗಿದೆ.

ಡಾ. ರವಿ ಎಂ ಸಿದ್ಲಿಪುರ

ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article

Most read