ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸುತ್ತಿರುವ ಅಭಿಯಾನ ಇದೀಗ ರಾಜ್ಯದ ಗಡಿಗಳನ್ನು ಮೀರಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷವೆಂದರೆ, ಈ ಅಭಿಯಾನದ ಕುರಿತು ಇಂಗ್ಲಿಷ್ ಮಾಧ್ಯಮದ ಹಲವು ಹಿರಿಯ ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಕನ್ನಡಿಗರ ಉದ್ಯೋಗದ ಬೇಡಿಕೆಯನ್ನು ನ್ಯಾಯಸಮ್ಮತ ಎಂದು ಬಣ್ಣಿಸಿದ್ದಾರೆ. ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಪ್ರಾದೇಶಿಕ ಪಕ್ಷಪಾತ, ಸ್ಥಳೀಯರಿಗೆ ಸಿಗಬೇಕಾದ ಉದ್ಯೋಗಾವಕಾಶಗಳು ಹಾಗೂ ಸರ್ಕಾರದ ಜವಾಬ್ದಾರಿಯ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇಂಡಿಯಾ ಟುಡೇ ವಾಹಿನಿಯ ದಕ್ಷಿಣ ಭಾರತ ಮುಖ್ಯಸ್ಥ ನಾಗಾರ್ಜುನ ದ್ವಾರಕಾನಾಥ್ ಕನ್ನಡಿಗರ ಉದ್ಯೋಗದ ಬೇಡಿಕೆಯನ್ನು ಸ್ಪಷ್ಟವಾಗಿ ಬೆಂಬಲಿಸಿದ್ದಾರೆ.
“ಸ್ಥಳೀಯರ ಉದ್ಯೋಗದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಗತ್ಯ ವಿದ್ಯಾರ್ಹತೆ, ಕೌಶಲ್ಯ ಮತ್ತು ಅರ್ಹತೆ ಹೊಂದಿರುವ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಸಮಾನ ಅರ್ಹತೆ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಸಿಗಲೇಬೇಕು. ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಬೇಡಿಕೆ ಸಂಪೂರ್ಣ ನ್ಯಾಯಸಮ್ಮತವಾಗಿದೆ” ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಕನ್ನಡವೇ ಸರ್ವೋಚ್ಚ. ಇಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಪ್ರತಿಯೊಬ್ಬರೂ ಕನ್ನಡ ಕಲಿಯಲು ಹಾಗೂ ಮಾತನಾಡಲು ಪ್ರಯತ್ನಿಸಬೇಕು. ಈ ನೆಲ, ಇಲ್ಲಿನ ಜನರು ಮತ್ತು ಭಾಷೆಯನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ ಮಿನಿಟ್ ಸಂಪಾದಕಿ ಪೂಜಾ ಪ್ರಸನ್ನ ಅವರು ಕನ್ನಡಿಗರ ಉದ್ಯೋಗದ ಬೇಡಿಕೆಯ ಐತಿಹಾಸಿಕ ಹಿನ್ನೆಲೆಯನ್ನು ಉಲ್ಲೇಖಿಸಿದ್ದಾರೆ. ಕನ್ನಡಪರ ಸಂಘಟನೆಗಳು ಕಂಪನಿಗಳಿಗೆ ಭೇಟಿ ನೀಡಿ, ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದನ್ನು ಸಂಕುಚಿತ ಪ್ರಾದೇಶಿಕತೆ ಅಥವಾ ಗೂಂಡಾಗಿರಿ ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ.
1986ರ ಸರೋಜಿನಿ ಮಹಿಷಿ ಸಮಿತಿಯ ಶಿಫಾರಸುಗಳನ್ನು ನೆನಪಿಸಿರುವ ಅವರು, ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮತ್ತು ಆದ್ಯತೆ ನೀಡುವ ಬೇಡಿಕೆ ದಶಕಗಳ ಹಿಂದಿನಿಂದಲೂ ಇದೆ ಎಂದು ಹೇಳಿದ್ದಾರೆ.
ಕರ್ನಾಟಕದ ಹೊರಗಿನವರಿಗೆ ಉದ್ಯೋಗ ನೀಡಬಾರದು ಎಂಬುದು ಕನ್ನಡಪರ ಸಂಘಟನೆಗಳ ಬೇಡಿಕೆಯಲ್ಲ. ಆದರೆ ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಿಗೆ ನ್ಯಾಯಯುತ ಪಾಲು ಸಿಗಬೇಕು ಎಂಬುದು ನ್ಯಾಯಯುತವಾದ ಪ್ರಶ್ನೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬೆಂಗಳೂರು ಐಟಿ ನಗರವಾಗಿ ಬೆಳೆಯುವುದಕ್ಕೆ ಹಲವು ದಶಕಗಳ ಹಿಂದಿನಿಂದಲೇ ಸ್ಥಳೀಯರು ನೀಡಿರುವ ಬಂಡವಾಳ, ಕೈಗಾರಿಕೆ, ಉದ್ಯಮಶೀಲತೆ ಮತ್ತು ಕಾರ್ಮಿಕರ ಶ್ರಮವನ್ನು ಮರೆಯಬಾರದು. ಹೊರರಾಜ್ಯದ ಜನರ ಕೊಡುಗೆಯನ್ನು ಗೌರವಿಸುವುದರ ಜತೆಗೆ ಸ್ಥಳೀಯರ ಕೊಡುಗೆಯನ್ನೂ ಗುರುತಿಸಬೇಕು ಎಂದು ಹೇಳಿದ್ದಾರೆ.
ಇನ್ನೊಂದು ಪ್ರಮುಖ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ. ಕೆಲವು ಕಂಪನಿಗಳು ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧರಿರುವ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಕಷ್ಟಪಡುವ ಆರ್ಥಿಕವಾಗಿ ದುರ್ಬಲ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಆದ್ಯತೆ ನೀಡುತ್ತಿವೆಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಇದು ವಲಸೆ ಕಾರ್ಮಿಕರ ವಿರುದ್ಧದ ವಾದವಲ್ಲ; ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧದ ವಾದ ಎಂದು ಸ್ಪಷ್ಟಪಡಿಸಿದ್ದಾರೆ.
ಟೈಮ್ಸ್ ನೌ ಪತ್ರಕರ್ತ ದೀಪಕ್ ಬೋಪಣ್ಣ ಅವರು ಕಂಪನಿಗಳ ಆಂತರಿಕ ನೇಮಕಾತಿ ವ್ಯವಸ್ಥೆಯಲ್ಲಿನ ಪ್ರಾದೇಶಿಕ ಪಕ್ಷಪಾತದ ಸಾಧ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಆಂಧ್ರಪ್ರದೇಶದ ಮ್ಯಾನೇಜರ್ ಒಬ್ಬರು ಸಹಜವಾಗಿಯೇ ತೆಲುಗು ಮಾತನಾಡುವ ಅಭ್ಯರ್ಥಿಗಳಿಗೆ ಒಲವು ತೋರಬಹುದು. ಉತ್ತರ ಭಾರತದ ಮ್ಯಾನೇಜರ್ ತಮ್ಮದೇ ಪ್ರದೇಶದ ಅಥವಾ ಪರಿಚಿತ ಸಂಪರ್ಕಗಳ ಮೂಲಕ ಬರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬಹುದು. ಇಂತಹ ನೇಮಕಾತಿ ಪದ್ಧತಿಗಳು ಮುಂದುವರಿದರೆ ಕಂಪನಿಗಳಲ್ಲಿ ಕರ್ನಾಟಕದ ಹೊರಗಿನವರೇ ಹೆಚ್ಚಿನ ಸಂಖ್ಯೆಯಲ್ಲಿರುವ ತಂಡಗಳು ರೂಪುಗೊಳ್ಳಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.
ಸ್ಥಳೀಯರ ಅಸಮಾಧಾನಕ್ಕೆ ಕನ್ನಡಿಗರಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆ ಕಾರಣವಲ್ಲ. ತಮ್ಮದೇ ನಗರದಲ್ಲಿರುವ ಕಂಪನಿಗಳಲ್ಲಿ ತಾವು ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದೇವೆ ಎಂಬ ಭಾವನೆ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಗಳು ತಮ್ಮ ನೇಮಕಾತಿ ಅಂಕಿಅಂಶಗಳನ್ನು ಪರಿಶೀಲಿಸಿ, ಹಿರಿಯ ಆಡಳಿತ ಮಂಡಳಿಯ ನಿರ್ಧಾರಗಳಲ್ಲಿ ಪ್ರಾದೇಶಿಕ ಪಕ್ಷಪಾತವಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರವೂ ಸೂಕ್ತ ನೀತಿಗಳನ್ನು ರೂಪಿಸಿ ಕಾರ್ಪೊರೇಟ್ ವಲಯದೊಂದಿಗೆ ರಚನಾತ್ಮಕ ಮಾತುಕತೆ ನಡೆಸಬೇಕು ಎಂದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕನ್ನಡಪರ ಸಂಘಟನೆಗಳ ಎಲ್ಲಾ ಹೋರಾಟದ ವಿಧಾನಗಳನ್ನು ಒಪ್ಪದೇ ಇರಬಹುದು. ಆದರೆ ಅವರ ಅಭಿಯಾನ ಒಂದು ಪ್ರಮುಖ ಸಮಸ್ಯೆಯನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ.

