ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು: ಆಡಳಿತದ ಅಸಡ್ಡೆಗೆ ಯಾರು ಹೊಣೆ?

ಊರಿನ ಗಡಿ ಕಾಯುವ ಸೈನಿಕನಿಗೆ ನೀಡುವ ಗೌರವ, ನಮ್ಮ ಹಳ್ಳಿಯ ಮಕ್ಕಳ ಬದುಕು ಕಾಯುವ ಶಿಕ್ಷಕನಿಗೆ ಏಕಿಲ್ಲ? ಇಂದು ಸರ್ಕಾರಿ ಶಾಲೆಗಳ ಅಂಗಳದಲ್ಲಿ ನಿಂತು ನೋಡಿದರೆ ಎಂತಹವರಿಗೂ ಎದೆ ಝಲ್ ಎನ್ನದಿರದು. ಖಾಯಂ ಮೇಷ್ಟ್ರುಗಳೇ ಇಲ್ಲದ ತರಗತಿಯಲ್ಲಿ, ನಾಲ್ಕು ಕಾಸಿನ ದಿನಗೂಲಿಗೆ ಬರುವ ಅತಿಥಿಗಳನ್ನು ನೆಚ್ಚಿಕೊಂಡು ಇಡೀ ಶಾಲೆ ನಡೆಯುತ್ತಿದೆಯೆಂದರೆ, ನಾವು ಬಡ ಮಕ್ಕಳ ಶಿಕ್ಷಣವನ್ನು ಎಷ್ಟು ಹಗುರವಾಗಿ ಪರಿಗಣಿಸಿದ್ದೇವೆ?

ಇದು ಕೇವಲ ಖಾಲಿ ಇರುವ ಹುದ್ದೆಗಳ ವಿಷಯವಲ್ಲ. ಮೇಷ್ಟ್ರು ವರ್ಷಕ್ಕೆ ಮೂರು ಬಾರಿ ಬದಲಾದರೆ, ಆ ಸಣ್ಣ ಮಗು ಯಾರನ್ನು ತನ್ನ ದಾರಿ ದೀಪ ಎಂದು ನಂಬಬೇಕು? ಬಟ್ಟೆ ಒಗೆಯುವ ಸೋಪಿಗಿಂತ ಕಡಿಮೆ ಬೆಲೆಗೆ ಆ ಅತಿಥಿ ಶಿಕ್ಷಕರ ಶ್ರಮವನ್ನು ಅಳೆಯುವ ಸರ್ಕಾರ, ಅವರಿಂದ ಎಂತಹ ಗುಣಮಟ್ಟವನ್ನು ನಿರೀಕ್ಷಿಸುತ್ತದೆ? ಕೇವಲ ನಾಲ್ಕಾರು ಸಾವಿರ ರೂಪಾಯಿಗೆ ತಿಂಗಳಿಡೀ ದುಡಿಸಿಕೊಂಡು, ವರ್ಷ ಮುಗಿದ ತಕ್ಷಣ ಅವರನ್ನು ಹೊರಹಾಕುವ ಈ ವ್ಯವಸ್ಥೆ, ಶಿಕ್ಷಕರಿಗೂ ಅನ್ಯಾಯ ಮಾಡುತ್ತಿದೆ, ಮಕ್ಕಳಿಗೂ ದ್ರೋಹ ಎಸಗುತ್ತಿದೆ.

ಖರ್ಚು ಕಡಿಮೆಯಾಯಿತು ಎಂದು ಅಂಕಿ-ಅಂಶಗಳ ಖಾತಾ ಪುಸ್ತಕದಲ್ಲಿ ಬರೆದುಕೊಂಡು ಬೀಗುವ ಅಧಿಕಾರಿಗಳಿಗೆ, ಹಳ್ಳಿಯ ಬಡ ಕಂದಮ್ಮಗಳ ಕಣ್ಣಲ್ಲಿ ಕಾಣುವ ಭವಿಷ್ಯದ ಕತ್ತಲೆ ಅರ್ಥವಾಗುತ್ತಿಲ್ಲ. ಖಾಯಂ ಶಿಕ್ಷಕರನ್ನು ನೇಮಿಸದೆ ಈ ರೀತಿ ತಾತ್ಕಾಲಿಕ ತೇಪೆ ಹಚ್ಚುವ ಕೆಲಸ ನಿಲ್ಲದಿದ್ದರೆ, ಸರ್ಕಾರಿ ಶಾಲೆಗಳ ಬಾಗಿಲಿಗೆ ಬೀಗ ಜಡಿಯಲು ಬೇರೆ ಶತ್ರುಗಳೇ ಬೇಕಿಲ್ಲ ನಮ್ಮದೇ ನಿರ್ಲಕ್ಷ್ಯ ಸಾಕು.

ಸರ್ಕಾರಿ ಶಾಲೆಗಳ ಸ್ಥಿತಿ ಕೇವಲ ಶಿಕ್ಷಕರ ಅಭಾವಕ್ಕಷ್ಟೇ ಸೀಮಿತವಾಗಿಲ್ಲ. ಕುಡಿಯುವ ನೀರು, ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಹಾಗೂ ಬಿದ್ದಿರುವ ಛಾವಣಿಗಳನ್ನು ದುರಸ್ತಿ ಮಾಡಲು ಅನುದಾನವೇ ಸಿಗುತ್ತಿಲ್ಲ. ಒಂದೆಡೆ ಖಾಸಗಿ ಶಾಲೆಗಳಲ್ಲಿ ಹೈಟೆಕ್ ತಂತ್ರಜ್ಞಾನ ಮೆರೆಯುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲೆಯ ಬಡ ಮಕ್ಕಳು ಕನಿಷ್ಠ ಸೌಕರ್ಯಗಳಿಗೂ ಪರದಾಡುತ್ತಿದ್ದಾರೆ. ಸಂವಿಧಾನ ನೀಡಿದ ಸಮಾನ ಶಿಕ್ಷಣದ ಹಕ್ಕು ಇಲ್ಲಿ ದಿನನಿತ್ಯ ಹರಾಜಾಗುತ್ತಿದೆ. ಪೋಷಕರು ಸಾಲ ಸೋಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ, ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ನೆಪ ಒಡ್ಡಿ ಸರ್ಕಾರವೇ ಶಾಲೆಗಳನ್ನು ಮುಚ್ಚಲು  ಸಂಚು ರೂಪಿಸುತ್ತಿದೆ. ಶಾಲೆ ಮುಚ್ಚುವುದು ಎಂದರೆ ಕೇವಲ ಒಂದು ಕಟ್ಟಡ ಬಂದ್ ಆಗುವುದಲ್ಲ, ಆ ಇಡೀ ಹಳ್ಳಿಯ ಜ್ಞಾನದ ದೀಪವನ್ನು ನಂದಿಸಿದಂತೆ.

ಶಿಕ್ಷಣ ಎನ್ನುವುದು ಸಮಾಜದ ಕೊನೆಯ ಮಗುವಿಗೂ ತಲುಪಬೇಕಾದ ಮೂಲಭೂತ ಹಕ್ಕು. ಅದು ಸರ್ಕಾರದ ಉಚಿತ ಭಿಕ್ಷೆಯಲ್ಲ. ಬಜೆಟ್‌ನಲ್ಲಿ ಉಚಿತ ಯೋಜನೆಗಳಿಗೆ ಕೋಟಿ ಕೋಟಿ ಸುರಿಯುವ ಸರ್ಕಾರಕ್ಕೆ, ದೇಶದ ಭವಿಷ್ಯ ರೂಪಿಸುವ ಶಾಲೆಗಳನ್ನು ಉಳಿಸಿಕೊಳ್ಳಲು ಹಣವಿಲ್ಲವೇ? ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ನಿಯಮ ಬರದ ಹೊರತು ಈ ವ್ಯವಸ್ಥೆ ಬದಲಾಗುವುದಿಲ್ಲ. ಸಾಯುತ್ತಿರುವ ಸರ್ಕಾರಿ ಶಾಲೆಗಳನ್ನು ಬದುಕಿಸುವುದು ಎಂದರೆ ನಮ್ಮ ಸಮಾಜದ ಭವಿಷ್ಯವನ್ನು ಬದುಕಿಸಿಕೊಂಡಂತೆ.

ಎನ್ ಮಹಾರಾಜ್

ಇದನ್ನೂ ಓದಿ- https://kannadaplanet.com/when-insults-become-a-backfire/ ನಿಂದನೆಗಳು ತಿರುಗು ಬಾಣವಾದಾಗ …

More articles

Latest article

Most read