ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಲಂಚಾವತಾರಕ್ಕೆ ಮದ್ದರೆಯುವವರು ಯಾರು ಎನ್ನುವುದೇ ಪ್ರಶ್ನೆ. ಕಳ್ಳ ಬೆಕ್ಕುಗಳೇ ಆಯಕಟ್ಟಿನ ಜಾಗದಲ್ಲಿ ಝಂಡಾ ಹೂಡಿರುವಾಗ ಭ್ರಷ್ಟ ಬೆಕ್ಕುಗಳಿಗೆ ಗಂಟೆ ಕಟ್ಟುವವರು ಯಾರು? ಭ್ರಷ್ಟ ವ್ಯವಸ್ಥೆಯನ್ನು ಸುಧಾರಿಸುವವರು ಯಾರು?- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಕರ್ನಾಟಕ ಲೋಕಸೇವಾ ಆಯೋಗ ( KPSC) ಅಂತಾ ಒಂದಿದೆ. ಅದಕ್ಕೆ ಭಾರತದ ಸಂವಿಧಾನದ 315 ಮತ್ತು 323 ನೇ ವಿಧಿಗಳ ಅಡಿಯಲ್ಲಿ ಸ್ವತಂತ್ರ ಸಂಸ್ಥೆಯ ಸ್ಥಾನಮಾನ ಕೊಡಲಾಗಿದೆ. ಈ ಸಂಸ್ಥೆಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯಪಾಲರು ನೇಮಕಮಾಡುತ್ತಿದ್ದು ಅವರ ಅವಧಿ ಆರು ವರ್ಷಗಳದ್ದಾಗಿರುತ್ತದೆ.
ಇದು ಸರಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸವನ್ನು ಮಾಡುತ್ತಿದೆ.
ಮೈಸೂರು ಸಂಸ್ಥಾನದಲ್ಲಿ 1892 ರಲ್ಲೇ ದಿವಾನ್ ಕೆ.ಶೇಷಾದ್ರಿ ಅಯ್ಯರ್ ರವರ ಕಾಲದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಗಳು ಪ್ರಾರಂಭವಾದವು. ನಂತರ 1921 ರಲ್ಲಿ ಕೇಂದ್ರೀಕೃತ ನೇಮಕಾತಿ ಮಂಡಳಿ ಬಂತು. ಸ್ವಾತಂತ್ರ್ಯಾ ನಂತರ ಸಂವಿಧಾನಾತ್ಮಕ ಸ್ಥಾನಮಾನ ಪಡೆದು ಆಧುನಿಕ ರೂಪ ಪಡೆಯಿತು.
1951 ಮೇ 18 ರಂದು ಆರಂಭಗೊಂಡ ಈ ಸರಕಾರಿ ಸಂಸ್ಥೆಗೆ ಈಗ 75 ವರ್ಷಗಳು ತುಂಬಿವೆ. 1973 ರಲ್ಲಿ ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ಆದಾಗ ಕರ್ನಾಟಕ ಲೋಕಸೇವಾ ಆಯೋಗ ಎನ್ನುವ ಹೆಸರು ಅಸ್ತಿತ್ವಕ್ಕೆ ಬಂತು. ಅವತ್ತಿನಿಂದ ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಕಾಲಕಾಲಕ್ಕೆ ಸಿವಿಲ್ ಮತ್ತು ಇಲಾಖಾ ಪರೀಕ್ಷೆಗಳನ್ನು ನಡೆಸುವುದು, ನೇಮಕಾತಿ ವಿಧಾನಗಳ ಬಗ್ಗೆ ಸರಕಾರಕ್ಕೆ ಸಲಹೆ ಕೊಡುವುದು ಹಾಗೂ ಭಡ್ತಿ, ವರ್ಗಾವಣೆ ಮತ್ತು ಶಿಸ್ತು ಕ್ರಮಗಳ ಬಗ್ಗೆ ಸಲಹೆ ಕೊಡುವ ಕೆಲಸವನ್ನು KPSC ಮಾಡುತ್ತಾ ಬಂದಿದೆ.

ಆದರೆ ಕಳೆದ ಕೆಲವು ದಶಕಗಳಿಂದ ನಡೆದ ಹಲವು ವಿವಾದಗಳು ಮತ್ತು ಹಗರಣಗಳು ಈ ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ.
ಕಳೆದ ಎರಡು ದಶಕಗಳಿಂದ ಕೆಪಿಎಸ್ ಸಿ ನೇಮಕಾತಿ ಪ್ರಕ್ರಿಯೆಯು ಹಲವು ದೊಡ್ಡ ಹಗರಣಗಳಿಗೆ ಸಾಕ್ಷಿಯಾಗಿದೆ. ಲಂಚ ಹಗರಣ, ನೆಪೋಟಿಸಂ, OMR ತಿದ್ದುಪಡಿ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಮಧ್ಯವರ್ತಿಗಳ ತಂತ್ರಗಳು ಆಗಾಗ ಸದ್ದು ಮಾಡುತ್ತಲೇ ಇವೆ. 2011 ರಲ್ಲಿ ಗೆಜಿಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ 45 ಲಕ್ಷದಿಂದ 1.5 ಕೋಟಿಯ ವರೆಗೆ ಲಂಚ ಪಡೆದ ಆರೋಪ ಬಂದಿತ್ತು. ಸಿಐಡಿ ತನಿಖೆಗೂ ಸರಕಾರ ಆದೇಶಿಸಿತ್ತು. ಯಾರಿಗೂ ಶಿಕ್ಷೆಯಾಗಲೇ ಇಲ್ಲ. 2025 ರಲ್ಲಿ ಸರಕಾರ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡದೆ ಪ್ರಕರಣವೇ ಮುಚ್ಚಿಹೋಯ್ತು.
2021 ರಲ್ಲಿ FDA ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆಯನ್ನೇ ರದ್ದು ಪಡಿಸಲಾಗಿತ್ತು.
2023 ರಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ್ ಹುದ್ದೆ ಆಯ್ಕೆಯಲ್ಲಿ OMR ಶೀಟ್ ತಿದ್ದುಪಡಿ ಮಾಡಿದ ಹಗರಣ ಬೆಳಕಿಗೆ ಬಂದಿತ್ತು. 10 ಅಭ್ಯರ್ಥಿಗಳ ಆಯ್ಕೆಯನ್ನು ರದ್ದು ಪಡಿಸಲಾಯ್ತು.
ಈಗ 2026ರಲ್ಲಿ ಸಂಸ್ಥೆಯ ಅಧ್ಯಕ್ಷರ ನೇಪೋಟಿಸಂ ಅಂದರೆ ಕೌಟುಂಬಿಕ ಒಲವು ಪ್ರಕರಣ ಈಗ ಸುದ್ದಿಯಲ್ಲಿದೆ. ಈಗ ಕೆಪಿಎಸ್ ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಓಬಿಸಿ ಮೀಸಲಾತಿ ಕೋಟಾದಲ್ಲಿ ತನ್ನ ಪುತ್ರಿಯರಿಗೆ ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್ ಹಾಗೂ ಜೂನಿಯರ್ ಇಂಜಿನೀಯರ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡಿದ್ದರು. ಇದು ಬಹಿರಂಗವಾಗುತ್ತಿದ್ದಂತೆ ಜುಲೈ 13 ರಂದು ರಾಜ್ಯಪಾಲರು ಶಿವಶಂಕರಪ್ಪನವರನ್ನು ಅಮಾನತ್ತು ಮಾಡಿ ಕಲಂ 317 (1) ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನಿಖೆಗೆ ಶಿಫಾರಸ್ಸು ಮಾಡಿದರು.
ಅಷ್ಟೇ ಅಲ್ಲ ಈ ಮಹಾಭ್ರಷ್ಟ ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರ್ 400 ವೆಟರ್ನರಿ ಆಫೀಸರ್ ಹುದ್ದೆ ನೇಮಕಾತಿಯಲ್ಲಿ ಲಂಚಾವತಾರಿಯಾದರು. ಪ್ರತಿಯೊಂದು ಹುದ್ದೆಗೂ 70 ರಿಂದ 80 ಲಕ್ಷ ಹಣ ಎಂದು ಫಿಕ್ಸ್ ಮಾಡಿ ಪಡೆದಿದ್ದರು. ಅದಕ್ಕಾಗಿ ಹಣ ಕೊಟ್ಟವರ OMR ತಿದ್ದುಪಡಿ ಮಾಡಿದ್ದರು. ಪ್ರಶ್ನೆಪತ್ರಿಕೆಯನ್ನೂ ಮಾರಿಕೊಂಡಿದ್ದರು. ರೆಸಾರ್ಟ್ ಗಳಲ್ಲಿ ಉತ್ತರಗಳನ್ನು ಬರೆಯಿಸಿದ್ದರು. ಈ ಭ್ರಷ್ಟಾಚಾರಿಯ ಲಂಚಬಾಕತನ ವಿಡಿಯೋ ಮೂಲಕ ಬಹಿರಂಗವಾಗಿ ಶಿವಶಂಕರ್ ಮತ್ತು ಇತರೆ 29 ಅಭ್ಯರ್ಥಿಗಳ ಮೇಲೆ FIR ದಾಖಲಿಸಲಾಗಿದೆ. ಶಿವಶಂಕರ್ ಮೇಲೆ ವೆಟರ್ನರಿ ಹುದ್ದೆ ಲಂಚ ಹಾಗೂ ಅವರ ಪುತ್ರಿಯರ ಅಕ್ರಮ ನೇಮಕಾತಿ ಪ್ರಕರಣ ಕುರಿತು ಎರಡು FIR ದಾಖಲಿಸಲಾಗಿದೆ. ಕೆಪಿಎಸ್ ಸಿ ಆಂತರಿಕ ತನಿಖಾ ಸಂಸ್ಥೆ ಸಮಿತಿ ರಚಿಸಿದೆ. ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಂಪೂರ್ಣ ಹಗರಣದ ತನಿಖೆಯನ್ನು ಸಿಐಡಿ ಸಂಸ್ಥೆಗೆ ವಿಚಾರಣೆಗಾಗಿ ವರ್ಗಾಯಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಈ ಹಗರಣವನ್ನು Daylight fraud ಎಂದು ಕರೆದು ಸಿಬಿಐ ತನಿಖೆ ಬಗ್ಗೆ ಸರಕಾರದಿಂದ ಸಮರ್ಥನೆ ಕೇಳುತ್ತಿದೆ. ವಿರೋಧ ಪಕ್ಷಗಳು 800 ಕೋಟಿ ಹಗರಣ ಎಂದು ಆರೋಪಿಸಿ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿವೆ.
ಸರಕಾರಿ ಹುದ್ದೆ ನೇಮಕಾತಿಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಹೆಚ್ಚಾಗಿದೆ. ಮಧ್ಯವರ್ತಿ ಎಜೆಂಟ್ ಗಳ ಪ್ರಭಾವ ಅತಿಯಾಗಿದೆ. OMR ತಿದ್ದುಪಡಿ, ಕೃತಕ ಅಂಕಗಳ ಹೆಚ್ಚಳ, ಪ್ರಭಾವಿಗಳಿಗೆ ಆದ್ಯತೆ, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು ಮತ್ತು ಮರುಪರೀಕ್ಷೆಗಳಿಂದಾಗಿ ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆಯ್ಕೆ ಪ್ರಕ್ರಿಯೆಯ ಅತಿಯಾದ ವಿಳಂಬದಿಂದಾಗಿ ಕೆಲವು ಅಭ್ಯರ್ಥಿಗಳ ವಯಸ್ಸಿನ ಮಿತಿ ಮೀರಿ ಹೋಗಿರುತ್ತದೆ. ಹೀಗಾಗಿ ಈ ಎಲ್ಲಾ ಹಗರಣಗಳಿಂದಾಗಿ ಕೆಪಿಎಸ್ ಸಿ ಮೇಲೆ ನಂಬಿಕೆ ಇಲ್ಲವಾಗಿದೆ. ಕೆಪಿಎಸ್ ಸಿ ಆಯ್ಕೆ ಪ್ರಕ್ರಿಯೆಯ ಸುಧಾರಣೆಗಾಗಿ ಪಿಸಿ ಹೋಟಾ ಸಮಿತಿ ವರದಿ ಕೊಟ್ಟಿದೆಯಾದರೂ ಅವುಗಳ ಅನುಷ್ಠಾನವನ್ನು ಬೇಕೆಂತಲೇ ಜಾರಿಗೆ ತರಲಾಗಿಲ್ಲ.
ವಿರೋಧ ಪಕ್ಷವಾದ ಬಿಜೆಪಿ ಕೆಪಿಎಸ್ ಸಿ ಯಲ್ಲಿ ನಡೆದ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತಿದೆ. ಆದರೆ ಈ ಸಾಹುಕಾರ KPSC ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಿಜೆಪಿಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ. 2019 ರಲ್ಲಿ ಯಡಿಯೂರಪ್ಪನವರ ಸರಕಾರ ಇದ್ದಾಗ ಇದೇ ಶಿವಶಂಕರಪ್ಪ KPSC ಗೆ ಸದಸ್ಯರಾಗಿ ನೇಮಕವಾಗಿದ್ದರು. ಹಿಂದಿನ ಅಧ್ಯಕ್ಷರಾಗಿದ್ದ ಷಡಕ್ಷರಿ ಸ್ವಾಮಿಯವರು ನಿವೃತ್ತರಾದ ನಂತರ ಯಡಿಯೂರಪ್ಪನವರ ಶಿಫಾರಸ್ಸಿನ ಮೇಲೆ ರಾಜ್ಯಪಾಲರು 2021 ಎಪ್ರಿಲ್ 4 ರಂದು ಶಿವಶಂಕರಪ್ಪ ಸಾಹುಕಾರ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದರು.
ಈ ಭ್ರಷ್ಟ ಶಿವಶಂಕರಪ್ಪ ಸಾಹುಕಾರ ವಿರುದ್ಧ ಹರಿಹಾಯ್ದು ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುತ್ತಿರುವ ಬಿಜೆಪಿಗರಿಗೆ ಹಾಗೆ ಆರೋಪಿಸುವ ನೈತಿಕತೆಯೇ ಇಲ್ಲವಾಗಿದೆ. ಯಾಕೆಂದರೆ ಈ ಮಹಾಭ್ರಷ್ಟನನ್ನು ಬಿಜೆಪಿ ಸರಕಾರವೇ ಶಿಫಾರಸ್ಸು ಮಾಡಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕಾಂಗ್ರೆಸ್ಸಿಗರು ಬಿಜೆಪಿಯನ್ನು ಪ್ರಶ್ನಿಸಿದ ತಕ್ಷಣ ಬಿಜೆಪಿಗರು KPSC ಭ್ರಷ್ಟಾಚಾರದ ಬಗ್ಗೆ ಆಕ್ಷೇಪಿಸುತ್ತಾರೆ. ಹೀಗೆ ಆರೋಪ ಪ್ರತ್ಯಾರೋಪಗಳ ನಡುವೆ ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಹುದ್ದೆಯ ಆಕಾಂಕ್ಷಿಯಾದವರಿಗೆ ತೀವ್ರ ಹತಾಶೆಯಾಗಿದೆ.
ಇಡೀ ವ್ಯವಸ್ಥೆ ಈಗ ಭ್ರಷ್ಟಾಚಾರದಿಂದ ತತ್ತರಿಸಿದೆ. ಲಂಚವಿಲ್ಲದೆ ಯಾವ ಕೆಲಸವೂ ಆಗದಂತಹ ದುಸ್ಥಿತಿಗೆ ಸರಕಾರಿ ವ್ಯವಸ್ಥೆ ತಲುಪಿದೆ. ಲಂಚಕೊಟ್ಟು ಅಕ್ರಮವಾಗಿ ಸರಕಾರಿ ಹುದ್ದೆಗೆ ಆಯ್ಕೆಯಾದವರು ಲಂಚ ಪಡೆಯುವ ಮೂಲಕವೇ ಅಕ್ರಮ ಹಣ ಸಂಪಾದನೆಯಲ್ಲಿ ನಿರತರಾಗುತ್ತಾರೆ. ಸರಕಾರಿ ವ್ಯವಸ್ಥೆಯಲ್ಲಿ ಲಂಚ ಎನ್ನುವುದು ಹಾಸುಹೊಕ್ಕಾಗಿದ್ದು ಪ್ರಾಮಾಣಿಕತೆ ಎನ್ನುವುದು ಅಪರೂಪದಲ್ಲಿ ಅಪರೂಪ ಎನ್ನುವಂತಾಗಿದೆ. ಈ ಭ್ರಷ್ಟಾಚಾರದ ಮೂಲ ಬೇರು ಇರುವುದೇ ಕೆಪಿಎಸ್ ಸಿ ಆಯ್ಕೆ ಪ್ರಕ್ರಿಯೆಯಲ್ಲಿ. ಮೊದಲು ಈ ಮೂಲದ ಮೂಲವ್ಯಾಧಿಗೆ ಚಿಕಿತ್ಸೆ ಕೊಡಬೇಕಿದೆ. ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಲಂಚಾವತಾರಕ್ಕೆ ಮದ್ದರೆಯುವವರು ಯಾರು ಎನ್ನುವುದೇ ಪ್ರಶ್ನೆ. ಕಳ್ಳ ಬೆಕ್ಕುಗಳೇ ಆಯಕಟ್ಟಿನ ಜಾಗದಲ್ಲಿ ಜಂಡಾ ಹೂಡಿರುವಾಗ ಭ್ರಷ್ಟ ಬೆಕ್ಕುಗಳಿಗೆ ಗಂಟೆ ಕಟ್ಟುವವರು ಯಾರು? ಭ್ರಷ್ಟ ವ್ಯವಸ್ಥೆಯನ್ನು ಸುಧಾರಿಸುವವರು ಯಾರು?
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ– https://kannadaplanet.com/when-fanaticism-strikes-again/ ಮತಾಂಧತೆ ಮತ್ತೇರಿದಾಗ…


