ಗಜಾನನ ಲಾಡ್ಜ್ ನ ರೋಚಕ ಕತೆ
ಕಾರ್ಕಳದಿಂದ ಹೊರಟು, ಮಂಗಳೂರು ತಲಪಿ, ಕದ್ರಿ ದೇಗುಲ ಬಳಿಯ ʼಗಜಾನನ ಲಾಡ್ಜ್ʼ ಸೇರಿಕೊಂಡೆ ಎಂದೆನಲ್ಲ, ಮುಂದಿನ ಮೂರು ವರ್ಷಗಳ ಕಾಲ ನನಗೆ ಆಶ್ರಯ ನೀಡಿದ ಈ ʼಗಜಾನನ ಲಾಡ್ಜ್ʼ ನ ಕತೆ ರೋಚಕವಾಗಿದೆ.
ಮಂಗಳೂರು ಕದ್ರಿ ಮಲ್ಲಿಕಟ್ಟೆಯಿಂದ ಕದ್ರಿ ದೇವಸ್ಥಾನಕ್ಕೆ ಹೋಗುವ ಮುಖ್ಯ ಬೀದಿಯಲ್ಲಿ, ಕದ್ರಿ ದೇವಸ್ಥಾನದಿಂದ ಸುಮಾರು ಒಂದು ಫರ್ಲಾಂಗು ಹಿಂದೆ, ಬಲಬದಿಯಲ್ಲಿ ಒಂದು ಹಳೆಯ ಕಟ್ಟಡವಿತ್ತು. ಅದಕ್ಕೆ ಬೋರ್ಡ್ ಇರಲಿಲ್ಲ. ಆದರೆ ಎಲ್ಲರೂ ಅದನ್ನು ಕರೆಯುತ್ತಿದ್ದುದು ʼಗಜಾನನ ಲಾಡ್ಜ್ʼ ಎಂದೇ. ʼಲಾಡ್ಜ್ʼ ಎಂದಾಕ್ಷಣ, ಅದೇನೋ ಸ್ಟಾರ್ ಹೊಟೇಲ್ ಗಳಂತಹ ಲಾಡ್ಜ್ ಎಂದುಕೊಳ್ಳಬೇಡಿ. ಒಂದು ಹಳೆಯ ಕಟ್ಟಡ.
ಅದರ ಮಾಲೀಕರನ್ನು ʼಭಟ್ರುʼ ಎಂದು ಕರೆಯುತ್ತಿದ್ದರೇ ಹೊರತು, ಅವರ ಪೂರ್ಣ ಹೆಸರು ಎಂದೂ ನನಗೆ ತಿಳಿಯಲಿಲ್ಲ. ನಾನು ಅಲ್ಲಿ ಸೇರಿಕೊಂಡುದು ಅವರ ಮೂಲಕವೂ ಅಲ್ಲ; ಅದು ಅವರಿಗೆ ಗೊತ್ತೂ ಇರಲಿಲ್ಲ. ಅಣ್ಣ ಮತ್ತು ಅವರ ಒಬ್ಬ ಗೆಳೆಯರು ಅಲ್ಲಿ ರೂಮು ಮಾಡಿಕೊಂಡಿದ್ದರು. ನಾನೂ ಅವರನ್ನು ಸೇರಿಕೊಂಡೆ (ಅಣ್ಣ ರೂಮು ತೊರೆದು ಹೋದ ಮೇಲೆ ನಾನು ಅಲ್ಲೇ ಇನ್ನೊಬ್ಬ ಗೆಳೆಯನ ರೂಮು ಸೇರಿಕೊಂಡೆ). ಮಾಲೀಕರ ಮನೆ ದೇವಸ್ಥಾನದ ಹತ್ತಿರ ಎಲ್ಲೋ ಇತ್ತು. ಮೊಪೆಡ್ ಒಂದರಲ್ಲಿ ತಿಂಗಳಿಗೊಮ್ಮೆ ಅವರು ಬಾಡಿಗೆ ವಸೂಲಿಗೆ ಬರುತ್ತಿದ್ದರು. ಅವರು ಬರುವಾಗಲೆಲ್ಲ ಅನಧಿಕೃತ ನಿವಾಸಿಗಳಾಗಿದ್ದ ನಮಗೆಲ್ಲ ಒಂದು ತೆರನ ಭಯ; ಒಮ್ಮೊಮ್ಮೆ ಅಡಗಿ ಕೂರುವುದೂ ಇತ್ತು.
ಮನೆಯ ಅಂಗಳದಲ್ಲಿಯೇ ಒಂದು ಸುಸ್ಥಿತಿಯಲ್ಲಿರುವ ಬಾವಿ ಇರುವ ಆ ಕಟ್ಟಡ ಹಿಂದೆ ಎಲ್ಲೋ ಒಂದು ದೊಡ್ಡ ಹಳೆಯ ಮನೆಯಾಗಿದ್ದಿರಬೇಕು. ಮಾಲೀಕರು ದುಡ್ಡಿನ ಆಸೆಯಿಂದ ಆ ಕಟ್ಟಡವನ್ನು ಚಿಕ್ಕ ಚಿಕ್ಕ ಗೂಡುಗಳಂಥ ಕೊಠಡಿಗಳನ್ನಾಗಿಸಿ ಬಾಡಿಗೆಗೆ ಕೊಟ್ಟಿದ್ದರು. ಗೂಡು ಎಂದರೆ ಎಂಥದ್ದು? ಕೇವಲ ಎಂಟು ಚದರ ಅಡಿಯ ಗಾತ್ರದ್ದು. ಅನೇಕ ಮನೆಗಳ ಬಾತ್ ರೂಮ್ ಅದಕ್ಕಿಂತ ದೊಡ್ಡದಿರುತ್ತದೆ. ಅಟ್ಟದಲ್ಲಿಯೂ ರೂಮುಗಳು. ಅಂತಹ ಸಂಕೀರ್ಣ ಕಟ್ಟಡ ಅದು. ಸರಿಯಾದ ಉಸ್ತುವಾರಿಗೆ ಜನ ಇಲ್ಲದ ಕಾರಣ, ಅಂದರೆ ʼಹೇಳುವವರು ಕೇಳುವವರು ಯಾರೂ ಇಲ್ಲದ ಕಾರಣʼ ಆ ಕಟ್ಟಡದಲ್ಲಿ ಅಪರಿಚಿತ ಹೊಸ ಬಾಡಿಗೆದಾರರೇ ತುಂಬಿರುತ್ತಿದ್ದರು. ಒಬ್ಬರು ಇನ್ನೊಬ್ಬರನ್ನು, ಆ ಇನ್ನೊಬ್ಬರು ಮಗದೊಬ್ಬರನ್ನು ಹೀಗೆ ಸೇರಿಸಿಕೊಂಡು ಹೋಗಿದ್ದರು. ಯಾರು ಮೂಲದವರು, ಯಾರು ಆ ಬಳಿಕ ಸೇರಿದವರು ಇದ್ಯಾವುದೂ ಭಟ್ಟರಿಗೆ ಗೊತ್ತಿರಲಿಲ್ಲ. ಅವರಿಗೆ ಒಟ್ಟಿನಲ್ಲಿ ದುಡ್ಡು ಬಂದರಾಯಿತು.
ಎರಡೋ ಮೂರೋ ಸ್ನಾನದ ಕೋಣೆ, ಅಷ್ಟೇ ಸಂಖ್ಯೆಯ ಸಂಡಾಸು ಇಷ್ಟೇ ಅದರ ಹೆಚ್ಚುವರಿ ಐಷಾರಾಮ. ಇಂತಹ ಕಟ್ಟಡದಲ್ಲಿ, ಒಂದು ಕೋಣೆಯಲ್ಲಿ ಎರಡು ಮೂರು ಹೀಗೆ, ಒಟ್ಟು ಹತ್ತಿರ ಹತ್ತಿರ ನಲವತ್ತಕ್ಕೂ ಮಿಕ್ಕಿ ಬಾಡಿಗೆದಾರರಿದ್ದರು ಅಲ್ಲಿ. ಕೆ ಎಸ್ ಆರ್ ಟಿ ಸಿ, ಕೆ ಇ ಬಿ, ಶಿಕ್ಷಣ ಇಲಾಖೆ, ಅಂಚೆ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಆಕಾಶವಾಣಿ, ಖಾಸಗಿ ಕಾರ್ಖಾನೆಗಳು, ರೆವಿನ್ಯೂ, ಕೆಪಿಟಿ ಹೀಗೆ ಎಲ್ಲೆಲ್ಲೋ ದುಡಿಯುವ, ಕರ್ನಾಟಕದ ಯಾವ್ಯಾವುದೋ ಮೂಲೆಗಳಿಂದ ಬಂದ ಯುವಕರೆಲ್ಲ ಅಲ್ಲಿದ್ದು ಅದೊಂದು ಮಿನಿ ಕರ್ನಾಟಕದಂತಿತ್ತು. ಅಲ್ಲಿ ಒಳ್ಳೆಯ ಹಾಡುಗಾರರೂ ಇದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಒಬ್ಬರು, ʼಎಲ್ಲೋ ಜೋಗಪ್ಪ ನಿನ್ನರಮನೆ…ʼ ಎಂಬ ಹಾಡನ್ನು ಸಂಜೆ ಹೊತ್ತು ಊರಿಗೆಲ್ಲ ಕೇಳುವ ಹಾಗೆ ಇಂಪಾಗಿ ಹಾಡುತ್ತಿದ್ದರು.
ಕೆಲವರು ಸೀಮೆ ಎಣ್ಣೆ ಸ್ಟೌವ್ ಇರಿಸಿಕೊಂಡು ಆ ಎಂಟು ಚದರಡಿಯ ಕೋಣೆಯಲ್ಲಿಯೇ ಅಡುಗೆ ಕೂಡಾ ಮಾಡುತ್ತಿದ್ದರು. ಆರ್ ಎಂ ಎಸ್ (ಅಂಚೆ ಇಲಾಖೆ), ಕಾರ್ಖಾನೆ ಹೀಗೆ ರಾತ್ರಿ ಪಾಳಿಯಲ್ಲಿ ದುಡಿಯುವವರು ರಾತ್ರಿ ಅಲ್ಲಿ ಇರುತ್ತಿರಲಿಲ್ಲ. ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಹಗಲು ಅಲ್ಲಿರುತ್ತಿರಲಿಲ್ಲ. ಹಾಗಾಗಿ ಅಲ್ಲಿ ಎಲ್ಲರೂ ಎಂದೂ ಒಟ್ಟು ಸೇರುತ್ತಿರಲಿಲ್ಲ. ಎಷ್ಟು ಮಂದಿ ಇದ್ದಾರೆ ಎನ್ನುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಬಹುತೇಕ ಜನರಿಗೆ ʼಮಲಗಲು ಮಾತ್ರʼ ಎಂಬಂತಿದ್ದ ಆಶ್ರಯ ಅದಾದುದರಿಂದ ಜನದಟ್ಟಣೆ ಅಂತಹ ಒಂದು ಸಮಸ್ಯೆಯಾಗಿರಲಿಲ್ಲ.
ನಾನು ಅಲ್ಲಿದ್ದುದು ಒಂದು ಅನಿವಾರ್ಯ ಕಾರಣದಿಂದ. ಎಂಸಿಎಫ್ ನಲ್ಲಿ ಆಗ ನನ್ನದು ಪ್ರಶಿಕ್ಷಣಾರ್ಥಿಯ (ಟ್ರೈನಿ) ಸ್ಥಾನಮಾನ. ತಿಂಗಳಿಗೆ ಕೇವಲ 450 ರುಪಾಯಿ ಸ್ಟೈಪೆಂಡ್. ಹೀಗಾಗಿ ಬೇರೆ ರೂಮು ಮಾಡುವಂತಿರಲಿಲ್ಲ. ಆದ್ದರಿಂದ ಅಣ್ಣನ ಜತೆ ಅಲ್ಲೇ ತಳವೂರಿದ್ದೆ. ಆ ರೂಮಿನಲ್ಲಿ ನಾನು, ಅಣ್ಣ ಮತ್ತು ಆತನ ಒಬ್ಬ ಗೆಳೆಯ ಹೀಗೆ ಮೂರು ಜನ ಇದ್ದೆವು. ಚಾಪೆ, ಹೊದಿಕೆ ಯಾವುದೂ ಸರಿ ಇರಲಿಲ್ಲ. ಲುಂಗಿ ಉಟ್ಟುಕೊಂಡು ಮಲಗುವುದು, ಬೆಳಕು ಆರಿದ ಮೇಲೆ ಅದನ್ನೇ ಬಿಚ್ಚಿ ಮೈಮೇಲಿನ ಹೊದಿಕೆಯಾಗಿಸುವುದು. ಇಂತಹ ಬದುಕು.
ಪೇಟೆಯ ಮಧ್ಯದಲ್ಲೇ ಇರುವ ಇದು, ದೂರದ ದೃಷ್ಟಿಯಿಂದ ನನ್ನ ರಂಗಭೂಮಿ ಚಟುವಟಿಕೆಗಳಿಗೂ ಅನುಕೂಲಕರ ಸ್ಥಳವಾಗಿತ್ತು. ಆಗಿನ ಪ್ರಸಿದ್ಧ ರಂಗತಂಡ ʼಅಭಿವ್ಯಕ್ತʼ ಇದ್ದುದು ಪಕ್ಕದ ವೆಲೆನ್ಶಿಯಾದಲ್ಲಿ. ನಡಿಗೆಯ ದೂರದಲ್ಲಿಯೇ, ಅಂದರೆ ಕದ್ರಿ ಗುಡ್ಡ ಹತ್ತಿದರಾಯಿತು, ಮಂಗಳೂರು ಆಕಾಶವಾಣಿ ಇದ್ದುದರಿಂದ ಅಲ್ಲಿನ ನನ್ನ ಚಟುವಟಿಕೆಗಳಿಗೂ ಪ್ರಶಸ್ತ ಸ್ಥಳವಾಗಿತ್ತು. ನಡುವೆ ಒಮ್ಮೆ ಪಣಂಬೂರು ಚಿತ್ರಾಪುರದ ಕಡಲ ಬದಿಯಲ್ಲಿ ಗೆಳೆಯನೊಬ್ಬನೊಂದಿಗೆ ಒಂದು ಬಾಡಿಗೆ ಕೊಠಡಿ ಹಂಚಿಕೊಂಡಿದ್ದೆನಾದರೂ, ಮರಳ ರಾಶಿಯ ನಡುವಿನ ಅದು ಇಷ್ಟವಾಗದ, ಅದಕ್ಕಿಂತಲೂ ಮುಖ್ಯವಾಗಿ ನನ್ನ ಸಾಹಿತ್ಯ ಮತ್ತು ರಂಗಭೂಮಿ ಚಟುವಟಿಕೆಗಳಿಗೆ ಹೊಂದಿಬರದ ಕಾರಣ, ಅದನ್ನು ಬಿಟ್ಟು ಮತ್ತೆ ಇಲ್ಲೇ ಮುಂದುವರಿದಿದ್ದೆ. ಕೆಲವೊಮ್ಮೆ ಎರಡೆರಡು ಕಡೆ ಬಾಡಿಗೆ ಕೊಡುತ್ತಿದ್ದೆ. ಇರುತ್ತಿದ್ದುದು ಮಾತ್ರ ಗಜಾನನ ಲಾಡ್ಜ್ ನಲ್ಲಿಯೇ. ಶಿಪ್ಟ್ ನಲ್ಲಿ ಕೆಲಸವಾದ ಕಾರಣ ಒಂದೋ ಎಂಸಿಎಫ್ ನಲ್ಲಿರುತ್ತಿದ್ದೆ, ಅಥವಾ ರಂಗಭೂಮಿಯ ಚಟುವಟಿಕೆಗಳ ಕಾರಣ ಮಾರ್ನಮಿಕಟ್ಟೆಯ ʼಅಜಂತಾ ಕಲಾವಿದರʼ ಕಟ್ಟಡದಲ್ಲಿಯೋ, ನಾಟಕ ರಿಹರ್ಸಲ್ ನಲ್ಲಿಯೋ, ಪುರಭವನದಲ್ಲಿಯೋ ಹೀಗೆ ಎಲ್ಲಾದರೂ ಇರುತ್ತಿದ್ದೆ. ನಿದ್ದೆಗೆ ಮತ್ತು ಸ್ನಾನ ಇತ್ಯಾದಿಗಳಿಗೆ ಮಾತ್ರ ಗಜಾನನ ಲಾಡ್ಜ್.

ಧ್ವಂಸವಾದ ಗಜಾನನ ಲಾಡ್ಜ್ !
ಮಾಲೀಕ ಭಟ್ಟರು ಬಾಡಿಗೆ ವಸೂಲಿ ಮಾಡುತ್ತಿದ್ದುದನ್ನು ಬಿಟ್ಟರೆ, ಬೇರೆ ಯಾವ ರೀತಿಯಲ್ಲೂ ಬಾಡಿಗೆದಾರರಿಗೆ ಸಹಕಾರಿಯಾಗಿರಲಿಲ್ಲ. ಹಾಗಾಗಿ, ಅಲ್ಲಿ ಬಾಡಿಗೆದಾರರಿಗೂ ಅವರಿಗೂ ಸಣ್ಣ ಪುಟ್ಟ ಜಗಳ ನಡೆಯುತ್ತಲೇ ಇತ್ತು. ಹೀಗೆ ಒಂದು ದಿನ ಬಾಡಿಗೆದಾರನೊಬ್ಬನೊಂದಿಗೆ ಮಾತಿಗೆ ಮಾತು ಬೆಳೆದು ಅಲ್ಲಿನ ಕೊರತೆಗಳ ಬಗ್ಗೆ ದೂರಿದಾಗ, “ಇಷ್ಟು ವ್ಯವಸ್ಥೆ ಇದೆಯಲ್ಲ, ಇನ್ನೇನಾಗಬೇಕು, ಹೆಣ್ಣು ಸಪ್ಲೈ ಮಾಡಬೇಕಾ?” ಎಂದು ಮಾಲೀಕರು ಹೇಳಿದ್ದಕ್ಕೆ, ಆ ನಿವಾಸಿ ಸಿಟ್ಟಿನಿಂದ “ಹೌದು ನಿನ್ನ ಹೆಂಡತಿಯನ್ನು ಕಳಿಸು” ಎಂದು ಬಿಟ್ಟನಂತೆ. ಈಗ ಪರಿಸ್ಥಿತಿಯ ʼಭೀಕರತೆಯʼ ಬಗ್ಗೆ ಭಟ್ಟರಿಗೆ ಅರ್ಥವಾಯಿತು. ಬಾಡಿಗೆದಾರರ ಸಂಖ್ಯೆ ದೊಡ್ಡದಾಗಿ ಇದೊಂದು ನಿಯಂತ್ರಿಸಲಾಗದ ಟ್ರೇಡ್ ಯೂನಿಯನ್ ರೂಪ ಪಡೆದುಕೊಂಡಿತ್ತು. ಇನ್ನು ಸುಮ್ಮನೆ ಕುಳಿತರೆ ಆಗದು ಎಂದು ಅವರು (ಕು)ತಂತ್ರ ಹೆಣೆಯತೊಡಗಿದರು. ಏನಾದರೂ ಮಾಡಿ ಎಲ್ಲ ಬಾಡಿಗೆದಾರರನ್ನು ಪೂರ್ತಿಯಾಗಿ ಹೊರಹಾಕುವುದು ಅವರ ಯೋಜನೆ. ʼಕಟ್ಟಡ ನವೀಕರಿಸಿ ಬಣ್ಣ ಬಳಿಯುವುದಿದೆ ಎಲ್ಲರೂ ಕೆಲ ದಿನ ರೂಮು ಖಾಲಿಮಾಡಬೇಕುʼ ಎಂದು ಅವರು ಹೇಳತೊಡಗಿದರು. ಆದರೆ ರೂಮುವಾಸಿಗಳು ಬುದ್ಧಿವಂತರು. ಇದರಲ್ಲೇನೋ ಕುತಂತ್ರವಿದೆ, ಇದು ನಮ್ಮನ್ನು ಹೊರಹಾಕುವ ತಂತ್ರ ಎಂಬ ವಾಸನೆ ಅವರಿಗೆ ಸಿಕ್ಕಿತು. ಅವರು ರೂಮು ಖಾಲಿ ಮಾಡಲು ಒಪ್ಪಲಿಲ್ಲ. ರೂಮು ಖಾಲಿ ಮಾಡಿ ಹೋಗುವುದಾದರೂ ಎಲ್ಲಿಗೆ?
ಈ ಬೆಳವಣಿಗೆಗಳಾಗುವಾಗ ನಾನು ಗಜಾನನ ಲಾಡ್ಜ್ ನ ನಿವಾಸಿಯಾಗಿ ಎರಡು ವರ್ಷಗಳಾಗಿರಬಹುದು. 1985ರ ಒಂದು ಶನಿವಾರ. ರಾತ್ರಿ ಪಾಳಿಯ ಕಾರಣ ನಾನು ಹಗಲು ಬಿಡುವಿನಲ್ಲಿದ್ದೆ. ಆಕಾಶವಾಣಿಯಲ್ಲಿ ರೂಪಕವೊಂದಕ್ಕೆ ಧ್ವನಿ ನೀಡುವುದಿತ್ತು. ಹಾಗಾಗಿ ಕದ್ರಿ ಗುಡ್ಡ ಹತ್ತಿ ಅಲ್ಲಿಗೆ ಹೋಗಿದ್ದೆ. ಇನ್ನೇನು ಧ್ವನಿಮುದ್ರಣ ಶುರುವಾಗುತ್ತದೆ ಎನ್ನುವಾಗ ಅಲ್ಲಿನ ಉದ್ಯೋಗಿಯೊಬ್ಬರು (ಅವರೂ ಗಜಾನನ ಲಾಡ್ಜ್ ನಿವಾಸಿ) ಓಡೋಡಿ ಬಂದು, “ಓಯ್.. ನಿಮಗೆ ಗೊತ್ತಿಲ್ವಾ? ನಮ್ಮ ಗಜಾನನ ಲಾಡ್ಜ್ ಪೂರಾ ಒಡೆದು ಹಾಕಿದ್ದಾರೆ” ಎಂಬ ಆಘಾತಕಾರಿ ಸುದ್ದಿ ನೀಡಿದರು. ಫಕ್ಕನೆ ನನಗೆ ಅಲ್ಲಿದ್ದ ನನ್ನ ಬಟ್ಟೆಬರೆ, ಪುಸ್ತಕ, ವಿಶೇಷವಾಗಿ ಒಂದು ರೇಡಿಯೋ ಸೆಟ್ ನೆನಪಾಯಿತು. ಜತೆಗೆ, ರೂಮು ಒಡೆದುಹಾಕಿದರೆ ನಾನು ಇನ್ನು ಉಳಿದುಕೊಳ್ಳುವುದಾದರೂ ಎಲ್ಲಿ, ಮಲಗುವುದು ಎಲ್ಲಿ, ಎಂಬ ಬೃಹದಾಕಾರದ ಪ್ರಶ್ನೆ.
ಧ್ವನಿ ಮುದ್ರಣ ಕಾರ್ಯಕ್ರಮ ಕೈಬಿಟ್ಟು ತಲೆಕೆಟ್ಟವನಂತೆ ಸೀದಾ ರೂಮಿಗೆ ಓಡಿದೆ. ನೋಡುವುದೇನು, ಕಟ್ಟಡದ ಹೆಂಚುಗಳನ್ನೆಲ್ಲ ತೆಗೆದು, ಕಿಟಕಿ ಬಾಗಿಲ ದಾರಂದ ಕೂಡಾ ಕಿತ್ತು ಹಾಕಿದ್ದರು. ಈ ನಡುವೆ ಅಲ್ಲಿದ್ದ ನಿವಾಸಿಯೊಬ್ಬರು ತುರ್ತು ಪೋಲಿಸ್ ಸಂಖ್ಯೆ 100 ಕ್ಕೆ ಫೋನ್ ಮಾಡಿದ್ದರಂತೆ. ಪೊಲೀಸರು ಬಂದು ಕಟ್ಟಡದ ಮಾಲೀಕ ಮತ್ತು ಆತ ತಂದಿದ್ದ ಕಾರ್ಮಿಕರನ್ನು ಬಂಧಿಸಿ ಒಯ್ದಿದ್ದರು. ಮಾಲೀಕನ ಮೇಲಿನ ಸಿಟ್ಟು ಮುಗಿಲಿಗೇರಿತು. ಜನರೆಲ್ಲ ಸಂತ್ರಸ್ತರಾದ ನಮ್ಮ ಕಡೆ. ಭಟ್ಟರ ಮೊಪೆಡನ್ನು ಸಿಟ್ಟಿನ ಭರದಲ್ಲಿ ಯಾರೋ ಒಬ್ಬರು ಎತ್ತಿ ಅಲ್ಲೇ ಇದ್ದ ಬಾವಿಗೆ ಎಸೆದುಬಿಟ್ಟರು.
ಇದೇ ಹೊತ್ತಿನಲ್ಲಿ ಅಲ್ಲಿಗೆ ರಾಜಕೀಯ ಪ್ರವೇಶವೂ ಆಯಿತು. ಆಗಿನ ಜನಪ್ರಿಯ ರಾಜಕಾರಣಿ -ಬಹುಷಃ ಜನತಾಪಕ್ಷದವರಿರಬೇಕು- ಎಂ ಸಂಜೀವ ಅವರು, “ನೀವೇನೂ ಭಯ ಪಡುವುದು ಬೇಡ, ಇಂದು ಶನಿವಾರ, ಸೋಮವಾರ ಅವರಿಗೆ ಸ್ಟೇ ಸಿಗಬಹುದು, ಅದಕ್ಕೆ ಮುನ್ನ ಕಟ್ಟಡವನ್ನು ಮೊದಲಿನಂತೆ ಮಾಡಿ ಸೇರಿಕೊಳ್ಳಿ, ಮತ್ತೆ ನೋಡೋಣ…” ಎಂದು ಧೈರ್ಯ ನೀಡಿದರು. ರಾತ್ರೋ ರಾತ್ರಿ ಎಲ್ಲರೂ ಕಟ್ಟಡ ಕಾರ್ಮಿಕರಾದೆವು. ಮಾಡು ಹತ್ತಿ ಹೆಂಚು ಇರಿಸಿದೆವು. ಕಾರ್ಮಿಕರನ್ನು ಬಳಸಿಕೊಂಡು ಕಿಟಕಿ, ಬಾಗಿಲು ಕೂಡಾ ಇರಿಸಿದೆವು. ಕಸ ಗುಡಿಸಿ ಸ್ವಚ್ಛ ಮಾಡಿದೆವು. ಕಟ್ಟಡ ಮೊದಲಿನಂತಾಯಿತು. ಬೆಳಗಾಗುವಾಗ ನಿಜ ಮಾಲೀಕರು ಜೈಲಿನಲ್ಲಿ, ಹಾಗಾಗಿ ಈಗ ʼನಮಗೆ ನಾವೇ ಮಾಲೀಕರುʼ!
ಮಾರನೇ ದಿನ ಉದಯವಾಣಿಯಲ್ಲಿ ಇದು ದೊಡ್ಡ ಸುದ್ದಿಯಾಯಿತು. ವಿಷಯ ಕೋರ್ಟ್ ಗೆ ಹೋದುದರಿಂದ ಭಟ್ಟರು ಅಲ್ಲಿಗೆ ಬರದಂತಾಯಿತು. ಮುಂದೆ ಬಾಡಿಗೆ ಕೊಡುವ ವಿಷಯವೇ ಇರಲಿಲ್ಲ. ನಾವು ಎಲ್ಲರೂ ಸೇರಿ ದೇಣಿಗೆ ನೀಡುತ್ತಾ, ನೀರಿನ ಬಿಲ್ಲು, ಕಟ್ಟುತ್ತಾ ಕರೆಂಟ್ ಬಿಲ್ಲು ಕಟ್ಟುತ್ತಾ ಬಾಡಿಗೆ ರಹಿತರಾಗಿ ಅಲ್ಲಿ ವಾಸಿಸುತ್ತಾ ಹೋದೆವು. ವಿಷಯ ನ್ಯಾಯಾಲಯದಲ್ಲಿ ಮುಂದುವರಿಯಿತು. ಬಾಡಿಗೆದಾರರಿಗೆಲ್ಲ ಪರಿಹಾರ ಕೊಡುವ ರಾಜಿಪಂಚಾತಿಕೆಯೂ ಈ ನಡುವೆ ಆಯಿತಂತೆ.
ಇನ್ನೂ ಒಂದು ವರ್ಷ ಕಳೆಯಿತು. 1986 ಬಂತು. ಈಗ ಭಟ್ಟರು ಇನ್ನೊಂದು ಕುಟಿಲೋಪಾಯ ಹೂಡಿದರು. ಬಾಡಿಗೆದಾರರೆಲ್ಲ ಅಲ್ಲಿ ಇದ್ದಂತೆಯೇ ಕಟ್ಟಡವನ್ನು ಮಾರಿಬಿಡಲು ನಿರ್ಧರಿಸಿದರು. ಇಂತಹ ವಿವಾದಿತ ಕಟ್ಟಡವೆಂದರೆ ಅಗ್ಗದ ದರದಲ್ಲಿ ಸಿಕ್ಕಿಬಿಡುತ್ತದೆ ತಾನೇ? ಎಂದೇ, ರಿಯಲ್ ಎಸ್ಟೇಟ್ ಕುಳಗಳು ಬಾಯಿಬಿಟ್ಟುಕೊಂಡು ಕಾಯುತ್ತಿರುತ್ತಾರೆ. ಲ್ಯಾಂಡ್ ಲಿಂಕ್ಸ್ ನ ಪಾಲೇಮಾರ್ ಈ ಸುವರ್ಣಾವಕಾಶವನ್ನು ಬಾಚಿಕೊಂಡೇ ಬಿಟ್ಟರು. ಅವರು ಒಂದು ಬುದ್ಧಿವಂತಿಕೆ ಮಾಡಿದರು. ಬಾಡಿಗೆದಾರರೊಬ್ಬರನ್ನೂ ಒಕ್ಕಲೆಬ್ಬಿಸಲಿಲ್ಲ. ನಿವಾಸಿಗಳ ಒಂದು ರಿಜಿಸ್ಟರ್ ಸಿದ್ಧಪಡಿಸಿದರು. ಹೊಸ ಬಾಡಿಗೆದಾರರು ಸೇರಿಕೊಳ್ಳದಂತೆ ನೋಡಿಕೊಂಡರು. ಒಬ್ಬ ಸೆಕ್ಯುರಿಟಿ ಗಾರ್ಡನನ್ನೂ ನೇಮಿಸಿದರು. ಎಲ್ಲರೂ ಹೊರಗಿನಿಂದ ನೌಕರಿಯ ಕಾರಣಕ್ಕೆ ಬಂದವರಲ್ಲವೇ? ವರ್ಗಾವಣೆ, ಉದ್ಯೋಗ ಬದಲಾವಣೆ, ಮದುವೆ, ಸಂಸಾರ ಮತ್ತಿತರ ಕಾರಣಗಳಿಂದ ಒಬ್ಬೊಬ್ಬರೇ ಹೊರ ಹೋಗಲಾರಂಭಿಸಿದರು. ಹೀಗೆ, ಅಂತಿಮವಾಗಿ ಒಂದು ದಿನ ಕಟ್ಟಡ ಖಾಲಿಯಾಯಿತು; ಪೂರ್ತಿಯಾಗಿ ಪಾಲೇಮಾರ್ ಅವರ ಸುಪರ್ದಿಗೆ ಬಂತು.
1987 ರ ಮಾರ್ಚ್ ಗಾಗುವಾಗ ನಾನು ಆ ಕಟ್ಟಡ ತೊರೆದಿದ್ದೆ. ಏನೇನೂ ಸೌಲಭ್ಯ ಇಲ್ಲದ, ಉಸಿರುಗಟ್ಟಿಸುವಂತಹ ವಾತಾವರಣದ ಆ ಕಟ್ಟಡದ, ಬಾತ್ ರೂಮ್ ಗಾತ್ರದ ಕೋಣೆಯಲ್ಲಿ ಕುಳಿತೇ ನಾನು ಅನೇಕ ಕವನ, ಲೇಖನ ಬರೆದಿದ್ದೆ (ಅವು ಮುಂಗಾರು, ಉದಯವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು), ಮಾತ್ರವಲ್ಲ ಪ್ರೇಮ ಪತ್ರವನ್ನೂ ಬರೆದಿದ್ದೆ. ಆ ಪ್ರೇಮವೇ ಮುಂದೆ ಬೆಳೆದು, ಪ್ರಣಯವು ಪರಿಣಯದಲ್ಲಿ ಕೊನೆಗೊಳ್ಳಲು ಮುನ್ನುಡಿಯಾದುದೂ ಇದೇ ಗಜಾನನ ಲಾಡ್ಜ್!
ಎಂ ಸಿ ಎಫ್ ನಲ್ಲಿ ಮೊದಲ ದಿನಗಳು

ನನಗಾಗ ಕೇವಲ ಇಪ್ಪತ್ತೆರಡರ ಹರೆಯ. ಈ ಹರೆಯದಲ್ಲಿಯೇ ನನಗೊಂದು ಸೇವಾ ಭದ್ರತೆಯುಳ್ಳ ಉದ್ಯೋಗ ಸಿಕ್ಕಿತ್ತು. ಇನ್ನು ಉದ್ಯೋಗದ ಚಿಂತೆಯಿಲ್ಲ ಎಂಬ ದೊಡ್ಡ ಸಮಾಧಾನ.
1983 ರ ಆಗಸ್ಟ್ 21 ರಂದು ಕೆಲಸಕ್ಕೆ ಹಾಜರಾದೆ. ನನ್ನ ಜತೆಯಲ್ಲಿ ಸುಮಾರು 15 ಮಂದಿ ಇತರ ಪ್ರಶಿಕ್ಷಣಾರ್ಥಿಗಳೂ ಇದ್ದರು. ಮೊದಲ ದಿನ ನಮಗೆ ಕೆಲವು ಮಾಹಿತಿಗಳನ್ನು ನೀಡಿದರು. ಕಾರ್ಖಾನೆಯನ್ನು ಪರಿಚಯಿಸಿದರು. ಪಣಂಬೂರಿನ ಸ್ಟೇಟ್ ಬ್ಯಾಂಕ್ ನಲ್ಲಿ ನಮ್ಮ ಪ್ರತಿಯೊಬ್ಬರ ಹೆಸರಿನಲ್ಲಿಯೂ ಖಾತೆಗಳನ್ನು ತೆರೆದರು. ಸಂಬಳ ಇತ್ಯಾದಿ ಎಲ್ಲವೂ ಹೋಗುವುದು ಅಲ್ಲಿನ ಆ ಖಾತೆಗೆ.
ನಾವು ಈಗ ಕೇವಲ ಪ್ರಶಿಕ್ಷಣಾರ್ಥಿಗಳು. ಕರಾರು ಪ್ರಕಾರ ನಮ್ಮ ತರಬೇತಿ ಮುಗಿದು ಉದ್ಯೋಗ ಖಾಯಂ ಆಗುವುದು ಒಂದೂವರೆ ವರ್ಷಗಳ ಬಳಿಕ. ಆದ್ದರಿಂದ ನಮಗೆ ವಾರದ ರಜೆ ಹೊರತುಪಡಿಸಿದರೆ ರಜಾ ಸೌಲಭ್ಯವಿಲ್ಲ. ಸಂಬಳ ಮಾಸಿಕ 450 ರುಪಾಯಿ. ಅದು 1983 ರ ದಿನಗಳಲ್ಲಿ ಬಹುದೊಡ್ಡ ಮೊತ್ತ. ಅದಕ್ಕಿಂತಲೂ ಮುಖ್ಯವಾಗಿ ನಮಗೆ ಎಂ ಸಿ ಎಫ್ ಒಳ ಸೇರಿದ ಬಳಿಕ ಯಾವ ಖರ್ಚೂ ಇಲ್ಲ. ವೈದ್ಯಕೀಯ ವ್ಯವಸ್ಥೆಯೂ ಅಲ್ಲೇ ಇತ್ತು. ಅಲ್ಲಿನ ಕ್ಯಾಂಟೀನ್ ಅಂತೂ ನಮಗೊಂದು ವರದಾನ. ಒಂದು ರುಪಾಯಿ ಇದ್ದರೆ ಅಲ್ಲಿ ಎಲ್ಲವೂ ಸಿಗುತ್ತಿತ್ತು. ಕ್ಯಾಂಟೀನ್ ನಲ್ಲಿ ಸೋಮವಾರ ಮಟನ್. ಮಂಗಳವಾರ ಚಿಕನ್, ಬುಧವಾರ ಫಿಶ್ ಊಟ ಲಭ್ಯ. ಹಾಗೆಯೇ ಮತ್ತೆ ಗುರುವಾರ, ಶುಕ್ರವಾರ, ಶನಿವಾರ ಪುನರಾವರ್ತನೆ. ನಾವು ಇದನ್ನೂ ʼಎಂ ಸಿ ಎಫ್ʼ ಎಂದೇ ತಮಾಷೆ ಮಾಡುತ್ತಿದ್ದೆವು. ಬೇಕಿದ್ದರೆ ಆಮ್ಲೆಟ್ ಕೂಡಾ. ಚಿಕನ್, ಮಟನ್, ಫಿಶ್ ಎಲ್ಲವೂ ತಲಾ ಕೇವಲ ಅರವತ್ತು ಪೈಸೆಗೆ! ಹಾಗಾಗಿ ನಮಗೆ ಖರ್ಚು ಬಹಳ ಕಡಿಮೆ.
ಕರ್ನಾಟಕದ ಏಕೈಕ ರಸಗೊಬ್ಬರ ಕಾರ್ಖಾನೆ
ಮಂಗಳೂರು ಪಣಂಬೂರಿನ ಹೆದ್ದಾರಿ ಪಕ್ಕ ಸುಮಾರು ನೂರು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಕರ್ನಾಟಕದ ಪ್ರತಿಷ್ಠಿತ ಮಂಗಳೂರು ಕೆಮಿಕಲ್ಸ್ ಫರ್ಟಿಲೈಸರ್ಸ್ ಸ್ಥಾಪನೆಯ ಕನಸು ಆರಂಭವಾದುದು 1966 ರಲ್ಲಿ. ಕಾರ್ಖಾನೆ ನಿರ್ಮಾಣವಾಗಿ ಉದ್ಘಾಟನೆಯಾದುದು 1975 ರಲ್ಲಿ, ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಂದ (ಅದು ವ್ಯಾಪಕ ಕೈಗಾರಿಕೀಕರಣದ ಕಾಲ. ಇಲ್ಲಿ ಎಂ ಸಿ ಎಫ್ ನಿರ್ಮಾಣವಾದರೆ ಅಲ್ಲಿ ಕುದುರೆಮುಖದಲ್ಲಿ ಇರಾನ್ ಸಹಭಾಗಿತ್ವದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಆರಂಭವಾಗಿತ್ತು).
ಇಡಿಯ ಕರ್ನಾಟಕದ ಏಕೈಕ ರಸಗೊಬ್ಬರ ಕಾರ್ಖಾನೆಯಾಗಿರುವ ಎಂ ಸಿ ಎಫ್ ನಲ್ಲಿ ದಿನವೊಂದರ ನೂರು ಲಾರಿ ಲೋಡುಗಳಷ್ಟು ಯೂರಿಯಾ ಉತ್ಪಾದನೆಯಾಗಿ ರಾಜ್ಯದ ರೈತರನ್ನು ತಲಪುತ್ತದೆ. ʼಮಂಗಳಾ ಯೂರಿಯಾʼ ಎಲ್ಲೆಲ್ಲೂ ಪ್ರಸಿದ್ಧ ಬ್ರಾಂಡ್. ಜತೆಯಲ್ಲಿ ಅಮೋನಿಯಂ ಬೈಕಾರ್ಬೋನೇಟ್ (ʼಅಂಬಿಕಾʼ, ಅಡುಗೆ ಸೋಡದ ರೂಪ), ನೈಟ್ರೋಜನ್ (ದನಗಳ ವೀರ್ಯ ಸಂರಕ್ಷಣೆಗೆ ಬಳಕೆಯಾಗುತ್ತದೆ) ಇವೆಲ್ಲ ಉತ್ಪಾದನೆಯಾಗುತ್ತದೆ. ಮುಂದೆ ಡಿ ಎ ಪಿ ಕೂಡಾ ಸೇರಿಕೊಂಡಿತು.
ರೈತರು ಮತ್ತು ಸಾರ್ವಜನಿಕ ರಂಗದ ಪಾಲುದಾರಿಕೆಯಿಂದ ಆರಂಭವಾದ ಈ ಕಾರ್ಖಾನೆಯನ್ನು ತಾಂತ್ರಿಕವಾಗಿ ರೂಪಿಸಿ ಕಾರ್ಯರೂಪಕ್ಕೆ ತಂದವರು ʼಹಂಫ್ರೀಸ್ ಅಂಡ್ ಗ್ಲಾಸ್ಗೋಸ್ ಲಂಡನ್ʼ ಸಂಸ್ಥೆ. ಕಾರ್ಖಾನೆಯಲ್ಲಿ ದೊಡ್ಡ ತಾಂತ್ರಿಕ ಸಮಸ್ಯೆಯಾದಾಗ ಅದನ್ನು ಸರಿಪಡಿಸಲು ಈಗಲೂ ಬರುವುದು ಅವರೇ. ಎಂ ಸಿ ಎಫ್ ನಲ್ಲಿ ಆಗ ಸುಮಾರು 800 ಮಂದಿ ಕಾರ್ಮಿಕರಿದ್ದರು. ಕರ್ನಾಟಕ ವಿದ್ಯುತ್ ನಿಗಮದಿಂದ ಧಾರಾಳ ವಿದ್ಯುತ್ ಆಗ ದೊರೆಯುತ್ತಿತ್ತು. ಅದನ್ನೇ ಎಂ ಸಿ ಎಫ್ ಬಳಸುತ್ತಿತ್ತು. ನೀರು ನೇತ್ರಾವತಿಯಿಂದ.
ಕಾರ್ಖಾನೆಯ ಒಳಗೆ ಟೈಂ ಆಫೀಸ್, ಫೈರ್ ಆಂಡ್ ಸೇಫ್ಟಿ, ಆಡಳಿತ ಕಚೇರಿ, ತರಬೇತಿ ಕಚೇರಿ, ಆರ್ ಅಂಡ್ ಡಿ, ಲೈಬ್ರರಿ, ಕಂಟ್ರೋಲ್ ರೂಂ, ಯೂರಿಯಾ ಘಟಕ, ಅಮೋನಿಯಾ ಘಟಕ, ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್, ಬ್ಯಾಗಿಂಗ್ ಇವು ಪ್ರಮುಖ ಘಟಕಗಳು.
ಆರಂಭದ ದಿನಗಳಲ್ಲಿ ನಮಗೆ, ಕೆಮಿಕಲ್ ಸ್ಥಾವರದಲ್ಲಿ ಕಾರ್ಯಾಚರಿಸುವ ಪಂಪುಗಳು, ಕಂಪ್ರೆಸರ್ ಗಳು, ವಾಲ್ವ್ ಗಳು ಇತ್ಯಾದಿ ಯಂತ್ರಗಳ ಬಗ್ಗೆ ಥಿಯರಿ ತರಗತಿ ನಡೆಯುತ್ತಿತ್ತು. ತರಬೇತಿ ಪಾಠಗಳನ್ನು ನೀಡುತ್ತಿದ್ದವರು ಪಿ ಕೆ ಕಾರಂತ (ಅವರು ಹಿಂದೆ ಕೆ ಆರ್ ಇ ಸಿ ಯಿಲ್ಲಿದ್ದವರು). ನಡು ನಡುವೆ ಪ್ಲಾಂಟ್ ಒಳಗೆ ಕರೆದುಕೊಂಡು ಹೋಗಿ ಯಂತ್ರಗಳನ್ನು ತೋರಿಸುತ್ತಿದ್ದರು. ಮೊದಲ ದಿನಗಳಲ್ಲಿ ನಮಗೆ ಇದ್ದುದು ಜನರಲ್ ಶಿಫ್ಟ್. ಬೆಳಗ್ಗೆ ಒಂಭತ್ತಕ್ಕೆ ಕಾರ್ಖಾನೆಗೆ ಹೋಗುವುದು ಸಂಜೆ ಐದರ ನಂತರ ಫ್ರೀ. ಹಾಗಾಗಿ ಯಾವ ಕಷ್ಟವೂ ಆಗುತ್ತಿರಲಿಲ್ಲ. ಖುಷಿಯೋ ಖುಷಿ. ಸಮಯ ಕಳೆಯಲು ಕೆಲವೊಮ್ಮೆ ಸಾರ್ವಜನಿಕ ಗ್ರಂಥಾಲಯ, ಟಾಗೋರ್ ಪಾರ್ಕ್ ಗೆ ಹೋಗುತ್ತಿದ್ದೆ, ಅಥವಾ ಅಭಿವ್ಯಕ್ತದ ರಂಗ ಚಟುವಟಿಕೆಗಳನ್ನು ನೋಡಲು ಹೋಗುತ್ತಿದ್ದೆ.
ಒಂದೆರಡು ತಿಂಗಳ ಥಿಯರಿ ತರಗತಿಗಳ ಬಳಿಕ ನಮ್ಮನ್ನು ಬೇರೆ ಬೇರೆ ಪ್ಲಾಂಟ್ (ಘಟಕ) ಗಳಿಗೆ ಹಂಚಿ ಹಾಕಿದರು. ಪಾಳಿಯಲ್ಲಿ (ಶಿಫ್ಟ್) ಕೆಲಸ. ಕೆಲವರು ಅಮೋನಿಯಾ ಪ್ಲಾಂಟ್ ಗೆ, ಇನ್ನು ಕೆಲವರು, ಯೂರಿಯಾ ಪ್ಲಾಂಟ್ ಗೆ, ಮತ್ತೆ ಕೆಲವರು ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಗೆ. ನನ್ನನ್ನು ಹಾಕಿದ್ದು ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಗೆ. ಕಾರ್ಖಾನೆಯ ಬಾಯ್ಲರ್ ಇತ್ಯಾದಿಗಳಿಗೆ ಬಳಕೆಯಾಗುವ ನೀರನ್ನು ಶುದ್ಧೀಕರಿಸದೆ ಬಳಸುವಂತಿಲ್ಲ. ಆದ್ದರಿಂದ ನೇತ್ರಾವತಿಯಿಂದ ಬಂದ ನೀರನ್ನು ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ನಲ್ಲಿ ನಾನಾ ಹಂತದಲ್ಲಿ ಶುದ್ಧೀಕರಿಸಲಾಗುತ್ತಿತ್ತು. ಆ ನೀರನ್ನು ಕುಡಿಯುವಂತಿಲ್ಲ. ಅದಕ್ಕೆ ರುಚಿಯೂ ಇಲ್ಲ. ಅದು ಕೇವಲ ಬಾಯ್ಲರ್ ಇತ್ಯಾದಿಗಳಿಗೆ.
ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಗೆ ಹೊಂದಿಕೊಂಡಂತೆ ಅಮೋನಿಯಂ ಬೈಕಾರ್ಬೋನೇಟ್ ಘಟಕವೂ ಇತ್ತು. ನಮಗೆ ಅಲ್ಲೂ ಜವಾಬ್ದಾರಿಯಿತ್ತು. ಅಲ್ಲಿಂದ ಹಿಂದಕ್ಕೆ ಮೇಲೆ ಗುಡ್ಡದಲ್ಲಿ ಬೃಹದಾಕಾರದ ಸರೋವರ. ಬೆಂಕಿ ಅವಘಡ ಸಂಭವಿಸಿದರೆ ಆರಿಸಲು ಈ ನೀರು.

ಕೆಮಿಕಲ್ ಕಾರ್ಖಾನೆಗಳು ಅಪಾಯಕಾರಿ
ಯೂರಿಯಾ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಕೆಯಾಗುವುದು ಅಮೋನಿಯಾ (NH3) ಮತ್ತು ಕಾರ್ಬನ್ ಡೈ ಆಕ್ಸೈಡ್ (CO2). ಅಮೋನಿಯಾ ತಯಾರಿಸಲು ಜಲಜನಕ (H2) ಮತ್ತು ನೈಟ್ರೋಜನ್ (N2) ಬೇಕು. ಜಲಜನಕ ಪಡೆಯುವುದು ಪೆಟ್ರೋಲಿಯಂ ಉತ್ಪನ್ನವಾದ ನ್ಯಾಫ್ತಾದಿಂದ (ತಣ್ಣೀರುಬಾವಿಗೆ ಹೋಗುವ ದಾರಿಯ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಗ್ರಹಣಾಗಾರದಿಂದ ಸರಬರಾಜಾಗುತ್ತದೆ). ನೈಟ್ರೋಜನ್ ನನ್ನು ಗಾಳಿಯಿಂದ ಪಡೆಯುತ್ತಾರೆ. ಯೂರಿಯಾ ತಯಾರಿಕೆಯಲ್ಲಿ ಅಗತ್ಯವಿರುವ ಕಾರ್ಬನ್ ಡೈ ಆಕ್ಸೈಡ್ ಕೂಡಾ ನ್ಯಾಫ್ತಾದಿಂದಲೇ ದೊರೆಯುತ್ತದೆ. ಅಮೋನಿಯಾ, ಯೂರಿಯಾ ಇತ್ಯಾದಿ ತಯಾರಿಯ ವಿಧಾನ ಅತ್ಯಂತ ಸಂಕೀರ್ಣವಾದುದು. ಮಾತ್ರವಲ್ಲ ಕೆಮಿಕಲ್ ಕಾರ್ಖಾನೆಗಳು ಅಪಾಯಕಾರಿ ಕೂಡಾ. ಎಂ ಸಿ ಎಫ್ ನಲ್ಲಿ ನಡೆದ ದುರ್ಘಟನೆಗಳು, ಅವುಗಳಲ್ಲಿ ಜೀವ ತೆತ್ತವರು ಅನೇಕರು.
ಒಂದೆಡೆಯಲ್ಲಿ ಕೆಮಿಕಲ್ ಪ್ಲಾಂಟ್, ಅಶುದ್ಧ ಗಾಳಿ, ವಿಪರೀತ ಸದ್ದು, ಅಪಾಯಕಾರಿ ರಾಸಾಯನಿಕಗಳು, ಇನ್ನೊಂದೆಡೆಯಲ್ಲಿ ರಾತ್ರಿ 10 ರಿಂದ ಬೆಳಗ್ಗಿನ 6 ರ ತನಕವೂ ಕಣ್ಣು ಮುಚ್ಚದೆ ಮಾಡಬೇಕಾದ ಕೆಲಸ, ಎಂ ಸಿ ಎಫ್ ಯಾಕೆ ಸೇರಿದೆನೋ ಅನಿಸಲಾರಂಭಿಸಿದ್ದು ಆಗ. ಒಮ್ಮೊಮ್ಮೆ ಅಳುವೇ ಬರುತ್ತಿತ್ತು. ಬೆಳಗಿನ ಪಾಳಿ (6 ರಿಂದ ಮಧ್ಯಾಹ್ನ 2), ಮಧ್ಯಾಹ್ನದ ಪಾಳಿ (ಮಧ್ಯಾಹ್ನದ 2 ರಿಂದ ರಾತ್ರಿ 10) ಸಾಕಷ್ಟು ಆರಾಮ ವಿರಾಮ ನೀಡುತ್ತಿತ್ತು. ಆದರೆ ವಿಶೇಷವಾಗಿ ರಾತ್ರಿ ಪಾಳಿಯ ಕೆಲಸ ನನಗಂತೂ ಒಂದು ದುಸ್ವಪ್ನದಂತೆ ಕಾಡತೊಡಗಿತು. ರಾತ್ರಿ ನಿದ್ದೆ ಇಲ್ಲ ಎಂದರೆ ಮಾರನೇ ದಿನದ ಹಗಲೂ ವ್ಯರ್ಥ. ಹಗಲು ಕಳೆಯುತ್ತಿದ್ದಂತೆ ಮತ್ತೆ ರಾತ್ರಿ ಪಾಳಿಗೆ ಹಾಜರಾಗಬೇಕು. ಹಾಗಾಗಿ ಇಡೀ ಒಂದು ವಾರ ವ್ಯರ್ಥ. ಪ್ರತೀ ವಾರ ಪಾಳಿ ಬದಲಾಗುತ್ತಿದ್ದುದು ಪಾಳಿಯ ಕಷ್ಟ ತೀವ್ರವಾಗದಂತೆ ನೋಡಿಕೊಳ್ಳುತ್ತಿತ್ತು.
ನಾನು ಎಂ ಸಿ ಎಫ್ ಸೇರಿಕೊಂಡುದು ಹೊಟ್ಟೆಪಾಡಿಗಾಗಿ. ಅಲ್ಲಿನದು ನನ್ನ ಇಷ್ಟದ ಕೆಲಸವಾಗಿರಲಿಲ್ಲ. ಆದರೆ ಎಂ ಸಿ ಎಫ್ ನ ಕೆಲಸ ನನಗೆ ಬದುಕು ನೀಡಿತು ಮತ್ತು ಮಂಗಳೂರಿನಲ್ಲಿಯೇ ಇದ್ದುದರಿಂದ ನನ್ನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅದು ಅವಕಾಶ ಮಾಡಿಕೊಟ್ಟುದು ಅಪಾರ. ನಾನು ಇಂದು ಏನಾಗಿದ್ದೇನೆಯೋ ಅದರಲ್ಲಿ ಎಂ ಸಿ ಎಫ್ ಉದ್ಯೋಗದ ಪಾಲು ಬಹುದೊಡ್ಡದು.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- https://kannadaplanet.com/thats-a-big-story-autobiography-series-30/ ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ – 30 | ನಾನು ಹೈಸ್ಕೂಲ್ ಮಾಸ್ತರನಾದೆ


