ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 31ರಂದು ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಯುವಜನರ ಪ್ರತಿಭಟನೆಯನ್ನು ಮೊದಲ ಬಾರಿಗೆ ನೇರವಾಗಿ ಉಲ್ಲೇಖಿಸಿದ್ದಾರೆ. ಆದರೆ ಪೆಲೆಟ್ ಗನ್ ಬಳಕೆ, ಲಾಠಿ ಚಾರ್ಜ್, ಟಿಯರ್ ಗ್ಯಾಸ್, ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಗಳ ಬಗ್ಗೆ ಏನನ್ನೂ ಹೇಳಿಲ್ಲ. ಬದಲಾಗಿ ತಮ್ಮ ವಿರುದ್ಧದ ಟೀಕೆಗಳ ಕುರಿತೇ ಆತ್ಮಮರುಕದ ಮಾತುಗಳನ್ನು ಆಡಿಕೊಂಡಿದ್ದಾರೆ.
ನೀಟ್ ಪೇಪರ್ ಲೀಕ್ ಹಿನ್ನೆಲೆಯಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಜೆನ್ ಜಿ ವಿದ್ಯಾರ್ಥಿಗಳು ನಡೆಸಿದ ಅಭೂತಪೂರ್ವ ಹೋರಾಟದ ನಂತರ ಸೆಲ್ಫಿ ವಿಡಿಯೋ ಮಾಡಲು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಐದನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಕೆಲವರು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿರುವುದು ನೋವು ತಂದಿದೆ ಎಂದು ಹೇಳಿದ ಅವರು, ಅಂತಹ “ದಾರಿ ತಪ್ಪಿದ ಮಕ್ಕಳನ್ನು” ಕ್ಷಮಿಸಲು ಬಯಸುತ್ತೇನೆ ಎಂದರು. ಆದರೆ, ಈ ಹೇಳಿಕೆಯಲ್ಲಿ ಹಲವು ಪ್ರಮುಖ ವಿವಾದಾತ್ಮಕ ವಿಷಯಗಳ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಅವರು ಹೋಗಿಲ್ಲ.
ಪ್ರಮುಖವಾಗಿ, ಜುಲೈ 20ರಂದು ಸಂಸತ್ ಚಲೋ ಪ್ರತಿಭಟನೆಯ ವೇಳೆ ಕೇಂದ್ರದ ಅಧೀನದಲ್ಲಿರುವ ಭದ್ರತಾ ಪಡೆಗಳು ಮತ್ತು ಪೊಲೀಸರಿಂದ ಲಾಠಿ ಚಾರ್ಜ್, ಟಿಯರ್ ಗ್ಯಾಸ್, ಪೆಲೆಟ್ ಗನ್ಗಳನ್ನು ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರಧಾನಿ ಯಾವುದೇ ಉಲ್ಲೇಖ ಮಾಡಲಿಲ್ಲ. ಈ ಕ್ರಮದಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ಬಗ್ಗೆ ಅವರು ಪ್ರತಿಕ್ರಿಯಿಸಿಲ್ಲ.
ಇದಲ್ಲದೆ, ಪ್ರತಿಭಟನೆಯ ಬಳಿಕ ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿದ್ದ ಎಫ್ಐಆರ್ಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ, ಬಂಧಿತರ ವಿರುದ್ಧದ ಪ್ರಕರಣಗಳು, ಹಾಗೂ ಈ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ಕಳೆದ ಹಲವು ದಿನಗಳಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಸ್ಥಗಿತದ ಕುರಿತು ಕೂಡ ಮೋದಿ ತಮ್ಮ ವಿಡಿಯೋದಲ್ಲಿ ಮಾತನಾಡಲಿಲ್ಲ.
ಪ್ರತಿಭಟನೆಯ ಮೂಲ ಕಾರಣಗಳಾದ ಪರೀಕ್ಷಾ ಅಕ್ರಮಗಳು, ವಿದ್ಯಾರ್ಥಿಗಳ ಬೇಡಿಕೆಗಳು, ಪೊಲೀಸ್ ಕ್ರಮದ ಕುರಿತು ಸ್ವತಂತ್ರ ತನಿಖೆಯ ಬೇಡಿಕೆ ಅಥವಾ ಪ್ರತಿಭಟನಾಕಾರರು ಎತ್ತಿದ ಇತರ ಪ್ರಶ್ನೆಗಳ ಬಗ್ಗೆಯೂ ಈ ವಿಡಿಯೋದಲ್ಲಿ ಯಾವುದೇ ವಿವರವಾದ ಪ್ರತಿಕ್ರಿಯೆ ಇರಲಿಲ್ಲ. ಬದಲಾಗಿ, ಪ್ರತಿಭಟನೆಯಲ್ಲಿ ಬಳಸಲಾದ ಅವಾಚ್ಯ ಭಾಷೆಯನ್ನೇ ಪ್ರಧಾನ ವಿಷಯವನ್ನಾಗಿ ಮಾಡಿಕೊಂಡು, ಯುವಕರಿಗೆ ಮಾರ್ಗದರ್ಶನ ನೀಡಬೇಕು, ಶಿಕ್ಷೆ ನೀಡುವುದರಿಂದ ಪ್ರಯೋಜನವಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.
ತಮ್ಮ ಮೊದಲ ಸ್ಪಷ್ಟ ಪ್ರತಿಕ್ರಿಯೆಯಲ್ಲಿ ಪ್ರತಿಭಟನೆಯ ವೇಳೆ ಬಳಸಲಾದ ಭಾಷೆಯನ್ನು ಖಂಡಿಸಿದರೂ, ಪ್ರತಿಭಟನೆಯ ವೇಳೆ ನಡೆದ ಬಲಪ್ರಯೋಗದ ಆರೋಪಗಳು, ಗಾಯಗೊಂಡ ಪ್ರತಿಭಟನಾಕಾರರು, ಸಂಸತ್ತಿನ ಬಿಕ್ಕಟ್ಟು ಹಾಗೂ ಇತರ ಪ್ರಮುಖ ವಿವಾದಾತ್ಮಕ ಪ್ರಶ್ನೆಗಳ ಕುರಿತು ಮೌನ ವಹಿಸಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

