ಬೆಂಗಳೂರು ಅ. 7 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ದರ್ಶನ್ ಪರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೆಪ್ಟೆಂಬರ್ 23ರಂದು ಕರ್ನಾಟಕ ಹೈಕೋರ್ಟ್ ಪ್ರದೋಷ್‌ಗೆ ಮಾಫಿ ನೀಡಿ, ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಪರಿಗಣಿಸುವ ನಿರ್ಧಾರವನ್ನು ಎತ್ತಿಹಿಡಿದಿತ್ತು. ಸಹಆರೋಪಿಗೆ ಮಾಫಿ ಸಾಕ್ಷಿಯ ಅರ್ಜಿಯನ್ನು ವಿರೋಧಿಸುವ ಹಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದ್ದರೂ, ವಿಚಾರಣೆಯ ಸಂದರ್ಭದಲ್ಲಿ ಪ್ರದೋಷ್ ಅವರನ್ನು ಕ್ರಾಸ್ ಎಕ್ಸಾಮಿನ್ ಮಾಡುವ ಹಕ್ಕು ದರ್ಶನ್‌ಗೆ ಇದೆ ಎಂದು ಸ್ಪಷ್ಟಪಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಅಕ್ಟೋಬರ್ 7ರಂದು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠದಲ್ಲಿ ವಿಚಾರಣೆ ನಿಗದಿಯಾಗಿದೆ.
ಈ ನಡುವೆ ಪ್ರದೋಷ್ ಈಗಾಗಲೇ ಸತ್ರ ನ್ಯಾಯಾಲಯದ ಮುಂದೆ ಮಾಫಿ ಸಾಕ್ಷಿಯಾಗಿ ತನ್ನ ಹೇಳಿಕೆ ದಾಖಲಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಅಕ್ಟೋಬರ್ 5ರಂದು ಪೂರ್ಣಗೊಂಡಿದೆ.
ಹೀಗಾಗಿ ಇಂದು ನಡೆಯುವ ಸುಪ್ರೀಂ ಕೋರ್ಟ್ ವಿಚಾರಣೆ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ. ದರ್ಶನ್ ಪರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತದೆಯೇ? ಪ್ರದೋಷ್‌ಗೆ ನೀಡಿರುವ ಮಾಫಿ ಮುಂದುವರಿಯುತ್ತದೆಯೇ? ಈಗಾಗಲೇ ದಾಖಲಿಸಿರುವ ಅವರ ಹೇಳಿಕೆ ಅಮಾನ್ಯವಾಗಲಿದೆಯೇ ? ಎಂಬ ಪ್ರಶ್ನೆಗಳಿಗೆ ಇಂದಿನ ವಿಚಾರಣೆಯಿಂದ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

