ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತ ತಲುಪುತ್ತಿದ್ದು ಸದ್ಯ ಬರೋಬ್ಬರಿ 84,31,612 ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 84 ಲಕ್ಷ ಮತದಾರರು ಅನರ್ಹರು ಎಂದು ಹೇಳಲಾಗದು. ವಿವಿಧ ನಮೂನೆಯ ಫಾರಂಗಳನ್ನು ಭರ್ತಿ ಮಾಡಿ ಮರಳಿ ಅವರು ಮತದಾರರ ಪಟ್ಟಿಗೆ ಸೇರಲು ಅವಕಾಶಗಳಿವೆ ಎಂದು ಹೇಳಿದರು.
ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತೆರಳಿ ಸ್ಥಳ ಮಹಜರು ಮಾಡಲಾಗಿದ್ದು, ಮೃತರ ಮರಣ ಪ್ರಮಾಣ ಪತ್ರ ಸಂಗ್ರಹಿಸಲಾಗಿದೆ. ಅಲ್ಲದೆ ಸಂಬಂಧಪಟ್ಟವರಿಂದ ಸಹಿ ಕೂಡ ಪಡೆಯಲಾಗಿದೆ. ಹೀಗಾಗಿ ಈ 84 ಲಕ್ಷಕ್ಕೂ ಅಧಿಕ ಜನರನ್ನು ಮೊದಲ ಕರಡು ಪಟ್ಟಿಯಲ್ಲಿ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರಡು ಪಟ್ಟಿಯಿಂದ ಯಾರು ಔಟ್?
ಚುನಾವಣಾ ಆಯೋಗವು ಮೊದಲ ಕರಡು ಪಟ್ಟಿಯಿಂದ ಹೊರಗಿಡಲು ಗುರುತಿಸಿರುವ ಒಟ್ಟು 84,31,612 ಮತದಾರರಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡವರ ಸಂಖ್ಯೆ ಅಧಿಕವಾಗಿದೆ. 51,74,968 ಮಂದಿ ಈ ವ್ಯಾಪ್ತಿಯಲ್ಲಿ ಇದ್ದಾರೆ. ಇನ್ನು 14,99,799 ಮೃತಪಟ್ಟ ಮತದಾರರನ್ನು ಗುರುತಿಸಲಾಗಿದೆ. 11,61,231 ಜನರು ಯಾವುದೇ ಸುಳಿವು ಸಿಗದೆ ನಾಪತ್ತೆಯಾಗಿರುವುದು ಕಂಡುಬಂದಿದೆ. ಇದರ ಜೊತೆಗೆ 5,62,572 ನಕಲಿ ಅಥವಾ ಎರಡೆರಡು ಕಡೆ ಮತ ಹಕ್ಕು ಹೊಂದಿರುವವರು ಎಂದು ಭಾವಿಸಲಾಗಿದೆ ಹಾಗೂ ಸಹಿ ಮಾಡಲು ನಿರಾಕರಿಸಿದ 33,042 ಇತರ ಜನರನ್ನು ಕರಡು ಪಟ್ಟಿಯಿಂದ ಹೊರಗಿಡಲು ಪಟ್ಟಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯಾದ್ಯಂತ ಒಟ್ಟು 5,54,32,314 ಮತದಾರರ ಗಣಿತಿ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,26,75,861 ಅರ್ಜಿಗಳನ್ನು ಬಿಎಲ್‌ಒಗಳು ಸ್ವೀಕರಿಸಿ ಡಿಜಿಟಲೀಕರಣ ಪ್ರಕ್ರಿಯೆ ಮಾಡಿದ್ದಾರೆ. ಹೀಗಾಗಿ ಪ್ರಸ್ತುತ ಎಸ್‌ಐಆರ್ ಕಾರ್ಯ ಶೇ. 76.99 ರಷ್ಟು ಪ್ರಗತಿ ಸಾಧಿಸಿದೆ. ಇನ್ನು 43,24,841 ಮತದಾರರ ಮಾಹಿತಿ ಸಿಗಬೇಕಿದ್ದು, ಆ.8ರ ನಂತರ ಇವರ ಬಗ್ಗೆ ಸಂಪೂರ್ಣ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಇದರ ಜೊತೆಗೆ 3.22 ಲಕ್ಷ ಆನ್‌ಲೈನ್ ಅರ್ಜಿಗಳು, 2,283 ಫಾರ್ಮ್ 6ಎ ಅರ್ಜಿಗಳು ಹಾಗೂ 7.73 ಲಕ್ಷ ಫಾರ್ಮ್ 7 ಅರ್ಜಿಗಳು ಸ್ವೀಕೃತಗೊಂಡಿವೆ ಎಂದರು.
ಬೆಂಗಳೂರಿನಲ್ಲಿ ಶೇ.40ರಷ್ಟು ಮತದಾರರ ಸುಳಿವೇ ಇಲ್ಲ:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದು, ಈ ಪೈಕಿ ಇದುವರೆಗೆ ಕೇವಲ 47.97 ಲಕ್ಷ ಜನರು ಮಾತ್ರ ಗಣತಿ ಅರ್ಜಿ ಹಿಂದಿರುಗಿಸಿದ್ದಾರೆ. ದ 16.57 ಲಕ್ಷ ಮತದಾರರು ಅರ್ಜಿಗಳನ್ನು ವಾಪಸ್ ನೀಡಬೇಕಿದೆ ಉಳಿದ 39.38 ಲಕ್ಷ ಎಂದರೆ ಅಂದಾಜು ಶೇ. 40 ರಷ್ಟು ಮತದಾರರ ಯಾವುದೇ ಸುಳಿವೇ ಇಲ್ಲ ಎಂದು ಚುನಾವಣಾ ಅಯೋಗ ಆತಂಕ ವ್ಯಕ್ತಪಡಿಸಿದೆ.
ಶಾಶ್ವತ ಸ್ಥಳಾಂತರಗೊಂಡಿರುವವರೆಗೆ ಮತ್ತೆ ಅವಕಾಶ
ರಾಜ್ಯದಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಾಗಿದ್ದು ದೇಶದ ಬೇರೆ ಎಲ್ಲೂ ಮತ ಹೊಂದಿರದಿದ್ದರೆ ಫಾರ್ಮ್-6 ಮೂಲಕ ಸೂಕ್ತ ವಿಳಾಸದ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಅವರು ಕರ್ನಾಟಕದಲ್ಲಿ ವಾಸ ಮಾಡುತ್ತಿರುವುದಕ್ಕೆ ಸರಿಯಾದ ದಾಖಲೆ ಸಲ್ಲಿಸಿದರೆ ಅವರ ಹೆಸರನ್ನು ಪರಿಗಣಿಸಲಾಗುತ್ತದೆ, ಇಲ್ಲವಾದಲ್ಲಿ ಅಂತಿಮ ಪಟ್ಟಿಯಿಂದಲೂ ಅವರನ್ನು ಹೊರಗಿಡಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳಿದರು.
ಇದುವರೆಗೆ ಮತದಾರರ ಗಣತಿ ಅರ್ಜಿ ವಾಪಸ್ ಕೊಡದೇ ಇರುವವರು ಆ.8 ರ ಒಳಗಾಗಿ ಬಿಎಲ್‌ಒ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಅಂದಾಜು 29 ಲಕ್ಷ ಮತದಾರರು 2002ರ ಮಾಹಿತಿ ಇಲ್ಲ ಎಂಬ ಕಾರಣ ನೀಡಿ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಮಾಹಿತಿ ಲಭ್ಯವಿಲ್ಲದಿದ್ದರೂ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

