ಜಾಗತೀಕರಣ ನಮ್ಮನ್ನು ಬೆಸೆಯುತ್ತಿದೆಯೇ? ನಮ್ಮ ಸಂಸ್ಕೃತಿಯ ಬೇರುಗಳನ್ನೇ ಕಿತ್ತು ಹಾಕುತ್ತಿದೆಯೇ? ನಮ್ಮ ಭೂತಕಾಲದ ಭವಿಷ್ಯವನ್ನು ಉಳಿಸಿಕೊಳ್ಳುವುದು ಹೇಗೆ? ಸ್ಥಳೀಯತೆ ಮತ್ತು ಜಾಗತೀಕರಣದ ನಡುವಿನ ಸಂಘರ್ಷ, ಗುರುತಿನ ಬಿಕ್ಕಟ್ಟು – ಇವೆಲ್ಲವೂ ಈ ಲೇಖನದ ಕೇಂದ್ರ ಬಿಂದುಗಳು . ಖ್ಯಾತ ಚಿಂತಕ ಕೆ. ಸಚ್ಚಿದಾನಂದನ್ ಈ ಬಹು ಮುಖ್ಯ ಪ್ರಶ್ನೆಗಳನ್ನು ಎತ್ತುತ್ತಲೇ ಅವುಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಪರ್ಯಾಯ ಚಿಂತನೆಯನ್ನೂ ಈ ಲೇಖನದಲ್ಲಿ ಮುಂದಿಟ್ಟಿದ್ದಾರೆ. ಅವರ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ, ಸಹಾಯಕ ಪ್ರಾಧ್ಯಾಪಕರು.
ಜಾಗತೀಕರಣ ಎಂಬ ವಿದ್ಯಮಾನವನ್ನು ಅರ್ಥೈಸುವ ದಾರಿಗಳು ಒಂದಲ್ಲ, ಹಲವಾರಿವೆ. ಆಧುನಿಕೋತ್ತರ ಜಗತ್ತಿನ ಸೂಕ್ಷ್ಮ ವಿಶ್ಲೇಷಕರಲ್ಲಿ ಒಬ್ಬರಾಗಿದ್ದ, ಇತ್ತೀಚೆಗೆ ನಮ್ಮನ್ನಗಲಿದ ಜೀನ್ ಬೋದ್ರಿಯಾರ್, ಜಾಗತೀಕರಣವನ್ನು “ನಮ್ಮ ಕಾಲದ ಅತಿ ದೊಡ್ಡ ಹಿಂಸೆಯ ರೂಪ” ಎಂದು ಕರೆದಿದ್ದರು. ನೋಮ್ ಚಾಮ್ಸ್ಕಿ ಅವರೂ ಜಾಗತೀಕರಣದ ಹೆಸರಿನಲ್ಲಿ ಅಮೆರಿಕ ನಡೆಸುತ್ತಿರುವ ಪ್ರಾಬಲ್ಯದ ರಾಜಕಾರಣವನ್ನು ತೀವ್ರವಾಗಿ ಟೀಕಿಸಿದ್ದಾರೆ. ಆದರೆ ಅಮರ್ತ್ಯ ಸೇನ್ ಅವರ ನಿಲುವು ಮಾತ್ರ ಇದಕ್ಕಿಂತ ತುಸು ಭಿನ್ನವಾಗಿದೆ.
ತಮ್ಮ ಇತ್ತೀಚಿನ ಕೃತಿ “Identity and Violence: The Illusion of Destiny” ಯಲ್ಲಿ ಅಮರ್ತ್ಯ ಸೇನ್ ಅವರು ಜಾಗತೀಕರಣದ ವಿರುದ್ಧ ವಿಶ್ವದಾದ್ಯಂತ ವ್ಯಕ್ತವಾಗುತ್ತಿರುವ ನೈತಿಕ ಪ್ರತಿರೋಧಗಳನ್ನು ಪ್ರಸ್ತಾಪಿಸುತ್ತಾರೆ. ಈ ಚರ್ಚೆಯ ಎರಡೂ ಆಯಾಮಗಳನ್ನು ಸಮಚಿತ್ತದಿಂದ ಅವಲೋಕಿಸುವ ಅವರು, ಪ್ರತಿಭಟನಾಕಾರರು ಮುಂದಿಟ್ಟಿರುವ ಹಲವಾರು ಪ್ರಶ್ನೆಗಳಲ್ಲಿ ಅರ್ಥಪೂರ್ಣತೆಯಿದೆ ಎಂದು ಒಪ್ಪಿಕೊಳ್ಳುತ್ತಾರೆ; ಅದೇ ವೇಳೆ, ಅವರ ಕೆಲವು ವಾದಗಳ ಮಿತಿಗಳನ್ನೂ ವಿಮರ್ಶಾತ್ಮಕವಾಗಿ ಗುರುತಿಸುತ್ತಾರೆ. ಜಾಗತೀಕರಣದ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಅದರ ವಿಮರ್ಶಕರು ಸಲ್ಲಿಸಿರುವ ಮಹತ್ವದ ಕೊಡುಗೆಯನ್ನು ಅವರು ಗೌರವಿಸುತ್ತಾರೆ. ಆದರೆ, ಜಗತ್ತಿನಲ್ಲಿರುವ ಬಡತನ, ವಂಚನೆ, ಅಸಮಾನತೆ ಮತ್ತು ವಿಭಜನೆಗಳನ್ನು ಜಾಗತೀಕರಣದ ಅನಿವಾರ್ಯ ದುಷ್ಪರಿಣಾಮಗಳೆಂದು ಪರಿಗಣಿಸುವುದು ತಪ್ಪು ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಅವರ ದೃಷ್ಟಿಯಲ್ಲಿ, ಇವು ಜಾಗತೀಕರಣದ ಪರಿಣಾಮಗಳಲ್ಲ; ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳ ವೈಫಲ್ಯದಿಂದ ಉಂಟಾಗಿರುವ ಸಮಸ್ಯೆಗಳು. ಇಂತಹ ವೈಫಲ್ಯಗಳು ಜಾಗತಿಕ ನಿಕಟತೆಯ ಸಹಜ ಅಥವಾ ಅನಿವಾರ್ಯ ಫಲಗಳಲ್ಲ; ಸೂಕ್ತ ನೀತಿಗಳು ಮತ್ತು ವ್ಯವಸ್ಥೆಗಳ ಮೂಲಕ ಅವುಗಳನ್ನು ನಿವಾರಿಸಬಹುದು. ಇಂದಿನ ಜಗತ್ತನ್ನು ಕಂಗೆಡಿಸುತ್ತಿರುವ ಗಂಭೀರ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಎದುರಿಸುವಲ್ಲಿ ಪರಿಣಾಮಕಾರಿ ಜಾಗತಿಕ ನೈತಿಕತೆಯ ಕೊರತೆಯಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂಬುದನ್ನೂ ಸೇನ್ ಗಮನ ಸೆಳೆಯುತ್ತಾರೆ. ಆದರೆ, ಜಾಗತೀಕರಣವೆಂದರೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಾಬಲ್ಯದ ಮತ್ತೊಂದು ಹೆಸರು ಎಂಬ ವಿಮರ್ಶಕರ ಅಭಿಪ್ರಾಯವನ್ನು ಅವರು ಒಪ್ಪುವುದಿಲ್ಲ. ಅವರ ಪ್ರಕಾರ, ಇತಿಹಾಸದ ಆರಂಭಿಕ ಹಂತಗಳನ್ನು ಗಮನಿಸಿದರೆ, ಜಾಗತೀಕರಣವೆಂದರೆ ಪಶ್ಚಿಮದ ಪ್ರಭಾವವು ಪೂರ್ವದ ಮೇಲೆ ಬೀರಿದ ಪರಿಣಾಮ ಮಾತ್ರವಲ್ಲ; ಬದಲಾಗಿ ಪೂರ್ವದಿಂದ ಪಶ್ಚಿಮಕ್ಕೆ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಹರಿದು ಹೋದ ಮಹತ್ವದ ಪ್ರಕ್ರಿಯೆಯೂ ಆಗಿತ್ತು. ಗಣಿತ, ಲೋಹಶಾಸ್ತ್ರ, ಕಾಗದ ಮತ್ತು ಗನ್ಪೌಡರ್ ತಯಾರಿಕೆಯ ತಂತ್ರಜ್ಞಾನ, ಮುದ್ರಣ ಕಲೆ, ಕಾಂತೀಯ ದಿಕ್ಸೂಚಿ, ತಳ್ಳುಗಾಡಿ, ತಿರುಗುವ ಫ್ಯಾನ್, ಕ್ರಾಸ್ಬೋ, ಕಬ್ಬಿಣದ ಸರಪಳಿ ತೂಗುಸೇತುವೆಗಳ ನಿರ್ಮಾಣ ಕೌಶಲ್ಯ ಹಾಗೂ ಗಾಳಿಪಟ ತಯಾರಿಕೆಯಂತಹ ಅನೇಕ ಆವಿಷ್ಕಾರಗಳು ಮತ್ತು ತಾಂತ್ರಿಕ ಜ್ಞಾನಗಳು ಪೂರ್ವದಿಂದ ಪಶ್ಚಿಮಕ್ಕೆ ಸಾಗಿದವು. ಆದ್ದರಿಂದ ಜಾಗತೀಕರಣವನ್ನು ಕೇವಲ ಪಾಶ್ಚಾತ್ಯ ಪ್ರಾಬಲ್ಯದ ಸಾಧನವೆಂದು ಮಾತ್ರ ವ್ಯಾಖ್ಯಾನಿಸುವುದು ಅದರ ಐತಿಹಾಸಿಕ ವಾಸ್ತವತೆಯನ್ನು ಕುಗ್ಗಿಸಿ ನೋಡುವಂತಾಗುತ್ತದೆ.
ಸುಮಾರು ಒಂದು ಸಾವಿರ ವರ್ಷಗಳ ಹಿಂದೆ, ಉನ್ನತ ತಂತ್ರಜ್ಞಾನದ ಈ ಸಾಧನೆಗಳು ಚೀನಾದಲ್ಲಿ ಸುಭದ್ರವಾಗಿ ನೆಲೆಗೊಂಡಿದ್ದವು; ಭಾರತದಲ್ಲಿಯೂ ಅವು ಗಮನಾರ್ಹ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದವು. ಗಣಿತದಲ್ಲಿನ ದಶಮಾನ ಪದ್ಧತಿ ಕ್ರಿ.ಶ. ಎರಡನೆಯ ಶತಮಾನದಿಂದ ಆರನೆಯ ಶತಮಾನದ ನಡುವಿನ ಅವಧಿಯಲ್ಲಿ ಭಾರತದಲ್ಲಿ ಉದ್ಭವಿಸಿ, ಉತ್ತಮವಾಗಿ ಅಭಿವೃದ್ಧಿ ಹೊಂದಿತು. ದಕ್ಷಿಣ ಮತ್ತು ಪಶ್ಚಿಮ ಏಷ್ಯಾದಲ್ಲಿ ಆರ್ಯಭಟ, ಭಾಸ್ಕರಾಚಾರ್ಯ ಮತ್ತು ಅಲ್-ಖ್ವಾರಿಜ್ಮಿ ಅವರಂತಹ ಮಹಾನ್ ಮೇಧಾವಿಗಳು ರೂಪಿಸಿದ ಗಣಿತ, ಖಗೋಳಶಾಸ್ತ್ರ ಹಾಗೂ ಇತರ ವೈಜ್ಞಾನಿಕ ಆವಿಷ್ಕಾರಗಳು, ಹತ್ತನೇ ಶತಮಾನದಲ್ಲಿ ಯುರೋಪಿನ ರೂಪಾಂತರಕ್ಕೆ ಕಾರಣವಾದ ವೈಜ್ಞಾನಿಕ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದವು.

ಜಾಗತೀಕರಣವನ್ನು ಪಾಶ್ಚಾತ್ಯ ರಾಷ್ಟ್ರಗಳ ಪ್ರಾಬಲ್ಯದ ಮತ್ತೊಂದು ಹೆಸರಷ್ಟೇ ಎಂದು ಭಾವಿಸುವುದು ಅಪಾಯಕಾರಿ ಎಂದು ಅಮರ್ತ್ಯ ಸೇನ್ ಎಚ್ಚರಿಸುತ್ತಾರೆ. ಇಂತಹ ದೃಷ್ಟಿಕೋನವು ನಮ್ಮನ್ನು ಸಂಕುಚಿತ ಪ್ರಾದೇಶಿಕ ಮನೋಭಾವದೊಳಗೆ ಬಂಧಿಸುತ್ತದೆ. ಅದರ ಪರಿಣಾಮವಾಗಿ ಗಡಿಗಳನ್ನು ಮೀರಿ ಬೆಳೆಯುವ ಜ್ಞಾನ, ವಿಜ್ಞಾನ ಮತ್ತು ಮಾನವ ನಾಗರಿಕತೆಯ ಪರಸ್ಪರ ವಿನಿಮಯದ ಮೌಲ್ಯವನ್ನು ನಾವು ಕಡೆಗಣಿಸುವ ಅಪಾಯವಿದೆ. ಕೊನೆಗೆ, ಪಾಶ್ಚಾತ್ಯೇತರ ಸಮಾಜಗಳೇ ತಮ್ಮ ಸಾಂಸ್ಕೃತಿಕ ಅಸ್ತಿತ್ವಕ್ಕೂ ತಾವೇ ಧಕ್ಕೆ ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸೇನ್ ಇದನ್ನೇ ವ್ಯಂಗ್ಯವಾಗಿ, “ತಮ್ಮ ಸಾಂಸ್ಕೃತಿಕತೆಯ ಬುಡಕ್ಕೂ ತಾವೇ ಗುಂಡು ಹಾರಿಸಿಕೊಳ್ಳುವುದು” ಎಂದು ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ಅವರು ಹತ್ತೊಂಬತ್ತನೆಯ ಶತಮಾನದ ಭಾರತದ ಒಂದು ಮನೋವೃತ್ತಿಯನ್ನು ನೆನಪಿಸುತ್ತಾರೆ. ಆ ಕಾಲದಲ್ಲಿ ಪಾಶ್ಚಾತ್ಯದಿಂದ ಬಂದದ್ದೆಲ್ಲವನ್ನೂ ಯಾವುದೇ ವಿವೇಚನೆಯಿಲ್ಲದೆ ತಿರಸ್ಕರಿಸುವ ಪ್ರವೃತ್ತಿ ಬಲವಾಗಿತ್ತು. ಆದರೆ ಅದರಲ್ಲಿದ್ದ ದೊಡ್ಡ ವಿಪರ್ಯಾಸವೆಂದರೆ, ಪಾಶ್ಚಾತ್ಯವೆಂದು ತಿರಸ್ಕರಿಸಲ್ಪಟ್ಟ ಅನೇಕ ಜ್ಞಾನಸಂಪತ್ತು ಮೂಲತಃ ಭಾರತದಿಂದಲೇ ಅಲ್ಲಿಗೆ ತಲುಪಿದ್ದವು ಎಂಬ ಸತ್ಯವನ್ನು ಮರೆತಿದ್ದದ್ದು. ತ್ರಿಕೋನ ಆಕಾರದ ‘ಸೈನ್’ (Sine) ಪರಿಕಲ್ಪನೆಯೇ ಇದಕ್ಕೆ ಉತ್ತಮ ಉದಾಹರಣೆ. ಆರ್ಯಭಟರು ಇದನ್ನು (ardhajya) ‘ಅರ್ಧಜ್ಯಾ’ ಎಂಬ ಹೆಸರಿನಲ್ಲಿ ವಿವರಿಸಿದ್ದರು. ಕಾಲಕ್ರಮೇಣ ಅದು (jya) ‘ಜ್ಯಾ’ ಎಂದು ಸಂಕ್ಷಿಪ್ತವಾಯಿತು. ಅರಬ್ ವಿದ್ವಾಂಸರು ಅದನ್ನು ‘ಜ್ಯಾಬ್’ (Jyab) ಎಂಬ ರೂಪದಲ್ಲಿ ಅಳವಡಿಸಿಕೊಂಡರು. ಅಲ್ಲಿಂದ ಲ್ಯಾಟಿನ್ ಭಾಷೆಗೆ ಅನುವಾದವಾಗುವಾಗ ಅದು ‘ಸೈನಸ್’ (Sinus) ಆಯಿತು. ಇಂದಿನ ಗಣಿತದಲ್ಲಿ ಬಳಕೆಯಲ್ಲಿರುವ ‘ಸೈನ್’ ಎಂಬ ಪದವೂ ಅಲ್ಲಿಂದಲೇ ರೂಪುಗೊಂಡಿದೆ. ಹೀಗಿರುವಾಗ ಯಾವುದಾದರೂ ಒಂದು ವಿಚಾರಕ್ಕೆ “ಇದು ಪೂರ್ವದ್ದು” ಅಥವಾ “ಇದು ಪಾಶ್ಚಾತ್ಯದ್ದು” ಎಂದು ಅಂತಿಮವಾಗಿ ಮುದ್ರೆ ಒತ್ತುವುದು ಸುಲಭದ ಕೆಲಸವಲ್ಲ. ಮಾನವ ನಾಗರಿಕತೆಯ ಇತಿಹಾಸವೆಂದರೆ ವಾಸ್ತವವಾಗಿ ಜ್ಞಾನ ಮತ್ತು ಸಂಸ್ಕೃತಿಗಳ ನಿರಂತರ ಸಂವಾದದ ಇತಿಹಾಸ.
ಆರ್ಥಿಕ ಅಭಾವ ಮತ್ತು ಅಸಮಾನತೆಯ ಪ್ರಶ್ನೆಯನ್ನು ಅಮರ್ತ್ಯ ಸೇನ್ ಇನ್ನಷ್ಟು ವಿಸ್ತಾರವಾಗಿ ಪರಿಶೀಲಿಸುತ್ತಾರೆ. ಜಾಗತೀಕರಣ ಮತ್ತು ಮಾರುಕಟ್ಟೆ ಆರ್ಥಿಕತೆಯ ಪರಿಣಾಮಗಳು ಬಡವರ ಬದುಕಿನ ಮೇಲೆ ಯಾವ ರೂಪದಲ್ಲಿ ವ್ಯಕ್ತವಾಗುತ್ತವೆ ಎಂಬುದನ್ನು ನಿರ್ಧರಿಸುವಲ್ಲಿ ಜಾಗತಿಕ ಶಕ್ತಿಗಳಷ್ಟೇ ಅಲ್ಲ, ಪ್ರತಿಯೊಂದು ದೇಶದ ಆಂತರಿಕ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳೂ ಸಮಾನವಾಗಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ಅವರ ಅಭಿಪ್ರಾಯ. ಹಾಗೆಯೇ ಜಾಗತಿಕ ಬಂಡವಾಳಶಾಹಿಯ ಅನೇಕ ಲೋಪಗಳು ಮತ್ತು ಉದ್ದೇಶಪೂರ್ವಕ ವೈಫಲ್ಯಗಳು ಸಮಾಜದಲ್ಲಿನ ವರ್ಗಗಳ ನಡುವಿನ ಅಂತರವನ್ನು ಮತ್ತಷ್ಟು ಅಗಲಗೊಳಿಸಿವೆ; ಅಸಮಾಧಾನ, ಅಸಹನೆ ಮತ್ತು ಹಿಂಸೆಗೆ ಪೂರಕವಾದ ಪರಿಸ್ಥಿತಿಯನ್ನೂ ನಿರ್ಮಿಸಿವೆ ಎಂಬುದನ್ನು ಅವರು ಸೂಚಿಸುತ್ತಾರೆ. ಆದರೆ ಈ ಎಲ್ಲ ಆರ್ಥಿಕ ವೈಪರೀತ್ಯಗಳಿಗೆ ಜಾಗತೀಕರಣವನ್ನು ಸಂಪೂರ್ಣವಾಗಿ ತಿರಸ್ಕರಿಸುವುದೇ ಪರಿಹಾರವಲ್ಲ ಎಂದು ಸೇನ್ ಪ್ರತಿಪಾದಿಸುತ್ತಾರೆ. ಬದಲಾಗಿ, ಜಾಗತೀಕರಣದಿಂದ ಉಂಟಾಗುವ ಲಾಭಗಳು ಎಲ್ಲರಿಗೂ ನ್ಯಾಯಯುತವಾಗಿ ತಲುಪುವಂತೆ ಹಂಚಿಕೆಯಾಗಬೇಕು; ಜಾಗತಿಕ ಸಮಾನತೆಯನ್ನು ಬಲಪಡಿಸುವ ರೀತಿಯಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ನೀತಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರಬೇಕು. ಅವರ ದೃಷ್ಟಿಯಲ್ಲಿ, ಇವೇ ಈ ಆರ್ಥಿಕ ಅಸಮಾನತೆಗಳಿಗೆ ಶಾಶ್ವತ ಪರಿಹಾರದ ದಾರಿಗಳಾಗಿವೆ. ಅಷ್ಟೇ ಅಲ್ಲ, ಜಾಗತಿಕ ಮಟ್ಟದ ಚರ್ಚೆಗಳು ಮತ್ತು ಸಹಕಾರವು ಕೇವಲ ವ್ಯಾಪಾರ, ಹೂಡಿಕೆ ಅಥವಾ ಆರ್ಥಿಕ ಬೆಳವಣಿಗೆಯಲ್ಲೇ ಸೀಮಿತವಾಗಿರಬಾರದು ಎಂಬುದನ್ನೂ ಅವರು ಒತ್ತಿ ಹೇಳುತ್ತಾರೆ. ವರ್ಗ, ಜನಾಂಗ ಮತ್ತು ಲಿಂಗಾಧಾರಿತ ಅಸಮಾನತೆಗಳ ವಿರುದ್ಧದ ಹೋರಾಟ, ಪರಿಸರದ ಮೇಲೆ ಮಡುಗಟ್ಟಿರುವ ಬಿಕ್ಕಟ್ಟು, ಹಾಗೆಯೇ ರಾಷ್ಟ್ರಗಳ ಮತ್ತು ಪ್ರದೇಶಗಳ ಗಡಿಗಳನ್ನು ಮೀರಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹಾಗೂ ಸಹಯೋಗವನ್ನು ಬೇಡುವ ಇತರ ಎಲ್ಲ ಮಾನವೀಯ ಪ್ರಶ್ನೆಗಳೂ ಜಾಗತಿಕ ಕಾರ್ಯಸೂಚಿಯ ಭಾಗವಾಗಬೇಕು. ಏಕೆಂದರೆ ಇಂತಹ ಸಮಸ್ಯೆಗಳು ಒಂದೇ ದೇಶದ ಮಿತಿಯಲ್ಲಿ ಹುಟ್ಟಿದರೂ, ಅವುಗಳ ಪರಿಣಾಮ ಇಡೀ ಮಾನವ ಸಮಾಜವನ್ನು ತಟ್ಟುತ್ತದೆ; ಆದ್ದರಿಂದ ಅವುಗಳ ಪರಿಹಾರವೂ ಜಾಗತಿಕ ಸಹಭಾಗಿತ್ವದಲ್ಲಿಯೇ ಅಡಗಿದೆ.
ನಮ್ಮ ಕಾಲದ ಬಿಕ್ಕಟ್ಟುಗಳ ನಡುವೆಯೂ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಅಚಲ ಪ್ರತಿಪಾದಕರಾಗಿ ನಾನು ಅಪಾರ ಗೌರವಿಸುವ ಅಮರ್ತ್ಯ ಸೇನ್ ಅವರನ್ನು ಓದಿದ ನಂತರ, ‘ಅಂತರರಾಷ್ಟ್ರೀಯತೆ’ ಮತ್ತು ‘ಜಾಗತೀಕರಣ’ ಎಂಬ ಎರಡು ಪರಿಕಲ್ಪನೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವ ಅಗತ್ಯವನ್ನು ನಾನು ಇನ್ನಷ್ಟು ತೀವ್ರವಾಗಿ ಅನುಭವಿಸಿದೆ. ಒಂದನ್ನು ಮತ್ತೊಂದರೊಂದಿಗೆ ಗೊಂದಲಗೊಳಿಸದೆ, ಅವುಗಳ ಪ್ರತ್ಯೇಕ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಇಂದು ಅತ್ಯಗತ್ಯ. ಅಮರ್ತ್ಯ ಸೇನ್ ಅವರು ಜಾಗತೀಕರಣದ ಸಕಾರಾತ್ಮಕ ಫಲಗಳೆಂದು ಉಲ್ಲೇಖಿಸುವ ಅನೇಕ ಮೌಲ್ಯಗಳು ಮತ್ತು ಆದರ್ಶಗಳು, ವಾಸ್ತವವಾಗಿ ಅಂತರರಾಷ್ಟ್ರೀಯತೆ ಎಂಬ ಪರಿಕಲ್ಪನೆಗೆ ಸೇರಬೇಕಾದವು. ಜಗತ್ತಿನ ಸಮಾಜವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಬಹುಕಾಲದಿಂದ ಪೋಷಿಸಿಕೊಂಡು ಬಂದಿರುವ, ಉಳಿಸಿಕೊಳ್ಳಲು ಹೋರಾಡಿರುವ ಮೌಲ್ಯಗಳೇ ಅವು. ಹೌದು, ಸಮಾಜವಾದಿ ಜಗತ್ತಿನ ಕೆಲವು ಹಂತಗಳಲ್ಲಿ ಏಕರಾಷ್ಟ್ರ ಸಿದ್ಧಾಂತ (One-nation Theory) ಪ್ರಬಲವಾಗಿದ್ದ ಸಂದರ್ಭಗಳೂ ಇದ್ದವು; ಆದರೂ ಅಂತರರಾಷ್ಟ್ರೀಯತೆಯ ಮೂಲ ಆದರ್ಶವು ಮಾನವ ಸಮಾಜದ ಪರಸ್ಪರ ಸಹಕಾರ, ಸಮಾನತೆ ಮತ್ತು ಸಹಬಾಳ್ವೆಯನ್ನೇ ಪ್ರತಿಪಾದಿಸುತ್ತ ಬಂದಿದೆ. ಆದರೆ ಇಂದು ನಾವು ಕಾಣುತ್ತಿರುವ ಜಾಗತೀಕರಣ ಆ ಆದರ್ಶದ ಸಹಜ ಮುಂದುವರಿಕೆಯಲ್ಲ. ಅದು ಇತ್ತೀಚಿನ ಐತಿಹಾಸಿಕ ಬೆಳವಣಿಗೆಯ ಫಲ. ಸೋವಿಯತ್ ಒಕ್ಕೂಟದ ಪತನ, ಪೂರ್ವ ಯುರೋಪಿನ ರಾಜಕೀಯ ಪರಿವರ್ತನೆಗಳು ಮತ್ತು ಅದರ ನಂತರ ಜಗತ್ತು ಏಕಧ್ರುವೀಯ (Unipolar) ವ್ಯವಸ್ಥೆಯಾಗಿ ರೂಪುಗೊಂಡ ಪರಿಣಾಮವಾಗಿ ಅದು ಹೊಸ ರೂಪದಲ್ಲಿ ಉದಯಿಸಿತು. ಈ ಹೊಸ ಜಾಗತೀಕರಣವು ಜಾಗತಿಕ ಸಾಮ್ರಾಜ್ಯಶಾಹಿಯ ವಿಸ್ತರಣಾ ಮಹತ್ವಾಕಾಂಕ್ಷೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಆದ್ದರಿಂದ ಅದನ್ನು ಅಂತರರಾಷ್ಟ್ರೀಯತೆಯ ಮಾನವೀಯ ಆದರ್ಶದೊಂದಿಗೆ ಸಮೀಕರಿಸುವುದು ಇತಿಹಾಸದ ವಾಸ್ತವವನ್ನೂ ರಾಜಕೀಯದ ಸ್ವರೂಪವನ್ನೂ ಮರೆಮಾಚಿದಂತಾಗುತ್ತದೆ.
ಈ ಎರಡು ಪರಿಕಲ್ಪನೆಗಳ ನಡುವಿನ ವ್ಯತ್ಯಾಸವನ್ನು ಬಹುಶಃ ಹೀಗೆ ಸಂಕ್ಷಿಪ್ತವಾಗಿ ಹೇಳಬಹುದು: ಜಾಗತೀಕರಣದ ಪ್ರತಿಪಾದಕರು ಒಂದು ರಾಷ್ಟ್ರದ ಜಾಗತಿಕ ಪ್ರಾಬಲ್ಯವನ್ನು ನಂಬಿದರೆ, ಅಂತರರಾಷ್ಟ್ರೀಯತೆ ಎಲ್ಲ ರಾಷ್ಟ್ರಗಳ ಸಹಅಸ್ತಿತ್ವವನ್ನು ನಂಬುತ್ತದೆ. ಜಾಗತೀಕರಣವು ಮೇಲಿನಿಂದ ಹೇರಲ್ಪಡುವ ಅಧಿಕಾರದ ಏಕಮುಖ ಮಾತು. ಅದು ಹೆಚ್ಚಾಗಿ ಆದೇಶಗಳು ಮತ್ತು ಬೆದರಿಕೆಗಳ ರೂಪದಲ್ಲಿ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಅಧೀನ ರಾಷ್ಟ್ರಗಳೊಳಗೆ ಕೃತಕವಾಗಿ ‘ಸಮ್ಮತಿ’ (consent) ಯನ್ನು ನಿರ್ಮಿಸುವ ಪ್ರಯತ್ನವಾಗಿಯೂ ಅದು ಕಾಣಿಸಿಕೊಳ್ಳುತ್ತದೆ. ಇಲ್ಲಿ ಆಂಟೋನಿಯೊ ಗ್ರಾಮ್ಸಿ ಅವರು ಈ ಪದಕ್ಕೆ ನೀಡಿರುವ ಅರ್ಥವೇ ಉದ್ದೇಶಿತವಾಗಿದೆ. ಪ್ರಾಬಲ್ಯದ ವ್ಯವಸ್ಥೆಯು ತನ್ನ ಹಿತಾಸಕ್ತಿಗಳಿಗೆ ಅನುಕೂಲವಾಗುವ ‘ಸತ್ಯ’ ಗಳನ್ನು ನಿರ್ಮಿಸಬಲ್ಲ ಯಂತ್ರಾಂಗದ ಮೂಲಕ ಅಧೀನ ರಾಷ್ಟ್ರಗಳೊಳಗೆ ಅಂತಹ ಸಮ್ಮತಿಯನ್ನು ಸೃಷ್ಟಿಸುತ್ತದೆ. ಹಾಗೆಯೇ, ಎಲ್ಲ ಬಗೆಯ ಸಂವಾದಗಳನ್ನೂ ಕೊನೆಗೆ ಅಧಿಕಾರದ ಅಂತಿಮ ಭಾಷಣಕ್ಕೆ ಅಧೀನಗೊಳಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಅಂತರರಾಷ್ಟ್ರೀಯತೆ ರಾಷ್ಟ್ರಗಳು ಮತ್ತು ಪ್ರದೇಶಗಳ ನಡುವೆ ಸಮಾನತೆಯ ಆಧಾರದ ಮೇಲೆ ನಡೆಯುವ ಸಂವಾದ ಮತ್ತು ಪರಸ್ಪರ ವಿನಿಮಯವನ್ನು ನಂಬುತ್ತದೆ.
ಜಾಗತೀಕರಣದ ಪ್ರತಿಪಾದಕರಿಗೆ ಜಗತ್ತು ಒಂದು ಬಳಕೆದಾರರ ಸರಪಳಿ (consumer chain); ಅವರ ಗಮನ ಯಾವಾಗಲೂ ಮಾರುಕಟ್ಟೆಯ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಆದರೆ ನಿಜವಾದ ಅಂತರರಾಷ್ಟ್ರೀಯತಾವಾದಿಗೆ, ಜಗತ್ತು ಒಂದು ಸೃಜನಶೀಲ ಸಾಂಸ್ಕೃತಿಕ ವಲಯ; ಅವನ ಆದ್ಯತೆ ಸಂಸ್ಕೃತಿಗೆ ಇರುತ್ತದೆ. ಜಾಗತೀಕರಣವನ್ನು ಬೆಂಬಲಿಸುವವರು ಒಂದು ನಿರ್ದಿಷ್ಟ ಜೀವನಶೈಲಿಯ ರಫ್ತು, ಏಕರೂಪದ ಸಂಸ್ಕೃತೀಕರಣ (mono-acculturation), ಪ್ರಮಾಣೀಕರಣ (standardization) ಮತ್ತು ಏಕರೂಪತೆ (homogeneity) ಯನ್ನು ಪ್ರತಿಪಾದಿಸುತ್ತಾರೆ. ಇವುಗಳ ಮೂಲಕ ಜಗತ್ತನ್ನು ಹೆಚ್ಚು ನಿಯಂತ್ರಿಸಬಹುದಾದ ರೂಪಕ್ಕೆ ತರಲು ಅವರು ಪ್ರಯತ್ನಿಸುತ್ತಾರೆ. ಈ ವಿದ್ಯಮಾನವನ್ನು ಅನೇಕ ಬಾರಿ ‘ಕೋಕಾ-ವಸಾಹತುಶಾಹಿ’ (Coca-colonization) ಅಥವಾ ‘ಮ್ಯಾಕ್-ಡೊನಾಲ್ಡೀಕರಣ’ (McDonaldisation) ಎಂದು ಕರೆಯಲಾಗಿದೆ. ಈ ಪದಗಳು ಮೂಲತಃ ಆಹಾರ ಸಂಸ್ಕೃತಿಯ ಏಕರೂಪೀಕರಣವನ್ನು ಸೂಚಿಸಿದರೂ, ಈ ಏಕರೂಪತೆ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಉಡುಗೆ, ಭಾಷೆ, ಕಾಗುಣಿತ, ಭಾಷಾ ಬಳಕೆ, ನಡವಳಿಕೆಯ ಮಾದರಿಗಳು, ಕಲೆ, ಮಾಹಿತಿ ವ್ಯವಸ್ಥೆಗಳು ಹಾಗೂ ಚಿಂತನಾ ದೃಷ್ಟಿಕೋನಗಳಲ್ಲಿಯೂ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ವೈವಿಧ್ಯತೆಯ ಬಗ್ಗೆ ಇರುವ ಭಯ ವಸಾಹತುಶಾಹಿಯ ಮೂಲ ಲಕ್ಷಣಗಳಲ್ಲಿ ಒಂದಾಗಿದೆ. ಭಾರತದ ಭಾಷಾ ವೈವಿಧ್ಯದ ಕುರಿತು ಮೆಕಾಲೆ ಹೊಂದಿದ್ದ ಆತಂಕವೇ ಇದಕ್ಕೆ ಒಂದು ಉದಾಹರಣೆ. ಆ ವೈವಿಧ್ಯವನ್ನು ನಿವಾರಿಸುವ ಉದ್ದೇಶದಿಂದಲೇ ಅವರು ಇಂಗ್ಲಿಷ್ ಶಿಕ್ಷಣವನ್ನು ವ್ಯಾಪಕವಾಗಿ ಹರಡಲು ಪ್ರಯತ್ನಿಸಿದರು. ಅದರ ಮೂಲಕ ಭಾರತೀಯರನ್ನು ಬ್ರಿಟಿಷರ ಅನುಕರಣಕಾರರು ಮತ್ತು ಸೇವಕರನ್ನಾಗಿ ರೂಪಿಸಬಹುದೆಂದು ಅವರು ನಂಬಿದ್ದರು.
ಅಂತರರಾಷ್ಟ್ರೀಯತೆ ವಿಭಿನ್ನ ಜೀವನಶೈಲಿಗಳ ಪರಸ್ಪರ ಮಾನ್ಯತೆಯನ್ನು, ಸಾಂಸ್ಕೃತಿಕ ಬಹುತ್ವವನ್ನು, ಭಿನ್ನತೆಗಳ ಬಗೆಗಿನ ಗೌರವವನ್ನು ಹಾಗೂ ಪ್ರತಿಯೊಂದು ಸಮುದಾಯದ ಅಸ್ಮಿತೆಯ ಬಗ್ಗೆ ಕಾಳಜಿಯನ್ನು ಪ್ರತಿಪಾದಿಸುತ್ತದೆ. ಜಾಗತೀಕರಣ, ಮತ್ತೊಂದೆಡೆ, ಕೇಂದ್ರೀಕೃತ ನಿಯಂತ್ರಣ ಮತ್ತು ಜನರಿಗೆ ಅಲ್ಪ ಅವಕಾಶವಿರುವ ಆದೇಶಾಧಾರಿತ ಆರ್ಥಿಕ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಆದರೆ ಅಂತರರಾಷ್ಟ್ರೀಯತೆ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವನ್ನು ಮತ್ತು ಜನರ ನೈಜ ಅಗತ್ಯಗಳಿಗೆ ಗೌರವವನ್ನು ಪ್ರತಿಪಾದಿಸುತ್ತದೆ. ಈ ನೈಜ ಅಗತ್ಯಗಳು, ನಿರ್ದಿಷ್ಟ ವರ್ಗಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ಸರ್ಕಾರಗಳು ಮುಂದಿಡುವ ‘ರಾಷ್ಟ್ರೀಯ ಅಗತ್ಯಗಳು’ ಎಂಬ ಹೆಸರಿನ ಬೇಡಿಕೆಗಳಿಗೆ ವಿರುದ್ಧವಾಗಿರಬಹುದೆಂಬುದನ್ನೂ ಅದು ಒಪ್ಪಿಕೊಳ್ಳುತ್ತದೆ. ಇತರೆ ದೇಶಗಳಲ್ಲಿ ಯುದ್ಧಗಳನ್ನು ಹುಟ್ಟುಹಾಕುವುದು, ಯುದ್ಧದ ಪರಿಸ್ಥಿತಿಗಳನ್ನು ಸೃಷ್ಟಿಸಿ ಅವುಗಳನ್ನು ಮತ್ತಷ್ಟು ಉಲ್ಬಣಗೊಳಿಸುವುದು, ಜನರಲ್ಲಿ ಭಯದ ಮನೋಭಾವವನ್ನು ಬೆಳೆಸುವುದು ಮತ್ತು ಅದರ ಪರಿಣಾಮವಾಗಿ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೆಚ್ಚಿಸುವುದು ಇವೆಲ್ಲವೂ ಜಾಗತೀಕರಣದ ವಿಶಿಷ್ಟ ಲಕ್ಷಣಗಳಾಗಿವೆ. ಇದರಿಂದ ಅಮೆರಿಕದ ಆರ್ಥಿಕತೆಯ ಪ್ರಮುಖ ಆಧಾರವಾಗಿರುವ ಯುದ್ಧೋದ್ಯಮ ಬೆಳೆಯಲು ಮತ್ತು ಲಾಭ ಗಳಿಸಲು ಅವಕಾಶ ದೊರೆಯುತ್ತದೆ; ಆದರೆ ಅದರ ಬೆಲೆಯನ್ನು ಜಗತ್ತಿನ ಇತರ ದೇಶಗಳ ಜನರು ತೆರಬೇಕಾಗುತ್ತದೆ. ವಿಯೆಟ್ನಾಂನಿಂದ ಇರಾಕ್ವರೆಗೆ, ಪಾಕಿಸ್ತಾನದವರೆಗೆ ಏಷ್ಯಾದ ಅನೇಕ ರಾಷ್ಟ್ರಗಳು ಈ ಕರಾಳ ತಂತ್ರಕ್ಕೆ ಬಲಿಯಾಗಿರುವುದನ್ನು ನಾವು ನೋಡಿದ್ದೇವೆ. ಈ ತಂತ್ರದ ಉದ್ದೇಶವೇ ಆ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸಿ, ಅವುಗಳನ್ನು ನಾಶದ ಅಂಚಿಗೆ ತಳ್ಳುವುದು. ಸಾಮ್ರಾಜ್ಯಶಾಹಿ ಶಕ್ತಿಗಳು ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕವೂ ಲಾಭ ಪಡೆಯುತ್ತವೆ; ಯುದ್ಧ ಅಥವಾ ಅಂತರ್ಯುದ್ಧದ ನಂತರ ನಡೆಯುವ ಪುನರ್ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕವೂ ಮತ್ತಷ್ಟು ಲಾಭ ಗಳಿಸುತ್ತವೆ.

ಇದಕ್ಕೆ ಪರ್ಯಾಯವಾಗಿ, ಅಂತರರಾಷ್ಟ್ರೀಯತೆಯ ಧ್ಯೇಯವಾಕ್ಯ ಶಾಂತಿ. ರಾಷ್ಟ್ರಗಳ ನಡುವೆ ಶಾಂತಿ, ಸೌಹಾರ್ದ ಮತ್ತು ಪರಸ್ಪರ ವಿಶ್ವಾಸದ ವಾತಾವರಣವನ್ನು ನಿರ್ಮಿಸುವುದರ ಮೂಲಕವೇ ನಿಜವಾದ ಸಮೃದ್ಧಿ ಸಾಧ್ಯವೆಂದು ಅದು ನಂಬುತ್ತದೆ. ಜಾಗತೀಕರಣ ಪರಿಸರದ ಬಗೆಗಿನ ನಿರ್ಲಕ್ಷ್ಯದಿಂದಲೂ ಗುರುತಿಸಲ್ಪಡುತ್ತದೆ. ಲಾಭವನ್ನೇ ಏಕೈಕ ಗುರಿಯಾಗಿಸಿಕೊಂಡಿರುವ ಅದು, ಮುಂದಿನ ಪೀಳಿಗೆಗಳ ಹಿತದ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ. ಕ್ಷಣಿಕ ಲಾಭದ ಬೆನ್ನತ್ತುವ ಅದರ ಸ್ವಭಾವದಿಂದಾಗಿ, ಪರಿಸರವನ್ನು ಕಲುಷಿತಗೊಳಿಸುವ ಕೈಗಾರಿಕೆಗಳನ್ನೂ ಅಪಾಯಕಾರಿ ಔಷಧಿಗಳನ್ನೂ ಯಾವುದೇ ನೈತಿಕ ಹಿಂಜರಿಕೆಯಿಲ್ಲದೆ ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳಿಗೆ ವರ್ಗಾಯಿಸುತ್ತದೆ. ಆದರೆ ಅಂತರರಾಷ್ಟ್ರೀಯತೆ ಭೌತಿಕ ಹಾಗೂ ಆಧ್ಯಾತ್ಮಿಕ ಪರಿಸರ ಎರಡರ ಸಂರಕ್ಷಣೆಯ ಬಗ್ಗೆಯೂ ಆಳವಾದ ಬದ್ಧತೆಯನ್ನು ಹೊಂದಿದೆ. ಅದು ಪರಿಸರಾತ್ಮಕ ದಬ್ಬಾಳಿಕೆ (Eco-fascism) ಮತ್ತು ತಂತ್ರಜ್ಞಾನದ ಮೂಲಕ ಮಾಡುವ ದಬ್ಬಾಳಿಕೆ (Techno-fascism) ಎರಡನ್ನೂ ವಿರೋಧಿಸುತ್ತದೆ. ಭೂಮಿಯನ್ನು ಹಸಿರಾಗಿಸುವ ಪ್ರಯತ್ನಗಳಿಗೆ ಆದ್ಯತೆ ನೀಡುವುದರ ಜೊತೆಗೆ, ಪ್ರತಿಯೊಂದು ಅಭಿವೃದ್ಧಿ ಯೋಜನೆಯ ಅವಿಭಾಜ್ಯ ಅಂಗವಾಗಿಯೇ ಮಾಲಿನ್ಯ ನಿಯಂತ್ರಣವನ್ನು ಪರಿಗಣಿಸುತ್ತದೆ. ಜಾಗತೀಕರಣದ ಪ್ರತಿಪಾದಕರು ಎಲ್ಲ ದೇಶಗಳಿಗೂ ಒಂದೇ ಮಾದರಿಯ ಬೃಹತ್ ಅಭಿವೃದ್ಧಿಯ ವಿನ್ಯಾಸವನ್ನು ಹೇರಲು ಪ್ರಯತ್ನಿಸುತ್ತಾರೆ. ಆದರೆ ಅಂತರರಾಷ್ಟ್ರೀಯತೆ, ಪ್ರತಿಯೊಂದು ರಾಷ್ಟ್ರವೂ ತನ್ನ ಇತಿಹಾಸ, ಸಂಸ್ಕೃತಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತನ್ನದೇ ಆದ ಅಭಿವೃದ್ಧಿಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಪ್ರತಿಪಾದಿಸುತ್ತದೆ. ಜಾಗತೀಕರಣವು ಅನಿವಾರ್ಯವಾಗಿ ‘ಜ್ಞಾನದ ಮೂಲಕ ಮಾಡುವ ಹಿಂಸೆ’ಯನ್ನು (epistemic violence) ಸಹ ತನ್ನೊಂದಿಗೆ ಹೊತ್ತು ತರುತ್ತದೆ. ಅದು ವಸಾಹತುಶಾಹಿಗೆ ಒಳಗಾದ ಸಮಾಜಗಳ ಸಾಮಾಜಿಕ ಮತ್ತು ಐತಿಹಾಸಿಕ ಸ್ಮೃತಿಯನ್ನು ವಿರೂಪಗೊಳಿಸುತ್ತದೆ; ಅವರನ್ನು ತಮ್ಮದೇ ಇತಿಹಾಸದಿಂದ ದೂರ ಮಾಡುತ್ತದೆ. ಪಾಶ್ಚಾತ್ಯವೇ ಸಮಸ್ತ ವಿವೇಕ ಮತ್ತು ಜ್ಞಾನದ ಏಕೈಕ ಮೂಲ ಎಂಬ ನಿಲುವನ್ನು ಅದು ಪ್ರತಿಪಾದಿಸುತ್ತದೆ. ಪರಿಣಾಮವಾಗಿ, ಸಾಂಪ್ರದಾಯಿಕ ಜ್ಞಾನ, ಸ್ಥಳೀಯ ಜ್ಞಾನಪರಂಪರೆಗಳು, ಸ್ವದೇಶಿ ವಿಶ್ವದೃಷ್ಟಿಗಳು ಹಾಗೂ ಜೀವನ ಮತ್ತು ಜಗತ್ತನ್ನು ಅರ್ಥೈಸುವ ಸ್ಥಳೀಯ ವಿಧಾನಗಳಿಗೆ ಅದು ಮಾನ್ಯತೆ ನೀಡುವುದಿಲ್ಲ. ತನ್ನ ಅಧೀನದಲ್ಲಿರುವ ಸಮಾಜಗಳ ಮೇಲೆ ಅದು ‘ಸಾಂಸ್ಕೃತಿಕ ಸ್ಮೃತಿಲೋಪ’ವನ್ನು (cultural amnesia) ಹೇರಲು ಪ್ರಯತ್ನಿಸುತ್ತದೆ. ಇದರಿಂದ ಅವರು ತಮ್ಮ ಸೃಜನಶೀಲ ಭೂತಕಾಲವನ್ನು ಮರೆತು, ಐತಿಹಾಸಿಕ ಪರಂಪರೆ ಅಷ್ಟಾಗಿ ಇಲ್ಲದಿದ್ದರೂ ಇದ್ದದ್ದೇ ರಕ್ತಸಿಕ್ತ ಇತಿಹಾಸವಾಗಿರುವ ಒಂದು ಪ್ರಬಲ ರಾಷ್ಟ್ರದ ಸಾಂಸ್ಕೃತಿಕ ಪ್ರಾಬಲ್ಯವನ್ನು ಒಪ್ಪಿಕೊಳ್ಳುವಂತಾಗುತ್ತಾರೆ.
ಜ್ಞಾನದ ಪರಸ್ಪರ ವಿನಿಮಯ, ಜಗತ್ತನ್ನು ಅರ್ಥೈಸುವ ತನ್ನದೇ ಆದ ದೃಷ್ಟಿಕೋನವನ್ನು ರೂಪಿಸಿಕೊಳ್ಳುವ ಪ್ರತಿಯೊಂದು ಸಂಸ್ಕೃತಿಯ ಸ್ವಾತಂತ್ರ್ಯ, ವಿಭಿನ್ನ ಜ್ಞಾನಪರಂಪರೆಗಳು ಮತ್ತು ವಿಶ್ವದೃಷ್ಟಿಗಳ (cosmologies) ಬಗೆಗಿನ ಗೌರವ, ಜ್ಞಾನ ಮತ್ತು ಸಂಸ್ಕೃತಿಗೆ ಜಗತ್ತಿನಲ್ಲಿ ಯಾವುದೇ ಒಂದೇ ಕೇಂದ್ರವಿಲ್ಲ ಎಂಬ ಅರಿವು, ಬಹುಭಾಷಿಕತೆಗೆ ನೀಡುವ ಮನ್ನಣೆ ಹಾಗೂ ಜನಪದ ಮತ್ತು ಅಧೀನ/ಅಂಚಿನ (Subaltern) ಪರಂಪರೆಗಳ ಬಗೆಗಿನ ಗೌರವ ಇವೆಲ್ಲವೂ ಅಂತರರಾಷ್ಟ್ರೀಯತೆಯ ಸಾಂಸ್ಕೃತಿಕ ಮತ್ತು ಜ್ಞಾನಪರ ದೃಷ್ಟಿಕೋನದ ಮೂಲ ಸಾರವನ್ನು ರೂಪಿಸುತ್ತವೆ. ಜಾಗತೀಕರಣದ ಅಂತರಂಗದ ಉದ್ದೇಶ ‘ಮರು ವಸಾಹತುಶಾಹಿ’ (Recolonization) ಯಾಗಿದ್ದರೆ, ಅಂತರರಾಷ್ಟ್ರೀಯತೆಯ ಕೇಂದ್ರ ಆಶಯ ‘ವಸಾಹತುಶಾಹಿ ಮುಕ್ತಗೊಳಿಸುವಿಕೆ/ನಿರ್ವಸಹಾತೀಕರಣ’ (Decolonization) ಆಗಿದೆ.
ನಮ್ಮ ಭೂತಕಾಲದ ಭವಿಷ್ಯವೇನು? ಎಂಬ ಪ್ರಶ್ನೆ, ಪ್ರಭುತ್ವದ ಭಾಷ್ಯಗಳ ಮೂಲಕ ವಸಾಹತುಶಾಹಿ ಕಲ್ಪನೆಗಳನ್ನು ಪುನಃ ಜೀವಂತಗೊಳಿಸಲು ಪ್ರಯತ್ನಿಸುತ್ತಿರುವ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತದೆ. ಜಾಗತೀಕರಣವು ಸಂಸ್ಕೃತಿಯ ವಿಶಾಲ ಕ್ಷೇತ್ರವನ್ನು ಕೇವಲ ಮಾನವಶಾಸ್ತ್ರೀಯ ಅಧ್ಯಯನದ ವಸ್ತುವಾಗಿ ಕುಗ್ಗಿಸುತ್ತದೆ. ಪರಿಣಾಮವಾಗಿ, ಜನಾಂಗೀಯ ಅಸ್ಮಿತೆಯನ್ನು ಕೇವಲ ಒಂದು ವಾಣಿಜ್ಯ ಬ್ರಾಂಡ್ ಆಗಿ ಪರಿವರ್ತಿಸುತ್ತದೆ; ಸ್ಥಳೀಯ ಸಂಸ್ಕೃತಿ ಮತ್ತು ಸ್ವದೇಶಿ ಜ್ಞಾನಪರಂಪರೆಗಳನ್ನು ಅವುಗಳ ಜೀವಂತ ಸಾಮಾಜಿಕ ನೆಲೆಯಿಂದ ದೂರಗೊಳಿಸುತ್ತದೆ. ವಸಾಹತೋತ್ತರ (Postcolonial) ಚರ್ಚೆಗಳೂ ಸಹ ಅನೇಕ ಬಾರಿ ವಸಾಹತು ಪೂರ್ವ ಇತಿಹಾಸಗಳನ್ನು ಕಡೆಗಣಿಸುತ್ತವೆ. ಹೀಗೆ ಮಾಡುವ ಮೂಲಕ, ಪೂರ್ವದ ಇತಿಹಾಸವು ವಸಾಹತುಶಾಹಿಯ ಆಗಮನದಿಂದಲೇ ಆರಂಭವಾಗುತ್ತದೆ ಎಂಬ ಸಾಮ್ರಾಜ್ಯಶಾಹಿಗಳ ಪ್ರತಿಪಾದನೆಗೆ ಪರೋಕ್ಷವಾಗಿ ಬಲ ತುಂಬುತ್ತವೆ.
ಇಂತಹ ದೃಷ್ಟಿಕೋನವು ಗಣಿತ, ಭೌತಶಾಸ್ತ್ರ, ಖಗೋಳಶಾಸ್ತ್ರ, ಸಸ್ಯಶಾಸ್ತ್ರ, ವೈದ್ಯಶಾಸ್ತ್ರ, ನಗರ ಯೋಜನೆ, ವಾಸ್ತುಶಿಲ್ಪ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಕರಕುಶಲ, ತತ್ತ್ವಶಾಸ್ತ್ರ, ನಾಟಕಶಾಸ್ತ್ರ, ಸಾಹಿತ್ಯ ಮತ್ತು ಕಾವ್ಯಮೀಮಾಂಸೆ ಮೊದಲಾದ ಕ್ಷೇತ್ರಗಳಲ್ಲಿ ಪೂರ್ವದ ನಾಗರಿಕತೆಗಳು ಸಾಧಿಸಿದ್ದ ಮಹತ್ತರ ಪ್ರಗತಿಯನ್ನು ಮರೆವಿನ ಕತ್ತಲೆಗೆ ತಳ್ಳುತ್ತದೆ.
ಭಾಷೆಗಳು ಜಾಗತೀಕರಣದ ಮತ್ತೊಂದು ದೊಡ್ಡ ಬಲಿಪಶುಗಳು. ಹೊಸ ಮಾಹಿತಿ ವ್ಯವಸ್ಥೆ (New Information Order) ತನ್ನ ದೃಷ್ಟಿಕೋನವನ್ನು ಜಗತ್ತಿನ ಮೇಲೆ ಹೇರಲು ಅನುಕೂಲವಾಗುವ ಕೆಲವು ಭಾಷೆಗಳಿಗೆ ಮಾತ್ರ ಆದ್ಯತೆ ನೀಡುತ್ತದೆ. ಆದರೆ ಅಲ್ಪಸಂಖ್ಯಾತ ಸಮುದಾಯಗಳು ಮಾತನಾಡುವ ಭಾಷೆಗಳು ಸೇರಿದಂತೆ ಅನೇಕ ಮಾತೃಭಾಷೆಗಳನ್ನು ಅದು ಕಡೆಗಣಿಸುತ್ತದೆ. ಮೂಲ ಸಂಸ್ಕೃತಿಗಳು ಸಾವಿರಾರು ವರ್ಷಗಳ ಅನುಭವ, ಕಲಿಕೆ ಮತ್ತು ಬದುಕಿನ ಜ್ಞಾನವನ್ನು ತನ್ನೊಳಗೆ ಸಂಗ್ರಹಿಸಿಕೊಂಡಿರುವ ಜೀವಂತ ಭಂಡಾರಗಳಾಗಿವೆ. ಆದ್ದರಿಂದ ಅವುಗಳಿಗೆ ಎದುರಾಗಿರುವ ಅಪಾಯವು ತಳಿವೈವಿಧ್ಯಕ್ಕೆ (Genetic Diversity) ಎದುರಾಗುವ ಅಪಾಯಕ್ಕಿಂತ ಕಡಿಮೆ ವಿನಾಶಕಾರಿಯಲ್ಲ. ಪ್ರತಿಯೊಂದು ಭಾಷೆಯೂ ಅದನ್ನು ಮಾತನಾಡುತ್ತ ಬಂದಿರುವ ಜನರ ಸಾಂಸ್ಕೃತಿಕ ಸ್ಮೃತಿಯನ್ನು ತನ್ನೊಳಗೆ ಹೊತ್ತಿರುತ್ತದೆ. ಹೀಗಾಗಿ ಒಂದು ಭಾಷೆಯ ಮರಣವೆಂದರೆ ಕೇವಲ ಕೆಲವು ಪದಗಳ ನಾಶವಲ್ಲ; ಆ ಭಾಷೆಯೊಂದಿಗೆ ಬದುಕಿದ್ದ ಒಂದು ಸಂಪೂರ್ಣ ಲೋಕದ ಅಳಿವಾಗಿದೆ. ಅದು ಜಗತ್ತನ್ನು ನೋಡುವ ಒಂದು ದೃಷ್ಟಿಯ ಮರಣ; ಈ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವ ಒಂದು ವಿಧಾನದ ಮರಣ; ಇತರರೊಂದಿಗೆ, ಪ್ರಕೃತಿಯೊಂದಿಗೆ ಹಾಗೂ ವಿಶ್ವದ ನಿಗೂಢತೆಯೊಂದಿಗೆ ನಮ್ಮ ಸಂಬಂಧವನ್ನು ವ್ಯಕ್ತಪಡಿಸುವ ಒಂದು ಭಾಷೆಯ ಮರಣ. ಜೊತೆಗೆ, ಪುರಾಣ, ಕಾವ್ಯ ಮತ್ತು ಇತರ ವಾಗ್ವೈಭವಗಳ ಮೂಲಕ ಸಮಾನಾಂತರ ಲೋಕಗಳನ್ನು ಸೃಷ್ಟಿಸುವ ಮಾನವ ಸೃಜನಶೀಲತೆಯೊಂದು ರೂಪವೂ ಅದರೊಂದಿಗೆ ಕಣ್ಮರೆಯಾಗುತ್ತದೆ. ಸಮಕಾಲೀನ ಅಭಿವ್ಯಕ್ತಿ, ಸಂವಹನ, ಜ್ಞಾನಸೃಷ್ಟಿ ಮತ್ತು ಜ್ಞಾನ ವಿನಿಮಯದ ಕ್ಷೇತ್ರಗಳಲ್ಲಿ ಇಂಗ್ಲಿಷ್ ಭಾಷೆಯ ಮಹತ್ವವನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ಇತರ ಎಲ್ಲ ಭಾಷೆಗಳ ಮೇಲೆ ಅದರ ಏಕಸ್ವಾಮ್ಯದ ಪ್ರಾಬಲ್ಯ ಹಾಗೂ ಶಿಕ್ಷಣದ ಮಾಧ್ಯಮವಾಗಿ ಅದರ ನಿರಂತರ ವಿಸ್ತರಣೆಯು ಸ್ಥಳೀಯ ಭಾಷೆಗಳ ಮೇಲೆ ತೀವ್ರವಾದ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಹುದು; ವಾಸ್ತವವಾಗಿ ಈಗಾಗಲೇ ಉಂಟುಮಾಡಿದೆ. ಇಂಗ್ಲಿಷ್ ಅನ್ನು ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಗಿಯೂ, ವಿಮೋಚನೆಯ ಸಾಧನವಾಗಿಯೂ ನಾವು ಸ್ವಾಗತಿಸುತ್ತೇವೆ. ಆದರೆ ಅದೇ ಭಾಷೆ ಅಧಿಕಾರದ ಸಾಧನವಾಗಿ, ಹೊಸ ಮಾಹಿತಿ ವ್ಯವಸ್ಥೆಯ ಜಾಗತಿಕ ಮಾರುಕಟ್ಟೆಯ ಭಾಷೆಯಾಗಿ ಮತ್ತು ಆಕ್ರಮಣಕಾರಿ ಸಾಮ್ರಾಜ್ಯಶಾಹಿಯ ಮಾಧ್ಯಮವಾಗಿ ಸಂಪೂರ್ಣ ಪ್ರಾಬಲ್ಯ ಸಾಧಿಸುವ ಪ್ರವೃತ್ತಿಯನ್ನು ವಿಮರ್ಶಾತ್ಮಕವಾಗಿ ಪ್ರಶ್ನಿಸುವುದು ಕೂಡ ಅಷ್ಟೇ ಅಗತ್ಯ.
ಸಂಸ್ಕೃತಿಯನ್ನು ಒಂದು ಕೈಗಾರಿಕೆಯನ್ನಾಗಿ ನೋಡುವ ಪ್ರವೃತ್ತಿಯು, ಜಾಗತೀಕರಣವು ಒಪ್ಪಿಕೊಂಡು ಉದ್ದೇಶಪೂರ್ವಕವಾಗಿ ಉತ್ತೇಜಿಸುವ ಮಾರುಕಟ್ಟೆ-ಕೇಂದ್ರಿತ ದೃಷ್ಟಿಕೋನದ ಒಂದು ಉಪಫಲವಾಗಿದೆ. ಫ್ರಾನ್ಸ್ನಲ್ಲಿ ಅರವತ್ತರ ದಶಕದಲ್ಲಿ ರೂಪುಗೊಂಡ ‘ಸಿಚ್ಯುವೇಷನಿಸ್ಟ್’ (Situationist) ಚಳವಳಿಯ ಚಿಂತಕರು, ಸಮಕಾಲೀನ ಸಮಾಜವನ್ನು ಮೊದಲ ಬಾರಿಗೆ ‘ದೃಶ್ಯ ವೈಭವದ ಸಮಾಜ’ (Society of the Spectacle) ಎಂದು ವಿಶ್ಲೇಷಿಸಿದರು. ಅವರ ಅಭಿಪ್ರಾಯದಲ್ಲಿ, ಆಧುನಿಕ ಸಮಾಜದಲ್ಲಿ ಸರಕಿನ ಮೌಲ್ಯವನ್ನು ಅದರ ನೈಜ ವಸ್ತುವಿಗಿಂತಲೂ ಅದರ ಚಿತ್ರಣ (Image) ಮತ್ತು ಅದು ಸೃಷ್ಟಿಸುವ ಆಕರ್ಷಣೆಯೇ ಹೆಚ್ಚಾಗಿ ನಿರ್ಧರಿಸುತ್ತದೆ. ಈ ಚಳವಳಿಯ ಪ್ರಮುಖ ವಕ್ತಾರರಾದ ಗೀ ಡಿಬೋರ್ (Guy Debord) ಅವರು, ಇಪ್ಪತ್ತನೇ ಶತಮಾನದ ಅಂತ್ಯದ ವೇಳೆಗೆ ರೈಲು ಮತ್ತು ಮೋಟಾರು ವಾಹನಗಳ ಸ್ಥಾನವನ್ನು, ಚಿತ್ರ (Image) ಆರ್ಥಿಕತೆಯ ಚಾಲಕಶಕ್ತಿಯಾಗಿ ಆಕ್ರಮಿಸಲಿದೆ ಎಂದು ಮುಂಚಿತವಾಗಿಯೇ ಊಹಿಸಿದ್ದರು. ಅವರ ಈ ಊಹೆ ತಪ್ಪಾಗಿರಲಿಲ್ಲ ಎಂಬುದನ್ನು ಇತ್ತೀಚಿನ ದಶಕಗಳಲ್ಲಿ ಸಾಂಸ್ಕೃತಿಕ ಸರಕುಗಳ (Cultural Commodities) ಅಭೂತಪೂರ್ವ ವಿಸ್ತರಣೆ ಮತ್ತು ವೇಗವಾದ ಬೆಳವಣಿಗೆ ಸ್ಪಷ್ಟಪಡಿಸಿದೆ.
‘ಸಂಸ್ಕೃತಿಯ ಉದ್ಯಮೀಕರಣ’ (Culture Industry) ಎಂಬ ಪರಿಕಲ್ಪನೆಯ ಮೂಲ ಇನ್ನೂ ಹಿಂದಕ್ಕೆ ಹೋಗುತ್ತದೆ. ಅದರ ಉಗಮವನ್ನು ಫ್ರಾಂಕ್ಫರ್ಟ್ ಚಿಂತಕರ ಪಂಥದ (Frankfurt School) ಪ್ರಮುಖ ಚಿಂತಕರಾದ ಥಿಯೊಡರ್ ಅಡೋರ್ನೊ (Theodor Adorno) ಅವರ ಚಿಂತನೆಗಳಲ್ಲಿ ಕಾಣಬಹುದು. ವಾಲ್ಟರ್ ಬೆಂಜಮಿನ್ (Walter Benjamin) ಅವರು ಕಲಾಕೃತಿಗಳ ಯಾಂತ್ರಿಕ ಪುನರುತ್ಪಾದನೆಯನ್ನು (Mechanical Reproduction) ಒಂದು ವಿಮೋಚನಾತ್ಮಕ ಪ್ರಕ್ರಿಯೆಯೆಂದು ಕಂಡಿದ್ದರು. ಏಕೆಂದರೆ, ಅದರಿಂದ ಕಲೆ ಪ್ರಜಾತಂತ್ರೀಕರಣಗೊಳ್ಳುತ್ತದೆ ಮತ್ತು ಮೂಲ ಕಲಾಕೃತಿಯನ್ನು ಖರೀದಿಸಲು ಸಾಧ್ಯವಾಗದ ಅಥವಾ ಪ್ರವೇಶ ಶುಲ್ಕವಿರುವ ಸಂಗೀತ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗದ ಸಾಮಾನ್ಯ ಜನರಿಗೂ ಅದರ ಸವಿಯನ್ನು ತಲುಪಿಸಬಹುದು ಎಂದು ಅವರು ನಂಬಿದ್ದರು. ಉದಾಹರಣೆಗೆ, ಚಿತ್ರಕಲೆಯ ಮುದ್ರಿತ ಪ್ರತಿಗಳು, ಸಂಗೀತದ ಕ್ಯಾಸೆಟ್ಗಳು ಮತ್ತು ಸಾಹಿತ್ಯದ ಪುಸ್ತಕಗಳು ಕಲೆಯನ್ನು ಸಾಮಾನ್ಯ ಜನರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ. ಅವರು ಈ ಮಾತನ್ನು ಹೇಳಿದ ಸಂದರ್ಭದಲ್ಲಿ ಅದು ನಿಸ್ಸಂದೇಹವಾಗಿ ಸತ್ಯವಾಗಿತ್ತು. ಆದರೆ, ಇದೇ ಪ್ರಕ್ರಿಯೆ ಕಾಲಕ್ರಮೇಣ ತನ್ನದೇ ಆದ ಮನರಂಜನೆಯ ಹೊಸ ರೂಪಗಳನ್ನೂ ಸೃಷ್ಟಿಸಿತು. ಅದರ ಪರಿಣಾಮವಾಗಿ ಜನರು ನಿಜವಾದ ಕಲೆಯಿಂದ ಮತ್ತು ಬೌದ್ಧಿಕ ಚಿಂತನೆಗೆ ಪ್ರೇರೇಪಿಸುವ ಸಾಹಿತ್ಯದಿಂದ ಕ್ರಮೇಣ ದೂರವಾಗತೊಡಗಿದರು. ಇಂದಿನ ಸಂಸ್ಕೃತಿಯ ಉದ್ಯಮೀಕರಣ ಸಾಹಿತ್ಯ, ಸಂಗೀತ, ನೃತ್ಯ ಮತ್ತು ಲಲಿತಕಲೆಗಳಷ್ಟೇ ಅಲ್ಲ, ಪ್ರಕಾಶನ ಸಂಸ್ಥೆಗಳು, ನಿಯತಕಾಲಿಕೆಗಳು, ರೇಡಿಯೊ ಮತ್ತು ದೂರದರ್ಶನ ವಾಹಿನಿಗಳು ಹಾಗೂ ಧ್ವನಿಮುದ್ರಣ ಉದ್ಯಮವನ್ನು ಒಳಗೊಂಡ ವಿಶಾಲವಾದ ಸಮೂಹ ಮಾಧ್ಯಮ ಜಾಲದ ಮೂಲಕವೂ ತನ್ನ ಪ್ರಭಾವವನ್ನು ವಿಸ್ತರಿಸಿದೆ. ಈ ಕೈಗಾರಿಕೆಯ ಅಂತಿಮ ಉತ್ಪನ್ನಗಳು ಕಲೆ ಮತ್ತು ಸಾಹಿತ್ಯವನ್ನು ಪುನರುತ್ಪಾದಿಸುವುದಕ್ಕಾಗಲಿ, ಮಾಹಿತಿಯನ್ನು ನಿಯಂತ್ರಿಸಿ ರೂಪಾಂತರಿಸುವುದಕ್ಕಾಗಲಿ ಮಾತ್ರ ಸೀಮಿತವಾಗಿರುವುದಿಲ್ಲ. ಅವು ಸಂಸ್ಕೃತಿಯ ವ್ಯಾಖ್ಯಾನ, ಅದರ ರಚನೆ ಮತ್ತು ಅದರ ಅಂತರಾಳವನ್ನೇ ರೂಪಾಂತರಿಸುತ್ತವೆ. ಜೊತೆಗೆ, ಜನರ ಅಭಿರುಚಿ, ಮನೋಭಾವ ಮತ್ತು ಜಗತ್ತನ್ನು ನೋಡುವ ದೃಷ್ಟಿಕೋನವನ್ನೂ ನಿಯಂತ್ರಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಹಗುರ/ಜನಪ್ರಿಯ ವಾಣಿಜ್ಯ ಸಾಹಿತ್ಯ (Pulp Fiction), ಅಪರಾಧ ಮತ್ತು ರೋಚಕ ಕಾದಂಬರಿಗಳು, ದೂರದರ್ಶನದ ಧಾರಾವಾಹಿಗಳು, ಪ್ರೇಕ್ಷಕರನ್ನು ಕೇಂದ್ರವಾಗಿಟ್ಟುಕೊಂಡ ಕ್ರೀಡೆಗಳು ಹಾಗೂ ಕೆಲವು ಸಂಗೀತ ಪ್ರಕಾರಗಳು ಕೇವಲ ಚಿತ್ರಣಗಳು (Images) ಮತ್ತು ಸಿದ್ಧಾಂತಗಳನ್ನು ಮಾರಾಟ ಮಾಡುವುದಿಲ್ಲ; ಜನರು ಅವನ್ನೇ ತಮ್ಮ ಬದುಕಿನ ಭಾಗವನ್ನಾಗಿ ಸ್ವೀಕರಿಸುವಂತೆ ಕೂಡ ಮಾಡುತ್ತವೆ. ಈ ಸಂದರ್ಭದಲ್ಲಿ ‘ಸತ್ಯ’ ಎನ್ನುವುದು ಇನ್ನು ಪವಿತ್ರವಾದ ಅಮೂರ್ತ ಪರಿಕಲ್ಪನೆಯಾಗಿ ಉಳಿದಿಲ್ಲ. ಅದನ್ನು ಇಲ್ಲಿಯೇ, ಈಗಲೇ ಉತ್ಪಾದಿಸಬಹುದು, ರೂಪಿಸಬಹುದು ಮತ್ತು ಸಂಸ್ಕೃತಿಯ ಮಾರುಕಟ್ಟೆಯ ಮೂಲಕ ಚಿಲ್ಲರೆ ವ್ಯಾಪಾರದ ವಸ್ತುವಿನಂತೆ ಮಾರಾಟ ಮಾಡಬಹುದು. ಹೀಗೆ, ಮಿಶೆಲ್ ಫೂಕೋ (Michel Foucault) ಅವರ ಪದವನ್ನು ಬಳಸುವುದಾದರೆ, ಒಂದು ‘ಸತ್ಯದ ಆಡಳಿತ ವ್ಯವಸ್ಥೆ’ (Regime of Truth) ಯನ್ನು ನಿರ್ಮಿಸಲಾಗುತ್ತದೆ. ಜನಾಂಗಶಾಸ್ತ್ರದ (Ethnology) ಕಾರಣದಿಂದಲೇ ಋಷಿಗಳು ಇನ್ನೂ ಋಷಿಗಳಾಗಿ ಉಳಿದಿದ್ದಾರೆ ಎಂದು ಜೀನ್ ಬೋದ್ರಿಯಾರ್ ಹೇಳಿದಂತೆಯೇ, ಇಂದು ನಾವು ಮಾಧ್ಯಮಗಳೇ ನಿರ್ಮಿಸಿದ ಆವಿಷ್ಕಾರಗಳು ಮತ್ತು ಸೃಷ್ಟಿಗಳಾಗಿದ್ದೇವೆ ಎಂದೂ ಹೇಳಬಹುದು. ಅಷ್ಟೇ ಅಲ್ಲ, ಮಾಧ್ಯಮಗಳು ನಮ್ಮ ಬಗ್ಗೆ ನಿರ್ಮಿಸುವ ಪ್ರತಿರೂಪವನ್ನೇ (Image) ನಾವು ಕ್ರಮೇಣ ನಮ್ಮ ನಿಜವಾದ ಅಸ್ತಿತ್ವವೆಂದು ಗುರುತಿಸಿಕೊಳ್ಳ ತೊಡಗಿದ್ದೇವೆ. ಸತ್ಯದ ಸ್ಥಾನವನ್ನು ಈಗ ಕಾರ್ಯಸಾಧಕತೆ/ಕಾರ್ಯಕ್ಷಮತೆ (Performativity) ಆಕ್ರಮಿಸಿಕೊಳ್ಳುತ್ತಿದೆ; ವಿವೇಕದ ಆಸನವನ್ನು ಅಧಿಕಾರ ತನ್ನ ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೀನ್ ಫ್ರಾಂಕೋಸ್ ಲಿಯೋಟಾರ್ಡ್ (Jean-François Lyotard) ಅವರ ಈ ನಿರಾಶಾವಾದಿ ಹೇಳಿಕೆ ಅಷ್ಟೇನೂ ಅಸಂಗತವೆನಿಸುವುದಿಲ್ಲ: “ಯಶಸ್ಸು ಎಂದರೆ ಸಮಯವನ್ನು ಉಳಿಸುವುದೆಂದು ಪರಿಗಣಿಸುವ ಜಗತ್ತಿನಲ್ಲಿ, ‘ಚಿಂತನೆ’ಗೆ ಒಂದು ದೊಡ್ಡ ಕೊರತೆ ಇದೆ – ಅದು ಸಮಯವನ್ನು ತೆಗೆದುಕೊಳ್ಳುತ್ತದೆ.” (ವೇಗ ಮತ್ತು ಕಾರ್ಯಕ್ಷಮತೆಯನ್ನೇ ಯಶಸ್ಸಿನ ಮಾನದಂಡವಾಗಿ ರಿಸಿಕೊಂಡಿರುವ ಜಗತ್ತಿನಲ್ಲಿ ಚಿಂತನೆ -ಒಂದು ನ್ಯೂನ್ಯತೆಯಾಗಿ ಕಾಣುತ್ತದೆ.)
‘ಸಾಂಸ್ಕೃತಿಕ ಪ್ರಾಬಲ್ಯದ ಚಟುವಟಿಕೆ’ (Hegemonic Cultural Activity) ಎಂದರೆ ಅಧಿಕಾರವನ್ನು ಲೆಕ್ಕಾಚಾರದೊಂದಿಗೆ ಬಳಸುವ ಒಂದು ಪ್ರಕ್ರಿಯೆ. ಅದರ ಉದ್ದೇಶ ಜನರ ಇಚ್ಛೆ, ಅಭಿಪ್ರಾಯ ಮತ್ತು ಚಿಂತನೆಗಳನ್ನು ಪ್ರಬಲ ವರ್ಗಗಳ ಹಿತಾಸಕ್ತಿಗೆ ಅನುಕೂಲವಾಗುವಂತೆ ರೂಪಿಸುವುದಾಗಿದೆ. ಇದಕ್ಕಾಗಿ ಅದು ಕಣ್ಣಿಗೆ ಕಾಣದ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರದ ಸೂಕ್ಷ್ಮ ಜಾಲವೊಂದನ್ನು ಸಕ್ರಿಯಗೊಳಿಸುತ್ತದೆ. ಅದರ ಮೂಲಕ ಜನರಲ್ಲಿ ಒಂದು ರೀತಿಯ ಸಾಂಸ್ಕೃತಿಕ ಸಮ್ಮತಿಯನ್ನು (Cultural Consensus) ನಿರ್ಮಿಸಲಾಗುತ್ತದೆ. ಇದರ ಪರಿಣಾಮವಾಗಿ ಜನರ ಸ್ವಾಯತ್ತತೆ ಮತ್ತು ಸಾಂಸ್ಕೃತಿಕ ಬಹುತ್ವ ಕ್ರಮೇಣ ಕುಗ್ಗತೊಡಗುತ್ತದೆ. ಸಾಂಸ್ಕೃತಿಕ ಸಂಸ್ಥೆಗಳ ಮೂಲಕ ಅಧಿಕಾರವನ್ನು ಚಲಾಯಿಸುವ ವಿಧಾನವು ಅಪರೂಪಕ್ಕೆ ಮಾತ್ರ ನೇರವಾಗಿ ಗೋಚರಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅದು ಅಷ್ಟೊಂದು ಸೂಕ್ಷ್ಮವಾಗಿರುತ್ತದೆ; ಕೊನೆಗೆ ಅದು ಸ್ವಾತಂತ್ರ್ಯದ ಒಂದು ರೂಪವೇ ಎಂಬ ಭ್ರಮೆಯನ್ನು ಸಹ ಉಂಟುಮಾಡುತ್ತದೆ. ಸಂವಹನ ವ್ಯವಸ್ಥೆ ಇದಕ್ಕೆ ಒಂದು ಉತ್ತಮ ಉದಾಹರಣೆ. ವಾಸ್ತವಿಕತೆ ಮೊದಲು ಇರುತ್ತದೆ, ನಂತರ ಅದನ್ನು ಸಂವಹನವು ಕೇವಲ ಪ್ರತಿಬಿಂಬಿಸುತ್ತದೆ ಎಂಬುದು ಸತ್ಯವಲ್ಲ. ಮನುಷ್ಯನಿಗೆ ವಾಸ್ತವಿಕತೆಯ ಅರ್ಥವನ್ನು ರೂಪಿಸುವುದೂ, ಅದನ್ನು ಬದಲಾಯಿಸುವುದೂ ಸಂವಹನವೇ. ಸಂವಹನವು ತನ್ನ ಧ್ವನಿ, ರೂಪ ಅಥವಾ ಅಭಿವ್ಯಕ್ತಿಯ ಶೈಲಿಯೊಳಗೆ ಯಾವಾಗಲೂ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಅಡಗಿಸಿಕೊಂಡಿರುತ್ತದೆ. ಒಂದು ಪತ್ರಿಕೆ, ಒಂದು ರೇಡಿಯೊ ವಾಹಿನಿ ಅಥವಾ ಒಂದು ದೂರದರ್ಶನ ಕಾರ್ಯಕ್ರಮಕ್ಕೆ ಒಗ್ಗಿಕೊಂಡ ಓದುಗ, ಶ್ರೋತೃ ಅಥವಾ ವೀಕ್ಷಕ, ಅದು ಜಗತ್ತನ್ನು ನೋಡುವ ದೃಷ್ಟಿಕೋನವು ವಾಸ್ತವಿಕತೆಯನ್ನು ಅರ್ಥೈಸುವ ಅನೇಕ ಸಾಧ್ಯತೆಗಳಲ್ಲಿನ ಕೇವಲ ಒಂದಷ್ಟೆ ಎಂಬುದನ್ನು ಮರೆತುಬಿಡುವ ಸಾಧ್ಯತೆ ಇದೆ. ನಮ್ಮಂತಹ ವ್ಯವಸ್ಥೆಗಳಲ್ಲಿ ಸಂವಹನದಲ್ಲಿ ಪಾಲ್ಗೊಳ್ಳುವ ಜನರ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದ್ದರೂ, ಸಂವಹನ ಮಾಧ್ಯಮಗಳ ಮಾಲೀಕತ್ವ ಮತ್ತು ನಿಯಂತ್ರಣವು ಮಾತ್ರ ಕೆಲವೇ ಸಂಸ್ಥೆಗಳು ಮತ್ತು ಪ್ರಭುತ್ವದ ಪ್ರಬಲ ಗುಂಪುಗಳ ಕೈಗಳಲ್ಲಿ ಹೆಚ್ಚು ಹೆಚ್ಚು ಕೇಂದ್ರೀಕೃತವಾಗುತ್ತಿದೆ. ಭಾರತದಲ್ಲಿ ಹಿಂದೂ ಬಲಪಂಥೀಯ ಶಕ್ತಿಗಳು ಮಾಡುತ್ತಿರುವಂತೆ, ತ್ವರಿತವಾಗಿ ಜನಪ್ರಿಯವಾಗುವ ಕೃತಕ ಸಂಸ್ಕೃತಿಯನ್ನು ರೂಪಿಸುವುದು ಸುಲಭ. ಆದರೆ ನಿಜವಾಗಿಯೂ ಹೊಸದಾದ, ವಿಮೋಚನೆಯ ಸಾಧ್ಯತೆಯನ್ನು ಒಳಗೊಂಡಿರುವ ಸಂಸ್ಕೃತಿಯನ್ನು ನಿರ್ಮಿಸುವುದು ಬಹಳ ಕಷ್ಟಕರವಾದ ಕೆಲಸ. ಜನಪ್ರಿಯ ಸಾಹಿತ್ಯ, ಚಲನಚಿತ್ರ ಮತ್ತು ದೂರದರ್ಶನ ಅನೇಕ ಸಂದರ್ಭಗಳಲ್ಲಿ ಜನರ ಮೌನಕ್ಕೆ ಪ್ರಬಲ ವರ್ಗಗಳ ಧ್ವನಿಯನ್ನು ತುಂಬುತ್ತವೆ. ಅವು ತಾವು ನಿರ್ಮಿಸುವ ಚಿತ್ರಣಗಳು ಮತ್ತು ಕಣ್ಣಿಗೆ ಕಾಣದ ವಿಶ್ವದೃಷ್ಟಿಗಳ ಮೂಲಕ ನಮ್ಮ ಪ್ರಜ್ಞೆಯನ್ನು ವಸಾಹತುಗೊಳಿಸುತ್ತವೆ. ಫ್ರೆಡ್ರಿಕ್ ಜೇಮ್ಸನ್ ಅವರ ಮಾತಿನಲ್ಲಿ ಹೇಳುವುದಾದರೆ, ಅವು ನಮ್ಮ ಅಪ್ರಜ್ಞೆಯನ್ನೂ (unconscious) ತನ್ನ ಅಧೀನಕ್ಕೆ ಒಳಪಡಿಸುತ್ತವೆ. ಇಲ್ಲಿ ಅನುಭವ ಅಥವಾ ಜ್ಞಾನದ ನಿಜವಾದ ಹಂಚಿಕೆ ನಡೆಯುವುದಿಲ್ಲ. ಅನುಭವಕ್ಕಿಂತ ಅನುಭವದ ಪ್ಯಾಕೇಜಿಂಗ್ (ಅನುಭವ ಪ್ರಸ್ತುತಿ), ಮೇಲ್ಮೈ ಹೊಳಪು ಮತ್ತು ಹೊರಗಿನ ಆಕರ್ಷಣೆಯೇ ಹೆಚ್ಚು ಮಹತ್ವ ಪಡೆಯುತ್ತದೆ. ರೇಮಂಡ್ ವಿಲಿಯಮ್ಸ್ ಒಮ್ಮೆ ಹೇಳಿದಂತೆ, ಈ ಮೇಲ್ಮೈ ಹೊಳಪು ಕ್ರಮೇಣ ಅನುಭವವನ್ನೇ ಬದಲಿಸಿ ಅದರ ಸ್ಥಾನವನ್ನು ಆಕ್ರಮಿಸುತ್ತದೆ. ಪರಿಣಾಮವಾಗಿ ಜಾಹೀರಾತು, ಎಲ್ಲ ರೀತಿಯ ಸಂವಹನಕ್ಕೂ ಮಾದರಿಯಾಗತೊಡಗುತ್ತದೆ. ಈ ಬೆಳವಣಿಗೆಯನ್ನು ನಾವು ನಮ್ಮ ಸುತ್ತಲೂ ಸ್ಪಷ್ಟವಾಗಿ ಕಾಣಬಹುದು. ಇಂದು ಪುಸ್ತಕ ವಿಮರ್ಶೆಗಳು ಮತ್ತು ಕಲಾ ಸಂಬಂಧಿತ ಬರಹಗಳೇ ಕ್ರಮೇಣ ಜಾಹೀರಾತುಗಳ ಸ್ವರೂಪ ಪಡೆಯತೊಡಗಿವೆ. ಹಾಗಿರುವಾಗ, ದೂರದರ್ಶನ ಕಾರ್ಯಕ್ರಮಗಳು ಹಾಗೂ ವ್ಯಕ್ತಿಗಳು ಮತ್ತು ಘಟನೆಗಳ ಕುರಿತ ವಿಶೇಷ ಕಾರ್ಯಕ್ರಮಗಳು ಮತ್ತು ಲೇಖನಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೇಲ್ನೋಟದ ಆಕರ್ಷಣೆ, ಅತಿರಂಜಿತ ಸಂವೇದನೆಗಳನ್ನು ಕೆರಳಿಸುವ ಪ್ರವೃತ್ತಿ ಮತ್ತು ಕ್ಷಿಪ್ರಗತಿ.. ಮಿಲನ್ ಕುಂದೇರಾ ಅವರು ಹೇಳುವಂತೆ, “ಚಿಂತನೆಯನ್ನೂ, ನಿಧಾನವಾಗಿ ಅನುಭವಿಸಿ ಆಸ್ವಾದಿಸುವ ಬೌದ್ಧಿಕ ಹಾಗೂ ಕಲಾನುಭವದ ಸಂತೋಷವನ್ನೂ ಕಸಿದುಕೊಳ್ಳುವ ತಂತ್ರಜ್ಞಾನದ ಉನ್ಮಾದ.” ಎಂದು ಕರೆದಿದ್ದ ಸಂಗತಿಗಳು ಕ್ರಮೇಣ ಆಳವಾದ ಚಿಂತನೆ, ವಸ್ತುನಿಷ್ಠತೆ ಮತ್ತು ವಿಶ್ಲೇಷಣೆಯ ಸ್ಥಾನವನ್ನು ಆಕ್ರಮಿಸುತ್ತವೆ. ಹೀಗೆ, ಸಂಸ್ಕೃತಿಯ ಉದ್ಯಮೀಕರಣ ಬಳಕೆದಾರರ ಕೈಗಾರಿಕೆಯ ಸ್ವರೂಪವನ್ನೇ ಅನುಕರಿಸುತ್ತದೆ. ಅಲ್ಲಿ ಉತ್ಪನ್ನಕ್ಕಿಂತ ಅದನ್ನು ಆಯ್ದುಕೊಳ್ಳುವಂತೆ ಮಾಡುವ ಪ್ರದರ್ಶನ ಮತ್ತು ಪ್ರಚಾರವೇ ಹೆಚ್ಚು ನಿರ್ಣಾಯಕವಾಗಿರುವಂತೆ, ಇಲ್ಲಿಯೂ ಕೃತಿಯ ಸಾರಕ್ಕಿಂತ ಅದರ ಮಾರುಕಟ್ಟೆಗೊಳಿಸುವಿಕೆಯೇ ಮುಖ್ಯವಾಗುತ್ತದೆ.
ಸರಣಿ ಕಾದಂಬರಿ ಸಮಾಜದಲ್ಲಿರುವ ಸಂಘರ್ಷಗಳು ಮತ್ತು ವೈರುಧ್ಯಗಳನ್ನು ಅತಿಯಾಗಿ ಸರಳೀಕರಿಸಿ, ನೀತಿಬೋಧನೆಯ ರೂಪದಲ್ಲಿ ನಿರೂಪಿಸುವ ಮೂಲಕ, ಜನಸಾಮಾನ್ಯರ ‘ಸಾಮಾನ್ಯ ವಿವೇಕ’ (Common Sense) ಎಂದು ಕರೆಯಲ್ಪಡುವ ಮನೋಭಾವವನ್ನು ತೃಪ್ತಿಪಡಿಸುತ್ತದೆ. ಈ ರೀತಿಯಲ್ಲಿ ಅದು ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನೇ ನ್ಯಾಯಸಮ್ಮತವೆಂದು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಅದರ ಜಗತ್ತಿನಲ್ಲಿ ಯಶಸ್ಸು ಎಂಬುದು ಯಾವಾಗಲೂ ಸಂಪತ್ತು ಮತ್ತು ಅಧಿಕಾರದೊಂದಿಗೆ ಗುರುತಿಸಲ್ಪಡುತ್ತದೆ. ಆದರ್ಶ ವ್ಯಕ್ತಿಗಳಾಗಿ ಗಾಂಧಿ ಅಥವಾ ಮೇಧಾ ಪಾಟ್ಕರ್ ಅವರಂತಹ ಸಾಮಾಜಿಕ ಬದ್ಧತೆಯ ವ್ಯಕ್ತಿಗಳು ಕಾಣಿಸಿಕೊಳ್ಳುವುದಿಲ್ಲ; ಬದಲಿಗೆ ದಾವೂದ್ ಇಬ್ರಾಹಿಂ ಮತ್ತು ನರೇಂದ್ರ ಮೋದಿ ಅವರಂತಹ ಅಧಿಕಾರ ಮತ್ತು ಪ್ರಭಾವದ ಪ್ರತೀಕಗಳನ್ನೇ ಯಶಸ್ಸಿನ ಮಾದರಿಗಳಾಗಿ ಮುಂದಿಡಲಾಗುತ್ತದೆ. ಇದೇ ರೀತಿಯಲ್ಲಿ, ಸರಣಿ ಕಾದಂಬರಿಗಳು ಪಿತೃಪ್ರಧಾನ ಮೌಲ್ಯಗಳನ್ನು ನಿರಂತರವಾಗಿ ಪುನರುಚ್ಚರಿಸುತ್ತವೆ. ಮಹಿಳೆಯರನ್ನು ನಿಷ್ಠಾವಂತ ಸೊಸೆ ಅಥವಾ ಜಗಳಗಂಟಿ ಎಂದು, ಪ್ರೀತಿಯಿಲ್ಲದ ಕ್ರೂರ ಮಹಿಳೆ ಎಂಬ ಸಿದ್ಧಮಾದರಿಗಳೊಳಗೆ ಸೀಮಿತಗೊಳಿಸುತ್ತವೆ. ದೂರದರ್ಶನದ ಜನಪ್ರಿಯ ಧಾರಾವಾಹಿಗಳು ಸಾಮಾಜಿಕ ಬದುಕನ್ನು ಎರಡು ಪ್ರತ್ಯೇಕ ವಲಯಗಳಾಗಿ ವಿಭಜಿಸುತ್ತವೆ. ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳು ಪುರುಷರಿಗೇ ಮೀಸಲಾದ ಸಾರ್ವಜನಿಕ ಕ್ಷೇತ್ರವಾಗಿದ್ದರೆ, ವಿವಾಹ, ಕುಟುಂಬ ಮತ್ತು ಗೃಹಜೀವನ ಮಹಿಳೆಯರಿಗೆ ಮಾತ್ರ ಸೀಮಿತವಾದ ಖಾಸಗಿ ಕ್ಷೇತ್ರವಾಗಿ ಚಿತ್ರಿತವಾಗುತ್ತದೆ. ಜನಪ್ರಿಯ ಚಲನಚಿತ್ರಗಳು ಮತ್ತು ಧಾರಾವಾಹಿಗಳು ಇದೇ ಮಾದರಿಯನ್ನು ಆಧರಿಸಿದ ಒಂದು ಪ್ರತಿಲೋಕಕಥೆಯನ್ನು (ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾದ ಕಥೆಗಳು) ನಿರ್ಮಿಸುತ್ತವೆ. ಅದು ಕಲ್ಪನೆ, ಪ್ರಣಯ, ದೃಶ್ಯ ವೈಭವ ಮತ್ತು ಆಸೆಗಳ ಈಡೇರಿಕೆಯ ಕನಸುಗಳಿಂದ ತುಂಬಿರುತ್ತದೆ. ಈ ಮಾಧ್ಯಮಗಳಲ್ಲಿ ಕ್ಯಾಮೆರಾದ ದೃಷ್ಟಿ ಬಹುತೇಕ ಯಾವಾಗಲೂ ಪುರುಷನ ನೋಟವಾಗಿರುತ್ತದೆ. ಜಾಹೀರಾತುಗಳ ಲಕ್ಷಣವಾದ ಅತಿಶಯೋಕ್ತಿ ಇಲ್ಲಿಯೂ ಪ್ರಶ್ನಾತೀತ ನಿಯಮವಾಗಿ ಪರಿಣಮಿಸುತ್ತದೆ. ಈ ಇಡೀ ವ್ಯವಸ್ಥೆಗೆ ಗಾಸಿಪ್ ನಿಯತಕಾಲಿಕೆಗಳು ಮತ್ತು ತಾರಾ ಆರಾಧನೆಯ ಉಪಸಂಸ್ಕೃತಿ ಬಲವಾದ ಬೆಂಬಲವನ್ನು ಒದಗಿಸುತ್ತವೆ. ವಿಮರ್ಶಕ ಮೈಕಲ್ ಟ್ರೇಸಿ ಅವರು ದೂರದರ್ಶನವನ್ನು “ವಿಷಪೂರಿತ ಪಾತ್ರೆ” ಎಂದು ಕರೆದಿರುವುದು ಇದೇ ಕಾರಣಕ್ಕಾಗಿ. ದೂರದರ್ಶನವು ಅನೇಕ ಸಂದರ್ಭಗಳಲ್ಲಿ ಪ್ರಾದೇಶಿಕ ಸಂಸ್ಕೃತಿಗಳ ಜೀವಂತಿಕೆಯನ್ನು ನಾಶಮಾಡಿ, ಅವುಗಳನ್ನು ಏಕರೂಪದ, ಚೈತನ್ಯವಿಲ್ಲದ, ಅಧಿಕಾರಪರ-ಜನಪ್ರಿಯವಾದಿ ಸ್ವರೂಪದ ಒಂದು ಕಾಲ್ಪನಿಕ “ಭಾರತೀಯ ಸಂಸ್ಕೃತಿ”ಯೊಳಗೆ ಬಲವಂತವಾಗಿ ಸೇರಿಸಲು ಪ್ರಯತ್ನಿಸುತ್ತದೆ. ಅದಷ್ಟೇ ಅಲ್ಲ, ವಿಶ್ರಾಂತಿಯ ಸಮಯವನ್ನೂ ಅದು ತನ್ನ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಕೃತಕವಾಗಿ ನಿರ್ಮಿಸಲಾದ ಪುರಾಣಗಳು ಮತ್ತು ಕಲ್ಪನೆಗಳ ಮೂಲಕ ಉಪಭೋಗವಾದ ಮತ್ತು ವೃತ್ತಿಕೇಂದ್ರಿತ ಬದುಕಿನ ಮನೋಭಾವವನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ ಹೊಸದಾಗಿ ಶ್ರೀಮಂತರಾದ ವರ್ಗದ ಮೌಲ್ಯಗಳನ್ನು ಆಧರಿಸಿದ ಒಂದು ಹೊಸ ಸಂಸ್ಕೃತಿಗೆ ಅದು ಪೋಷಣೆ ನೀಡುತ್ತದೆ.
ಆದರೆ ಈ ಎಲ್ಲವನ್ನು ಯಾರೂ ಪ್ರಶ್ನಿಸದೆ ಒಪ್ಪಿಕೊಂಡಿದ್ದಾರೆ ಎಂದಲ್ಲ. ಇದಕ್ಕೆ ಪ್ರತಿಯಾಗಿ ತನ್ನದೇ ಆದ ಪರ್ಯಾಯ ಕಲಾಪ್ರವಾಹಗಳೂ ರೂಪುಗೊಳ್ಳುತ್ತವೆ. ಅವಂತ್-ಗಾರ್ಡ್ ಕಲೆ (Avant-garde Art) ಅದಕ್ಕೆ ಒಂದು ಉದಾಹರಣೆ. ಇದೇ ಸಂದರ್ಭದಲ್ಲಿ, ಜನರ ಪ್ರತಿಭಟನೆಗೆ ಧ್ವನಿಯಾಗುವ, ಅವರ ಐತಿಹಾಸಿಕ ಸ್ಮೃತಿಯನ್ನು ಮರುಜಾಗೃತಗೊಳಿಸುವ ಮತ್ತು ಕಲೆ, ಸಾಹಿತ್ಯ ಹಾಗೂ ಜ್ಞಾನ ಕ್ಷೇತ್ರಗಳಲ್ಲಿ ನಿರ್ಮಾಣವಾಗಿರುವ ಸಾಂಸ್ಕೃತಿಕ ಮತ್ತು ಬೌದ್ಧಿಕ ಏಕಸ್ವಾಮ್ಯವನ್ನು ಪ್ರಶ್ನಿಸುವ ಸಮಾನಾಂತರ ಸಾಂಸ್ಕೃತಿಕ ಚಳವಳಿಗಳೂ ಹುಟ್ಟಿಕೊಳ್ಳುತ್ತವೆ. ಅವು ಪರ್ಯಾಯ, ಅನೇಕ ಸಂದರ್ಭಗಳಲ್ಲಿ ಅಂಚಿನ/ದಮನಿತರ (Subaltern), ಕಲಾ ಮತ್ತು ಸಾಹಿತ್ಯ ರೂಪಗಳ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆ. ಪರ್ಯಾಯ ಅಭಿವೃದ್ಧಿ, ಪರಿಸರ ಸಮತೋಲನ ಮತ್ತು ಮುಕ್ತ ತಂತ್ರಾಂಶ ಮೊದಲಾದ ಪ್ರಜಾಸತ್ತಾತ್ಮಕ ಚಳವಳಿಗಳೂ ಈ ಪ್ರತಿರೋಧದ ಭಾಗವಾಗಿವೆ. ಸಮೂಹ ಮಾಧ್ಯಮಗಳು ಬೆಳೆಸುವ ಮೌನ ಮತ್ತು ಸಮ್ಮತಿಯ ಸಂಸ್ಕೃತಿಗೆ ಪ್ರತಿಯಾಗಿ, ಸಾಂಸ್ಕೃತಿಕ ಆಚರಣೆಯಲ್ಲಿ ಪ್ರಜಾಸತ್ತಾತ್ಮಕ ಬಹುತ್ವವನ್ನು ಬೆಳೆಸುವುದು ಅತ್ಯಗತ್ಯ. ಆದ್ದರಿಂದ ನಮಗೆ ಅಗತ್ಯವಿರುವುದು ಪಂಥೀಯ ಮತ್ತು ಸಂಕುಚಿತ ಪರಿಗಣನೆಗಳನ್ನು ಮೀರಿ, ನಮ್ಮ ಸಂಕೀರ್ಣ ಸಾಮಾಜಿಕ ವಾಸ್ತವವನ್ನೂ ಬಹುಮುಖ ಅಸ್ಮಿತೆಗಳನ್ನೂ ಒಪ್ಪಿಕೊಳ್ಳಬಲ್ಲ, ಬಹುಪದರಗಳಿರುವ, ವೈವಿಧ್ಯಮಯ ಮತ್ತು ಚಲನಶೀಲವಾದ ಕಲೆ ಹಾಗೂ ಸಂಸ್ಕೃತಿಯ ಪರಿಕಲ್ಪನೆ. ಅಂತಹ ಪರಿಕಲ್ಪನೆಯು ತನ್ನ ಉದ್ದೇಶವನ್ನು ಸಾಧಿಸಲು ವಿವಿಧ ತಂತ್ರಗಳು ಮತ್ತು ಅಭಿವ್ಯಕ್ತಿಯ ವಿಧಾನಗಳನ್ನು ಅಳವಡಿಸಿಕೊಳ್ಳುವಷ್ಟು ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿರಬೇಕು. ಕಲೆ, ಲಾಭದಾಹದಿಂದ ಕೂಡಿದ ಬಳಕೆದಾರರ ಉದ್ದಿಮೆಯ ಸಾಧನವಾಗಿಬಿಟ್ಟಾಗ, ಅಥವಾ ರಕ್ತಪಿಪಾಸು ಪುನರುತ್ಥಾನವಾದದ ಆಯುಧವಾಗಿ ಕುಸಿದಾಗ, ಅದೇ ಸಮಯದಲ್ಲಿ ಸರಳವೂ ದೃಢವೂ ಆದ ಮತ್ತೊಂದು ಕಲೆಯನ್ನು ರೂಪಿಸಬೇಕಾದ ಅಗತ್ಯ ಎದುರಾಗುತ್ತದೆ. ಭೀಕರ ಸಾಮ್ರಾಜ್ಯದ ವಿರುದ್ಧ ಎತ್ತಿದ ಒಂದು ಚಿಟಿಕೆ ಉಪ್ಪಿನಷ್ಟು ಶುದ್ಧವೂ ದೀಪ್ತಿಯುತವೂ ಆದ ಕಲೆಯನ್ನು ರೂಪಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ವಾಲ್ಟರ್ ಬೆಂಜಮಿನ್ ಅವರ ಮಾತುಗಳನ್ನು ನೆನಪಿಸಿಕೊಳ್ಳೋಣ: “ಶತ್ರು ಗೆದ್ದರೆ, ಮೃತರೂ ಕೂಡ ಅವನಿಂದ ಸುರಕ್ಷಿತವಾಗಿರುವುದಿಲ್ಲ; ಮತ್ತು ಆ ಶತ್ರು, ಇನ್ನೂ ತನ್ನ ವಿಜಯವನ್ನು ನಿಲ್ಲಿಸಿಲ್ಲ.” ಅಧಿಕಾರವು ನಮ್ಮ ಪ್ರಾತಿನಿಧ್ಯಗಳು ಮತ್ತು ಸಂಸ್ಥೆಗಳ ಮೇಲೆ ಬೀರಿರುವ ಪ್ರಭಾವವನ್ನು ಗುರುತಿಸಿ ಅದರಿಂದ ನಮ್ಮನ್ನು ಮುಕ್ತಗೊಳಿಸಬೇಕಾಗಿದೆ. ‘ಇತರ/ಅನ್ಯ’ (Other) ಎಂದು ಗುರುತಿಸಿ ಅಂಚಿಗೆ ತಳ್ಳುವ ಎಲ್ಲ ರೀತಿಯ ಪ್ರಕ್ರಿಯೆಗಳ ವಿರುದ್ಧ ಹೋರಾಡಬೇಕು. ‘ನಾನು’ ಮತ್ತು ‘ಇತರ’ ಎಂಬ ಗಡಿಗಳನ್ನು ಮರುನಿರ್ವಚಿಸಿ, ಜನಾಂಗೀಯ ದ್ವೇಷ ಮತ್ತು ಸಾಮ್ರಾಜ್ಯಶಾಹಿ ಮನೋಭಾವಗಳಿಂದ ನಮ್ಮನ್ನು ವಿಮುಕ್ತಗೊಳಿಸಿಕೊಳ್ಳಬೇಕು. ಪಾಶ್ಚಾತ್ಯ ವಿಶ್ವವ್ಯಾಪಕತೆಯ ವಿರುದ್ಧ ನಮ್ಮ ಪ್ರತಿಕ್ರಿಯೆ ಸಾಂಸ್ಕೃತಿಕ ಬಹುತ್ವವಾಗಿರಬೇಕೇ ಹೊರತು, ಅಂಧ ಪುನರುತ್ಥಾನವಾದ ಅಥವಾ ಯಥಾಸ್ಥಿತಿವಾದವಾಗಿರಬಾರದು. ಹೊಸ ಪ್ರಭುಗಳು “ಮರೆತುಬಿಡಿ – ನೀವು ಯಾರು ಆಗಿದ್ದಿರಿ, ಈಗ ಯಾರು ಎಂಬುದನ್ನೂ ಮರೆತುಬಿಡಿ” ಎಂದು ಹೇಳುವಾಗ, “ನಾವು ನೆನಪಿಟ್ಟಿದ್ದೇವೆ; ಮುಂದೆಯೂ ನೆನಪಿಟ್ಟುಕೊಳ್ಳುತ್ತೇವೆ” ಎಂದು ಉತ್ತರಿಸುವುದು ನಮ್ಮ ಐತಿಹಾಸಿಕ ಹೊಣೆಗಾರಿಕೆಯಾಗುತ್ತದೆ. ಪ್ರತಿಯೊಂದು ಸಾಂಸ್ಕೃತಿಕ ಹೋರಾಟವೂ ಸ್ಮೃತಿಯು, ಮರೆವಿನ ವಿರುದ್ಧ ನಡೆಸುವ ಹೋರಾಟವೇ ಆಗಿದೆ. ಭೂತಕಾಲವನ್ನು ವಿಮರ್ಶಾತ್ಮಕವಾಗಿ ಮರಳಿ ಪಡೆದು, ಅದನ್ನು ಆಳವಾಗಿ ಅರ್ಥಮಾಡಿಕೊಳ್ಳುವುದರ ಅಗತ್ಯವಿದೆ. ಏಕೆಂದರೆ, ಭವಿಷ್ಯವು ಭೂತಕಾಲವನ್ನು ಗುರುತಿಸಬೇಕು; ಆದರೆ ಅದರ ಮರುಕಳಿಕೆಗೆ ಬಂಧಿಯಾಗಬಾರದು.
ಮೂಲ : ಕೆ. ಸಚ್ಚಿದಾನಂದನ್
ಅನುವಾದ: -ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ
ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ ಇವರು ಕಳೆದ ಏಳು ವರ್ಷಗಳಿಂದ ಬಾಗಲಕೋಟೆಯ ಇಳಕಲ್ಲಿನ ಎಸ್. ವಿ. ಎಂ. ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಗತಿಪರ ಚಿಂತನೆ ಮತ್ತು ಸೃಜನಶೀಲ ಬರಹಗಳಲ್ಲಿ ಇವರು ತೊಡಗಿಕೊಂಡಿದ್ದು ಕಾವ್ಯ, ಅನುವಾದ, ವಿಮರ್ಶಾ ಲೇಖನಗಳು ಅನೇಕ ಪತ್ರಿಕೆ, ಬ್ಲಾಗ್’ಳಲ್ಲಿ, ಪ್ರಕಟಗೊಂಡಿವೆ.
ಇದನ್ನೂ ಓದಿ- ಕೆಪಿಎಸ್ ಸಿ ಕರ್ಮಕಾಂಡ


