ಮಹಾತ್ಮರ ಹಾದಿಯಲ್ಲಿನ ಮಹನೀಯರು …

ತಮ್ಮ ವಿನೂತನ ಮಾದರಿಯ ಅಹಿಂಸಾ ಚಳವಳಿಯ ಮೂಲಕ ಇಡೀ ಜಗತ್ತಿಗೆ ಹೋರಾಟದ ಹೊಸ ಹಾದಿಯನ್ನು ರೂಪಿಸಿ ಕೊಟ್ಟಿರುವ ಮಹಾತ್ಮರ  ಜನ್ಮ ದಿನದಂದು  ಅವರ ಜಾಗತಿಕ ಕೊಡುಗೆಯ ಮೂಲಕ ವಿಭಿನ್ನವಾಗಿ ನೋಡುವ ಪ್ರಯತ್ನವನ್ನು  ಈ ಲೇಖನದಲ್ಲಿ ಮಾಡಿದ್ದಾರೆ ವಾರ್ತಾ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್. 

ಅಕ್ಟೋಬರ್ 2‌, 1869. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನ . ಆಗಿನ ಗುಜರಾತ್ ಪ್ರಾಂತ್ಯದ ಪೋರ್ ಬಂದರ್ ಎಂಬ ಪುಟ್ಟ ಪಟ್ಟಣದಲ್ಲಿ ಜನಿಸಿದ ಮೋಹನ ದಾಸ ಕರಮ ಚಂದ ಗಾಂಧಿ ಇಂದು ಮಹಾತ್ಮ ಗಾಂಧಿ ಎನ್ನುವ ಹೆಸರಿನಿಂದ ವಿಶ್ವ ಮಾನ್ಯರಾಗಿದ್ದಾರೆ.

ಗಾಂಧೀಜಿಯವರು ನಾವು ನೀವೆಲ್ಲಾ ಎಣಿಸಿರುವಂತೆ ಕೇವಲ ಭಾರತದ ನಾಯಕರಲ್ಲ. ಅವರು ಇಪ್ಪತ್ತನೇ ಶತಮಾನದ ಒಂದು ಜಾಗತಿಕ ವಿದ್ಯಮಾನ. ಈ ಜಗತ್ತಿಗೆ ಅವರು ನೀಡಿರುವ ಕೊಡುಗೆಗೆ ಮೌಲ್ಯವನ್ನು ಕಟ್ಟಲಾಗದು. ಆದರೂ ಅವರ ಜಾಗತಿಕ ಕೊಡುಗೆಯನ್ನು ವಿಶ್ವ ಸಂಸ್ಥೆಯು ಮಾನ್ಯ ಮಾಡಿ ಗಾಂಧೀಜಿಯವರ  ಜನ್ಮ ದಿನವಾದ ಅಕ್ಟೋಬರ್ ಎರಡನೇ ತಾರೀಖನ್ನು ‘ ವಿಶ್ವ ಅಹಿಂಸಾ ದಿನಾಚರಣೆ ‘ ಎಂದು ಘೋಷಣೆ ಮಾಡಿ ತನ್ನ ಗೌರವವನ್ನು ಸಮರ್ಪಿಸಿದೆ . 

 ಈಗಾಗಲೇ ಹೇಳಿರುವಂತೆ ಗಾಂಧೀಜಿಯವರು ಈಗ ಒಂದು ಐತಿಹಾಸಿಕ ವಿದ್ಯಮಾನವಾಗಿದ್ದಾರೆ. ಜಗತ್ತಿನಾದ್ಯಂತ ಅವರ ಪ್ರಭಾವಳಿ ಬೆಳಗುತ್ತಿದೆ. ನೀವು ಜಗತ್ತಿನ ಯಾವ ಕಡೆಗೆ ಕಣ್ಣು ಹಾಯಿಸಿದರೂ ಅವರ ಪ್ರತಿಮೆಗಳು ಕಾಣುತ್ತವೆ. ಒಂದು ಕುತೂಹಲದ ಮಾಹಿತಿಯಂತೆ ಪ್ರಪಂಚದ 102 ದೇಶಗಳಲ್ಲಿ ಗಾಂಧಿ ಪ್ರತಿಮೆ ಮತ್ತು ಸ್ಮಾರಕಗಳಿವೆ. 82 ದೇಶಗಳಲ್ಲಿ ಆಳೆತ್ತರದ ಪೂರ್ಣ ಪ್ರತಿಮೆಗಳಿವೆ. 20  ರಾಷ್ಟ್ರಗಳಲ್ಲಿ ಎದೆ ಮಟ್ಟದ ( bust ) ಪ್ರತಿಮೆಗಳಿವೆ. ಗಾಂಧಿ ಒಮ್ಮೆಯೂ ಭೇಟಿ ನೀಡದಿದ್ದ ಅಮೆರಿಕಾ ದೇಶದಲ್ಲಿಯೇ  ಅತಿ ಹೆಚ್ಚು ಗಾಂಧಿ ಪ್ರತಿಮೆಗಳಿರುವುದು ಅಚ್ಚರಿಯ ಸಂಗತಿ. ಅಮೇರಿಕಾದ  ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ , ಕ್ಯಾಲಿಫೋರ್ನಿಯಾ, ಆಸ್ಟ್ರೇಲಿಯಾದ ಮೆಲ್ಬೋರ್ನ್, ಚೀನಾದ ರಾಜಧಾನಿ ಬೀಜಿಂಗ್, ಜಪಾನ್ ದೇಶದ ಹಿರೋಷಿಮಾ,  ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಗಾಂಧಿ ಪ್ರತಿಮೆಗಳಿವೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ,  ಗಾಂಧೀಜಿ ಯಾವ ಬ್ರಿಟನ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡಿದರೋ ಅದೇ ಇಂಗ್ಲೆಂಡ್ ದೇಶದ ರಾಜಧಾನಿ ಲಂಡನ್ ನಗರದ ಪಾರ್ಲಿಮೆಂಟ್ ಭವನದ ಎದುರುಗಡೆ ಇರುವ ಚೌಕದಲ್ಲಿ ಆಳೆತ್ತರದ ಗಾಂಧಿ ಪ್ರತಿಮೆಯನ್ನು ಬ್ರಿಟಿಷರೇ ಪ್ರತಿಷ್ಠಾಪಿಸಿದ್ದಾರೆ. .ಇದು ಗಾಂಧೀಜಿಯವರ  ವ್ಯಕ್ತಿತ್ವದ ಶಕ್ತಿ ಮತ್ತು ಸಾಮರ್ಥ್ಯ .

ಅಮೇರಿಕಾದಲ್ಲಿ  ಕಪ್ಪುಜನರ ಗುಲಾಮಗಿರಿ ಪದ್ಧತಿಯನ್ನು  ಅಂತ್ಯಗೊಳಿಸಿದ ಅಬ್ರಹಾಂ ಲಿಂಕನ್ನರ ಪ್ರತಿಮೆಯನ್ನು ನೀವು ಅಮೇರಿಕದಲ್ಲಿ  ನೋಡ ಬಹುದು. ದಕ್ಷಿಣ ಆಫ್ರಿಕಾದ ಮಹಾ ನಾಯಕ ನೆಲ್ಸನ್ ಮಂಡೇಲಾರ ಪ್ರತಿಮೆಗಳು ದಕ್ಷಿಣ ಆಫ್ರಿಕಾದಲ್ಲಿ ಕಾಣುತ್ತೇವೆ. ಅಮೇರಿಕಾದ ಕಪ್ಪು ಜನರ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಪ್ರತಿಮೆಗಳನ್ನು ಅಮೇರಿಕಾದಲ್ಲಿ ಕಾಣಬಹುದು. ಹೀಗೆ ವಿಶ್ವದ ಯಾವುದೇ ಮಹಾ ನಾಯಕರುಗಳ ಪ್ರತಿಮೆಗಳನ್ನು ಆಯಾ ದೇಶದಲ್ಲಿ ಮಾತ್ರ ನೋಡ ಬಹುದು . ಆದರೆ ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ನೀವು ವಿಶ್ವಾದ್ಯಂತ ನೋಡ ಬಹುದು. ಇದು ಭಾರತೀಯರಾದ ನಾವೆಲ್ಲರೂ ಹೆಮ್ಮೆ  ಪಡಬೇಕಾದ ವಿಷಯ. ಇದು ವಿಶ್ವ ನಾಯಕ ಮಹಾತ್ಮ ಗಾಂಧಿಯವರ ಹಿರಿಮೆ . 

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿನ ವಕೀಲ ಗಾಂಧಿ ಪ್ರತಿಮೆ .

ಹುತಾತ್ಮರಿಗೆ ವಿಶ್ವ ಮನ್ನಣೆ :

ಜನವರಿ 30. .1948. ಮಹಾತ್ಮ ಗಾಂಧಿ ಹುತಾತ್ಮರಾದ ದಿನ. ಅಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ನ್ಯೂಯಾರ್ಕ್ ನಲ್ಲಿ ಭದ್ರತಾ ಸಮಿತಿಯ ಸಭೆಯಲ್ಲಿ  ಪಾಕಿಸ್ತಾನ ಮತ್ತು ಕಾಶ್ಮೀರ ಗಡಿ ವಿವಾದದ ಚರ್ಚೆ ನಡೆದಿರುತ್ತದೆ. ಈ ನಡುವೆ ಗಾಂಧಿಯವರ ಹತ್ಯೆಯ ಸುದ್ದಿ ಅಲ್ಲಿಗೆ ತಲುಪುತ್ತದೆ..ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಕೂಡಲೇ ಚರ್ಚೆಯನ್ನು ಅಲ್ಲಿಗೇ ನಿಲ್ಲಿಸಿ 30  ಸೆಕೆಂಡುಗಳ  ಮೌನಾಚರಣೆ ಮಾಡಿ ಹುತಾತ್ಮರಾದ ಗಾಂಧಿಯವರಿಗೆ ವಿಶ್ವ ಸಂಸ್ಥೆಯ  ಗೌರವ ಸಲ್ಲಿಸುತ್ತಾರೆ. ಇದರ ಜೊತೆಗೆ ವಿಶ್ವಸಂಸ್ಥೆಯು ತನ್ನ ಅಧಿಕೃತ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಿ ಇತಿಹಾಸ ನಿರ್ಮಾಣದ ಇನ್ನೊಂದು ಗೌರವವನ್ನು  ಗಾಂಧೀಜಿಯವರಿಗೆ ಅರ್ಪಿಸುತ್ತದೆ.  ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರದ ಅಧ್ಯಕ್ಷರು ಅಥವಾ ಪ್ರಧಾನ ಮಂತ್ರಿಗಳು ನಿಧನರಾದಾಗ ಆ ದೇಶದ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಿ ಗೌರವ ಸಲ್ಲಿಸುವುದು ವಿಶ್ವ ಸಂಸ್ಥೆಯ ನಿಯಮ. ಆದರೆ ಯಾವುದೇ ಅಧಿಕೃತ ರಾಜತಾಂತ್ರಿಕ ಹುದ್ದೆ ಅಥವಾ ದೇಶದ ಅಧ್ಯಕ್ಷ , ಪ್ರಧಾನಿಯಾಗಿಲ್ಲದ ವ್ಯಕ್ತಿಯೊಬ್ಬರಿಗೆ ಇಂಥ ಅತ್ಯುನ್ನತ ಗೌರವ ನೀಡಿದ್ದು ವಿಶ್ವಸಂಸ್ಥೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆದ ಘಟನೆಯಾಗಿತ್ತು . 

ಗಾಂಧೀಜಿಯವರು ಹೀಗೆ ಜಗತ್ತಿನಾದ್ಯಂತ ಜನಮನ್ನಣೆ ಗಳಿಸಲು ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು ಭಾರತದ  ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು  ಆರಿಸಿಕೊಂಡಿದ್ದ ಅಹಿಂಸಾ ಮಾದರಿಯ ಚಳವಳಿ. ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ  ಹೆಸರಾಗಿದ್ದ  ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಗಾಂಧೀಜಿ ವಿಶಿಷ್ಟವಾದ ಅಹಿಂಸಾ ಮಾರ್ಗದ ಚಳವಳಿ ರೂಪಿಸಿದರು. ಈ ಚಳವಳಿಯ ಮೂಲಕ ಯಾವುದೇ ಹಿಂಸೆ, ರಕ್ತಪಾತವಿಲ್ಲದೆ ಬ್ರಿಟಿಷರ ಮನವೊಲಿಸಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿ ಕೊಟ್ಟರು . ಇದು ಜಗತ್ತಿನ ಚರಿತ್ರೆಯಲ್ಲಿ ಅಪರೂಪದ ಇತಿಹಾಸವಾಗಿ ದಾಖಲಾಗಿದೆ.  

ಭಾರತಕ್ಕೆ 1947 ರಲ್ಲಿ ಗಾಂಧೀಜಿಯವರ ಅಹಿಂಸಾ ಹೋರಾಟದ ಮೂಲಕ ಸ್ವಾತಂತ್ರ್ಯ ದೊರಕಿದ ತರುವಾಯ ಏಷ್ಯಾ ಮತ್ತು ಆಫ್ರಿಕಾ ಖಂಡದ ಹಲವಾರು ದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿತು. ಆ ದೇಶಗಳೆಲ್ಲವೂ ಗಾಂಧೀಜಿಯವರ ಅಹಿಂಸಾ ಮಾದರಿಯ ಚಳವಳಿಗಳನ್ನು  ಅನಿವಾರ್ಯವಾಗಿ ಅಪ್ಪಿಕೊಂಡು ಮುನ್ನಡೆದವು.  ಅದರಲ್ಲಿ ಯಶಸ್ವಿಯೂ ಆಗಿ ಅನೇಕ ದೇಶಗಳು ಸ್ವಾತಂತ್ರ್ಯ ಗಳಿಸಿ ಕೊಂಡವು. 1948 ರಲ್ಲಿ ನೆರೆಯ ಶ್ರೀಲಂಕಾ, ಬರ್ಮಾ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದುಕೊಂಡವು. 1960 ರಲ್ಲಿ ಆಫ್ರಿಕಾ ಖಂಡದ ನೈಜೀರಿಯಾ, ಕಾಂಗೋ ಸೇರಿದಂತೆ ಸುಮಾರು 17  ಸಣ್ಣ ಪುಟ್ಟ ರಾಷ್ಟ್ರಗಳು ದಾಸ್ಯದಿಂದ ಮುಕ್ತವಾದವು. 1962  ರಲ್ಲಿ ಜಮೈಕಾ, ಕಿನ್ಯಾ ರಾಷ್ಟ್ರಗಳು ಸ್ವತಂತ್ರವಾದವು. 1965 ರಲ್ಲಿ ಸಿಂಗಪುರ ಸ್ವತಂತ್ರವಾಯಿತು. ಈ ಎಲ್ಲ ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟಕ್ಕೆ  ಗಾಂಧೀಜಿಯವರ ಅಹಿಂಸಾ ಮಾದರಿಯ ಹೋರಾಟವೇ ಸ್ಫೂರ್ತಿಯಾಯಿತು ಎನ್ನುವುದನ್ನು ಇತಿಹಾಸ ಗುರುತಿಸಿದೆ . 

ಗಾಂಧೀಜಿ ತಮ್ಮ ತಾರುಣ್ಯದ ದಿನಗಳಲ್ಲಿ ವಕೀಲರಾಗಿ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾಗ ಅಲ್ಲಿನ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯ ವಿರುದ್ಧ ಸತ್ಯಾಗ್ರಹದ ಹೆಸರಿನಲ್ಲಿ ಅಹಿಂಸಾ ಮಾರ್ಗದ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು. ಇದು ಗಾಂಧೀಜಿಯವರನ್ನು ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿತು. ಇದರ ಮುಂದುವರಿಕೆಯಾಗಿ ಗಾಂಧೀಜಿ ಭಾರತಕ್ಕೆ ಆಗಮಿಸಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ಮುನ್ನಡೆಸಿದರು. ಇದರ ಜೊತೆ ಜೊತೆಯಲ್ಲೇ ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆಯಂಥ ಅನಿಷ್ಟ ಪದ್ಧತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜ ಸುಧಾರಣೆ ಎರಡನ್ನೂ ಜೊತೆ ಜೊತೆಯಾಗಿ ಮುನ್ನಡೆಸಿದರು. ಭಾರತದ ಜನ ಸಾಮಾನ್ಯರೆಲ್ಲರನ್ನೂ ಒಗ್ಗೂಡಿಸಿ ಅಹಿಂಸಾ ಮಾರ್ಗದ ಚಳವಳಿಯ ಮೂಲಕ ರಕ್ತಪಾತವಿಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟರು. ಈ ಚಳವಳಿಯ ಯಶಸ್ಸು ಗಾಂಧೀಜಿಯವರಿಗೆ ಜಾಗತಿಕ ಮನ್ನಣೆ ದೊರಕಿಸಿತು. ಗಾಂಧಿ ಜಗದ್ವಿಖ್ಯಾತರಾದರು . 

ಗಾಂಧಿಯವರನ್ನು ರೈಲಿನಿಂದ ದೂಡಿದ ಪೀಟರ್ ಮ್ಯಾರಿಟ್ ಬರ್ಗ್ ರೈಲ್ವೆ ನಿಲ್ದಾಣದಲ್ಲಿರುವ ವಕೀಲ ಗಾಂಧಿ ಮತ್ತು ರಾಷ್ಟ್ರ ನಾಯಕ ಗಾಂಧಿ ಪ್ರತಿಮೆ

ಗಾಂಧಿ ಮಾರ್ಗದಲ್ಲಿ ನಡೆದ ಮಹನೀಯರು …

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ : 

ಗಾಂಧೀಜಿಯವರ ಅಹಿಂಸಾ  ಚಳವಳಿಯ ಪ್ರಭಾವಳಿ ಜಗತ್ತಿನಾದ್ಯಂತ ಬೆಳಗಿರುವುದಕ್ಕೆ ಹಲವಾರು ಉದಾಹರಣೆಗಳಿವೆ. ಅಬ್ರಹಾಂ ಲಿಂಕನ್ನರು ಅಮೇರಿಕಾದಲ್ಲಿ ಗುಲಾಮಿ ಪದ್ಧತಿಯನ್ನು ರದ್ದುಗೊಳಿಸಿದ ನಂತರವೂ ಅಲ್ಲಿ ಕಪ್ಪುಜನರು ಮತ್ತು ಬಿಳಿಯರ ನಡುವೆ ತಾರತಮ್ಯ ಮುಂದುವರಿದಿತ್ತು.  ಕಪ್ಪು ಜನರಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ, ಪ್ರತ್ಯೇಕ ಶಿಕ್ಷಣದಂತಹ  ಕಠೋರ ಅಸಮಾನತೆಯ ವ್ಯವಸ್ಥೆಯಿತ್ತು. ಇದರ ವಿರುದ್ಧ ಗಾಂಧಿ ಮಾರ್ಗದಲ್ಲಿ ಹೋರಾಟ ರೂಪಿಸಿದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಗಾಂಧಿಯವರನ್ನು ಹೀಗೆ ಬಣ್ಣಿಸುತ್ತಾರೆ – “ ಏಸು ಕ್ರಿಸ್ತರು ನಮಗೆ ಹೋರಾಟದ ಉದ್ದೇಶ ಮತ್ತು ಸ್ಪೂರ್ತಿಯನ್ನು ನೀಡಿದರೆ ಗಾಂಧೀಜಿ ಅದಕ್ಕೆ ಬೇಕಾದ ಕಾರ್ಯ ವಿಧಾನ, ಮಾರ್ಗಗಳನ್ನು ರೂಪಿಸಿ ಕೊಟ್ಟರು“.  ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಗಾಂಧಿ ಮತ್ತು ಭಾರತದ ಮೇಲೆ ಅಪಾರ ಅಭಿಮಾನ. ಅದಕ್ಕಾಗಿಯೇ ಅವರು 1959 ರಲ್ಲಿ ಭಾರತಕ್ಕೆ ಆಗಮಿಸಿ ಗಾಂಧೀಜಿಯವರ ಸ್ಮರಣೀಯ ಸ್ಥಳಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಇವರನ್ನು ಅಮೇರಿಕಾದ ಕಪ್ಪು ಜನ ಅಭಿಮಾನದಿಂದ ‘ ಅಮೇರಿಕಾದ  ಗಾಂಧಿ ‘  ಎಂದೇ ಕರೆಯುತ್ತಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರವನ್ನು ಪಡೆದಿರುವ ಕಿಂಗ್ ಅವರು ಇಪ್ಪತ್ತನೇ ಶತಮಾನದ ಜಾಗತಿಕ ನಾಯಕರ ಪಟ್ಟಿಯಲ್ಲಿದ್ದಾರೆ  . 

ನೆಲ್ಸನ್ ಮಂಡೇಲಾ : 

ದಕ್ಷಿಣ ಆಫ್ರಿಕಾದ ಕಪ್ಪು ಜನರ ನಾಯಕ ನೆಲ್ಸನ್ ಮಂಡೇಲಾ ಅವರು ಗಾಂಧೀಜಿಯ ಪರಮ ಅಭಿಮಾನಿ. ದಕ್ಷಿಣ ಆಫ್ರಿಕಾದ ಬಿಳಿಯರ ಸರಕಾರ ಇವರನ್ನು ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆಯಲ್ಲಿ  ಇಟ್ಟಿರುತ್ತದೆ. ಅದರಲ್ಲಿ ಹದಿನೆಂಟು ವರ್ಷಗಳ ಕಾಲ ಅವರನ್ನು ರಾಬಿನ್ ದ್ವೀಪದ ಸೆರೆಮನೆಯ ಪುಟ್ಟ ಕೋಣೆಯಲ್ಲಿ ಕಠಿಣ ಬಂಧನದಲ್ಲಿ  ಇಡಲಾಗಿರುತ್ತದೆ. ದಕ್ಷಿಣ ಆಫ್ರಿಕಾದಲ್ಲಿನ  ಬ್ರಿಟಿಷ್ ಸರ್ಕಾರದ   ವರ್ಣಬೇಧ ನೀತಿಯ ವಿರುದ್ಧ ಮಹಾತ್ಮ ಗಾಂಧೀಜಿಯವರು 1900 ನೇ ದಶಕದಲ್ಲಿ 

ಅಹಿಂಸಾತ್ಮಕ ಸತ್ಯಾಗ್ರಹ ಚಳವಳಿಯನ್ನು ರೂಪಿಸಿ ಯಶಸ್ಸು ಗಳಿಸಿರುತ್ತಾರೆ. ಇದನ್ನು ಗಮನಿಸಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ಆಫ್ರಿಕಾ ನ್ಯಾಷನಲ್ ಕಾಂಗ್ರೆಸ್ ಪಕ್ಷದಲ್ಲಿ ಗಾಂಧೀಜಿಯವರ ಪರಿಕಲ್ಪನೆಯನ್ನು  ಅನುಷ್ಠಾನಗೊಳಿಸಿ 1994 ರ ಚುನಾವಣೆಯಲ್ಲಿ ಜಯಶೀಲರಾಗಿ ದಕ್ಷಿಣ ಆಫ್ರಿಕಾ ದೇಶದ ಪ್ರಪ್ರಥಮ ಕಪ್ಪು ಜನರ ಅಧ್ಯಕ್ಷರಾಗುತ್ತಾರೆ. ಭಾರತ ಸರ್ಕಾರವು ಮಂಡೇಲಾರಿಗೆ  1990 ರಲ್ಲಿ ‘ಭಾರತ ರತ್ನ‘ ಪುರಸ್ಕಾರವನ್ನೂ ನೀಡಿ ಗೌರವಿಸುತ್ತದೆ. ಮಂಡೇಲರನ್ನು ‘ ದಕ್ಷಿಣ ಆಫ್ರಿಕಾದ ಗಾಂಧಿʼ ಎಂದು ಅಲ್ಲಿ ಅಭಿಮಾನದಿಂದ ಕರೆಯುತ್ತಾರೆ.   ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರವೂ ಸಹ ಇವರಿಗೆ ಸಿಕ್ಕಿದೆ . 

ಬರಾಕ್ ಒಬಾಮ :

ಅಮೇರಿಕಾದ ಮಾಜಿ ಅಧ್ಯಕ್ಷ ಆಪ್ರೋ ಅಮೇರಿಕನ್ ಜನರ ನಾಯಕ ಬರಾಕ್ ಒಬಾಮ ಕೂಡಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ತಮ್ಮ ವ್ಯಕ್ತಿತ್ವ ರೂಢಿಸಿಕೊಂಡವರು. ತಮ್ಮ ಮೇಲೆ ಆಗಿರುವ ಗಾಂಧಿ ಪ್ರಭಾವವನ್ನು ಅಮೆರಿಕದ ಅಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿಯೇ ಅವರು  ಘೋಷಿಸಿಕೊಂಡರು. “ ನನ್ನ ಜೀವನದಲ್ಲಿ ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಒಂದು ದೊಡ್ಡ ಸ್ಪೂರ್ತಿಯಾಗಿ ನೋಡುತ್ತೇನೆ. ಏಕೆಂದರೆ, ಸಾಮಾನ್ಯ ಜನರು ಒಟ್ಟಾಗಿ ಸೇರಿದಾಗ ಎಷ್ಟು ಅಸಾಧಾರಣವಾದ ಬದಲಾವಣೆಯನ್ನು ತರಬಹುದು ಎನ್ನುವುದಕ್ಕೆ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ.  ಭಾರತದ ಜೊತೆ ನನ್ನ ಭಾಂದವ್ಯ ಮಹಾತ್ಮ ಗಾಂಧಿಯವರ ಜೊತೆಗಿದೆ. ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್, ಮತ್ತು ನೆಲ್ಸನ್ ಮಂಡೇಲಾರ ಜೊತೆ ನನ್ನ ಚಿಂತನೆಗಳನ್ನು ಗಾಂಧಿ ದಿಟ್ಟವಾಗಿ ಪ್ರಭಾವಿಸಿದ್ದಾರೆ. ನನ್ನ ತಾರುಣ್ಯದ ದಿನಗಳಲ್ಲಿ ನಾನು ಗಾಂಧಿಯವರ ಬರಹಗಳನ್ನು ಅಧ್ಯಯನ ಮಾಡಿದೆ. ನನ್ನ ಆಳವಾದ ಸ್ವಭಾವ, ಪ್ರವೃತ್ತಿ, ಸಹಜ ವರ್ತನೆಗಳ ಮೇಲೆ ಗಾಂಧಿಯವರ ದಟ್ಟ ಪ್ರಭಾವವಿದೆ “ ಎಂದು ಬರಾಕ್ ಒಬಾಮ ಅವರೇ ಹೇಳಿಕೊಂಡಿದ್ದಾರೆ. ಬರಾಕ್ ಒಬಮಾ ಅವರು ಸಹ 2009 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ

ಆಂಗ್ ಸ್ಯಾನ್  ಸೂಕಿ : 

ಆಂಗ್ ಸ್ಯಾನ್ ಸೂಕಿ 

ಬರ್ಮಾದ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಸತತವಾಗಿ ಹೋರಾಡಿ ಯಶಸ್ವಿಯಾದ ದಿಟ್ಟ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂಕಿ  ತಮ್ಮ ಹೋರಾಟಕ್ಕೆ ಗಾಂಧಿಯವರನ್ನೇ ಸ್ಪೂರ್ತಿಯ ಸೆಲೆಯನ್ನಾಗಿಸಿ ಕೊಂಡವರು. ಬರ್ಮಾದ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಆಂಗ್ ಸ್ಯಾನ್ ಅವರ ಪುತ್ರಿಯಾದ  ಆಂಗ್ ಸ್ಯಾನ್ ಸೂಕಿಗೆ ಭಾರತದ ಜೊತೆ ಒಳ್ಳೆಯ ಒಡನಾಟವಿದೆ. ದೆಹಲಿ ವಿಶ್ವ ವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದ ಈಕೆ ನಂತರ ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಪದವಿ ಕಲಿತಿದ್ದಾರೆ. ಸುಮಾರು 15  ವರ್ಷಗಳ ಕಾಲ ಗೃಹ ಬಂಧನದಲ್ಲಿ ಇದ್ದರೂ ಹೋರಾಟದ ಕೆಚ್ಚನ್ನು ಉಳಿಸಿಕೊಂಡು 2016 ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಬರ್ಮಾ ದೇಶವನ್ನು ಶಾಂತಿಯ ಹಾದಿಯಲ್ಲಿ ಮುನ್ನಡೆಸಿದವರು.

ಗಾಂಧೀಜಿಯವರ ಅಹಿಂಸೆ ಮತ್ತು ಅಸಹಕಾರ ಚಳವಳಿಯಲ್ಲಿ ನಂಬುಗೆ ಇಟ್ಟು ಕೊಂಡಿದ್ದ ಆನ್ ಸ್ಯಾಂಗ್ ಸೂಕಿ ಗಾಂಧಿ ತತ್ವಗಳ ಜೊತೆ ಬುದ್ಧ ಗುರುವಿನ ಚಿಂತನೆಗಳನ್ನು ಸಮನ್ವಯಗೊಳಿಸಿದವರು. ಗಾಂಧಿಯವರ ರಾಜಕೀಯ ಚಿಂತನೆಗೆ ಪ್ರೇರಣೆಯಾಗಿದ್ದ ಅಮೇರಿಕಾದ ಚಿಂತಕ ಡೇವಿಡ್ ಹೆನ್ರಿ ಥೋರೋ ಅವರ ಚಿಂತನೆಗಳನ್ನು ಸೂಕಿ ಅಧ್ಯಯನ ಮಾಡಿ ಸರಳ ಜೀವನ ಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಿದರು. ‘ ಫ್ರೀಡಂ ಫ್ರಮ್ ಫಿಯರ್ ‘ ಎನ್ನುವ ಇವರ ಚಿಂತನೆ ಈಗಿನ ರಾಜಕೀಯ ವ್ಯವಸ್ಥೆಗೆ ಹಿಡಿದಿರುವ ಕನ್ನಡಿಯಾಗಿದೆ. ಕೇವಲ ಅಧಿಕಾರವಷ್ಟೇ ಆಡಳಿತದಲ್ಲಿ  ಭ್ರಷ್ಟಾಚಾರವನ್ನು ತರುವುದಿಲ್ಲ. ಅಧಿಕಾರವನ್ನು ಕಳೆದುಕೊಳ್ಳುತ್ತೇವೆ ಎನ್ನುವ ಭಯವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತದೆ ಎನ್ನುವುದು ಇವರ ಹೊಸ ಚಿಂತನೆ. ತಮ್ಮ 45ನೇ ವಯಸ್ಸಿನಲ್ಲೇ  1991 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು . 

ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದು ಈ ನಾಲ್ವರು ಮಹನೀಯರ ಜೀವನ ಸಾಧನೆಯನ್ನು ಪರಿಚಯಿಸಲು ಸಾಕಷ್ಟು ಕಾರಣಗಳಿವೆ. ಯಾವಾಗಲೂ ಮಹಾತ್ಮರು ತಾವೊಬ್ಬರೇ ಮಹಾತ್ಮರಾಗುವುದಿಲ್ಲ. ತಮ್ಮ ಹಾದಿಯಲ್ಲಿ ನಡೆದು ಮಹಾತ್ಮರಾಗಲು ಹಲವು ಮಹನೀಯರಿಗೆ ಹಾದಿ ರೂಪಿಸಿ ಕೊಡುತ್ತಾರೆ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಬರಾಕ್ ಒಬಾಮ, ಆಂಗ್ ಸ್ಯಾನ್ ಸೂಕಿ  ಇವರೆಲ್ಲ ಮಹಾತ್ಮ ಗಾಂಧೀಜಿಯವರು ರೂಪಿಸಿಕೊಟ್ಟಿರುವ  ಅಹಿಂಸೆಯ ಹಾದಿಯಲ್ಲಿ ನಡೆದು ಯಶಸ್ಸು ಗಳಿಸಿದವರು . 

ಮಹಾತ್ಮ ಗಾಂಧೀಜಿಯವರ ಹಾದಿಯಲ್ಲಿ ನಡೆದವರು ನೊಬೆಲ್ ಶಾಂತಿ ಪ್ರಶಸ್ತಿಗೆ ಪುರಸ್ಕೃತರಾದರು. ಆದರೆ ಗಾಂಧೀಜಿಯವರಿಗೆ ನೊಬೆಲ್ ಪುರಸ್ಕಾರ ಸಿಗಲಿಲ್ಲ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಬಹುಶಃ ಗಾಂಧಿ ನಮ್ಮ ಪುರಸ್ಕಾರವನ್ನು ಮೀರಿದ  ಅತೀ ಎತ್ತರದ ಘನತೆಯ ವ್ಯಕ್ತಿತ್ವ ಎಂದು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯವರಿಗೆ ಅನ್ನಿಸಿರಬಹುದು. ನೊಬೆಲ್ ಪ್ರಶಸ್ತಿಯಿಂದ ಗಾಂಧೀಜಿಯವರ ಘನತೆಯನ್ನು ಅಳೆಯಬಾರದು ಎನ್ನುವ ವಿವೇಕವೂ ಗಾಂಧಿಯವರಿಗೆ ನೊಬೆಲ್ ಪ್ರಶಸ್ತಿ ನೀಡದೇ ಇರುವುದಕ್ಕೆ ಕಾರಣವೂ ಇರಬಹುದು. ಆದರೇನಂತೆ ;  ಮಾರ್ಟಿನ್ ಲೂಥರ್ ಕಿಂಗ್ , ನೆಲ್ಸನ್ ಮಂಡೇಲಾ , ಬರಾಕ್ ಒಬಾಮಾ ಮತ್ತು ಆಂಗ್ ಸ್ಯಾನ್ ಸೂಕಿ ಈ ನಾಲ್ವರು ಮಹನೀಯರು ಗಾಂಧಿ ಹಾದಿಯಲ್ಲಿ ನಡೆದು ನೊಬೆಲ್ ಶಾಂತಿ ಪುರಸ್ಕಾರ ಪಡೆದು ಗಾಂಧೀಜಿಯವರ ಘನತೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದಾರೆ  . 

ಎನ್ ಆರ್ ವಿಶುಕುಮಾರ್ 

ವಿಶ್ರಾಂತ ನಿರ್ದೇಶಕರು , ವಾರ್ತಾ ಇಲಾಖೆ 

ಇದನ್ನೂ ಓದಿ- ವಿಶೇಷ | ಗಾಂಧಿ ಪ್ರಸ್ತುತತೆ ಭಿನ್ನ ಆಯಾಮಗಳಲ್ಲಿ

More articles

Latest article

Most read