ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ವೇಣು, ಸುಹಾಸ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಪುನೀತ್ ಜೊತೆ ಇನ್ನಿಬ್ಬರು ಆರೋಪಿಗಳಾದ ಗೌರವ್ ಶೆಟ್ಟಿ, ಕಿರಣ್ ರೆಡ್ಡಿ
ಸಂಪರ್ಕದಲ್ಲಿರುವುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಿಂದ ದೃಢಪಟ್ಟಿದೆ ಇದಲ್ಲದೆ ಈ ಆರೋಪಿಗಳ ಹಿಂದೆ ಬೆಂಗಳೂರಿನ ಪ್ರಭಾವಿ ಮಹಿಳೆಯೊಬ್ಬರ ನಂಟು ಇರುವ ಬಗ್ಗೆ ಸಂಶಯ ಮೂಡಿದೆ.
ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪೋಲಿಸರ ತನಿಖೆ ಚುರುಕುಗೊಂಡಿದ್ದು ಆರೋಪಿಗಳು, ಸಾಕ್ಷಿಗೆ ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆಗೆ ಸಂಚು ರೂಪಿಸಿರುವುದು ದೃಢಪಟ್ಟಿದೆ.
ಈ ಪ್ರಕರಣದಲ್ಲಿ ಪೊಲೀಸರು ಪುನೀತ್, ವೇಣು ಮತ್ತು ಸುಹಾಸ್ ಎಂಬ ಮೂವರು ಆರೋಪಿಗಳನ್ನು ಬಂಧಿಸುತ್ತಿದ್ದಂತೆ, ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ.
ತನಿಖಾಧಿಕಾರಿಗಳು ಸದ್ಯ ತಲೆಮರೆಸಿಕೊಂಡಿರುವ ಗೌರವ್ ಮತ್ತು ಕಿರಣ್ ಇರುವ ಸ್ಥಳದ ಸುಳಿವು ಆಧರಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ
ಬೆದರಿಕೆ ಆರೋಪಿಗಳ ಹಿಂದೆ ಪ್ರಭಾವಿ ಮಹಿಳೆ
ಈ ಬೆಳವಣಿಗೆಯ ನಡುವೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ತಲೆಮರೆಸಿಕೊಂಡಿರುವ ಗೌರವ್ ಶೆಟ್ಟಿ ಜೊತೆ ನಗರದ ಓರ್ವ ಪ್ರಭಾವಿ ಮಹಿಳೆ ನಿರಂತರ ಸಂಪರ್ಕದಲ್ಲಿರುವುದು ದೃಢಪಟ್ಟಿದೆ. ಗೌರವ್ ಶೆಟ್ಟಿ ಬಂಧನವಾದರೆ ಈ ಪ್ರಭಾವಿ ಮಹಿಳೆಯ ಪಾತ್ರ ಹಾಗೂ ಆಕೆಯ ಹಿನ್ನೆಲೆ ಹೊರಬೀಳುವ ಸಾಧ್ಯತೆಗಳಿದ್ದು ಇಡೀ ಪ್ರಕರಣ ಹೊಸ ತಿರುವು ಪಡೆಯಲಿದೆ.

