ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಇಂದು ಶೃಂಗೇರಿ ತಾಲೂಕು ಬಂದ್ಗೆ ಕರೆ ನೀಡಲಾಗಿದೆ. ರೈತಪರ ಹೋರಾಟಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯಲಿರುವ ಬಂದ್ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಇಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಶೃಂಗೇರಿ ಬಂದ್ ನಡೆಯಲಿದ್ದು, ವರದಿ ಜಾರಿಯಾದರೆ ಮಲೆನಾಡಿನ ಜನಜೀವನ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಬಂದ್ಗೆ ಸ್ಥಳೀಯ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿರುವುದಾಗಿ ಸಂಘಟನೆಗಳು ತಿಳಿಸಿವೆ. ಶೃಂಗೇರಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸದಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಇಂದು ಶೃಂಗೇರಿ ತಾಲೂಕಿನಲ್ಲಿ ಅಂಗಡಿ–ಮುಂಗಟ್ಟುಗಳ ಬಂದ್ ಹಾಗೂ ಪ್ರತಿಭಟನೆ ನಡೆಯಲಿದ್ದು, ಸಂಚಾರ ಮತ್ತು ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

