ವಿಶೇಷ ಲೇಖನ
ಕೆಬಿಜಿಯವರು ಎಲ್ಲವೂ ಸರಿ ಇದೆ ಎಂದುಕೊಂಡಿರುವ ತಮ್ಮ ಆಲೋಚನಾ ಕ್ರಮವನ್ನು ಒಮ್ಮೆ ಪರಾಮರ್ಶೆಗೆ ಒಳಪಡಿಸಲಿ. ಕಳೆದ ಕೆಲ ತಿಂಗಳಲ್ಲಿ ಅವರನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸಿರುವ ಅವರ ಹಿತೈಷಿಗಳ ಹಾಗೂ ಟೀಕಾಕಾರರ ಮಾತುಗಳನ್ನು ತೆರೆದ ಮನಸ್ಸಿನಿಂದ ಆಲಿಸಲಿ. ಪೌರ ಕಾರ್ಮಿಕರಂತಹ ವಿಷಯಗಳು ಬಂದಾಗ ಆರ್ಥಿಕ ಸಂಗತಿಗಳ ಜೊತೆಗೆ ಸಾಮಾಜಿಕ ಸೂಕ್ಷ್ಮಗಳು ಇರುತ್ತವೆ ಎಂಬ ಗ್ರಹಿಕೆ ಪ್ರಾಪ್ತವಾಗಲಿ. ಪ್ರಜಾಪ್ರಭುತ್ವದ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಗಳನ್ನು ಗ್ರಹಿಸಲಿ ಹಾಗೂ ಹೊಸ ಅರಿವನ್ನು ಕಾಣಲಿ. ತನ್ಮೂಲಕ ರಾಜ್ಯಕ್ಕೆ ಒಬ್ಬ ದಕ್ಷ, ಪ್ರಾಮಾಣಿಕ ರಾಜಕಾರಣಿಯ ಜೊತೆಗೆ ಪ್ರಜಾತಂತ್ರವಾದಿ ಕೃಷ್ಣ ಬೈರೇಗೌಡರೂ ದಕ್ಕಲಿ – ಹರ್ಷಕುಮಾರ್ ಕುಗ್ವೆ, ಸಂಪಾದಕರು, ಕನ್ನಡ ಪ್ಲಾನೆಟ್.
ಸಚಿವರಾದ ಕೃಷ್ಣ ಬೈರೇಗೌಡರು ಕಳೆದ ಕೆಲವಾರು ವರ್ಷಗಳಲ್ಲಿ ರಾಜ್ಯದ ಜನರ ಮೆಚ್ಚುಗೆ ಅಭಿಮಾನ ಗಳಿಸಿಕೊಂಡರು. ಅಸೆಂಬ್ಲಿಯಲ್ಲಿ ಅವರ ವಾಕ್ಚಾತುರ್ಯ ಮತ್ತು ವಿಶೇಷವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ತೆರಿಗೆ- ಆದಾಯ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಅಂಕಿಅಂಶಗಳೊಂದಿಗೆ ಅವರು ಬಯಲು ಮಾಡಿದಾಗ ಇಡೀ ರಾಜ್ಯದ ಜನರು ಭೇಷ್ ಎಂದರು. ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಬಿಸ್ನೆಸ್ ಮ್ಯಾನೇಜ್ ಮೆಂಟ್ ಪದವಿ, ಅಮೆರಿಕದ ಯೂನಿವರ್ಸಿಟಿಯಲ್ಲಿ ಇಂಟರ್ ನ್ಯಾಶನಲ್ ರಿಲೇಶನ್ಸ್ ಓದಿಕೊಂಡಿದ್ದ ಕೆಬಿಜಿಯವರು ಕರ್ನಾಟಕದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು ಆಕಸ್ಮಿಕ ಅನಿರೀಕ್ಷಿತ. ಅವರ ತಂದೆ ಹಾಗೂ ಜನತಾದಳದ ದೊಡ್ಡ ನಾಯಕರೂ ಆಗಿದ್ದ ಸಿ.ಬೈರೇಗೌಡರು ತೀರಿಕೊಂಡಾಗ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಅನುಕಂಪದ ಅಲೆಯಲ್ಲಿ ಗೆಲ್ಲುವ ಮೂಲಕ ಅವರು ರಾಜಕಾರಣಕ್ಕೆ ಬಂದರು. ಹೀಗೆ ಅನುಕಂಪದ ಮೂಲಕ ಗೆಲ್ಲುವುದು ಭಾರತದ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಕುಟುಂಬಸ್ಥರಿಗೆ ಸಾಮಾನ್ಯವಾಗಿ ಸಿಗುವ ಒಂದು ಲಗ್ಸುರಿ. ಇರಲಿ, ಒಬ್ಬ ರಾಜಕಾರಣಿಯಾಗಿ ಕೃಷ್ಣ ಬೈರೇಗೌಡರು ದಕ್ಷರು ಎಂದು ಹೆಸರಾಗಿದ್ದಾರೆ. ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಕಂದಾಯ ಮಂತ್ರಿಯಾಗಿ ಅವರು ತಮ್ಮ ಇಲಾಖೆಯಲ್ಲಿ ತಂದ ಮಾರ್ಪಾಡುಗಳು, ಪಾರದರ್ಶಕತೆ, ಡಿಜಿಟಲೀಕರಣದ ಉಪಕ್ರಮಗಳು ಕೆಬಿಜಿಯವರನ್ನು ಇಡೀ ದೇಶದಲ್ಲೆ ಒಬ್ಬ ದಕ್ಷ ರಾಜಕಾರಣಿಯಾಗಿ ನಿಲ್ಲಿಸಿರುವುದು ನಿಜ. ಇದರೊಂದಿಗೆ ಅವರು ಸರಳತೆಯನ್ನು ಪ್ರೊಮೋಟ್ ಮಾಡಲು ಆಗಾಗ ಒಬ್ಬೊಬ್ಬರೇ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದು, ಅವುಗಳ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಅನೇಕರಿಗೆ ಗೂಸ್ ಬಂಪ್ಸ್ ಬಂದಿರುವುದೂ ನಿಜ. ತಮ್ಮ ಇಲಾಖೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಕಂಡು ಅವರು ಆಕ್ರೋಶಗೊಂಡ ವಿಡಿಯೋಗಳು ಸಹ ಒಬ್ಬ ಮಿನಿಸ್ಟರ್ ಎಂದರೆ ಹೀಗಿರಬೇಕು ಎಂದು ಅನಿಸಿದ್ದಿದೆ.
ಇದಿಷ್ಟೂ ಕೆಬಿಜಿಯವರ ವ್ಯಕ್ತಿತ್ವದ ಒಂದು ಪಾಸಿಟಿವ್ ಮುಖ.
ಪ್ರತಿಯೊಬ್ಬರಲ್ಲಿ ದಕ್ಷತೆ, ಪ್ರಾಮಾಣಿಕತೆ ಇರಬೇಕು. ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಇವು ಇಂಬು ನೀಡುವ ಜೊತೆಗೆ ಪೂರ್ವ ಶರತ್ತಾಗಿರುತ್ತವೆ. ಈ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ಕಾಲದಲ್ಲಿ ಒಬ್ಬ ರಾಜಕಾರಣಿಯ ದಕ್ಷತೆ, ಪ್ರಾಮಾಣಿಕತೆಗಳು ನಿಜಕ್ಕೂ ಅಪೇಕ್ಷಣೀಯ. ಆದರೆ, ಭಾರತದಂತಹ ಸಮಾಜದಲ್ಲಿ ಕೇವಲ ದಕ್ಷತೆ ಮತ್ತು ಪ್ರಾಮಾಣಿಕತೆ, ಶುದ್ಧ ಹಸ್ತತನಗಳಿದ್ದ ಮಾತ್ರಕ್ಕೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುವುದಿಲ್ಲ. ಒಬ್ಬ ರಾಜಕಾರಣಿ/ಸಚಿವ/ಅಧಿಕಾರಿ ದಕ್ಷತೆ, ಪ್ರಾಮಾಣಿಕತೆ ಹೊಂದಿದ್ದು ಅವನಲ್ಲಿ/ ಆಕೆಯಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳ ಕೊರತೆಯಿದ್ದರೆ ಆ ವ್ಯಕ್ತಿ ಕೊನೆಗೆ ‘ಡಿಸಾಸ್ಟರ್’ ವ್ಯಕ್ತಿಯಾಗಿ ಪರಿಸಮಾಪ್ತಿಯಾಗಿ ಬಿಡುತ್ತಾನೆ. ಕೊನೆಗೆ ಆತನ ದಕ್ಷತೆ ಪ್ರಾಮಾಣಿಕತೆಗಳು ಸಹ ಸಾಮಾಜಿಕ ಶೋಷಣೆಯ ಟೂಲ್ಸ್ ಆಗಿಬಿಡಲು ಸಾಧ್ಯವಿದೆ. ವಿಪರ್ಯಾಸವೆಂದರೆ ಇದಕ್ಕೆ ಸಾಕ್ಷಾತ್ ಕೃಷ್ಣ ಬೈರೇಗೌಡರೇ ಕಣ್ಣೆದುರಿಗಿನ ನಿದರ್ಶನವಾಗಿ ಕಾಣುತ್ತಿದ್ದಾರೆ. ಇಂತಹ ಒಂದು ಆರೋಪವನ್ನು ನಾನು ಮಾನ್ಯ ಸಚಿವರ ಕುರಿತು ಬಿಡುಬೀಸಾಗಿ ಹೇಳುತ್ತಿಲ್ಲ. ಜವಾಬ್ದಾರಿಯಿಂದಲೇ ಹೇಳುತ್ತಿದ್ದೇನೆ. ಅವರ ಇತ್ತೀಚಿನ ವರ್ಷಗಳ ಕೆಲಸ ಮತ್ತು ತೀರ್ಮಾನಗಳಲ್ಲಿ ಈ ಆರೋಪಕ್ಕೆ ಸಾಕಷ್ಟು ಪುರಾವೆ ದೊರೆಯುತ್ತದೆ.
ಮೊದಲನೆಯದಾಗಿ, ಕೆಜಿಬಿಯವರು ಕಂದಾಯ ಮಂತ್ರಿಯಾಗಿದ್ದಾಗ ಮಾಡಿದ ಉತ್ತಮ ಕೆಲಸಗಳು ಎಲ್ಲರಿಗೂ ಗೊತ್ತು. ಆದರೆ ಬಹಳ ಜನರ ಗಮನಕ್ಕೆ ಬಾರದ ಅಸಲೀ ವಿಷಯಗಳಿವೆ. ಉದಾಹರಣೆಗೆ, ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಕೊಡಗಿನ ದಿಡ್ಡಳ್ಳಿಯಲ್ಲಿ ಲೈನ್ ಮನೆಗಳಲ್ಲಿ ನರಕಸದೃಶವಾಗಿ ಬದುಕಿದ್ದ ಆದಿವಾಸಿಗಳು ಸಿಡಿದೆದ್ದು ತಮಗೆ ವಸತಿ ಮತ್ತು ಭೂಮಿ ಬೇಕು, ತಾವು ಭೂಮಾಲೀಕರ ಜೀತಗಾರರಾಗಿ ಇನ್ನು ಮುಂದೆ ಇರುವುದು ಸಾಧ್ಯವಿಲ್ಲ, ಪ್ರತಿಕುಟುಂಬಕ್ಕೆ ಕನಿಷ್ಟ ಎರಡೆಕರೆ ಜಮೀನು ಬೇಕು ಎಂದು ಆಗ್ರಹಿಸಿ ಚಳವಳಿ ನಡೆಸಿದರು. ಅದಕ್ಕೂ ಮೊದಲು “ಚಲೋ ಉಡುಪಿ” ಎಂಬ ಚಳವಳಿ ಆಹಾರ ಹಕ್ಕು ಮತ್ತು ಭೂರಹಿತರಿಗೆ ಭೂಮಿ ಹಕ್ಕಿನ ಹಕ್ಕೊತ್ತಾಯಗಳನ್ನು ಮುಂದಿಟ್ಟಿತ್ತು. ಜೊತೆಗೆ ರಾಜ್ಯವ್ಯಾಪಿಯಾಗಿ ವಸತಿ ಮತ್ತು ಭೂಮಿ ಹಕ್ಕಿನ ಹೋರಾಟವೂ ಆರಂಭವಾಗಿತ್ತು. ಬೆಂಗಳೂರಿನಲ್ಲೆ ಸುಮಾರು 25,000 ಭೂರಹಿತರು ತಮಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿ ಚಳವಳಿ ನಡೆದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ಮುಂದಾಳತ್ವ ವಹಿಸಿ ಸರ್ಕಾರಕ್ಕೆ ತೀವ್ರ ಒತ್ತಡ ತಂದ ಬಳಿಕ ಸರ್ಕಾರದ ಮಟ್ಟದಲ್ಲಿ ಒಂದು ಉನ್ನತ ಮಟ್ಟದ ಕಮಿಟಿ ಕೂಡಾ ರಚನೆಯಾಗಿತ್ತು. ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಭೆಯಲ್ಲಿ ಭೂರಹಿತರಿಗೆ ಭೂಮಿ ವಸತಿ ನೀಡುವ ಕಮಿಟ್‌ಮೆಂಟ್ ಸರ್ಕಾರ ಮಾಡಿತ್ತು.

ಇದನ್ನು ಆಗು ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಸರ್ಕಾರದ ಕಂದಾಯ ಇಲಾಖೆ ಮುಂದೆ ಇದ್ದ ತಕ್ಷಣದ ಮಾರ್ಗ ಈಗಾಗಲೇ ಜಮೀನಿನ ಪೊಸಿಶನ್ ನಲ್ಲಿದ್ದು ಫಾರಂ ನಂ 50, 53 ಹಾಗೂ 57ರಲ್ಲಿ ಅರ್ಜಿ ಹಾಕಿರುವ 20 ಲಕ್ಷ ಅರ್ಜಿದಾರರಿಗೆ ಭೂಮಿ ಮಂಜೂರು ಮಾಡುವುದಾಗಿತ್ತು. ಹಿಂದೆ ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪನವರು ಈ ನಿಟ್ಟಿನಲ್ಲಿ ಒಂದಷ್ಟು ಸಕಾರಾತ್ಮಕ ಹೆಜ್ಜೆ ಇಟ್ಟಿದ್ದರು. ವಿಶೇಷವಾಗಿ ಬಗರ್ ಹುಕುಂ ಸಮಿತಿಗಳು ಎಲ್ಲಾ ಕಡೆ ರಚನೆಯಾಗಿದ್ದರೂ ಸಮಿತಿಗಳ ಅಧ್ಯಕ್ಷರಾಗಿದ್ದ ಶಾಸಕರ ಗೈರುಹಾಜರಿಯ ಕಾರಣಕ್ಕಾಗಿ ಅವು ನಿಷ್ಕ್ರಿಯವಾಗಿದ್ದವು. ಆ ಸಂದರ್ಭದಲ್ಲಿ ತತ್ಕಾಲಿಕವಾಗಿ ಒಳ್ಳೆಯ ತೀರ್ಮಾನ ಕೈಗೊಂಡಿದ್ದ ಕಾಗೋಡು ತಿಮ್ಮಪ್ಪನವರು ಶಾಸಕರ ಗೈರು ಹಾಜರಿಯಲ್ಲಿ ತಹಶೀಲ್ದಾರರೇ ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸುವ ಅವಕಾಶ ಕಲ್ಪಿಸಿದರು. ಇದು ಬಗರ್ ಹುಕುಂ ಸಾಗುವಳಿದಾರರಿಗೆ ವರವಾಗಿ ಪರಿಣಮಿಸಿತು. ಆದರೆ ಕೃಷ್ಣ ಬೈರೇಗೌಡರು ಕಂದಾಯ ಮಂತ್ರಿಗಳಾದ ನಂತರ ಕನಿಷ್ಟ ಕಾಳಜಿ ತೋರಿದ್ದರೆ ರಾಜ್ಯದ ಲಕ್ಷಾಂತರ ಭೂರಹಿತ ಮತ್ತು ವಸತಿ ರಹಿತ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಮೇಲೆ ಹೇಳಿದ 20 ಲಕ್ಷ ಅರ್ಜಿದಾರರಲ್ಲಿ 85% ದಲಿತರು, 10% ಹಿಂದುಳಿದ ವರ್ಗಗಳು ಮತ್ತು 4-5% ಇತರರು ಇದ್ದಾರೆ. ಅವರೇನು ಪ್ರತಿ ವರ್ಷ ಜನರಿಗೆ ಭೂಮಿ ಕೊಡಿ ಎಂದು ಕೇಳಲಿಲ್ಲ. ಈಗಾಗಲೇ ಜಮೀನು ಮನೆ ಇದ್ದವರಿಗೆ ಕೊಡಿ ಎಂದೂ ಕೇಳಿರಲಿಲ್ಲ. ಒನ್ ಟೈಮ್ ಸೆಟಲ್‌ಮೆಂಟ್ ನಲ್ಲಿ ನಿಮಗೆ ಎರಡೆಕರೆ ಆಗದಿದ್ದರೆ ಕನಿಷ್ಟ ಒಂದೆಕರೆ ಜಮೀನು ನೀಡಿ ಎಂಬ ಮನವಿ ಮಾಡಿಕೊಂಡಿದ್ದರು. ಮುಖ್ಯವಾಗಿ ಗೋಮಾಳ ಜಮೀನು, ಡಿಸಿ ಜಮೀನು, ಸಿಎಂಡ್ ಡಿ ಜಮೀನುಗಳನ್ನು ಕೊಡಿ ಎಂಬುದಾಗಿತ್ತು. ಇದರ ಜೊತೆಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಅದರ ಮೂಲಕವೂ ಜಮೀನು ನೀಡಿ ಎಂಬ ನ್ಯಾಯಯುತ ಬೇಡಿಕೆಯಿತ್ತು. ಆದರೆ ಈ ಯಾವ ಬೇಡಿಕೆ, ಒತ್ತಾಯಗಳಿಗೂ “ದಕ್ಷ’. ನಿಷ್ಠುರಿ ಕೃಷ್ಣ ಬೈರೇಗೌಡರ ಹೃದಯ ಕರಗಲಿಲ್ಲ. ‘ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ, ನಾನು ಮಾಡಲು ಬರುವುದಿಲ್ಲ’ ಎಂಬ ಸಬೂಬು ಹೇಳುತ್ತಾ ಕಾಲತಳ್ಳಿದರು. ‘ಸ್ವಾಮಿ, ಹಿಂದೆ ದೇವರಾಜ ಅರಸು ರಾಜ್ಯದ ಗೇಣಿದಾರರಿಗೆ ಭೂಮಿ ಹಂಚುವಾಗಲೂ ಕಾನೂನು ಅನುಮತಿ ನೀಡುತ್ತಿರಲಿಲ್ಲ. ಆದರೇನಂತೆ ಬಾಬಾಸಾಹೇಬರ ಸಮಾನತೆ ತತ್ವದ ಸಂವಿಧಾನ ಅವಕಾಶ ನೀಡುತ್ತಿತ್ತಲ್ಲ. ಇದನ್ನು ಅರಿತ ಅರಸು ಹೊಸ ಕಾಯ್ದೆಯನ್ನೇ ಮಾಡಿಬಿಟ್ಟರು. ಪರಿಣಾಮವಾಗಿ ಇಂದು ಇಡೀ ರಾಜ್ಯದ ಕೋಟ್ಯಂತರ ಕುಟುಂಬಗಳ ಬದುಕು ಬೆಳಗಿತು. ಆದರೆ ದುರದೃಷ್ಟವಶಾತ್ ಆ ಭೂಸುಧಾರಣೆಯಲ್ಲಿ ರಾಜ್ಯದ ದಲಿತರಿಗೆ ಏನೂ ಸಿಕ್ಕಿರಲಿಲ್ಲ. ಈಗ ಅಂತಹ ಒಂದು ಹಕ್ಕೊತ್ತಾಯ ತಳಸಮುದಾಯಗಳಿಂದ ಬಂದಾಗ ಕೃಷ್ಣ ಬೈರೇಗೌಡರು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲವೆ? ಸ್ವಾಮಿ, ಸಿಟಿ ಲಿಮಿಟ್ ಗಳಲ್ಲಿ ನೀವು ಈಗಾಗಲೇ ಸೈಟು ಮನೆ ಇದ್ದವರಿಗೆ ಏನೂ ಕೊಡಬೇಡಿ, ಆದರೆ ಈಗಾಗಲೇ ಪೊಸಿಶನ್ ನಲ್ಲಿದ್ದು, 94, 94ಸಿ ಅಡಿಯಲ್ಲಿ ಅರ್ಜಿ ಹಾಕಿದ್ದರೆ, ಅವರು ಭೂರಹಿತರಾಗಿದ್ದರೆ ಅಂತವರಿಗೆ ಬದುಕು ಉಳಿಸಿಕೊಳ್ಳಲು ದಾರಿ ತೋರಿಸಿ ಎಂದರೆ ಕೃಷ್ಣ ಬೈರೇಗೌಡರ ‘ದಕ್ಷತೆ, ಪ್ರಾಮಾಣಿಕತೆಯಲ್ಲಿ ಅದಕ್ಕೆ ಕಿವಿಯೇ ಇರಲಿಲ್ಲ. ವಸತಿ ಭೂಮಿ ಹಕ್ಕಿನ ಹೋರಾಟದ ಫಲವಾಗಿ ರಚನೆಯಾಗಿದ್ದ ಹೈಲೆವೆಲ್ ಸಮಿತಿ ಸಭೆಯನ್ನು ಒಂದೇ ಒಂದು ಬಾರಿ ಕೃಷ್ಣ ಬೈರೇಗೌಡರು ಕರೆಯಲಿಲ್ಲ. ಒಬ್ಬ ಕಂದಾಯ ಮಂತ್ರಿಯಾಗಿ ಇದು ಅವರ ಹೊಣೆಗಾರಿಕೆಯಾಗಿತ್ತು. ಎಷ್ಟೋ ಜನರಿಗೆ ಜಮೀನು ಗ್ರಾಂಟ್ ಆಗಿದೆ, ಸಾಗುವಳಿ ಚೀಟಿಯೂ ಸಿಕ್ಕಿದೆ, ಅಂತವರಿಗೆ ಒಂದು ಪಹಣಿ ಕೊಡುವ ದೊಡ್ಡ ಮನಸು ಮಾಡಿ ಗೌಡ್ರೇ ಅಂತ ಕೇಳಿದಾಗ ಮಾನ್ಯ ಕೃಷ್ಣ ಬೈರೇಗೌಡ್ರು- ಇವರೆಲ್ಲಾ ಕೂಲಿ ನಾಲಿ ಮಾಡ್ಕೊಂಡಿರೋದೇ ಸರಿ ಎಂಬಂತೆ “ಉಹುಂ’ ಎಂದು ಬಿಟ್ಟರು.
This where Ambedkar’s principle of Trinity principle of democracy matters. ‘ಸ್ವಾತಂತ್ರ್ಯ- ಸಮಾನತೆ- ಬಂಧುತ್ವ ಇವುಗಳನ್ನು ಒಂದು ಸಮಾಜ ವ್ಯವಸ್ಥೆಯಲ್ಲಿ ಬೇರೆ ಬೇರೆಯಾಗಿ ನೋಡುವುದು ಪ್ರಜಾತಂತ್ರದ ಯಶಸ್ಸಿಗೆ ಸಹಕರಿಸುವುದಿಲ್ಲ. ಸ್ವತಃ ಕೃಷ್ಣ ಬೈರೇಗೌಡರೇ ಮೀಡಿಯಾ ಸಂದರ್ಶನವೊಂದರಲ್ಲಿ ಮಾತಾಡುತ್ತಾ, ಕಾರ್ಪೊರೇಟ್ ಕುಳಗಳಿಗೆ ಫ್ರೀಬಿಗಳನ್ನು ಕೊಡುವ ಕುರಿತು ಅತ್ಯದ್ಭುತವಾಗಿ ಮಾತಾಡಿದ್ದರು. ಬಡಜನರಿಗೆ ಸೌಲಭ್ಯಗಳನ್ನು ಕೊಟ್ಟಾಗ ಮಾತ್ರ ಪ್ರಶ್ನಿಸುವ, ಶ್ರೀಮಂತರಿಗೆ ಕೊಡುವ ವಿನಾಯ್ತಿಗಳ ಬಗ್ಗೆ ನವರಂಧ್ರಗಳನ್ನು ಮುಚ್ಚಿಕೊಳ್ಳುವ ಈ ಮೀಡಿಯಾ ನರೇಟಿವ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದು ನಿಮಗೆ ನೆನಪಿರಬಹುದು. ಅದನ್ನು ನೋಡಿ ಕುಶಿ ಪಟ್ಟಿದ್ದೂ ನಿಜ. ಆದರೆ, ಐದು ಹತ್ತು ವರ್ಷಗಳ ‘ಗ್ಯಾರಂಟಿಗಳಾಚೆಗೆ ರಾಜ್ಯದ ಭೂರಹಿತರಿಗೆ ವಸತಿ ರಹಿತರಿಗೆ ಅವರ ಜೀವನವನ್ನೇ ಪರಿವರ್ತನೆ ಮಾಡುವ ಒಂದು ಕೆಲಸವನ್ನು ಮಾಡುವ ಅಧಿಕಾರ ತಮ್ಮ ಕೈಯಲ್ಲಿದ್ದಾಗ – ಅಸೆಂಬ್ಲಿಗಳಲ್ಲಿ, ಮೀಡಿಯಾಗಳೆದುರು ತಾವು ಮಂತ್ರದಂತೆ ಜಪಿಸುವ ಸಮಾನತೆ ತತ್ವವನ್ನು ತಾವೇ ಅನುಷ್ಟಾನ ಮಾಡುವ ಸಾಂವಿಧಾನಿಕ ಹೊಣೆಗಾರಿಕೆ ತಮ್ಮ ಬಳಿ ಇದ್ದಾಗ ಸಂಪೂರ್ಣ ನಿರಾಕರಿಸಿ ಕೈಚೆಲ್ಲಿ ಕುಳಿತರಲ್ಲ- ಇದು ಅಕ್ಷಮ್ಯ. ಇದು ರಾಜ್ಯದ ಸಾಮಾಜಿಕ ನ್ಯಾಯ ಚಳವಳಿಗೆ ಆದ ದೊಡ್ಡ ಹಿನ್ನಡೆಯೂ ಹೌದು. ಆ ಹಿನ್ನಡೆ ಆಗಿದ್ದು ಸ್ವತಃ ದಕ್ಷ, ಪ್ರಾಮಾಣಿಕರಾದ ಕೃಷ್ಣೇ ಬೈರೇಗೌಡರಿಂದ.

ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದ ಪ್ರಜಾಪ್ರಭುತ್ವದ ‘ಟ್ರಿನಿಟಿ’ ತತ್ವ ಇವರ ತಲೆಗೆ ಹೋಗೇ ಇಲ್ಲ. ‘ಸ್ವಾತಂತ್ರ್ಯ-ಸಮಾನತೆ-ಬಂಧುತ್ವಗಳನ್ನು ಬೇರೆ ಬೇರೆಯಾಗಿ ನೋಡಿದ ಪಕ್ಷದಲ್ಲಿ ನಮ್ಮ ಪ್ರಜಾಪ್ರಭುತ್ವದ ಉದ್ದೇಶವೇ ಸೋಲುತ್ತದೆ” ಎಂದು ಬಾಬಾಸಾಹೇಬರು ಎಚ್ಚರಿಸಿದ್ದು ಯಾಕೆ ಎಂದು ಅರಿಯುವ ಪ್ರಯತ್ನವನ್ನು ಕೆಬಿಜಿ ಮಾಡಲೇ ಇಲ್ಲ. ಯಾಕೆಂದರೆ ಇವರು ಹುಟ್ಟಿರುವುದು ಆಗರ್ಭ ಶ್ರೀಮಂತರಾಗಿ, ಬೆಳೆದಿದ್ದು ಶ್ರೀಮಂತಿಕೆಯ ಅಂದರೆ ‘ಸ್ವಾತಂತ್ರ್ಯ’ ಮಾತ್ರವೇ ಬೇಕಷ್ಟು ಸಿಗುವ ವಾತಾವರಣದಲ್ಲಿ, ಅವರು ಆಯ್ಕೆ ಮಾಡಿಕೊಂಡು ಓದಿರುವುದು ಬಂಡವಾಳಶಾಹಿ ವ್ಯವಸ್ಥೆಗಳನ್ನು ನಿರ್ವಹಿಸುವ ಬಿಸ್ನೆಸ್ ಮ್ಯಾನೇಜ್ಮೆಂಟ್ ನಂತಹ ಕೋರ್ಸನ್ನು. ಕನಿಷ್ಟ ರಾಜಕಾರಣಿಯಾದ ನಂತರ ಅಂಬೇಡ್ಕರ್ ಅವರನ್ನು ಓದಿಕೊಳ್ಳಬೇಕಿತ್ತಲ್ಲವೇ? ನಿಜವಾಗಿಯೂ ಪ್ರಜಾಪ್ರಭುತ್ವದ ಮೌಲ್ಯಗಳು ಇವರ ಹೃದಯದಲ್ಲಿ ಇಳಿದಿದ್ದರೆ ಕಂದಾಯ ಸಚಿವರ ಕೆಲಸವನ್ನು ಸಿಬ್ಬಂದಿಗಳ ಹಾಜರಿ ಪುಸ್ತಕ ಸರಿ ಇಡುವುದು, ದಾಖಲೆಗಳನ್ನು ಡಿಜಿಟೈಸ್ ಮಾಡುವುದರ ಆಚೆಗೆ ನೊಂದವರ, ಬೆಂದವರ ಕಣ್ಣೀರು ಒರೆಸುವ ಕೆಲಸವನ್ನು ಕೆಬಿಜಿ ಮಾಡುತ್ತಿದ್ದರು. ಆದರೆ ತಮ್ಮ ಸಾಮಾಜಿಕ ಹಿನ್ನೆಲೆ, ವರ್ಗ ಹಿನ್ನೆಲೆಗಳನ್ನು ಮೀರಿ ಯೋಚಿಸುವ ಪ್ರಯತ್ನವನ್ನೇ ಅವರು ಮಾಡಲಿಲ್ಲ.
ಇತ್ತೀಚೆಗೆ ಬೆಂಗಳೂರಿನ ನಗರಗಳ ರಸ್ತೆಗಳನ್ನು ಕ್ಲೀನ್ ಮಾಡುವ ಕೃಷ್ಣ ಬೈರೇಗೌಡರ ಉತ್ಸಾಹದಲ್ಲಿ ಆದ ಸಮಸ್ಯೆ ಕೂಡಾ ಇದೇ. ರಸ್ತೆಗಳು ಚೊಕ್ಕವಾಗಿರಬೇಕು ಎಂಬುದರಲ್ಲಿ ಯಾರಿಗೂ ತಕರಾರಿರಲು ಸಾಧ್ಯವಿಲ್ಲ. ಆದರೆ, ನಮ್ಮಂತಹ ಸಮಾಜದಲ್ಲಿ ರಸ್ತೆಗಳು, ಫುಟ್ ಪಾತ್ ಗಳಲ್ಲಿ ಅವುಗಳನ್ನೇ ಬದುಕಿನ ಆಸರೆಯಾಗಿಟ್ಟುಕೊಂಡ ಅತ್ಯಂತ ತಳವರ್ಗದ ಜೀವಗಳಿರುತ್ತವೆ. ಅವರಿಗೆ ಪರ್ಯಾಯಗಳಿರುವುದಿಲ್ಲ. ಅವರ ಕುರಿತು ಕನಿಷ್ಟ ಸಂವೇದನೆ ಇಲ್ಲದೇ ‘ಗೆಟೌಟ್’ ಎಂದು ಬಿಟ್ಟರೆ? ನನಗೆ ನೆನಪಿದೆ, ನಮ್ಮ ಶಿವಮೊಗ್ಗದ ಕಸ್ತೂರಬಾ ಕಾಲೇಜಿನ ರಸ್ತೆಯಲ್ಲಿ ಸಂಜೆಯಾದರೆ ನೂರಾರು ಫುಟ್ ಪಾತ್ ಕ್ಯಾಂಟೀನುಗಳು ತೆರೆದುಕೊಳ್ಳುತ್ತಿದ್ದವು. ರಸ್ತೆಯಲ್ಲಿ ವಾಹನ ಚಾಲನೆ ಕಷ್ಟವಾಗಿತ್ತು. ಜನಜಂಗುಳಿ ಜಾಸ್ತಿಯಾಗಿತ್ತು. ಆಗ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಆ ಸಮಸ್ಯೆಯನ್ನು ಎಷ್ಟು ಅದ್ಭುತವಾಗಿ ಪರಿಹರಿಸಿದರು ಎಂದರೆ ಅಚ್ಚರಿಯಾಗುತ್ತದೆ. ಅವರು ಏನು ಮಾಡಿದರು ಗೊತ್ತೆ? ಬಿಲ್ಡಿಂಗ್ ಗಳ ನಡುವೆ ಸೀವೇಜ್ ಚರಂಡಿ ಇರುವ ಒಂದು ಓಣಿಯ ಮೇಲೆ ಚಪ್ಪಡಿ, ಕಾಂಕ್ರೀಟ್ ಹಾಸು ಹೊದೆಸಿ ಒಂದಿಡೀ ಓಣಿಯನ್ನು ಫುಡ್ ಕೋರ್ಟ್ ಎಂದು ಹೆಸರಿಸಿ, ಫುಟ್ ಪಾತ್ ಕ್ಯಾಂಟೀನ್ ಮಾಡಿಕೊಂಡವರಿಗೆ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಬಿಟ್ಟರು. ಇದಕ್ಕಾಗಿ ಅವರು ಯಾವುದೇ ಹೊಸ ಜಾಗ ಕೊಡಲಿಲ್ಲ, ವ್ಯಾಪಾರಿಗಳನ್ನು ದೂರ ಓಡಿಸಲೂ ಇಲ್ಲ… ವಾಸ್ತವದಲ್ಲಿ ಫುಟ್ ಪಾತ್ ವ್ಯಾಪಾರಿಗಳ ವ್ಯಾಪಾರ ಇನ್ನೂ ಸುಗಮವಾಗಿ ವ್ಯವಸ್ಥಿತವಾಗಿ ನಡೆಯುವಂತೆ ಮಾಡಿದ್ದರು. ನೀವು ಶಿವಮೊಗ್ಗ ಫೂಡ್ ಕೋರ್ಟ್ ಗೆ ಹೋದರೆ ಅಲ್ಲಿ ವ್ಯಾಪಾರಿಗಳು ತಮ್ಮ ಮನೆದೇವರ ಫೋಟೊ ಜೊತೆಗೆ ಪೊನ್ನುರಾಜ್ ಫೋಟೋ ಕೂಡಾ ಹಾಕಿಕೊಂಡಿರುವುದು ಕಾಣುತ್ತದೆ. ‘ಬಾಬಾಸಾಹೇಬರ ಟ್ರಿನಿಟಿ’ ತತ್ವದ ಒಂದು ಸೃಜನಶೀಲ ಅನುಷ್ಠಾನದ ಬಗೆ ಇದು.
ಮಾನ್ಯ ಕೃಷ್ಣ ಬೈರೇಗೌಡರು, ಪೌರ ಕಾರ್ಮಿಕರ ‘ಖಾಯಂ” ಮಾಡುವ ಬೇಡಿಕೆಯನ್ನು ತಿರಸ್ಕರಿಸಲು ‘ನೀವು ಕೆಲಸಕ್ಕೆ ಬರೋದಿಲ್ಲ, 30% ಗೈರು ಹಾಜರಿ ಇದೆ, ನಿಮ್ಮನ್ನ ಯಾಕೆ ಖಾಯಂ ಮಾಡಬೇಕು” ಎಂದಿದ್ದಿರಲಿ, ನಂತರ ರಾಜ್ಯದಲ್ಲಿ ಭದ್ರವಾಗಿ ತಳವೂರಿರುವ ಕಾರ್ಪೊರೇಟ್ ಕುಳ ಕಿರಣ್ ಮುಜುಂದಾರ್ ಶಾ ಇದನ್ನು ಎಂಡೋರ್ಸ್ ಮಾಡಿ, ‘ನಗರ ಕ್ಲೀನ್ ಮಾಡದೇ ಇದ್ದರೆ ಖಾಯಂ ಮಾಡಕೂಡದು’ ಎಂದು ಅಲ್ಲೆಲ್ಲೋ ಸರ್ಕಾರವೇ ಬಿಡಿಗಾಸಿಗೆ ಕೊಟ್ಟ ನೂರಾರು ಎಕರೆ ಜಾಗದಲ್ಲಿ ನಿರ್ಮಾಣ ಮಾಡಿಕೊಂಡು ಯಥೇಚ್ಛ ಫ್ರೀಬೀ ಪಡೆದು ಕಟ್ಟಿಸಿಕೊಂಡ ಬಯೋಪಾರ್ಕಿನ ಬಹುಮಹಡಿ ಕಟ್ಟಡದ ಎಸಿ ರೂಮಿನಲ್ಲಿ ಕುಳಿತು ಹೂಂಕರಿಸಿದ್ದಿರಲಿ, ಈ ದೇಶದ ಕಾರ್ಪೊರೇಟ್ ದಕ್ಷತೆಯು ಪ್ರಜಾಪ್ರಭುತ್ವ ದಕ್ಷತೆಗೆ ತೋರುವ ಅಸಹನೆಯನ್ನು, ‘ಪ್ರಾಮಾಣಿಕತೆಯ’ ಒಳಗಿನ ಅಪ್ರಾಮಾಣಿಕತೆಯನ್ನು, ಸಾಮಾಜಿಕ ನ್ಯಾಯದೆಡೆಗಿನ ತಿರಸ್ಕಾರವನ್ನು, ಅಮಾನವೀಯತೆಯನ್ನು ಅನಾವರಣಗೊಳಿಸಿದ ಘಟನೆಗಳಾದವು.
ಈಗಲೂ ಕೆಬಿಜಿಯವರು ಇಂತಹ ವಿಚಾರಗಳ ಕುರಿತು ಗಂಭೀರವಾಗಿ ಆಲೋಚನೆ ನಡೆಸಿದರೆ ಸಮಾಜದ ಸಮಗ್ರ ಏಳಿಗೆಯಲ್ಲಿ ದೊಡ್ಡ ಪಾತ್ರವಹಿಸಲು ಕಾಲ ಮಿಂಚಿಲ್ಲ. ಅವರು ಪೌರ ಕಾರ್ಮಿಕರು ಯಾಕಾಗಿ 30% ಗೈರು ಹಾಜರಿ ತೋರುತ್ತಿದ್ದಾರೆ? ಅವರ ಸಾಮಾಜಿಕ, ಕೌಟುಂಬಿಕ ಸನ್ನಿವೇಶಗಳೇನಾದರೂ ಇದಕ್ಕೆ ಕಾರಣವೇ ಎಂಬುದನ್ನು ಅವರ ಮನೆಗಳಲ್ಲಿ ಒಂದು ವಾರ ವಾಸವಾಗಿದ್ದೇ ತಿಳಿದುಕೊಳ್ಳಬೇಕು ಎಂದಿಲ್ಲ. ಆದರೆ ಅವರು ತಾವು ಎಲ್ಲವೂ ಸರಿ ಇದೆ ಎಂದುಕೊಂಡಿರುವ ತಮ್ಮ ಆಲೋಚನಾ ಕ್ರಮವನ್ನು ಒಮ್ಮೆ ಪರಾಮರ್ಶೆಗೆ ಒಳಪಡಿಸಲಿ. ಕಳೆದ ಕೆಲ ತಿಂಗಳಲ್ಲಿ ಅವರನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸಿರುವ ಅವರ ಹಿತೈಷಿಗಳ ಹಾಗೂ ಟೀಕಾಕಾರರ ಮಾತುಗಳನ್ನು ತೆರೆದ ಮನಸ್ಸಿನಿಂದ ಆಲಿಸಲಿ. ಪೌರ ಕಾರ್ಮಿಕರಂತಹ ವಿಷಯಗಳು ಬಂದಾಗ ಆರ್ಥಿಕ ಸಂಗತಿಗಳ ಜೊತೆಗೆ ಸಾಮಾಜಿಕ ಸೂಕ್ಷ್ಮಗಳು ಇರುತ್ತವೆ ಎಂಬ ಗ್ರಹಿಕೆ ಪ್ರಾಪ್ತವಾಗಲಿ. ಪ್ರಜಾಪ್ರಭುತ್ವದ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಗಳನ್ನು ಗ್ರಹಿಸಲಿ ಹಾಗೂ ಹೊಸ ಅರಿವನ್ನು ಕಾಣಲಿ. ತನ್ಮೂಲಕ ರಾಜ್ಯಕ್ಕೆ ಒಬ್ಬ ದಕ್ಷ, ಪ್ರಾಮಾಣಿಕ ರಾಜಕಾರಣಿಯ ಜೊತೆಗೆ ಪ್ರಜಾತಂತ್ರವಾದಿ ಕೃಷ್ಣ ಬೈರೇಗೌಡರೂ ದಕ್ಕಲಿ.
ಹರ್ಷಕುಮಾರ್ ಕುಗ್ವೆ
ಸಂಪಾದಕರು, ಕನ್ನಡ ಪ್ಲಾನೆಟ್.
ಇದನ್ನು ಓದಿದ್ದೀರಾ? – ಸಂಪಾದಕೀಯ | ಕೃಷ್ಣ ಬೈರೇಗೌಡರೇ, ಪೌರಕಾರ್ಮಿಕರನ್ನು ಅಪಮಾನಿಸುವ ಮುನ್ನ ಇದೆಲ್ಲ ಯೋಚಿಸಬೇಕಿತ್ತಲ್ಲವೇ?


