ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯ ಬಗ್ಗೆ ಮತ್ತೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಆರಂಭದಲ್ಲಿ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಂಡಿದ್ದ ಅವರು, ಇದೀಗ ತಮ್ಮ ನಿಲುವು ಬದಲಿಸಿ ಮತದಾನದಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ತಮ್ಮ ‘ಟ್ರೂತ್ ಸೋಷಿಯಲ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಈ ಚುನಾವಣೆ ಪ್ರಾಮಾಣಿಕವಾಗಿ ನಡೆದಿತ್ತು ಎಂದು ಯಾರಾದರೂ ನಿಜವಾಗಿಯೂ ನಂಬುತ್ತಾರೆಯೇ? ಚುನಾವಣಾ ಸಮೀಕ್ಷೆಗಳು ಹೇಗೆ ಇಷ್ಟೊಂದು ತಪ್ಪಾಗಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಆದರೆ, ತಮ್ಮ ಆರೋಪಗಳಿಗೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.
“ಕೆಲವು ಆರಂಭಿಕ ಮತದಾನದ ಫಲಿತಾಂಶಗಳು ಒಂದೇ ಬಾರಿಗೆ ಭಾರೀ ಪ್ರಮಾಣದಲ್ಲಿ ಪ್ರಕಟವಾಗಿದ್ದವು. ಎಷ್ಟೇ ಜನರು ಮತ ಚಲಾಯಿಸಿದ್ದರೂ ಗೆಲ್ಲುವುದು ಅಸಾಧ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವೆಲ್ಲವೂ ಮತಯಂತ್ರಗಳ ಆಟ. ಮತದಾರರಿಗಿಂತ ಮತಯಂತ್ರಗಳೇ ಹೆಚ್ಚು ಮುಖ್ಯವಾಗಿವೆ” ಎಂದು ಅವರು ಆರೋಪಿಸಿದ್ದಾರೆ.
ಕಳೆದ ಆರು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಅಮೆರಿಕದ ಮತದಾರರು ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ದೊಡ್ಡ ಹಿನ್ನಡೆ ನೀಡಿದ್ದರು. ಸುಮಾರು ಎರಡು ದಶಕಗಳಲ್ಲೇ ಡೆಮಾಕ್ರಟಿಕ್ ಪಕ್ಷವು ಪ್ರತಿನಿಧಿಗಳ ಸಭೆಯಲ್ಲಿ ಅತಿದೊಡ್ಡ ಬಹುಮತ ಗಳಿಸಿದ್ದು, ಸೆನೆಟ್ ಮೇಲೆಯೂ ನಿಯಂತ್ರಣ ಸಾಧಿಸಿದೆ.
ಚುನಾವಣೆಯ ರಾತ್ರಿ ಆರಂಭದಲ್ಲಿ ಟ್ರಂಪ್ ಸೋಲನ್ನು ಒಪ್ಪಿಕೊಂಡು, ಎದುರಾಳಿ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದರು. “ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲು ನನಗೆ ಸಂಪೂರ್ಣ ಸಮ್ಮತಿಯಿದೆ. ಡೆಮಾಕ್ರಟಿಕ್ ಪಕ್ಷದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ನ್ಯೂಯಾರ್ಕ್ ಟೈಮ್ಸ್ಗೆ ತಿಳಿಸಿದ್ದರು. ಬಳಿಕ ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿಯೂ ಡೆಮಾಕ್ರಟಿಕ್ ಪಕ್ಷದ ಚುನಾವಣಾ ಪ್ರಚಾರವನ್ನು ಶ್ಲಾಘಿಸಿದ್ದರು.
ಆದರೆ, ಗುರುವಾರ ಅಲಾಸ್ಕಾದಲ್ಲಿ ಇನ್ನೂ ಅಂತಿಮವಾಗದ ಸೆನೆಟ್ ಚುನಾವಣೆಯ ವಿಚಾರವಾಗಿ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲಿ ಸ್ಪರ್ಧಿಸಿದ್ದ ಇಬ್ಬರು ಸಣ್ಣ ಪಕ್ಷಗಳ ಅಭ್ಯರ್ಥಿಗಳಿಗೆ ಬಿದ್ದ ಮತಗಳನ್ನು ಹಿನ್ನಡೆಯಲ್ಲಿರುವ ರಿಪಬ್ಲಿಕನ್ ಅಭ್ಯರ್ಥಿ ಡಾನ್ ಸುಲ್ಲಿವನ್ ಅವರಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದರು. “ಇದನ್ನು ಹೊರತುಪಡಿಸಿ ಬೇರೆ ನ್ಯಾಯಯುತ ಪರಿಹಾರವಿಲ್ಲ” ಎಂದು ಹೇಳಿದ್ದರು. ಆದರೆ, ಅಲಾಸ್ಕಾದ ಚುನಾವಣಾ ಕಾನೂನಿನಲ್ಲಿ ಆದ್ಯತೆಯ ಮತದಾನ ಪದ್ಧತಿ ಜಾರಿಯಲ್ಲಿದೆ.
ಸೋಮವಾರದ ಹೇಳಿಕೆಗಳಲ್ಲಿ ಟ್ರಂಪ್ ದೇಶಾದ್ಯಂತ ನಡೆದ ಚುನಾವಣೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ. ಇದು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ತಮ್ಮ ವಿರುದ್ಧ ಅಕ್ರಮವಾಗಿ ಗೆಲುವು ಸಾಧಿಸಿದ್ದಾರೆ ಎಂದು ಟ್ರಂಪ್ ಈ ಹಿಂದೆ ಮಾಡಿದ್ದ ಆರೋಪಗಳನ್ನು ಮತ್ತೆ ನೆನಪಿಸಿದೆ.
2020ರ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ್ದರಿಂದ ಹಲವು ಕಾನೂನು ಹೋರಾಟಗಳು ನಡೆದಿದ್ದವು. ಈ ವಿವಾದದ ಪರಾಕಾಷ್ಠೆಯಾಗಿ 2021ರ ಜನವರಿ 6ರಂದು ಅವರ ಬೆಂಬಲಿಗರು ಅಮೆರಿಕದ ಸಂಸತ್ ಭವನ ಕ್ಯಾಪಿಟಲ್ ಮೇಲೆ ದಾಳಿ ನಡೆಸಿದ್ದರು.

