ಮಡಿಕೇರಿ ಅ. 7: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ FIR ದಾಖಲಾಗಿದೆ.
ಜಿ.ಎಂ. ಸಫ್ವಾನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ಯಾಡಗೊಟ್ಟ ಗ್ರಾಮದ ಬೂತ್ ಸಂಖ್ಯೆ 21ರ ವ್ಯಾಪ್ತಿಯಲ್ಲಿರುವ 64 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಉದ್ದೇಶದಿಂದ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುದು ದೂರಿನಲ್ಲಿರುವ ಆರೋಪವಾಗಿದೆ.
ಈ ಪ್ರಕರಣದಲ್ಲಿ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷ ಲೋಕೇಶ್, ರಜಿನಿ, ನಾಗರಾಜ್, ಸವಿತಾ ಮಳಲಿ ಹಾಗೂ ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರ ಪ್ರಕಾರ, ಬ್ಯಾಡಗೊಟ್ಟ ಹಾಗೂ ದೊಡ್ಡಕುಂದ ಗ್ರಾಮಗಳಲ್ಲಿರುವ ಮತದಾರರ ಹೆಸರುಗಳನ್ನು ‘Absent/Permanently Shifted’ ಸೇರಿದಂತೆ ವಿವಿಧ ಕಾರಣಗಳನ್ನು ನಮೂದಿಸಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪೈಕಿ ದೂರುದಾರರ ಕುಟುಂಬದ 19 ಸದಸ್ಯರ ಹೆಸರುಗಳೂ ಸೇರಿವೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸರು BNSನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಫಾರ್ಮ್-7 ಅರ್ಜಿಗಳನ್ನು ಯಾರು ಸಲ್ಲಿಸಿದರು, ಅವುಗಳಲ್ಲಿ ನಮೂದಿಸಿರುವ ಮಾಹಿತಿಯ ಸತ್ಯಾಸತ್ಯತೆ ಹಾಗೂ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶವಿತ್ತೇ ಎಂಬ ಕುರಿತು ತನಿಖೆ ಮುಂದುವರೆದಿದೆ.

