ಸಂಪಾದಕೀಯ | ಸಿದ್ಧರಾಮಯ್ಯ ಎಂಬ ರಾಜಕೀಯ ದಾರ್ಶನಿಕನನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ!

ಬಹುಶಃ ನಮ್ಮ ಕಾಲಘಟ್ಟದಲ್ಲಿ ಸಿದ್ಧರಾಮಯ್ಯನವರಂಥ ಅಪ್ಪಟ ಜನನಾಯಕನನ್ನು ನೋಡಲು ಸಾಧ್ಯವಿಲ್ಲ. ಅವರು ನನ್ನ ದೃಷ್ಟಿಯಲ್ಲಿ ಒಬ್ಬ ಜನನಾಯಕ ಮಾತ್ರವಲ್ಲ, ಸಮಸಮಾಜವನ್ನು ಬಯಸಿದ್ದ ಒಬ್ಬ ದಾರ್ಶನಿಕ. ಈ ಸತ್ಯ ಇವತ್ತಲ್ಲ ನಾಳೆ ಅರ್ಥವಾಗುತ್ತ ಹೋಗುತ್ತದೆ. ಇತಿಹಾಸ ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತದೆ – ದಿನೇಶ್ ಕುಮಾರ್ ಎಸ್.ಸಿ, ಸಂಪಾದಕರು, ಕನ್ನಡ ಪ್ಲಾನೆಟ್.

“I honestly believe that history will be kinder to me than the contemporary media, or for that matter, the Opposition parties in Parliament.”

ಡಾ. ಮನಮೋಹನ್‌ ಸಿಂಗ್‌ ಯಾಕೆ ಈ ಮಾತು ಹೇಳಿದರು ಅನ್ನುವುದು ಅವರು ಪ್ರಧಾನಿ ಹುದ್ದೆಯಿಂದ ಇಳಿದು ಹೋದ ನಂತರ ಜನರಿಗೆ ಅರ್ಥವಾಗತೊಡಗಿತು. ಸಮಕಾಲೀನ ಮಾಧ್ಯಮ, ವಿರೋಧ ಪಕ್ಷಗಳು ನನ್ನ ಕುರಿತು ಕ್ರೂರಿಯಾಗಿರಬಹುದು, ಆದರೆ ಇತಿಹಾಸ ನನ್ನನ್ನು ಕರುಣೆಯಿಂದ ನೋಡಲಿದೆ ಎಂದಿದ್ದರು ಅವರು.  ಮನಮೋಹನ್‌ ಸಿಂಗ್‌ ಒಬ್ಬ ದಾರ್ಶನಿಕನಂತೆ ದೇಶದ ಉನ್ನತ ಸ್ಥಾನದಲ್ಲಿ ಇದ್ದು ನಡೆದುಹೋದರು. ದೇಶದ ಚಹರೆಯನ್ನೇ ಬದಲಾಯಿಸಿದರು.

ವಿಶೇಷ ನೋಡಿ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಮಯದಲ್ಲಿ ಸಿದ್ಧರಾಮಯ್ಯನವರು ಕೂಡ ಇದನ್ನೇ ಹೇಳಿದ್ದಾರೆ.

“ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ.’’

ವರ್ತಮಾನ ಇಂಥ ನಾಯಕರ ವಿಷಯದಲ್ಲಿ ಕ್ರೂರವಾಗಿಯೇ ಇರುತ್ತದೆ. ಅದಕ್ಕೆ ಎರಡು ಕಾರಣಗಳು. ಒಂದು, ಸಮಾನತೆಯ-ಸಾಮಾಜಿಕ ನ್ಯಾಯದ ಹರಿಕಾರರನ್ನು ಯಥಾಸ್ಥಿತಿವಾದಿ ಮನಸುಗಳು ಒಪ್ಪಿಕೊಳ್ಳುವುದಿಲ್ಲ ಮತ್ತು ಅವರ ವಿರುದ್ಧ ನಿರಂತರ ಪಿತೂರಿಗಳನ್ನು ಮಾಡುತ್ತಲೇ ಇರುತ್ತವೆ. ಇವರು ವಿಷ ಹರಡುವುದರಲ್ಲಿ ನಿಷ್ಣಾತರು. ಯಾರನ್ನು ಯಾರ ವಿರುದ್ಧವಾದರೂ ಎತ್ತಿಕಟ್ಟುವ ಶಕ್ತಿ ಹೊಂದಿದವರು.

ಮತ್ತೊಂದು ಮಹತ್ವದ ಕಾರಣವೇನೆಂದರೆ, ಇಂಥ ನಾಯಕರಿಂದ ನಿರೀಕ್ಷೆಗಳು ಹೆಚ್ಚು. ಈ ನಿರೀಕ್ಷೆಗಳ ಭಾರವೇ ಒಂದು ರೀತಿಯಲ್ಲಿ ಅವರ ವಿರುದ್ಧ ದೊಡ್ಡ ಅಪಪ್ರಚಾರಕ್ಕೆ ಕಾರಣವಾಗುತ್ತದೆ. ತಮ್ಮ ನಾಯಕ ಜಗತ್ತಿನ ಎಲ್ಲ ಸಮಸ್ಯೆಗಳನ್ನು ಸೂಪರ್‌ ಮ್ಯಾನ್‌ ಹಾಗೆ ಬಗೆಹರಿಸಬೇಕು ಎಂದು ಜನರು ಬಯಸುತ್ತಾರೆ. ಇದು ಒಂದು ರೀತಿಯ ಫ್ಯಾಂಟಸಿ. ಇದು ಆಗದೇ ಹೋದಾಗ ನಾಯಕನ ವಿರುದ್ಧ ಟೀಕೆಗಳು ಮೊಳಗುತ್ತವೆ.

ಸಿದ್ಧರಾಮಯ್ಯನವರು ಈ ಎರಡೂ ಬಗೆಯ ವಿರೋಧಗಳನ್ನು ಎದುರಿಸಿದರು. ಅವರ ಸಮಾಜವಾದಿ ಚಿಂತನೆಗಳನ್ನು ಅರಗಿಸಿಕೊಳ್ಳದ ಮನುವಾದಿ ಶಕ್ತಿಗಳು ಅವರ ರಾಜಕೀಯ ಜೀವನದುದ್ದಕ್ಕೂಅವರನ್ನು ನಖಶಿಖಾಂತ ದ್ವೇಷಿಸಿದವು. ಧರ್ಮದ ಗುರಾಣಿಯನ್ನು ಬಳಸಿ ಸಾಮಾನ್ಯ ಜನರನ್ನು ಸಿದ್ಧರಾಮಯ್ಯ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ನಡೆದವು. ಇನ್ನೊಂದೆಡೆ ಸಿದ್ಧರಾಮಯ್ಯ ಅವರಿಂದ ಅಪಾರವಾದ ನಿರೀಕ್ಷೆ ಇಟ್ಟುಕೊಂಡವರೂ ನಿರಾಶೆಗೆ ಒಳಗಾದರು. ಅದರಲ್ಲೂ ವಿಶೇಷವಾಗಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಳೆದ ಮೂರು ವರ್ಷಗಳ ಅವಧಿ ಪ್ರಗತಿಪರರ ಟೀಕೆಗೆ ಗುರಿಯಾಯಿತು. ಅವರನ್ನು

ಅದೇನೇ ಇರಲಿ, ಸಿದ್ಧರಾಮಯ್ಯ ಅವರು ಈಗ ಸದ್ದುಗದ್ದಲವಿಲ್ಲದೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಹೋಗಿದ್ದಾರೆ. ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ, ಕೋಮುವಾದದ ವಿರುದ್ಧ ಕೊನೆ ಉಸಿರು ಇರುವವರೆಗೆ ಹೋರಾಡುತ್ತೇನೆ ಎಂದು ಅವರು ಘೋಷಿಸಿದ್ದಾರೆ. ಆದರೆ ಅವರು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗುವುದಿಲ್ಲ, ಅದಂತೂ ಖಚಿತ. ಹೀಗಾಗಿ ಸಿದ್ಧರಾಮಯ್ಯ ಅವರ ರಾಜಕಾರಣದ ಒಂದು ಯುಗ ಮುಕ್ತಾಯವಾಗಿದೆ. ಸಿದ್ಧರಾಮಯ್ಯ ಅವರ ರಾಜಕಾರಣವೆಂದರೆ ಅಹಿಂದ ರಾಜಕಾರಣ, ಸಮಾಜವಾದಿ ರಾಜಕಾರಣ, ಸಾಮಾಜಿಕ ನ್ಯಾಯದ ರಾಜಕಾರಣ. ಹೀಗಾಗಿ ಒಂದು ನಿರ್ವಾತವಂತೂ ಸೃಷ್ಟಿಯಾಗಿದೆ. ಸಿದ್ಧರಾಮಯ್ಯ ಅವರಿಂದ ಖಾಲಿಯಾದ ಜಾಗವನ್ನು ತುಂಬುವುದು ಕಷ್ಟ.  ಅಥವಾ ಅದಕ್ಕೆ ಬಹಳ ಕಾಲವೇ ಬೇಕಾಗುತ್ತದೆ.

ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್‌ ನವರಿಗಿಂತ ಹೆಚ್ಚು ಬಿಜೆಪಿಯವರೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. “ನಮ್ಮ ವಿರೋಧಿ ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ. ಅದನ್ನು ನಾವು ಈಗ ನೋಡೋದೇ ಅನುಕಂಪದಿಂದ. ನಮ್ಮ ವಿರೋಧಿ ಸಿದ್ಧರಾಮಯ್ಯ. ಸಿದ್ಧರಾಮಯ್ಯ ಎಂದರೆ ಒಬ್ಬ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಆ ಸಿದ್ಧಾಂತ ನಮ್ಮ ವಿರೋಧಿ ಸಿದ್ಧಾಂತ. ಹೀಗಾಗಿ ಆ ಸಿದ್ಧಾಂತವನ್ನು ಸೋಲಿಸಬೇಕು…” ಎಂದು ಬಿಜೆಪಿಯ ಉನ್ನತ ನಾಯಕರೊಬ್ಬರು ಹೇಳಿದ್ದರು.

ಸಿದ್ಧರಾಮಯ್ಯ ಅವರ ನಂತರ ಕಾಂಗ್ರೆಸ್‌ ನಲ್ಲಿ ತಾವೇ ಒಂದು ಸಿದ್ಧಾಂತದಂತೆ ಬಲಪಂಥೀಯ ಶಕ್ತಿಗಳ ವಿರುದ್ಧ ತೊಡೆತಟ್ಟಿ ನಿಲ್ಲಬಲ್ಲ ಇನ್ನೊಬ್ಬ ನಾಯಕ ನಮಗೆ ಕಾಣಿಸುತ್ತಿಲ್ಲ. ಬಹುತೇಕ ನಾಯಕರು ನಾಳೆ ಬೆಳಿಗ್ಗೆನೇ ಬಿಜೆಪಿ ಸೇರಿಕೊಂಡರೂ ಅಲ್ಲಿಗೂ ಅವರು ಭರ್ಜರಿಯಾಗಿ ಹೊಂದಿಕೆಯಾಗಿಬಿಡುತ್ತಾರೆ. ಯಾವ ಸೈದ್ಧಾಂತಿಕ ಸಮಸ್ಯೆಗಳೂ ಅವರಿಗೆ ಎದುರಾಗುವುದಿಲ್ಲ. ಆದರೆ ಸಿದ್ಧರಾಮಯ್ಯ ಅವರನ್ನು ಬಿಜೆಪಿಯಲ್ಲಿ ಒಂದು ಕ್ಷಣವೂ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಕರ್ನಾಟಕದ ಮಟ್ಟಿಗೆ ಸಿದ್ಧರಾಮಯ್ಯ ಹೇಗೆ ಕಾಂಗ್ರೆಸ್‌ ನ ಪ್ರಗತಿಪರ ಮುಖವಾಗಿ ಕಾಣಿಸಿಕೊಂಡಿದ್ದರು ಎಂಬುದನ್ನು ನಾವು ಇದೊಂದು ಉಲ್ಲೇಖದೊಂದಿಗೆ ಅರ್ಥ ಮಾಡಿಕೊಳ್ಳಬಹುದು.

ಹಲವು ವರ್ಷಗಳ ಹಿಂದಿನ ಮಾತು. ಸಿದ್ಧರಾಮಯ್ಯ ಅವರು ಇನ್ನೂ ಮುಖ್ಯಮಂತ್ರಿಯಾಗಿರಲಿಲ್ಲ. ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಏರ್ಪಡಿಸಿದ್ದ ಒಂದು ಸಭೆಯಲ್ಲಿ ಸಿದ್ಧರಾಮಯ್ಯ ಭಾಗವಹಿಸಿದ್ದರು. ಜೆ.ಶ್ರೀನಿವಾಸನ್‌ ಆಗ ಒಕ್ಕೂಟದ ಅಧ್ಯಕ್ಷರಾಗಿದ್ದರು. ಸಿದ್ಧರಾಮಯ್ಯ ಅವರು ಅಂದು ಆಡಿದ ಮಾತು ಅವರ ಸೈದ್ಧಾಂತಿಕ ಸ್ಪಷ್ಟತೆಗೆ ನಿದರ್ಶನವಾಗಿತ್ತು.  ಮೀಸಲಾತಿಯೊಂದರಿಂದಲೇ ಸಾಮಾಜಿಕ ಸಮಾನತೆ ಮೂಡುತ್ತದೆ ಎಂಬ ಭ್ರಮೆಗೆ ಅವರು ಒಳಗಾಗಿರಲಿಲ್ಲ. ಅಹಿಂದ ಜನವರ್ಗಗಳಿಗೆ ಸಂಪತ್ತಿನ ಹಂಚಿಕೆಯಾಗಬೇಕು ಎಂಬ ಸ್ಪಷ್ಟ ಮಾತುಗಳನ್ನು ಅವರು ಹೇಳಿದ್ದರು. ಈ ದೇಶದಲ್ಲಿ ಸಂಪತ್ತಿನ ಸಮಾನ ಹಂಚಿಕೆ ಅನ್ನೋದು ಒಂದು ಬಹುದೊಡ್ಡ ಕನಸು. ಅದು ಅಷ್ಟು ಸುಲಭವಾಗಿ ಈಡೇರುವುದಿಲ್ಲ ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತಿರಲಿಲ್ಲ ಎಂದೇನಲ್ಲ. ಆದರೆ ಸಂಪತ್ತಿನ ಹಂಚಿಕೆಯ ದಾರಿಗಳನ್ನಾದರೂ ತೆರೆಯಬೇಕು ಎಂಬ ವಿವೇಕ ಅವರಿಗೆ ಇತ್ತು.

ಸಿದ್ಧರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿಗಳೆಲ್ಲವೂ ಸಂಪತ್ತಿನ ಹಂಚಿಕೆಯ ಒಂದು ಸಣ್ಣ ಪ್ರಯೋಗ ಅಷ್ಟೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದನ್ನೇ ರಾಹುಲ್ ಗಾಂಧಿ ‘ನ್ಯಾಯ್’ ಎಂದು ಕರೆದರು. ʻನ್ಯಾಯ್‌ʼ ಎಂಬ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಇದನ್ನೇ ಹೇಳುತ್ತಿತ್ತು. ಸಿದ್ಧರಾಮಯ್ಯ ಅವರ ಗ್ಯಾರೆಂಟಿ ಯೋಜನೆಗಳು ಈಗ ಬಿಜೆಪಿಗೂ ಅನಿವಾರ್ಯವಾಗಿ ಹೋಗಿವೆ. ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿ ಗ್ಯಾರೆಂಟಿಗಳು ಈಗ ಅನುಷ್ಠಾನವೂ ಆಗಿದೆ. ಸಾಮಾಜಿಕ ನ್ಯಾಯದ ಅಲೆ ಎದ್ದರೆ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ವಿರೋಧಿಗಳೂ ಕೂಡ ಹಣೆಮಣಿಯಬೇಕಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ.

ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗದೇ ಇರುವುದು ನಮ್ಮ ಸರ್ಕಾರಗಳ ಬೇಜವಾಬ್ದಾರಿ ಮತ್ತು ದುರ್ನೀತಿಯ ಫಲ. ಹಾಗೆಂದು ಕಡುಬಡವರಿಗೆ ಅಗ್ಗದ ದರದಲ್ಲಿ ಅಕ್ಕಿ, ಧಾನ್ಯ ಕೊಡುವುದು ಅವರನ್ನು ಸೋಮಾರಿಗಳಾಗಿಸುವ ಕ್ರಮ ಎಂದು ಹೇಳುವುದು ಅಮಾನವೀಯ. ತಿಂಗಳಿಗೆ ಮೂವತ್ತು ಕೆಜಿ ಅಕ್ಕಿ ಮೂವತ್ತು ರುಪಾಯಿಗೆ ಸಿಕ್ಕರೆ ಒಂದು ಕುಟುಂಬ ಒಂದು ಹೊತ್ತಾದರೂ ನೆಮ್ಮದಿಯಿಂದ ಊಟ ಮಾಡಲು ಸಾಧ್ಯ. ಬಡಜನರು ಎಂದಿಗೂ ಸೋಮಾರಿಗಳಲ್ಲ, ಆಗುವವರೂ ಅಲ್ಲ. ಅಕ್ಕಿ ಕೊಟ್ಟರೆ ಸೋಮಾರಿಗಳಾಗುತ್ತಾರೆ ಎಂದು ಕೂಗುವವರಿಗೆ ಬಡತನದಿಂದ ಅನುಭವಿಸಬೇಕಾದ ಹಸಿವಿನ ನೋವಿನ ಅನುಭವ ಇರುವ ಸಾಧ್ಯತೆಯೂ ಇಲ್ಲ. ಹಸಿವೆಯ ಪರಿಭಾಷೆ ಎಲ್ಲರಿಗೂ ಅರ್ಥವಾಗುವುದಿಲ್ಲ, ವಿಶೇಷವಾಗಿ ರಾಜಕೀಯ ನಾಯಕರಿಗೆ. ಬಡವರಿಗೆ ಹಸಿವೆಯೇ ದೊಡ್ಡ ಶತ್ರು. ಅದು ಇಂಚುಇಂಚಾಗಿ ಸಾಯಿಸುತ್ತ ಹೋಗುತ್ತದೆ. ಹಸಿವೆ ಎಂಬುದು ಪರಮಕ್ರೂರಿ.

ಆದ್ಯ ವಚನಕಾರರಾದ ಜೇಡರ ದಾಸಿಮಯ್ಯನವರ ಒಂದು ವಚನ ನೆನಪಾಗುತ್ತದೆ. ದೇವರಿಗೇ ಸವಾಲು ಎಸೆಯುವ ವಚನವದು.

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.

ದೇಹವೇ ಇಲ್ಲದ ದೇವರಿಗೆ ಹಸಿವು ಸಂಕಟಗಳು ಅರ್ಥವಾಗುವುದು ಹೇಗೆ? ಎಂಬುದು ದಾಸಿಮಯ್ಯನವರ ಸವಾಲು. ಅದಕ್ಕಾಗಿಯೇ ಅವರು, ನೀನೊಮ್ಮೆ ಒಡಲುಗೊಂಡ ನೋಡಾ ರಾಮನಾಥ ಎಂದು ಹೇಳುತ್ತಾರೆ.

ಸಿದ್ಧರಾಮಯ್ಯನವರು ಅನ್ನಭಾಗ್ಯ ಎಂದ ಕೂಡಲೇ ಮೂಗುಮುರಿದವರು ಒಬ್ಬರೇ ಇಬ್ಬರೇ? ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದೀರಿ ಎಂದವರೇ ಹೆಚ್ಚು. ಅವರುಗಳಿಗೆ ಹಸಿವು ಎಂದರೇನು ತಿಳಿಯದು. ದಾರಿದ್ರ್ಯದ ಪರಿಚಯವೂ ಇಲ್ಲ. ಹೀಗಾಗಿ ಹಸಿದವರ ನೋವಿಗೆ ಅವರು ಸದಾ ಕಿವುಡರು. ಸಿದ್ಧರಾಮಯ್ಯ ಅವರಿಗೆ ಇದೆಲ್ಲ ಗೊತ್ತಿತ್ತು. ಯಾರು ಏನೇ ಹೇಳಿದರೂ ಅನ್ನಭಾಗ್ಯ ತಂದರು. ಎರಡನೇ ಅವಧಿಯಲ್ಲಿ ಅವರ ʻಭಾಗ್ಯʼಗಳು ವಿಸ್ತರಿಸಿಕೊಂಡವು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ತಿಂಗಳಿಗೆ ಎರಡು ಸಾವಿರ ರುಪಾಯಿ ಕೊಡುವ ಯೋಜನೆ ಸಾಮಾಜಿಕ ಚಹರೆಯನ್ನೇ ಬದಲಾಯಿಸಿತು. ಹೆಣ್ಣುಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸಿತು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ರಟ್ಟೆಗೆ ಶಕ್ತಿ ತುಂಬಿದಂತಾಯಿತು.

ಕರೋನಾ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದಾಗ, ನಾನು ಅವರಿಗೆ ಒಂದು ಮಾತು ಹೇಳಿದ್ದೆ. ʻನೀವು ಅನ್ನಭಾಗ್ಯ ಜಾರಿಗೆ ತರದೇ ಹೋಗಿದ್ದರೆ ಕೋವಿಡ್‌ ನಲ್ಲಿ ಇನ್ನೂ ಸಾವಿರಾರು ಮಂದಿ ಸತ್ತುಹೋಗುತ್ತಿದ್ದರು. ಬಡವರಿಗೆ ಕನಿಷ್ಠ ತಿನ್ನಲು ಅನ್ನವಾದರೂ ಸಿಗುತ್ತಿದೆ.ʼ

ಸಿದ್ಧರಾಮಯ್ಯ ಅವರನ್ನು ಬೇರೆ ಬೇರೆ ಕಾರಣಗಳಿಗೆ ಟೀಕಿಸುವವರು ಟೀಕಿಸಲಿ, ಅದು ಅವರ ಹಕ್ಕು. ಆದರೆ  ಕರ್ನಾಟಕದ ಸಾಮಾಜಿಕ ಚಿತ್ರಣವನ್ನು ಬದಲಿಸಿದ ಕೀರ್ತಿ ಅವರದ್ದು. ಅದನ್ನು ಯಾರೂ ಸಹ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಬಡತನ ರೇಖೆಗಿಂತ ಕೆಳಗಿನ ಜನರಿಗೆ ಅವರು ಕೊಟ್ಟ ಕೊಡುಗೆಗಳು ಎಂಥ ದೊಡ್ಡ ಕ್ರಾಂತಿಕಾರಿ ನಿರ್ಧಾರ ಎಂಬುದು ಬಹುಶಃ ಎಲ್ಲರಿಗೂ ಅರ್ಥವಾಗದು. ನನ್ನ ದೃಷ್ಟಿಯಲ್ಲಿ ಅವರು ದಾರಿದ್ರ್ಯದಿಂದ ನರಳುತ್ತಿದ್ದ ಜನರನ್ನು ಉಪಚರಿಸಲು ಸಂಜೀವಿನಿ ಪರ್ವತವನ್ನೇ ತಂದ ಹನುಮಂತ.

ಸಾಮಾಜಿಕ ಅಸಮಾನತೆಯನ್ನು ಹೊಸಕಿ ಹಾಕಲು, ತನ್ಮೂಲಕ ಬಡತನವನ್ನು ನಿರ್ಮೂಲನೆ ಮಾಡಲು ನಾಲ್ಮಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅಂಥವರ ಮಾದರಿಗಳನ್ನು ಅನುಸರಿಸಿ ದೀರ್ಘಕಾಲೀನ ಪರಿಹಾರಗಳಿಗೂ ಮುಂದಾಗಬೇಕು ಎಂಬುದು ನನ್ನ ಬಯಕೆಯಾಗಿತ್ತು. ಆದರೆ ಎಲ್ಲ ನಾಯಕರಿಗೂ ಒಂದು ಮಿತಿ ಇರುತ್ತದೆಯಲ್ಲವೇ?

ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಗೂ, ಎರಡನೇ ಅವಧಿಗೂ ಸಾಕಷ್ಟು ವ್ಯತ್ಯಾಸಗಳು ಇವೆ.  ಮೊದಲ ಅವಧಿಯಲ್ಲಿ ಐದು ವರ್ಷಗಳ ಕಾಲ ಅವರ ನಾಯಕತ್ವಕ್ಕೆ ವಿರೋಧಗಳೇ ಇರಲಿಲ್ಲ. ಆದರೆ ಎರಡನೇ ಅವಧಿ ಶುರುವಾಗಿದ್ದೇ ಒಂದು ಅಧಿಕಾರ ಹಂಚಿಕೆಯ ಸೂತ್ರದೊಂದಿಗೆ. ಅದು ಅವರನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಿಲ್ಲವಾದರೂ ಅವರು ಅಂದುಕೊಂಡಿದ್ದೆಲ್ಲವನ್ನೂ ಮಾಡಲಾಗಲಿಲ್ಲ.

ಸಿದ್ಧರಾಮಯ್ಯ ಅವರಿಗೆ ಅನೇಕ ಸಂದರ್ಭಗಳಲ್ಲಿ ಅವರ ಸಚಿವ ಸಂಪುಟದ ಸಹೋದ್ಯೋಗಿಗಳೇ ಬೆಂಬಲಕ್ಕೆ ನಿಲ್ಲಲಿಲ್ಲ. ʻನಾನು ವೈಯಕ್ತಿಕವಾಗಿ ದ್ವಿಭಾಷಾ ನೀತಿಯ ಪರವಾಗಿದ್ದೇನೆ. ಆದರೆ ನಮ್ಮ ಸಚಿವ ಸಂಪುಟ ಇದಕ್ಕೆ ಒಪ್ಪಬೇಕುʼ ಎಂದು ಸಿದ್ಧರಾಮಯ್ಯ ಒಮ್ಮೆ ಹೇಳಿದ್ದರು. ಅದರ ಅರ್ಥ ಸಿದ್ಧರಾಮಯ್ಯ ತಾವೇ ತಾವಾಗಿ ನಿರ್ಧಾರ ಕೈಗೊಳ್ಳುವ ಶಕ್ತಿ ಕಳೆದುಕೊಂಡಿದ್ದರು. ಇದು ಒಂದು ಉದಾಹರಣೆಯಷ್ಟೆ. ಮುಡಾ ಸೈಟು ವಿಷಯದಲ್ಲಿ ಅನೇಕ ಸಚಿವರು ಸಿದ್ಧರಾಮಯ್ಯ ಬೆನ್ನಿಗೆ ನಿಂತರು. ಆದರೆ ನಿಲ್ಲಬೇಕಾದಷ್ಟು ಸ್ಥಿರವಾಗಿ ನಿಂತರೇ ಎಂಬ ಅನುಮಾನ ಈಗಲೂ ಇದೆ. ಸಿದ್ಧರಾಮಯ್ಯ ತಾವೇ ಬಡಿದಾಡಿ ಆ ಕಳಂಕದಿಂದ ಹೊರಬರಬೇಕಾಯಿತು.

ಇಷ್ಟಾದ ಮೇಲೂ ಸಿದ್ಧರಾಮಯ್ಯ ಕಾಂಗ್ರೆಸ್‌ ಒಳಗೂ ಜನಪ್ರಿಯ ನಾಯಕನೇ ಆಗಿದ್ದರು, ಆಗಿದ್ದಾರೆ. ರಾಜೀನಾಮೆ ಕೊಡುವ ಬದಲು ಬಲಾಬಲ ಪರೀಕ್ಷೆಗೆ ಅವರು ತೊಡೆ ತಟ್ಟಿ ನಿಂತಿದ್ದರೆ ಸಿದ್ಧರಾಮಯ್ಯ ಅವರ ತಕ್ಕಡಿಯೇ ಭಾರವಾಗಿರುತ್ತಿತ್ತು. ಆದರೆ ಅವರು ಅದಕ್ಕೆ ಹೋಗಲಿಲ್ಲ. ಘನತೆಯಿಂದ ಅಧಿಕಾರ ತ್ಯಾಗ ಮಾಡಿದರು. ಕೊಟ್ಟ ಮಾತಿಗೆ ತಪ್ಪಲಿಲ್ಲ. ತ್ಯಾಗಕ್ಕೆ ಪ್ರತಿಫಲವಾಗಿ ಬಂದ ರಾಜ್ಯಸಭಾ ಸದಸ್ಯ ಸ್ಥಾನವನ್ನೂ ಅವರು ಸ್ವೀಕರಿಸಲಿಲ್ಲ.

ಸಿದ್ಧರಾಮಯ್ಯ ಅವರು ನನಗಿನ್ನೂ ಎರಡು ವರ್ಷಗಳ ಕಾಲ ಶಾಸಕ ಸ್ಥಾನವಿದೆ. ಕ್ಷೇತ್ರದ (ವರುಣಾ) ಜನರ ಕೆಲಸವನ್ನು ನಾನು ಮಾಡಬೇಕು ಎಂದು ಹೇಳಿಕೊಂಡರು. ಶಾಸಕ ಸ್ಥಾನದ ಅವಧಿ ಮುಗಿದ ಮೇಲೆ ಅವರು ಮತ್ತೆ ಚುನಾವಣೆಗೆ ನಿಲ್ಲಲಾರರು. ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಂತೆ ಅವರು ತಮ್ಮ ವಾಸ್ತವ್ಯವನ್ನು ಮೈಸೂರಿನ ಹೊಸ ಮನೆಗೆ ಬದಲಾಯಿಸಬಹುದು.

ಹಿಂದೊಮ್ಮೆ ನಾನೇ ಬರೆದಿದ್ದೆ. ಸಿದ್ಧರಾಮಯ್ಯ ಅವರನ್ನು ಬೆಂಬಲಿಸುವುದೆಂದರೆ ಅವರು ಪ್ರತಿಪಾದಿಸುವ ಸಿದ್ಧಾಂತವನ್ನು ಬೆಂಬಲಿಸುವುದು. ಆ‌‌ ಸಿದ್ಧಾಂತ ನಮಗೆಲ್ಲ ಆಪ್ತವಾದ ಸಮಸಮಾಜ ಕಲ್ಪನೆಯ ಸಿದ್ಧಾಂತ. ಸಿದ್ಧರಾಮಯ್ಯ ಅವರನ್ನು ಸೋಲಿಸಲು ಯತ್ನಿಸುತ್ತಿರುವುದು ಮನುವಾದಿ ಸಿದ್ಧಾಂತ. ನಾವು ಜೀವನಪರ್ಯಂತ ವಿರೋಧಿಸಿಕೊಂಡು ಬಂದ ಸಿದ್ಧಾಂತ.

ಹೀಗಾಗಿ ನನಗಂತೂ ಆಯ್ಕೆ ಸುಲಭ.  ನಿಮಗೆ?

ಬಹುಶಃ ನಮ್ಮ ಕಾಲಘಟ್ಟದಲ್ಲಿ ಸಿದ್ಧರಾಮಯ್ಯನವರಂಥ ಅಪ್ಪಟ ಜನನಾಯಕನನ್ನು ನೋಡಲು ಸಾಧ್ಯವಿಲ್ಲ. ಅವರು ನನ್ನ ದೃಷ್ಟಿಯಲ್ಲಿ ಒಬ್ಬ ಜನನಾಯಕ ಮಾತ್ರವಲ್ಲ, ಸಮಸಮಾಜವನ್ನು ಬಯಸಿದ್ದ ಒಬ್ಬ ದಾರ್ಶನಿಕ. ಈ ಸತ್ಯ ಇವತ್ತಲ್ಲ ನಾಳೆ ಅರ್ಥವಾಗುತ್ತ ಹೋಗುತ್ತದೆ. ಇತಿಹಾಸ ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತದೆ.

ದಿನೇಶ್ ಕುಮಾರ್ ಎಸ್.ಸಿ.

ಹಿರಿಯ ಪತ್ರಕರ್ತರು

More articles

Latest article

Most read